ಗ್ರಾಮೀಣ ಸಂಕಷ್ಟ: ಸಂಕಲ್ಪವಿಲ್ಲದೆ ಪರಿಹಾರ ಕಷ್ಟ-ಶಾರದಾ ಗೋಪಾಲ

 

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಪಶ್ಚಿಮಘಟ್ಟಗಳ ಸೆರಗಿನ ಪ್ರದೇಶ. ಅರ್ಧಕ್ಕಿಂತ ಹೆಚ್ಚು ಭಾಗ ಕಾಡು ಇದೆ. ಮಹಾದಾಯಿ, ಮಲಪ್ರಭಾ ನದಿಗಳು ಹುಟ್ಟುವ ಪ್ರದೇಶ. ಇಂಥ ಕಾಡು ಪ್ರದೇಶದಲ್ಲಿ ಕಳೆದ ವರ್ಷವೂ ಸರಿಯಾಗಿ ಮಳೆ ಆಗಲಿಲ್ಲ, ಈ ವರ್ಷ ಕೂಡ ಒಳ್ಳೆಯ ಮಳೆ ಇಲ್ಲ. ನದಿ ಹುಟ್ಟುವೆಡೆ ಒಳ್ಳೆಯ ಮಳೆಯಾಗಿ ನೆಲದೊಳಗೆ ನೀರಿಂಗಿ ನದಿಗಳು ತುಂಬಿ ಹರಿಯಬೇಕಾದ್ದು ರೂಢಿ. ಆದರೆ ಹಾಗಾಗಿಲ್ಲ. ನದಿಗಳು ತುಂಬಲಿಲ್ಲ.ಜಲಾಶಯಗಳೆಲ್ಲ ಬರಿದೋ ಬರಿದು. ಅಂತರ್ಜಲ ಮರುಪೂರಣ ಆಗಿಲ್ಲ. ನೆಲಮಟ್ಟದಲ್ಲಿ ನೀರು ಹರಿಯುತ್ತಲೂ ಇಲ್ಲ, ನೆಲದೊಳಗೆ ನೀರು ಭರ್ತಿಯಾಗಲೂ ಇಲ್ಲ. ಬೆಳೆಗೆ ಮಳೆ ನೀರೂ ಇಲ್ಲ, ಕೊಳವೆ ಬಾವಿಗಳಿಂದ ಪಡೆದೇನೆಂದರೆ ಒಳಗೂ ನೀರಿಲ್ಲ.

ಹೊಲಗಳಲ್ಲಿ ಬೆಳೆ ನೆಲ ಬಿಟ್ಟು ಮೇಲೇಳಲೇ ಇಲ್ಲ. ಭತ್ತ ಹಾಕಿದ್ದವರಿಗೆಲ್ಲ ಹಿಡಿ ಕಾಳೂ ಬರಲಿಲ್ಲ. ಬೆಳೆ ಯಾವುದು, ಕಳೆಗಿಡ ಯಾವುದು ಗುರುತಿಸುವುದು ಕಠಿಣವಾಯಿತು. ಮೇವು ಕೂಡ ಸಿಗದಂತಾಯಿತು. ಕಬ್ಬು ಮಾರೆತ್ತರಕ್ಕೆ ಕೂಡ ಬೆಳೆಯಲಿಲ್ಲ. ಮಳೆ ಬಂದು ಕಬ್ಬಿನಲ್ಲಿ ರಸ ತುಂಬಿಕೊಳ್ಳುವ ಲಕ್ಷಣವೇ ಕಾಣದಿದ್ದಾಗ ರೈತರು ಅಕ್ಟೋಬರ್‌ನಲ್ಲಿಯೇ ಬೇರೆ ಬೆಳೆಗಳ ಸುಗ್ಗಿ ಶುರುವಾಗುವ ಪೂರ್ವದಲ್ಲಿಯೇ ಕಬ್ಬಿನ ಕಟಾವು ಆರಂಭಿಸಿದ್ದಾರೆ. ಸೋಗೆಯ ರಾಶಿಯಷ್ಟು ಸಹ ಕಬ್ಬು ಕಾರ್ಖಾನೆಗೆ ಹೋಗಲಿಲ್ಲ. ಕಡಿದೊಗೆದದ್ದನ್ನೆಲ್ಲ ಮೇವಿಗೆಂದು ಒಯ್ಯುತ್ತಿದ್ದಾರೆ. ಕಬ್ಬಿನ ಗರಿ ಮಾತ್ರವೇ ಮೇವು ಈ ವರ್ಷ.

