ಮಾನವ ಸಹಜ ಪ್ರೇಮ

chdurangaಪ್ರೀತಿಯ ಮಹಾದೇವ,

ನಾನೇನು ವಿಮರ್ಶಕನಲ್ಲ, ಕೇವಲ ಒಬ್ಬ ಸಹೃದಯ ಓದುಗನಾಗಿ ನಿಮ್ಮ ‘ಕುಸುಮಬಾಲೆ’ ಕಾದಂಬರಿ ಓದಿದೆ. ನಂಜನಗೂಡು ಪ್ರದೇಶದ ಜನತೆಗೂ ನನಗೂ ಬಾಲ್ಯದಿಂದ ನಿಕಟ ಸಂಬಂಧವಿದ್ದುದರಿಂದ ಭಾಷೆ ಅಷ್ಟಾಗಿ ತೊಡಕಾಗಲಿಲ್ಲ. ಪ್ರತಿಯಾಗಿ ಮೆಚ್ಚುಗೆಯಾಯ್ತು. ವಾಸ್ತವದ ಸಂಗತಿಯೆಂದರೆ ಇಲ್ಲಿನ ಭಾಷೆ ಕಾದಂಬರಿಯ ಪ್ರಧಾನಾಂಶಗಳಲ್ಲಿ ಒಂದು. ಹೊಯ್ಸಳ ಶಿಲ್ಪಿಗಳು ಕಲ್ಲನ್ನು ಮೇಣ ಎನ್ನುವ ಹಾಗೆ ಉಪಯೋಗಿಸಿರುವಂತೆ ಇಲ್ಲಿ ಭಾಷೆಯನ್ನು  ನೀವು ಲೀಲಾಜಾಲವಾಗಿ, ಮುಕ್ತವಾಗಿ ನಿರ್ಭಿಡೆಯಿಂದ ಬಳಸಿದ್ದೀರಿ. ಗದ್ಯ ಇಲ್ಲಿ ಕಾವ್ಯದ ಮಟ್ಟಕ್ಕೇರಿದೆ. ದ್ಯಾವನೂರು ಕತೆಗಳಲ್ಲಿ, ಒಡಲಾಳದಲ್ಲಿ ಪ್ರಕಟಗೊಂಡ ಸಮರ್ಥ ಭಾಷೆ ಇಲ್ಲಿ ಇನ್ನೂ ಹೆಚ್ಚಿನ ಸುಭಗತೆಯಿಂದ ಮೈದಾಳಿ ವಿಜೃಂಭಿಸಿದೆ. [ಆದರೆ ಕೆಲವರಿಗೆ ಅದರಲ್ಲೂ ಪಟ್ಟಣದವರಿಗೆ ಅದರಲ್ಲೂ ನಾಡಿನ ಬೇರೆ ಬೇರೆ ಪ್ರದೇಶದ ಜನಕ್ಕೆ ಈ  ಭಾಷೆ ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಉಕ್ತಿ ಸಂಪತ್ತು ಸುಲಭವಾಗಿ ಗ್ರಾಹ್ಯವಾಗದೇ ಹೋಗಬಹುದು. ಅದಕ್ಕಾಗಿ ಮತ್ತೆ ಮತ್ತೆ ಓದುವ ಪ್ರಯತ್ನ ನಡೆಸಬೇಕಾದೀತು. ಎತ್ತರದ ಬೆಟ್ಟವನ್ನು ಶ್ರಮವಹಿಸಿ ಹತ್ತಿದ ಮೇಲಲ್ಲವೇ ಕೆಳಗೆ ಬುಡದಾಚೆಗೆ ಹರಡಿಕೊಂಡಿರುವ ವೃಕ್ಷರಾಜಿಯ ಸೌಂದರ್ಯ ಗೋಚರವಾಗುವುದು!]


ನಿಮ್ಮ ಎಲ್ಲ ಕೃತಿಗಳಂತೆ ಈ ಕಾದಂಬರಿಯಲ್ಲಿಯೂ ಮುಖ್ಯವಾಗುವುದು ನಿಮ್ಮ ಎದೆಯಲ್ಲಿ ತುಂಬಿರುವ ಸಹಜ ಮಾನವ ಪ್ರೇಮ. ಕುಸುಮಬಾಲೆ ಎಂದು ಕರೆಯುವುದರಲ್ಲಿಯೇ ಒಂದು ಮಾರ್ದವತೆ ಇದೆ. ಅವಳು ಕುಸುಮದಂತೆ ಕೋಮಲಳು, ಪರಿಮಳಭರಿತಳು, ಜೊತೆಗೆ ಬಾಲೆ, ಮುಗ್ದ, ಅಮಾಯಕಳು, ಕೂಸುಯಾಡನನ್ನು’ಯಾಡಕಂದ’ ಎಂದು ಕರೆಯುವಾಗ, ಅಲ್ಲುಗ ಭೂಮಿತಾಯಿಯ ತನ್ನೇಡು ರೆಕ್ಕೆಗಳೂ ತೆಂಗಿನ ಗರಿಯ ರೂಪದಲ್ಲಿ ಬರುವಂತಾಗಲು ಅಕ್ಕ ಮಾದೇವಮ್ಮ ಯಾಡರು ಕೂತ ಜಾಗವು ಅಲ್ಲುಗ ನೆರಳಾಯ್ತು’ ಎನ್ನುವಾಗ ಎಂಥಾ ಆಧಾರ ತಪ್ಪಿದ ತಬ್ಬಲಿಗಳ ಬಗೆಗೆ ನಿಮ್ಮೊಳಗಿರುವ ಪ್ರೀತಿಯೇ ಇಲ್ಲಿ [ಹೀಗೆಯೇ ಇನ್ನೂ ಎಷ್ಟೋ ಸಂದರ್ಭಗಳಲ್ಲಿ ಪ್ರಕಟಗೊಳ್ಳುವ ಹಾಗೆ] ಸಹಾನುಭೂತಿ ಉಕ್ಕಿಸುವ ನುಡಿಮುತ್ತುಗಳಾಗಿವೆ. ಇಡೀ ಕತೆ ಜಾನಪದದ ಉಡಿಗೆ ತೊಟ್ಟಿರುವುದರಿಂದ ಶೋಷಿತ ಜನಾಂಗದ ನೋವಿಗೆ ಚೈತನ್ಯ ತುಂಬುವುದರ ಜೊತೆಗೆ ಕಲಾತ್ಮಕತೆಯ ಸೌರಭವನ್ನು ಪಡೆದುಕೊಂಡಿದೆ. ಮುಳ್ಳೂರು ನಾಗರಾಜ, ದೇವಯ್ಯ ಹರವೆ, ಬಿ.ಕೃಷ್ಣಪ್ಪ ಇತ್ಯಾದಿ ದಲಿತ ಸಂಘರ್ಷ ಸಮಿತಿಯ ಸಮಕಾಲೀನ ಮುಖಂಡರನ್ನು ಜಾನಪದ ಮಾಡಿ ಉಪಯೋಗಿಸಿರುವುದಂತೂ ಕಾದಂಬರಿಯ ಸೃಷ್ಟಿಯಲ್ಲಿ ನೀವಿಟ್ಟಿರುವ ದಿಟ್ಟ ಹೆಜ್ಜೆಯಾಗಿದೆ.
ಕಾದಂಬರಿಯ ಕ್ಷೇತ್ರದಲ್ಲಿ ಇದೊಂದು ಹೊಸ ಹುಟ್ಟು. ಕೊಳೆತ ಪರಂಪರೆಗೆ ಕಸಿ ಮಾಡಿ ದಿಕ್ಕು ಬದಲಿಸುವ ಕ್ರಿಯೆ. ಹೊಸ ದಿಗಂತದತ್ತ ಮುಖ ಮಾಡಿರುವ ಪ್ರತಿಬಾಪೂರ್ಣ ಕೃತಿ. ಇದಕ್ಕಾಗಿ ನನ್ನ ಅಭಿನಂದನೆ ಸ್ವೀಕರಿಸಿ.

ನಿಮ್ಮ

ಚದುರಂಗ

[ಪತ್ರದಿಂದ]