ಗುರ್‌ಮೆಹರ್‌ ಮೌಲ್ಯದಲ್ಲಿದೆ ಪಾಕಿಸ್ತಾನಕ್ಕೆ ಪಾಠ-ಪೃಥ್ವಿ ದತ್ತ ಚಂದ್ರ ಶೋಭಿ

ತನ್ನ ನೆರೆಹೊರೆಯಲ್ಲಿದ್ದ, ಆ ಅನ್ಯಧರ್ಮವನ್ನು ಅನುಸರಿಸುವ ಮಹಿಳೆಯೊಬ್ಬಳನ್ನು ಚಾಕುವಿನಿಂದ ಇರಿಯಲು ಯತ್ನಿಸುತ್ತಾಳೆ. ವರ್ಷಗಳು, ದಶಕಗಳು ಕಳೆದಂತೆ ತನ್ನ ತಾಯಿಯ ಪ್ರಭಾವ, ಬೋಧನೆಗಳಿಂದ ದ್ವೇಷವನ್ನು ಮೀರುವ ಪ್ರಯತ್ನವನ್ನು ಮಾಡುತ್ತಾಳೆ. ಅದರಲ್ಲಿ ಯಶಸ್ಸನ್ನು ಕಾಣುತ್ತಾಳೆ. ತನ್ನ ನೆರೆಯ ದೇಶ ಮತ್ತು ತನ್ನ ದೇಶ ಹಿಂಸಾತ್ಮಕ ಮಾರ್ಗದಿಂದ, ಯುದ್ಧಗಳಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಾದಿಸುತ್ತಾಳೆ. ಇಪ್ಪತ್ತರ ಹರೆಯದ ವಿದ್ಯಾರ್ಥಿನಿ ಶಾಂತಿಯನ್ನು ಅರಸುವ, ಅದಕ್ಕಾಗಿ ಹೊಡೆದಾಡುವ ಕಾರ್ಯಕರ್ತೆಯಾಗುತ್ತಾಳೆ.
ಯುದ್ಧ ವಿರೋಧಿ ಶಾಂತಿಪ್ರಿಯ  ಚಳವಳಿಯಲ್ಲಿ ಸೈದ್ಧಾಂತಿಕ ನಂಬಿಕೆಯಿರುವ ಬರಹಗಾರನೊಬ್ಬ ಬರೆದ ಕಥೆಯಂತೆ ತೋರುವ ಈ ಕಥೆ ಕಾಲ್ಪನಿಕವಾದುದಲ್ಲ. ಕಳೆದ ವಾರದಿಂದ ರಾಷ್ಟ್ರೀಯ ಮಾಧ್ಯಮಗಳ ಬಿರುಗಾಳಿಯೊಳಗೆ ಸಿಲುಕಿರುವ ಗುರ್‌ಮೆಹರ್ ಕೌರ್ ಎಂಬ 20 ವರ್ಷದ, ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿರುವ ಯುವತಿಯ ನೈಜಕಥೆ. ಆಕೆಯ ತಂದೆ ಕ್ಯಾಪ್ಟನ್ ಮಂದೀಪ್ ಸಿಂಗ್, ಕಾರ್ಗಿಲ್ ಯುದ್ಧಾನಂತರ ನಡೆಯುತ್ತಿದ್ದ ಸೈನಿಕ ಕಾರ್ಯಾಚರಣೆಗಳಲ್ಲಿ, ಭಯೋತ್ಪಾದಕರೊಡನೆ ಸೆಣಸುತ್ತ, 1999ರ ಆಗಸ್ಟ್ 6ರಂದು ಸಾವನ್ನಪ್ಪಿದರು.