ಹಿಂಗಾರಾದರೂ ಬಂದೀತೆಂದು ಮುಂಗಾರು ಬೆಳೆಯನ್ನೆಲ್ಲ ತೆಗೆದು ಮತ್ತೆ ಭೂಮಿಯನ್ನು ಹಸನು ಮಾಡಿಟ್ಟರು ಕೆಲ ರೈತರು. ಬರಲೇ ಇಲ್ಲ ಹಿಂಗಾರು ಮಳೆ. ರೈತ ತಲೆ ಮೇಲೆ ಕೈಹೊತ್ತು ಕುಳಿತ. ಕಳೆದ ವರ್ಷ ಮಳೆ ಬಾರದ್ದರಿಂದ ಗ್ರಾಮೀಣ ಭಾಗದ ಜನರೆಲ್ಲರೂ ಉದ್ಯೋಗ ಖಾತರಿಯನ್ನೇ ನೆಚ್ಚಿಕೊಂಡು ಕೆಲಸ ಮಾಡಿದ್ದರು.

ತಾಲ್ಲೂಕಿನಲ್ಲಿರುವ ಹೆಚ್ಚೂಕಮ್ಮಿ 75% ಕೆರೆಗಳ ಪುನಶ್ಚೇತನ ಆಗಿತ್ತು. ಆದರೇನು, ಈ ವರ್ಷ ಭೂಮಿ ತೋಯಿಸುವಷ್ಟು ಕೂಡ ಮಳೆ ಆಗದೆ ಕೆರೆಗಳು ಬಾಯ್ದೆರೆದುಕೊಂಡು ಉಳಿದವಷ್ಟೆ. ಅಷ್ಟೇ ಅಲ್ಲ, ಈ ವರ್ಷ ಕೆಲಸವೇನೂ ಉಳಿದಿಲ್ಲ ಎಂದು ಅಧಿಕಾರಿಗಳು ಗ್ರಾಮೀಣ ಉದ್ಯೋಗ ಖಾತರಿಯ ಕೆಲಸವನ್ನೂ ಕೊಡುತ್ತಿಲ್ಲ. ಅನೇಕ ಕಡೆ ದುಡಿದ ಜನರ ಕೂಲಿ ಪಾವತಿಯನ್ನೂ ಮಾಡುತ್ತಿಲ್ಲ ಸರ್ಕಾರ.

ಇದು ಗ್ರಾಮೀಣ ಸಂಕಷ್ಟ. ಪ್ರಕೃತಿ ಮುನಿದಿದೆ. ಮಾನವ ನಿರ್ಮಿತವಿರಬಹುದು, ಆದರೂ ನೈಸರ್ಗಿಕ ವಿಕೋಪವಿದು. ರೈತರನ್ನು ಅವಲಂಬಿಸಿದ ಗ್ರಾಮೀಣ ಕೂಲಿಕಾರರು, ಕುಶಲಕರ್ಮಿಗಳನ್ನು ಸರ್ಕಾರ ಬರಪೀಡಿತರು ಎಂದು ಗುರುತಿಸುವುದಿಲ್ಲ, ಆದರೆ ರೈತರ ಭೂಮಿಯನ್ನೇ ಅವಲಂಬಿಸಿ ಬದುಕುವ ಇವರೆಲ್ಲ ರೈತರಿಗಿಂತಲೂ ಹೆಚ್ಚು ಬರಪೀಡಿತರು, ಸಂಕಷ್ಟಕ್ಕೊಳಗಾದವರು.

