ಕೊಡಗಿನ ಕಾಡುಗಳು ಕರಗುತ್ತಾ ಕಾವೇರಿ ಕಮರಿ ಹೋಗುತ್ತಿದ್ದಾಳೆ-

                              kaveri

 

ಜಗತ್ತಿನ ಅತಿ ದುಬಾರಿ, ಅತಿ ಹೆಚ್ಚು ಜನದಟ್ಟಣೆ, ಅತಿ ದೊಡ್ಡ ನಗರಗಳ ಪೈಕಿ ಅಮೆರಿಕದ ನ್ಯೂಯಾರ್ಕ್ ಸಹ ಒಂದು. ವಿಶ್ವಕ್ಕೆ ಕೊಂಡಿಯಾಗಿ ಬರೋಬ್ಬರಿ ಒಂದು ಕೋಟಿಯ ಆಸುಪಾಸು ಜನಸಂಖ್ಯೆ ಹೊಂದಿರುವ ಈ ನಗರ ಅತ್ಯಂತ ಐಷಾರಾಮಿ ಎಂತಲೇ ಪ್ರಸಿದ್ಧಿ. ಇಷ್ಟೊಂದು ದೊಡ್ಡ ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುವುದು ನಮ್ಮ ಕೊಡಗಿನ ರೀತಿಯಲ್ಲೇ ಇರುವ ಮಲೆನಾಡಿನ ಪ್ರದೇಶವಾದ ಕ್ಯಾಟ್‌ಸ್ಕಿಲ್ಸ್ ಪರ್ವತಗಳಿಂದ. ಇಲ್ಲಿ ಹುಟ್ಟುವ ಡೆಲಾವೇರ್ ನ್ಯೂಯಾರ್ಕ್‌ನ ಜೀವನದಿ. ಈ ನದಿಯಿಂದ ನೀರು ಪೂರೈಸುವ ವ್ಯವಸ್ಥೆಯನ್ನು ಇಡೀ ಪ್ರಪಂಚದಲ್ಲೇ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ನ್ಯೂಯಾರ್ಕ್ ನಗರದ ನೀರು ಪೂರೈಕೆ ವ್ಯವಸ್ಥೆ ಬಗ್ಗೆ ಹೇಳುವ ಅವಶ್ಯಕತೆ ಇಲ್ಲಿ ಬರಲು ಕಾರಣ ಕಾವೇರಿ ನದಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ಸಂಘರ್ಷ.

