ಕುರಿ ಮಾರಿ ಕೆರೆ ಕಟ್ಟಿದರು!-ಅಶೋಕ ಉಚ್ಚಂಗಿ

ಇನ್ನೇನು ಬೇಸಿಗೆಯ ದಿನಗಳು ಕಾಲಿಡುತ್ತಲಿವೆ. ಬೇಸಿಗೆ ಎಂದೊಡನೆ ಮನದಂಗಳದಲ್ಲಿ ಮೆರವಣಿಗೆ ಹೊರಡುವುದು ಎಲ್ಲೆಡೆ ನೀರಿಗಾಗಿ ಹಾಹಾಕಾರ, ಖಾಲಿ ಕೊಡಗಳ ಪ್ರದರ್ಶನ, ಬಂದ್, ಗಲಾಟೆ. ಬೇಸಿಗೆಯ ಈ ದಿನಗಳಲ್ಲಿ ನಮ್ಮಗಳ ಪಾಡೇ ಹೀಗಾದರೆ ಕಾಡಿನ ಪ್ರಾಣಿ-ಪಕ್ಷಿಗಳ ಗತಿ? ಸದಾ ಸ್ವಾರ್ಥಕ್ಕಾಗಿ ತಲೆಕೆಡಿಸಿಕೊಳ್ಳುವ ನಾವೆಂದಾದರೂ ಹನಿ ನೀರಿಗಾಗಿ ಹಪಹಪಿಸುವ ಪ್ರಾಣಿಪಕ್ಷಿಗಳ ಬಗೆಗೆ ಯೋಚಿಸಿದ್ದೇವೆಯೇ? ಕೆರೆ ನೀರು ಕುಡಿದವರು ಎಂಬ ವಾಡಿಕೆ ಮಾತನ್ನು ಕೇಳಿದ್ದೀರಿ. ಆದರೆ ಏಳು ಕೆರೆ ಕಟ್ಟಿದವರ ಕುರಿತು ಗೊತ್ತೇ? ಅದೂ ತಾವು ಸಾಕಿದ ಕುರಿಗಳನ್ನು ಮಾರಿ ಬಂದ ಹಣದಲ್ಲಿ! ತಮಗಾಗಿ ಅಲ್ಲ, ತಮ್ಮ ಜಮೀನಿಗಾಗಿ ಅಲ್ಲ. ಇವರು ಕೆರೆ ಕಟ್ಟಿದ್ದು ಕಾಡಿನ ಪ್ರಾಣಿಪಕ್ಷಿಗಳಿಗಾಗಿ!

ಇವರೊಬ್ಬ ಕುರಿಗಾಹಿ. ಹೆಸರು ಕಾಮೇಗೌಡ. ಊರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ. ವಯಸ್ಸು ಎಪ್ಪತ್ತೈದರ ಆಜುಬಾಜು. ತಮ್ಮ ಜೀವಿತಾವಧಿಯಲ್ಲಿ ಅವರಿಗೆ ಇನ್ನೂ ಮೂರು ಕೆರೆಗಳನ್ನು ಕಟ್ಟಬೇಕೆಂಬ ಮಹದಾಸೆಯಿದೆ. ಇವರಿಗೆ ಹೆಸರು ಮಾಡುವ ಉಮೇದಿ ಇರಲಿಲ್ಲ. ಪ್ರಸಿದ್ಧರಾಗುವ ಆಸೆಯಿರಲಿಲ್ಲ. ಟಿ.ವಿ, ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಆಕಾಂಕ್ಷೆ ಇರಲಿಲ್ಲ. ಪ್ರಶಸ್ತಿಗಳ ಹಂಬಲವಂತೂ ಇರಲೇ ಇಲ್ಲ. ಕಾಡಿನ ಜೀವಗಳಿಗಾಗಿ, ಸಾಕು ಪ್ರಾಣಿಗಳಿಗಾಗಿ ಮರುಗಿ ಅವುಗಳ ನೀರಡಿಕೆ ತಣಿಸಲು ಛಲ ತೊಟ್ಟು ಸಾಲಸೋಲ ಮಾಡಿ ಕಾಡಂಚಿನಲ್ಲಿ ಕೆರೆ ತೋಡಿಸಿದ್ದಾರೆ ಇವರು. ಬಿರುಬೇಸಿಗೆಯಲ್ಲೂ ಸಮೃದ್ಧ ನೀರಿನ ಲಭ್ಯತೆಯಿಂದಾಗಿ ಸಂತೋಷದಿಂದ ನಲಿಯುತ್ತಿರುವ ಕಾಡಿನ ಜೀವಿಗಳನ್ನು ನೋಡುತ್ತಾ, ಇನ್ನಷ್ಟು ಪ್ರಕೃತಿ ಸೇವೆ ಮಾಡುವ ಹುಮ್ಮಸ್ಸು ಇರುವ ಕಾಮೇಗೌಡರ ಉತ್ಸಾಹ ಯುವಕರನ್ನು ನಾಚಿಸುವಂತಿದೆ.

