ಕಾವೇರಿ : ನ್ಯಾಯ ಎಲ್ಲಿದೆ?-ದೇವನೂರ ಮಹಾದೇವ

kaveri                                                                                                          -1-
ಕರ್ನಾಟಕದಲ್ಲಿ ಈಗ ನೀರು ಬೆಂಕಿಯಾಗಿದೆ. ಮಹಾದಾಯಿ ಜೊತೆಗೆ ಕಾವೇರಿಯೂ ಸೇರಿಕೊಂಡು ಉರಿಯುತ್ತಿದೆ. ಉಚ್ಛ ನ್ಯಾಯಾಲಯದಲ್ಲಿ ಕಾವೇರಿ ವಾದ-ವಿವಾದ ಕೇಳುತ್ತಾ ಆ ನಮ್ಮ ಇಬ್ಬರು ನ್ಯಾಯಾಧೀಶರ ವೈಖರಿಗಳು ಉಂಟುಮಾಡಿರುವ ಗೊಂದಲದಿಂದ ನಾನಿನ್ನು ಹೊರಬಂದಿಲ್ಲ. ನೇರವಾಗಿ ಎದುರಾಗುತ್ತೇನೆ – ನನಗೆ ಕ್ಯೂಸೆಕ್, ಟಿಎಂಸಿ ನೀರು ಎಷ್ಟು ಎಂದು ಪ್ರಶ್ನಿಸಿದರೆ ಈಗಲೂ ಕಕ್ಕಾಬಿಕ್ಕಿಯಾಗುತ್ತೇನೆ. ಇರಲಿ, ಈ ಹಿಂದೆ ಸುಪ್ರೀಂಕೋರ್ಟ್‍ನ ಮೂವರು ನ್ಯಾಯಾಧೀಶರ ಬೆಂಚ್‍ಗೆ ತಮಿಳುನಾಡು- ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆಗಾಗಿ- ವಿನಂತಿಸಿ ಪ್ರಸ್ತಾಪಿಸಿದಾಗ ಆ ಮೂವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಬೆಂಚ್ ಅವರ ಮನವಿಯನ್ನು ಪುರಸ್ಕರಿಸುವುದಿಲ್ಲ. ಆದರೀಗ ತಮಿಳುನಾಡು ಅರ್ಜಿ ಹಾಕದಿದ್ದರೂ ಈ ಇಬ್ಬರು ನ್ಯಾಯಾಧೀಶರ ಬೆಂಚು- ನದಿ ನಿರ್ವಹಣಾ ಮಂಡಳಿ ರಚನೆಗೆ ಸ್ವಯಂ ಆದೇಶಿಸಿಬಿಟ್ಟಿತು. ಇದು ಉದ್ಧಟತನ ಅನ್ನಿಸಿಕೊಳ್ಳುವುದಿಲ್ಲವೇ? ಇದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಇಂಥ ತಪ್ಪನ್ನು ಪ್ರಾಥಮಿಕ ಶಾಲಾ ಮಕ್ಕಳು ಮಾಡಿದ್ದರೆ ‘ಬೆಂಚಿನ ಮೇಲೆ ನಿಂತುಕೊಳ್ಳಿ (Standup on the Bench)’ ಎಂದು ಬೆಂಚಿನ ಮೇಲೆ ನಿಲ್ಲುವಂತೆ ಹೇಳಬಹುದಿತ್ತು. ಇವರಿಗೆ ಯಾವ ಮಾತಲ್ಲಿ ಹೇಳಬೇಕು? ಯಾರು ಹೇಳಬೇಕು? ಐತೀರ್ಪಿನ ಮೇಲೆಯೇ ಪರಿಶೀಲನಾ ಅರ್ಜಿ ಇರುವಾಗ ಹಾಗೂ ಮೂವರು ನ್ಯಾಯಾಧೀಶರ ಬೆಂಚು ನದಿ ನಿರ್ವಹಣಾ ಮಂಡಳಿ ರಚನೆಯನ್ನು ಪುರಸ್ಕರಿಸದಿರುವ ಸಂದರ್ಭ ಇರುವಾಗ ಈ ಇಬ್ಬರು ನ್ಯಾಯಾಧೀಶರ ಬೆಂಚು ಅದನ್ನು ಗೌರವಿಸಬೇಕಲ್ಲವೇ? ನನಗೆ ಇದು ಹೆಚ್ಚು ಕಕ್ಕಾಬಿಕ್ಕಿಯನ್ನುಂಟು ಮಾಡಿತು. ನಾವು ನ್ಯಾಯಾಧೀಶರನ್ನು ಗೌರವಾನ್ವಿತರೇ ಎಂದು ಸಂಬೋಧಿಸುತ್ತೇವೆ. ನಮ್ಮ ನ್ಯಾಯಾಧೀಶರೂ ತಮ್ಮ ಗೌರವವನ್ನು ಉಳಿಸಿಕೊಂಡು ತನ್ಮೂಲಕ ನ್ಯಾಯಾಲಯದ ಗೌರವವನ್ನು ಅವರು ಉಳಿಸಬೇಕೆಂದು ಅವರಿಂದ ಅಪೇಕ್ಷಿಸುವುದು ತಪ್ಪಲ್ಲ ಅಂದುಕೊಂಡಿದ್ದೇನೆ.
