ಗುರುತು ಇಲ್ಲದವರು ,ವಿಳಾಸ ಇಲ್ಲದವರ ಮೇಲೆ ಸರ್ಕಾರದ ದೃಷ್ಟಿ ಬೀಳುವುದೇ?-ಪಿ.ಓಂಕಾರ್

ಮಂಡ್ಯದ ರಘು ಜಾತಿ ಪ್ರಮಾಣೀಕರಿಸುವ ವಿಷಯ ರಾಜ್ಯಸರಕಾರಕ್ಕೇ ಸವಾಲಾಗಿ ಪರಿಣಮಿಸಿದೆ. ಸಂಕಟಮಯ ಹಿನ್ನೆಲೆ ಹೊಂದಿರುವ ಆತನಿಗೆ ಯಾವ ಜಾತಿಯ ‘ಗುರುತು’ಗಳಿಲ್ಲ. ಪರಿಶಿಷ್ಟ ಜಾತಿಯ ಸಾಂಸ್ಕೃತಿಕ ಹಿನ್ನೆಲೆಯನ್ನಾಧರಿಸಿ ಪ್ರಮಾಣ ಪತ್ರ ನೀಡಿದರೆ ಭವಿಷ್ಯದಲ್ಲಿ ಕಾನೂನು ಸಂಘರ್ಷ ಎದುರಿಸಬೇಕಾಗಬಹುದೆನ್ನುವುದು ಅಧಿಕಾರಿಗಳ ಆತಂಕ. ಮಾನಸಿಕ ಅಸ್ವಸ್ಥ ಅಮ್ಮನನ್ನು ಕಾಮಾಂಧರು ಬಳಸಿ,ಬಿಸಾಕಿದ್ದರ ಫಲವಾದ ರಘ ಈಗ ವಿಧಾನಸೌಧಕ್ಕೆ ಹೊತ್ತೊಯ್ದಿರುವ ಸಮಸ್ಯೆ ಆತನೊಬ್ಬನದ್ದೇ ಅಲ್ಲ. ಯಾವುದೇ ಗುರುತು,‘ಆಧಾರ’ಗಳನ್ನು ಪಡೆಯಲಾಗದ ಸಾವಿರಾರು ಮಂದಿ ಈ ವಿಷಯದಲ್ಲಿ ನಿತ್ಯ ಸಂಘರ್ಷ ನಡೆಸುತ್ತಲೇ ಇದ್ದಾರೆ. ಅವರಿಗೊಂದು ಸಾಮಾಜಿಕ ಅಸ್ಮಿತೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿದ್ದರೂ ಪರಿಣಾಮ ಬೀರಿಲ್ಲ. ಆರು ವರ್ಷದ ಹಿಂದೆ ಡಾ.ಸಿ.ಎಸ್. ದ್ವಾರಕಾನಾಥ್ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ‘ವೇಶ್ಯೆಯರು,ದೇವದಾಸಿಯರು ಹಾಗೂ ಏಡ್ಸ್ ಪೀಡಿತರ ಮಕ್ಕಳನ್ನು ‘ಸಂಕುಲ’ ಎಂದು ಗುರುತಿಸಿ,ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ನೀಡಿದ್ದ ಶಿಫಾರಸು ಸರಕಾರದ ಮಟ್ಟದಲ್ಲಿ ಧೂಳು ತಿನ್ನುತ್ತಿದೆ. ಈ ಮಧ್ಯೆ,ದೇಶದಲ್ಲಿಯೇ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾನಿಲಯವು ‘ವಿಳಾಸ’ವಿಲ್ಲದ,‘ಭಾರತೀಯ’ರೆಂದು ಗುರುತಿಸಿಕೊಂಡ ಲೈಂಗಿಕ ಕಾರ‌್ಯಕರ್ತೆಯರ ಅನಾಥ ಮಕ್ಕಳ ಶೈಕ್ಷಣಿಕ  ಅನುಕೂಲಕ್ಕಾಗಿ ಶಾಶ್ವತವಾದ ‘ರಿಕ್ತ ಕೋಟಾ’ (ಸೀಟು ಮೀಸಲು) ನೀಡುವ ನಿರ್ಧಾರ ಕೈಗೊಂಡಿತು. ಕಳೆದ ನಾಲ್ಕು ವರ್ಷದಲ್ಲಿ 19 ಮಕ್ಕಳು ಇದರ ಲಾಭ ಪಡೆದಿದ್ದಾರೆ. ಮಂಡ್ಯದ ರಘು ಪ್ರಕರಣ ಮತ್ತೊಮ್ಮೆ ಆಯೋಗದ ಶಿಫಾರಸು ಮತ್ತು ವಿವಿ ನಿರ್ಧಾರವನ್ನು ನೆನಪಿಗೆ ಎಳೆದುತಂದಿದೆ.

