ಕುಸುಮಬಾಲೆ : ನಿರಚನವಾದಿ ಓದು -ರಾಜೇಂದ್ರ ಚೆನ್ನಿ

amurtate
ನನ್ನ ಹತ್ತಿರ ಇರುವ ‘ಕುಸುಮಬಾಲೆ’ ಕೃತಿಯ ಪಠ್ಯದಲ್ಲಿ ಕೃತಿಯ ಪ್ರಕಾಶನದ ವಿವರದಲ್ಲಿ ಹೀಗಿದೆ:A Kannada novella by Devanura Mahadeva. ಈ ವಿವರಣೆ ಕುಸುಮಬಾಲೆಯ ಓದುವಿಕೆಯ ಒಂದು ಇಕ್ಕಟನ್ನು ಮುಂದೊಡ್ಡುತ್ತದೆ. ಅದು ಈ ಕೃತಿಯ ರಚನೆ ಅಥವಾ ಸ್ವರೂಪಕ್ಕೆ ಸಂಬಂಧಪಟ್ಟದ್ದು. ‘ಕುಸುಮಬಾಲೆ’ಯ ಸಾಹಿತ್ಯಕ ಸ್ವರೂಪ ಯಾವುದು? ಅದು ಕತೆಯೇ? ಕಥಾನಕವೇ? ಕಾದಂಬರಿಯೇ? ಇದು ಕೇವಲ ಹಣೆಚೀಟಿಯನ್ನು ಹುಡುಕುವ ಪ್ರಶ್ನೆ ಮಾತ್ರವಲ್ಲ. Novel ಮತ್ತು Novella  ಎನ್ನುವ ಪದಗಳು ಪಶ್ಚಿಮದ ಸಾಹಿತ್ಯದಿಂದ ನಮಗೆ ಬಂದವು. ಇವು ಪದಗಳು ಮಾತ್ರವಲ್ಲ, ಆ ಸಾಹಿತ್ಯಕ ಪ್ರಕಾರದ ಬಗೆಗಿನ ಪರಿಕಲ್ಪನೆಗಳು ಕೂಡ. ಅಂದರೆ ಕಾದಂಬರಿ ಪ್ರಕಾರದಲ್ಲಿರುವ ಕೃತಿ ಹೀಗಿರಬೇಕು ಎನ್ನುವ ನಿರೀಕ್ಷೆಗಳು ಪಶ್ಚಿಮದ ಮಾದರಿಯಿಂದ ಮತ್ತು ಅಲ್ಲಿಯ ಸಾಹಿತ್ಯಕ ಸಿದ್ಧಾಂತ ಹಾಗೂ ವಿಮರ್ಶೆಗಳಿಂದ ನಮಗೆ ಬಂದವು. ಈ ಗ್ರಹಿಕೆಗಳು ಸ್ವಲ್ಪಮಟ್ಟಿಗೆ ನಮ್ಮ ಕಾದಂಬರಿಕಾರರಲ್ಲಿ ಮತ್ತು ಬಹಳವಾಗಿ ನಮ್ಮ ವಿಮರ್ಶಕರಲ್ಲಿ ಪ್ರಭಾವಶಾಲಿಯಾಗಿ ಕೆಲಸ ಮಾಡಿದವು ಎನ್ನುವುದನ್ನು ಅಲ್ಲಗಳೆಯಲಾಗದು. ಸಾಹಿತ್ಯ ಪ್ರಕಾರವೊಂದರ ಬಗ್ಗೆ ಇರುವ ಗ್ರಹಿಕೆ ಮತ್ತು ನಿರೀಕ್ಷೆಗಳನ್ನು ಮೀರಿದ ಸರ್ವ ಸ್ವತಂತ್ರ ಅಸ್ತಿತ್ವ ಯಾವುದೇ ಸಾಹಿತ್ಯ ಕೃತಿಗೆ ಇರುತ್ತದೆಯೆಂದು ಹೇಳಲಾಗದು. ಅಷ್ಟೇ ಅಲ್ಲ, ಇವುಗಳು ಕೃತಿಗಳ ‘ಆಚೆ’ ಇರುತ್ತವೆ ಎನ್ನುವುದೂ ತಪ್ಪು. ಕೃತಿಯ ಒಳಗೆ ಮತ್ತು ‘ಆಚೆಗೆ: ಹೊರಗೆ’ ಎನ್ನುವ ದ್ವಂದ್ವ ಇಲ್ಲಾ ಒಳಗಿನದನ್ನೋ ಅಥವಾ ಹೊರಗಿನದನ್ನೋ ಹೆಚ್ಚು ಮುಖ್ಯ ಅಥವಾ ನಿಜವೆಂದು ವಾದಿಸಲು ಬಳಸಲಾಗುವ ದ್ವಂದ್ವವಾಗಿದೆ. ಈ ದ್ವಂದ್ವದ ಹಿಂದೆ ಹತ್ತು ಹಲವಾರು ಗ್ರಹಿಕೆಗಳಿವೆ. ಆ ಗ್ರಹಿಕೆಗಳ ಆಧಾರದ ಮೇಲೆ ಸಾಹಿತ್ಯಕ ಹಾಗೂ ಸಾಂಸ್ಕೃತಿಕ  ಸಿದ್ಧಾಂತಗಳನ್ನು ಕಟ್ಟಲಾಗುತ್ತದೆ. ಉದಾಹರಣೆಗೆ, ಕೃತಿಯ ಒಳಗಿನದು ಮುಖ್ಯವೆನ್ನುವ ಧೋರಣೆಯಿಂದ ಹೊರಟರೆ ಕೃತಿನಿಷ್ಠ ನವ್ಯ ವಿಮರ್ಶೆಗೆ ತಲುಪುತ್ತೇವೆ. ಕೃತಿಯ ಹೊರಗಿನದು ಮುಖ್ಯವೆಂದು ವಾದಿಸಿದರೆ ಚಾರಿತ್ರಿಕ, ಸಮಾಜವಾದಿ ಅಥವಾ ಮಾರ್ಕ್ಸ್  ವಾದಿ- ಇಂಥ ಯಾವುದೋ ಸಿದ್ಧಾಂತಕ್ಕೆ ತಲುಪುತ್ತೇವೆ. ನಿರಚನವಾದಿ ತರ್ಕದ ಪ್ರಕಾರ ‘ಒಳ’ ಮತ್ತು ‘ಹೊರ’ ಇವುಗಳ ದ್ವಂದ್ವವನ್ನೇ ನಿರಚಿಸಬೇಕು. ಈ ತರ್ಕದ ಪ್ರಕಾರ ಕೃತಿಯ ಆಚೆಗೆ ಏನೂ ಇಲ್ಲ. (ಇದು ಡೆರಿಡಾನ ಪ್ರಮೇಯವಾಗಿದೆ).
ಹೀಗಾಗಿ ‘ಕುಸುಮಬಾಲೆ’ಯ ಬೆಗೆಗಿನ Novella ಎನ್ನುವ ವಿವರಣೆ ಕೃತಿಯ ಆಚೆಗಿನದಲ್ಲ; ಕೃತಿಯ ಕನ್ನಡ ಓದುಗನು ಅದನ್ನು ಓದುವಾಗ ಕಾದಂಬರಿ ಸ್ವರೂಪದ ಬಗ್ಗೆ ಇಟ್ಟುಕೊಳ್ಳಬಹುದಾದ ಗ್ರಹಿಕೆಯನ್ನು ಈ ವಿವರಣೆ ದಾಖಲಿಸುತ್ತದೆ. ಅದು ಕೃತಿಯ ‘ಅರ್ಥ’ದ ಒಂದು ಅಂಶವೇ ಆಗಿದೆ.‘ಕುಸುಮಬಾಲೆ’ ಪ್ರಕಟವಾದ ಹೊಸತರಲ್ಲಿ ಅದರ ಬಗ್ಗೆ ಬಂದ ಆಕ್ಷೇಪಣೆಗಳಲ್ಲಿ ಹಲವು ಅದರ ‘ಬಂಧ’ ರಚನೆ ಹಾಗೂ ಸ್ವರೂಪದ ಬಗ್ಗೆ ಇದ್ದವು ಎನ್ನುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.‘ಕುಸುಮಬಾಲೆ’ ಕಾದಂಬರಿ ಕಥಾ ಪ್ರಕಾರದ ಬಗ್ಗೆ ನಾವು ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಪೂರೈಸುವುದಿಲ್ಲವೆನ್ನುವುದು ಈ ಆಕ್ಷೇಪಣೆಗಳ ಹಿಂದಿನ ಅಭಿಪ್ರಾಯವಾಗಿತ್ತು. ವಿಚಿತ್ರವೆಂದರೆ ಕನ್ನಡದ ಪ್ರಮುಖ ಕಾದಂಬರಿಗಳು ಈ ನೀರಿಕ್ಷೆಗಳನ್ನು ಪೂರೈಸುವುದೇ ಇಲ್ಲ! ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ‘ಇಂದಿರಾಬಾಯಿ’ಯಿಂದ ಇಲ್ಲಿಯವರೆಗೆ ಬಂದ ಯಾವ ಕನ್ನಡ ಕಾದಂಬರಿಯೂ ಸಂಪೂರ್ಣವಾಗಿ Novel ಅನ್ನು ಹೋಲುವುದಿಲ್ಲ. ಅದೇ ರೀತಿ ಮಹಾದೇವರು ಅತ್ಯಂತ ಆಧುನಿಕವಾದ ಪ್ರಯೋಗಾತ್ಮಕವಾದ ಕಥನವನ್ನು ರಚಿಸಿದ್ದಾರೆ ಎಂದು ಹೇಳಲು ಹೊರಟ ಕೂಡಲೇ ಪಠ್ಯದ ಎರಡನೇ ಪುಟದಲ್ಲಿ ಇರುವ-
