ಜೆಂಡರ್ ಬಜೆಟ್ ಎಂಬ ಕಣ್ಣೊರೆಸುವ ತಂತ್ರ -ಕೆ.ಪಿ.ಸುರೇಶ

gender
ಲಿಂಗ ಸಂವೇದಿ ಬಜೆಟ್ ಎಂಬ ಪರಿಕಲ್ಪನೆಯಡಿಯಲ್ಲಿ ನಮ್ಮ ಬಜೆಟ್ಟಿನ ಒಂದು ಭಾಗವನ್ನು ಸಾದರ ಪಡಿಸಲು ಶುರುವಾಗಿ ದಶಕವೇ ಕಳೆಯಿತು.
ಅಭಿವೃದ್ಧಿಯಲ್ಲಿ ಮಹಿಳೆಯನ್ನು ಮುಖ್ಯವಾಹಿನಿಗೆ ತರುವುದು, ಅನುದಾನದಲ್ಲಿ ಮಹಿಳಾ ಕೇಂದ್ರಿತ ಅನುದಾನ, ಮಹಿಳಾ ಸಂವೇದೀ ಯೋಜನಾ ಮೀಸಲಾತಿ ಹೀಗೆ ಈ ಪದಪುಂಜಗಳು ಸರ್ಕಾರೀ ಯೋಜನಾ ನಕಾಶೆಯಲ್ಲಿ ಕಂಗೊಳಿಸುತ್ತಿವೆ.
ನಮ್ಮ ಸಾಮಾಜಿಕ –ಆರ್ಥಿಕ ತಖ್ತೆಯಲ್ಲಿ ಮಹಿಳೆ, ರೈತ, ದಲಿತ, ಆದಿವಾಸಿ, ಕಾರ್ಮಿಕ ವರ್ಗಗಳು ಸದಾ ದುಸ್ತರ ಸ್ಥಿತಿಯಲ್ಲಿ ಬಾಳುವೆ ನಡೆಸುತ್ತಿದ್ದಾರೆ. ಅವರ ಅಭಿವೃದ್ಧಿಗೆ ನಿರ್ದಿಷ್ಟ ಯೋಜನಾ ಮಾನದಂಡಗಳು ಬೇಕು. ಅದರ ಬೆಳಕಿನಲ್ಲಿ ಅನುದಾನ- ಅನುಷ್ಠಾನ ನಡೆಯಬೇಕು ಎಂಬ ಒತ್ತಡವೇ ಈ ವಿಶೇಷ ಯೋಜನಾ ನಿಗದಿಗೆ ಕಾರಣ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮಹಿಳಾ ಆಯಾಮದಿಂದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕೆಂಬ ಪರಿಜ್ಞಾನ ಹುಟ್ಟಿ ಒಂದು ದಶಕವಾಯಿತಷ್ಟೇ..!! (ಪರಿಶಿಷ್ಟಜಾತಿ/ಪಂಗಡಗಳ ಅಭಿವೃದ್ಧಿಗೇನೊ ಈ ಹಿಂದೆಯೇ ಶೇ.22 ರ ಕಡ್ಡಾಯ ಅನುದಾನ ಮೀಸಲಾತಿ ಜಾರಿಗೆ ಬಂದಿದೆ.)
ಈ ಜೆಂಡರ್ ಬಜೆಟ್ ಎಂಬ ಪರಿಕಲ್ಪನೆಯಲ್ಲಿ ಸರ್ಕಾರ ಏನು ಮಾಡುತ್ತಿದೆ.? ಸರ್ಕಾರವೇ ಹೇಳಿಕೊಂಡ ಹಾಗೆ, ಮಹಿಳಾ ಅಭಿವೃದ್ಧಿಯ ಯೋಜನೆಗಳನ್ನೆಲ್ಲಾ ಒಂದು ಬುಟ್ಟಿಗೆ ಹಾಕಿ ತೆಗೊಳ್ಳಿ ಜೆಂಡರ್ ಬಜೆಟ್ ಎನ್ನುತ್ತಿದೆ. ಇನ್ನೊಂದೆಡೆ ಉಳಿದ ಸಾಮಾನ್ಯ ಅನುದಾನ/ಯೋಜನೆಗಳಲ್ಲೂ ಶೇ. 30ರಷ್ಟನ್ನು ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ವೆಚ್ಚ ಮಾಡಬೇಕೆನ್ನುವ ಶಿಫಾರಸು ಇದೆ.