ಆಮೇಲೆ, ಸುಪ್ರೀಂಕೋರ್ಟ್ ನೇಮಿಸಿದ ಕಾವೇರಿ ಮೇಲುಸ್ತುವಾರಿ ಸಮಿತಿಯು ಪರಿಸ್ಥಿತಿಯನ್ನು ಪರಿಗಣಿಸಿ ಮೂರು ಸಾವಿರ (3000) ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಕರ್ನಾಟಕಕ್ಕೆ ಆದೇಶ ನೀಡಿದರೆ, ಇದನ್ನು ಲೆಕ್ಕಿಸದ ಈ ಇಬ್ಬರು ನ್ಯಾಯಾಧೀಶರ ಬೆಂಚು ಆರು ಸಾವಿರ (6000) ಕ್ಯೂಸೆಕ್ ನೀರು ಬಿಡಲು ಯಾವ ವಸ್ತುಸ್ಥಿತಿಯ ಅಂಶಗಳನ್ನೂ ಪರಿಗಣಿಸದೆ ಏಕಾಏಕಿ ಆದೇಶಿಸಿಬಿಟ್ಟರು. ನೀರಿನ ಪ್ರಮಾಣವನ್ನು ನಿಗದಿ ಮಾಡುವ ಜವಾಬ್ದಾರಿಯು ಮೇಲುಸ್ತುವಾರಿಯ ಸಮಿತಿಯದಾಗಿದ್ದರೂ ಅದನ್ನು ಪರಿಗಣಿಸದೆ ಈ ಇಬ್ಬರ ಬೆಂಚಿನ ನ್ಯಾಯಾಧೀಶರು ಅಂಪೈರ್ ಕೆಲಸ ಮಾಡಿ ಎಂದರೆ ತಾವೇ ಆಟಗಾರರಾಗಿ ಫುಟ್‍ಬಾಲ್ ಒದ್ದಂತೆ ಮಾಡಿಬಿಟ್ಟರು. ಇದು ಮಾಡಬಾರದ ಕೆಲಸ ಮಾಡಿದಂತೆ. ತಾವು ನೇಮಿಸಿದ ಮೇಲುಸ್ತುವಾರಿ ಸಮಿತಿ ವರದಿ ಬಗ್ಗೆ ಅಪನಂಬಿಕೆ ಇದ್ದರೆ, ತಾವೇ ಒಂದು ವಸ್ತುಸ್ಥಿತಿಯ ವರದಿ ತರಿಸಿಕೊಂಡು ಆಮೇಲೆ ಆದೇಶ ನೀಡಿದ್ದರೆ ಅದನ್ನಾದರೂ ಅರ್ಥಮಾಡಿಕೊಳ್ಳಬಹುದಿತ್ತು. ಇದನ್ನು ಮಾಡದೆ ಈ ಇಬ್ಬರು ನ್ಯಾಯಾಧೀಶರ ಬೆಂಚು ಕುರುಡು ತೀರ್ಪು ನೀಡಿದೆ. ನ್ಯಾಯಕ್ಕೆ ಕಣ್ಣಿಲ್ಲವೆ? ಇದು ಹೇಗಿದೆ ಎಂದರೆ, ವಿವೇಕ-ವಿವೇಚನೆಯಿಲ್ಲದ ಅಹಂ ಮತ್ತು ಅಂಕಿಅಂಶಗಳ ಮಾಹಿತಿಗಳ ಸಂಗ್ರಹವನ್ನು ಅಡಕ (Feed) ಮಾಡಿ ರೂಪಿಸಿದ ಎರಡು ರೊಬೋ (Robot)ಗಳು ನ್ಯಾಯ ಕೊಟ್ಟಂತಾಗಿದೆ. ಯಾಕೆಂದರೆ ಇವರ ತೀರ್ಪಲ್ಲಿ ಎದ್ದು ಕಾಣುವುದು – ಅಹಂ ಮತ್ತು ಅಂಕಿಸಂಖ್ಯೆಗಳು ಮಾತ್ರ.
ಇರಲಿ, ನ್ಯಾಯಾಲಯದ ಬಗ್ಗೆ ಮಾತಾಡಿ ಏನೂ ಪ್ರಯೋಜನ ಇಲ್ಲ. ಯಾಕೆಂದರೆ, ನಮ್ಮ ಸಂಸತ್ ನ್ಯಾಯಾಲಯಕ್ಕೆ ತನ್ನ ಜುಟ್ಟು ಕೊಟ್ಟು ಕೂತಿದೆ. ಸಂಸತ್‍ಗೆ ತಾನು ಏನು ಎಂಬುದೇ ತಿಳಿಯದೇನೋ. ಹೋಗಲಿ, ತನ್ನ ಪ್ರಜೆಗಳ ಕುಡಿಯುವ ನೀರಿನ ಬಗ್ಗೆಯಾದರೂ ಸಂಸತ್‍ನ ಹೃದಯ ಸ್ಪಂದಿಸದಿದ್ದರೆ? ಆಯಾಯ ಜಲಾನಯನ ಪ್ರದೇಶದ ಜನರಿಗೆ ಮಾತ್ರ ಆ ನದಿಯ ಕುಡಿಯುವ ನೀರು ಎಂಬುದನ್ನು ಚರ್ಚಿಸಲು, ಉಚ್ಛರಿಸಲೂ ನಾವು ನಾಚಿಕೆ ಪಡಬೇಕು. ಕುಡಿಯುವ ನೀರಿಗೆ ಗುಜರಾತ್‍ನಲ್ಲಿ ಹಾಹಾಕಾರ ಉಂಟಾದರೆ ಕರ್ನಾಟಕದ ನೀರನ್ನೇ ಕೊಡಲಿ. ದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾದರೆ ಅರೆನೀರಾವರಿ ಬೆಳೆ ನೀತಿಯನ್ನು ಸಂಕಷ್ಟ ಕಾಲದಲ್ಲಿ ಅನುಸರಿಸೋಣ. ಬಹುಶಃ ಇದೇ – ನಾವು ಬದುಕುವುದು, ಬೇರೆಯವರು ಬದುಕಲು ಬಿಡುವುದು – ಅಂದರೆ ಅರ್ಥ. ಕಾವೇರಿ …ಜಲಾನಯನ ಪ್ರದೇಶದ ವ್ಯಾಪ್ತಿಗೆ ಮುಕ್ಕಾಲು ಭಾಗ ಬೆಂಗಳೂರು ನಗರ ಬರುವುದಿಲ್ಲವೆಂಬ ಕಾರಣಕ್ಕೆ ಆ ಭಾಗಕ್ಕೆ ಕಾವೇರಿಯ ನೀರು ಇಲ್ಲ ಅಂದರೆ? ಇದು ಮನುಷ್ಯರ ಆಲೋಚನೆಯೇ? ಈ ಹಿಂದೆ ಇಂದಿರಾಗಾಂಧಿಯವರು ಪ್ರಧಾನ ಮಂತ್ರಿ ಆಗಿದ್ದಾಗ ತಮಿಳುನಾಡಿನ ಈಗಿನ ಚೆನ್ನೈ ನಗರ ಪ್ರದೇಶಕ್ಕೆ ಕುಡಿಯುವ ನೀರಿನ ದಾಹ ತಣಿಸಲು, ಚೆನ್ನೈನಗರ ಕೃಷ್ಣಾನದಿಯ ಜಲಾನಯನ ವ್ಯಾಪ್ತಿ ಪ್ರದೇಶಕ್ಕೆ ಬಾರದಿದ್ದರೂ ಇಂದಿರಾಗಾಂಧಿಯವರು ಕರ್ನಾಟಕದ ಕೃಷ್ಣಾನದಿಯ ಪಾಲಿನಲ್ಲೂ 5 ಟಿಎಂಸಿ ನೀರನ್ನು ಕೊಡುತ್ತಾರೆ, ತಮ್ಮ ವಿವೇಕ-ವಿವೇಚನೆ-ಮಾನವಿಯತೆಯನ್ನು ಮೆರೆಯುತ್ತಾರೆ. ಈಗ ಪ್ರಧಾನಮಂತ್ರಿ ಮೋದಿಯವರಿಂದಲೂ ಕೂಡ ಇಂದಿರಾಗಾಂಧಿಯವರು ತೋರಿದ ಆ ಧೈರ್ಯ, ಆ ವಿವೇಕ-ವಿವೇಚನೆ-ಮಾನವಿಯತೆಯನ್ನು ನಿರೀಕ್ಷಿಸಿದರೆ ತಪ್ಪಲ್ಲ ಅಂದುಕೊಂಡಿದ್ದೇನೆ.
ಇಂಥ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಮ್ಮ ಅಧಿಕಾರವನ್ನೇ ಪಣಕ್ಕೊಡ್ಡಿದ ದಿಟ್ಟ ನಿಲುವು ಹಾಗೇ ನಮ್ಮ ಮಾಜಿ ಪ್ರಧಾನಿ ದೇವೇಗೌಡರು ಈ ವಿಚಾರದಲ್ಲಿ ತಳೆದ ವಿವೇಕ ಮತ್ತು ಕ್ರಿಯಾಶೀಲತೆ ಹಾಗೂ ಇಲ್ಲಿ ಅಬ್ಬರಿಸುವ ರಾಜ್ಯದ ಬಿಜೆಪಿ ನಾಯಕರು ಮೋದಿಯವರ ಮುಂದೆ ಬಾಯಿ ಬಿಡುವುದಿಲ್ಲ ಎಂಬ ಸುದ್ದಿ ಜನಜನಿತವಾಗಿರುವ ಹಿನ್ನೆಲೆ ಇದ್ದರೂ ಈ ಸಂದರ್ಭದಲ್ಲಿ ಕೇಂದ್ರ ಸಚಿವ ಸದಾನಂದಗೌಡರು ತೋರಿಸಿದ ಮುತ್ಸದ್ಧಿತನ ಇವು ಕರ್ನಾಟಕ ಉಸಿರಾಡಲು ಕಾರಣವಾಯಿತು. ಜೊತೆಗೆ ವಕೀಲ ನಾರಿಮನ್ ಅವರು ವಾದ ಮಾಡುವುದಿಲ್ಲವೆಂದು ‘ರಿಬೌಂಡ್ ವಾದ’ ಮಾಡಿ ಪಾನ್ ಬೀಳಿಸಿದರು. ಅಂತೂ ಒಂದು ಸುತ್ತು ಸುತ್ತಿ ಬಂದು ನಿಂತಂತಾಯ್ತು.
-2-
ಕಾವೇರಿ ನೀರಿನ ಹಂಚಿಕೆ ಬಗ್ಗೆ ಕೋರ್ಟಿನ ಅಂಕಿಅಂಶಗಳ ಆಟ, ಭೂಮಿಯ ದಾಹ, ಇಲ್ಲದ ನೀರಿಗಾಗಿ ಹೋರಾಟ ಇವುಗಳನ್ನು ನೋಡುತ್ತಾ ಈ ಬಗ್ಗೆ ಅಲ್ಲಿ-ಇಲ್ಲಿ ಏನಾದರೂ ಭರವಸೆಯ ಸುಳಿವು ಸಿಗಬಹುದಾ ಎಂದು ಕಣ್ಣಾಡಿಸುತ್ತಾ ಕಾತರಿಸಿದೆ. ಈ ಸಂದರ್ಭದಲ್ಲಿ ಪ್ರಕಟಗೊಂಡ ಕೆಲವು ಲೇಖನಗಳು ನನ್ನನ್ನು ಅಲ್ಲಾಡಿಸಿಬಿಟ್ಟವು.
