ಜಾತಿ ಮುಖ್ಯ ನಿಜ ; ಆದರೆ ಜಾತಿಯೊಂದೇ ನಿರ್ಣಾಯಕವಲ್ಲ-ಬಂಜಗೆರೆಜಯಪ್ರಕಾಶ್

banja

ಚಿತ್ರದುರ್ಗದಲ್ಲಿ ಈ ಸಲದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಆರಂಭವಾಗಿವೆ. ಸಮ್ಮೇಳಾನಾಧ್ಯಕ್ಷತೆಗೆ ಚಿದಾನಂದಮೂರ್ತಿಯವರ ಹೆಸರನ್ನು ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಪರಿಷತ್ ಶಿಫಾರಸ್ಸು ಮಾಡಿತು. ಎಂ.ಚಿದಾನಂದಮೂರ್ತಿಯವರು ಈ ಹಿಂದೆ ಒಂದು ಸಲ ಸಮ್ಮೇಳನಾಧ್ಯಕ್ಷತೆಗೆ ಸೂಚಿತರಾಗಿದ್ದರು. ನಂತರ ಕಾರಣಾಂತರಗಳಿಂದ ಅದಕ್ಕೆ ಬೇರೆಯವರು ಆಯ್ಕೆಯಾದರು. ಇದರಿಂದ ನೊಂದುಕೊಂಡ ಚಿಮೂ ಇನ್ನು ಮುಂದೆ ತಾವು ಸಮ್ಮೇಳನಾಧ್ಯಕ್ಷತೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು.

ಈ ಸಲದ ಸಮ್ಮೇಳನಾಧ್ಯಕ್ಷತೆಗೆ ಅವರ ಹೆಸರು ಸೂಚಿಸಿ ನಿರ್ಣಯ ಕೈಗೊಳ್ಳುವ ಮುನ್ನ ಚಿಮೂ ಅವರ ಅಭಿಪ್ರಾಯವನ್ನು ತಿಳಿದುಕೊಳ್ಳಲಾಗಿತ್ತೋ ಇಲ್ಲವೋ ಗೊತ್ತಿಲ್ಲ. ಅವರ ಹೆಸರಂತೂ ಪತ್ರಿಕೆಗಳಲ್ಲಿ ಬಂತು. ಆ ಸಂದರ್ಭದಲ್ಲಿ ಚಿಮೂ ತಮ್ಮ ಪ್ರತಿಕ್ರಿಯೆಯನ್ನೇನೂ ನೀಡಿದಂತಿಲ್ಲ. ಚಿಮೂ ಹೆಸರನ್ನು ಸಮ್ಮೇಳನಾಧ್ಯಕ್ಷತೆಗೆ ಶಿಫಾರಸ್ಸು ಮಾಡಿದ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಲುವಿನ ಬಗ್ಗೆ ಹಲವು ಕಡೆಯಿಂದ ವಿರೋಧ ವ್ಯಕ್ತವಾಯಿತು.
ಚಿಮೂ ಅವರಿಗೆ ಸಮ್ಮೇಳನಾಧ್ಯಕ್ಷರಾಗಲು ಬೇಕಾದ ಹಲವು ಅರ್ಹತೆಗಳಿವೆ. ಹಿರಿಯ ವಿದ್ವಾಂಸರು, ಸಂಶೋಧಕರು, ಸಜ್ಜನರು, ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿಯಿಂದ ಸೇವೆ ಮಾಡಿರುವವರು, ಕನ್ನಡದ ರಕ್ಷಣೆಗಾಗಿ ಬೀದಿಗಿಳಿದು ಹೋರಾಟ ಮಾಡಿರುವವರು. ಹಾಗೆ ನೋಡಿದರೆ ಚಿಮೂ ಅವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಈ ಹೊತ್ತಿಗಾಗಲೇ ಸಿಕ್ಕಿರಬೇಕಿತ್ತು. ಅವರ ಹಿರಿತನ ಮತ್ತು ಸಾಹಿತ್ಯ ಸಾಮಥ್ರ್ಯದ ದೃಷ್ಟಿಯಿಂದ ನೋಡಿದರೆ ಅವರಿಗಿಂತ ಕಡಿಮೆ ಸಾಮರ್ಥ್ಯದ ಕೆಲವರು ಸಮ್ಮೇಳನಾಧ್ಯಕ್ಷತೆ ವಹಿಸಿರುವುದೂ ಉಂಟು. ಈ ದೃಷ್ಟಿಯಿಂದ ನೋಡಿದರೆ ಚಿಮೂ ಅವರ ಹೆಸರು ಶಿಫಾರಸ್ಸಾಗಿದ್ದು ನ್ಯಾಯಯುತವಾಗಿತ್ತು.
