ಕನ್ಯೆಯಂತೆ ಕಂಗೊಳಿಸುತ್ತಿದೆ ಮಲೆಗಳಲ್ಲಿ ಮದುಮಗಳು-ದೇವನೂರ ಮಹಾದೇವ

[ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಮಲೆಗಳಲ್ಲಿ ಮದುಮಗಳು-೫೦ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಪ್ರೊ.ಜಿ.ಎಚ್.ನಾಯಕ, ಡಿ.ಎಸ್.ನಾಗಭೂಷಣ, ಪ್ರೊ.ಆರ್.ರಾಜಣ್ಣ, ಪ್ರೊ.ಎಂ.ಎಸ್.ಶೇಖರ್ ಮುಂತಾದವರು ಚಿತ್ರದಲ್ಲಿದ್ದಾರೆ. ]
ಮೈಸೂರು,ಅ.೧೪-ಕನ್ನಡದ ಮೊದಲ ಕಾದಂಬರಿ ಇಂದಿರಾಬಾಯಿಗೆ ೧೦೦ ವರ್ಷ ತುಂಬಿದಾಗ ಮಂಗಳೂರಿನಲ್ಲಿ ನಡೆದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಆಗ ಮಲೆಗಳಲ್ಲಿ ಮದುಮಗಳು ಶತಮಾನದ ಕಾದಂಬರಿ ಎಂದಿದ್ದೆ. ಇದು ಕನ್ನಡಕ್ಕೆ ಮಾತ್ರ ಅಲ್ಲ. ಭಾರತದ ವ್ಯಾಪ್ತಿಯಲ್ಲೂ ಕೂಡ ಈಗಲೂ ಇದು ನಿಜ ಅನಿಸುತ್ತದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.
‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗೆ ೫೦ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕುವೆಂಪು ವಿಚಾರ ವೇದಿಕೆ, ಶಿವಮೊಗ್ಗದ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ, ಮೈಸೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಭಾನುವಾರ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಲೆಗಳಲ್ಲಿ ಮದುಮಗಳು-೫೦’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬದುಕು ಬದುಕತೊಡಗುತ್ತದೆ. ಅಲ್ಲಿ ಕಥೆ ಹೇಳುತ್ತಿಲ್ಲ, ಕಥೆ ಕಟ್ಟುತ್ತಿಲ್ಲ. ಇಲ್ಲೇ ವರ್ತಮಾನದಲ್ಲಿ ಜೀವನ ಹುಟ್ಟಿ ಚಲಿಸುತ್ತಿದೆ ಎನಿಸುತ್ತದೆ. ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ ಎಂದು ಕೃತಿಕಾರ ಆರಂಭದಲ್ಲಿ ಹೇಳುವ ಮಾತು ಕೇವಲ ಮಾತಾಗಿ ಉಳಿಯುವುದಿಲ್ಲ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು.
ಈ ಅರಣ್ಯದೊಳಗೆ ಜೀವಸಂಕುಲದ ಪ್ರವಾಹ, ಕಗ್ಗಂಟಾದ ಮನುಷ್ಯನ ಕಥೆಯೂ, ಕಾದಂಬರಿಯ ಹೀರೊ ಹುಲಿಯ ನಾಯಿಯ ಕಥೆಯೂ ಬರುತ್ತದೆ. ಜಡವಾದ ಹುಲಿಕಲ್ಲು ನೆತ್ತಿಯು ಕಂಪನಗಳಿಂದ ಜೀವಂತವಾಗಿದೆ. ಈ ಗ್ರಹಿಕೆ, ಒಳನೋಟ ತಪಸ್ಸು ಮಾಡಿ ವರಪಡೆದವನಿಗೆ ಮಾತ್ರ ಸಾಧ್ಯ. ಹರಿಯುತ್ತಿರುವ ನಿಲುಕದ ಬದುಕಿನಂತೆ ಸ್ಪರ್ಶ, ಭಾಷೆ, ರುಚಿ ಭಾಷೆಯಲ್ಲಿ ಚಿಗುರೊಡೆದು ನಿಂತಿದೆ. ಹೀಗೆ ಮಲೆಗಳಲ್ಲಿ ಮದುಮಗಳಿಗೆ ೫೧ ವರ್ಷ ಆಗಿದ್ದರೂ ಮಕ್ಕಳು ಮೊಮ್ಮಕ್ಕಳು ಆಗಿದ್ದರೂ ಕನ್ಯೆಯಂತೆ ಕಂಗೊಳಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ತಕ್ಕಡಿಗೆ ಏನಾಗಿದೆ?: ಮಲೆಗಳಲ್ಲಿ ಮದುಮಗಳನ್ನು ನಾನು ಮೊದಲು ಓದಿದಾಗ ಬಿ.ಎ ಓದುತ್ತಿದ್ದೆ. ಆಗ ನನ್ನ ಸುತ್ತಮುತ್ತ ಇದ್ದ ವಿಮರ್ಶಕರು, ಲೇಖಕರು ಮಲೆಗಳಲ್ಲಿ ಮದುಮಗಳನ್ನು ಕತ್ತರಿಸಿ, ಕತ್ತರಿಸಿ ತುಂಡು ಹಾಕುತ್ತಿದ್ದರು. ಇವರೆಲ್ಲರೂ ನನ್ನ ಪ್ರಭಾವಿಸುತ್ತಿದ್ದವರೇ. ಆದರೂ ಅವರ ಮುಂದೆ ಒಂದು ಪ್ರಶ್ನೆ ಏಳುತ್ತಿತ್ತು ನನಗೆ.