ಹುಟ್ಟಿದ್ದು, ಬೆಳೆದದ್ದು ಕುಂದೂರು ಬೆಟ್ಟದ ಮಡಿಲಿನ ದಾಸನದೊಡ್ಡಿಯಲ್ಲಿ. ಕುಲಕಸುಬು ಕುರಿ ಸಾಕಾಣಿಕೆಯೇ ಇವರ ಜೀವನಾಧಾರ. ಮುಂಜಾನೆಯೇ ಮುದ್ದೆ ಖಾರದ ಬುತ್ತಿ ಕಟ್ಟಿಕೊಂಡು ಕುರಿಗಳೊಡನೆ ಬೆಟ್ಟದ ಹಾದಿ ಹಿಡಿದರೆ ಮರಳುತ್ತಿದ್ದದ್ದು ಗೋಧೂಳಿ ಸಮಯಕ್ಕೇ.ಪ್ರತಿನಿತ್ಯವೂ ನಿಸರ್ಗದ ಒಡನಾಟ ಇವರನ್ನು ಪರಿಸರದ ಸೂಕ್ಷ್ಮಗಳನ್ನು ಗುರುತಿಸಲು ಅವಕಾಶ ಮಾಡಿಕೊಟ್ಟಿತು. ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ, ಮರಗಿಡಗಳ ಮೇಲಿನ ಕಾಳಜಿ ತನ್ನಿಂತಾನೆ ಆವಿರ್ಭವಿಸಿತು. ತಮ್ಮ ಅನುಭವಕ್ಕೆ ಒದಗಿದ ಸಂಗತಿಗಳು, ಪೌರಾಣಿಕ ಕಥೆಗಳಲ್ಲಿ, ಜಾನಪದ ಕಥೆಗಳಲ್ಲಿ ನಿಲುಕಿದ ನಿಸರ್ಗ ಪ್ರೀತಿಯ ಸಂದೇಶಗಳಿಂದ ಪ್ರಭಾವಿತರಾಗಿ ಕಾಡಿನ ಹಾಡುಪಾಡಿಗೆ ದನಿಯಾಗತೊಡಗಿದರು.

ಈ ಕುರಿಗಾಹಿ ಕಾಮೇಗೌಡರು ಕುಂದೂರು ಬೆಟ್ಟದ ತಗ್ಗಿನಲ್ಲಿ ಕುರಿಗಳನ್ನು ಮೇಯಿಸುತ್ತಾ, ಈ ಕುರುಚಲು ಕಾಡಿನ ರಕ್ಷಣೆಗೂ ನಿಂತರು. ಈ ಸರಕಾರಿ ಭೂಮಿಯಲ್ಲಿ ಕೆಲವರು ಉರುವಲು, ಬೇಲಿಗಾಗಿ ಇಲ್ಲಿನ ಮರಗಳನ್ನು ಕಡಿಯಲಾರಂಭಿಸಿದಾಗ ವಿರೋಧಿಸಿದರು. ಜಗಳಕ್ಕೆ ನಿಂತರು. ಇವರ ವಿರೋಧಿಗಳ ಸಂಖ್ಯೆ ಬೆಳೆಯುತ್ತಿದ್ದರೂ ಕುಗ್ಗದೆ ಈ ಮರಗಳ ರಕ್ಷಣೆ ಜೊತೆಗೆ ಇನ್ನಷ್ಟು ಗಿಡಗಳನ್ನು ನೆಟ್ಟು ನೀರೆರೆದರು. ಕಟ್ಟಿಗೆ ಕಡಿಯಲು ಬರುವ ಹಾದಿಗೆ ಮುಳ್ಳುಕಂಟಿಗಳನ್ನು ಹಾಕಿ ಅಡ್ಡಿಪಡಿಸಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಆರಂಭಗೊಂಡ ಇವರ ಪರಿಸರ ಕಾಳಜಿ ತೀವ್ರಗೊಂಡದ್ದು ಇತ್ತೀಚಿನ ವರ್ಷಗಳಲ್ಲಿ ಬರ ಆವರಿಸಿದಾಗ.