ಪೂರ್ವಿಕ
ಮಾದಾರ ಮಲೆಮಾದೇಶ್ವರಂಗೆ
ಅರ್ಪಿತ
ಎನ್ನುವ ಮಾತು ಎದುರಾಗುತ್ತದೆ. ಈ ಕೃತಿಯಲ್ಲಿ ಆಧುನಿಕವಾಗುವುದೆಂದರೆ ‘ಪೂರ್ವಿಕ’ – ‘ಪೂರ್ವ’ ಚರಿತ್ರೆಯ ಆಚೆಗೆ (?)ಇರುವುದರ ಕಡೆಗೆ ಹೊರಳುವುದು ಆಗಿದೆ.‘ಕುಸುಮಬಾಲೆ’ ಕೃತಿಯ ಪೂರ್ವಿಕನೆಂದರೆ ‘ಮಲೆಮಾದೇಶ್ವರ’. ಕಾವ್ಯವೆನ್ನುವ ಇನ್ನೊಂದು ಕೃತಿ. ಕಾದಂಬರಿಯ ಭಾಷೆಯ ಲಯಗಳು, ಕಥನ ಸ್ವರೂಪದ ಬಗೆಗಳು ಮಲೆಮಾದೇಶ್ವರ ಕಾವ್ಯದಿಂದ ಬಂದಿರುವಂಥವು. ಹಾಗೆಂದ ಮಾತ್ರಕ್ಕೆ ‘ಕುಸುಮಬಾಲೆ’ಯ ಮೇಲೆ ‘ಮಲೆಮಾದೇಶ್ವರ ಕಾವ್ಯ’ದ ಪ್ರಭಾವವನ್ನು ಹುಡುಕಬೇಕು ಎಂದಲ್ಲ. ಒಂದು ಭಾಷೆಯಲ್ಲಿರುವ ಎಲ್ಲ ಕೃತಿಗಳ ಮಧ್ಯೆ ಕೊನೆ ಮೊದಲಿಲ್ಲದ ಒಂದು ಅಂತರ್ ಕೃತಿತ್ವ ಇದ್ದೇ ಇರುತ್ತದೆ. ಒಂದು ಕೃತಿಯೊಳಗೆ ಹಲವಾರು ಕೃತಿಗಳು ಸೇರಿ ಹೋಗುತ್ತಲೇ ಇರುತ್ತವೆ. ಆ ಅರ್ಥದಲ್ಲಿ “ಕುಸುಮಬಾಲೆ” ತನ್ನ ಪೂರ್ವಿಕವಾದ ಕಾವ್ಯಗಳನ್ನು ತನ್ನೊಳಗೆ ಹೊತ್ತುಕೊಂಡಿದೆ. ಇನ್ನೊಂದು ರೀತಿಯಲ್ಲಿ ನೋಡಿದರೆ, ಇಂದಿನ ಬಹುಪಾಲು ಓದುಗರಿಗೆ ತೀರ ವಿಶಿಷ್ಟವಾಗಿ ಕಾಣುವ ಈ ಕೃತಿಯ ಬರಹದ ಶೈಲಿ ಚಂಪೂ ಶೈಲಿಯಾಗಿದೆ. ಚಂಪೂ ಎಂದರೆ ಗದ್ಯ ಮತ್ತು ಕಾವ್ಯದ ಪ್ರಕಾರಗಳ ಭಿನ್ನತೆಯನ್ನು ಒಂದು ಮಟ್ಟದಲ್ಲಿ ಅಲಕ್ಷಿಸುವ, ಇನ್ನೊಂದು ಮಟ್ಟದಲ್ಲಿ ಸಮರ್ಪಕವಾಗಿ ಒಪ್ಪಿಕೊಳ್ಳುವ ಶೈಲಿಯಾಗಿದೆ. ಅಂದರೆ ಈ ಭಿನ್ನತೆ ಕೇವಲ ಛಂದಸ್ಸಿಗೆ ಸಂಬಂಧಪಟ್ಟ ಭಿನ್ನತೆಯಾದ್ದರಿಂದ ಅದನ್ನೇನೂ ವಿಶೇಷವಾಗಿ ಪರಿಗಣಿಸಬೇಕಾಗಿಲ್ಲ, ಒಂದು ಕೃತಿ ಶುದ್ಧವಾಗಿ ಕಾವ್ಯದಲ್ಲಿ ಅಥವಾ ಗದ್ಯದಲ್ಲಿ ಇರಬೇಕು ಎನ್ನುವ ಕರಾರನ್ನು ಲಾಕ್ಷಣಿಕರು ಹಾಕಿದ್ದಾರೆಯೇ ಹೊರತು ಬರಹಗಾರರಲ್ಲ. ಆದ್ದರಿಂದಲೇ ಕನ್ನಡದ ಸಂಪ್ರದಾಯದಲ್ಲಿ ಬರಹಗಾರರು ಈ ಭಿನ್ನತೆಯನ್ನು ಅಲಕ್ಷ್ಯಮಾಡಿ ಬರೆದಿದ್ದಾರೆ. ಅಥವಾ ಗದ್ಯ-ಪದ್ಯದ ಮಿಶ್ರಣವನ್ನೇ ಒಂದು ಪ್ರಕಾರವನ್ನಾಗಿಸಿ ಅದನ್ನು ‘ಚಂಪೂ’ ಎಂದು ಗುರುತಿಸಿದ್ದಾರೆ.
ಗದ್ಯ ಮತ್ತು ಕಾವ್ಯದ ಭಿನ್ನತೆಯನ್ನು ಇವರು ವಿಶಿಷ್ಟವಾದ ಅನುಭವವಲಯಗಳ ಅಭಿವ್ಯಕ್ತಿಗೆ ಸಂಬಂಧಿಸಿದ ಹಾಗೆ ಒಪ್ಪಿಕೊಳ್ಳುತ್ತಾರೆ. ಕೃತಿಯ ಒಟ್ಟಾರೆ ಅನುಭವವು ಬಹುಮುಖಿಯಾಗಿರುವುದರಿಂದ ಆ ಅನುಭವದ ಕೆಲವು ವಲಯಗಳು ಗದ್ಯವನ್ನು ಅಪೇಕ್ಷಿಸುತ್ತವೆ. ಇನ್ನು ಕೆಲವು ವಲಯಗಳು ಕಾವ್ಯದ ಭಿತ್ತಿಯನ್ನೇ ಅಪೇಕ್ಷಿಸುತ್ತವೆ. ‘ಕುಸುಮಬಾಲೆ’ಯಲ್ಲಿ ಅನುಭವದ ವಿವಿಧ ವಲಯಗಳು ತಮ್ಮ ಸಹಜ ಗತಿಯನ್ನು ಆಧರಿಸಿ ಗದ್ಯ ಅಥವಾ ಕಾವ್ಯದ ಪಾತಳಿಗಳನ್ನು ಕಂಡುಕೊಂಡಿವೆ. ‘ಕೆಲವು ಭಾಗಗಳು ಕಾವ್ಯಾತ್ಮಕವಾಗಿವೆ’ ಎಂದು ನಾನು ಹೇಳುತ್ತಿಲ್ಲ. ‘ಕುಸುಮಬಾಲೆ’ಯ ಕೆಲವು ಭಾಗಗಳು ಕಾವ್ಯವೇ ಎಂದು ಹೇಳುತ್ತಲಿದ್ದೇನೆ. ನಾನು ಬಳಸುತ್ತಿರುವ ಪಠ್ಯದಲ್ಲಿ ಈ ಭಾಗಗಳನ್ನು ಮುದ್ರಣದ ವಿನ್ಯಾಸದ ಮೂಲಕ ಕೂಡ ತೋರಿಸಲಾಗಿದೆ. ಇದು ಸರಿಯಾದದ್ದು. ಮುದ್ರಣದ ವಿನ್ಯಾಸವೂ ಸೇರಿದಂತೆ ಯಾವುದೇ ರೀತಿಯ ಬರಹವೂ ಓದುಗ-ಬರಹಗಾರರ ಮಧ್ಯದ ಒಪ್ಪಂದ (Convention)ವನ್ನು ಆಧರಿಸಿರುತ್ತದೆ. ಓದುಗನು ‘ಸಹಜವಾಗಿ’ ಕಾವ್ಯವನ್ನು ಅಥವಾ ಗದ್ಯವನ್ನು ಗ್ರಹಿಸಿಬಿಡುತ್ತಾನೆ ಎನ್ನುವುದು ತಪ್ಪು.(ಉದಾಹರಣೆಗೆ ವಚನಗಳನ್ನು ಬರೆದಿಡುತ್ತಿದ್ದ ಕ್ರಮದಿಂದಾಗಿ ಅವುಗಳ ರಚನೆಯನ್ನು ಗ್ರಹಿಸುವುದು ಬಹಳ ತಡವಾಯಿತಲ್ಲವೆ? ಹಾಗೆಯೇ ಶ್ರೀ ಎಲ್. ಬಸವರಾಜು ಅವರು ‘ಪಂಪಭಾರತ’ವನ್ನು ಇಂದಿನ ಓದುಗನಿಗಾಗಿ ಹೊಸ ವಿನ್ಯಾಸದಲ್ಲಿ ಪ್ರಕಟಿಸಿರುವುದರಿಂದ ಹೆಚ್ಚು ಜನರಿಗೆ ಅದು ಲಭ್ಯವಾಗುತ್ತದೆ. ಬರಹವೆನ್ನುವುದಕ್ಕೆ ತನ್ನದೇ ಆದ ಸಹಜ ಮಾಂತ್ರಿಕಶಕ್ತಿ ಇರುತ್ತದೆ ಇತ್ಯಾದಿ ನಂಬಿಕೆಗಳನ್ನು ನಿರಚಿಸುವುದು ಅವಶ್ಯಕವಾಗಿದೆ. ಆಗ ಮಾತ್ರ ಬರಹವೆನ್ನುವುದು ಸಾಮಾಜಿಕ ಕ್ರಿಯೆಗಳಲ್ಲಿ ಒಂದು ಹೀಗಾಗಿ ಅದು ಹತ್ತು ಹಲವಾರು ಸ್ವೀಕೃತ ಕರಾರುಗಳನ್ನು (Convention) ಪಾಲಿಸಲೇಬೇಕು.