ಆದರೆ ಸಮಸ್ಯೆ ಬೇರೆಯೇ ಇದೆ. ಚಿಮೂ ಅವರ ರಾಜಕೀಯ ಧೋರಣೆಗಳು ಮತ್ತು ಅವರು ಕರ್ನಾಟಕ ಇತಿಹಾಸದ ಸಂದರ್ಭದಲ್ಲಿ ವ್ಯಕ್ತಪಡಿಸುತ್ತಿರುವ ನಿಲುವುಗಳು ಏಕಪಕ್ಷೀಯವಾಗಿದ್ದು ಅವರು ಗತಕಾಲದ ವಾಸ್ತವಾಂಶಗಳನ್ನು, ವರ್ತಮಾನ ಸಮಾಜದ ಸಮಸ್ಯೆಗಳನ್ನು ಸಂಪೂರ್ಣವಾಗಿ ಕೋಮುವಾದಿ ದೃಷ್ಟಿಕೋನದಿಂದ ಅರ್ಥೈಸತೊಡಗಿದ್ದಾರೆ. ನಾವಿರುವ ಸಂದರ್ಭಕ್ಕೆ ಇದು ಅನರ್ಥಕಾರಿಯಾಗಿದೆ. ಇದು ಕರ್ನಾಟಕದ ಪಂಪನಿಂದ ಹಿಡಿದು ಕುವೆಂಪುವರೆಗೆ ಪ್ರತಿಪಾದಿತವಾದ, ಈಗ ದಲಿತ ಬಂಡಾಯ ಸಾಹಿತ್ಯಗಳು ಪ್ರತಿಪಾದಿಸುತ್ತಿರುವ ಸಾಂಸ್ಕೃತಿಕ  ಪರಂಪರೆಗೆ ವಿರುದ್ಧವಾದುದಾಗಿದೆ.
ಆದ್ದರಿಂದಲೇ ಚಿಮೂ ಹೆಸರಿನ ಶಿಫಾರಸ್ಸಿಗೆ ಕನ್ನಡದ ಪ್ರಗತಿಪರ ವಲಯದಿಂದ ವಿರೋಧ ವ್ಯಕ್ತವಾಯಿತು. ಚಿತ್ರದುರ್ಗದಲ್ಲಿ ಅಹಿಂದ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಭೆ ನಡೆಸಿತು. ಹಿಂದುಳಿದವರು ಮತ್ತು ದಲಿತ ಸಮುದಾಯದವರು ಬಹುಸಂಖ್ಯೆಯಲ್ಲಿರುವ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಈ ಅಮೃತ ಮಹೋತ್ಸವ ಸಮ್ಮೇಳನಕ್ಕೆ ಹಿಂದುಳಿದ ಅಥವಾ ದಲಿತ ಸಮುದಾಯದಿಂದ ಬಂದ ಸಾಹಿತಿಯೊಬ್ಬರು ಅಧ್ಯಕ್ಷರಾಗಬೇಕು ಎಂಬುದು ಆ ಸಭೆಯ ನಿರ್ಣಯವಾಗಿತ್ತು. ಈವರೆಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಏರಿರುವವರು ಹೆಚ್ಚು ಸಲ ಮುಂದುವರಿದ ಸಮುದಾಯದವರೇ ಆಗಿರುವುದರಿಂದ ಈ ಬಾರಿ ಹಿಂದುಳಿದ ಅಥವಾ ದಲಿತ ಸಮುದಾಯದವರಾಗಿರಬೇಕೆಂಬ ಬೇಡಿಕೆಯನ್ನು ಆ ಸಭೆ ಮುಂದಿಟ್ಟಿತು.
ಸಭೆ ನಡೆಯುವಾಗ ಶಿವು ಯಾದವ್ ಮತ್ತು ಮುರುಘ ರಾಜೇಂದ್ರ ಒಡೆಯರ್ ನನಗೆ ಫೋನ್ ಮಾಡಿದ್ದರು. ಈ ಬೇಡಿಕೆಗೆ ನಿಮ್ಮ ಬೆಂಬಲ ಇದೆಯೇ ಎಂದು ಕೇಳಿದ್ದರು. ನಾನು ಬೆಂಬಲ ಸೂಚಿಸಿದ್ದೆ. ಅವರು ಕೇಳಿದ್ದಕ್ಕೆ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ, ಸಾರಾ ಅಬೂಬಕ್ಕರ್ ಮುಂತಾದ ಕೆಲವು ಹೆಸರುಗಳನ್ನು ಹೇಳಿ ಇವರಲ್ಲಿ ಯಾರಾದರೂ ಆಗಬಹುದು ಎಂದು ಅಭಿಪ್ರಾಯವನ್ನೂ ಸೂಚಿಸಿದ್ದೆ.
ಹಿಂದುಳಿದ ಅಥವಾ ದಲಿತ ಸಮುದಾಯದವರೇ ಅಧ್ಯಕ್ಷರಾಗಬೇಕೆಂಬ ಹೋರಾಟ ಮಾಡಲು ಮುಂದಾದ ಶಿವು ಯಾದವ್, ಮುರುಘ ರಾಜೇಂದ್ರ ಒಡೆಯರ್ ಹಾಗೂ ಅವರ ಸ್ನೇಹಿತರ ನಿಲುವು ಸಾಹಿತ್ಯ ಪರಿಷತ್‍ನ ಕೇಂದ್ರ ಸಮಿತಿಯ ನಿರ್ಧಾರದ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡಬಹುದು ಅಥವಾ ಮಾಡದಿರಬಹುದು ಎಂಬ ಆತಂಕದಲ್ಲಿ ದಿನ ಕಳೆಯುತ್ತಿರುವಾಗ ಮೈಸೂರಿನಿಂದ ಸುದ್ದಿ ಬಂತು.