ಮಹಿಳಾ ಕೇಂದ್ರಿತ ಕ್ಷೇತ್ರಗಳು ಯಾವುವು? ಅವುಗಳ ಯೋಜನೆಗಳನ್ನು ರೂಪಿಸುವವರು ಯಾರು? ಮಹಿಳೆಗೆ ಸಂಬಂಧಿಸಿದ್ದು ಎಂದು ಸ್ವತಃ ಸರ್ಕಾರವೇ ನಿರ್ಧರಿಸುವ ಬಗೆ ಹೇಗಿರುತ್ತದೆ? ನಿಜಕ್ಕೂ ಮಹಿಳಾ ಕೇಂದ್ರಿತ ಕ್ಷೇತ್ರಗಳು ಯಾವುವು? ಅದರ ಬಗ್ಗೆ ಸರ್ಕಾರದ ಧೋರಣೆ ಮತ್ತು ಒತ್ತು ಹೇಗಿದೆ? ಇವೆಲ್ಲಾ ಹೆಚ್ಚು ಚರ್ಚೆಗೆ ಬಂದಿಲ್ಲ.
ಸರ್ಕಾರ ಸುಮಾರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಇದು ಮಹಿಳೆಗೆ ಸಂಬಂಧಿಸಿದ್ದು ಎಂದು ತೀರ್ಮಾನಿಸಿದೆ. ಇದರೊಂದಿಗೆ ಆರೋಗ್ಯ ಕ್ಷೇತ್ರದ ಸ್ವಲ್ಪ ಭಾಗವನ್ನೂ ಇದಕ್ಕೆ ಸೇರಿಸಿದೆ. ಈ ‘ಮೀಸಲಾತಿ’ಯ ಹಿಂದೆ ಇರುವ ಗ್ರಹಿಕೆ- ಮಹಿಳೆ ಮೂಲತಃ ಒಂದು ಜೈವಿಕ ಪ್ರಾಣಿ. ಅವಳ ಆರೋಗ್ಯ, ಮುಟ್ಟು ಚಟ್ಟು, ಹೆರಿಗೆ ಬಾಣಂತನ, ಒಂದಷ್ಟು ಮಕ್ಕಳ ಲಾಲನೆ ಪಾಲನೆ – ಇಷ್ಟನ್ನು ಗಮನಿಸಿ ಅನುಕೂಲ ಮಾಡಿಕೊಟ್ಟರಾಯಿತು ಎಂಬ ಪಿತೃ ಪ್ರಧಾನ ಧೊರಣೆಯೇ ಇಲ್ಲಿರುವುದು. ಹೀಗೆ ಸಾಂಪ್ರದಾಯಿಕವಾಗಿ ಪುರುಷರೇ ನಿರ್ಧರಿಸುವ ಮಹಿಳೆಯ ಕರ್ತವ್ಯ ಮತ್ತು ಪಾತ್ರವನ್ನೇ ಸರ್ಕಾರವೂ ಒಪ್ಪಿಕೊಂಡು ತನ್ನ ಪಾಲಿನ ಕೆಲಸ ಮುಂದುವರಿಸಿದೆ. ನಾಗರಿಕತೆ, ಸಮುದಾಯ ಬದುಕು, ಜೀವನೋಪಾಯ, ಆರ್ಥಿಕ ವ್ಯವಹಾರಗಳ ಬಗ್ಗೆ ಮಹಿಳೆಗೆ ತನ್ನದೇ ಕಲ್ಪನೆಗಳಿವೆ ಎಂಬುದನ್ನು ತೋರಿಕೆಗೂ ನಮ್ಮ ಸರ್ಕಾರ ಚರ್ಚಿಸಿದಂತಿಲ್ಲ.