ಉದಾಹರಣೆಗೆ – ಆಹಾರ ತಜ್ಞರಾದ ಕೆ.ಸಿ.ರಘು ಅವರು 25.09.2016 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ‘ನೀರಿಗಾಗಿ ಬಡಿದಾಡುತ್ತ ನದಿಯನ್ನೇ ಮರೆತುಬಿಟ್ಟಂತಿದೆ ನಾವು !’ ಎಂಬ ಲೇಖನದಲ್ಲಿ ಬರೆಯುತ್ತಾರೆ: “ಮಳೆನೀರನ್ನು ಇಂಗಿಸಲು ಮುಖ್ಯವಾಗಿ ಬೇಕಾಗಿರುವುದು ಮಣ್ಣಿನಲ್ಲಿರುವ ಇಂಗಾಲದ ಅಂಶ. ಕಾವೇರಿ ಕಣಿವೆಯ ಮಣ್ಣು ಸವಕಲಾಗಿದ್ದು, ಇಂಗಾಲದ ಅಂಶ ಶೇ 0.5ಕ್ಕೂ ಕಡಿಮೆಯಾಗಿದೆ. ಕನಿಷ್ಠ ಶೇ.1.5ರಷ್ಟಾದರೂ (ಸಾವಯವ ಇಂಗಾಲದ ಅಂಶ) ಇದ್ದಲ್ಲಿ ನೀರು ಇಂಗಿಸಲು, ಹಿಡಿದಿಡಲು ಸಹಾಯಕ. ಇಂದು ಕೈಗಾರಿಕೆಗಳಿಗೆ ನದಿಯು ಧರ್ಮಕ್ಕೆ ಸಿಕ್ಕುವ ನೀರು ಮತ್ತು ಕೈಗಾರಿಕಾ ತ್ಯಾಜ್ಯದ ಕೊಳಕು ಹಾಕಿ ದೂರ ಹರಿಸುವ ಸಾಧನವಾಗಿದೆ. ಮರಳು ದಂಧೆಯು ನದಿಯ ತಳ ದೋಚಿಕೊಳ್ಳುವ ಹುನ್ನಾರವಾಗಿದ್ದು, ಕೃಷಿಗೆ ನದಿ ಅಂದರೆ ನೀರಿನ ಕಾಲುವೆ ಎಂಬಂತಾಗಿದೆ. ನೀರಿನ ನಿರ್ವಹಣೆಗೆ ಅಂತರ್ಜಲ, ನದಿಯ ಕನಿಷ್ಠ ಹರಿವು, ಕನಿಷ್ಠ ಪ್ರಮಾಣದಲ್ಲಿ ಸಮುದ್ರ ಸೇರುವುದು ಮುಖ್ಯ. ಉಪಯೋಗದ ದೃಷ್ಟಿಕೋನದಿಂದಷ್ಟೇ ನೋಡದೆ, ನದಿಯೂ ಒಂದು ಪ್ರಾಕೃತಿಕ ಪ್ರಕ್ರಿಯೆ, ಜೀವರಾಶಿಯೊಂದಿಗೆ ಹಾಸುಹೊಕ್ಕಾಗಿರುವ ಜೀವನಾಡಿ ಎಂಬುದನ್ನು ನಾವೆಲ್ಲ ಮರೆತಂತಿದೆ.”
ಹಾಗೇ ವಿನೋದಕುಮಾರ್ ಬಿ ನಾಯ್ಕ್ ಅವರು 10.10.2016 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ‘ಕೊಡಗಿನ ಕಾಡುಗಳು ಕರಗುತ್ತಾ ಕಾವೇರಿ ಕಮರಿ ಹೋಗುತ್ತಿದ್ದಾಳೆ’ ಎಂಬ ಲೇಖನದಲ್ಲಿ ಬರೆದಿರುವುದನ್ನು ಸಂಗ್ರಹಿಸಿ ಹೇಳುವುದಾದರೆ- “ಅಮೆರಿಕದ ನ್ಯೂಯಾರ್ಕ್ ಬೃಹತ್ ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುವುದು ನಮ್ಮ ಕೊಡಗಿನ ರೀತಿಯಲ್ಲೇ ಇರುವ, ಮಲೆನಾಡಿನ ಪ್ರದೇಶವಾದ ಕ್ಯಾಟ್‍ಸ್ಕಿಲ್ಸ್ ಪರ್ವತಗಳಿಂದ. ಇಲ್ಲಿ ಹುಟ್ಟುವ ಡೆಲಾವೇರ್ ನದಿಯನ್ನು ಅಮೆರಿಕದ ಜನ ಅದೆಷ್ಟು ಜತನದಿಂದ ಕಾಪಾಡಿದ್ದಾರೆಂದರೆ, ಅಲ್ಲಿ ಜಲಮೂಲಕ್ಕೆ ಯಾವುದೇ ಧಕ್ಕೆ ಉಂಟು ಮಾಡಿದರೂ ಜೈಲು ಗ್ಯಾರಂಟಿ. ಯಾವುದೇ ಒತ್ತುವರಿ, ಮಾಲಿನ್ಯಕ್ಕೆ ಅವಕಾಶವಿಲ್ಲ. ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ಅಲ್ಲಿ ಹೆಚ್ಚೆಚ್ಚು ಮರಗಿಡಗಳನ್ನು ನೆಡುವುದು, ನದಿ ಪಾತ್ರಕ್ಕೆ ಘಾಸಿಯಾಗದಂತೆ ನೋಡಿಕೊಳ್ಳುವುದು ಜೊತೆಗೇ ನ್ಯೂಯಾರ್ಕ್‍ನ ಸ್ಥಳೀಯ ಆಡಳಿತ ತನ್ನ ಜಲಮೂಲದ ನದಿಯ ಬಗ್ಗೆ ಅದೆಷ್ಟು ಆಸ್ಥೆ ವಹಿಸಿದೆ ಎಂದರೆ, 1997 ರಿಂದ ಇಲ್ಲಿಯವರೆಗೆ 1 ಲಕ್ಷದ 30 ಸಾವಿರ ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಂದ ಖರೀದಿಸಿ ಜಲಾನಯನ ಪ್ರದೇಶ ಸಂರಕ್ಷಿಸಲಾಗಿದೆ.