 

ಈ ಬೆಟ್ಟದ ಬುಡದಲ್ಲಿದ್ದ ಕೆರೆಯಲ್ಲಿ ಮಳೆಗಾಲದ ದಿನಗಳಲ್ಲೇ ನೀರು ನಿಲ್ಲುತ್ತಿರಲಿಲ್ಲ. ಇನ್ನು ಬರಗಾಲದ‌ ಬಿರುಬೇಸಿಗೆಯಲ್ಲಿ ಹೇಗಿದ್ದಿತು? ಹಕ್ಕಿಗಳು ದಾಹದಿಂದ ಬಳಲಿ ಎಲೆಗಳನ್ನು ಜಗಿದು ರಸ ಹೀರುತ್ತಿವೆ ಎಂಬುದನ್ನು ಕಂಡುಕೊಂಡರು. ಹನಿಹನಿ ನೀರಿಗಾಗಿ ಹಪಹಪಿಸುತ್ತಾ ತಿರುಗುತ್ತಿದ್ದ ಕಾಡುಪ್ರಾಣಿಗಳು, ಜಾನುವಾರುಗಳ ಸ್ಥಿತಿಯನ್ನು ಕಂಡು ಮರುಗಿದ ಇವರು, ಸಮೃದ್ಧವಾಗಿ ನೀರು ನಿಲ್ಲುವ ಕೆರೆಯನ್ನು ಕಟ್ಟಬೇಕು ಎಂದು ಅಂದೇ ನಿಶ್ಚಯಿಸಿದರು. ಇದೇ ವೇಳೆಗೆ ತಮ್ಮಲ್ಲಿದ್ದ ಕುರಿಗಳಲ್ಲಿ ಹತ್ತು ಕುರಿಗಳನ್ನು ಮಾರಿದ್ದರು. 60 ಸಾವಿರ ರೂಪಾಯಿ ಬಂದಿತ್ತು. ತಮ್ಮ ಅನುಭವದಿಂದ ಮಣ್ಣಿನ ಪರೀಕ್ಷೆ ಮಾಡಿ ಜಲಮೂಲವನ್ನು ಹುಡುಕಿ ಜೆಸಿಬಿ ಯಂತ್ರಕ್ಕೆ ಮುಂಗಡ ಹಣ ನೀಡಿ ಕೆರೆ ಕಟ್ಟಲು ಆರಂಭಿಸಿಯೇಬಿಟ್ಟರು. ಬೆಟ್ಟದಿಂದ ಜಿನುಗುತ್ತಿದ್ದ ಸಣ್ಣ ಒರತೆಯಿಂದ ಈ ಕೆರೆಯಲ್ಲಿ ನೀರು ನಿಲ್ಲತೊಡಗಿತು. ಪ್ರಾಣಿಪಕ್ಷಿಗಳ ನಲಿವನ್ನು ನೋಡಿ ಆನಂದಿಸಿದರು. ‘ಅಕ್ಷಯ ಬಟ್ಟಲು’ ಎಂದು ಹೆಸರಿಟ್ಟರು. ಈ ಯಶಸ್ಸು ಇನ್ನೊಂದು ಕೆರೆ ತೋಡಲು ಪ್ರೇರಣೆ ನೀಡಿತು. ಮತ್ತೆ ಒಂದಷ್ಟು ಹಣ ಕೂಡಿಟ್ಟುಕೊಂಡು, ಅಲ್ಪಸ್ವಲ್ಪ ಸಾಲ ಮಾಡಿ ರಸ್ತೆಯಂಚಿನಲ್ಲೇ ಇನ್ನೆರಡು ಕೆರೆ ನಿರ್ಮಾಣ ಮಾಡಿದರು.