ಗ್ರಾಮೀಣ ಭಾಗಗಳು ತೀವ್ರ ಬರಗಾಲಕ್ಕೀಡಾಗಿದ್ದರೂ ಕಳೆದ ವರ್ಷ ಹರಿಯಾಣ, ಗುಜರಾತ್‌ ಮತ್ತು ಬಿಹಾರ ರಾಜ್ಯಗಳು ಬರ ಘೋಷಣೆ ಮಾಡದಿದ್ದುದನ್ನು ಪ್ರಶ್ನಿಸಿ ‘ಸ್ವರಾಜ್ ಅಭಿಯಾನ’ ಎಂಬ ಸಂಘಟನೆ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿತು. ಬರಪೀಡಿತ ಎಂದು ಘೋಷಿಸಿ ಸಮಗ್ರ ಬರ ನಿರ್ವಹಣೆಗೆ ಮಾರ್ಗಸೂಚಿ ರೂಪಿಸಬೇಕು, ಇನ್ನೂ ಜಾರಿಯಾಗದೇ ಉಳಿದಿರುವ ಆಹಾರ ಭದ್ರತಾ ಕಾಯ್ದೆಯನ್ನು  ಜಾರಿಗೊಳಿಸಬೇಕು, ಗ್ರಾಮೀಣ ಜನರಿಗೆ ಉದ್ಯೋಗ ಖಾತರಿಯಲ್ಲಿ ಕೆಲಸ ಮತ್ತು ಕೂಲಿಪಾವತಿ ಸರಿಯಾಗಿ ಆಗುವಂತೆ ಮಾಡಬೇಕು, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಹಾಲು, ಬಾಳೆಹಣ್ಣಿನಂಥ ಪೌಷ್ಟಿಕ ಆಹಾರ ದೊರೆಯಬೇಕು ಎಂದು ಬೇಡಿಕೆ ಸಲ್ಲಿಸಿತ್ತು.

ದಾವೆಯನ್ನು ಅಂಗೀಕರಿಸಿ ವಿಚಾರಣೆ ಆರಂಭಿಸಿದ ಸರ್ವೋಚ್ಚ ನ್ಯಾಯಾಲಯಕ್ಕೆ ಆಶ್ಚರ್ಯ ಕಾದಿತ್ತು. 2005ರಲ್ಲಿಯೇ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯು  ಬಂದಿದ್ದರೂ ಈವರೆಗೆ ದೇಶವು ವಿಕೋಪ ನಿರ್ವಹಣೆಗೆ ಸಜ್ಜಾಗಿಲ್ಲದಿರುವುದು, ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆ, ವಿಕೋಪ ನಿರ್ವಹಣಾ ಯೋಜನೆ, ವಿಕೋಪ ನಿವಾರಣಾ ನಿಧಿ ಯಾವೊಂದು ತಯಾರಿಯೂ ಇಲ್ಲದಿದ್ದುದು ತಿಳಿದುಬಂತು. ಆರು ತಿಂಗಳೊಳಗಾಗಿ ಅಂಥ ಒಂದು ಪಡೆಯನ್ನು ಭಾರತ ಸರ್ಕಾರ ರಚಿಸಬೇಕು. ಅದೇ ರೀತಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿವಾರಣಾ ನಿಧಿಯನ್ನು ಮೂರು ತಿಂಗಳೊಳಗಾಗಿ ಸ್ಥಾಪಿಸಬೇಕು ಎಂದು ಈ ವರ್ಷದ ಏಪ್ರಿಲ್ 11ರಂದು ಆದೇಶ ಕೊಟ್ಟಿತು.