ಮೈಸೂರಿನ ಪ್ರಗತಿಪರ ಸಾಹಿತಿಗಳು ಡಾ.ಎಲ್.ಬಸವರಾಜು ಅವರ ಹೆಸರನ್ನು ಸೂಚಿಸಿ ಪತ್ರಿಕಾ ಹೇಳಿಕೆ ನೀಡಿರುವುದನ್ನು ಆರ್.ಸುಧೀಂದ್ರಕುಮಾರ್ ತಿಳಿಸಿ ಇತರೆ ಪ್ರಗತಿಪರ ಸಾಹಿತಿಗಳು ಈ ಸೂಚನೆಗೆ ಬೆಂಬಲ ಕೊಡಬೇಕೆಂದು ವಿನಂತಿಸಿದರು. ಡಾ.ಎಲ್.ಬಸವರಾಜು ಹೆಸರನ್ನು ಸೂಚಿಸಿದವರಲ್ಲಿ ದೇವನೂರ ಮಹಾದೇವ ಒಬ್ಬರಾಗಿದ್ದರು. ಅಂತಿಮವಾಗಿ ಕೇಂದ್ರ ಸಮಿತಿಯ ಸಭೆ ಡಾ.ಎಲ್.ಬಸವರಾಜು ಅವರನ್ನು ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಿತು. ಅದು ಸುದ್ದಿ ಮಾಧ್ಯಮಗಳಲ್ಲಿ ಬರುವುದಕ್ಕಿಂತ ಮೊದಲೇ ಎಸ್‍ಎಂಎಸ್‍ಗಳ ಮೂಲಕ ಪ್ರಗತಿಪರರ ನಡುವೆ ವಿಷಯ ಹರಡಿತು. ಹೊಸಪೇಟೆಯಿಂದ ಅರುಣ್ ಜೋಳದ ಕೂಡ್ಲಿಗಿ ಕಳುಹಿಸಿದ ‘ಇದು ಸಮಾಜಮುಖಿ ಕಾಳಜಿಗಳಿಗೆ ದೊರೆತ ಜಯ’ ಎಂಬ ಎಸ್‍ಎಂಎಸ್ ಹೆಚ್ಚು ಕಮ್ಮಿ   ಎಲ್ಲ ಪ್ರಗತಿಪರರ ಹಾಗೂ ಪ್ರಜಾತಂತ್ರವಾದಿಗಳ ಅಭಿಪ್ರಾಯವನ್ನು ಬಿಂಬಿಸುತ್ತಿತ್ತು.
ಕರ್ನಾಟಕದ ಬೇರೆ ಬೇರೆ ಭಾಗಗಳ ಸಾಹಿತ್ಯಾಸಕ್ತರು ಹೆಚ್ಚುಕಮ್ಮಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದು ಡಾ.ಎಲ್.ಬಸವರಾಜು ಅವರಿಗೆ ಸಂದ ಗೌರವ ಮಾತ್ರವಲ್ಲ, ಅವರು ಪ್ರತಿನಿಧಿಸುತ್ತಾ ಬಂದ ಸತ್ಯನಿಷ್ಠ ಧೋರಣೆಗಳು, ಅನ್ವೇಷಕ ಪ್ರವೃತ್ತಿ ನಿಷ್ಠುರವಾದಿ ನಿಲುವು ಹಾಗೂ ಜಾತಿ-ಮತಗಳ ಸೀಮಿತತೆಯಾಚೆ ಪ್ರತಿಪಾದಿಸುತ್ತಾ ಬಂದ ಕಾಳಜಿಗಳು ಇವುಗಳಿಗೆ ಸಂದ ಮನ್ನಣೆ ಎಂಬುದು ಬಹುಪಾಲು ಸಾಹಿತಿಗಳ ಅನಿಸಿಕೆಯಾಗಿದೆ.
ಡಾ.ಎಲ್.ಬಸವರಾಜು ಅವರು ಆಯ್ಕೆಯಾಗಿರುವುದರಿಂದ, ಕೋಮುವಾದಿ ಎಂಬ ಬ್ರಾಂಡ್‍ನ ಚಿಮೂ ಅವರ ಆಯ್ಕೆ ಆಗದಿರುವುದರಿಂದ ಶೋಷಿತರ ಪರ ಕಾಳಜಿ ಹೊಂದಿದವರಿಗೇ ಗೆಲುವು ಸಿಕ್ಕಂತಾಗಿದೆ ಎಂಬ ಅಭಿಪ್ರಾಯವನ್ನು ಚಿತ್ರದುರ್ಗದ ಅಹಿಂದ ಮತ್ತು ಪ್ರಗತಿಪರ ಒಕ್ಕೂಟದ ಗೆಳೆಯರಿಗೆ ನಾನು ವಿವರಿಸಿದೆ. ಡಾ.ಎಲ್.ಬಸವರಾಜು ಅವರಂತಹ ಹಿರಿಯ ವಿದ್ವಾಂಸರು, ಜನಪರ ಕಾಳಜಿಗಳಿಂದ ಸಂಶೋಧನೆ ನಡೆಸಿದ ವ್ಯಕ್ತಿ ಅಧ್ಯಕ್ಷತೆಗೆ ಆಯ್ಕೆಯಾಗಿರುವ ಈ ಸಂದರ್ಭದಲ್ಲಿ ನಾವೆಲ್ಲ ಸಂತೋಷವಾಗಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂಬ ಅಭಿಪ್ರಾಯವನ್ನು ಶಿವು ಯಾದವ್, ಜಗದೀಶ್ ಮತ್ತು ಇತರ ಸ್ನೇಹಿತರಿಗೆ ತಿಳಿಸಿದೆ. ಅವರೂ ಸಮ್ಮತಿಸಿದರು.