ನಾನು ಪೂರ್ವಿಕ ಎನ್ನುವ ಪದವನ್ನು ಬರಹದ ಪೂರ್ವಿಕರನ್ನು  ಸೂಚಿಸುವಂತೆ ಬೇಕೆಂತಲೇ ಬಳಸಿಕೊಂಡಿದ್ದೇನೆ. ಆದರೆ ಅರ್ಪಣೆಯ ವಾಕ್ಯಗಳಲ್ಲಿ ‘ಪೂರ್ವಿಕ ಮಾದಾರ ಮಲೆಮಾದೇಶ್ವರಗೆ’ ಎಂದು ಬರೆಯಲಾಗಿದೆ. ಇಲ್ಲಿ ಪೂರ್ವಿಕ ಎನ್ನುವ ಪದವು ‘ಕುಸುಮಬಾಲೆ’ ಕೃತಿಯ ಬಹುಮುಖ್ಯವಾದ ಅಂಶಗಳನ್ನು ಸೂಚಿಸುತ್ತದೆ. ಅದನ್ನು ಹೇಳುವ ಮೊದಲು ‘ಮಾದಾರ ಮಲೆಮಾದೇಶ್ವರಂಗೆ’ ಎನ್ನುವ ಪದಪುಂಜದ ಬಗ್ಗೆ ಒಂದೆರಡು ಮಾತು. ಇದರಲ್ಲಿ ಗಮನಿಸಬೇಕಾದುದೆಂದರೆ ಜಾತಿ, ವರ್ಗ, ಭಾಷೆ ಎಲ್ಲವನ್ನು ಮೀರಿದ ದೈವವನ್ನು ಜಾತಿಸೂಚಕ ಪದದಿಂದ ಸಂಬೋಧಿಸಲಾಗಿದೆ. ಇದೇ ರೀತಿ ಕೃತಿಯ ಒಳಗೆ ಕೂಡ ‘ಹೊಲಾರ ಚೆನ್ನ’ ಹೀಗೆ ಬಹುಪಾಲು ವ್ಯಕ್ತಿಗಳನ್ನು ಅವರ ಜಾತಿಯ ಆಧಾರದ ಮೇಲೆ ಕರೆಯಲಾಗಿದೆ. ಅಷ್ಟು ಮಾತ್ರವಲ್ಲ ಮಾನವಾತೀತ ಶಕ್ತಿಗಳಾಗಿರುವ ‘ಜೋತಮ್ಮದೀರು’ ಕೂಡ ಇದೇ ಮಾದರಿಯಲ್ಲಿ ತಮ್ಮ ತಮ್ಮ ಹಟ್ಟಿಗಳ ಹೆಸರಿಂದ ವರ್ಣಿತರಾಗಿದ್ದಾರೆ.
ಕೃತಿಯ ಭಿತ್ತಿಯಲ್ಲಿ ಹೀಗೇಕೆ ಆಗಿದೆ? ಒಂದು ಕಡೆಗೆ ವ್ಯಕ್ತಿಗಳನ್ನು ಅವರ ಜಾತಿ ಮತ್ತು ಪರಿಸರಗಳ ಮೂರ್ತವಾದ ಇಕ್ಕಟ್ಟುಗಳ ಮಧ್ಯೆ ನೋಡಬೇಕಾದ ಅನಿವಾರ್ಯತೆ  ಇಲ್ಲಿ  ಕಂಡು ಬರುತ್ತದೆ. ಅಂದರೆ ವರ್ತಮಾನದ (ಅದೇ ರೀತಿ ನಾವು ಬಲ್ಲ ಇತಿಹಾಸದಲ್ಲಿ ಕೂಡ) ಸ್ಥಿತಿಯಲ್ಲಿ ಮನುಷ್ಯ – ವ್ಯಕ್ತಿಗಳನ್ನು ಅವರ ಜಾತಿಸೂಚಕ ನಾಮಗಳಿಂದಲೇ ಗುರುತಿಸುತ್ತ ಬಂದಿದ್ದೇವೆ. ಇದು ಕೃತಿಗೆ ಮುಖ್ಯವೇಕೆಂದರೆ ಇಂಥ ಸಾಮಾಜಿಕ ಸ್ಥಿತಿಯಿಂದಾಗಿಯೇ ವರ್ಣಸಂಕರದ ಪ್ರಶ್ನೆ ಉದ್ಭವವಾಗುತ್ತದೆ. ‘….ಹೀಗೆ’ ಎನ್ನುವ ಪ್ರವೇಶದಲ್ಲಿ ಈ ವರ್ಣಸಂಕರವನ್ನು ಈ ರೀತಿ ವಿವರಿಸಲಾಗಿದೆ. ಕುಸುಮ ಮತ್ತು ಹೊಲಾರಚೆನ್ನರ ನಡುವಿನ ಗುಪ್ತ ಸಂಬಂಧವು ಕುಸುಮಳಿಗಾದ ಮಗುವಿನಿಂದ ಬಯಲಾಗಿ ಅರಿವಾಗದೋಪಾದಿಯಲ್ಲಿ ಚೆನ್ನನ ಕೊಲೆಯಾಗುವುದು.
ಇದು ಕೃತಿ ಪ್ರಧಾನ ವಸ್ತುವಾಗಿದೆ. ಹಾಗೆ ಆಗುವುದಕ್ಕೆ ಕಾರಣಗಳೂ ಇವೆ. ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ವಾಸ್ತವವಾಗಿ ಜಾತಿ, ಉಪಜಾತಿಗಳ ಆಧಾರದ ಮೇಲೆ ನಿಂತಿದೆ. ಆದರೆ ಇದಕ್ಕೆ ಸೈದ್ಧಾಂತಿಕ ಬೆಂಬಲ, ಸಮರ್ಥನೆ ಇವೆಲ್ಲ ದೊರಕಿದ್ದು ವರ್ಣವ್ಯವಸ್ಥೆಯ ಪರಿಕಲ್ಪನೆಯಿಂದ. ಏಕೆಂದರೆ ಈ ವರ್ಣವ್ಯವಸ್ಥೆ ಜಾತಿವ್ಯವಸ್ಥೆಯ ವಿನಾಶ ಸಾಧ್ಯವಾಗುವುದು ವರ್ಣಸಂಕರದಿಂದ ಮಾತ್ರ. ಆದ್ದರಿಂದಲೇ ಈ ದೇಶದಲ್ಲಿ ವರ್ಣ ಹಾಗೂ ಜಾತಿವ್ಯವಸ್ಥೆಗಳಿಗೆ ಪ್ರಳಯಕ್ಕಿಂತಲೂ ಭೀಕರವಾದುದು ವರ್ಣಸಂಕರ. ಅದರಲ್ಲೂ ‘ವಿಲೋಮ’ ಬಗೆಯ – ಅಂದರೆ ಮೇಲ್ಜಾತಿಯ ಹೆಣ್ಣು ಕೆಳಜಾತಿಯ ಗಂಡು ಅವರ ಸಂಬಂಧದಿಂದ ಆಗುವ ವರ್ಣಸಂಕರ. ‘ಕುಸುಮಬಾಲೆ’ಯಲ್ಲಿ ಕೇವಲ ಕುಸುಮ-ಚೆನ್ನರ ಮಧ್ಯೆ, ಮಾತ್ರವಲ್ಲ ಇನ್ನೂ ಹಲವು ವ್ಯಕ್ತಿಗಳ ಮಧ್ಯೆ ಇಂಥ ಸಂಬಂಧಗಳಿವೆ. ಕುಸುಮಳ ಪೂರ್ವಿಕನಾದ ಯಾಡೇಗೌಡನೂ ಕೂಡ ಅಕ್ಕಮಹಾದೇವಮ್ಮ ಮತ್ತು ಜೀತದಾಳೊಬ್ಬನ ಹಾದರದಿಂದ ಹುಟ್ಟಿದವನು. (‘ಕುಸುಮಬಾಲೆ’ಯ ಒಟ್ಟಾರೆ ಶೈಲಿ low mimetic ಬಗೆಯದು. ಹೀಗೆಂದು ಎಲ್ಲರೂ ಗುರುತಿಸಿದ್ದಾರೆ. ಆದರೂ ಮುಖ್ಯವಾಗಿ ಈ Comic ಶೈಲಿಯ ಹಿಂದಿರುವ ತುಡಿತಗಳನ್ನು ಬಾಕ್ತಿನ್ (Mikhail Bakhtin) ಗುರುತಿಸುವುದು ನಮಗೆ ಈ ಸಂದರ್ಭದಲ್ಲಿ ಪ್ರಸ್ತುತವಾಗಿದೆ. ಅವನ ದೃಷ್ಟಿಯಲ್ಲಿ ಕಾಮಿಕ್ ಶೈಲಿಯನ್ನು ಬಳಸುವುದರ ಮೂಲಕ ಕೆಳವರ್ಗದ ಜನರು ಮೇಲುವರ್ಗದ ಪ್ರತಿಷ್ಠಿತ ಅಥವಾ ಶಿಷ್ಟ ಆಚರಣೆಗಳನ್ನು, ನಂಬಿಕೆಗಳನ್ನು ಲೇವಡಿ ಮಾಡುವುದು ಸಾಧ್ಯವಾಗುತ್ತದೆ.ಈ ಲೇವಡಿ ಮಾಡುವ ಕ್ರಿಯೆಯನ್ನು ಅವನು ‘Carnivalising’ ಎಂದು ಕರೆಯುತ್ತಾನೆ. ಇಲ್ಲಿ ಲೇವಡಿ ಮಾಡುವುದು ಕೂಡ ಪ್ರತಿಭಟನೆಯ ಅದರಲ್ಲೂ ಜನಸಾಮಾನ್ಯರ ವಲಯದಲ್ಲಿ ನಡೆಯುವ ಪ್ರತಿಭಟನೆಯ ಅಸ್ತ್ರವಾಗಿ. ಇದರಲ್ಲಿ ಬಳಸುವ ಮುಖ್ಯ ತಂತ್ರವೆಂದರೆ ಗಂಭೀರವಾದುದನ್ನು ಲಘುವಾಗಿ, ಶೀಲವನ್ನು ಅಶ್ಲೀಲವಾಗಿ, ಶಿಷ್ಟವನ್ನು ಪರಿಶಿಷ್ಟವಾಗಿ – ಹೀಗೆ ಒಂದು ‘ಸಾಮಾಜಿಕ ಭಾಷೆಯಿಂದ’ ಇನ್ನೊಂದು ಸಾಮಾಜಿಕ ಭಾಷೆಗೆ ಅನುವಾದ ಮಾಡಿಕೊಳ್ಳುವುದಾಗಿದೆ. ಈ ದೃಷ್ಟಿಯಲ್ಲಿ ನೋಡಿದರೆ ‘ಕಸುಮಬಾಲೆ’ಯ ಪ್ರಧಾನ ಧ್ವನಿಯೆಂದರೆ ಇಂಥ ಪ್ರತಿಭಟನಾತ್ಮಕ ಲೇವಡಿಯ ಧ್ವನಿಯಾಗಿದೆ. ಇದೇ ಹಿನ್ನೆಲೆಯಲ್ಲಿ ‘ವರ್ಣಸಂಕರ’ವೆನ್ನುವುದು ಹಾದರ ಅಥವಾ ‘ಸಂಭೋಗ’ವಾಗಿ ‘ಕುಸುಮಬಾಲೆ’ ಕೃತಿಯಲ್ಲಿ ಅನುವಾದಿತವಾಗಿದೆ.