ಬರ ಕೂಡ ಪ್ರಕೃತಿ ವಿಕೋಪಗಳಲ್ಲಿ ಒಂದು ಎಂದು ಒಪ್ಪಿಕೊಂಡಾಗಲೇ ಅದರ ಸಮಗ್ರ ನಿರ್ವಹಣೆಯ ಬಗ್ಗೆ ಆಲೋಚಿಸುವುದು ಸಾಧ್ಯ. ಭೂಕಂಪಗಳಾಗಲಿ, ನೆರೆ ಪ್ರವಾಹವಾಗಲಿ ಆದಾಗ ದೇಶಕ್ಕೆ ದೇಶವೇ ಎದ್ದು ನಿಲ್ಲುತ್ತದೆ, ಪರಿಹಾರ ನಿಧಿಗೆ ಎಲ್ಲರೂ ದಾನ ಮಾಡುತ್ತಾರೆ. ಯುದ್ಧೋಪಾದಿಯಲ್ಲಿ ಪರಿಹಾರ ಕೆಲಸ ಆಗುತ್ತದೆ. ಆದರೆ ಬರ ಎಂಬುದು ಸಣ್ಣಗೆ ಎಳೆದಿರುವ ಬರೆಯಂತೆ. ಸ್ಥಳೀಯವಾಗಿ ಜನರು ಪಡುತ್ತಿರುವ ಪಡಿಪಾಟಲು ಹೊರಗಿನವರಿಗೆ ಕಾಣುವುದಿಲ್ಲ. ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡುವವರೆಗೆ ಅದು ಬಹಿರಂಗವೂ ಆಗುವುದಿಲ್ಲ.

ಆ ನಂತರ ಸರ್ಕಾರ ಬಿಡುಗಡೆ ಮಾಡಿದರೆ ಪ್ಯಾಕೇಜು, ಇಲ್ಲವೆಂದರೆ ಅದೂ ಇಲ್ಲ. ಪ್ಯಾಕೇಜು ಬಿಡುಗಡೆ ಮಾಡಿದರೂ, ಕೇವಲ ಭೂಮಿ ಉಳ್ಳ ರೈತರಿಗೆ ಮಾಡಬಹುದು, ಉಳಿದವರ ಕತೆ ಏನು? ಜಾನುವಾರುಗಳಿಗೆ ಮೇವು ಬ್ಯಾಂಕ್ ಮಾಡಿದರೂ ದನಕರುಗಳಷ್ಟೇ ಗಣನೆಗೆ ಬರುವವೇ ಹೊರತು ಕುರಿ, ಕೋಳಿ, ಮೇಕೆಗಳು ಬರುವುದಿಲ್ಲ. ಇನ್ನು ರೈತರಿಗೆ ಪರಿಹಾರದ ಘೋಷಣೆಯಂತೂ ತೀರಾ ನಾಚಿಕೆಗೇಡಿನ ವಿಚಾರ. ಕಳೆದ ವರ್ಷ ಉತ್ತರ ಕನ್ನಡದ ಒಬ್ಬ ರೈತನಿಗೆ ಸಿಕ್ಕಿದ್ದು 8 ರೂಪಾಯಿ ಬರ ಪರಿಹಾರ. ಖಾನಾಪುರದಲ್ಲಿ ₹ 200, ₹ 800ರ  ಚೆಕ್‌ಗಳು ಬಂದದ್ದಿವೆ. ರೈತರಿಗೆ ಮಾಡುವ ಅವಮಾನವಲ್ಲವೇ ಇದು? ಭೂಹೀನರು, ಕೂಲಿಯನ್ನೇ ಅವಲಂಬಿಸಿದವರು, ಇಡೀ ಸಂಸಾರದ ಹೊರೆ ಹೊತ್ತಿರುವ ಮಹಿಳೆಯರು ಬರ ಪರಿಹಾರದ ಪಾಲಿನಲ್ಲಿ ಇನ್ನೂ ತಮ್ಮ ಸ್ಥಾನವನ್ನು ಗುರುತಿಸಿಕೊಂಡಿಲ್ಲ.