ಈಗಿರುವ ಜೆಂಡರ್ ಬಜೆಟ್‍ನ ಮಿತಿಯಲ್ಲೇ ಸರ್ಕಾರ ಏನು ಮಾಡಿದೆ ಎಂದು ನೋಡೋಣ. ಮಹಿಳೆಯೇ ಮುಖ್ಯವಾಗಿರುವ ಕೆಲವು ಕ್ಷೇತ್ರಗಳ ಬಗ್ಗೆ ಕೇಂದ್ರದ ಅನುದಾನ ಗಮನಿಸಿ. ಅತೀ ಹೆಚ್ಚು ಮಹಿಳೆಯರು ದುಡಿವ ವಸ್ತ್ರೋದ್ಯಮಕ್ಕೆ ಕಳೆದ ಸಾಲಿನಲ್ಲಿ ನೀಡಿದ ಹಣ ಕೇವಲ 268 ಕೋಟಿ..
2015-16; 2016-17ರ ಸಾಲಿನಲ್ಲಿ ನೀಡಿದ ಕೆಲವು ಅನುದಾನಗಳ ವಿವರ ಸರ್ಕಾರದ ನಿಲುವನ್ನು ತೋರಿಸುತ್ತದೆ
ಶೀರ್ಷಿಕೆ 2015-16ರ ಅನುದಾನ (ಕೋಟಿಗಳಲ್ಲಿ) 2016-17ರ ಅನುದಾನ(ಕೋಟಿಗಳಲ್ಲಿ)
ಜವಳಿ 267 268
ಆದಿವಾಸಿ ಅಭಿವೃದ್ಧಿ 1487 1397
ಮದ್ರಸಾಗಳಲ್ಲಿ ಗುಣಮಟ್ಟದ ಶಿಕ್ಷಣ 100 36
ಪರಿಶಿಷ್ಟ ಜಾತಿ ಹುಡುಗಿಯರಿಗೆ ಹಾಸ್ಟೆಲ್ 45 40
ಉದ್ಯೊಗೀ ಮಹಿಳೆಯರಿಗೆ ಹಾಸ್ಟೆಲ್ 30 28
ಇವು ಚಿಕ್ಕ ಪುಟ್ಟ ಉದಾಹರಣೆಗಳು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಕಳೆದ ಎರಡು ವರ್ಷಗಳಲ್ಲಿ ಯೋಜನಾ ಅನುದಾನದಲ್ಲಿ ಹೆಚ್ಚಿಗೆ ಆಗಿಲ್ಲ. ಹೆಚ್ಚಳದ ಪ್ರಮಾಣವೂ ನೇರ ಗ್ರಾಮೀಣ ಮಹಿಳೆಗೆ ತಲುಪುವ ರೀತಿಯದ್ದಲ್ಲ. ಉದಾ: ಆರೋಗ್ಯ ಕ್ಷೇತ್ರದ ಅನುದಾನದಲ್ಲಿ ಬಹುಪಾಲು ಹೆಚ್ಚಳ ಏಳೋ ಎಂಟೋ ಮೆಡಿಕಲ್ ಕಾಲೇಜುಗಳ ಪಾಲಾಗಿವೆ. ಇತ್ತ ಶಿಕ್ಷಣ ಕ್ಷೇತ್ರದಲ್ಲೂ ಅಷ್ಟೇ, ಪ್ರಾಥಮಿಕ ಶಿಕ್ಷಣ, ಬಿಸಿಊಟದ ಅನುದಾನ ಸ್ಥಗಿತವಾಗಿದ್ದರೆ, ಉಚ್ಛ ಶಿಕ್ಷಣದಲ್ಲಿ ಗಮನಾರ್ಹ ಹೆಚ್ಚಳವಾಗಿದ್ದು ಇವೂ ಏಳೆಂಟು ಆಢ್ಯ ಶಿಕ್ಷಣ ಸಂಸ್ಥೆಗಳ ಪಾಲಾಗಿವೆ (ಐಐಟಿ, ಐಐಎಂ ಇತ್ಯಾದಿ)