ಡೆಲಾವೇರ್ ನದಿಯನ್ನು ಅಮೆರಿಕದ ಜನ ಅದೆಷ್ಟು ಜತನದಿಂದ ಕಾಪಾಡಿದ್ದಾರೆಂದರೆ, ಅಲ್ಲಿ ಜಲಮೂಲಕ್ಕೆ ಯಾವುದೇ ಧಕ್ಕೆ ಉಂಟು ಮಾಡಿದರೂ ಜೈಲು ಗ್ಯಾರಂಟಿ. ಕ್ಯಾಟ್‌ಸ್ಕಿಲ್ಸ್ ಪರ್ವತಗಳಿಂದ ಹರಿದು 201 ಕಿಲೋ ಮೀಟರ್ ದೂರದ ನ್ಯೂಯಾರ್ಕ್ ನಗರಕ್ಕೆ ನೀರು ಕೊಡುವ ಡೆಲಾವೇರ್ ನದಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ರಕ್ಷಿಸಲಾಗುತ್ತದೆ. ಯಾವುದೇ ಒತ್ತುವರಿ, ಮಾಲಿನ್ಯಕ್ಕೆ ಅವಕಾಶವಿಲ್ಲ. ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ನದಿ ನಿರ್ವಹಣೆಗೆ ಸ್ವಯಂ ಸೇವಕರ ತಂಡಗಳನ್ನೇ ರೂಪಿಸಲಾಗಿದೆ. ನ್ಯೂಯಾರ್ಕ್‌ನ ನಗರ ಪಾಲಿಕೆ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಸಾರ್ವಜನಿಕರು ಸಹ ನದಿ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅಲ್ಲಿನ ಕಾರ್ಪೋರೇಟ್ ಕಂಪನಿಗಳು, ಶ್ರೀಮಂತರು ಅಥವಾ ಸಂಘ ಸಂಸ್ಥೆಗಳು ನದಿಯ ಪಾತ್ರವನ್ನು ದತ್ತು ತೆಗೆದುಕೊಳ್ಳಬಹುದು. ದತ್ತು ನೀಡಲಾದ ಜಾಗದ ಸಂರಕ್ಷಣೆಯ ಸಂಪೂರ್ಣ ಹೊಣೆ ಅವರಿಗೆ ನೀಡಲಾಗುತ್ತದೆ. ಅಲ್ಲಿ ಹೆಚ್ಚೆಚ್ಚು ಮರಗಿಡಗಳನ್ನು ನೆಡುವುದು, ನದಿ ಪಾತ್ರಕ್ಕೆ ಘಾಸಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜತೆಗೆ ದತ್ತು ಪಡೆದ ಸಂಸ್ಥೆಯ ಜವಾಬ್ದಾರಿ. ಈ ಜಲಮೂಲಕ್ಕೆ ಘಾಸಿಯಾದರೆ ನ್ಯೂಯಾರ್ಕ್ ನಗರಕ್ಕೆ ನೀರು ಸಿಗಲ್ಲ ಎನ್ನುವುದು ಅಲ್ಲಿನವರಿಗೆ ಗೊತ್ತು. ಆದ್ದರಿಂದಲೇ ಕ್ಯಾಟ್‌ಸ್ಕಿಲ್ಸ್ ಪರ್ವತ ಶ್ರೇಣಿಗಳು ಹಾಗೂ ಅಲ್ಲಿ ಹುಟ್ಟುವ ನದಿಯಲ್ಲಿ ಅತ್ಯಂತ ಜೋಪಾನ ಮಾಡಿಕೊಂಡು ಬರಲಾಗಿದೆ.

ಈಗ ನಮ್ಮ ಕಾವೇರಿ ವಿಚಾರಕ್ಕೆ ಬರೋಣ. ಕಾವೇರಿ ಹುಟ್ಟುವ ಭಾಗಮಂಡಲದ  ಸುತ್ತಮುತ್ತ ಇರುವ ಖಾಸಗಿ ಜಮೀನುಗಳಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಕೊಡಗಿನಲ್ಲಿ ಪರಂಪರಾಗತವಾಗಿದ್ದ ಅರಣ್ಯಪ್ರದೇಶಗಳನ್ನು ಕೃಷಿ ವಿಸ್ತರಣೆ ನೆಪದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಕಾವೇರಿ ಕೊಳ್ಳ ಸಂಪೂರ್ಣ ಮಲಿನಗೊಂಡಿದೆ. ಅಕ್ರಮ ಮರಳುಗಾರಿಕೆಯಿಂದಾಗಿ ಕೆಲವು ಕಡೆ ನದಿ ಪಾತ್ರವನ್ನೇ ಬದಲಿಸಿಬಿಟ್ಟಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಜೀವನದಿ ಕಾವೇರಿಯ ಉಗಮಸ್ಥಾನ ದಿನೇ ದಿನೇ ನಾಶವಾಗುತ್ತಿದೆ.

ಮುಖ್ಯಮಂತ್ರಿಗಳೇ ಕೊಡಗಿನ ಕಡೆಗೊಮ್ಮೆ ನೋಡಿ. ಮಳೆ ಬರದೇ ಬರ ಬಂದಾಗ, ನದಿ, ಕೆರೆ ಕಟ್ಟೆಗಳು ತುಂಬದೇ ಇದ್ದಾಗ ತುರ್ತು ಸಚಿವ ಸಂಪುಟದ ಸಭೆಗಳನ್ನು ಕರೆಯುತ್ತೀರಿ. ತುರ್ತು ವಿಶೇಷ ಅಧಿವೇಶನಗಳನ್ನು ಕರೆಯುತ್ತೀರಿ. ಆದರೆ, ಅದೇ ನದಿಯ ಉಗಮಸ್ಥಾನವನ್ನು ಸಂರಕ್ಷಿಸಲು, ನದಿ ಉಳಿಸಲು ಏನು ಮಾಡುತ್ತಿದ್ದೀರಿ? ಕಾವೇರಿ ಗಲಾಟೆ ಆದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಉದ್ರಿಕ್ತ ಜನ ಕಂಡಕಂಡಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದರು. ಅನೇಕ ಕಡೆ ಲಾಠಿ ಚಾರ್ಜ್, ಗೋಲಿಬಾರ್ ಸಹ ನಡೆಯಿತು. ಕೊಡಗಿನಲ್ಲಿ ಉರುಳುವ ಪ್ರತಿ ಮರವೂ ಬೆಂಗಳೂರಿನಲ್ಲಿ ದಂಗೆಯ ಕಿಚ್ಚು ಹಚ್ಚಲಾರಂಭಿಸಿದೆ. ಕೊಡಗಿನಲ್ಲಿ ಒಂದಡಿ ಹಸಿರು ಕಡಿಮೆಯಾದರೂ ಸರ್ಕಾರದ ವೋಟ್ ಬ್ಯಾಂಕ್ ಅಲುಗಾಡುವ ಸ್ಥಿತಿ.

ಕಾವೇರಿ ಹುಟ್ಟುವ ಕೊಡಗಿನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾವೇರಿಗೆ ನೀರು ಕೊಡುವ ಈ ಹಚ್ಚ ಹಸಿರಾದ ಪರ್ವತ ಪ್ರದೇಶದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ನದಿಯ ಮೂಲವೇ ನಾಶವಾದರೆ ನೀರಿನ ಸೆಲೆ ಹುಟ್ಟುವುದಾದರೂ ಹೇಗೆ ಎಂದು ಯಾರೂ ಯೋಚಿಸುತ್ತಿಲ್ಲ. ಬದಲಾಗಿ 47 ಸಾವಿರ ಕೋಟಿಯನ್ನು ಕುಡಿಯುವ ನೀರಿನ ಯೋಜನೆಗೆ ವಿನಿಯೋಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಇಷ್ಟೊಂದು ಹಣ ಖರ್ಚು ಮಾಡಿ ನೀರಿನ ಯೋಜನೆ ಮಾಡಿದ ಮೇಲೆ ಅಲ್ಲಿ ನೀರೇ ಹರಿಯದಿದ್ದರೆ? 47 ಸಾವಿರ ಕೋಟಿಯನ್ನು ಕೇವಲ ಕೊಡಗಿನ ಅರಣ್ಯ ಪ್ರದೇಶ ಅಭಿವೃದ್ಧಿ ಮಾಡೋಕೆ ವಿನಿಯೋಗಿಸಿದಲ್ಲಿ ಕೊಡಗಿನ ಭೂಮಿಯನ್ನೆಲ್ಲ ಖರೀದಿಸಿ ಕಾಡು ಸೃಷ್ಟಿಸಬಹುದು.

ಸುರಿಯದ, ಹರಿಯದ ನೀರಿಗಾಗಿ ಇಷ್ಟೊಂದು ಖರ್ಚು ಮಾಡುವ ಬದಲು ಕೊಡಗಿನಲ್ಲಿ ಅರಣ್ಯ ವೃದ್ಧಿ, ಜಲ ಮೂಲಗಳ ಅಭಿವೃದ್ಧಿಗೆ ಯೋಜನೆಗಳೇಕೆ ರೂಪಿಸಬಾರದು? ನ್ಯೂಯಾರ್ಕ್‌ನ ಸ್ಥಳೀಯ ಆಡಳಿತ ತನ್ನ ಜಲಮೂಲದ ಬಗ್ಗೆ, ನಗರಕ್ಕೆ ನೀರು ಕೊಡುವ ನದಿಯ ಬಗ್ಗೆ ಅದೆಷ್ಟು ಆಸ್ಥೆ ವಹಿಸಿದೆ ಎಂದರೆ, 1997ರಿಂದ ಇಲ್ಲಿಯವರೆಗೆ 1 ಲಕ್ಷದ 30 ಸಾವಿರ ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಂದ ಖರೀದಿಸಿ ಜಲಾನಯನ ಪ್ರದೇಶ ಸಂರಕ್ಷಿಸಲಾಗಿದೆ. ಆದರೆ, ನಮ್ಮಲ್ಲಿ ನದಿ ಪಾತ್ರದ ಸರ್ಕಾರಿ ಭೂಮಿಯನ್ನೆಲ್ಲ ಅಕ್ರಮವಾಗಿ ಸ್ವಾಧೀನ ಮಾಡಿಕೊಡುವ ದುಷ್ಟರು, ದುರುಳರಿದ್ದಾರೆ.