ಬೆಟ್ಟದಂಚಿನ ಈ ಕೆರೆಗಳು ಜಾನುವಾರುಗಳ ದಾಹ ನೀಗಿಸುವಲ್ಲಿ ಸಫಲವಾದವು. ಕಾಡು ಮೃಗಗಳಿಗೇ ಪ್ರತ್ಯೇಕವಾಗಿ ಕೆರೆಯ ಅಗತ್ಯವಿದೆ ಎಂಬುದು ಅವರ ಅನಿಸಿಕೆಯಾಗಿತ್ತು. ಅದರಂತೆ ಬೆಟ್ಟದ ಮಧ್ಯ ಭಾಗದಲ್ಲಿ ಹುಲ್ಲುಗಾವಲಿನಲ್ಲಿ ಮತ್ತೆರಡು ಕೆರೆ ತೋಡಲು ನಿರ್ಧರಿಸಿದರು. ಕೈಯಲ್ಲಿ ಹೆಚ್ಚು ಹಣವಿರಲಿಲ್ಲ. ಕೆರೆ ತೋಡುವ ಯಂತ್ರದ ಮಾಲೀಕರ ಮನವೊಲಿಸಿ ಯಂತ್ರದ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಕಾಡು ಪ್ರಾಣಿಗಳಿಗೆಂದೇ ಎರಡು ಕೆರೆಗಳನ್ನು ನಿರ್ಮಿಸಿದ್ದಾರೆ. ಉಳಿದ ಕೆರೆಗಳಿಗಿಂತ ಈ ಕೆರೆಗಳಿಗೆ ತಗುಲಿದ ವೆಚ್ಚವೂ ಹೆಚ್ಚು. ಕಾರಣ, ಯಂತ್ರ ಬೆಟ್ಟವೇರಲು ರಸ್ತೆಯೂ ಬೇಕಿತ್ತು. ಇಳಿಜಾರಿನ ಈ ಪ್ರದೇಶದಲ್ಲಿ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡುವುದು ಸುಲಭದ ಮಾತಲ್ಲ. ಕಾಮೇಗೌಡರ ಈ ಸಾಹಸ ಯಶ ಕಂಡಿದೆ. ಈ ಎರಡೂ ಕೆರೆಗಳಲ್ಲಿ ನೀರು ತುಂಬುತ್ತಿದೆ. ಅವರು ಹೇಳುವ ಪ್ರಕಾರ ಈ ಕೆರೆಗಳ ನಿರ್ಮಾಣಕ್ಕೆ ತಗಲಿರುವ ಒಟ್ಟು ವೆಚ್ಚ ಆರು ಲಕ್ಷ ರೂಪಾಯಿ. ತಾವು ಉಳಿಸಿದ, ಕುರಿ ಮಾರಿದ ಹಣ ಖರ್ಚು ಮಾಡಿದ ಮೇಲೂ ಒಂದಿಷ್ಟು ಸಾಲವೂ ಇದೆ.