ಇಂಥ ಹಾದರದ ಸಂಗತಿಗಳು ಕತೆಯ ಉದ್ದಕ್ಕೂ ಹಬ್ಬಿಕೊಂಡು ತಮ್ಮ ಒಟ್ಟಾರೆ ಪರಿಣಾಮದ ಮೂಲಕ ಇಂಥ ಗುಪ್ತಸಂಬಂಧಗಳೇ ಮನುಷ್ಯಜೀವಿಗಳಿಗೆ ಸಹಜವಾದ ಸಂಬಂಧಗಳು. ಜಾತಿವ್ಯವಸ್ಥೆ ವಿಧಿಸುವ ಕಟ್ಟಳೆಗಳ ಅಸಹಜವೆನ್ನುವ ಗ್ರಹಿಕೆಯನ್ನು ಬೆಂಬಲಿಸುತ್ತದೆ. ಇದಕ್ಕೆ ಪೂರಕವಾಗಿ, ಕೃತಿಯಲ್ಲಿ ಬರುವ ಸ್ತ್ರೀ ಪಾತ್ರಗಳು (ಇವು ತಾಯಿ ಪಾತ್ರಗಳೂ ಆಗಿವೆ). ಇಂಥ ಸಂಬಂಧಗಳನ್ನು ಸಹನೆಯಿಂದ ನೋಡುತ್ತವೆ ಎನ್ನುವುದು ಬಹಳ ಮುಖ್ಯ. ತಾಯಿ ಪಾತ್ರಗಳ ದೃಷ್ಟಿಯಲ್ಲಿ ಮಕ್ಕಳು ಮಾಡಿದ ಹಾದರ ಸರಿಯೋ ತಪ್ಪೋ – ಆದರೆ ಅರ್ಥವಾಗುವಂಥದು. ಅಲ್ಲದೇ ಈ ಹಾದರದಿಂದ ಹುಟ್ಟುವ ಮಕ್ಕಳು ಬದುಕಿನ ಸಾತತ್ಯಕ್ಕೂ ಬೇಕಾಗಿರುವಂಥ ಜೀವಿಗಾಳಾಗಿದ್ದರಿಂದ ಪ್ರೀತಿಗೆ ಪಾತ್ರವಾಗಬಲ್ಲ ಜೀವಿಗಳು. ಇದಕ್ಕೆ ವಿರುದ್ಧವಾಗಿ ಕೃತಿಯಲ್ಲಿ ಬರುವ ಗಂಡು ಪಾತ್ರಗಳು (ತಂದೆ ಪಾತ್ರಗಳು) ಜಾತಿವ್ಯವಸ್ಥೆಯ ಕಟ್ಟಳೆಗಳನ್ನು ಅತ್ಯಂತ ಕಠೋರವಾಗಿ, ಹಿಂಸೆಯ ಮೂಲಕ ಕೂಡ ಪಾಲಿಸುತ್ತವೆ ಎನ್ನುವುದನ್ನು ಗಮನಿಸಬೇಕು. ಕಟ್ಟಳೆಗಳು ಗಂಡು ಜಗತ್ತಿಗೆ ಸೇರಿವೆಯಾದರೆ ಕಟ್ಟಳೆಗಳನ್ನು ಮುರಿದು, ಹಾದರವನ್ನು (ಅಂದರೆ ಗಂಡು-ಹೆಣ್ಣಿನ ಜಾತಿಮೀರಿದ ಸಂಬಂಧಗಳನ್ನು) ಸಹನೆಯಿಂದ ನೋಡುವ ಇಚ್ಛಾಶಕ್ತಿ ಹೆಣ್ಣು ಜಗತ್ತಿಗೆ ಸೇರಿದೆ. ಕಥೆಯ ಆರಂಭದಲ್ಲಿಯೇ ಬರುವ ಜೋತಮ್ಮದೀರು ಕೂಡ ಈ ಬಗೆಯ ತಾಯಿ ಪಾತ್ರಗಳಾಗಿವೆ. ತಮ್ಮ ತಮ್ಮ ಕೇರಿಗಳಲ್ಲಿ ನಡೆವ ಇಂಥ ಹಾದರದ ಘಟನೆಗಳ ಬಗ್ಗೆ ಆತ್ಮೀಯವಾದ ತಿಳುವಳಿಕೆಯಿಂದ ಮಾತನಾಡುವ ಅವರು ಮುಂದೆ ಕಥೆಯಲ್ಲಿ ಬರುವ ತಾಯಿ ಪಾತ್ರಗಳ ಮೂಲ ಮಾದರಿಗಳಂತಿದ್ದಾರೆ. ‘ಕುಸುಮಬಾಲೆ’ಯ ತಾಯಿ ಪಾತ್ರಗಳಿಗೆ ಮುಖ್ಯವಾಗಿರುವುದು ವಂಶದ ಕುಡಿಗಳಾಗಿರುವ ಕೂಸುಗಳನ್ನು ಉಳಿಸಿಕೊಳ್ಳುವುದು; ಪೋಷಿಸಿ ಸಾಕುವುದು. ಈ ಸಾಕುತನದಿಂದಲೇ ಮನುಷ್ಯ ಜಗತ್ತು ಉಳಿದಿದೆ ಎನ್ನುವುದನ್ನು ಕಥೆ ಹೇಳುತ್ತದೆ. ಸಾಕುವಿಕೆಗೆ ಬೇಕಾದ ತಿಳುವಳಿಕೆ, ಜಿಗುಟುತನ, ನೀತಿಯ ಕಟ್ಟಳೆಗಳನ್ನು ಅಲಕ್ಷ್ಯಮಾಡುವ ಎದೆಗಾರಿಕೆ ಇವುಗಳನ್ನು ತಾಯಿ ಪಾತ್ರಗಳಲ್ಲಿ ಕಾಣುತ್ತೇವೆ. ಕೃತಿಯ ಪ್ರಧಾನ ಧ್ವನಿ ಕಾಮಿಕ್ (Comic ಅಥವಾ Low mimetic ) ಧಾಟಿಯದು ಎನ್ನುವುದನ್ನು ಎಲ್ಲರೂ ಗುರುತಿಸಿದ್ದಾರೆ. ಆದರೆ ಕೃತಿಯಲ್ಲಿ ಗಂಭೀರವಾದ high-mimetic ಧಾಟಿಯ ಇನ್ನೊಂದು ಧ್ವನಿಯೂ ಇದೆ. ಅಂದರೆ ವ್ಯಂಗ್ಯದ ನೆರಳೂ ಇಲ್ಲದೇ, ವರ್ಣಿಸುತ್ತಿರುವ ವಿಷಯದ ಬಗ್ಗೆ ಇತ್ಯಾತ್ಮಕವಾದ ಧೋರಣೆಗಳನ್ನು ವ್ಯಕ್ತಪಡಿಸುತ್ತ, ಆ ಮೂಲಕ ಓದುಗನನ್ನು ಒಪ್ಪಿಸುವ ಒಂದು ಧಾಟಿಯೂ ಕೃತಿಯ ಹಲವಾರು ಭಾಗಗಳಲ್ಲಿದೆ. ಇದು ಕೇವಲ ಶೈಲಿ ವೈವಿಧ್ಯದ ಪ್ರಶ್ನೆಯಲ್ಲ. ಬರಹಗಾರರು ಓದುಗನನ್ನು ಯಾವ ರೀತಿಯಲ್ಲಿ ಪ್ರಭಾವಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಪ್ರಶ್ನೆಯಾಗಿದೆ. ಈ ಹೇಳಿಕೆಯನ್ನು ವಿವರಿಸುವುದು ಅಗತ್ಯವೆಂದು ತೋರುತ್ತದೆ.