ವಿದೇಶ ಪ್ರವಾಸಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಬರುತ್ತೇವೆ ಎನ್ನುವ ನಮ್ಮ ರಾಜಕಾರಣಿಗಳಿಗೆ ಇವೆಲ್ಲ ಹೊಳೆಯಬೇಕಲ್ಲವೇ? ನ್ಯೂಯಾರ್ಕ್‌ನಂತಹ ದೊಡ್ಡ ನಗರದ ಜನರ ಯೋಜನೆ ನಮ್ಮವರಿಗೆ ಏಕೆ ಹೊಳೆಯುವುದಿಲ್ಲ. ನಮ್ಮ ಸಿಎಂ ಕೊಡಗಿಗೆ ಆದ್ಯತೆ ಏಕೆ ನೀಡುವುದಿಲ್ಲ? ಬೆಂಗಳೂರು ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಸಿಲಿಕಾನ್ ಸಿಟಿ, ಸ್ಟಾರ್ಟ್ ಅಪ್ ಸಿಟಿ ಎಂದು ಹೊಗಳುತ್ತಾರೆ. ವಿಶ್ವದರ್ಜೆಯ ಉಪನಗರಗಳನ್ನು ನಿರ್ಮಿಸುವ ಮಾತನಾಡುತ್ತಾರೆ. ಆದರೆ, ಅಂತಹ ಬೆಂಗಳೂರು ನಗರಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ನದಿ ನೀರು ತಲುಪಲು ತಮ್ಮ ಸ್ವಂತ ಊರು ಕೊಡಗು ಚೆನ್ನಾಗಿರಬೇಕೆಂದು ಏಕೆ ಅನಿಸುವುದಿಲ್ಲ.

ಜಲಸಂಪನ್ಮೂಲ ಸಚಿವರು ಎಂದಿಗೂ ಜಲಮೂಲದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೇವಲ ಅಣೆಕಟ್ಟೆಯ ಎತ್ತರ ಏರಿಸುವುದು, ಕಾಲುವೆಗಳ ರಿಪೇರಿ ಅಥವಾ ಹೊಸ ಕಾಲುವೆ ನಿರ್ಮಾಣದ ಯೋಜನೆಗಳಲ್ಲೇ ಬ್ಯುಸಿಯಾಗಿರುತ್ತಾರೆ. ಅಧಿಕಾರಿಗಳ ಸಭೆ ಮಾಡುವ ಬದಲು ವಿಜ್ಞಾನಿಗಳ ಚಿಂತನ ಸಭೆ ಕರೆದಿದ್ದೀರಾ?