ಆದರೆ, ನಮ್ಮಲ್ಲಿ ನದಿ ಪಾತ್ರದ ಸರ್ಕಾರಿ ಭೂಮಿಗಳನ್ನು ಅಕ್ರಮವಾಗಿ ಕಬಳಿಸುವ ದುಷ್ಟರು, ದುರುಳರಿದ್ದಾರೆ. ಕಾವೇರಿ ಹುಟ್ಟುವ ಭಾಗಮಂಡಲದ ಸುತ್ತಮುತ್ತ ಇರುವ ಖಾಸಗಿ ಜಮೀನುಗಳಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಅಕ್ರಮ ಮರಳುಗಾರಿಕೆಯಿಂದಾಗಿ ಕೆಲವು ಕಡೆ ನದಿ ಪಾತ್ರ ಬದಲಿಸಿಬಿಟ್ಟಿದ್ದಾರೆ. ಭೂಮಿ ಮೇಲೆ ಹಚ್ಚ ಹಸಿರಿನ ಪೈರು ಮೊಳಕೆಯೊಡೆಯಬೇಕೆಂದರೆ, ಕೊಡಗಿನ ಕಾಡು ಚೆನ್ನಾಗಿರಬೇಕು. ಕೊಡಗಿನ ಕಾಡುಗಳು ಮೋಡಗಳನ್ನು ಸೆಳೆಯುವ ಶಕ್ತಿ ಹೊಂದಿರಬೇಕು. ಇದು ಕೇವಲ ಕಾವೇರಿ ನದಿಯೊಂದರ ಸಮಸ್ಯೆಯಲ್ಲ, ಎಲ್ಲ ನದಿಗಳೂ ಅವುಗಳ ಮೂಲ ಅರಣ್ಯಗಳನ್ನೂ ಸಂರಕ್ಷಿಸಬೇಕಿದೆ.”
ಒಟ್ಟಿನಲ್ಲಿ ಅವರಿವರೆನ್ನದೆ ನಾವೆಲ್ಲರೂ ವಿಧ್ವಂಸಕರಾಗಿಬಿಟ್ಟಿದ್ದೇವೆ. ಇದಕ್ಕಿಂತಲೂ ಭೀಕರವೆಂದರೆ ಕೇಂದ್ರಸರ್ಕಾರವು ತರಲು ಹೊಂಚುಹಾಕುತ್ತಿರುವ ‘ರಾಷ್ಟ್ರೀಯ ಜಲನೀತಿ’. ಇದು ಹೆಚ್ಚುಕಮ್ಮಿ ಭೂಕಬಳಿಕೆಯ ‘ಭೂಸ್ವಾಧೀನ ಕಾಯ್ದೆ’ಯಂತೆಯೇ ‘ಜಲ ಕಬಳಿಕೆ ಕಾಯ್ದೆ’ಯಾಗುವಂತಹ ಅಪಾಯ ಕಾದಿದೆ. ಜಲದ ಜೀವನಾಡಿಯಂತಿರುವ ಡಾ.ರಾಜೇಂದ್ರ ಸಿಂಗ್ ಅವರು ಆಗಸ್ಟ್ 5, 2016 ರಂದು ಆಂದೋಲನ ಪತ್ರಿಕೆಯಲ್ಲಿ ಹೇಳುತ್ತಾರೆ – “ನದಿ ನೀರಿನ ಹಂಚಿಕೆ ಮತ್ತು ಅಂತರ್‍ರಾಜ್ಯ ಜಲ ವಿವಾದಕ್ಕೆ ಪರಿಹಾರ ರೂಪಿಸಲು ಜಾರಿಗೆ ತರಲು ಹೊರಟಿರುವ ‘ರಾಷ್ಟ್ರೀಯ ಜಲನೀತಿ’ ರೈತರಿಗೆ ಮಾರಕವಾಗಲಿದೆ. ಇದು ಉದ್ಯಮಿಗಳಿಗೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭದಾಯಕವಾಗಲಿದೆ… ಇದೊಂದು ಖಾಸಗೀಕರಣದ ಯತ್ನ… ರಾಷ್ಟ್ರೀಯ ಜಲನೀತಿಯಲ್ಲಿ ಮೊದಲ ಆದ್ಯತೆ ಕುಡಿಯುವ ನೀರಿಗೆ, ಎರಡನೆಯ ಆದ್ಯತೆ ಕೃಷಿಗೆ ಇರಬೇಕು. ಆದರೆ ಇದರಲ್ಲಿ ಎರಡನೆಯ ಆದ್ಯತೆ ಕೈಗಾರಿಕೆಗಳಿಗೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಕೇಂದ್ರ ಸರ್ಕಾರ ನೇಮಿಸಿರುವ ಶ್ರೀ ಮಿಹಿರ್ ಷಾ ನೇತೃತ್ವದ ಜಲಸಂಪನ್ಮೂಲ ಸಮಿತಿ ವರದಿಯಲ್ಲಿ – ಜಲವನ್ನು ಸಾಮಾಜಿಕ ಸರಕು ‘Social Goods’ ಎಂದು ಪರಿಗಣಿಸಲಾಗಿದೆಯಂತೆ. ಸರಕು ಅಂದರೆ- ಜೀವಜಲವೆನಿಸಿಕೊಂಡ ಜಲದ ಜೀವ ತೆಗೆದು ನಿರ್ಜೀವ ವಸ್ತು ಮಾಡಿದಂತೆ. ಕಾರ್ಪೊರೇಟ್ ಸೆಕ್ಟರ್‍ಗಳಿಗೆ ನದಿ ನೀರನ್ನು ವಹಿಸಿಕೊಟ್ಟು ಅವು ಬಳಸಿ ಹೊರಹಾಕುವ ಬಚ್ಚಲು ನೀರೇ ನಾಳೆ ನಮಗೆ ನದಿಯಾಗುವ ಸಾಧ್ಯತೆಯಿದೆ ಹಾಗೂ ಕುಡಿಯುವುದಕ್ಕೂ, ವ್ಯವಸಾಯಕ್ಕೂ ನೀರನ್ನು ಖಾಸಗಿಯವರಿಂದ ಹಣಕೊಟ್ಟು ಕೊಂಡುಕೊಳ್ಳಬೇಕಾಗಿ ಬರುವ ದಾರುಣ ಪರಿಸ್ಥಿತಿಯನ್ನು ನಾವು ಆಯ್ಕೆ ಮಾಡಿದ ಸರ್ಕಾರವೇ ನಮಗೆ ಉಣಬಡಿಸುತ್ತಿದೆ. ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಉದ್ದಿಮೆ ಹುಟ್ಟಿಕೊಂಡು ಜನಸಮುದಾಯದ ಕುಡಿಯುವ ನೀರಿಗೂ ದಾಹವಾಗಬಹುದು. ಈ ನಡಿಗೆಗಳೆಲ್ಲಾ ಎಲ್ಲಿಗೆ ನಮ್ಮನ್ನು ಕರೆದೊಯ್ಯುತ್ತಿವೆ? 12.09.2016 ರಂದು ಕನ್ನಡಪ್ರಭದಲ್ಲಿ ಹವ್ಯಾಸಿ ಪತ್ರಕರ್ತರಾದ ನಟರಾಜು.ವಿ ಅವರ ‘ಕಾವೇರಿ ವಿಷಯದಲ್ಲಿ ನಿಜಕ್ಕೂ ಸೋತಿದ್ದೇವೆಯೇ?’ ಲೇಖನದಲ್ಲಿ – “ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ತಮಿಳುನಾಡುಗಳೆರಡೂ ಕೇವಲ ಅಂಕಿ ಸಂಖ್ಯೆ ಹಂಚಿಕೊಳ್ಳಬೇಕೇ ಹೊರತು ಕಾವೇರಿ ನೀರನ್ನಲ್ಲ” ಎನ್ನುತ್ತಾರೆ. ಯಾಕೋ ಇದು ನಿಜ ನಿಜ ಅನ್ನಿಸಿಬಿಟ್ಟಿತು. ದೇವರೇ, ಇದು ಸುಳ್ಳಾಗಲಿ ಎಂದು ಪ್ರಾರ್ಥಿಸಿದೆ.

-3-
ನಾವು ಆಲಿಸಬೇಕಾಗಿದೆ. ಅಸಲಿ ಮಣ್ಣಿನ ಮಗ ನಾಡೋಜ ಡಾ. ಎಲ್.ನಾರಾಯಣ ರೆಡ್ಡಿ ಅವರು ಭೂಮಿ ತಾಯಿಯ ಕರುಳ ಚೀರುವಿಕೆಯಂತೆ ಸಾವಯವ ಇಂಗಾಲದ ಬಗ್ಗೆ ಕೂಗಿ ಕೂಗಿ ಹೇಳುತ್ತಿದ್ದಾರೆ. ಯಾರೂ ಕೇಳಿಸಿಕೊಳ್ಳುತ್ತಿಲ್ಲ. ನಾವು ಈಗಲಾದರೂ ಕೇಳಿಸಿಕೊಳ್ಳಬೇಕಾಗಿದೆ. ವ್ಯವಸಾಯ ಭೂಮಿಗೆ ರಾಸಾಯನಿಕ ಕ್ರಿಮಿನಾಶಕಗಳನ್ನು ಸುರಿಯಲು ಉತ್ತೇಜಿಸಿ ತನ್ಮೂಲಕ ಭೂಮಿಯ ಸಾವಯವ ಇಂಗಾಲವು ಕ್ಷೀಣಿಸಲು ತನ್ನ ನೀತಿರೀತಿಗಳೇ ಕಾರಣವೆಂದು ಸರ್ಕಾರಗಳು ಮೊದಲು ಅರಿತುಕೊಳ್ಳಬೇಕಾಗಿದೆ. ಭೂಮಿಯಲ್ಲಿ ಹೀಗೆ ಸಾವಯವ ಇಂಗಾಲವು ಕ್ಷೀಣಿಸಿದ ಕಾರಣದಿಂದಲೇ ಭೂಮಿ ತನ್ನ ಮೈಮೇಲೆ ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಅಂತರ್ಜಲ ಪಾತಾಳ ಕಾಣುತ್ತಿದೆ, ಭೂಮಿಯೂ ದಾಹದಿಂದ ಕುದಿಯುವಂತಾಗಿದೆ. ನೀರು ಕುಡಿಯದ ಭೂಮಿ ತಂಪಾಗಿಲ್ಲದ ಕಾರಣವಾಗಿ ಬೆಳೆಗಳೂ ಹೆಚ್ಚು ನೀರನ್ನು ಕೇಳುತ್ತಿವೆ. ಇಲ್ಲದಿದ್ದರೆ ತಮ್ಮನ್ನು ಸುಟ್ಟುಕೊಳ್ಳುತ್ತವೆ. ರೈತರ ಆತ್ಮಹತ್ಯೆ ಸಾಲ ಸೋಲಗಳ ಮೂಲವನ್ನು