ಆದರೆ ಈಗ ಗೊತ್ತಾಗಿರುವಂತೆ ಅವರು ಡಾ.ಎಲ್.ಬಸವರಾಜು ಅವರ ಆಯ್ಕೆಯನ್ನು ಸ್ವಾಗತಿಸಿದರೂ ಸಹ ಅವರು ಹಿಂದುಳಿದ ಜಾತಿಗೆ ಸೇರಿದವರಲ್ಲವಾದ ಕಾರಣ ಪರ್ಯಾಯ ಸಮ್ಮೇಳನ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ದೇವನೂರು ಹಾಗೂ ಇತರರು ನನಗೆ ಫೋನ್ ಮಾಡಿ ತೀವ್ರ ಆತಂಕ ವ್ಯಕ್ತಪಡಿಸಿದರು. ಡಾ.ಎಲ್.ಬಿ. ಅಧ್ಯಕ್ಷತೆಗೆ ಆಯ್ಕೆಯಾಗಿರುವ ಈ ಸಂದರ್ಭದಲ್ಲಿ ಚಿತ್ರದುರ್ಗದ ಪ್ರಗತಿಪರ ಗೆಳೆಯರ ಇಂತಹ ನಿಲುವು ತಳೆಯುವುದು ಸೂಕ್ತವಾದುದಲ್ಲ ಎಂಬುದು ಅವರೆಲ್ಲರ ಅಭಿಪ್ರಾಯ.
ನಮ್ಮಂತಹ ಹಲವರಿಗೆ ಈ ಅಭಿಪ್ರಾಯವಿದೆ. ಇದಕ್ಕೆ ಕಾರಣವೇನೆಂದರೆ, ಡಾ.ಎಲ್.ಬಸವರಾಜು ಅವರ ವ್ಯಕ್ತಿತ್ವ. ವಚನ ಸಾಹಿತ್ಯಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಕೆಲಸ ಮಾಡಿದವರು ಅವರು. ತಮ್ಮ ಸಾಹಿತ್ಯ ಸಂಪಾದನೆ, ಸಂಶೋಧನಾ ಮಾರ್ಗದಲ್ಲಿ ಅವರಿಗೆ ಸರಿ ಎನ್ನಿಸಿದ ಸತ್ಯಗಳನ್ನು ನಿರ್ಭಿಡೆಯಿಂದ ಬರೆದವರು. ಅಲ್ಲಮನ ‘ವಚನ ಚಂದ್ರಿಕೆ’ಯನ್ನು ಸಂಪಾದಿಸಿದಾಗ ಅದಕ್ಕೆ ಅವರು ಬರೆದ ಪ್ರಸ್ತಾವನೆಯ ಬಗ್ಗೆ ಹಲವಾರು ಮಠ ಮಾನ್ಯಗಳು ಆಕ್ಷೇಪ ವ್ಯಕ್ತಪಡಿಸಿದವು. ಅಲ್ಲಮ ಪ್ರಭು ತನ್ನ ಮೂಲದಲ್ಲಿ ನಟುವಾಂಗ ಜಾತಿಗೆ ಸೇರಿದ ವ್ಯಕ್ತಿ ಎಂಬ ಅಂಶವನ್ನು ಯಾವುದೇ ಜಾತಿ ಶ್ರೇಷ್ಠತೆಯ ಮುಲಾಜಿಲ್ಲದೆ ಪ್ರಕಟಪಡಿಸಿದವರು ಅವರು. ಈಚೆಗೆ ಅವರು ಶರಣ ಸಿದ್ಧರಾಮನ ಬದುಕಿನ ಅಂಶಗಳ ಬಗ್ಗೆ ಪ್ರಕಟಿಸಿರುವ ಮಾಹಿತಿಯೂ ಕೂಡ ಪಟ್ಟಭದ್ರರಿಗೆ ಅಪ್ರಿಯವಾದುದೇ ಆಗಿದೆ.
