ಜನಪರ್ಯಾಯ ಕಟ್ಟೋಣ ಜಾಥ ಉದ್ಘಾಟನೆಯಲ್ಲಿ ದೇವನೂರು ಮಹಾದೇವರವರ ಮಾತುಗಳು.

ನೀವು ಒಂದು ಘೋಷಣೆ ಕೇಳಿರಬೇಕು. ಕವಿ ಸಿದ್ದಲಿಂಗಯ್ಯ ಎಪ್ಪತ್ತರ ದಶಕದಲ್ಲಿ ಬರೆದಿದ್ದುದು ಅದು, ಎಲ್ಲಿಗೆ ಬಂತು, ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂದು. ಆಗ ನನಗೆ ಕಸಿವಿಸಿಯಾಗುತ್ತಿತ್ತು ಏನಪ್ಪ ನಮ್ಮ ಸ್ವಾತಂತ್ರ್ಯವನ್ನೇ ಗೇಲಿಸುತ್ತಿದ್ದಾರೆ ಎಂದು. ಈಗ ಅದು ನಿಜವೆನಿಸುತ್ತದೆ. 70 ವರ್ಷ ಕಳೆದರೂ ಸ್ವಾತಂತ್ರ್ಯ ಸಿಕ್ಕಿಲ್ಲ ಅನ್ನಿಸುತ್ತಿದೆ.
ಅದರಲ್ಲಿ ಟಾಟಾ ಬಿರ್ಲಾರ ಜೀಬಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬ ಸಾಲು ಬರುತ್ತದೆ. ಈಗ ಅದನ್ನು ನಾವು ಅಂಬಾನಿ ಆದಾನಿ ಜೇಬಿಗೆ ಬಂತು ಅಂತ ಬದಲಿಸಿಕೊಳ್ಳಬೇಕು ಅಷ್ಟೇ.
ಹಿಂದೆ ಈ ಟಾಟಾ ಬಿರ್ಲಾಗಳು ಸರ್ಕಾರಗಳಿಗೆ ಆಮಿಷ ಒಡ್ಡಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ  ಇಂದು ಸರ್ಕಾರ ನಡೆಸುತ್ತಿರುವವರು ಸರ್ಕಾರಗಳು ಅಲ್ಲ ಬದಲಿಗೆ ಬಂಡವಾಳಶಾಹಿಗಳು. ಹಾಗಾದರೆ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಇವರು ಬಂಡವಾಳಶಾಹಿಯ ಆಸ್ಥಾನದಲ್ಲಿ ಎಂಜಲು ತಿನ್ನುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚೆಂದರೆ ಮೇಸ್ತ್ರಿಗಳಾಗಿದ್ದಾರೆ. ತೋಳದ ಕೈಯಲ್ಲಿ ಕುರಿಗಳನ್ನು ಕೊಟ್ಟು ಕಾಯುವಂತೆ ವಿಧ್ವಂಸಕ ಕೃತ್ಯ ಇಂದು ನಡೆಯುತ್ತಿದೆ.. ಇದಕ್ಕಿಂತ ಅಪಾಯ ಬೇರೆ ಯಾವುದಿದೆ?
ಇಂದು ಧರೆಹತ್ತಿ ಉರಿಯುತ್ತಿದೆ,ಅಂತರ್ಜಲ ಪಾತಾಳ ತಲುಪಿದೆ, ಜನರ ಸಾವು ಹೆಚ್ಚುತ್ತಿದೆ. ಇದಕ್ಕೆಲ್ಲಾ ಕಾರಣ ಸಾರ್ವಜನಿಕರ ಸಂಪತ್ತನ್ನು ಖಾಸಗೀಯವರ ಕೈಯಲ್ಲಿ ಕೊಟ್ಟಿದ್ದೆ ಆಗಿದೆ. ಇವತ್ತು ಬರ ಬಂದಿರುವುದು ಪ್ರಕೃತಿಯಿಂದಲ್ಲ. ನಮ್ಮಿಂದಲೇ. ಮ್ಯಾನ್ ಮೇಡ್ ಬರ ಇದು. ಕಾಡನ್ನು ಕಡಿದು, ವಿಲಾಸಿಗಳಾಗಿ ಮಾಡುತ್ತಿದ್ದಾರೆ. ಆಳುವ ಸರ್ಕಾರಗಳು ಮತ್ತು ಕಾರ್ಪೋರೇಟ್ ಶಕ್ತಿಗಳು ಇಂದಿನ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ನಾವು ಅವರಿಗೆ ಕೇಳಬೇಕಿದೆ. ಸ್ವಾತಂತ್ರ್ಯ ಬಂದ ಸಮಯದಲ್ಲಿ ಇದ್ದ ನೀರು, ಆಹಾರ, ಖನಿಜ ಸಂಪತ್ತು, ಗಾಳಿ ಇವೆಲ್ಲವನ್ನೂ ಮೊದಲಿನ ರೀತಿಯೇ ಮಾಡಿಕೊಡಿ ಎನ್ನಬೇಕು.