*ಏನಿದು ‘ಸಂಕುಲ’ ಶಿಫಾರಸು?
ಬಿಜಾಪುರದ ಕಲ್ಪತರು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಏಡ್ಸ್ ಜಾಗೃತಿ ಮಹಿಳಾ ಸಂಘ, ಬೆಂಗಳೂರಿನ ನೆಲೆ, ಸಮನ್ವಯ ಜನ ವಿಕಾಸ ವೇದಿಕೆ ಮತ್ತು ಮೈಸೂರಿನ
ಒಡನಾಡಿ ಸೇವಾ ಸಂಸ್ಥೆಗಳು ನೀಡಿದ ಮನವಿ, ಖುದ್ದು ಭೇಟಿ, ಸತ್ಯಶೋಧಕ ವರದಿಗಳನ್ನಾಧರಿಸಿ 2010ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿದ ಡಾ.ದ್ವಾರಕಾನಾಥ್ ನೇತೃತ್ವದ ಆಯೋಗ,‘ವೇಶ್ಯೆಯರು, ದೇವದಾಸಿಯರು ಹಾಗೂ ಎಚ್‌ಐವಿ ಪೀಡಿತರ ಮಕ್ಕಳನ್ನು ಸಂಕುಲ ಎಂದು ಹೆಸರಿಸಬೇಕು ಮತ್ತು ಹೀಗೆ ಹೆಸರಿಸಲಾದ ಮಕ್ಕಳನ್ನು ಹಿಂದುಳಿದ ವರ್ಗದ ಪಟ್ಟಿಯ ಪ್ರವರ್ಗ-2(ಎ) ಅಡಿ ಸೇರಿಸಬೇಕು’ಎಂದು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿತ್ತು.
‘ವೇಶ್ಯಾವೃತ್ತಿ ನಿರತ ಮಹಿಳೆಯರಿಂದ ಲಾಭಗಳಿಸುವ ಸಮಾಜ ಅವರನ್ನು ಮನುಷ್ಯರೆಂದು ಪರಿಗಣಿಸಲು ನಿರಾಕರಿಸುತ್ತದೆ. ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದೆ ಸಂವಿಧಾನಾತ್ಮಕ ಹಕ್ಕುಗಳಿಂದ ವಂಚಿಸಲಾಗುತ್ತದೆ. ವೇಶ್ಯಾವೃತ್ತಿ ನಿರತರು ಹಾಗೂ ಎಚ್‌ಐವಿ ಪೀಡಿತರಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಬುಡಕಟ್ಟು ,ಅಲ್ಪಸಂಖ್ಯಾತ ವರ್ಗ, ಆದಿವಾಸಿಗಳು ಹಾಗೂ ಅಲೆಮಾರಿಗಳು ಶೇ.90 ಇದ್ದಾರೆ ಎನ್ನುತ್ತವೆ ಹಲವು ಸಮೀಕ್ಷೆಗಳು.ಈ ವಿಳಾಸವಿಲ್ಲದ ಬೀದಿಯನ್ನೆ ನೆಲೆ ಮಾಡಿಕೊಂಡ ನತದೃಷ್ಟ ಮಹಿಳೆಯರ ಮಕ್ಕಳಿಗೆ ಒಂದು ಐಡೆಂಟಿಟಿ ನೀಡಬೇಕು. ಸಾಮಾಜಿಕ,ಶೈಕ್ಷಣಿಕವಾಗಿ ಹಿಂದುಳಿದ ಇವರ ಮಕ್ಕಳಿಗೆ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ದೊರಕಿಸಬೇಕು’ಎಂದು ಆಯೋಗ ಸಲಹೆ ಮಾಡಿತ್ತು.