ಮಹಿಳೆಯರಿಗೆ ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಮುಖ್ಯವಾಗುವ ಯೋಜನೆಗಳು? ಉದಾಹರಣೆಗೆ ಉದ್ಯೋಗ ಖಾತರಿ ಮಹಿಳಾ ಕೇಂದ್ರಿತ ಎಂಬುದು ಜಗತ್ತಿಗೇ ಗೊತ್ತು. ಅದರ ಅನುದಾನದಲ್ಲಿ ಹೆಚ್ಚಳವಾಗಿಲ್ಲ! ಈ ಅನುದಾನದ ವಿಕೃತ ಕಂಜೂಸುತನವನ್ನು ಬದಿಗಿಟ್ಟು ಮಹಿಳೆಗೆ ಮುಖ್ಯವಾಗುವ ಕೂಲಿ, ಕೃಷಿ, ನೀರು, ಆರೋಗ್ಯಗಳ ಅಭಿವೃದ್ಧಿ ಹೇಗಿದೆ ಎಂಬುದನ್ನು ನಮ್ಮ ಕರ್ನಾಟಕದ ಉದ್ಯೋಗ ಖಾತರಿ ಮತ್ತು ನೀರಿನ ನಿರ್ವಹಣೆಯನ್ನು ಎದುರಿಗಿಟ್ಟು ನೋಡೋಣ, ಯಾಕೆಂದರೆ ಈ ಉದ್ಯೊಗ ಖಾತರಿ ಎಂಬುದು ಬರ ಮತ್ತು ವಲಸೆ ನಿರೋಧಕವಾಗಿ ಕೆಲಸ ಮಾಡಬೇಕೆಂಬ ಉದ್ದಿಶ್ಯದಿಂದಲೇ ಜಾರಿಗೆ ಬಂದಿದ್ದು.
ಈ ಹಿನ್ನೆಲೆಯಲ್ಲಿ ಉದ್ಯೋಗ ನೀಡಿ ತನ್ಮೂಲಕ ಸಾಮುದಾಯಿಕ ಆಸ್ತಿಗಳ ಜೀರ್ಣೋಧ್ಧಾರ ಮಾಡುವ ಉದ್ಯೋಗ ಖಾತರಿಯ ಸ್ಥಿತಿ ಏನು? ನೀರಿನ ನಿರ್ವಹಣೆಗೆ ಹಾಕಿಕೊಂಡ ಕೆರೆಗಳ ಜೀರ್ಣೋದ್ಧಾರದ ಯೋಜನೆಗಳು ಏನಾದವು? ಕರ್ನಾಟಕದಲ್ಲಿ ಅಂಕಿಅಂಶಗಳ ಪ್ರಕಾರ ಸುಮಾರು 50ಸಾವಿರ ಕರೆಗಳಿವೆ. ಇದರಲ್ಲಿ ಸುಮಾರು 30 ಸಾವಿರ ಕೆರೆಗಳು 1ರಿಂದ 2.5 ಎಕರೆಯವು. 25 ಎಕರೆವರೆಗೆ ವಿಸ್ತಾರವಿರುವ ಕೆರೆಗಳ ಸಂಖ್ಯೆ ಸುಮಾರು 16 ಸಾವಿರ. ನೂರೆಕರೆಗೂ ಮಿಕ್ಕಿ ವಿಸ್ತಾರದ ಕೆರೆಗಳ ಸಂಖ್ಯೆ ಸುಮಾರು 4500. ಇವುಗಳಲ್ಲಿ ಅರ್ಧಕ್ಕರ್ಧ ಕೆರೆಗಳು ಉದ್ಯೋಗ ಖಾತರಿ ಹೆಸರಿನಲ್ಲಿ ಎತ್ತಿಕೊಂಡ ಕಾಮಗಾರಿಗಳೇ. ಇವುಗಳ ಕಥೆ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ!!