ಸರಕಾರಿ ಜಮೀನಿನಲ್ಲೇ ಏಕೆ?: ಕಾಮೇಗೌಡರು ತೋಡಿಸಿರುವ ಎಲ್ಲಾ ಕೆರೆಗಳು ಕುಂದೂರು ಬೆಟ್ಟದ ಬುಡದಲ್ಲಿದ್ದು ಸರಕಾರಿ ಜಮೀನಿನ ವ್ಯಾಪ್ತಿಗೆ ಬರುತ್ತದೆ. ಉದ್ದೇಶಪೂರ್ವಕವಾಗಿಯೇ ಈ ಸ್ಥಳದಲ್ಲಿ ಕೆರೆಗಳನ್ನು ತೋಡಿಸಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡಿ ಕೆರೆ ನಿರ್ಮಿಸಿದ ಅವರಿಗೆ ತಮ್ಮ ಎರಡು ಎಕರೆ ಜಮೀನಿನಲ್ಲಿ ಒಂದೋ ಎರಡೋ ಕೆರೆ ನಿರ್ಮಿಸುವುದು ದೊಡ್ಡಸಂಗತಿಯೇನೂ ಆಗಿರಲಿಲ್ಲ. ಸ್ವಂತ ಜಮೀನಿನಲ್ಲಿ ಕೆರೆಯಿದ್ದರೆ ಮುಂದೊಂದು ದಿನ ತಮ್ಮ ಮಕ್ಕಳು ಜಮೀನನ್ನು ಮಾರಿಬಿಡಬಹುದು ಅಥವಾ ಕೃಷಿ ಚಟುವಟಿಕೆಗೆ ಈ ಕೆರೆಯನ್ನೇ ಮುಚ್ಚಿಬಿಟ್ಟರೆ ತಮ್ಮ ಉದ್ದೇಶ ಈಡೇರುವುದಿಲ್ಲ ಎಂಬುದು ಅವರ ಆಲೋಚನೆ.

ಸದ್ದಿಲ್ಲದೆ ನಡೆಯುತ್ತಿದ್ದ ಈ ಸಮಾಜಮುಖಿ ಕಾರ್ಯ ಬೆಳಕಿಗೆ ಬಂದದ್ದೂ ಆಕಸ್ಮಿಕವೇ. ಅವರು ನಿರ್ಮಿಸಿದ ಅಕ್ಷಯ ಬಟ್ಟಲೆಂಬ ಕೆರೆಯಲ್ಲಿ ನೀರು ಕೋಡಿ ಹರಿದು ಮರಳು ಸಂಗ್ರಹವಾಗುತ್ತಿತ್ತು. ಗ್ರಾಮದ ಕೆಲವರು ಈ ಮರಳನ್ನು ಎತ್ತಲು ಆರಂಭಿಸಿದರು. ಗೌಡರ ಕುಟುಂಬ ಇದನ್ನು ವಿರೋಧಿಸಿತು. ಗಲಾಟೆಗಳಾದವು. ಈ ಕೆರೆಯಜ್ಜನಿಗೆ ಮರಳುಗಳ್ಳರ ಕಿರುಕುಳ ಹೆಚ್ಚಿತು. ವಿಷಯ ಪೊಲೀಸರಿಗೂ ಪತ್ರಿಕೆಗಳಿಗೂ ತಲುಪಿತು. ಹೀಗೆ ಕಾಮೇಗೌಡರು ಕಟ್ಟಿದ ಕೆರೆಗಳು ಬೆಳಕಿಗೆ ಬಂದವು. ಸುಮಾರು 40 ವರುಷಗಳಿಂದ ಸದ್ದಿಲ್ಲದೆ ನಡೆದು ಬಂದ ನಿಸರ್ಗ ರಕ್ಷಣೆಯ ನಿಸ್ವಾರ್ಥ ಸೇವೆಯನ್ನು ಇತ್ತೀಚೆಗೆ ಜನ ಗುರುತಿಸುವಂತಾಯಿತು. ಈ ಪರಿಸರಪ್ರೇಮಿ ಕಟ್ಟಿದ ಕೆರೆಗಳನ್ನು ನೋಡಲು ಜನ ಬರಲಾರಂಭಿಸಿದರು. ಇವರ ಪ್ರಕೃತಿ ಸೇವೆ ನೋಡಿದ ಜನರು ಇವರಿಗೆ ಬೆಂಬಲವಾಗಿ ನಿಂತರು. ಮರಳು ಸಾಗಾಣಿಕೆ ನಿಂತಿತು. ಮರಗಳ ಹನನ ಕಡಿಮೆಯಾಯಿತು.

