ಜನಾರ್ಧನ ರೆಡ್ಡಿ ಮಗಳ ಅದ್ದೂರಿ ಮದುವೆ ಕುರಿತು….

mahadev photo

 

ಸಿರಿತನದಿಂದ ಇಂಥಹ ಕೆಟ್ಟ ಅಭಿರುಚಿ ಬೆಳೆಸಿಕೊಂಡು ಕೊಳಕು ಪ್ರದರ್ಶನ ನಡೆಸಲಾಗಿದೆ. ಒಳ್ಳೆಯವರು ಮುಖ ಮುಚ್ಚಿಕೊಳ್ಳಬೇಕಷ್ಟೆ.

                                                                                                                                                               -ದೇವನೂರ ಮಹದೇವ, ಸಾಹಿತಿ
   ನಾಡಿನ ಸಾಮಾನ್ಯ ಜನರಿಂದ ಶ್ರೀಮಂತ ವರ್ಗದವರೆಗೆ ಎಲ್ಲರಿಗೂ ಮಾದರಿಯಾಗಬೇಕಿದ್ದ ಮದುವೆ ಇಂದು ಸಮಾಜಕ್ಕೆ ಅಪಮಾನ ಮಾಡಿದೆ. ಸಮಾಜದಲ್ಲಿ ಮಾನ ಮರ್ಯಾದೆ ಇರುವ ಜನರು ಪ್ರತಿಭಟನೆ ಮೂಲಕ ಖಂಡಿಸಲು ಸಾಧ್ಯವಿಲ್ಲದ್ದರಿಂದ ಮುಖ ಮುಚ್ಚಿಕೊಂಡು ಹೋಗುವಂತಾ ಸ್ಥಿತಿ ಎದುರಾಗಿದೆ. ಸಿರಿತನದಿಂದ ಇಂತಹ ಕೆಟ್ಟ ಅಭಿರುಚಿಯನ್ನು ಬೆಳೆಸಿಕೊಂಡು ಕೊಳಕು ಪ್ರದರ್ಶನ ಮಾಡುತ್ತಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಜೈಲಿಗೆ ಹೋಗಿ ಬಂದವರು ಇನ್ನೂ ಆರೋಪ ಮುಕ್ತರಾಗಿಲ್ಲ. ಆದರೆ ಅವರು ವೈಭವೋಪೇತ ಮದುವೆಯನ್ನು ನೆರವೇರಿಸುತ್ತಿದ್ದಾರೆ. ದೇಶದಲ್ಲಿ ಒಂದು ನೂರರ ಮುಖಬೆಲೆಯ ನೋಟುಗಳಿಗಾಗಿ ಸಾಮಾನ್ಯ ಜನರು ಪರದಾಡುತ್ತಿದ್ದಾರೆ. ಚಿಲ್ಲರೆ ಬಿಕ್ಕಟ್ಟು ಎದುರಾಗಿರುವ ಕಾರಣ, ಹಣವಿಲ್ಲ ಎಂಬಂತಹ ಕಾರಣಗಳನ್ನು ಮುಂದಿಡಲಾಗುತ್ತಿದೆ. ಆದರೆ ರೆಡ್ಡಿ ಮಗಳ ಮದುವೆ ವೈಭವೋಪೇತವಾಗಿ ನಡೆಯುವಾಗ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿಲ್ಲವೇ ಎಂಬುದೂ ಮುಖ್ಯ. ಹಾಗಾದರೆ ದೇಶದಲ್ಲಿ ಚಿಲ್ಲರೇ ಸಮಸ್ಯೆ ಎದುರಾಗದಿದ್ದಿದ್ದರೆ, ಅವರು ಜೈಲಿಗೆ ಹೋಗದೇ ಇದ್ದರೆ, ಒಂದು ವೇಳೆ ಆರೋಪ ಮುಕ್ತರಾಗಿದ್ದರೆ, ಎಲ್ಲವೂ ಚೆನ್ನಾಗಿದ್ದಿದ್ದರೆ ಇಷ್ಟು ಅದ್ಧೂರಿ ವೆಚ್ಚದಲ್ಲಿ ಮದುವೆ ಮಾಡಬಹುದಿತ್ತೆ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಯಾವ ವಿಚಾರಗಳನ್ನೂ ಗಣನೆಗೆ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ಇವೆಲ್ಲವೂ ಕೊಳಕು ಪ್ರದರ್ಶನದ ಅಭಿರುಚಿ.
ಇಂತಹ ಕೊಳಕು ಪ್ರದರ್ಶನದ, ನಾಚಿಕೆಗೇಡಿನ ಮದುವೆ ಸಂದರ್ಭದಲ್ಲಿ ಮಾನ ಮರ್ಯಾದೆ ಹಾಗೂ ಒಳ್ಳೆಯ ಅಭಿರುಚಿ ಇರುವ ಒಂದಿಷ್ಟು ಜನರು ಪ್ರತಿಭಟಿಸಲೂ ಸಾಧ್ಯವಾಗದೇ ಮುಖ ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ದುರಂತ. ಇದರಲ್ಲಿ ಸಮಾಜಕ್ಕೆ ಸಂದೇಶ ನೀಡುವುದೇನು ಬಂತು? ಕೊಳಕು ಪ್ರದರ್ಶನಕ್ಕೆ ಮುಂದಾಗಿರುವ ಕೆಲವರನ್ನು ಮರ್ಯಾದೆ ಇರುವ ಕೆಲವೊಂದಿಷ್ಟು ಮಂದಿ ವಿರೋಧಿಸುತ್ತಿದ್ದೇವೆ.