ಇವೆಲ್ಲಾ ಎಲ್ಲಿ ಆಯಿತು? ಎಷ್ಟು ಖರ್ಚಾಯಿತು ಎಂಬ ಬಗ್ಗೆ ಸಮುದಾಯವೇ ತಾಳೆ ನೋಡಬೇಕಲ್ಲ? ಈ ಸಾಮಾಜಿಕ ಲೆಕ್ಕ ಪರಿಶೋಧನೆ ಎಷ್ಟಾಗಿದೆ ಎಂದು ನೋಡಿದರೆ, ವೆಬ್ ಸೈಟಿನ ಈ ಪುಟದಲ್ಲಿ ಪೂರಾ ಸೊನ್ನೆಗಳೇ ತುಂಬಿವೆ..ಇನ್ನು ಉದ್ಯೋಗ ನೀಡಿಕೆಯ ದಾಖಲೆ ನೋಡಿದರೆ ನಮ್ಮ ಯಾವ ಬಡವರಿಗೂ ಇದು ಬೇಡ ಎಂಬ ತೀರ್ಮಾನಕ್ಕೆ ನಾವೆಲ್ಲರೂ ಬರುವಂತಿದೆ. ಕಡು ಸಂಕಷ್ಟದ ಗುಲ್ಬರ್ಗ, ರಾಯಚೂರು ಕೊಪ್ಪಳಗಳಲ್ಲಿ ಕೆಲಸ ಕೇಳಿದ ಶೇ. 75 ಕುಟುಂಬಗಳಿಗೆ ಮಾತ್ರಾ ಕೆಲಸ ಸಿಕ್ಕಿದೆ! ಇದರಲ್ಲೂ ನೂರು ದಿನದ ಗರಿಷ್ಠ ಕೆಲಸ ಪಡೆದ ಕುಟುಂಬಗಳ ಸಂಖ್ಯೆ ಕೇವಲ ಶೇ 10.
ಇನ್ನೊಂದೆಡೆ ಸುಮಾರು 200 ದೊಡ್ಡ ಕೆರೆಗಳ ಜೀರ್ಣೋದ್ಧಾರಕ್ಕೆಂದು 200 ಕೋಟಿ ವ್ಯಯ ಮಾಡಿ 50 ಸಾವಿರ ಎಕರೆಗೆ ನೀರು ಕೊಡಲು ಇವು ಸಿದ್ಧವಾಗಿದೆ ಎಂದು ಸರ್ಟಿಫಿಕೇಟು ಕೂಡಾ ಕೊಟ್ಟಾಗಿದೆ. ಆದರೆ ನಮ್ಮ ಮಹಾಲೆಕ್ಕಪಾಲರು ಇದರ ಬಗ್ಗೆ ಪರಿಶೀಲನೆ ನಡೆಸಿ ಶೇ. 90ರಷ್ಟು ಕೂಡಾ ಅರೆಬರೆ ಕೆಲಸ ಮಾಡಿ ಅನುಪಯುಕ್ತವಾಗಿವೆ ಎಂದು ವರದಿ ಕೊಟ್ಟಿದ್ದಾರೆ. ಈ ವರದಿ ಕೊಟ್ಟು ವರ್ಷವಾಯಿತು. ಸರ್ಕಾರ ಆ ಬಗ್ಗೆ ಏನೂ ಮಾಡಿಲ್ಲ, ಬಿಡಿ; ನೀರಿನ ಬಗ್ಗೆ ಅರಿವು ಮೂಡಿಸುವವರೂ ಗಮನ ಬಹರಿಸಿಲ್ಲ!! ಯಡಿಯೂರಪ್ಪನವರ ಭೃಷ್ಟಾಚಾರದ ಬಗ್ಗೆ ಮಹಾಲೇಖಪಾಲರ ಟಿಪ್ಪಣಿ ಆಧಾರದ ಮೇಲೆ ಕೇಸು ಹಾಕಲು ಹೊರಟಿರುವ ನಮ್ಮ ಸಿದ್ದು ಸರ್ಕಾರ ಇಂಥಾ ಗ್ರಾಮ ಭಾರತದ ಜೀವದಾಯಿನಿ ಯೋಜನೆಗಳನ್ನು ಹಳ್ಳ ಹತ್ತಿಸಿದ ಹತ್ತು ಹಲವು ಅವ್ಯವಹಾರಗಳ ಬಗ್ಗೆ ಜಾಣ ಮೌನ ವಹಿಸಿದೆ.