ಕಳೆದ ವಾರ ಇದ್ದಕ್ಕಿದ್ದಂತೆ ಗುರ್‌ಮೆಹರ್ ವಿವಾದಾತ್ಮಕ ವ್ಯಕ್ತಿಯಾದರು. ಇದಕ್ಕೆ ಕಾರಣ ಸಾಮಾಜಿಕ ತಾಣಗಳಲ್ಲಿ ಆಕೆ ವಿದ್ಯಾರ್ಥಿ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು. ನಡೆದಿದ್ದು ಇಷ್ಟು. ಈಗಾಗಲೇ ವ್ಯಾಪಕವಾಗಿ ವರದಿಯಾಗಿರುವಂತೆ ಫೆಬ್ರುವರಿ 21- 22ರಂದು ದೆಹಲಿ ವಿಶ್ವವಿದ್ಯಾಲಯದ ರಾಮಜಸ್ ಕಾಲೇಜಿನಲ್ಲಿ ಗಲಭೆ, ಹಲ್ಲೆಗಳು ನಡೆದವು. ರಾಮಜಸ್ ಕಾಲೇಜು ‘ಪ್ರತಿಭಟನೆಯ ಸಂಸ್ಕೃತಿಗಳು’ (ಕಲ್ಚರ್ಸ್ ಆಫ್‌ ಪ್ರೊಟೆಸ್ಟ್) ಎಂಬ ಶೀರ್ಷಿಕೆಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾದ ಶೆಹ್ಲಾ ರಷೀದ್ ಮತ್ತು ಉಮರ್ ಖಾಲಿದ್‌ರನ್ನು ಆಹ್ವಾನಿಸಲಾಗಿತ್ತು. ರಷೀದ್ ಕಾಶ್ಮೀರ ಮೂಲದವರು ಹಾಗೂ 2015- 16ನೇ ಸಾಲಿನ ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿದ್ದವರು.

ಉಮರ್ ಖಾಲಿದ್ ವಿರುದ್ಧ ಕಳೆದ ವರ್ಷ ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಆರೋಪವಿತ್ತು. ಇವರಿಬ್ಬರಿಗೂ ನೀಡಿದ ಆಹ್ವಾನವನ್ನು ಹಿಂದೆ ಪಡೆಯುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸದಸ್ಯರು ಒತ್ತಾಯಿಸಿದರು ಮತ್ತು ವಿಚಾರ ಸಂಕಿರಣ ನಡೆಯದಂತೆ ತಡೆದರು. ಅಂದು ಮತ್ತು ಮರುದಿನ ನಡೆದ ಗಲಭೆ, ಹಲ್ಲೆಗಳಲ್ಲಿ ಹತ್ತಾರು ಮಂದಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪತ್ರಕರ್ತರು ಗಾಯಗೊಂಡರು. ಈ ಘಟನೆಗಳ ವಿರುದ್ಧ ಪ್ರತಿಭಟಿಸುತ್ತ ಗುರ್‌ಮೆಹರ್ ‘ನನಗೆ ಎಬಿವಿಪಿಯ ಭಯವಿಲ್ಲ’  ಎನ್ನುವ ಭಿತ್ತಿಪತ್ರ ಹಿಡಿದಿರುವ ತನ್ನ ಭಾವಚಿತ್ರವನ್ನು ಫೇಸ್‌ಬುಕ್‌ನಲ್ಲಿ ತನ್ನ ವ್ಯಕ್ತಿಚಿತ್ರವಾಗಿ (ಪ್ರೊಫೈಲ್ ಚಿತ್ರ) ಹಾಕಿದರು. ಅವರ ಭಾವಚಿತ್ರವು ವ್ಯಾಪಕ ಪ್ರಚಾರವನ್ನು ಪಡೆಯಿತು. ತದನಂತರದಲ್ಲಿಯೆ ಸುಮಾರು ಒಂದು ವರ್ಷ ಮೊದಲು ಅವರು ಭಾಗವಹಿಸಿದ್ದ ‘ರಾಮನ ದನಿ’ (ವಾಯ್ಸ್ ಆಫ್‌ ರಾಮ) ಎಂಬ ವಿಡಿಯೊ ಚಿತ್ರವು ಎಲ್ಲರ ಗಮನವನ್ನು ಸೆಳೆಯಿತು. ಅದರಲ್ಲಿ ಗುರ್‌ಮೆಹರ್ ಭಾರತ ಮತ್ತು ಪಾಕಿಸ್ತಾನದ ಸಂಬಂಧದ ಬಗ್ಗೆ ಹಾಗೂ ಯುದ್ಧಗಳ ಬಗ್ಗೆ ತಮ್ಮ ನಿಲುವುಗಳನ್ನು ಹಂಚಿಕೊಂಡಿದ್ದರು. ಆ ವಿಡಿಯೊ ಚಿತ್ರದಲ್ಲಿಯೂ ಭಿತ್ತಿಪತ್ರಗಳನ್ನು ಅವರು ಹಿಡಿದಿದ್ದಾರೆ. ಅಂತಹ ಒಂದು ಭಿತ್ತಿಪತ್ರದಲ್ಲಿ ‘ನನ್ನ ತಂದೆಯನ್ನು ಪಾಕಿಸ್ತಾನ ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿತು’ ಎನ್ನುವ ಘೋಷಣೆಯಿದೆ. ಈ ಘೋಷಣೆಯ ಹಿಂದಿನ ಭಿತ್ತಿಪತ್ರದಲ್ಲಿ ತನ್ನ ತಾಯಿಯು ಈ ಸತ್ಯವನ್ನು ಅರಿಯುವಂತೆ ಮಾಡಿದರು ಎನ್ನುವ ಹೇಳಿಕೆಯೂ ಇದೆ.