ಇಲ್ಲೂ ಹುಡುಕಬೇಕಾಗಿದೆ. ಭೂಮಿಯ ಸಾವಯವ ಇಂಗಾಲವು ಕನಿಷ್ಠ 1.5 ಇರುವಂತಾಗುವವರೆಗೂ ಸರ್ಕಾರ ತಾನೇ ಮುಖ್ಯಕಾರಣವೆಂದು ಹೊಣೆ ಹೊತ್ತುಕೊಂಡು- ರೈತರಿಗೆ ನಷ್ಟ ಪರಿಹಾರ ಅಂದರೆ ಲಾಗೋಡು ಕಟ್ಟಿಕೊಡುವ ಯೋಜನೆಗಳನ್ನು ರೂಪಿಸಬೇಕು. ಭೂಮಿ ಸಾವಯವ ಇಂಗಾಲ ಮತ್ತು ಅಂತರ್ಜಲ ಹೆಚ್ಚಿಸುವ ಬೆಳಕಿನ ಬೇಸಾಯ ನೈಸರ್ಗಿಕ ಕೃಷಿಗೆ ಬದ್ಧರಾಗಬೇಕು. ಆಂಧ್ರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸ್ವಯಂ ತಾವೇ ತಮ್ಮ ಅಧಿಕಾರಿಗಳ ಸಮೂಹದೊಡನೆ ನೈಸರ್ಗಿಕ ಕೃಷಿ ಪ್ರವರ್ತಕ ಪಾಳೇಕರ್‍ರವರ ತರಗತಿಯಲ್ಲಿ ಕೂತು ಪಾಠ ಕೇಳುತ್ತಾರೆ, ಅನುಷ್ಠಾನಕ್ಕೆ ಕಾರ್ಯಪಡೆ ಸಿದ್ಧಪಡಿಸುತ್ತಿದ್ದಾರೆ, ಡಿಪ್ಲೊಮ ಕ್ಲಾಸ್‍ಗಳನ್ನು ಆರಂಭಿಸುತ್ತಿದ್ದಾರೆ. ಕರ್ನಾಟಕದಲ್ಲಿ ಏನಾಗಿದೆ? ನಮ್ಮ ಮುಖ್ಯಮಂತ್ರಿಗಳೂ, ಕೃಷಿ ಸಚಿವರೂ, ತೋಟಾಗಾರಿಕೆ ಸಚಿವರೂ ತಂತಮ್ಮ ಮಂಕುಮಂಪರು ಕಳೆದುಕೊಂಡರೆ ನಾಡಿಗೆ ಪುಣ್ಯ ಲಭಿಸಿದಂತಾಗುತ್ತದೆ.
ನಮ್ಮ ಸರ್ಕಾರಗಳಿಗಂತೂ ಹೊಸದಾಗಿ ಕೆರೆಕಟ್ಟೆ ಕಟ್ಟಿಸುವ ಸಾಮಥ್ರ್ಯ ಇಲ್ಲದೇ ಇರಬಹುದು. ಆದರೆ, ನಮ್ಮ ಪೂರ್ವಿಕರು ಅದರಲ್ಲೂ ಹೆಣ್ಣುಮಕ್ಕಳು ಕಟ್ಟಿಸಿರುವ ಕೆರೆಗಳನ್ನಾದರೂ ಉಳಿಸಿಕೊಳ್ಳುವ ಸಾಮಥ್ರ್ಯ ತೋರಬೇಕಾಗಿದೆ. ಕೆರೆ ಮತ್ತು ಕೆರೆಗಳ ಅನ್ನನಾಳದಂತಿರುವ ಜಲಜಾಡು ಒತ್ತುವರಿಗೆ ಕಠಿಣ ಶಿಕ್ಷೆ ವಿಧಿಸುವ ಸಾಮಥ್ರ್ಯ ಪಡೆದುಕೊಳ್ಳಬೇಕಾಗಿದೆ. ಈಗಿರುವ ಅನ್ನಭಾಗ್ಯ ಯೋಜನೆಯಲ್ಲಿ ಜೋಳ, ರಾಗಿ, ಸಿರಿಧಾನ್ಯ, ಕಾಳು, ಕುಸುಬೆ ಎಣ್ಣೆ ಇತ್ಯಾದಿ ಒಳಗೊಂಡರೆ ಎಷ್ಟೋ ನೀರು ಉಳಿಯಲು ಕಾರಣವಾಗುತ್ತದೆ. ನೀರಿಗಾಗಿ ರಕ್ತ ಕೊಡುತ್ತೇವೆ ಎನ್ನುವ ನಮ್ಮ ಸಿನಿಮಾ ನಟರು ರಕ್ತ ಕೊಡುವುದು ಬೇಡ. ಬದಲಾಗಿ  ರೆಸಾರ್ಟ್ ಖಯಾಲಿಯ ಕಾಯಿಲೆಯಿದ್ದಲ್ಲಿ ಅದರಿಂದ ಮುಕ್ತಿ ಪಡೆದು  ಹಣ ಇದ್ದವರು ಕಾವೇರಿ ಜಲಾನಯನ ಪ್ರದೇಶದಲ್ಲಿ ಭೂಮಿ ಖರೀದಿಸಿ ಅಲ್ಲಿ ಕಾಡು ಬೆಳೆಸಿದರೆ ಆ ನದಿಗೂ ಒಳ್ಳೆಯದು ಹಾಗೂ ಅವರ ಕೊನೆಗಾಲಕ್ಕೂ ಒಳ್ಳೆಯದು. ಹಾಗೇ ನಮ್ಮ ಪ್ರಜ್ಞಾವಂತ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಂದಲೇ ಗಿಡ ನೆಡಿಸಿ ಮರವಾಗಿಸಿದರೆ ಆ ಕಾರ್ಯಚಟುವಟಿಕೆಯೂ ದೊಡ್ಡ ಕಾಣಿಕೆಯಾಗುತ್ತದೆ.