ಈಗ ಇನ್ನೊಂದು ವಿವರ ನೋಡೋಣ, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಗ್ರಾಮ ಲೋಕದ ಹತ್ತು ಹಲವು ಕ್ಷೇತ್ರಗಳ ಬಗ್ಗೆ ತರಬೇತಿ ನೀಡುತ್ತಾರೆ. ಮಹಿಳಾ ಕೇಂದ್ರಿತ ತರಬೇತಿ ಬಗ್ಗೆ ಇಣುಕಿದರೆ, ಜೆಂಡರ್ ಬಜೆಟಿಂಗ್ ಎಂಬ ಪರಿಕಲ್ಪನೆ ಬಗ್ಗೆ ತರಬೇತಿ ಇದೆ. ಪಡೆದವರು ಎಷ್ಟು ಗೊತ್ತೇ.? ಕೇವಲ 46 ಮಂದಿ. ಇವರಿಷ್ಟೂ ಅಧಿಕಾರಿಗಳು..!!
ಇನ್ನೊಂದೆಡೆ ಗ್ರಾಮೀಣ ಜೀವನೋಪಾಯ ಮಿಷನ್ ಮೂಲಕ ಕೌಶಲ್ಯಾಭಿವೃದ್ಧಿ ಬಗ್ಗೆ ತರಬೇತಿ ನೀಡಿ ಅವರೆಲ್ಲಾ ಬರಿಗಾಲ ಸಂಪನ್ಮೂಲ ವ್ಯಕ್ತಿಗಳಾಗಿ ಗ್ರಾಮಾಂತರದಲ್ಲಿ ಮಹಿಳೆಯರಿಗೆ ಮಾರ್ಗದರ್ಶನ ಮಾಡಬೇಕು ಎಂಬುದು ಈ ಮಿಷನ್ನಿನ ಆಶಯ. ಕಳೆದ ಸಾಲಿನಲ್ಲಿ 450, ಈ ಸಾಲಿನಲ್ಲಿ 4500 ಮಹಿಳೆಯರಿಗೆ ತರಬೇತಿ ನೀಡಲಾಗುವುದು ಎಂದು ನಮ್ಮ ಸರ್ಕಾರ ಕೇಂದ್ರ ಸರ್ಕಾರಕ್ಕೆ ಹೇಳಿದೆ. ಎಷ್ಟು ಪ್ರಗತಿಯಾಗಿದೆ ಎಂದು ಯಾರಿಗೂ ಗೊತ್ತಿಲ್ಲ.
ಏನಿದರ ಅರ್ಥ? ಪುರುಷರೇ ‘ಇದು ಮಹಿಳಾ ಕಲ್ಯಾಣಕ್ಕೆ’ ಎಂದು ನಿರ್ಧರಿಸಿರುವ ಯೋಜನೆಗಳೂ ಕಣ್ಣೊರೆಸುವ ಲಿಂಗ ಸಂವೇದಿ ಬಜೆಟ್ ಆಗಿ, ಅಲ್ಲೂ ಯಥೇಚ್ಛ ಮೇಯುವ ಕೆಲಸ ಆಗಿದ್ದು ಬಿಟ್ಟರೆ ಇನ್ನೇನೂ ಆಗಿಲ್ಲ.