ಇಳಿವಯಸ್ಸಿನ ಗೌಡರಿಗೆ ಕಣ್ಣು ಮಂದವಾಗಿದೆ. ಉದ್ದನೆಯ ಊರುಗೂಲಿನ ಸಹಾಯವಿಲ್ಲದೆ ರಸ್ತೆಗಿಳಿಯುವಂತಿಲ್ಲ. ಬೆಟ್ಟ ಹತ್ತುವಂತಿಲ್ಲ. ಹೀಗಿದ್ದರೂ ಅವರ ಉತ್ಸಾಹ ಕುಗ್ಗಿಲ್ಲ. ತಮ್ಮ ಕಣ್ಣಿನ ಚಿಕಿತ್ಸೆ, ವಯೋಸಹಜ ಆರೋಗ್ಯ ಸಮಸ್ಯೆಗೆ ಚಿಂತಿಸದ ಅವರಿಗೆ ಇನ್ನೂ ಮೂರು ಕೆರೆಗಳನ್ನು ನಿರ್ಮಿಸುವ ಬಗ್ಗೆಯೇ ಚಿಂತೆ. ಈಗಾಗಲೇ ಕೆರೆ ನಿರ್ಮಾಣಕ್ಕೆ ಜಾಗವನ್ನೂ ಗುರುತಿಸಿರುವ ಇವರಿಗೆ ಇದೇ ಜನವರಿಯಲ್ಲಿ ಮೈಸೂರಿನ ಶ್ರೀಮತಿ ರಮಾಬಾಯಿ ಚಾರಿಟಬಲ್ ಫೌಂಡೇಶನ್ ಮತ್ತು ಎಂ.ಗೋಪಿನಾಥ ಶೆಣೈ ಚಾರಿಟಬಲ್ ಟ್ರಸ್ಟ್ ನೀಡುವ ರಮಾಗೋವಿಂದ ರಾಷ್ಟ್ರೀಯ ಪ್ರಶಸ್ತಿಯ ಜೊತೆಗೆ ಮೂರು ಲಕ್ಷ ರೂಪಾಯಿ ನಗದು ದೊರಕಿದ್ದು ಇವರ ಕನಸು ಸಾಕಾರಗೊಳ್ಳುವಂತಾಗಿದೆ.

ಜೂನಿಯರ್, ಪೂಜ, ಪೂರ್ವಿ, ಕೃಷ್ಣ, ಯುಗಾದಿ ಕೆರೆ ಎಂದು ತಾವು ನಿರ್ಮಿಸಿರುವ ಇತರ ಕೆರೆಗಳಿಗೆ ಹೆಸರಿಟ್ಟಿರುವ ಕಾಮೇಗೌಡರು, ‘ನಾನು ತೋಡಿರುವ ಕೆರೆಯ ಆಳ ಅಗಲ ಕೇಳಬೇಡಿ, ಎಷ್ಟು ನೀರು ಇದೆ, ಎಷ್ಟು ಉಪಯೋಗವಾಗುತ್ತಿದೆ ಎಂಬುದು ಮುಖ್ಯ’ ಎನ್ನುತ್ತಾರೆ. ಈ ಕೆರೆಗಳು ಒಮ್ಮೆ ತುಂಬಿದರೆ ಒಂದು ವರ್ಷ ಎಂಟು ತಿಂಗಳು ನೀರು ದೊರಕುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಯಾವ ಜಾಗದಲ್ಲಿ ಯುಗಾದಿ ವೇಳೆಯಲ್ಲಿ ತೇವವಿರುತ್ತದೆಯೋ, ನವಿರಾದ ಸುಣ್ಣದಂತಹ ಮಣ್ಣು ಇರುತ್ತದೆಯೋ ಅಲ್ಲಿ ಕೆರೆ ತೋಡಿದರೆ ನೀರು ನಿಲ್ಲುತ್ತದೆ ಎಂಬುದನ್ನು ಅವರು ತಮ್ಮ ಅನುಭವದಿಂದ ಕಂಡುಕೊಂಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಕೆರೆ ನಿರ್ಮಿಸುವ ಇಚ್ಛೆಯುಳ್ಳವರು ಯಾವುದೇ ಊರಿನಲ್ಲಾದರೂ ಸರಿ ಇಂತಹ ಜಾಗವಿದ್ದರೆ ನನ್ನನ್ನು ಸಂಪರ್ಕಿಸಿದರೆ ಕೆರೆ ನಿರ್ಮಾಣಕ್ಕೆ ಅಗತ್ಯ ಸಲಹೆ ಕೊಡುತ್ತೇನೆ ಎನ್ನುತ್ತಾರೆ ಈ ಏಳು ಕೆರೆಗಳ ನಿರ್ಮಾತೃ. ಕಾಮೇಗೌಡರನ್ನು ಸಂಪರ್ಕಿಸಲು ಅವರ ಮಗ ಬಲರಾಮರ ಮೊಬೈಲ್ ನಂಬರಿಗೆ ಕರೆ ಮಾಡಬೇಕು: 9945984070.