ತನ್ನ ರಾಜಕೀಯ ನಿಲುವನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಸಿರುವುದಕ್ಕೆ ಗುರ್‌ಮೆಹರ್ ಎದುರಿಸಿರುವುದು ಅಪಹಾಸ್ಯ, ಮರುಕ ಮತ್ತು ಹಿಂಸೆ, ಅತ್ಯಾಚಾರದ ಬೆದರಿಕೆಗಳನ್ನು. ಕೇಂದ್ರ ಸಚಿವ ಕಿರಣ್ ರಜಿಜು ಸೇರಿದಂತೆ ಕೆಲವರು, ಗುರ್‌ಮೆಹರ್‌ರನ್ನು ಯಾರೋ ದಾರಿ ತಪ್ಪಿಸಿದ್ದಾರೆ, ಇಲ್ಲದಿದ್ದರೆ ತನ್ನ ತಂದೆಯ ಸಾವಿಗೆ ಪಾಕಿಸ್ತಾನವನ್ನು ಅವರು ದೋಷಿಯಾಗಿಸದೆ ಇರುತ್ತಿರಲಿಲ್ಲ ಎಂದಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ಹಾಲಿ ಟ್ವಿಟರ್ ತಾರೆ ವೀರೇಂದ್ರ ಸೆಹ್ವಾಗ್ ‘ನಾನು ಎರಡು ತ್ರಿಶತಕಗಳನ್ನು ಹೊಡೆಯಲಿಲ್ಲ, ನನ್ನ ಬ್ಯಾಟ್ ಹೊಡೆಯಿತು’ ಎನ್ನುವ ಭಿತ್ತಿಪತ್ರವನ್ನು ಹಿಡಿದು, ಅದರ ಭಾವಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಸೆಹ್ವಾಗ್ ಅಲ್ಲದೆ ಇತರ ಹಲವಾರು ಕ್ರೀಡಾಪಟುಗಳು ಸಹ ಗುರ್‌ಮೆಹರ್ ದೇಶದ ವಿರುದ್ಧ ಮಾತನಾಡಿದ್ದಾರೆ ಎನ್ನುವ ನಿಲುವನ್ನು ತಳೆದರು.

ಈ ಕರುಣೆ, ಅಪಹಾಸ್ಯಗಳ ಪ್ರತಿಕ್ರಿಯೆಗಳೆಲ್ಲವೂ ಗುರ್‌ಮೆಹರ್‌ರಿಗೆ ಸ್ವಂತವಾಗಿ ಯೋಚನೆ ಮಾಡುವ ಶಕ್ತಿಯಾಗಲಿ ಅಥವಾ ಹಕ್ಕಾಗಲಿ ಇಲ್ಲ ಎನ್ನುವ ನೆಲೆಯಿಂದಲೇ ಹೊರಡುವುವು. ಇವುಗಳಿಗಿಂತ ಗಾಬರಿ ಹುಟ್ಟಿಸುವುದು ಗುರ್‌ಮೆಹರ್ ಮೇಲೆ ಹಲ್ಲೆ, ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿರುವ ಇತರ ಸಾಮಾಜಿಕ ತಾಣಗಳಲ್ಲಿನ ಹೇಳಿಕೆಗಳು. 20 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಬುದ್ಧಿ ಕಲಿಸಲು ಇರುವ ದಾರಿಗಳು ಇವು ಮಾತ್ರ ಎಂದು ನಂಬಿರುವ ವ್ಯಕ್ತಿಗಳು ನಮ್ಮ ದೇಶದಲ್ಲಿದ್ದಾರೆ ಹಾಗೂ ಅವರು ನಮ್ಮ ಸಂಸ್ಕೃತಿ-ನಾಗರಿಕತೆಗಳ ರಕ್ಷಕರಾಗಲು ಪಣತೊಡುತ್ತಿದ್ದಾರೆ ಎನ್ನುವುದು ಆತಂಕದ ಮಾತಲ್ಲವೇ?

ಇವೆಲ್ಲವುದರ ನಡುವೆ ಲೋಕಸಭಾ ಸದಸ್ಯ ಪ್ರತಾಪ್‌ ಸಿಂಹ ಅವರು ಗುರ್‌ಮೆಹರ್ ಅವರನ್ನು ದಾವೂದ್ ಇಬ್ರಾಹಿಮ್‌ಗೆ ಹೋಲಿಸಿದರು. ನನಗೆ ಅರ್ಥವಾಗದಿರುವುದು ಇದು: ತಮ್ಮೊಡನೆ ಅಭಿಪ್ರಾಯಭೇದ ಹೊಂದಿರುವ, ಶಾಂತಿಯುತ ಚಳವಳಿಗಳಲ್ಲಿ ಭಾಗವಹಿಸುವ ಯುವ ವಿದ್ಯಾರ್ಥಿನಿಯೊಬ್ಬಳು ದಾವೂದ್‌ನಂತಹ ಕೊಲೆಪಾತಕ, ದರೋಡೆಕೋರನ ಜೊತೆಗೆ ಹೋಲಿಕೆಗೆ ಅರ್ಹಳಾದುದು ಎಂದು? ರಾಜಕೀಯ ವಿರೋಧಿಗಳೆಲ್ಲರೂ ದೇಶದ್ರೋಹಿಗಳಾದ ದಿನಾಂಕವಾದರೂ ಯಾವುದು? ಲೋಕಸಭೆಯಲ್ಲಿ ಪ್ರತಾಪ್ ಸಿಂಹ ಅವರು ಮೈಸೂರಿನ ನಿವಾಸಿಯಾದ ನನ್ನನ್ನು ಪ್ರತಿನಿಧಿಸುತ್ತಾರೆ.

ನಾನು ಅವರಿಗಿಂತ ಭಿನ್ನವಾಗಿ ದೇಶದ ಆಗುಹೋಗುಗಳ ಬಗ್ಗೆ, ಅದರಲ್ಲೂ ಪಾಕಿಸ್ತಾನದ ಜೊತೆಗಿನ ಸಂಬಂಧದ ಬಗ್ಗೆ ಯೋಚಿಸುತ್ತೇನೆ ಎಂದರೆ ನಾನು

ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತೇನೆ ಎಂದರ್ಥವೇ? ನನಗೆ ಪಾಕಿಸ್ತಾನ ಮೂಲದ ಸ್ನೇಹಿತರಿದ್ದರೆ ನಾನು ದೇಶದ್ರೋಹಿಯೇ? ಈ ಹಿಂದೆ ಮಾಜಿ ಸಂಸದೆ ರಮ್ಯಾ ಅವರು, ಪಾಕಿಸ್ತಾನ ನರಕದಂತೆ ತಮಗೆ ಕಾಣಲಿಲ್ಲ, ಅಲ್ಲಿನ ಜನರು ಇಲ್ಲಿನವರಿಗಿಂತ ಭಿನ್ನವಾಗಿ ಕಾಣಲಿಲ್ಲ ಎಂದಾಗ ಅವರ ಮಾತುಗಳಿಗೆ ದೊರಕಿದ ಪ್ರತಿಕ್ರಿಯೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಗುರ್‌ಮೆಹರ್ ನಿಲುವಿನಲ್ಲಿ ತಾರ್ಕಿಕ ದೋಷವಿದೆ ಎಂದು ಗಂಭೀರವಾಗಿ ವಾದಿಸುವವರೂ ಇದ್ದಾರೆ. ಅವರ ಪ್ರಕಾರ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಶಾಂತಿಯನ್ನು ಬಯಸುವವರ ಸಂಖ್ಯೆ ಎಷ್ಟೇ ಇದ್ದರೂ, ಅಂತಹವರ ಒಲವುಗಳು ಏನೇ ಇದ್ದರೂ, ಪಾಕಿಸ್ತಾನದ ಪ್ರಭುತ್ವವು (ಅದರಲ್ಲೂ ಸೈನ್ಯ ಮತ್ತು ಐಎಸ್‌ಐ) ಭಾರತವನ್ನು ಯಾವಾಗಲೂ ವಿರೋಧಿಸುತ್ತವೆ, ಭಾರತವನ್ನು ಒಡೆಯಲು ಪ್ರಯತ್ನಿಸುತ್ತಲೇ ಇರುತ್ತವೆ.