ಬರ ನಿರ್ವಹಣಾ ಮಾರ್ಗದರ್ಶಿ ಸೂತ್ರವೊಂದನ್ನು ಸರ್ಕಾರ ರೂಪಿಸಿದೆ. ಆದರೆ ಅದರಲ್ಲಿ ಇನ್ನೂ ಎಷ್ಟೋ ವಿಷಯಗಳನ್ನು ಗುರುತಿಸಬೇಕಾಗಿದೆ. ಒಂದೊಂದು ಬೆಳೆಗೂ ಎಷ್ಟು ಪ್ರಮಾಣದ ನೀರು ಬೇಕು, ಯಾವ ಹಂತದಲ್ಲಿ ಬೇಕು, ಆ ಹಂತದಲ್ಲಿ ನೀರು ಸಿಕ್ಕಿತೇ ಎನ್ನುವುದನ್ನಾಧರಿಸಿ ಆಯಾ ಬೆಳೆಯ ಫಸಲು ನಿರ್ಧಾರವಾಗುತ್ತದೆ. ಆಗಬೇಕಾದ ಪ್ರಮಾಣದ ಮಳೆಗಿಂತ 50% ಮಳೆ ಕಡಿಮೆ ಆದರೆ ಖಂಡಿತವಾಗಿಯೂ ಆ ಬೆಳೆಯು ನಾಶವಾಗುತ್ತದೆ. ಆ ಪ್ರದೇಶದಲ್ಲಿ ಮಳೆ ಯಾವ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂಬುದನ್ನು ಗುರುತಿಸಿ ಅಕ್ಟೋಬರ್ ತಿಂಗಳಲ್ಲಿಯೇ ಬರದ ಘೋಷಣೆ ಆಗಬೇಕು. ಆದರೆ ನಮ್ಮಲ್ಲಿ ಇನ್ನೂ ಮಳೆ ಬರುತ್ತದೆ, ಈ ಬಾರಿ ಹಿಂಗಾರು ಚೆನ್ನಾಗಿದೆ ಎಂದು ಭವಿಷ್ಯ ಹೇಳುತ್ತಲೇ ನವೆಂಬರನ್ನೂ ದಾಟಿಸಿಬಿಡುತ್ತಾರೆ.

ಆಹಾರ ಭದ್ರತಾ ಕಾನೂನಿನ ಒಂದೊಂದು ಅಂಶವನ್ನೂ ತೀವ್ರ ಚರ್ಚೆಗೊಳಪಡಿಸಿದ ಸುಪ್ರೀಂ ಕೋರ್ಟು ಅಂತಿಮವಾಗಿ ಈ ಆದೇಶಗಳನ್ನು ನೀಡಿದೆ: ಸೆಕ್ಷನ್ 14 ಮತ್ತು 15ರ ಪ್ರಕಾರ ಒಂದು ತಿಂಗಳೊಳಗಾಗಿ ರಾಜ್ಯ ಮಟ್ಟದಲ್ಲಿ ಮತ್ತು ಪ್ರತಿ ಜಿಲ್ಲೆಗೂ ಜಿಲ್ಲಾ ಕುಂದುಕೊರತೆಗಳನ್ನು ಕೇಳುವ ಅಧಿಕಾರಿಯ ನೇಮಕ ಆಗಿ, ರೇಶನ್ ಸಿಗದಿರುವ ಬಗ್ಗೆ ಈ ಅಧಿಕಾರಿ ಜನರಿಂದ ದೂರುಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿತು. ಬರಗಾಲವೆಂದು ಘೋಷಿತವಾಗಿರುವ ಜಿಲ್ಲೆಗಳಲ್ಲಿ ಸಾರ್ವತ್ರಿಕವಾಗಿ ಪ್ರತಿ ವ್ಯಕ್ತಿಗೆ 5 ಕೆ.ಜಿ.ಯಂತೆ ಆಹಾರ ನೀಡಬೇಕು.

ಬರಗಾಲ ಘೋಷಿತವಾಗಿರುವ ರಾಜ್ಯದಲ್ಲಿ, ಪ್ರತಿ ಕುಟುಂಬಕ್ಕೂ ಅದು ಆದ್ಯತಾ ಪಟ್ಟಿಯಲ್ಲಿ ಇರಲಿ, ಬಿಡಲಿ ತಿಂಗಳ ರೇಶನ್ನು ಸಿಗಲೇಬೇಕು. ಈಗಾಗಲೇ ಯಾವುದೇ ರೀತಿಯಲ್ಲಿ ಕೊಡುತ್ತಿದ್ದರೂ ಅದಕ್ಕೆ ಇನ್ನಷ್ಟು ಸೇರಿಸಬೇಕೇ ಹೊರತು ಕಡಿಮೆ ಮಾಡುವಂತಿಲ್ಲ. ರೇಶನ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಯಾವೊಂದು ಕುಟುಂಬಕ್ಕೂ ರೇಶನ್ ನಿರಾಕರಣೆ ಆಗಬಾರದು. ಕಾರ್ಡಿನ ಬದಲಿಗೆ, ಯಾವುದೇ ರೀತಿಯ ಗುರುತಿನ ಚೀಟಿ ಇದ್ದರೂ ಆ ಕುಟುಂಬವು ಆಹಾರ ಪಡೆಯಲು ಅರ್ಹವಾಗುತ್ತದೆ. ಬರಗಾಲ ಘೋಷಿತವಾಗಿರುವ ಪ್ರದೇಶಗಳಿಗೆ ಪ್ರತಿ ಕುಟುಂಬಕ್ಕೂ ಪಡಿತರ ನೀಡುವ ಸಲುವಾಗಿ ರಾಜ್ಯಗಳು ಹೆಚ್ಚು ಧಾನ್ಯ ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು.