ಕಾಮಿಕ್‍ ಧಾಟಿಯ ಬರಹದಲ್ಲಿ ಬರಹಗಾರರು ಓದುಗನ ಪ್ರತಿಕ್ರಿಯೆಯನ್ನು ಅಥವಾ ಧೋರಣೆಯನ್ನು ತಾವು ಅಪೇಕ್ಷೆಪಟ್ಟ ಕ್ರಮದಲ್ಲಿ ಪ್ರಭಾವಿಸುವ ಪ್ರಯತ್ನ ಮಾಡುವುದಿಲ್ಲ. ಕಾಮಿಕ್ ಧಾಟಿಯ ಬರಹ ವಸ್ತುನಿಷ್ಠವಾದದ್ದು. ಅಷ್ಟು ಮಾತ್ರವಲ್ಲ, ಯಾವುದೇ ಪಾತ್ರದೊಂದಿಗೆ ಓದುಗ ಭಾವನಾತ್ಮಕವಾಗಿ ತನ್ನನ್ನು ಗುರುತಿಸಿಕೊಳ್ಳದ ಹಾಗೆ ಆ ಪಾತ್ರಗಳ ಬಗ್ಗೆ ವ್ಯಂಗ್ಯದಿಂದ ಕೂಡಿದ ವಿವರಗಳನ್ನು ಕೊಡುವ ಶೈಲಿ ಇದಾಗಿದೆ. ಇದೇ ರೀತಿ ವರ್ಣನೆ ಮಾಡುವ ಘಟನೆಗಳಲ್ಲಿ ಓದುಗ ತನ್ಮಯನಾಗಿರಬಾರದೆಂದು ಆ ಘಟನೆಗಳ ಬಗ್ಗೆ ಕೂಡ ವ್ಯಂಗ್ಯ ದೂರವನ್ನು ಈ ಶೈಲಿ ನಿರ್ಮಿಸುತ್ತದೆ.
ಇದಕ್ಕೆ ವಿರುದ್ಧವಾಗಿ high mimetic ಶೈಲಿಯ ಬರಹಗಾರ ತಾನು ಬಳಸುವ ಭಾಷೆಯ ಮೂಲಕ ಕೆಲವು ಪಾತ್ರ ಹಾಗೂ ಸನ್ನಿವೇಶಗಳ ಬಗ್ಗೆ ಓದುಗ ಇತ್ಯಾತ್ಮಕವಾದ ಧೋರಣೆಯನ್ನು ತಾಳುವಂತೆ ಪ್ರೇರೇಪಿಸುತ್ತಾನೆ. ಉದಾಹರಣೆಗೆ ದುರಂತ ನಾಟಕಗಳಲ್ಲಿ ದುರಂತನಾಯಕ ಮಾಡುವ ತಪ್ಪುಗಳನ್ನು ಸ್ಪಷ್ಟವಾಗಿ ತೋರಿಸುವಾಗಲೂ ಕೂಡ ಎಲ್ಲಿಯೂ ಅವನು ಹಾಸ್ಯಾಸ್ಪದವೆಂದು ತೋರಿಸುವುದಿಲ್ಲ. ಎಲ್ಲೋ ಒಂದು ಕಡೆಗೆ ಅವನ ಜೊತೆಗೆ ನಮ್ಮನ್ನು ಗುರುತಿಸಿಕೊಂಡು ಭಾವನಾತ್ಮಕವಾಗಿ ಸ್ಪಂದಿಸುವಂತೆ ಈ ಧಾಟಿಯ ಬರಹ ನಮ್ಮನ್ನು ಒತ್ತಾಯಿಸುತ್ತದೆ.
‘ಕುಸುಮಬಾಲೆ’ ಕೃತಿಯಲ್ಲಿ ಗಂಭೀರ ಧ್ವನಿಯ (high mimetic) ಧಾಟಿಯೂ ಇದೆ. ಇದನ್ನು ಕೆಲವು ವಿಭಿನ್ನ ಉದಾಹರಣೆಗಳಲ್ಲಿ ಕಾಣಬಹುದು. ಮಾದನ ತಾಯಿಯಾದ ಅಕ್ಕಮಹಾದೇವಮ್ಮನ ಹಾದರದ ಕತೆ, ಅವನ ಮೇಲೆ ಆಗುವ ದೈಹಿಕ ಹಿಂಸೆಯ ವರ್ಣನೆ ಇವುಗಳು ಕಾಮಿಕ್ ಶೈಲಿಯಲ್ಲಿ ವರ್ಣಿತವಾಗಿವೆ. ಅಕ್ಕಮಹಾದೇವಮ್ಮ ಮತ್ತು ಯಾಡನ ಕತೆಗಳು ಜಾನಪದ ಕತೆಗಳಲ್ಲಿ ಬರುವ Trickster ಮತ್ತು Survivor ಪಾತ್ರಗಳ ಕತೆಗಳಂತಿವೆ. ಜಾನಪದ ಕತೆಗಳಲ್ಲಿ ಇಂಥ ಪಾತ್ರಗಳು ಅನೇಕ ರೀತಿಯ ಗೊಂದಲಗಳಲ್ಲಿ ಅಪಾಯಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಆದರೆ ತಮ್ಮ ಚಾಕಚಕ್ಯತೆಯಿಂದ, ಗತ್ತಿನಿಂದ ಪಾರಾಗುತ್ತವೆ. ಅಪಾಯಗಳನ್ನು ಧೀರೋದಾತ್ತ ನಾಯಕರುಗಳಂತೆ ನೇರವಾಗಿ ಈ ಪಾತ್ರಗಳು ಎದುರಿಸುವುದಿಲ್ಲ. ಬದಲಾಗಿ ಜಾಣತನದಿಂದ, ಸುಳ್ಳು ಹೇಳುವುದರಿಂದ, ಮೋಸಮಾಡುವುದರಿಂದ ಪಾರಾಗುತ್ತವೆ. ತಮ್ಮನ್ನು ತಾವೇ dramtise ಮಾಡಿಕೊಳ್ಳುವ ಪಾತ್ರಗಳು ಇವು. ‘ಕುಸುಮಬಾಲೆ’ಯಲ್ಲಿ ಅಕ್ಕಮಾದೇವಮ್ಮ ಮತ್ತು ಯಾಡ ಇಂಥ ಪಾತ್ರಗಳಾಗಿವೆ. ಇವರಿಗೆ ಸಂಬಂಧಿಸಿದ ಭಾಗಗಳಲಿ ಕಾಮಿಕ್ ಧಾಟಿಯ ಬರಹವನ್ನು ಕಾಣುತ್ತೇವೆ. ಆದರೆ ಕೆಂಪಿ ಮತ್ತು ಅವಳ ತಾಯಿ ತೂರಮ್ಮ ಕುಸಮಬಾಲೆಯ ಸ್ವಗತದ ಸನ್ನಿವೇಶದ ಭಾಗಗಳಲ್ಲಿ ವರ್ಣಿತವಾಗುವ ಅಂಶಗಳನ್ನು ಲಘುವಾಗಿ ನೋಡಲು ಬರಹಗಾರರು ಅವಕಾಶ ಕೊಡುವುದಿಲ್ಲ. ನಾನು ಪ್ರಸ್ತಾಪ ಮಾಡುತ್ತಿದ್ದ ವಿಷಯಕ್ಕೆ ಮರಳುವುದಾದರೆ, ಹಾದರ ಅಥವಾ ವರ್ಣಸಂಕರದ ಬಗ್ಗೆ ತಾಯಿ ಪಾತ್ರಗಳು ಸ್ಪಂದಿಸುವ ರೀತಿಯನ್ನು ‘ಕುಸುಮಬಾಲೆ’ ಕೃತಿಯಲ್ಲಿ ಗಂಭೀರ ಧ್ವನಿಯುಳ್ಳ ಧಾಟಿಯಲ್ಲಿ ವರ್ಣಿಸಲಾಗಿದೆ. ಈ ಧಾಟಿಯ ಬರಹಗಾರರು ಈ ತಾಯಿ ಪಾತ್ರಗಳ ಪರವಾಗಿ, ಅಂದರೆ ಅವರಲ್ಲಿ ಕಂಡು ಬರುವ ತಿಳುವಳಿಕೆಯ ಪರವಾಗಿ ಇದ್ದಾರೆಂದು ಸಾಬೀತು ಮಾಡುತ್ತದೆ. ಕೃತಿಯಲ್ಲಿ ಕಂಡುಬರುವ ಶೈಲಿ ವೈವಿಧ್ಯಗಳಲ್ಲಿ ಸ್ಪಷ್ಟವಾಗಿಯೇ ಒಂದು ಶ್ರೇಣಿ ಇದೆ. ಹೀಗಿರುವುದರಿಂದಲೇ ‘ಕುಸುಮಬಾಲೆ’ ಕೃತಿ ಗಂಭೀರವಾದ ಮೌಲ್ಯ ಪರಿಶೀಲನೆಯನ್ನು ಮಾಡುವ ಕೃತಿಯಾಗಿದೆ. ವರ್ಣ, ಜಾತಿ ಹಾಗೂ ನೀತಿಯ ಕಟ್ಟಳೆಗಳನ್ನು ಕಠೋರವಾಗಿ ಪಾಲಿಸುವುದರಿಂದ ಉಂಟಾಗುವ ಹಿಂಸೆಯನ್ನು ಈ ಕೃತಿ ವಿರೋಧಿಸುತ್ತದೆ ಮತ್ತು ಇವೆಲ್ಲವುಗಳನ್ನು ಮೂರ್ತವಾಗಿ ತಲೆಕೆಳಗು ಮಾಡುವ ಹಾದರದ ಸಂಬಂಧಗಳನ್ನು ಇತ್ಯಾತ್ಮಕವಾಗಿ ನೋಡುತ್ತದೆ. ಅಲ್ಲದೇ ಈ ಹಿಂಸೆಗೆ ಬಲಿಯಾಗುವ ವ್ಯಕ್ತಿಗಳನ್ನು, ಅವರ ಹತ್ತಿರದವರನ್ನು ಅತ್ಯಂತ ಸಹಾನುಭೂತಿಯಿಂದ ಈ ಕೃತಿ ನೋಡುತ್ತದೆ ಕುಸುಮಬಾಲೆ- ಚೆನ್ನ ಮತ್ತು ಚೆನ್ನನ ತಂದೆ-ತಾಯಿಯರ ಬಗ್ಗೆ ಕೃತಿ ಹೊಂದುವ ಗಂಭೀರ ಅನುಕಂಪದ ಧೋರಣೆಯನ್ನು ಗಮನಿಸಬೇಕು. ಒಟ್ಟಾರೆಯಾಗಿ “ಕುಸುಮಬಾಲೆ” ಕೃತಿ ಜಾತಿ ವ್ಯವಸ್ಥೆಯ ಹಿಂಸೆಯ ಬಗ್ಗೆ ಮತ್ತು ಅದಕ್ಕೆ ಬಲಿಯಾಗುವ ಮನುಷ್ಯ ವ್ಯಕ್ತಿಗಳ ಬಗ್ಗೆ Compassion ತೋರಿಸುವ ಅವಶ್ಯಕತೆಯ ಬಗ್ಗೆ ಇದೆ.