ಈ ಉದ್ದೇಶ ಸಾಧನೆಗಾಗಿಯೇ ಪಾಕಿಸ್ತಾನದ ಪ್ರಭುತ್ವವು ಸಾಂಪ್ರದಾಯಿಕ ಯುದ್ಧ ಮತ್ತು ಭಯೋತ್ಪಾದಕ ಚಟುವಟಿಕೆಗಳು ಎರಡನ್ನೂ ಅರ್ಧ ಶತಮಾನಗಳಿಂದ ನಡೆಸುತ್ತಾ ಬಂದಿದೆ. ಇದು ನಿಜ. ವಾಸ್ತವವನ್ನು ಗಂಭೀರವಾಗಿ ಅವಲೋಕಿಸುವ ಯಾರೂ ಈ ಮಾತನ್ನು ತಳ್ಳಿಹಾಕಲಾಗುವುದಿಲ್ಲ.

ಆದರೆ ನಮ್ಮ ಮುಂದಿರುವ ಪ್ರಶ್ನೆ ಇದು: ಹಾಗಾದರೆ ಪಾಕಿಸ್ತಾನದ ಪ್ರಭುತ್ವದ ಈ ಉದ್ದೇಶಕ್ಕೆ ಯಶಸ್ಸು ಸಿಗದಂತೆ ಮಾಡಲು, ಪಾಕಿಸ್ತಾನಕ್ಕೆ ‘ಬುದ್ಧಿ ಕಲಿಸಲು’ ನಾವೇನು ಮಾಡಬೇಕು?
ಪಾಕಿಸ್ತಾನದ ವಿರುದ್ಧ ಯುದ್ಧವನ್ನೇ ಮಾಡೋಣ ಎನ್ನುವುದಾದರೆ, ಈಗಾಗಲೆ ಅಂತಹ ಯುದ್ಧಗಳನ್ನು ಮಾಡಿದ್ದೇವೆ. ಈ ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ಅಪಾರ ಹಾನಿಯಾಗಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಹೋಗಿದೆ. ಎಲ್ಲಕ್ಕಿಂತ ಮಿಗಿಲಾಗಿ, 1971ರಲ್ಲಿ ಪಾಕಿಸ್ತಾನವು ತನ್ನ ಅರ್ಧ ರಾಷ್ಟ್ರವನ್ನೇ ಕಳೆದುಕೊಂಡಿತು. ಯುದ್ಧದ ಮೂಲಕ ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಹೇಗೆ? ಇಡೀ ದೇಶವನ್ನೇ ನಾಶ ಮಾಡಬೇಕೇ? ಮಿಗಿಲಾಗಿ, ತನ್ನ ಅರ್ಧ ಪ್ರದೇಶವನ್ನೇ ಕಳೆದುಕೊಂಡ ನಂತರವೂ ಕಳೆದ 45 ವರ್ಷಗಳಿಂದ ಪಾಕಿಸ್ತಾನದ ಪ್ರಭುತ್ವವು ಭಾರತದ ವಿರುದ್ಧ ಹಗೆತನವನ್ನು ಸಾಧಿಸುತ್ತಲೇ ಬರುತ್ತಿದೆ.