ಅವರ ಪ್ರಕಾರ ಶರಣ ಸಿದ್ಧರಾಮ ಶೂನ್ಯ ಸಂಪಾದನೆಗಳಲ್ಲಿ ಲಿಖಿತವಾಗಿರುವಂತೆ ಬಸವಣ್ಣನ ಸಮಕಾಲೀನನಲ್ಲ. ಆತನಿಗೆ ಲಿಂಗಧಾರಣೆ ಮಾಡಿಸಲಿಕ್ಕಾಗಿ ಅಲ್ಲಮಪ್ರಭು ಕಲ್ಯಾಣಕ್ಕೆ ಕರೆತಂದರೆಂಬುದು ಐತಿಹಾಸಿಕವಾಗಿ ಸತ್ಯವಲ್ಲ. ವಚನಕಾರರ ಕಾಲಘಟ್ಟದ ಹಿಂದೆ ಮುಂದೆ ಬದುಕಿದ್ದವರನ್ನೆಲ್ಲ ಒಂದೇ ಕಾಲಘಟ್ಟದವರೆಂಬಂತೆ ಚಿತ್ರಿಸಿ ವೀರಶೈವಕ್ಕೆ ಮಹತ್ ಪ್ರಭಾವಳಿಯನ್ನು ಕಟ್ಟಿಕೊಡುವ ಉದ್ದೇಶದಿಂದ ‘ಶೂನ್ಯ ಸಂಪಾದನೆ’ಯಲ್ಲಿ ಹೀಗೆ ಮಾಡಲಾಗಿದೆ ಎಂಬ ಬಗ್ಗೆ ಆಧಾರಸಹಿತ ಮಾಹಿತಿಯನ್ನು ಅವರು ಬರೆದಿದ್ದಾರೆ.
ವಚನಕಾರರ ಹಿನ್ನೆಲೆಯ ಬಗ್ಗೆ, ಹಲವು ವಚನಗಳನ್ನು ಅರ್ಥೈಸುವ ವಿಧಾನದ ಬಗ್ಗೆ, ಒಂದು ಜಾತಿಯಾಗಿ ವೀರಶೈವವು ಕಾರ್ಯನಿರ್ವಹಿಸುತ್ತಿರುವ ರೀತಿಯ ಬಗ್ಗೆ ಸಕಾರಣವಾಗಿ ವಿಮರ್ಶಾತ್ಮಕ ನಿಲುವುಗಳನ್ನು ತಳೆಯುತ್ತಾ ಬಂದ ಡಾ.ಎಲ್.ಬಸವರಾಜು ಅವರು ಯಾವುದೇ ಜಾತಿಯ ಪ್ರತಿಷ್ಠೆ ನಿರ್ಮಾಣ ಮಾಡಲಿಕ್ಕಾಗಿ ಸಾಹಿತ್ಯ ಕೃಷಿ ನಡೆಸಿದವರಲ್ಲ. ಅವರನ್ನು ಹಲವಾರು ವೀರಶೈವ ಮಠ ಮಾನ್ಯಗಳು ಹೊರಗಿನವರಂತೆಯೇ ಕಂಡಿವೆ. ಜಾತಿ ಶಿಫಾರಸ್ಸಿನಿಂದ ಅವರು ಯಾವುದೇ ಪದವಿ, ಪ್ರಶಸ್ತಿ ಪಡೆಯಲಿಲ್ಲ.
ತಮ್ಮ ಈ ಇಳಿವಯಸ್ಸಿನಲ್ಲಿ ಅವರು‘ಪಂಪಭಾರತ’ದ ಗದ್ಯಾನುವಾದವನ್ನು ಪರಿಷ್ಕರಿಸಲು ಕೂರುತ್ತಾರೆ. ‘ಕುಸುಮಬಾಲೆ’ಯನ್ನು ಕಾವ್ಯ ಕುಸುಮಬಾಲೆಯಾಗಿ ಪುನರ್‍ಮಂಡನೆ ಮಾಡುತ್ತಾರೆ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಂಪರೆ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ‘ಮಾನವ ಜಾತಿ ತಾನೊಂದೇ ಕುಲಂ’ ಎಂಬ ಆಶಯವನ್ನು ಮನಸಾ ಆಚರಿಸುವ ಉತ್ಸಾಹವನ್ನು ಇಂತಹ ಅವರ ಹಲವಾರು ಸಾಹಿತ್ಯ ಪ್ರಯೋಗಗಳಲ್ಲಿ ಸದಾ ಗುರುತಿಸಬಹುದಾಗಿದೆ. ಅಲ್ಲಮ ಎಂಬ ಹೆಸರಿನ ಮೂಲ ಯಾವುದಿರಬಹುದು ಎಂಬ ಅವರ ಜಿಜ್ಞಾಸೆಯ ಹರಹನ್ನು ನೋಡಿದರೆ ಅವರ ಸತ್ಯಾನ್ವೇಷಕ  ಪ್ರವೃತ್ತಿಯ  ದಾಹ ಅರ್ಥವಾಗುತ್ತದೆ. ಅವರ ಚಿಂತನೆಗಳ ಜಾಡಿನಿಂದ, ಒಳನೋಟಗಳ ಬೆಳಕಿನಿಂದ ನಮ್ಮಂತಹ ತರುಣ ತಲೆಮಾರಿನ ಬಹಳ ಮಂದಿ ವಿಶ್ಲೇಷಕರು, ಸಂಶೋಧಕರು ಪ್ರಭಾವಿತರಾಗಿದ್ದೇವೆ. ಉಪಕೃತರಾಗಿದ್ದೇವೆ.