ಇದರಿಂದಾಚೆ, ಸಮುದಾಯ ಜೀವನದ ಅಭಿವೃದ್ಧಿ ಸಂಪನ್ಮೂಲಗಳ ಬಳಕೆ, ಜೀವನೋಪಾಯಗಳ ಸುಸ್ಥಿರತೆ ಬಗ್ಗೆ ಮಹಿಳಾ ಲೋಕ ದೃಷ್ಟಿ ಹೇಗಿರುತ್ತದೆ ಎಂಬ ಬಗ್ಗೆ ಚರ್ಚೆಯೇ ಶುರುವಾಗಿಲ್ಲ. ಪರ್ಯಾಯ ಯೋಜನಾ ನಿರೂಪಣೆಗೆ ಕೆಲವು ಸಾಮಾನ್ಯ ಜ್ಞಾನದ ವಿವರಗಳಿವೆ. 1. ಮಹಿಳೆಯರು ಗುಳೆ ಹೋಗಲು ಇಷ್ಟ ಪಡುವುದಿಲ್ಲ. ಮಕ್ಕಳ ಶಿಕ್ಷಣ ಆರೋಗ್ಯದ ಬಗ್ಗೆ ಚಿಂತಿಸುತ್ತಾರೆ. ಬಡತನ ಇದ್ದರೂ ಪರವಾಗಿಲ್ಲ, ಆತ್ಮಗೌರವದಲ್ಲಿ ಬದುಕಲು ಬೇಕಾದಷ್ಟು ಹೇಗೋ ಬೆಳೆದು/ ಸಂಪಾದಿಸುತ್ತೇವೆ ಎಂಬ ನಿಲುಮೆ ಹೊಂದಿರುತ್ತಾರೆ. ನೀರು ನೈರ್ಮಲ್ಯದ ಬಗ್ಗೆ ಸ್ವಭಾವತಃ ಯೋಗ್ಯ ರೀತಿಯಲ್ಲಿ ವರ್ತಿಸುತ್ತಾರೆ. 2, ಕೃಷಿಯಲ್ಲಿ ಮಹಿಳೆಯರು ಮಣ್ಣು ಕೆಡಿಸುವ ಕೃಷಿ ಪದ್ಧತಿಯನ್ನು ಇಷ್ಟಪಡುವುದಿಲ್ಲ. ಅವರಿಗೇ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದ್ದರೆ ಅವರು ಸುಸ್ಥಿರ ಕೃಷಿಯನ್ನೇ ಆಯ್ಕೆ ಮಾಡುತ್ತಾರೆ.3. ಸಹಕಾರಿ ಸ್ವರೂಪದಲ್ಲಿ ಬದುಕಲು ಇಷ್ಟಪಡುತ್ತಾರೆ…ಹೀಗೆ.
ಮಹಿಳಾ ಲೋಕದೃಷ್ಟಿಗಿರುವ ಆಯಾಮಗಳನ್ನು ಒಗ್ಗೂಡಿಸಿದರೆ ಅದಕ್ಕೊಂದು ಚೌಕಟ್ಟು ಕಾಣಿಸುತ್ತದೆ. ಈ ಚೌಕಟ್ಟಿನೊಳಗೆ ಸುಸ್ಥಿರ ಕೃಷಿ, ಪೂರಕ ಜೀವನೋಪಾಯ, ಸಮಾನ ಶಿಕ್ಷಣ, ಜನಾರೋಗ್ಯಗಳೆಲ್ಲಾ ಸಾಮುದಾಯಿಕ ಮಟ್ಟದಲ್ಲಿ ಹೆಣೆದುಕೊಳ್ಳುತ್ತವೆ. ಜೀವನೋಪಾಯದಂಥಾ ವೈಯಕ್ತಿಕ ನಿರ್ವಹಣೆಯಿಂದ ಸಾಮುದಾಯಿಕ ಸಂಪನ್ಮೂಲಗಳ ನಿರ್ವಹಣೆಗೆ ಸಂಘಟಿತವಾಗುವ ಸಮಷ್ಟಿ ನೆಲೆಗೆ ತಲುಪುತ್ತದೆ. ಇದರ ಬುನಾದಿಯ ಮೇಲೆ ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಜೀವನ ನಿರ್ಮಿತವಾಗುತ್ತದೆ.