ಕಾರ್ಗಿಲ್‌ನಂತಹ ಸಾಂಪ್ರದಾಯಿಕ ಯುದ್ಧಗಳನ್ನು ನಡೆಸಿದೆ. ಪಂಜಾಬ್, ಅಸ್ಸಾಂ ಮತ್ತು ಕಾಶ್ಮೀರಗಳ ಪ್ರತ್ಯೇಕತಾವಾದಿಗಳನ್ನು ಪ್ರಚೋದಿಸಿದೆ. ಅಣ್ವಸ್ತ್ರಗಳು, ಕ್ಷಿಪಣಿಗಳು ಮತ್ತಿತರ ಆಯುಧಗಳ ಸ್ಪರ್ಧೆಯನ್ನು ನಡೆಸುವಂತಹ ಅನಿವಾರ್ಯವನ್ನು ಸೃಷ್ಟಿ ಮಾಡಿದೆ. ಬಡತನ, ಹಸಿವು ನಿವಾರಣೆಯತ್ತ ಗಮನ ಕೊಡಬೇಕಾಗಿದ್ದ ಈ ಎರಡೂ ದೇಶಗಳು ತಮ್ಮ ಸಂಪನ್ಮೂಲಗಳನ್ನು ಗಣನೀಯ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಳ್ಳಲು ಬಳಸಬೇಕಾದ ಪರಿಸ್ಥಿತಿಯನ್ನು ಹುಟ್ಟುಹಾಕಿದೆ.
ಅಲ್ಲದೆ ಈ ಎಲ್ಲ ಪ್ರಯತ್ನಗಳಿಗೆ ಪೂರಕವಾಗಿ ಪಾಕಿಸ್ತಾನದೊಳಗೆ ಇಸ್ಲಾಮಿನೊಳಗಿನ ವಹಾಬಿ ಮೂಲಭೂತವಾದಿಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಿ, ತನ್ನ ನಾಗರಿಕ ಸಮಾಜದಲ್ಲಿಯೂ ಸಾವಿರಾರು ವರ್ಷಗಳಿಂದ ಇದ್ದ ಸಹಿಷ್ಣು ಸಂಪ್ರದಾಯಗಳು, ಸೂಫಿ ಪರಂಪರೆಗಳ ವಿನಾಶಕ್ಕೆ ಕಾರಣವಾಗುತ್ತಿದೆ. ಯುದ್ಧವನ್ನೇ ಸಾಧನವನ್ನಾಗಿ ಮಾಡಿಕೊಂಡು, ದ್ವೇಷವನ್ನು ಬಿತ್ತುವ ಪ್ರಯತ್ನವನ್ನು ಪಾಕಿಸ್ತಾನದ ಪ್ರಭುತ್ವವು ಮಾಡುತ್ತಿದೆ ಎನ್ನುವುದಾದರೆ, ಇದುವರೆಗೆ ಅದಕ್ಕೆ ಯಶಸ್ಸು ಸಿಕ್ಕಿಲ್ಲ. ಗುರ್‌ಮೆಹರ್ ಯುದ್ಧದ ವಿರುದ್ಧ ಮಾತನಾಡುವಾಗ, ನಮಗೆ ಕಾಣಬೇಕಿರುವುದು ಪಾಕಿಸ್ತಾನದ ವೈಫಲ್ಯಗಳು ಕೂಡ. ತನ್ನ ಇಪ್ಪತ್ತು ವರ್ಷಗಳ ಕಿರುಜೀವನದಲ್ಲಿ ಗುರ್‌ಮೆಹರ್ ತನ್ನನ್ನು ನಾಶ ಮಾಡುತ್ತಿದ್ದ ದ್ವೇಷವನ್ನು ತನ್ನ ತಾಯಿಯ ಮಾರ್ಗದರ್ಶನದಲ್ಲಿ ಮೀರಿದ್ದಾಳೆ. ಇದು ಭಾರತೀಯ ನಾಗರಿಕತೆಯ ಅತ್ಯುತ್ತಮ ಮೌಲ್ಯಗಳನ್ನು, ಸಂಪ್ರದಾಯಗಳನ್ನು ಪ್ರತಿನಿಧಿಸುವ ಬದುಕಿನ ಪಯಣ. ಇದರಲ್ಲಿ ಕಲಿಯಲಿಚ್ಛಿಸಿದರೆ ಪಾಕಿಸ್ತಾನಕ್ಕೂ ಪಾಠಗಳಿವೆ