ಡಾ.ಎಲ್.ಬಸವರಾಜು ಪ್ರತಿಷ್ಠಾನವೊಂದಿದೆ. ಅದನ್ನು ಮುನ್ನಡೆಸುತ್ತಿರುವವರು ಕೋಲಾರ ಜಿಲ್ಲೆಯ ಪ್ರಗತಿಪರ ಆಶಯಗಳ ಸಾಹಿತಿಗಳು. ಮೊದಲಿಂದಲೂ ದಲಿತ ಸಂಘರ್ಷ ಸಮಿತಿ, ಅಹಿಂದ ಮುಂತಾದ ಹೋರಾಟಗಳಲ್ಲಿ ಬೆಳೆದು ಬಂದ ಕೋಟಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿಕೋಲಾರ ಮುಂತಾದವರ ತಂಡವೇ ಮುಂದೆ ನಿಂತು ಡಾ.ಎಲ್.ಬಿ.ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ತಮ್ಮ ಬದುಕಿನ ಅವಧಿಯಲ್ಲಿ ಸಾಮಾನ್ಯವಾಗಿ ಯಾವುದೇ ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸದಿದ್ದ ಮೇಷ್ಟ್ರು ಪ್ರೊ.ಕೆ.ರಾಮದಾಸ್, ಡಾ.ಎಲ್.ಬಿ.ಪ್ರತಿಷ್ಠಾನ ನೀಡಿದ ಸನ್ಮಾನವನ್ನು ಕೋಲಾರದಲ್ಲಿ ಸ್ವೀಕರಿಸಿದಾಗ ಆಡಿದ ಮಾತುಗಳು ಡಾ.ಎಲ್.ಬಸವರಾಜು ಅವರ ಜೀವನೋದ್ದೇಶಗಳಿಗೆ ಅರ್ಪಿಸಿದ ಕೃತಜ್ಞತಾ ಫಲಕದಂತಿದ್ದುದು ಈಗಲೂ ನನ್ನ ನೆನಪಿನಲ್ಲಿದೆ.
ಅಷ್ಟಿಲ್ಲದೆ ರಾಮದಾಸ್ ರೀತಿಯ ನಿಷ್ಠುರವಾದಿಗಳು ತಮ್ಮನ್ನು ಹೆಮ್ಮೆಯಿಂದ ಡಾ.ಎಲ್.ಬಸವರಾಜು ಅವರ ಶಿಷ್ಯ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಒಬ್ಬ ಅಧ್ಯಾಪಕರಾಗಿ ತಮ್ಮ ನಡೆ ಹಾಗೂ ನುಡಿಗಳಿಂದ, ವ್ಯಕ್ತಿತ್ವದ ವೈಶಿಷ್ಟ್ಯದಿಂದ ಪ್ರೊ.ಕೆ.ರಾಮದಾಸ್ ಅವರಂತಹ ಅನೇಕ ಶಿಷ್ಯರು ರೂಪುಗೊಳ್ಳಲು ಡಾ.ಎಲ್.ಬಿ. ಕೊಡುಗೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಪರ್ಯಾಯ ಸಮ್ಮೇಳನ ಮಾಡುತ್ತೇವೆ ಎಂದು ನಿರ್ಣಯ ಕೈಗೊಂಡಿರುವ ಗೆಳೆಯರಿಗೆ ಡಾ.ಎಲ್.ಬಿ.ಯವರ ಆಯ್ಕೆಯ ಬಗ್ಗೆ ಅವರಿಗೆ ಭಿನ್ನಮತವಿಲ್ಲದಿದ್ದ ಮೇಲೆ ಪರ್ಯಾಯ ಸಮ್ಮೇಳನ ಮಾಡುವ ಅಗತ್ಯವೇನಿದೆ ಎಂಬ ಪ್ರಶ್ನೆಯನ್ನು ಮುಂದಿಡಬೇಕಾಗುತ್ತದೆ. ಉಡುಪಿಯಲ್ಲಿ ಪರ್ಯಾಯ ಸಮ್ಮೇಳನ ನಡೆಸಿದವರಿಗೆ ಎಲ್.ಎಸ್.ಶೇಷಗಿರಿರಾವ್ ಅವರ ಆಯ್ಕೆಯ ಬಗ್ಗೆ ಭಿನ್ನಮತವಿತ್ತು. ಅವರ ಬದಲು ವ್ಯಾಸರಾಯ ಬಲ್ಲಾಳರಂತಹ ಪ್ರಗತಿಪರರು ಅಧ್ಯಕ್ಷರಾಗಬೇಕು ಎಂಬುದರ ಜೊತೆಗೆ ಕೋಮುವಾದಿಗಳ ಬೆಂಬಲದ ಕೋಟೆಯಂತಾಗಿರುವ ಉಡುಪಿಯಲ್ಲಿ ಸೌಹಾರ್ದತೆಯ ನಿಲುವು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬ ಆಶಯವಿತ್ತು.