ಕೇವಲ ಮಹಾರಾಷ್ಟ್ರ ಸರ್ಕಾರ 2015- 16ರಲ್ಲಿ ಹೀಗೆ ಮನವಿ ಮಾಡಿರುವುದನ್ನು ಕೋರ್ಟು ಗಮನಿಸಿದೆ. ಕರ್ನಾಟಕದಲ್ಲಿ ಅದೇ ವೇಳೆಗೆ ‘ಬೋಗಸ್ ಕಾರ್ಡ್’ ತೆಗೆದೆನೆಂದು ಹೇಳುತ್ತ ನಮ್ಮ ಸರ್ಕಾರವು 4,000 ಟನ್ ಆಹಾರವನ್ನು ಉಳಿತಾಯ ಮಾಡಿದ್ದೇನೆ ಎಂದು ಬೀಗಿತ್ತು. ಸಾರ್ವತ್ರಿಕವಾಗಿ ರೇಶನ್ ಹಂಚುವುದು ದೂರ ಹೋಯಿತು, ಕಾರ್ಡ್ ಉಳ್ಳವರಿಗೂ ಆಧಾರ್‌, ಹೆಬ್ಬೆಟ್ಟು, ಎಸ್ಸೆಮ್ಮೆಸ್ ಎಂಬ ಕಾರಣಕ್ಕೆ ರೇಶನ್ ಕಡಿತ ಮಾಡಿತ್ತು. ಇದ್ದಕ್ಕಿದ್ದಂತೆಯೇ ಒಂದು ರೇಶನ್ ಅಂಗಡಿಯಲ್ಲಿ ನೂರಾರು ಕಾರ್ಡುಗಳು ಇಲ್ಲವಾಗಿ ಹೋಗುವುದು ಕರ್ನಾಟಕದಲ್ಲಿ ತೀರಾ ಸಾಮಾನ್ಯವಾಗಿದೆ.

ಇಷ್ಟರ ಮಧ್ಯೆ ಕಾರ್ಡ್ ಉಳ್ಳವರಿಗೆ ಮತ್ತೊಂದು ಕೂಪನ್ ಪಡೆದುಕೊಳ್ಳಬೇಕೆಂದು ಕೂಡ ಆದೇಶ ಮಾಡಿತ್ತು. ಶಿವಮೊಗ್ಗದ ಗೌರಮ್ಮ ಎಂಬುವರು ಇದರ ವಿರುದ್ಧ ಹೈಕೋರ್ಟ್‌ಗೆ  ಹೋಗಿದ್ದರ ಪರಿಣಾಮವಾಗಿ ಕೂಪನ್ ರದ್ದು ಮಾಡುವ ಆದೇಶ ನೀಡಲಾಯಿತು.

