ಜಾತಿ ಬಹಿರಂಗ ಕಡ್ಡಾಯ ಮಾಡುವುದು ಸಲ್ಲದು-ಪ್ರಜಾವಾಣಿ ಸಂಪಾದಕೀಯ

ಜಾತಿ ನಮೂದಿಸಲಿಲ್ಲ ಎಂಬ ಕಾರಣಕ್ಕೆ ಪಿಡಿಒ ಹುದ್ದೆಗೆ ಅರ್ಜಿ ತಿರಸ್ಕಾರ ಮಾಡುವಂತಿಲ್ಲ ಎಂದು ಹೈಕೋರ್ಟ್ ಇತ್ತೀಚೆಗೆ ನೀಡಿದ ಆದೇಶ ಅತ್ಯಂತ ಮಹತ್ವದ್ದು. ನಮ್ಮ ಸಮಾಜ, ಸರ್ಕಾರ ಎಷ್ಟು ಸಂವೇದನಾರಹಿತವಾಗಿವೆ ಎನ್ನುವುದನ್ನೂ ಈ ಆದೇಶ ಬಿಚ್ಚಿಟ್ಟಿದೆ.  ನಮ್ಮದು  ಜಾತ್ಯತೀತ, ಧರ್ಮಾತೀತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ನಾವು ಕರೆದುಕೊಳ್ಳುತ್ತೇವೆ. ಸಂವಿಧಾನ ಕೂಡ ಇದನ್ನೇ ಹೇಳಿದೆ. ಆದರೂ ಎಲ್ಲ ಕಡೆ ಜಾತಿಯದ್ದೇ ಪಾರುಪತ್ಯ ನಡೆಯುತ್ತಿದೆ. ಇದು ಸಂವಿಧಾನಕ್ಕೆ ವಿರುದ್ಧ ಎಂದು ಗೊತ್ತಿದ್ದರೂ ಇದನ್ನು ಉದ್ದೇಶಪೂರ್ವಕವಾಗಿಯೇ ಪಾಲಿಸಲಾಗುತ್ತಿದೆ. ಬಹುತೇಕ ಎಲ್ಲ ಅರ್ಜಿಗಳಲ್ಲಿಯೂ ಜಾತಿ ಕಾಲಂ ಭರ್ತಿ ಮಾಡುವುದು ಕಡ್ಡಾಯವಾಗಿದೆ. ಮುಖ್ಯವಾಗಿ ಶಾಲೆಗೆ ಪ್ರವೇಶ ಪಡೆಯುವಾಗ, ಶಾಲೆಯಿಂದ ವರ್ಗಾವಣೆ ಪತ್ರ ಪಡೆಯುವಾಗ ಹಾಗೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಜಾತಿ ನಮೂದಿಸಲೇ ಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಇವೆಲ್ಲ ಸಂವಿಧಾನ ವಿರೋಧಿ ನಡವಳಿಕೆಗಳು. ಆದರೂ ಪಾಲಿಸಲಾಗುತ್ತಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಹುಟ್ಟುವ ಮಕ್ಕಳಿಗೆ ಸಹಜವಾಗಿಯೇ ಜಾತಿ ಗೊತ್ತಿರುವುದಿಲ್ಲ. ಬೀದಿಯಲ್ಲಿ ಸಿಕ್ಕ ಅನಾಥ ಮಕ್ಕಳಿಗೂ ಜಾತಿ ಗೊತ್ತಿರುವುದಿಲ್ಲ. ಹೀಗೆ ಜಾತಿಯೇ ಗೊತ್ತಿಲ್ಲದ ಮಕ್ಕಳಿಗೆ ಸೌಲಭ್ಯವೂ ಇಲ್ಲ ಎನ್ನುವ ಸ್ಥಿತಿ ಈಗ ನಿರ್ಮಾಣವಾಗಿದೆ. ಇದು ಬದಲಾಗಬೇಕು. ಜಾತಿ ಇಲ್ಲ, ತಂದೆ, ತಾಯಿ ಇಲ್ಲ ಎಂದರೂ ಗೌರವಯುತವಾಗಿ ಬದುಕಬಹುದು ಎಂಬ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ಇಂತಹ ಮಕ್ಕಳ ಪಾಲಿಗೆ ಸರ್ಕಾರವೇ ತಂದೆ, ತಾಯಿ ಸ್ಥಾನದಲ್ಲಿ ನಿಂತು ಗೌರವದ ಬದುಕು ಕಟ್ಟಿಕೊಡಬೇಕಿದೆ.