ಚಿತ್ರದುರ್ಗದ ಸಾಹಿತ್ಯ ಸಮ್ಮೇಳನದ ಪರಿಸ್ಥಿತಿ ಅದಕ್ಕೆ ಹೋಲಿಸದರೆ ಭಿನ್ನವಾಗಿದೆ. ಇಲ್ಲಿ ಪ್ರಗತಿಪರರಿಗೆ ಇಷ್ಟವಾಗುವ ವ್ಯಕ್ತಿತ್ವದ ಶ್ರೇಷ್ಠ ವಿದ್ಯಾಂಸರಾದ ಡಾ.ಎಲ್.ಬಸವರಾಜು ಅವರ ಆಯ್ಕೆಯಾಗಿದೆ. ಚಿಮೂ ಅವರ ಬದಲಿಗೆ ಸಾಹಿತ್ಯ ಪರಿಷತ್‍ನ ಕೇಂದ್ರ ಸಮಿತಿ ಡಾ.ಎಲ್.ಬಿ.ಅವರನ್ನು ಆಯ್ಕೆ ಮಾಡುವಲ್ಲಿ ಇತರರ ಪಾಲುದಾರಿಕೆ ಮಾತ್ರವಲ್ಲದೆ ಜಿಲ್ಲೆಯೊಳಗೆ ಅಹಿಂದ ಮತ್ತು ಪ್ರಗತಿಪರ ಸಂಘಟನೆಗಳ ಸಭೆ ವ್ಯಕ್ತಪಡಿಸಿದ ವಿರೋಧದ ಪಾತ್ರ ಮಹತ್ತರವಾಗಿದೆ. ಈ ವಿಷಯದಲ್ಲಿ ಅಹಿಂದ ಮತ್ತು ಪ್ರಗತಿಪರ ಸಂಘಟನೆಗಳ ಸ್ನೇಹಿತರು ಗೆಲುವು ಸಾಧಿಸಿದಂತಾಗಿದೆ. ಈ ಗೆಲುವು ಅವರಿಗೆ ಮಾತ್ರವಲ್ಲ ರಾಜ್ಯದ ಎಲ್ಲ ಕೋಮುವಾದ ವಿರೋಧಿ ಧೋರಣೆಯುಳ್ಳವರಿಗೂ ಸಂತಸ ತಂದಿದೆ. ಕೋಮುವಾದಿ ಬಿಜೆಪಿ ಅಧಿಕಾರದಲ್ಲಿರುವಾಗ ಹೆಚ್ಚೂ ಕಮ್ಮಿ ಅದರ ನಿಲುವುಗಳ         ಸಾಂಸ್ಕೃತಿಕ  ವಕ್ತಾರರಂತಿರುವ ಚಿಮೂ ಆಯ್ಕೆ ಆಗಲಿಲ್ಲವೆಂದರೆ ಇದನ್ನು ನಾವು ಸಕಾರಾತ್ಮಕವಾಗಿ ಪರಿಗಣಿಸಬೇಕು.
ಡಾ.ಎಲ್.ಬಸವರಾಜು ಅವರು ಹುಟ್ಟಿನಿಂದ ಹಿಂದುಳಿದ ಅಥವಾ ದಲಿತ ಜಾತಿಗೆ ಸೇರಿದವರಲ್ಲವಾದ ಕಾರಣ ನಾವು ಪರ್ಯಾಯ ಸಮ್ಮೇಳನ ಮಾಡುತ್ತೇವೆ ಎಂಬ ನಿಲುವು ಸೂಕ್ತವಾದುದಲ್ಲ. ನಮ್ಮ ಸಮಾಜದಲ್ಲಿ ಜಾತಿ ತುಂಬಾ ಮುಖ್ಯ ನಿಜ. ಆದರೆ ಜಾತಿಯೊಂದೇ ನಿರ್ಣಾಯಕ ಎಂಬ ನಿಲುವಿನಿಂದ ಯೋಚಿಸುವುದು ಅಂತಿಮವಾಗಿ ನಾವು ಯಾವ ಜಾತಿವಾದವನ್ನು, ಕೋಮುವಾದವನ್ನು ವಿರೋಧಿಸುತ್ತೇವೋ ಅಲ್ಲಿಗೇ ನಮ್ಮನ್ನು ಕೊಂಡೊಯ್ಯುತ್ತದೆ. ಡಾ.ಎಲ್.ಬಸವರಾಜು ಅವರಂತಹ ವ್ಯಕ್ತಿಗಳ ವಿಷಯದಲ್ಲಿ ಜಾತಿ ಅಳತೆಗೋಲಿನಿಂದ ಅವರನ್ನು ಹಿಂದುಳಿದವರು ಅಥವಾ ದಲಿತರಲ್ಲ ಎಂದು ಪರಿಗಣಿಸುವ ವಾದ ಹುಟ್ಟನ್ನೇ ಅಂತಿಮ ಆಧಾರವಾಗಿ ನಿರ್ಣಯ ಕೈಗೊಳ್ಳುವ ಫಾಸಿಸ್ಟ್ ವಾದಿಗಳ ನಿಲುವಿಗಿಂತ ಭಿನ್ನವಾಗಿರುವುದಿಲ್ಲ.
ಪ್ರಗತಿಪರರು ಎಂಬ ಹೆಸರಿನಲ್ಲಿ ಯಾವಾಗಲೂ ಮುಂದುವರಿದ ಜಾತಿಯವರೇ ಎಲ್ಲ ಅವಕಾಶಗಳನ್ನು ಪಡೆಯಲು ಬಿಡುವಷ್ಟು ಉದಾರವಾದ ಅನುಸರಿಸಬೇಕಿಲ್ಲವಾದರೂ, ಎಲ್ಲಾ ಸಂದರ್ಭಗಳಲ್ಲಿ ಜಾತಿಯನ್ನು ಮಾತ್ರ ಪರಿಗಣಿಸಿ ನಿರ್ಣಯ ಕೈಗೊಳ್ಳುವುದು ಅಹಿಂದ ಅಥವಾ ಪ್ರಗತಿಪರ ಚಳವಳಿಗೆ ಶೋಭೆ ತರುವುದಿಲ್ಲ.