ಬರಪೀಡಿತ ಪ್ರದೇಶಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಮತ್ತು ಹಾಲು, ಬಾಳೆಹಣ್ಣನ್ನು ವಾರದಲ್ಲಿ ಐದು ದಿನಗಳಾದರೂ ಕೊಡಲೇಬೇಕು, ಮಕ್ಕಳ ಅಪೌಷ್ಟಿಕತೆ ಮುಂದೆ ಹಣವಿಲ್ಲ ಎಂಬಂಥ ಯಾವ ಕಾರಣಗಳೂ ನಡೆಯುವುದಿಲ್ಲ ಎಂದು ಕೋರ್ಟು ಹೇಳಿದೆ. ಇದರ ಜೊತೆಗೆ ಬರಪೀಡಿತ ಪ್ರದೇಶದಲ್ಲಿ ಶಾಲೆಗಳಿಗೆ ರಜಾ ಕಾಲದಲ್ಲಿಯೂ ಬಿಸಿಯೂಟ ಕೊಡಬೇಕು ಎಂದು ಕೂಡ ಆದೇಶ ಮಾಡಲಾಗಿತ್ತು.  ಬಿಸಿಯೂಟದಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂಬ ಪ್ರಸ್ತಾವವನ್ನು ಇನ್ನೂ ತನ್ನ ಮೇಜಿನ ಮೇಲೆಯೇ ಇಟ್ಟುಕೊಂಡಿರುವ ಸರ್ಕಾರ, ತಾನೀಗಾಗಲೇ ಮೊಟ್ಟೆ ಕೊಡುತ್ತಿದ್ದೇನೆಂದು ಸುಪ್ರೀಂ ಕೋರ್ಟಿನ ಮುಂದೆ ಹೇಳಿಕೊಂಡಿದ್ದು ಕೂಡ ಆಶ್ಚರ್ಯವೆ!

ಕಡೆಯದಾಗಿ ಕೂಲಿಯನ್ನು ಸರಿಯಾದ ಸಮಯಕ್ಕೆ ಕೊಡದ ಕಾರಣ ಉದ್ಯೋಗ ಖಾತರಿಯಲ್ಲಿ ನಂಬಿಕೆಯನ್ನೇ ಕಳೆದುಕೊಂಡು ಅದರಿಂದ ಜನರು ದೂರ ಸರಿಯುತ್ತಿರುವುದನ್ನು ಮನಗಂಡ ಕೋರ್ಟು, ಕೇಂದ್ರ ಸರ್ಕಾರಕ್ಕೂ ರಾಜ್ಯ ಸರ್ಕಾರಗಳಿಗೂ ಹೆಚ್ಚು ಹಣ ಬಿಡುಗಡೆಗೆ ಮತ್ತು ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಗೆ ಖಚಿತ ಆದೇಶವನ್ನು ಕೊಟ್ಟಿದೆ. ಕಾಯ್ದೆ ಜಾರಿಯಾಗಿ 10 ವರ್ಷಗಳಿಗೂ ಮೇಲಾಗಿದ್ದರೂ ಈವರೆಗೆ 50% ಗ್ರಾಮೀಣ ಜನರೂ ಉದ್ಯೋಗ ಖಾತರಿಯಲ್ಲಿ ಕೆಲಸ ಅರಸಿ ಬರದಿರುವುದು ಈ ಯೋಜನೆಯತ್ತ ಸರ್ಕಾರಗಳ ನಿರಾಸಕ್ತಿಯನ್ನೇ ತೋರಿಸುತ್ತದೆ. ಅದರಲ್ಲೂ ಬರಪೀಡಿತ ಪ್ರದೇಶಗಳಲ್ಲಿ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದರೆ ಸರ್ಕಾರಗಳು ಕಳಕಳಿಯಿಟ್ಟು ಹೆಚ್ಚು ಜನಕ್ಕೆ ಕೆಲಸ ಕೊಡುವ ಮತ್ತು 15 ದಿನದೊಳಗಾಗಿ ಕೂಲಿಪಾವತಿ ಮಾಡುವ ಅತಿ ಅವಶ್ಯಕತೆ ಇದೆ ಎಂದು ಖಡಾಖಂಡಿತವಾಗಿ ಆದೇಶಿಸಿದೆ.

