‘ಕಳೆದು ಹೋಗುತ್ತಿರುವ ಗಾಂಧಿ; ಆವರಿಸಿಕೊಳ್ಳುತ್ತಿರುವ ಗೋಡ್ಸೆ’ – ದೇವನೂರ ಮಹಾದೇವ

g g

ಸಮುದಾಯದ ಗೆಳೆಯರು ಇಂದಿನ ಸಂವಾದಕ್ಕೆ ‘ಕಳೆದು ಹೋಗುತ್ತಿರುವ ಗಾಂಧಿ; ಆವರಿಸಿಕೊಳ್ಳುತ್ತಿರುವ ಗೋಡ್ಸೆ’ ಎಂಬ ವಿಷಯ ಕೊಟ್ಟಿದ್ದಾರೆ. ಇದು ಚರ್ಚಾ ಸ್ಪರ್ಧೆಗೆ ಕೊಡಬಹುದಾದ ವಿಷಯದಂತಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಅನೇಕ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಒಂದರಲ್ಲಾದರೂ ಸಮಾಧಾನಕರ ಬಹುಮಾನವನ್ನೂ ಪಡೆದ ರೆಕಾರ್ಡ್ ನನ್ನ ಹೆಸರಲ್ಲಿ ಇಲ್ಲ. ಹಾಗಾಗಿ ಈಗ ಉಲ್ಟಾ ಮಾತಾಡುವೆ.

ಗೋಡ್ಸೆ ಎಂಬಾತ ಇದ್ದ. ಆತ ಗಾಂಧಿಯನ್ನು ಕೊಂದ. ಭಾರತದಲ್ಲಿ ಪ್ರೇತಗಳೂ ಬಹಳ ಇವೆ. ಗೋಡ್ಸೆಯ ಪ್ರೇತವೂ ಇರಲೇ ಬೇಕು. ಗೋಡ್ಸೆಯ ಪ್ರೇತವು ಯಾವುದಾದರೂ ವಿದೇಶಕ್ಕೆ ಹೋಗಿ ಆ ದೇಶದ ಪ್ರೇತಗಳಿಗೆ ತಾನು ಯಾವ ನಾಡಿನಿಂದ ಬಂದಿದ್ದೇನೆ ಎಂದು ಪರಿಚಯ ಮಾಡಿಕೊಳ್ಳಬೇಕಾದರೆ ಅದು ಏನೆಂದು ಹೇಳಬಹುದು? ತಾನು ಗೋಡ್ಸೆ ನಾಡಿನಿಂದ ಬಂದಿದ್ದೇನೆ ಎಂದು ಹೇಳಬೇಕಾಗುತ್ತದೆ. ಗಾಂದಿಯ ಹೆಸರು ಅದರ ಗಂಟಲಲ್ಲಿ ಸಿಕ್ಕಿಹಾಕಿಕೊಂಡರೆ ಆಗ ಅದು ತಾನು ಬುದ್ಧನ ನಾಡಿನಿಂದ ಬಂದಿದ್ದೇನೆ ಅಂತಲೋ ಅಥವಾ ಅಂಬೇಡ್ಕರ್‍ರ ನಾಡಿನಿಂದ ಬಂದಿದ್ದೇನೆ ಅಂತಲೋ ಹೇಳಬೇಕಾಗುತ್ತದೆ. ಗೋಡ್ಸೆ ಹೇಳಿದಂತೆಯೇ ಹೆಗಡೇವಾರ್‍ಗೂ ಗೋಳ್ವಾಳ್ಕರ್‍ಗೂ ಹೇಳಬೇಕಾಗುತ್ತದೆ. ಇವರಾರೂ ತಾವು ಗೋಡ್ಸೆ ನಾಡಿನಿಂದ ಬಂದವರು ಎಂದು ಹೇಳಿಕೊಳ್ಳಲಾರರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಕೂಡ ತುಂಬಾ ಕಷ್ಟಪಟ್ಟು ಇದನ್ನೇ ಅಭಿನಯಿಸುತ್ತಿದ್ದಾರೆ. ಒಂದೊಂದು ಸಲ ಇವರ ಅಭಿನಯ ಸ್ವಲ್ಪ over ಆಗಿಬಿಡುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ-ಚರಕದ ಮುಂದೆ ನೂಲುತ್ತ ಕೂತ ಗಾಂಧಿಗೆ ನಮಿಸುವುದರ ಬದಲು, ಪ್ರಧಾನಿ ನರೇಂದ್ರ ಮೋದಿಯವರು ತಾವೇ ಚರಕದ ಮುಂದೆ ಫ್ಯಾನ್ಸಿಡ್ರೆಸ್ ಬಾಲಕನಂತೆ ಕೂತು ನೂಲಿಲ್ಲದೇ ನೂತಿದ್ದು! ಈ ಛದ್ಮವೇಶಕ್ಕೆ ಗಾಂಧಿಯನ್ನು ಬದಲಿಸಬಹುದಾದ ಶಕ್ತಿ ಇದೆಯೇ? ಅಸಲಿ ಅಸಲಿಯೇ; ನಕಲಿ ನಕಲಿಯೇ. ನಕಲಿಯ ಸ್ವಭಾವದಲ್ಲಿ ಥಳಕು ಹೆಚ್ಚಾಗಿರುತ್ತದೆ ಅಷ್ಟೇ.

ಆದರೂ ‘ಕಳೆದು ಹೋಗುತ್ತಿರುವ ಗಾಂಧಿ; ಆವರಿಸಿಕೊಳ್ಳುತ್ತಿರುವ ಗೋಡ್ಸೆ’ ಎಂಬ ಈ ಆಲೋಚನೆ ನಮ್ಮ ತಲೆಯೊಳಕ್ಕೆ ಬಂದುದಾದರೂ ಯಾಕೆ? ನಿಜ ಇಂದು ದ್ವೇಷ, ಅಸಹನೆ, ಹಿಂಸೆ, ಅಸಮಾನತೆ ಹೆಚ್ಚುತ್ತಿದೆ. ಈ ಕಾರಣಕ್ಕಾಗಿ ಈ ಆಲೋಚನೆ ಬಂದಿದೆ ಎನ್ನುವುದಾದರೆ ಗಾಂಧಿ ತನ್ನ ಕೊನೆಯ ದಿನಗಳಲ್ಲಿ ಹೇಳಿರುವ ಎರಡು ವಾಕ್ಯಗಳನ್ನು ನೆನಪಿಸುವೆ.

1] ಪ್ರೀತಿ ಮತ್ತು ಸಹನೆ ನನ್ನ ಧರ್ಮ
2]ಸಮಾನತೆ ಮತ್ತು ಅಹಿಂಸೆ ಒಂದೇ ನಾಣ್ಯದ ಎರಡು ಮುಖಗಳು.

ಈ ಬೀಜ ವಾಕ್ಯಗಳನ್ನು ಬಿತ್ತನೆ ಬೀಜಗಳನ್ನಾಗಿಸಿ ಬಿತ್ತ ಬೇಕಾಗಿದೆ. ನೀರೆರೆಯಬೇಕಾಗಿದೆ.


gandhi