ಜ್ಯೋತಿಬಾ ಫುಲೆ ದಲಿತರಲ್ಲ. ಆದರೆ ದಲಿತ ವಿಮೋಚನೆಗಾಗಿ ಹೋರಾಡುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಫುಲೆಯನ್ನು ಗುರು ಸ್ಥಾನದಲ್ಲಿ ಸ್ಮರಿಸಿಕೊಳ್ಳಲು ಹೇಗೆ ಸಾಧ್ಯವಾಯಿತು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ದಲಿತರಲ್ಲ. ಆದರೆ ಬಿಎಸ್‍ಪಿಯವರು ತಮ್ಮ ಸಭೆಗಳಲ್ಲಿ ಕೃಷ್ಣರಾಜೇಂದ್ರ ಒಡೆಯರ್ ಅವರನ್ನು, ಸಾಹೂ ಮಹಾರಾಜರನ್ನು ಸ್ಮರಿಸಿ ಗೌರವಿಸುವುದು ಹೇಗೆ ಸಾಧ್ಯವಾಗಿದೆ? ಯಾಕೆಂದರೆ ಅವರೆಲ್ಲ ದಲಿತರಾಗಿ ಹುಟ್ಟಿರದಿದ್ದರೂ ಕೆಳಜಾತಿಗಳಿಗೆ ಸಮಾನ ಅವಕಾಶ ಸಿಗಬೇಕೆಂದು ಪ್ರತಿಪಾದಿಸಿದ್ದರಿಂದಾಗಿ. ಹುಟ್ಟಿನಿಂದ ಹಿಂದುಳಿದವರಲ್ಲದಿದ್ದರೂ ಅವರ ನೀತಿ ನಿಲುವುಗಳಿಂದ ಕೆಲವರನ್ನು ನಮ್ಮವರೇ ಎಂದು ಪರಿಭಾವಿಸುವ ಹೃದಯವಂತಿಕೆ, ಅದೇ ರೀತಿ ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದರೂ ಕೋಮುವಾದಿ ಅಥವಾ ಜಾತಿವಾದಿಯಾಗಿರುವವರು ನಮ್ಮವರಲ್ಲ ಎಂದು ಪರಿಭಾವಿಸುವ ನಿರ್ಮಮಕಾರವೂ ಕೆಳಜಾತಿಗಳ ಹಕ್ಕಿನ ಪ್ರತಿಪಾದನೆಯ ಸಂದರ್ಭದಲ್ಲಿ ಅವಶ್ಯಕ. ಇದಿಲ್ಲವಾದರೆ ಪಟ್ಟಭದ್ರ ಜಾತಿಗಳನ್ನು ಕವಿದುಕೊಂಡಿರುವ ಜಾತಿವಾದಿ ಕುರುಡುತನವೇ ನಮ್ಮನ್ನೂ ಹೊಲಬುಗೆಡಿಸುತ್ತದೆ.
ಇದು ವಿವೇಚನೆಯ ಪ್ರಶ್ನೆ. ಚಿತ್ರದುರ್ಗದ ಅಹಿಂದ ಮತ್ತು ಪ್ರಗತಿಪರ ಸಂಘಟನೆಗಳ ಗೆಳೆಯರಿಗೆ ಇದು ಗೊತ್ತು. ಅವರು ನಡೆಸಿದ ಸಂದರ್ಭೋಚಿತ ಪ್ರತಿಭಟನೆಯಿಂದಾಗಿ ಚಿತ್ರದುರ್ಗದಲ್ಲಿ ನಡೆಯುತ್ತರುವ ಸಾಹಿತ್ಯ ಸಮ್ಮೇಳನಕ್ಕೆ ‘ಚಿತ್ರದ ಮಹಿಮೆಯನ್ನು ಮಸಿ ನುಂಗಿತು’ ಎಂಬಂತಿರುವ ಚಿಮೂ ಬದಲಿಗೆ ಡಾ.ಎಲ್.ಬಿ.ಯವರಂತಹ ಜನಪರ ವಿದ್ವಾಂಸರು ಆಯ್ಕೆಯಾಗಲು ಒಂದು ಕಾರಣವಾಯಿತು. ಆದ್ದರಿಂದಲೇ ಅವರು ತಮ್ಮ ನಿರ್ಣಯ ಬದಲಾಯಿಸಿ ಡಾ.ಎಲ್.ಬಿ.ಯವರ ಆಯ್ಕೆ ಸಾಧ್ಯವಾದುದಕ್ಕೆ ಸಂಭ್ರಮಿಸುತ್ತಿರುವ ಎಲ್ಲರ ಜತೆ ಅರ್ಥಪೂರ್ಣವಾಗಿ ಕೈಜೋಡಿಸಲಿ ಎಂಬ ಬಯಕೆ ನನ್ನದು, ನನ್ನಂತಹವರದು.

ಗೌರಿ ಲಂಕೇಶ್, ಜನವರಿ 7, 2007