ಇದುವರೆಗೆ ಕನ್ನಡದಲ್ಲಿ ಉತ್ತಮ ಕಾದಂಬರಿ ಎನಿಸಲ್ಪಟ್ಟ ನಾಲ್ಕಾರು ಕಾದಂಬರಿಗಳನ್ನು ತಕ್ಕಡಿಯ ಒಂದು ಬದಿಯಲ್ಲಿಟ್ಟು, ಇನ್ನೊಂದು ಬದಿಯಲ್ಲಿ ಮದುಮಗಳನ್ನು ಇಟ್ಟರೂ ಕೂಡ, ಗಾತ್ರದಲ್ಲೂ ಗುಣದಲ್ಲೂ ಮದುಮಗಳು ಹೆಚ್ಚು ತೂಗುತ್ತದೆ. ತಕ್ಕಡಿಗೆ ಏನಾಗಿದೆ? ಆಗ ಮುಗ್ಧವಾಗಿ ಕೇಳುತ್ತಿದ್ದೆ. ಈಗ ನನ್ನನ್ನು ನಾನು ಪ್ರಬುದ್ಧ ಎಂದುಕೊಳ್ಳುವುದಾದರೆ, ನೀವು ಕೂಡ ಉದಾರವಾಗಿ ನನ್ನ ಪ್ರಬುದ್ಧ ಎಂದು ಪರಿಗಣಿಸುವುದಾದರೆ, ಈಗಲೂ ನನ್ನ ಪ್ರಶ್ನೆ ಇಷ್ಟೇ. ತಕ್ಕಡಿಗೆ ಏನಾಗಿದೆ? ಎಂದು ಕೇಳಿದರು.
ಈ ಸೋಜಿಗಕ್ಕೆ ಕೃತಿ ಬರೆಯುವ ಸಂದರ್ಭದಲ್ಲಿ ಕೃತಿಕಾರನ ಮನಸ್ಥಿತಿಯ ಬಗ್ಗೆ ಏನಾದರೂ ಎವಿಡೆನ್ಸ್ ಸಿಗಬಹುದಾ ಎಂದು ನೋಡಿದೆ.  ಐ ವಿಟ್ನೆಸ್ ಮಗಳು ತಾರಣಿ ಚಿದಾನಂದ ‘ಮಗಳು ಕಂಡ ಕುವೆಂಪು’ ಕೃತಿಯಲ್ಲಿ ಬರೆಯುತ್ತಾರೆ: ಮಲೆಗಳಲ್ಲಿ ಮದುಮಗಳುಳಲ್ಲಿ ಮುಳುಗಿದ ಕುವೆಂಪು ಅವರಿಗೆ ‘ಕಾಫಿ ಕುಡಿಯಲು ಬನ್ನಿ’ ಎಂದರೆ, ‘ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡಿದ್ದಾಳೆ’ ಎಂದಿದ್ದರಂತೆ. ಮುಂದೆ ಕುವೆಂಪು ಅಂತಕ್ಕನ ಮಗಳು, ಕಾವೇರಿಯ ಸಾವನ್ನು ತಪ್ಪಿಸಲು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ. ಇಲ್ಲಿ ಕೃತಿಕಾರ ಕೃತಿಯನ್ನು ಸೃಷ್ಟಿಸುತ್ತಿದ್ದಾನೋ, ಕೃತಿಯೇ ಕೃತಿಕಾರನನ್ನು ಸೃಷ್ಟಿಸುತ್ತಿದೆಯೋ? ಎಂದು ಹೇಳಿದರು.
ಹಿರಿಯ ವಿಮರ್ಶಕ ಪ್ರೊ.ಜಿ.ಎಚ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್.ನಾಗಭೂಷಣ ಆಶಯ ನುಡಿಗಳನ್ನಾಡಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ಉಪಸ್ಥಿತರಿದ್ದರು. ಹಿರಿಯ ಸಮಾಜವಾದಿ ಪ.ಮಲ್ಲೇಶ್, ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ, ತಾರಿಣಿ ಚಿದಾನಂದಗೌಡ, ಸ.ರ.ಸುದರ್ಶನ, ಪ್ರೊ.ಸುಮಿತ್ರಾಬಾಯಿ, ಜಿ.ಪಿ.ಬಸವರಾಜು, ಪ್ರೊ.ಸಿ.ನಾಗಣ್ಣ, ಉಗ್ರ ನರಸಿಂಹೇಗೌಡ, ರಾಮು, ಪ್ರೊ.ಎಂ.ಎಸ್.ಶೇಖರ್, ಡಾ.ಲತಾ ಮೈಸೂರು, ಪ್ರೊ.ಪಂಡಿತರಾಧ್ಯ, ಡಾ.ಬಿ.ಚಂದ್ರಶೇಖರ್, ಪ್ರೊ.ಸಿ.ಪಿ.ಸಿದ್ಧಾಶ್ರಮ, ಕೆ.ಟಿ.ವೀರಪ್ಪ, ವೀರಭದ್ರಪ್ಪ ಹೆನ್ಲಿ ಮುಂತಾದವರು ಉಪಸ್ಥಿತರಿದ್ದರು.