ಈ ಅಂಶವನ್ನು ಇಷ್ಟು ದೀರ್ಘವಾಗಿ ಪ್ರಸ್ತಾಪಿಸಲು ಕಾರಣವೆಂದರೆ ಹಲವಾರು ಸೂಕ್ಷ್ಮ ಮನಸ್ಸಿನ ಓದುಗರು ಕೂಡ ‘ಕುಸುಮಬಾಲೆ’ಯ ಹಿಂದೆ ತಾವು ಕಂಡಿರುವ ‘ಈಸ್ತೆಟಿಕ್’ ನಿಲುವಿನ ಬಗ್ಗೆ ಗುಮಾನಿ ಇಟ್ಟುಕೊಂಡಿದ್ಧಾರೆ. ಅಂದರೆ ಎಲ್ಲೋ ಮಹಾದೇವ ತಮ್ಮ ಬರಹದ ಶ್ರೀಮಂತಿಕೆಯ ವ್ಯಾಮೋಹದಲ್ಲಿ ಗಂಭೀರವಾದ ಮೌಲ್ಯ ಸಾಧನೆ, ನಿಷ್ಕರ್ಷೆ – ಇವುಗಳನ್ನು ಮರೆತುಬಿಡುತ್ತಾರೆ ಎನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಕೃತಿಯಲ್ಲಿ ಮಹಾದೇವ ಬರಹದ ಬಹುಮುಖತ್ವ, ಬಹುಧ್ವನಿಗಳ ನೆಪ ಬಳಸಿಕೊಂಡು ಯಾವುದರ ಬಗ್ಗೆಯೂ ಖಚಿತವಾದ ನಿಲುವು ತಾಳುವುದಿಲ್ಲ ಎನ್ನುವ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದಲೇ ಇವರಿಗೆ ‘ಕುಸುಮಬಾಲೆ’ಯ ಕಲೆಗಾರಿಕೆ, ಕುಸುರಿ ಕೆಲಸ ಇವೆಲ್ಲವೂ ‘ಈಸ್ತೆಟಿಕ್’ ಆಗಿ ಕಂಡಿವೆ. (ಇಲ್ಲಿ ಈಸ್ತೇಟಿಕ್ ಅಂದರೆ ಮೌಲ್ಯಗಳ ಬಗ್ಗೆ ತಟಸ್ಥವಾಗಿರುವ ಅಥವಾ ಸಾಪೇಕ್ಷವಾದ ಧೋರಣೆ ಹೊಂದಿರುವ ನಿಲುವು ಎಂದು ಅರ್ಥಮಾಡಿಕೊಳ್ಳಬೇಕು.)
‘ಕಂಬಾರರಲ್ಲಿ ಕೊನೆಯ ಪಕ್ಷ ಒಂದು ನಂಬಿಕೆಯ ಸ್ಥಿತಿಯನ್ನು ಕಾಣ್ತೇವೆ. ಆದರೆ ಮಹಾದೇವರ ‘ಕುಸುಮಬಾಲೆ’ಯಲ್ಲಿ ಬಹಳ ತೀವ್ರವಾದ ಸೌಂದರ್ಯಾತ್ಮಕ ತಂತ್ರ ಕಾಣ್ತೇವಿ. ಅಂದ್ರೆ ಮಹಾದೇವ ನಿಜವಾಗಿಯೂ ನಂಬಿ, ಆ ನಿರೂಪಣಾ ತಂತ್ರಗಳ ಹಿಂದೆ ಇರುವ ಶ್ರದ್ಧೆ ಏನಿರುತ್ತೆ ಅದರಲ್ಲಿ ತನ್ಮಯವಾಗಿ ಬರೀತಾ ಇದಾನೆ ಅನ್ನಿಸಲ್ಲ’ (ಡಿ.ಆರ್.ನಾಗರಾಜ: ‘ಸಾಹಿತ್ಯ ಕಥನ’ ಪುಟ 85).
ಈ ಮಾತುಗಳನ್ನು ಆಡುವಾಗ ಡಿ.ಆರ್.ಅವರ ಮನಸ್ಸಿನಲ್ಲಿದ್ದುದು ‘ಕುಸುಮಬಾಲೆ’ ಬಳಸುವ ನಿರೂಪಣಾತಂತ್ರಗಳ ವೈವಿಧ್ಯ. ಇವು ನವ್ಯಪೂರ್ವ ಅಥವಾ ಪರಂಪರೆಗೆ (ಅದರಲ್ಲೂ ಮೌಖಿಕ ಪರಂಪರೆಗಳಿಗೆ) ಸೇರಿರುವಂಥವು. ಅವುಗಳನ್ನು ಮಹಾದೇವಿ ಕಲೆಗಾರಿಕೆಗಾಗಿ ಬಳಸಿಕೊಂಡಿದ್ದಾರೆಯೆ ಹೊರತು ಆ ನಿರೂಪಣಾ ತಂತ್ರಗಳ ಹಿಂದಿರುವ ಜೀವನದೃಷ್ಟಿ (ಡಿ.ಆರ್. ಅದನ್ನು ‘ಶ್ರದ್ಧೆ’ ಎಂದು ಕರೆದಿದ್ದಾರೆ)ಯ ಬಗ್ಗೆ ತಟಸ್ಥರಾಗಿದ್ದಾರೆ ಎನ್ನುವುದು ಅವರ ವಾದವಾಗಿದೆ.
ನನಗೆ ತೋರಿದಂತೆ ಇದು ನಿಜವಲ್ಲ. ‘ಕುಸುಮಬಾಲೆ’ ಕೃತಿಯಲ್ಲಿ ಕಂಡು ಬರುವ ಶೈಲಿಗಳ ವೈವಿಧ್ಯ ತಟಸ್ಥ ನಿಲುವಿನಿಂದ ಹುಟ್ಟಿರುವುದಿಲ್ಲ. ಅಂದರೆ, ‘ಹಲವಾರು ಶೈಲಿಗಳು, ನಿರೂಪಣಾ ತಂತ್ರಗಳು ನನಗೆ ಲಭ್ಯವಿದ್ದು ಅವೆಲ್ಲವನ್ನೂ ಸಮಾನವಾಗಿ ಬಳಸುತ್ತೇನೆ ಎನ್ನುವ ಧೋರಣೆಯಿಂದ ಹುಟ್ಟಿರುವ ವೈವಿಧ್ಯವಿದಲ್ಲ. ಈ ಶೈಲಿಗಳ ನಡುವೆ ಒಂದು ಶ್ರೇಣಿ (hierarchy) ಇದೆ. ಈ ಶ್ರೇಣಿಯನ್ನು ಪರಿಶೀಲಿಸಿದಾಗ ಮಹಾದೇವರು ಕೆಲವು ಬಗೆಯ ಶ್ರದ್ಧೆಗಳ ಬಗ್ಗೆ ಇತ್ಯಾತ್ಮಕವಾದ ನಿಲುವನ್ನು ತಾಳಿರುವುದು ಸ್ಪಷ್ಟವಾಗಿದೆ. ಆದರೆ ನನ್ನ ದೃಷ್ಟಿಯಲ್ಲಿ ಈ ಶ್ರದ್ಧೆಯೆನ್ನುವುದು ಕೂಡ ಒಂದು ಬಗೆಯ ತಿಳುವಳಿಕೆ. ಗಂಡು-ಹೆಣ್ಣಿನ ಸಂಬಂಧಗಳ ಅನಿರೀಕ್ಷಿತ ರೂಪಗಳ ಬಗ್ಗೆ, ಬದುಕಿನ ಸಾತತ್ಯದ ಬಗ್ಗೆ ಹಾಗೂ ಒಟ್ಟಾರೆ ಈ ವಿಶ್ವದ ಜೀವಜಾಲದ ಬಗ್ಗೆ ಇರುವ ಗಾಢವಾದ ತಿಳುವಳಿಕೆ ಇದಾಗಿದೆ.ಇದಕ್ಕೆ ವೈದೃಶ್ಯವಾಗಿ ಇಂಥ ಯಾವ ಸೂಕ್ಷ್ಮತೆಯೂ ಇರದ ಒರಟಾದ ಹಿಂಸೆಗೆ ಸುಲಭವಾಗಿ ಇಳಿಯುವ ‘ಗಂಡು’ ಧೋರಣೆಗಳನ್ನು ‘ಕುಸುಮಬಾಲೆ’ ಪರಿಶೀಲಿಸುತ್ತದೆ. ವೈದೃಶ್ಯದಲ್ಲಿ ಬರಹಗಾರರ ಖಚಿತವಾದ ಆಯ್ಕೆ ಯಾವುದರ ಪರವಾಗಿದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.
ನಿರಚನವಾದದ ದೃಷ್ಟಿಯಲ್ಲಿ ಎರಡು ಮಾತುಗಳನ್ನು ಹೇಳಲೇಬೇಕು. ಯಾವುದೇ ಬರಹವೂ ತಟಸ್ಥವಲ್ಲ; ಅಥವಾ ಈಸ್ತೆಟಿಕ್ ಅಲ್ಲ. ಎಲ್ಲ ಬಗೆಯ ಬರಹವೂ ಒಂದು ಉದ್ದೇಶವನ್ನು ಹೊಂದಿಯೇ ಇರುತ್ತದೆ. ಈ ಒಂದು ಕೃತಿಯಲ್ಲಿ ಕಂಡು ಬರುವ ಶೈಲಿಗಳ ವೈವಿಧ್ಯವೆಂದರೆ ಶೈಲಿಗಳ ಪ್ರಜಾಪ್ರಭುತ್ವವಲ್ಲ; ಒಂದು ಶೈಲಿ ಇತರ ಶೈಲಿಗಳನ್ನು ನಿಯಂತ್ರಿಸುವ ಹವಣಿನಲ್ಲಿ ಇದ್ದೇ ಇರುತ್ತದೆ. ಅಥವಾ ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವಿವಿಧ ಶೈಲಿಗಳು ತಮ್ಮದೇ ಆದ ಶ್ರೇಣಿಯೊಂದನ್ನು ನಿರ್ಮಿಸಿಕೊಂಡಿರುತ್ತದೆ. ಅತ್ಯಂತ ಹೆಚ್ಚಿನ ಬಹುಧ್ವನಿಯುಳ್ಳ ಕೃತಿಯಲ್ಲಿ ಕೂಡ ಧ್ವನಿಗಳ ಅರಾಜಕತೆ ಇರುವುದಿಲ್ಲ.
‘ಕುಸುಮಬಾಲೆ’ ಮಾತ್ರವಲ್ಲ ‘ಒಡಲಾಳ’ದಲ್ಲಿ ಕೂಡ ಈ ಲಕ್ಷಣ ಕಂಡು ಬರುತ್ತದೆ. ಕಾಮಿಕ್ ಶೈಲಿಯ ಜೊತೆಗೆ ಗಂಭೀರ ಶೈಲಿಯ ಪೈಪೋಟಿ ಅಲ್ಲಿಯೂ ಇದೆ. ಅಲ್ಲಿಯೂ ಕೂಡ ಅಂತಃಕರಣದಲ್ಲಿ ಹುಟ್ಟುವ ವ್ಯಂಗ್ಯವು ನಿರೂಪಣೆಯನ್ನು ಆವರಿಸಿಕೊಂಡಿದೆ. ಆದರೆ ಈ ವ್ಯಂಗ್ಯ ಎಲ್ಲವನ್ನೂ ತಟಸ್ಥವಾಗಿ ನೋಡುವ ವ್ಯಂಗ್ಯವಲ್ಲ. ಕೃತಿಯ ಉದ್ದಕ್ಕೂ ಸಾಕವ್ವನ ಹಟ್ಟಿಯ ಸುತ್ತಲೂ ಹಬ್ಬಿಕೊಂಡಿರುವ ವ್ಯವಸ್ಥೆಯ ಬಗ್ಗೆ, ಅದರ ಕ್ರೌರ್ಯದ ಬಗ್ಗೆ ವಿಶ್ಲೇಷಣೆ ಇದ್ದೇ ಇದೆ. ಮಹಾದೇವರ ಬರಹ ಕೇವಲ ದಲಿತ ಬದುಕಿನ ಇತ್ಯಾತ್ಮಕ ಸಾಧ್ಯತೆಗಳ ಮೇಲೆ ಕೇಂದ್ರೀಕೃತವಾಗಿರುವುದರಿಂದ ವ್ಯವಸ್ಥೆಯ ಕರಾಳ ಮುಖಗಳ ಬಗ್ಗೆ ಅಷ್ಟು ತೀವ್ರವಾಗಿ ಸ್ಪಂದಿಸುವುದಿಲ್ಲ ಎನ್ನುವುದು ತಪ್ಪು ನಿರ್ಣಯವಾಗುತ್ತದೆ. ಹಾಗೆಯೇ ‘ಕುಸುಮಬಾಲೆ’ ಕೃತಿಯಲ್ಲಿ ಕೂಡ ಗಮನ ಕೇಂದ್ರದಲ್ಲಿರುವುದು ‘ಹೆಣ್ಣು ಜಗತ್ತು’ ಇಲ್ಲಿ ಪ್ರತಿಭಟನೆಗಿಂತ ಹೆಚ್ಚಾಗಿ ಅಂತಃಕರಣ ಕೆಲಸ ಮಾಡುತ್ತದೆ. ಆದರೂ ಕೂಡ ಕತೆಯ ಮೂಲಹಂದರವೇ ವರ್ಣಸಂಕರ(ಹಾದರ)ದ ಭಯದಿಂದ ಹುಟ್ಟುವ ಹಿಂಸೆಯನ್ನು ಆಧರಿಸಿದೆ ಎನ್ನುವುದನ್ನು ಮರೆಯಬಾರದು. ಚೆನ್ನನ ಕೊಲೆ ಕತೆಯಲ್ಲಿ ಹೆಚ್ಚಿನ ಇಂಬು ಪಡೆಯದೇ ಇದ್ದರೂ ಇಡೀ ಕಥಾನಕದ ಕ್ರಿಯೆಯ ಮೂಲವೇ ಆಗಿದೆ. ಅದೇ ರೀತಿ ಕೃತಿಯ ಕೊನೆಯ ಭಾಗದಲ್ಲಿ ದಸಂಸದ ಮೆರವಣಿಗೆಯ ಗಾಂಭೀರ್ಯ ಗಾರಸಿದ್ಮಾವನ ವಿಚಿತ್ರ ಲವಲವಿಕೆಯಿಂದಾಗಿ ನಿರಚನಗೊಳ್ಳುತ್ತದೆಯೆನ್ನುವುದು ನಿಜವಾದರೂ ಆ ಮೆರವಣಿಗೆಗೆ ಕಾರಣವಾಗಿ ಜಾತಿ ವ್ಯವಸ್ಥೆಯಿಂದ ಹುಟ್ಟುವ ಹಿಂಸೆಯಿದೆ.
ಇದಕ್ಕೆ ಸಂಬಂಧಿಸಿದ ಹಾಗೆ ಕೃತಿಯಲ್ಲಿ ಬರುವ ‘ತಲತಲಾಂತರದ ನನ್ನಿ’ಯ ಭಾಗವನ್ನು ಪರಿಶೀಲಿಸಬಹುದು. ಕುರಿಯಯ್ಯನ ಮೂಲಕ ತಲತಲಾಂತರದ ನನ್ನಿಯನ್ನು ನುಡಿಸುವುದು ಇದನ್ನು ಕೇವಲ ಒಂದು ‘ಕಾಮಿಕ್’ ಎಪಿಸೋಡ್ ಎಂದು ಭಾವಿಸಲಾಗಿದೆ. ದ.ಸಂ.ಸದ ಕಾರ್ಯಕರ್ತರು ಸದ್ಯದ ರಾಜಕೀಯವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಮೆರವಣಿಗೆ, ಹೋರಾಟದ ಪಾರಿಭಾಷಿಕಗಳು (ಉದಾ: Contradiction). ಪೂರ್ವಿಕನಾದ ಗಾರಸಿದ್ಮಾವನಿಗೆ ವಿಚಿತ್ರವಾಗಿ ಕಾಣುತ್ತವೆ. ಕುತೂಹಲದ ಸಂಗತಿಯೆಂದರೆ ಅವನನ್ನು ‘ಪೂರ್ವಿಕ’ನೆಂದು ವರ್ಣೀಸಲಾಗಿದೆ. ‘ಕುಸುಮಬಾಲೆ’ಯ ಭಿತ್ತಿಯಲ್ಲಿ ಸಮಕಾಲೀನ ಜಗತ್ತಿನ ಚಿತ್ರಗಳು ವಿವರಗಳು ಸೇರಿಕೊಂಡಂತೆ ‘ಪೂರ್ವ’ದ ಇಂಥ ಪ್ರಸ್ತಾಪಗಳು ಸೇರಿಕೊಂಡಿವೆ. ಮುಖ್ಯವಾಗಿ ಗಮನಿಸಬೇಕಾಗಿರುವದೆಂದರೆ, ಈ ಹಿಂದೆ ಹೇಳಿದಂತೆ ಶೈಲಿಗಳ ಶ್ರೇಣಿಯನ್ನು ಆಧಾರವಿಟ್ಟುಕೊಂಡು ನೋಡಿದರೆ ಕೃತಿ ‘ತಲತಲಾಂತರದ ನನ್ನಿ’ಯ ಕಡೆಗೆ ವಾಲುವಂತೆ ಕಾಣುತ್ತದೆ. ಆ ನನ್ನಿಯ ಎದುರಿಗೆ ದ.ಸಂ.ಸ ಕಾರ್ಯಕರ್ತರು ‘ಲವೊ ಲವೊ’ ಎಂದು ಕೂಗುವ ಕೂಸುಗಳ ಹಾಗೆ ಕಂಡುಬರುತ್ತಾರೆ. ಈ ಕಾಮಿಕ್ ಧಾಟಿಯ ಬರಹದಿಂದಾಗಿ ದ.ಸಂ.ಸಯನ್ನು ಲಘುವಾಗಿ ನೋಡಲಾಗಿದೆಯೆಂದು ನಾನು ಹೇಳುತ್ತಿಲ್ಲ. ಅದು ನಿಜವಲ್ಲ, ಆದರೆ ತಲತಲಾಂತರದ ‘ನನ್ನಿ’ಗೆ ಕೃತಿಯು ಹೆಚ್ಚಿನದಾದ ವಿಶಿಷ್ಟಸ್ಥಾನವನ್ನು ಕೊಡುತ್ತದೆ ಎನ್ನುವುದನ್ನು ಅಲ್ಲಗಳೆಯಲಾಗದು. ಕಥೆಯ ಪ್ರಧಾನ ವಸ್ತುವಾಗಿರುವ ವರ್ಣಸಂಕರವನ್ನು ಈ ನನ್ನಿ ಒಂದು ಕಾಣ್ಕೆಯ ರೂಪದಲ್ಲಿ ವಿವರಿಸುತ್ತದೆ.