ಕಾವೇರಿ ವಿವಾದ ತಲೆ ಎತ್ತುತ್ತಿದ್ದಂತೆಯೇ ಎಲ್ಲರೂ ಕೋರ್ಟ್ ಬಗ್ಗೆ, ನ್ಯಾಯಾಧೀಶರ ಬಗ್ಗೆ, ಅಲ್ಲಿ ವಾದ ಮಾಡುವ ವಕೀಲರ ಬಗ್ಗೆ, ಕಡೆಗೆ ರಾಜಕಾರಣದ ಬಗ್ಗೆಯೂ ಮಾತನಾಡುತ್ತಾರೆ. ಆದರೆ, ಯಾರೂ ಆ ನದಿಯನ್ನು ಉಳಿಸಿಕೊಳ್ಳುವ ಬಗ್ಗೆ ಚಕಾರ ಎತ್ತುವುದಿಲ್ಲ. ಕಾವೇರಿ ನೀರು ಬೇಕು ಎಂದು ಸದಾ ಹಠ ಹಿಡಿಯುವ ತಮಿಳುನಾಡು ಸರ್ಕಾರ, ಅಲ್ಲಿನ ರಾಜಕಾರಣಿಗಳು ಎಂದಿಗೂ ಕಾವೇರಿಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಬಗ್ಗೆ ಮಾತನಾಡುವುದಿಲ್ಲ. ಕೊಡಗನ್ನು ಸಂರಕ್ಷಿಸುವ ಕಾರ‌್ಯಕ್ರಮ ರೂಪಿಸೋಣ ಎಂದು ಚಿಂತಿಸುವುದಿಲ್ಲ. ಮುಂದಿನ ವಿಶ್ವ ಯುದ್ಧ ನಡೆಯುವುದೇ ನೀರಿಗಾಗಿ ಎಂದು ಯಾರ‌್ಯಾರೋ ಮಹಾನುಭಾವರು ಹೇಳಿದ್ದಾರೆ. ಈಗಿನ ಅನೇಕ ವಿಜ್ಞಾನಿಗಳೂ ಸಹ ಅದನ್ನೇ ಪದೇ ಪದೇ ಹೇಳುತ್ತಿದ್ದಾರೆ. ಇಡೀ ಮನುಕುಲದ ಆಧಾರವೇ ನೀರು. ಜೀವಸಂಕುಲದ ಉಗಮಕ್ಕೂ ಅದೇ ಬೇಕು. ಇಡೀ ಜೀವರಾಶಿ ಅವಲಂಬನೆ ಆಗಿರುವುದೇ ನೀರು ಎನ್ನುವ ಅಮೃತದ ಮೇಲೆ. ಆ ನೀರನ್ನು ಉಳಿಸಿಕೊಳ್ಳಬೇಕಲ್ಲವೇ?

ನಮಗೋಸ್ಕರವಾದರೂ ಕಾವೇರಿ ಉಳಿಯಬೇಕು. ಬೆಂಗಳೂರು, ಮೈಸೂರು ನಗರಗಳು, ಕರ್ನಾಟಕ, ತಮಿಳುನಾಡಿನ ಲಕ್ಷಾಂತರ ರೈತರ ಜಮೀನುಗಳಲ್ಲಿ ಹಚ್ಚ ಹಸಿರಿನ ಪೈರು ಮೊಳಕೆಯೊಡೆಯಬೇಕೆಂದರೆ, ಕೊಡಗಿನ ಕಾಡು ಚೆನ್ನಾಗಿರಬೇಕು. ಕೊಡಗಿನ ಕಾಡುಗಳು ಮೋಡಗಳನ್ನು ಸೆಳೆಯುವ ಶಕ್ತಿ ಹೊಂದಿರಬೇಕು. ಅಲ್ಲಿ ಸುರಿದ ಮಳೆ ನದಿಯಲ್ಲಿ ಹರಿದು ಜನರ ಜೀವನವನ್ನು ಹದ ಮಾಡಬೇಕು.

ತಡವಾಗಿಬಿಟ್ಟಿದೆ. ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಮಾತ್ರವಲ್ಲ ಜನರೂ ಎಚ್ಚರಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಕೇವಲ ಕಾವೇರಿ ನದಿಯೊಂದರ ಸಮಸ್ಯೆಯಲ್ಲ, ಎಲ್ಲ ನದಿಗಳೂ, ಅವುಗಳ ಮೂಲ ಅರಣ್ಯಗಳನ್ನೂ ಸಂರಕ್ಷಿಸಬೇಕಿದೆ. ಇಲ್ಲದಿದ್ದಲ್ಲಿ ಮನುಕುಲವೇ ಸರ್ವನಾಶವಾಗುವ ದಿನಗಳು ದೂರವಿಲ್ಲ.