ಜೊತೆಗೇ, ನದೀ ನೀರು ಅವಲಂಬಿತ ವ್ಯವಸಾಯದಲ್ಲಿ ನೆಲ ಮತ್ತು ಜಲ ಎರಡನ್ನೂ ಒಟ್ಟಾಗಿ ನೋಡಬೇಕಾಗಿದೆ. ಮುಖ್ಯವಾಗಿ ಹೆಚ್ಚು ನೀರು ಕೇಳುವ ಭತ್ತದಂತಹ ಬೆಳೆಗಳಲ್ಲಿ ಮಣ್ಣನ್ನು ಕಾಪಾಡಿಕೊಳ್ಳುವ ಸಲುವಾಗಿ ವರ್ಷಕ್ಕೆ ಒಂದೇ ಒಂದು ನೀರಾವರಿ ಬೆಳೆ, ಉದಾಹರಣೆಗೆ- ಕರ್ನಾಟಕದಲ್ಲಿ ಮಳೆಗಾಲದ ಮುಂಗಾರು (ಕುರವೈ) ಕಾಲದಲ್ಲಿ ಭತ್ತ ಬೆಳೆಯಲು ಅವಕಾಶ. ಹಾಗೇ ತಮಿಳುನಾಡು ತನ್ನ ಮಳೆಗಾಲದ ಹಿಂಗಾರು (ಸಾಂಬಾ) ಕಾಲದಲ್ಲಿ ಭತ್ತ ಬೆಳೆಯುವ ಪದ್ಧತಿ ಅಳವಡಿಸಿಕೊಂಡರೆ ಎರಡೂ ರಾಜ್ಯಗಳೂ ತಮ್ಮತಮ್ಮ ಮಣ್ಣನ್ನು ಕಾಪಾಡಿಕೊಂಡಂತಾಗುತ್ತದೆ. ಮಳೆಗಾಲ ಇಲ್ಲದ ಕಾಲಮಾನದಲ್ಲಿ ಮಣ್ಣಿನ ಫಲವತ್ತನ್ನು ಹೆಚ್ಚಿಸುವ ಬೆಳೆ ಬೆಳೆದು ಉಳಿದುಕೊಳ್ಳಬೇಕಾಗಿದೆ ಹಾಗೂ ಕೆಲವೆಡೆ ಬೆಳೆ ಬೆಳೆಯದಿರಲು ಸರ್ಕಾರ ಎಕರೆಗೊಂದಿಷ್ಟು ಪರಿಹಾರ ನೀಡಿದರೂ ಅದು ಮಣ್ಣನ್ನು ಧ್ವಂಸಮಾಡಿದಷ್ಟು ನಷ್ಟವೇನೂ ಆಗುವುದಿಲ್ಲ. ಭೂಮಿಯೂ ಸುಸ್ತಾರಿಸಿಕೊಳ್ಳಬಹುದು.
ಕಾವೇರಿ ಕುಟುಂಬವು ಇದನ್ನೂ ಗಮನಿಸಬೇಕು- ವಿವಾದಗಳನ್ನೇ ಬಂಡವಾಳ ಮಾಡಿಕೊಂಡು ಬದುಕುಳಿಯುವ ಸರ್ಕಾರಗಳಿಂದಲೂ, ಮಣ್ಣು ಬೆಳೆ ಏನು ಎತ್ತ ತಿಳಿಯದೆ ಉಣ್ಣುವ ಹಾಗೂ ನೆಲದಿಂದ ಬೇರು ಕತ್ತರಿಸಿಕೊಂಡಿರುವ ನೀತಿ ನಿರೂಪಕ ಉನ್ನತ ಅಧಿಕಾರಿಗಳು ಹಾಗೂ ನ್ಯಾಯಾಧೀಶರುಗಳಿಂದ ಹೆಚ್ಚು ನಿರೀಕ್ಷಿಸಲಾಗದು. ಅಮೆರಿಕಾವು ತನ್ನ ಡೆಲಾವರ್ ನದಿಯನ್ನು ಕಾಡು ಬೆಳೆಸಿ ಪರಿಸರ ರಕ್ಷಿಸಿ, ಕಾರ್ಖಾನೆಗಳನ್ನು ಎತ್ತಂಗಡಿ ಮಾಡಿಸಿ ನದಿ ಉಳಿಸಿಕೊಂಡಂತೆ ನಾವೂ ಉಳಿಸಿಕೊಳ್ಳಬೇಕು. ಇದಕ್ಕಾಗಿ ಕಾವೇರಿ ಕುಟುಂಬದ ಮುಂದೆ ಒಟ್ಟಾಗಿ ಮಾಡಬೇಕಾಗಿರುವ ಒಂದು ದೊಡ್ಡ ಹೋರಾಟ ಇದೆ. ಜೊತೆಗೇ ನಂನಮ್ಮ ನೆಲ ಹೊಲಗಳಲ್ಲಿ ನೈಸರ್ಗಿಕ ಕೃಷಿ ಅಳವಡಿಸಿಕೊಂಡು, ನೀರು ಹೆಚ್ಚು ಕೇಳದ ಮರಗಿಡ ಬೆಳೆಸುವುದರಲ್ಲೂ ನಮ್ಮ ಉಳಿವು ಇರುವುದನ್ನು ಅರಿತುಕೊಳ್ಳಬೇಕು ಹಾಗೂ ಜೀವಜಲದ ಜೀವ ತೆಗೆದು ಅದನ್ನು ಸರಕಾಗಿಸಿ ಹೆಣ ಮಾಡಿ ಹಣ ಮಾಡಲು ಕಾರ್ಪೋರೇಟ್ ಬಂಡವಾಳಶಾಹಿಗಳಿಗೆ ಒಪ್ಪಿಸಿ ತನ್ಮೂಲಕ ಜಿಡಿಪಿ ಹೆಚ್ಚಿಸುವ ಹುನ್ನಾರದ ನಮ್ಮ ನಿರ್ದಯ ಕೇಂದ್ರ ಸರ್ಕಾರವು ತರಲು ಹೊರಟಿರುವ ರಾಷ್ಟ್ರೀಯ ಜಲನೀತಿಯ ತೂಗುಕತ್ತಿ ನಮ್ಮ ತಲೆಮೇಲೆ ತೂಗುತ್ತಿದೆ. ಈಗ ನಾವು ಕಣ್ಣಲ್ಲಿ ಕಣ್ಣಿಟ್ಟು ಎಚ್ಚರ ವಹಿಸಬೇಕಾಗಿದೆ.