ಆದರೆ ಸದ್ಯದ ಸ್ಥಿತಿ? ಭೂತಯ್ಯ ಅಡುಗೆಗೆ ಎರಡು ಈರುಳ್ಳಿ ಕೊಟ್ಟ ಹಾಗೆ ಸರ್ಕಾರದ ಅನುದಾನದ ಧೋರಣೆ ಇದೆ. ಬೇಕಾಗಿರುವುದು ಹಲವು ಕ್ಷೇತ್ರಗಳು ಒಗ್ಗೂಡಿದ ಅಭಿವೃದ್ಧಿಯನ್ನು ಯೋಜಿಸುವ ಹಕ್ಕು; ಅನುದಾನ ನಿಗದಿಪಡಿಸುವ ಹಕ್ಕು ಮತ್ತು ಅನುಷ್ಠಾನದ ನಿಯಂತ್ರಣ. ಇದು ವಿಕೇಂದ್ರೀಕೃತ ಮತ್ತು ಮೂಲಭೂತ ಪರ್ಯಾಯ.
ಈಗಿರುವ ಜೆಂಡರ್ ಬಜೆಟ್ ಅನ್ನುವ ಕಲ್ಪನೆ ಮೌಲ್ಯ ಕಳೆದುಕೊಂಡಿರುವ “ಅಭಿವೃದ್ಧಿ ಪರಿಕಲ್ಪನೆ”ಯಲ್ಲಿ ಒಂದಷ್ಟು ಅನುದಾನ ನೀಡಿ ಮೆತ್ತಗಾಗಿಸುವ ಕೆಲಸ. ಇದಕ್ಕೆ ಒಪ್ಪಿಗೆಯ ಸಹಿ ಮಾಡಿದಷ್ಟೂ ಪರ್ಯಾಯ ಸುಸ್ಥಿರ ಆಶಯದಿಂದ ದೂರ ಸರಿಯುತ್ತಲೇ ಇರುತ್ತೇವೆ. ಇವು ಅನುಷ್ಠಾನಗೊಂಡಂತೆಲ್ಲಾ ಮಹಿಳಾ ಲೋಕದ ಕಷ್ಟ ಸಂಕಷ್ಟ ಇನ್ನಷ್ಟು ಹೆಚ್ಚುತ್ತಲೇ ಹೋಗುತ್ತದೆ.
ನಮ್ಮ ಯೋಜಕರು ಹಾಗಿರಲಿ, ಸಾಂಸ್ಕೃತಿಕ ಚಿಂತಕರು, ಹೋರಾಟಗಾರರು ಕೂಡಾ ಮಹಿಳಾ ಲೋಕ ಆಶಿಸುವ ಪರ್ಯಾಯ ಬದುಕಿನ ಭೂಮಿಕೆಗಳ ವಿವರಗಳಿಗೆ ತಲೆ ಹಾಕದೇ ಮೇಲ್ಮಟ್ಟದ ಹಕ್ಕು, ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ದರಿಂದ ಚರ್ಚೆಗೂ ಬೇಕಾದ ಭೂಮಿಕೆ ಸಿದ್ಧವಾಗಿಲ್ಲ. ನಾಳೆ ಮಹಿಳಾ ದಿನಾಚರಣೆ, ಮತ್ತೊಂದು ವಾರಕ್ಕೆ ರಾಜ್ಯದ ಬಜೆಟ್. ಈ ಅಂಕಣದ ಬರಹ ಇಂಥಾ ಒಂದು ಮೂಲಭೂತ ಬದಲಾವಣೆಯ ಚರ್ಚೆಗೆ ನಾಂದಿ ಹಾಡಿದರೆ ಬರದಿದ್ದಕ್ಕೂ ಅರ್ಥ ಬರುತ್ತದೆ.