ಹಲವು ಸ್ವಯಂ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿದ್ದ ಆಯೋಗ, ಅಲ್ಲಿದ್ದ ಮಕ್ಕಳಿಗೆ ತಂದೆಯ ಹೆಸರು,ಜಾತಿಯ ಗುರುತಿಲ್ಲದ್ದನ್ನು ಪ್ರಮುಖವಾಗಿ ಗುರುತಿಸಿತ್ತು ಮತ್ತು ಅನನ್ಯತೆಯೊಂದನ್ನು ನೀಡುವುದು ಕಷ್ಟಸಾಧ್ಯ ಎನ್ನುವುದನ್ನು ಅರಿತಿತ್ತು.‘ಯಾವುದೇ ಜಾತಿ ಮತಗಳಿಲ್ಲದ, ತಂದೆಯ ಗುರುತಿಲ್ಲದ ಈ ಮಕ್ಕಳನ್ನು ಗುರುತಿಸಲು ಹೆಸರು ಅವಶ್ಯ. ಅರ್ಥವ್ಯಾಪ್ತಿಯಲ್ಲಿ ಸೂಕ್ತ ಎನ್ನಿಸುವ ಸಂಕುಲ ಹೆಸರಿನಿಂದ ಈ ಮಕ್ಕಳನ್ನು ಕರೆಯಬಹುದು’ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು.

* ಸಂಘಟನೆಗಳ ವಾದವೇನು?
ಇದಕ್ಕೆ ಮುನ್ನ ಆಯೋಗದ ಮುಂದೆ ದೀರ್ಘ ಹೇಳಿಕೆ ಮಂಡಿಸಿದ್ದ ಸಂಘಟನೆಗಳು,‘ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಲ್ಲಿ ಹೆಚ್ಚಿನವರು ದಲಿತರು,ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗದವರೇ ಹೆಚ್ಚು. ಬಡತನ, ಅನಕ್ಷರತೆ,ನಿರುದ್ಯೋಗ ಹಾಗೂ ಧಾರ್ಮಿಕ ಕಂದಾಚಾರಗಳ ಕಾರಣಕ್ಕೆ ವೇಶ್ಯೆಯರಾದ ಇವರು ಮನೆ ಮತ್ತು ಸಮಾಜದಿಂದ ಬಹಿಷ್ಕೃತರಾಗುತ್ತಾರೆ. ಇಂಥವರ ಮಕ್ಕಳಿಗೆ ಶಿಕ್ಷಣ,ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿಯನ್ನು,ಪಡಿತರ ಕಾರ್ಡ್, ಮನೆ,ಆರೋಗ್ಯ ವಿಮೆ, ಕಾನೂನು ರಕ್ಷಣೆ ಮುಂತಾದ ಸರ್ಕಾರಿ ಸೌಲಭ್ಯವನ್ನು ಕಲ್ಪಿಸಬೇಕು. ಇವರ ಮಕ್ಕಳ ಪುನರ್ವಸತಿ, ಶಿಕ್ಷಣ, ಉದ್ಯೋಗದ ಬಗ್ಗೆ ಸರ್ಕಾರ ಗಮನ ನೀಡಬೇಕು’ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದವು.