ಈ ನನ್ನಿಯ ನಿರೂಪಣೆಯಲ್ಲಿ ಕೂಡ ಗಂಡು ಹೆಣ್ಣುಗಳ ಸಂಬಂಧಗಳು ವರ್ಣಪದ್ಧತಿಯ ಕಟ್ಟಳೆಗಳನ್ನು ಮುರಿಯುತ್ತವೆ. ಇದು ಜಾತಿಗಳ ಮಧ್ಯದ ದ್ವೇಷಕ್ಕೂ ಕಾರಣವೆಂದು ಕೂಡ ವಿವರಿಸಲಾಗಿದೆ. ಇನ್ನೊಂದು ರೀತಿಯಲ್ಲಿ ನೋಡಿದರೆ, ಸಮಕಾಲೀನವೆಂದು ನಾವು ಗ್ರಹಿಸಬಹುದಾದ ವ್ಯವಸ್ಥೆಯ ಏರುಪೇರುಗಳ ಹಿಂದೆ ತಲತಲಾಂತರದ ಕಾಣ್ಕೆಯನ್ನು ಸರಿಸಮವಾಗಿ ಮಹಾದೇವರು ಕೃತಿಯಲ್ಲಿ ತಂದಿದ್ದಾರೆಯೇ? ಅಥವಾ ಕೃತಿಯಲ್ಲಿ ಎರಡು ‘ಪಠ್ಯ’ಗಳಿದ್ದು (texts ಅನ್ನುವ ಅರ್ಥದಲ್ಲಿ) ಒಂದು ಇನ್ನೊಂದನ್ನು ನಿರಚಿಸುತ್ತದೆಯೇ? ಅಥವಾ ಈ ಎರಡೂ ಪಠ್ಯಗಳು ಒಟ್ಟಿಗೆ ಕೃತಿಯಲ್ಲಿದ್ದು ಅವೆರಡನ್ನು ಮೇಳವಿಸಿಕೊಂಡು ಕೃತಿಯು ಹೆಚ್ಚು ಸಮಗ್ರವಾದ ಇನ್ನೊಂದು ಅರ್ಥವಂತಿಕೆಯನ್ನು ಪಡೆಯುತ್ತದೆಯೆ? ಇದು ಸಂದಿಗ್ಧದ ವಿಷಯವಾಗಿದೆ. ಚೆನ್ನ ಹಾಗೂ ಕುಸುಮಬಾಲೆಯರ ನಡುವಿನ ಸಂಬಂಧವು ಚೆನ್ನನ ಕೊಲೆಯಲ್ಲಿ ಪರ್ಯವಸಾನಗೊಳ್ಳುತ್ತದೆ. ಆದರೆ ಇದರ ಮೂಲಕ ಶೈಲಿ ಎತ್ತುವ ಪ್ರಶ್ನೆಗಳು ಪರಿಹಾರವಾದಂತೆ ಅನ್ನಿಸುವುದಿಲ್ಲ. ಈ ಕೊಲೆ ಯಾರಿಗೂ “ಅರಿವಾಗದೋಪಾದಿಯಲ್ಲಿ” ನಡೆದುಬಿಡುತ್ತದೆ. ದ.ಸಂ.ಸ.ದ ಮೆರವಣಿಗೆಗೂ ಈ ಮುಖ್ಯ ಘಟನೆಗೂ ಸಂಬಂಧವಿಲ್ಲದಿರುವುದರಿಂದ ಚೆನ್ನನ ಕೊಲೆ ಕತೆಯ ಮೂಲದಲ್ಲಿದ್ದೂ ತನ್ನ ಕೇಂದ್ರಸ್ಥಾನವನ್ನು ಕಳೆದುಕೊಂಡಂತಾಗುತ್ತದೆ. ಚೆನ್ನನು ಬದುಕಿದ್ದಾನೆ. ಬೊಂಬಾಯಿಯಲ್ಲಿ ತ್ರೀಸ್ಟಾರ್ ಹೊಟೇಲಿಟ್ಟಿದ್ದಾನೆ- ಇವೇ ಮುಂತಾದ ಕತೆಗಳು ಅವನ ಬಗ್ಗೆ ಹುಟ್ಟಿಕೊಂಡು ಅವನಿಗೆ ಸಾವನ್ನು ಮೀರಿದ ವರ್ಚಸ್ಸು ಬರುತ್ತದೆ. ಅವನ ತಂದೆ-ತಾಯಿಯರು ಅವನಿಗಾಗಿ ಕಾಯುತ್ತ ‘ಸಂಬಂಜ ಎನ್ನುವುದು ದೊಡ್ಡದು ಕನಾ’ ಎಂದು ನಂಬಿಕೊಂಡಿರುವುದು ‘ಕುಸುಮಬಾಲೆ’ಯ ಅಪೂರ್ವವಾದ ಭಾಗಗಳಲ್ಲೊಂದಾಗಿದೆ. ಸಂಬಂಧಗಳಿಗಿಂತ ಅವುಗಳನ್ನು ನೆಚ್ಚಿಕೊಂಡಿರುವ ಶ್ರದ್ಧೆ ಬಹಳ ದೊಡ್ಡದು ಎನ್ನುವ ಭಾವನೆ ಇಲ್ಲಿ ಪ್ರಬಲವಾಗಿ ವ್ಯಕ್ತವಾಗಿದೆ. ಈ ಶ್ರದ್ಧೆಯನ್ನು ಬಹಳ ಇತ್ಯಾತ್ಮಕವಾಗಿ ನೋಡಲಾಗಿದೆ. ಆದರೆ ಈ ಶ್ರದ್ಧೆ, ನಡೆದಿರುವ ಕೊಲೆಯ ವಾಸ್ತವಿಕ ಹಿನ್ನೆಲೆಯಲ್ಲಿ, ಮನಮಿಡಿಯುವ ಚರಮಗೀತೆಯನ್ನು ಸೃಷ್ಟಿಸಬಲ್ಲದೆ ಹೊರತು ಪರಿಹಾರವನ್ನು ತರಲಾರದು. ಹೀಗಾಗಿ ಕೃತಿಯ ಕೊನೆಗೆ ಚೆನ್ನನ ಕೊಲೆಯ ಪುರಾವೆಯಾಗಿದ್ದ ರಕ್ತದ ಬೊಟ್ಟು ಕೂಡ ಅಳಿಸಿಹೋಗುತ್ತವೆ. ಪ್ರಧಾನವಾಗಿ ಕಾಮಿಕ್ ಶೈಲಿಯಲ್ಲಿ ಇರುವ ಈ ಕೃತಿ ಮುಗಿಯುವುದು ವಿಷಾದ ಹುಟ್ಟಿಸುವ ಚರಮಗೀತೆಯೊಂದರ ಧಾಟಿಯಲ್ಲಿ ಎನ್ನುವುದನ್ನು ಗಮನಿಸಬೇಕು. ಘಟನೆಗೆ ಕಾರಣವಾದ ವ್ಯವಸ್ಥೆಯೊಳಗಿನ ಹಿಂಸೆಯನ್ನು ನುಂಗಿಕೊಂಡು, ಕಥಾನಕವು ದುಃಖವನ್ನು Universalise ಮಾಡಿಬಿಟ್ಟು ಚರಮಗೀತೆಯ ಆಸರೆಯನ್ನು ಹೊಕ್ಕುಬಿಡುತ್ತದೆಯೆ?ಅನುಭವವನ್ನು ಮೂರ್ತ ಹಾಗೂ ಸ್ಥಳೀಯಗೊಳಿಸುವ ಒಂದು ಪ್ರಕ್ರಿಯೆ, ಸಾರ್ವತ್ರಿಕಗೊಳಿಸುವ ಇನ್ನೊಂದು ಪ್ರಕ್ರಿಯೆ, ಇವೆರಡೂ ಕೃತಿಯೊಳಗೆ ಪ್ರಬಲವಾಗಿವೆ. ಅವುಗಳ ಮಧ್ಯೆ ಇರುವ ನಾಜೂಕಾದ ಸಮತೂಕ ಕೊನೆಗೆ ಸಾರ್ವತ್ರಿಕಗೊಳಿಸುವ ಕಡೆಗೆ ಸ್ವಲ್ಪ ವಾಲಿಬಿಡುತ್ತದೆಯೆ? ಹಾಗೆ ಆಗಿರುವುದಾದರೆ ಅದರ ಒಟ್ಟಾರೆ ಪರಿಣಾಮಗಳೇನು? ದಲಿತ ಅನುಭವದ ನಮ್ಮ ಗ್ರಹಿಕೆಯನ್ನು ಕನ್ನಡದ ಪ್ರಭಾವಶಾಲಿ ಸಾಂಸ್ಕೃತಿಕ ಪಠ್ಯವಾದ ‘ಕುಸುಮಬಾಲೆ’ ಪ್ರಭಾವಿಸುವ ರೀತಿ ಎಂಥದು?
ಈ ಪ್ರಶ್ನೆಗಳನ್ನು ಎದುರಿಗಿಟ್ಟು ‘ಕುಸುಮಬಾಲೆ’ಯ ನಿರಚನವಾದಿ ಓದು, ಮುರು ಓದಿಗೆ ಇಂಬು ಮಾಡಿಕೊಡುತ್ತದೆ.