ಆದರೆ ಆಳುವ ಪಕ್ಷಗಳು ಮತ್ತು ಬಕಾಸುರ ಬಂಡವಾಳಶಾಹಿಗಳನ್ನು ನೋಡಿದರೆ ಇದು ಅಸಾಧ್ಯ ಅನ್ನಿಸುತ್ತದೆ. ಅದಕ್ಕೆ ನಾವು ಬಡಪಾಯಿಗಳನ್ನೇ ಒಂದುಗೂಡಿಸಿ ರಾಜಕಾರಣ ಮಾಡಬೇಕಿದೆ. ನಾವು ಎಲ್ಲಾ ಪ್ರಗತಿಪರ ಸಂಘಟನೆಗಳು ಜನಪರ ರಾಜಕಾರಣ ಮಾಡಬೇಕು. ನಾವು ಊರಿನ ಕೆರೆ ಹೂಳು ಎತ್ತುವುದು, ಆಸ್ಪತ್ರೆ ಸರಿ ಮಾಡುವುದು, ಶಾಲೆ ಅಭಿವೃದ್ಧಿ ಮಾಡುವುದು ಇತ್ಯಾದಿಗಳನ್ನು ಮಾಡಿದರೆ ಆಗ ಸಾಧ್ಯ. ಮುಂದಿನ ವರ್ಷ ಚುನಾವಣೆ ಇದೆ. ನಾವು ಮಾತು ಕಡಿಮೆ ಮಾಡಿ ರಚನಾತ್ಮಕ ಕೆಲಸಗಳನ್ನು ಮಾಡಬೇಕಿದೆ. ಗ್ರಾಮ ಪಂಚಾಯ್ತಿಗಳಲ್ಲಿನ ಭ್ರಷ್ಟಾಚಾರ ತಡೆಯಬೇಕಿದೆ. ಬಂದ ಹಣ ಸರಿಯಾಗಿ ಬಳಕೆಯಾಗುವಂತೆ ಮಾಡಬೇಕಿದೆ.
ಕೊನೆಯದಾಗಿ ಜಾಥದಲ್ಲಿ ಹೋಗುತ್ತಿರುವ ಗೆಳೆಯರನ್ನು ಉದ್ದೇಶಿಸಿ  ಒಂದು ಮಾತು. ಬುದ್ಧನ ರೂಪಕ ಕಥೆಯಲ್ಲಿ ಒಂದು ಕಥೆಯಿದೆ. ಅದರ ಹೆಸರು ಕೋಪ ತಿನ್ನುವ ಯಕ್ಷ. ಅಂದರೆ ಅವನನ್ನು ಬೈದರೆ ಅವನು ಸುಂದರವಾಗುತ್ತಾನೆ. ಸುಮ್ಮನಿದ್ದರೆ ಕುರೂಪನಾಗುತ್ತಾನೆ. ಆ ಯಕ್ಷ ಬೈದರೆ ಕೊಬ್ಬುತ್ತಾನೆ. ನಾವು ಸುಮ್ಮನಿದ್ದರೆ ಅವನು ಕೆಡುತ್ತಾನೆ. ಇವತ್ತು ನಾವು ಬಿಜೆಪಿಯನ್ನು ಸಾಕಷ್ಟು ಬೈಯುತ್ತಿದ್ದೇವೆ. ಇದರಿಂದ ಪ್ರಯೋಜನವಿಲ್ಲ.  ಸುಮ್ಮನಿದ್ದು ನಮ್ಮ ರಚನಾತ್ಮಕ ಕೆಲಸಗಳನ್ನು ಮುಂದುವರೆಸಬೇಕಿದೆ.
 ಈ ಕಥೆಯನ್ನು ಕೇಳಿ ನಾವು ಕನಿಷ್ಠ 7 ನಿಮಿಷ ಮೌನವಾಗಿರಲು, ತಾಕತ್ತಿದ್ರೆ 20 ನಿಮಿಷ ಮೌನವಾಗಿರಲು ಸಾಧ್ಯವೇ? ಇದು ಹೊಸ ಆಲೋಚನೆ , ಹೊಸ ಮಾರ್ಗವನ್ನು ತೋರಿಸಬಹುದು ಮತ್ತು ನೀವು ಕೂಡ ಬೆಳಕಾಗಬಹುದು ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.