* ಜಾರಿಗೆ ಇರುವ ಸಮಸ್ಯೆ ಏನು?
ಅದೇನಿದ್ದರೂ, ಜಾತಿ-ಮತ ರಾಜಕೀಯದ ಮೇಲಾಟ ನಡೆಯುವ ಈ ಕಾಲದಲ್ಲಿ ದ್ವಾರಕಾನಾಥ್ ಆಯೋಗದ ಶಿಫಾರಸು ಜಾರಿ ರಾಜಕೀಯ ಪಕ್ಷಗಳ ಪಾಲಿಗೆ ಸರಳ ಸಂಗತಿಯೇನಲ್ಲ. ಹಿಂದುಳಿದ ವರ್ಗಗಳ ಪ್ರವರ್ಗ 2-ಎಗೆ ಸೇರಿಸಬೇಕೆನ್ನುವುದು ಅವರ ಶಿಫಾರಸು. ಅದಕ್ಕೆ ಕಾರಣವಾದ ಅಂಶಗಳನ್ನೂ ಅವರು ವಿವರಿಸಿದ್ದಾರೆ. ಆದರೆ,ಈ ಪ್ರವರ್ಗದಲ್ಲಿ ಸಾಮಾಜಿಕವಾಗಿ ಬಲಾಢ್ಯ ಜಾತಿಗಳಿವೆ. ಶಿಫಾರಸು ಜಾರಿ ಮಾಡಿದರೆ ಅವುಗಳ ಕೆಂಗಣ್ಣಿಗೆ ತುತ್ತಾಗಬೇಕಾದಿತ್ತೆನ್ನುವುದು ಸರಕಾರದ ಆತಂಕ. ಬಲಾಢ್ಯರಿಗಿಂತ ‘ಗುರುತು’ ಇಲ್ಲದವರ ನೋವು ಸರಕಾರಗಳಿಗೇನು ಮುಖ್ಯವಲ್ಲ; ಅಧಿಕಾರಸ್ಥರ ಆತ್ಮಕ್ಕೆ ತಟ್ಟುವುದೂ ಇಲ್ಲ. ಅದಕ್ಕೆಂದೇ,ಮಂಡ್ಯದ ರಘು ಅಂಥವರು ಒಡಲ ನೋವು ಹೊತ್ತು ಆಡಳಿತ ಕೇಂದ್ರಕ್ಕೆ ಎಡೆತಾಕಿದರೆ, ಅಧಿಕಾರಸ್ಥರು ‘ಅಸಹಾಯಕತೆ’ಯ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

*ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಏನು ಬದಲಾವಣೆಯಾಗಿದೆ?
ಈ ಮಧ್ಯೆ, ಮೈಸೂರಿನ ‘ಒಡನಾಡಿ’ಸಂಸ್ಥೆಯ ನಿರಂತರ ಕೋರಿಕೆ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ 2012ರಲ್ಲಿ ವಿವಿ ವ್ಯಾಪ್ತಿಯ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಪ್ರತಿ ವರ್ಷ ಕ್ರಮವಾಗಿ 2(ಪದವಿ) ಮತ್ತು 1 (ಪಿಜಿ) ಸೀಟುಗಳನ್ನು ಮಾನವ ಸಾಗಣೆ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರು ಅಥವಾ ಅವರ ಮಕ್ಕಳಿಗೆ ಕಾಯ್ದಿರಿಸಲು ನಿರ್ಧರಿಸಿತು. ಒಡನಾಡಿ ಶಿಫಾರಸು ಮಾಡುವವರಿಗೆ ಈ ಸೀಟು ನೀಡಲು ನಿರ್ಧರಿಸಿದ್ದು ಉಳಿದ ಸಂಸ್ಥೆಗಳಿಗೆ ಇರುಸುಮುರಿಸು ತಂದಿತ್ತಿತಾದರೂ, ಪ್ರೊ.ವಿ.ಜಿ.ತಳವಾರ್ ಕುಲಪತಿಯಾಗಿದ್ದ ಕಾಲದ ಈ ತೀರ್ಮಾನ ಗಮನಾರ್ಹವಾದುದು. ಅಂಕ ಪೈಪೋಟಿ ಕಾರಣಕ್ಕೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ನಿರಾಶರಾಗಿದ್ದ ಸಂತ್ರಸ್ತ ಮಕ್ಕಳು ರಿಕ್ತ ಕೋಟಾದ ಲಾಭ ಪಡೆಯುತ್ತಿದ್ದಾರೆ. ತಂದೆ ಮತ್ತು ಜಾತಿಯ ಐಡೆಂಟಿಟಿ ಇಲ್ಲದೆ,‘ಭಾರತೀಯ’ರೆಂದು ಗುರುತಿಸಿಕೊಂಡಿದ್ದ 11 ಮಂದಿ ಪದವಿಯನ್ನು, 8ಮಂದಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವುದು ವಿಶೇಷ.ಈ ಮಾದರಿಯನ್ನು ರಾಜ್ಯದ ಎಲ್ಲ ವಿಶ್ವ ವಿದ್ಯಾನಿಲಯಗಳಲ್ಲಿ ವಿಸ್ತರಿಸುವಂತೆ ನಿರಂತರ ಒತ್ತಡ ಹೇರುವ ಏಕ ಉದ್ದೇಶದಿಂದ ರಾಜ್ಯದ 48 ಸಂಸ್ಥೆಗಳು ‘ಮಾನವ ಸಾಗಣಿಕೆ ವಿರೋಧಿ ಆಂದೋಲನ-ಕರ್ನಾಟಕ’ ಒಕ್ಕೂಟವನ್ನು ರಚಿಸಿಕೊಂಡು ಹೋರಾಟ ನಿರತವಾಗಿವೆ. ಈಗಾಗಲೇ ಎಲ್ಲಾ ವಿವಿ ಕುಲಪತಿಗಳನ್ನು ಎರಡೆರಡು ಬಾರಿ ಸಂಪರ್ಕಿಸಿದ್ದು, ಬಹುತೇಕ ಕುಲಪತಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಸಂಸ್ಕೃತಿ ವಿವಿ ಮತ್ತು ಕುವೆಂಪು ವಿವಿಗಳು ಮೈಸೂರು ವಿವಿ ಮಾದರಿಯನ್ನು ಅಳವಡಿಸಿಕೊಳ್ಳಲು ಮುಂದಾಗಿವೆ.

*ರಾಜ್ಯ ಸರಕಾರವೇ ಯಾಕೆ ಒಪ್ಪಬಾರದು?