‘ಜಾತಿ ಬಹಿರಂಗ ಮಾಡುವುದು ಕಡ್ಡಾಯವಲ್ಲ. ಅದು ಐಚ್ಛಿಕ. ಜಾತಿಯನ್ನು ಹೇಳದೇ ಇದ್ದರೂ ಸೌಲಭ್ಯವನ್ನು ನೀಡಬೇಕು’ ಎಂದು  ಸುಪ್ರೀಂ ಕೋರ್ಟ್   ಸಹ ಹೇಳಿದೆ. ಮೀಸಲು ಸೌಲಭ್ಯ ಪಡೆದುಕೊಳ್ಳುವವರಿಗೆ ಜಾತಿ ಘೋಷಿಸಿಕೊಳ್ಳುವುದು ಅನಿವಾರ್ಯ.  ಅದು ಸರಿಯಾದುದು. ಆದರೆ  ಎಲ್ಲರೂ  ಜಾತಿ ಘೋಷಿಸಿಕೊಳ್ಳಬೇಕು ಎಂದು    ಕಡ್ಡಾಯ ಮಾಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಹೀಗಾಗಿ ಜಾತಿ ಘೋಷಿಸಿಕೊಳ್ಳುವುದು ಬಿಡುವುದು ಅವರವರ ಆಯ್ಕೆಗೆ ಬಿಟ್ಟದ್ದು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ  ನಮ್ಮ ಆಡಳಿತ ವ್ಯವಸ್ಥೆ ಬದಲಾಗಬೇಕು.  ಇತ್ತೀಚೆಗೆ ಹಲವಾರು ಹುದ್ದೆಗಳಿಗೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸುವ ಪದ್ಧತಿ ಜಾರಿಗೆ ಬಂದಿದೆ. ಆದರೆ ಆನ್‌ಲೈನ್‌ನಲ್ಲಿಯೂ ಜಾತಿ ಕಾಲಂ ಭರ್ತಿ ಮಾಡಲೇಬೇಕು. ಆ ರೀತಿಯೇ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಇದು ದುಷ್ಟತನದ ಪರಮಾವಧಿ. ಹೀಗಾಗಿಯೇ ಪಿಡಿಒ ಹುದ್ದೆಗೆ ಇಬ್ಬರು ಯುವತಿಯರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಜಾತಿ ಹೆಸರು ನಮೂದಿಸದೇ ಇದ್ದಾಗ  ಅದು ಸ್ವೀಕೃತವಾಗದೆ ಸಮಸ್ಯೆಯಾಯಿತು. ಇದನ್ನೇ ಪ್ರಶ್ನಿಸಿ ಈ ಯುವತಿಯರು ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯ ಈಗ ಈ ಯುವತಿಯರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಸಕಾರಾತ್ಮಕ ಬೆಳವಣಿಗೆ. ಹಾಗೆಂದು ಜಾತಿ ಇಲ್ಲದೆ ಹುಟ್ಟಿದ ಮಕ್ಕಳೆಲ್ಲ ಸೌಲಭ್ಯ ಪಡೆದುಕೊಳ್ಳಲು ನ್ಯಾಯಾಲಯದ ಬಾಗಿಲು ಬಡಿಯಲು ಸಾಧ್ಯವಾಗುವುದಿಲ್ಲ. ಆದರೆ, ಜಾತಿ, ಧರ್ಮ, ತಂದೆ, ತಾಯಿ ಇಲ್ಲ ಎನ್ನುವ ಕಾರಣಕ್ಕೆ ಸೌಲಭ್ಯ ನಿರಾಕರಿಸಿದರೆ ಅದು  ಅಮಾನವೀಯ. ಅಲ್ಲದೆ ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ. ಮಾನವ ಹಕ್ಕು ಉಲ್ಲಂಘನೆ ಕೂಡ ಹೌದು. ಜಾತಿ ನಮೂದಿಸಲೇ ಬೇಕು ಎಂದು ಕಡ್ಡಾಯ ಮಾಡಿದರೆ ಅರ್ಹತೆ ಇದ್ದರೂ ಅವರಿಗೆ ಸೌಲಭ್ಯವನ್ನು ನಿರಾಕರಿಸಿದಂತೆ ಆಗುತ್ತದೆ. ಜಾತ್ಯತೀತ, ಧರ್ಮಾತೀತ ಮಕ್ಕಳಿಗೆ ಆದ್ಯತೆ ನೀಡುವುದನ್ನೂ ನಮ್ಮ ಸರ್ಕಾರಗಳು ಕಲಿಯಬೇಕು.

ಜಾತಿ ಇದ್ದವರಿಗೆ ಮೀಸಲಾತಿ ಇದೆ. ಅದನ್ನು ಪಡೆಯುವುದಕ್ಕೆ ಅವರು ಜಾತಿಯನ್ನು ಬಹಿರಂಗ ಪಡಿಸಬಹುದು. ಜಾತಿಯೇ ಗೊತ್ತಿಲ್ಲದವರಿಗೆ ಮೀಸಲಾತಿ ಸೌಲಭ್ಯ ಇಲ್ಲ. ಅವರಿಗೂ ಮೀಸಲಾತಿ ನೀಡಬೇಕು, ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಜಾತಿ ಗೊತ್ತಿಲ್ಲದ ಮಕ್ಕಳಿಗೆ ಕೃಪಾಂಕ ನೀಡಬೇಕು ಎಂಬ ಬೇಡಿಕೆ ಕೂಡ ಇದೆ. ಇದನ್ನು ಸಹ ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಬೇಕು. ಇಂತಹ ಮಕ್ಕಳಿಗೆ ಷರತ್ತುರಹಿತ ಸೌಲಭ್ಯ ನೀಡಲು ಸರ್ಕಾರ ಮುಂದಾಗಬೇಕು. ಜಾತಿ ಗೊತ್ತಿಲ್ಲದವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಹಾಗೂ ಸಂವೇದನಾಶೀಲವಾಗಿ ಸರ್ಕಾರ ಗಮನಿಸಬೇಕು. ಅಂದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ.