ಕುವೆಂಪು ರಾಷ್ಟ್ರೀಯ ಪ್ರಶಸ್ತಿ- 2016ರ ಅಭಿನಂದನಾ ಭಾಷಣ ರಾಜೇಂದ್ರ ಚೆನ್ನಿಯವರಿಂದ

 

 

Devanur for screen-8

ಮೊದಲನೆಯದಾಗಿ ಇಂದು ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆಯುತ್ತಿರುವ ದೇವನೂರು ಮಹಾದೇವರಿಗೆ ಎಲ್ಲರ ಪರವಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಮಕಾಲೀನ ಭಾರತೀಯ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ, ಕನ್ನಡ ಸಂವೇದನೆಯ, ಭಾಷೆಯ ಹಾಗೂ ಕಥನದ ಬಹು ಮಹತ್ವದ ಪಲ್ಲಟವೊಂದರ ಪ್ರತಿನಿಧಿಯೂ ಮತ್ತು ಸೃಜನಶೀಲ ಕಾರಣಕರ್ತರೂ ಆಗಿರುವ ಮಹಾದೇವರು, ಕನ್ನಡದ ಇಂಥದೇ ಒಂದು ಮಹಾಪಲ್ಲಟದ ಕಾರಣಕರ್ತರಾದ ಕುವೆಂಪು ಅವರ ಹೆಸರಿನ ಪ್ರಶಸ್ತಿಯನ್ನು ಪಡೆಯುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಹಾಗೂ ಔಚಿತ್ಯಪೂರ್ಣವಾಗಿದೆ. ಮನುಷ್ಯಪರವಾದ, ಸ್ಥಳೀಯ ಚೈತನ್ಯವನ್ನು ನೆಚ್ಚಿಕೊಂಡಿರುವ, ಪ್ರಾದೇಶಿಕ ಸಂಸ್ಕೃತಿಯ ಮೂರ್ತವಾದ ಚರಿತ್ರೆಯಲ್ಲಿಯೇ ವಿಶ್ವದ ಸಕಲ ಸತ್ಯಗಳನ್ನು, ಮೌಲ್ಯಗಳನ್ನು ಕಾಣುತ್ತ ಬಂದಿರುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಜೀವಿಗಳ ಸಮಾನತೆಯನ್ನು, ಸಕಲ ಜೀವಿಗಳ ಸಹಬಾಳ್ವೆಯನ್ನು ಆಳವಾಗಿ ನಂಬಿರುವ ಕನ್ನಡ ಸಂಪ್ರದಾಯದ ಮುಂದುವರಿಕೆಯ ಸಂಕೇತವಾಗಿ ಇಂದಿನ ಈ ಸಾಂಸ್ಕೃತಿಕ   ಘಟನೆಯನ್ನು ನಾನು  ನೋಡುತ್ತೇನೆ. ಇದು ನಡೆಯುತ್ತಿರುವುದು ಕನ್ನಡದ ಜಾಗೃತ ಸ್ಥಳಗಳಲ್ಲಿ ಮುಖ್ಯವಾದ ಕುಪ್ಪಳಿಯಲ್ಲಿ. ಬಹು ವರ್ಷಗಳ ಹಿಂದೆ ಕುವೆಂಪು ಅವರ ಬರಹ ಇಲ್ಲಿಯ ‘ಸ್ಥಳೀಯ ದೇವತೆಗಳನ್ನು’ ಎಚ್ಚರಿಸಿತ್ತು. ಅದರ ಬಲದಿಂದಾಗಿ ಅಲ್ಲಿಯವರೆಗೆ ಸಾಹಿತ್ಯವನ್ನು ಪ್ರವೇಶ ಮಾಡಿರದಿದ್ದ ಶೂದ್ರ ಅನುಭವ, ಸೃಜನಶೀಲತೆ ಅನಾವರಣಗೊಂಡು ಹೊಸ ಮನ್ವಂತರವನ್ನು ಆರಂಭಿಸಿತು. ಇದು ಆಧುನಿಕತೆ, ಸಮಾನತೆ, ಅಮಾನವೀಯ ಸಾಮಾಜಿಕ ಸ್ಥಿತಿಗಳು, ರಚನೆಗಳು ಹಾಗೂ ನಂಬಿಕೆಗಳ ವಿರುದ್ಧ ತೀವ್ರ ಪ್ರತಿಭಟನೆ ಇವುಗಳನ್ನು ಹೊತ್ತು ತಂದು ಆಧುನಿಕ ಕರ್ನಾಟಕದ, ಕನ್ನಡ ಸಮುದಾಯದ ವ್ಯಕ್ತಿತ್ವವನ್ನು ರೂಪಿಸಿತು. ದೇವನೂರು ಮಹಾದೇವರ ಬರಹವು ಅನೇಕ ರೀತಿಯಲ್ಲಿ ಈ ಕೆಲಸದ ಮುಂದುವರಿಕೆಯಾಗಿದೆ. ಅಕ್ಷರ, ಬರಹ, ಲಿಖಿತ ಸಾಹಿತ್ಯಿಕ ಅಭಿವ್ಯಕ್ತಿಗೆ ಅವಕಾಶಗಳಿಲ್ಲದ, ಅಂಚಿಗೆ ತಳ್ಳಲಾದ, ಆದರೆ ತನ್ನ ಜೀವಂತಿಕೆಯನ್ನೂ, ವಿಶಿಷ್ಟವಾದ ಅನುಭವ ಲೋಕವನ್ನು ಸಮಗ್ರವಾಗಿ ಕಾಪಾಡಿಕೊಂಡು ಬಂದಿದ್ದ ಒಂದು ವಿಶ್ವವನ್ನೇ ಮಹಾದೇವರು ಅನಾವರಣ ಮಾಡಿದ್ದಾರೆ. ಈ ಜಗತ್ತನ್ನು ಕತ್ತಲೆಯ ಸಾಮ್ರಾಜ್ಯವೆಂದು, ಕೇವಲ ಬವಣೆಯ, ಶೋಷಿತರ ಹಾಗೂ ಜಗತ್ತಿನ ಇತಿಹಾಸದಲ್ಲಿಯೇ ಎಲ್ಲಿಯೂ ಕಂಡಿರದ ಹಿಂಸೆಗಳಿಗೆ ಒಳಗಾಗಿ ಮನುಷ್ಯ ಅಸ್ತಿತ್ವವನ್ನೇ ಕಳೆದು ಕೊಂಡಿರುವವರ ಜಗತ್ತು ಎಂದು ನಂಬಿದ್ದು ಕೊಂಡಿದ್ದ “ಪ್ರಧಾನ ಸಂಸ್ಕೃತಿಯ”  ತಿಳಿವಳಿಕೆಯನ್ನೇ ಬುಡಮೇಲು ಮಾಡಿದ ಬರಹಗಾರರು ಮಹಾದೇವ. ನನಗೆ ತಿಳಿದಂತೆ ಯಾವ ಸಮಕಾಲೀನ ಭಾರತೀಯ ಬರಹಗಾರನಿಗೆ ಇದು ಸಾಧ್ಯವಾಗಿಲ್ಲ. ಅವರು ಅನಾವರಣ ಮಾಡಿದ ಈ ಜಗತ್ತು ಕಾಲ್ಪನಿಕವಲ್ಲ. ಅದು ಜಾತಿವ್ಯವಸ್ಥೆಯ ಫಲವಾದ ಎಲ್ಲಾ ಬಗೆಯ ಅಸಮಾನತೆಗಳಿಂದಾಗಿ ಬದುಕುವ ಉಪಾಯಗಳನ್ನು ಹುಡುಕುವುದರಲ್ಲಿ ತನ್ನ ಅಪಾರ ಕ್ರಿಯಾಶೀಲತೆಯನ್ನು ತೊಡಗಿಸಬೇಕಾಗಿರುವ ಮನುಷ್ಯ ಜೀವಿಗಳ ಜಗತ್ತು. ಆದರೆ ಈ ಉಪಾಯಗಳನ್ನು ಅವರು ಹುಡುಕುವುದು ಪ್ರೀತಿ, ಸಹನೆ, ಔದಾರ್ಯ, ಅಸಹಾಯಕತೆ, ದು:ಖ ಇವುಗಳಿಂದ ನಿಬಿಡವಾದ ಜೀವನದಲ್ಲಿ. ಇದು ಆಳವಾದ ಪ್ರತಿಭಟನೆಗಳ ಜಗತ್ತು ಕೂಡ. ನಿಜವಾದ ಅರ್ಥದಲ್ಲಿ ಮಹಾದೇವರ ಇಡೀ ಬರಹವೇ ಪ್ರತಿಭಟನೆಯ ಪರ್ಯಾಯ ಮಾದರಿಗಳ ಶೋಧನೆಯಾಗಿದೆ. ಪ್ರತಿಭಟನೆಯೆಂದರೆ ಪ್ರಧಾನ ಸಂಸ್ಕೃತಿಯ ಭಾಷೆಯಲ್ಲಿಯೇ ಅದು ಬಳಸುವ ರಾಜಕೀಯದ ಪರಿಭಾಷೆಯಲ್ಲಿಯೇ ನಡೆಸುವ ಪ್ರತಿಭಟನೆಯಲ್ಲ. ದಲಿತ ಸಮುದಾಯದ ಆಳವಾದ ಶ್ರೀಮಂತವಾದ ನೆನಪುಗಳ, ಅವುಗಳ ಶರೀರವೇ ಆದ ಅದರದೇ ಭಾಷೆಯ ಮೂಲಕ ಒಂದು ಪ್ರತಿ ಜಗತ್ತನ್ನು ಸೃಜನಶೀಲವಾಗಿ ನಿರ್ಮಿಸುವುದು ನಿಜವಾದ ಪ್ರತಿಭಟನೆ. ಮಹಾದೇವರ ಬರಹವು ನಮ್ಮಲ್ಲಿ ಹುಟ್ಟಿಸುವ ಅಚ್ಚರಿಯೇನೆಂದರೆ ಈ ಪ್ರತಿ ಜಗತ್ತು ನಿಜವಾದ ಅರ್ಥದಲ್ಲಿ ಮನುಷ್ಯ ಜಗತ್ತೇ ಆಗಿದೆ. “ಸಂಬಂಧವೆನ್ನುವುದು ದೊಡ್ಡದು” ಎನ್ನುವ ಅತ್ಯಂತ ಮಾನವೀಯ ತಿಳಿವಳಿಕೆಯ ಮೇಲೆ ನಿಂತ ಜಗತ್ತಾಗಿದೆ. ಕುವೆಂಪು ಅವರ ಪಾತ್ರಗಳಂತೆ ಮಹಾದೇವರ ಪಾತ್ರಗಳು ವಿಶ್ವ ಪ್ರಜೆಗಳೇ. ಹಂದಿದೊಡ್ಡಿಯಲ್ಲಿ ನಿಂತ ಸುಬ್ಬಣ್ಣ ಹೆಗ್ಗಡೆ ಹೇಗೋ ಹಾಗೇ ಮುರಿದ ಗುಡಿಸಲಿನ ಯಜಮಾನಿ ಸಾಕವ್ವನೂ ವಿಶ್ವಪ್ರಜೆ. ಹಲವು ಕಟ್ಟಳೆಗಳನ್ನು ಉಲ್ಲಂಘಿಸುವ ನಾಯಿಗುತ್ತಿಯ ಹಾಗೆ ಚೆನ್ನನೂ ವರ್ಣಸಂಕರದ ಸಾಹಸಿಗ, ಕೊಲೆಯಾದರೂ ಸಾವಿಲ್ಲದವನು. ಯಾವ ವ್ಯವಸ್ಥೆಯೂ ದಮನಿಸಲಾಗದ ಗಾರಸಿದ್ದಮಾವನ ಸತ್ವವೇ ಒಂದು ದಿನ ನಮ್ಮದೇ ಆದ ಫೀಡಲ್ ಕಾಸ್ಟ್ರೋನ ಹುಟ್ಟಿಸಬಹುದು ಎಂದು ನಾನಂತೂ ನಂಬಿದ್ದೇನೆ.

ಟಾಗೋರ್, ಗಾಂಧಿ ಹಾಗೂ ಲೋಹಿಯಾ ಪುರುಷ ಜಗತ್ತನ್ನು ಸ್ತ್ರೀ ಮೌಲ್ಯಗಳಿಗೆ ಒಗ್ಗಿಸುವ ಪ್ರಚಂಡ ಪ್ರಯತ್ನವನ್ನು ಮಾಡಿದರು. ಇದರ ಮುಂದುವರಿಕೆಯಾಗಿ ಮಹಾದೇವರು ಜೋತಮ್ಮರ, ತಾಯಂದಿರ, ಸಾಕವ್ವನ, ತೂರಮ್ಮನ, ಕೆಂಪಿಯ, ಕುಸುಮಬಾಲೆಯರ ಮಹಿಳಾ ಜಗತ್ತನ್ನೇ ಸೃಷ್ಟಿಸಿದ್ದಾರೆ. ಪ್ರೀತಿ, ಸಹನೆ, ತಾಳಿಕೆ, ಪಾಲನೆ ಈ ಮೌಲ್ಯಗಳು- ಅಂದರೆ ಸದಾ ಕಾಲಕ್ಕೂ ಆತ್ಮಹತ್ಯೆಯ ಪ್ರಯತ್ನದಲ್ಲಿರುವ ನಮ್ಮ ಜಗತ್ತನ್ನು ಉಳಿಸಬಲ್ಲ ಎಲ್ಲಾ ಮೌಲ್ಯಗಳು ಅಪ್ಪಟ ಸ್ತ್ರೀ ಮೌಲ್ಯಗಳೇ ಆಗಿವೆ. ಹೀಗಾಗಿ ಮಹಾದೇವರ ಬರಹದ ಪ್ರತಿಭಟನೆಯ ಸತ್ವವು ಈ ಸ್ತ್ರೀ ಮೌಲ್ಯಗಳ ಸೆಲೆಯಿಂದಲೇ ಬಂದಿದೆ. ಪದೇ ಪದೇ ಅವರ ಕೃತಿಗಳಲ್ಲಿ ಪುರುಷ ಅಹಂಕಾರವು “ಕ್ಯಾಬಿನೈ” ಎನ್ನುವುದು ಸಾಬೀತಾಗುತ್ತದೆ. ಹೀಗಾಗಿ ಈ ಪ್ರಶಸ್ತಿಯು ಕನ್ನಡದ ಶ್ರೇಷ್ಠ ಬರಹಗಾರ್ತಿಯರಲ್ಲಿ ಒಬ್ಬರಾದ ಮಹಾದೇವರಿಗೆ ಸಂದಿದೆ ಎಂದುಕೊಳ್ಳುತ್ತೇನೆ.
ನಾನು ಮಹಾದೇವರ ಬರಹದ ಒಳಗಣ ಮೌಲ್ಯಗಳ ಬಗ್ಗೆ ಹೇಳಿದ್ದೇನೆ. ಆದರೆ ಅವರು ಕನ್ನಡ ಮನಸ್ಸಿನ ಭಾಗವೇ ಆಗಿಬಿಟ್ಟಿರುವುದು ಅವರ ಅಪೂರ್ವವಾದ ಕಥನಗಾರಿಕೆಯಿಂದ. ಬಹುಮುಖಿಯಾದ, ಬಹುದನಿಗಳ, ಶೈಲಿಗಳ ಅವರ ಕಥನಗಾರಿಕೆಯು ಅಂತಿಮ ಸತ್ಯಗಳ ಬೋಧನೆಯ ಬದಲಾಗಿ ಯಾರೂ ತಿದ್ದಲಾಗದ ಮನುಷ್ಯ ಜಗತ್ತಿನ ವೈವಿಧ್ಯತೆ ಹಾಗೂ ಅಚ್ಚರಿಗಳ ಕಥನವಾಗಿದೆ. ಹೀಗಾಗಿಯೇ ಅದು ಲಿಖಿತ ಕಥನದ, ವಾಸ್ತವವಾದಿ ಕಥನದ ಸೆರೆಮನೆಗಳಿಂದ ಹೊರಬಂದು ಎಲ್ಲಾ ಕತೆಗಳ ತಾಯಿಯೇ ಆಗಿರುವ ಜನಸಮುದಾಯಗಳ ಮೂರ್ತ ಪರಂಪರೆಗಳ ಸತ್ವವನ್ನೇ ಆಧರಿಸಿದೆ. ಅಚ್ಚಗನ್ನಡದ ಶೈಲಿಯಾದ ಚಂಪೂ, ಗದ್ಯ ಹಾಗೂ ಕಾವ್ಯಗಳ ಸಂಕರವನ್ನು ಶತಮಾನಗಳ ಹಿಂದೆಯೇ ನೆರವೇರಿಸಿಕೊಟ್ಟಿತ್ತು. ಅಷ್ಟೇ ಮುಖ್ಯವೆಂದರೆ ನಮ್ಮ ಬಹುಜನಸಮಾಜದ ಭಾಷೆ ಮಾತ್ರ ಚಂಪೂ ಭಾಷೆಯಲ್ಲ; ಅವರ ಲೋಕಗ್ರಹಿಕೆಯ ಚಂಪೂ ಲೋಕಗ್ರಹಿಕೆಯೇ ಆಗಿದೆ. ಹೀಗಾಗಿ ಸಾಕಮ್ಮನು ದೇವದೂತೆಯಾಗಬಲ್ಲಳು, ದಲಿತ ಗುಡಿಸಿಲಿನ ಮೇಲೆ ಮೂಡಿದ ನವಿಲುಗಳು ಯಾವ ಜಪ್ತಿಗೂ ಸಿಗಲಾರವು ಎನ್ನುವುದನ್ನು ಕೇವಲ ಒಂದನೇ ಕ್ಲಾಸಿನ ಶಿವು ಮಾತ್ರವಲ್ಲ, ಸಮಸ್ತ ಕನ್ನಡ ಬಹುಜನಸಮಾಜವೇ ಸಹಜವಾಗಿ ಒಪ್ಪಿಕೊಂಡು ಬಂದಿದೆ. ದುರ್ದೈವದಿಂದ ಪಶ್ಚಿಮದ ಒಂದು ಕಥನ ಪ್ರಕಾರದ ಯಾಜಮಾನಿಕೆಯಿಂದ ಈ ಜೀವಂತ ಕಥನ ಪರಂಪರೆಯಿಂದ ದೂರವಾಗಿದ್ದ ಕನ್ನಡ ಕಥನವನ್ನು ಮಹಾದೇವರು ಮತ್ತೆ ಸರಿಯಾದ ಹಳಿಗಳ ಮೇಲೆ ತಂದು ನಿಲ್ಲಿಸಿದ್ದಾರೆ. ಚಂದ್ರಶೇಖರ ಕಂಬಾರರು “ನಮ್ಮವರು ಕತಿ ಕಟ್ಟೀ ಕಟ್ಟೀ’ ವಸಾಹತುಶಾಹಿಯನ್ನು ಸೋಲಿಸಿದೆವು ಎಂದು ನಂಬಿದ್ದಾರೆ. ಮಹಾದೇವರು ಕಾವ್ಯ, ಪುರಾಣ, ಚರಿತ್ರೆ, ರಾಜಕೀಯ ಇವೆಲ್ಲವೂ ಆಗಿರುವ ಕಥನಗಳ ಮೂಲಕ ಪಶ್ಚಿಮದಿಂದ ಬಂದ ಆಧುನಿಕತೆಯ ಸೊಂಟವನ್ನೇ ಮುರಿದಿದ್ದಾರೆಯೆನ್ನುವುದನ್ನು ನಾವು ಗಮನಿಸಿಲ್ಲ. ಇಂಥ ಕಥನಗಳನ್ನು ಸೃಷ್ಟಿಸುವ ಜೊತೆಗೆ ನಮ್ಮ ಕಾಲದ ಬಹುದೊಡ್ಡ ಅನುಭವಗಳಿಗೆ ಅಪಾರ ಧ್ವನಿ ಶಕ್ತಿಗಳುಳ್ಳ ರೂಪಕಗಳನ್ನು ಸೃಷ್ಟಿಸುವ ಮೂಲಕ ಭಾರತದ ಶ್ರೇಷ್ಠ ಕಥನಕಾರರಾಗಿದ್ದಾರೆ. ‘ಒಡಲಾಳ’ದ ಗುಡಿಸಿಲಿನಲ್ಲಿ, ‘ಅಮಾಸ’ ‘ಕುಸುಮಬಾಲೆ’ಯ ಮಾರಿಗುಡಿಯಲ್ಲಿ ಇಂದಿನ ಭಾರತವು ತನ್ನ ಸಂಕೀರ್ಣ ಸ್ಥಿತಿಗಳನ್ನು ಕಂಡುಕೊಳ್ಳಬಲ್ಲದು.
ಮಹಾದೇವರ ಬರಹವು ಕನ್ನಡ ಸಮುದಾಯದ ಕಳೆದ ನಾಲ್ಕು ದಶಕಗಳ ಚರಿತ್ರೆ ಹಾಗೂ ರಾಜಕೀಯದೊಂದಿಗೆ ಹಾಸುಹೊಕ್ಕಾಗಿದೆ. ಅನೇಕ ಚಳುವಳಿಗಳ, ಜನಹೋರಾಟಗಳ ಈ ಕಾಲಘಟ್ಟದ ಸೃಜನಶೀಲ ಸಾಕ್ಷಿಪ್ರಜ್ಞೆಯಾಗಿ ಅವರ ಬರಹ ಹಾಗೂ ಬದುಕುಗಳಿವೆ. ಈ ದಶಕಗಳು ಅನೇಕ ಸಂಘರ್ಷಗಳ, ತುಮುಲಗಳ, ಗೆಲುವಿನ, ಸೋಲುಗಳ, ಒಟ್ಟಾರೆ ಅನೇಕ ಪಲ್ಲಟಗಳ ಕಾಲವಾಗಿದೆ. ಇವುಗಳಲ್ಲಿ ಭಾಗಿಯಾಗಿ, ಜೊತೆಗೆ ಸಹಭಾಗಿಗಳೊಂದಿಗೆ ಮೆಲುದನಿಯ ಸಂವಾದದ ಮೂಲಕ ಹೋರಾಟದ ಮನಸ್ಸುಗಳನ್ನು ತಿದ್ದಿ ವಿವೇಕದ ಒಳದನಿಯಾಗಿ ಮಹಾದೇವರು ಮಾಡಿದ ಕೆಲಸವು ಸಮಾಜಶಾಸ್ತ್ರಜ್ಞರ ಅಥವಾ ವಿಮರ್ಶಕರ ತೆಕ್ಕೆಗೆ ಸುಲಭವಾಗಿ ಬರುವಂಥದ್ದಲ್ಲ. ಆದರೆ ಬದುಕು ಬರಹಗಳು ಒಂದೇ ಆಗಿರುವುದರಿಂದ ಇಂದು ಸಲ್ಲುತ್ತಿರುವ ಗೌರವವು ಅವರ ಕ್ರಿಯಾಶೀಲತೆಗೆ ಸಂದ ಗೌರವವೆಂದು ಭಾವಿಸುತ್ತೇನೆ. ನನ್ನ ಅಭಿನಂದನೆಗಳೊಂದಿಗೆ ಕನ್ನಡ ಸಮುದಾಯದ ಅಗಾಧವಾದ ಪ್ರೀತಿಯು ನಿಮ್ಮೊಂದಿಗಿದೆ.
ನಮಸ್ಕಾರ.