ಕೆರೆಯಜ್ಜನ ಮಾನವೀಯ ಪಾಠ

ದಾಸನದೊಡ್ಡಿಯ ಕಾಮೇಗೌಡರಿಗೆ ಈ ಕೆರೆ ಕಟ್ಟುವ ಖಯಾಲಿ ಏಕೆ? ಈ ಪ್ರಶ್ನೆಗೆ ಕೆರೆಯಜ್ಜ ಕೊಡುವ ಉತ್ತರ ಹೀಗಿದೆ ನೋಡಿ: ‘ಮಹಾಭಾರತದಲ್ಲಿ ಧರ್ಮರಾಯ ಕೆರೆ–ಕಟ್ಟೆ ಕಟ್ಟಿಸು ಎಂದು ಕರೆ ಕೊಟ್ಟಿದ್ದಾನೆ. ಅದರಂತೆ ನಮ್ಮೂರಿನ ಬೆಟ್ಟದ ಮೇಲೆ ಏಳು ಕೆರೆ ಕಟ್ಟಿಸಿದ್ದೇನೆ. ಜನರ ಸಹಕಾರ ಸಿಕ್ಕರೆ ಇನ್ನೂ ಹತ್ತು ಕೆರೆ ಕಟ್ಟುತ್ತೇನೆ. ‘ಸಂಪತ್ತು ಕೂಡಿಡುತ್ತಾ ಹೋಗಿದ್ದರೆ ನಾಳೆ ನಾನು ಸತ್ತಾಗ ಆತ ಬಂಗಾರ ಕೊಂಡುಕೊಂಡಿದ್ದ, ಮನೆಯಲ್ಲಿ ದುಡ್ಡು ಕೂಡಿಟ್ಟಿದ್ದ ಎಂದು ಜನ ಹೇಳುತ್ತಿದ್ದರು. ಆ ಮಾತು ಹೆಚ್ಚೆಂದರೆ ಮೂರು ದಿನ ಉಳಿಯುತ್ತಿತ್ತೇನೋ. ಅದರಿಂದ ಏನು ಪ್ರಯೋಜನ? ಅದೇ ಈ ಕೆರೆಯ ವಿಚಾರ ನೋಡಿ, ಕಾಮೇಗೌಡ ಕಟ್ಟಿಸಿದ ಕೆರೆ ಎಂದು ಜನ ಮಾತಾಡಿಕೊಳ್ಳುವುದು ಶಾಶ್ವತವಾಗಿ ಉಳಿಯುತ್ತದೆ. ‘ಸೊಸೆ ಗರ್ಭಿಣಿಯಾಗಿದ್ದಾಗ ಹೆರಿಗೆಗೆಂದು ಇಪ್ಪತ್ತು ಸಾವಿರ ರೂಪಾಯಿ ಕೂಡಿಟ್ಟಿದ್ದೆ. ಆಕೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಹಜವಾಗಿ ಹೆರಿಗೆಯಾದಾಗ ಮೊಮ್ಮಗನಿಗೆ ಕೃಷ್ಣ ಎಂದು ಹೆಸರಿಟ್ಟು, ಖರ್ಚಾಗದೇ ಉಳಿದ ಹಣದಿಂದ ಅವನ ಹೆಸರಿನಲ್ಲಿ ಒಂದು ಕೆರೆ ಕಟ್ಟಿಬಿಟ್ಟೆ’ ಎಂದು ಅವರು ಅಭಿಮಾನದಿಂದ ಹೇಳುತ್ತಾರೆ.