ಆಹಾರ, ಉದ್ಯೋಗಗಳ ಬಗ್ಗೆ ಸರ್ಕಾರವೇ ಕಾನೂನುಗಳನ್ನು ಮಾಡಿದ್ದರೂ ಅವನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರಗಳೇಕೆ ವಿಳಂಬ ನೀತಿ ಅನುಸರಿಸುತ್ತಿವೆ, ಕೇಂದ್ರ ಸರ್ಕಾರ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಕೋರ್ಟು ಆಶ್ಚರ್ಯ ವ್ಯಕ್ತಪಡಿಸಿದೆ. ಯಾವುದೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಪಾಸ್ ಮಾಡಿದ, ರಾಷ್ಟ್ರಪತಿ ಸಹಿ ಮಾಡಿದ ಕಾಯ್ದೆಯನ್ನು ಜಾರಿ ಮಾಡುವುದಕ್ಕೆ ನಿರಾಕರಿಸುತ್ತಿರುವುದು, ಲೋಕಸಭೆಯು ಮೌನವಾಗಿ ಅದನ್ನು ನೋಡುತ್ತಿರುವುದು ಇಂಥ ಪರಿಸ್ಥಿತಿಯನ್ನು ಸಂವಿಧಾನವು ಒಪ್ಪುತ್ತದೆಯೇ ಎಂದು ಕಳವಳ ವ್ಯಕ್ತಪಡಿಸಿದೆ.

ಆದರಿಂದು ಸರ್ಕಾರಗಳು ‘ಅಭಿವೃದ್ಧಿಯತ್ತ’ ದೃಷ್ಟಿ ಇಟ್ಟಿವೆ. ಸ್ಟೀಲ್ ಸೇತುವೆ, ಕಾರಿಡಾರ್ ಯೋಜನೆಗಳು, ರಸ್ತೆ ಅಗಲೀಕರಣ, ನಗರಗಳ ಉನ್ನತೀಕರಣಗಳತ್ತ ಗಮನ ಕೇಂದ್ರೀಕರಿಸಿರುವ ಸರ್ಕಾರಗಳಿಗೆ ಹಳ್ಳಿಗಳಿಂದ ಜನರನ್ನೆಬ್ಬಿಸಬೇಕಾಗಿದೆ. ಜನರನ್ನು ಅತಂತ್ರ ಮಾಡಿದಾಗಲೇ ಹೆಚ್ಚೆಚ್ಚು ಚೀಪ್ ಲೇಬರ್ ಸಿಗುವರೆಂಬ ನಂಬಿಕೆ. ಭೂಮಿ, ವಸತಿ, ಉದ್ಯೋಗ, ಆಹಾರ, ಬರ ಪರಿಹಾರ ಇವನ್ನೆಲ್ಲ ಹಳ್ಳಿಗಳಲ್ಲಿಯೇ ಒದಗಿಸುತ್ತ ಅವರನ್ನು  ಸುರಕ್ಷಿತವಾಗಿ ಇಟ್ಟುಬಿಟ್ಟರೆ ಅವರೆಲ್ಲಿ ನಗರಕ್ಕೆ ವಲಸೆ ಹೊರಟಾರು?

ನಿರಂಕುಶ ಪ್ರಭುತ್ವವಿರುವ ಉತ್ತರ ಕೊರಿಯಾದಲ್ಲಿ ರಾಜನನ್ನು ಹೊಗಳುವ ‘ನಥಿಂಗ್ ಟು ಎನ್ವೀ…’ ಎಂಬ ಒಂದೇ ಹಾಡನ್ನು ಜನರೆಲ್ಲರೂ ಹಾಡಬೇಕಂತೆ. ಊಟವಿಲ್ಲದೆ, ಕೆಲಸವಿಲ್ಲದೆ ಮಕ್ಕಳು, ಜನರೆಲ್ಲ ಸಾಯುತ್ತಿರುವಾಗಲೂ ಸರ್ಕಾರ ಅಣುಬಾಂಬ್, ಅಣು ವಿದ್ಯುತ್ ಎಂದು ತನ್ನೆಲ್ಲ ಹಣವನ್ನೂ ಹಾಕುತ್ತಿರುವಾಗ ಕೂಡ ‘ನಥಿಂಗ್ ಟು ಎನ್ವೀ…’  ಎಂದೇ ಹಾಡಬೇಕಂತೆ. ಉತ್ತರ ಕೊರಿಯಾ ನಮಗೆ ಪಾಠವಾಗದೇ?