ವೇಶ್ಯೆಯರು,ದೇವದಾಸಿಯರು,ಎಚ್‌ಐವಿ ಪೀಡಿತರಿಗೆ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ವಿವಿಧ ಇಲಾಖೆಗಳ ಮಟ್ಟದಲ್ಲಿ ಒಂದಷ್ಟು ಪ್ರಯತ್ನಗಳಾಗಿವೆ. ಲೈಂಗಿಕ ಅಲ್ಪಸಂಖ್ಯಾತರಲ್ಲಿ ಕೆಲವರನ್ನು ಮತಪಟ್ಟಿಗೆ ಸೇರಿಸುವ ಪ್ರಯತ್ನವೂ ಅಲ್ಲಲ್ಲಿ ನಡೆದಿದೆ. ಶೈಕ್ಷಣಿಕ ಅವಕಾಶ ಕಲ್ಪಿಸುವ ಮೈಸೂರು ವಿವಿಯ ನಿರ್ಧಾರ ಶ್ಲಾಘನಾರ್ಹವಾದರೂ ಉನ್ನತ ಶಿಕ್ಷಣದ ಹಂತಕ್ಕೆ ಏರಿದವರಿಗಷ್ಟೆ ಅದರ ಲಾಭ ಸಿಗಬಹುದು. ಈ ಮಹಿಳೆಯರು;ಮಕ್ಕಳ ಅಲ್ಲಿಯವರೆಗಿನ ಬದುಕು ಕೂಡ ಸಂಘರ್ಷಮಯವಾದುದು.ರಾಜ್ಯ ಸರಕಾರವೇ ದ್ವಾರಕಾನಾಥ್ ಆಯೋಗದ ಶಿಫಾರಸು ಮತ್ತು ವಿವಿಗಳ ಮಾದರಿಯನ್ನು ಒಪ್ಪಿ,ಅಳವಡಿಸಿಕೊಂಡರೆ ಸಾವಿರಾರು ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲ, ಉದ್ಯೋಗ ಮತ್ತು ಸಾಮಾಜಿಕವಾಗಿ ಸಾಕಷ್ಟು ಅನುಕೂಲವಾಗುತ್ತದೆ. ಮಂಡ್ಯದ ರಘ ಮತ್ತು ಇಂಥ ‘ವಿಳಾಸ’ವಿಲ್ಲದ ಅನೇಕರಿಗೆ ‘ಸಂಕುಲ’ದ ಘನತೆ ದೊರೆಯುತ್ತದೆ. ಎದುರಿರಬಹುದಾದ ಸಣ್ಣ ಸಣ್ಣ ತೊಡಕು ನಿವಾರಿಸಿಕೊಂಡು ವಿಧಾಯಕ ನಿರ್ಧಾರ ಕೈಗೊಂಡರೆ ಸಾಮಾಜಿಕ ನ್ಯಾಯ ಅನುಷ್ಠಾನದ ವಿಷಯದಲ್ಲಿ ದೇಶದಲ್ಲಿಯೇ ಮೊದಲೆಂಬ ಹಿರಿಮೆ ಕರ್ನಾಟಕ ಸರಕಾರದ್ದಾಗುತ್ತದೆ. ಈಗ ವಿಧಾನಸೌಧ ತಲುಪಿರುವ ರಘು ಪ್ರಕರಣದ ನೆಪದಲ್ಲಿ ಇದೆಲ್ಲ ಸಾಧ್ಯವಾಗಲಿ ಎಂದು ಈ ನಿಟ್ಟಿನಲ್ಲಿ ನಿರಂತರ ಹೋರಾಟನಿರತ ಸಂಘಟನೆಗಳು ಒತ್ತಾಯಿಸುತ್ತಿವೆ.
—————————-

ಶೋಷಿತರ ಸಂಪೂರ್ಣ ಹೊಣೆ ಸರಕಾರದ್ದು. ಇಂಥ ಸಂಗತಿಗಳಲ್ಲಿ ಮಾನವೀಯ ಸಮಾಜವೊಂದು ಚರ್ಚೆ ನಡೆಸಬೇಕಾದ್ದೇನೂ ಇಲ್ಲ. ಜಾತ್ಯಾತೀತ,ಧರ್ಮಾತೀತವಾದ ವಿಷಯದಲ್ಲಿ ರಾಜಕಾರಣಿಗಳು ಪಕ್ಷಾತೀತ ಬೆಂಬಲ ನೀಡಿ,ಒಳ್ಳೆಯ ನಿರ್ಧಾರ ತಳೆದರೆ ಮಾನವೀಯ ಪಥದಲ್ಲಿ ಮೊದಲಾಗಿ ಹೆಜ್ಜೆ ಊರಿ,ಮಾದರಿಯಾದ ಹಿರಿಮೆ ಕರ್ನಾಟಕ ಸರಕಾರದ್ದಾಗುತ್ತದೆ. ಲೈಂಗಿಕ ಶೋಷಣೆಗೆ ಒಳಗಾದವರಿಗೆ ಜಾತಿ,ಧರ್ಮಾತೀತ ‘ಗುರುತು’ನೀಡುವುದು ಮತ್ತು ಅವರ ಬದುಕಿನ ಘನತೆಯನ್ನು ಎತ್ತರಿಸುವುದು ಸಾಧ್ಯವಾಗುತ್ತದೆ.
– ಸ್ಟ್ಯಾನ್ಲಿ,  ‘ಮಾನವ ಸಾಗಣಿಕೆ ವಿರೋಧಿ ಆಂದೋಲನ-ಕರ್ನಾಟಕ’ ಒಕ್ಕೂಟದ ಸಂಚಾಲಕ
—-
ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕಣ್ಣೆತ್ತಿಯೂ ನೋಡಿದಂತಿಲ್ಲ.ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಆಯೋಗದ ಶಿಫಾರಸನ್ನು ಅನುಷ್ಠಾನಗೊಳಿಸಬೇಕು ಇಲ್ಲವೇ ‘ಬಾಕಿ’ಉಳಿಸಬೇಕು. ತಿರಸ್ಕರಿಸಲು ಅವಕಾಶ ಇಲ್ಲ. ಹಾಗೆಂದೆ,ರಾಜ್ಯ ಸರ್ಕಾರ ವರದಿಗೆ ಧೂಳು ಹಿಡಿಸುತ್ತಿದೆ.ಜಾರಿಗೊಳಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ಜಾತಿ, ಗುರುತುಗಳೇ ಇಲ್ಲದವರಿಗೆ ‘ಸಂಕುಲ’ ಎಂಬ ಸದಾಶಯದ ಗುರುತು ದೊರಕಿದಂತಾಗುತ್ತದೆ.
-ಪ್ರೊ.ಸಿ.ಎಸ್.ದ್ವಾರಕಾನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ
————————————
*ನೊಂದವರ ಅಳಲು (ಆಯೋಗದ ವರದಿಯಲ್ಲಿ ಉಲ್ಲೇಖಿತ ಅಭಿಪ್ರಾಯಗಳು)
ನನಗೆ ತಂದೆ ಯಾರೆನ್ನುವುದು ಗೊತ್ತಿಲ್ಲ. ಈ ಕಾರಣಕ್ಕೆ ನನಗೊಂದು ಗುರುತೇ ಇಲ್ಲ;ರೇಷನ್ ಕಾರ್ಡ್ ಸಿಕ್ಕಿಲ್ಲ; ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ.
-ಸತ್ಯಮ್ಮ, ವಿಜಯಪುರ (ದೇವದಾಸಿ ಮಗಳು)

ನನ್ನ ಜಾತಿ ಯಾವುದೆನ್ನುವುದು ನನಗೆ ಗೊತ್ತಿಲ್ಲ. ಅದಕ್ಕೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ.ಅದರಿಂದ ಸವಲತ್ತು ಸಿಗುತ್ತಿಲ್ಲ.
-ರವಿ, (ವೇಶ್ಯೆಯ ಮಗ)

ನಾನು ಬೀದಿಯಲ್ಲಿ ದಂಧೆ ಮಾಡುವ ಮಹಿಳೆ. ಮೆಟ್ರೊಬಂದರೆ ನಮಗೆ ಬೀದಿ ಕೂಡ ಇಲ್ಲದಂತಾಗುತ್ತೆ.ಹೊಟ್ಟೆಪಾಡಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾವಂತೂ ಇಂತಹ ಬದುಕು ಬದುಕಿದೆವು. ನಮ್ಮ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೆ ಸಭ್ಯ ಬದುಕು ಬದುಕಲು ಅವಕಾಶ ಮಾಡಿಕೊಡಿ.
-ರೂಪ, ( ಬೆಂಗಳೂರು ಸಂಸ್ಥೆಯೊಂದರ ಕಾರ್ಯಕರ್ತೆ)