ಒಳ್ಳೆಯದೇಕೆ ಒಳ್ಳೆಯದು?- ಕೆ ಎನ್ ಗಣೇಶಯ್ಯ

man

ಒಂದು ಕಾಲ್ಪನಿಕ ಜಗತ್ತನ್ನು ಊಹಿಸಿಕೊಳ್ಳೋಣ: ಆ ಕಾಲ್ಪನಿಕ ಪ್ರಪಂಚದಲ್ಲಿ `ಒಳ್ಳೆ’ಯವರು ಅಥವ `ಕೆಟ್ಟ’ವರು ಎಂದು ವಿಂಗಡಿಸುವ ಪರಿಪಾಟವಾಗಲಿ ಅಥವ `ಸರಿ’ `ತಪ್ಪು’ಗಳನ್ನು ಗುರುತಿಸುವ ಪರಿಕಲ್ಪನೆಯಾಗಲಿ ಇಲ್ಲ ಎಂದುಕೊಳ್ಳೋಣ. ಅಲ್ಲಿ ಯಾರನ್ನೂ ಅವರ ಜೀವನ ಕ್ರಮದ ಮೇಲೆ ಅಥವ ಅವರು ಪರಿಪಾಲಿಸುವ ರೀತಿ-ನೀತಿಗಳ ಆಧಾರದ ಮೇಲೆ, ಅಥವ ಅವರು ಕೈಗೊಳ್ಳುವ ಕರ್ಮ-ಕ್ರಿಯೆಗಳ ಮೇಲೆ `ಒಳ್ಳೆ’ಯವರು ಅಥವ `ಕೆಟ್ಟ’ವರು ಎಂದು ಅಳೆಯುವುದಿಲ್ಲ. ಅದು ಒಳ್ಳೆಯದು ಕೆಟ್ಟದು ಎಂಬ ಬೇದಬಾವವೇ ಇಲ್ಲದ ಸಮಾಜ. ಅಂತಹ ಸಮಾಜದಲ್ಲಿ ಬಾಳುವವರು ಇತರರಿಂದ ತಮಗೆ ಬೇಕಾದದ್ದನ್ನು ಕದಿಯಲು, ತಮಗೆ ಲಾಭ ಆಗುವಂತಿದ್ದರೆ ಮೋಸ ಮಾಡಲು, ಸುಳ್ಳು ಹೇಳಲು ಹಿಂಜರಿಯುವುದಿಲ್ಲ. ಕಾರಣ ಅಲ್ಲಿ `ಕೆಟ್ಟ’ದ್ದು ಮಾಡಿದವರನ್ನು ಸಮಾಜ ಬಹಿಷ್ಕರಿಸುವುದಿಲ್ಲ. ಕೊಲೆ ಮಾಡಿದರೂ ಜೈಲಿಗೆ ಹಾಕುವ ಭಯವಿಲ್ಲ. ಅಲ್ಲಿ `ಒಳ್ಳೆ’ಯರಾಗಿದ್ದಕ್ಕೆ `ಬೇಶ್’ ಎನ್ನುವವರೂ ಇಲ್ಲ. ಒಂದು ರೀತಿಯಲ್ಲಿ ಅಂತಹ ಸಮಾಜವಾಸಿಗಳಿಗೆ `ಸುಳ್ಳು’ ಸುಳ್ಳಾಗಿ ಕಾಣದು, `ಮೋಸ’ ಮತ್ತು `ಕಳ್ಳ’ತನ ವಂಚನೆಯಾಗಿ ಕಾಣವು. ಆ ಪರಿಕಲ್ಪನೆಗಳೇ ಅಲ್ಲಿರವು.
ಅಶ್ಚರ್ಯವೆಂದರೆ ಅಂತಹ ಭೀಕರ ಪ್ರಪಂಚ ನಮ್ಮ ಕಣ್ಣ ಮುಂದೆಯೇ ಇದೆ! ಆದರೆ ಅದನ್ನು ಸ್ವಾಭಾವಿಕವೆಂದು ಸ್ವೀಕರಿಸಿಬಿಟ್ಟಿರುವುದರಿಂದ ನಮಗೆ ಅದು ಇಷ್ಟು ಭೀಕರವಾಗಿ ಕಾಣದು. ಇದರ ಪರಿಚಯಕ್ಕೆಂದು ಒಂದು ಉದಾಹರಣೆ ಪರಿಗಣಿಸೋಣ:
Pottery Wasp [ಕುಡಿಕೆಯ ಕಣಜ) ಎಂದು ಕರೆಯಲ್ಪಡುವ ಒಂದು ಕೀಟ ಪ್ರಭೇದದಲ್ಲಿ, ತಾಯಿ ಕೀಟ, ತನ್ನ ಮಕ್ಕಳಿಗಾಗಿ ಒಂದು ಇಂಚು ಅಗಲದ ಮಣ್ಣಿನ ಕುಡಿಕೆಯಂತಹ ಗೂಡು ಕಟ್ಟುತ್ತದೆ- ಮರದ ರೆಂಬೆಗಳ ಮೇಲೆ ಗೋಡೆಯ ಮೇಲೆ, ಅಥವ ಸೂರಿನ ದೂಲುಗಳಲ್ಲಿ. ನಂತರ, ಆ ಗೂಡಿನೊಳಗೆ ಮೊಟ್ಟೆಯಿಟ್ಟು, ತನ್ನ ಮರಿಗೆ ಬೇಕಾಗುವ ಆಹಾರಕ್ಕೆಂದು ಸುತ್ತಲ ಪರಿಸರದಲ್ಲಿ ಹುಡುಕಾಡಿ ಒಂದು ಸೂಕ್ತವಾದ ಹುಳುವನ್ನು ಬೇಟೆಯಾಡುತ್ತದೆ. ಅದಕ್ಕೆ ನಂಜೇರುವ ರಸಾಯನಿಕವನ್ನು ಕೊಟ್ಟು ಗೂಡಿನತ್ತ ಎಳೆದು ತರುತ್ತದೆ. ಇದೆಲ್ಲವೂ ನಡೆಯುತ್ತಿದ್ದಂತೆ, ಅಲ್ಲಿಯೇ ಮರೆಯಲ್ಲಿ ಕೂತ ನೊಣವೊಂದು ಸೂಕ್ಷ್ಮವಾಗಿ ಈ ಕಣಜದ ಚಲನವಲನಗಳನ್ನು ಗಮನಿಸುತ್ತಲೇ ಇರುತ್ತದೆ. ಕಣಜವು ಆ ನಂಜೇರಿದ ಹುಳುವನ್ನು ಗೂಡಿನೊಳಗೆ ಎಳೆದಿಟ್ಟು, ಅದರ ಮೇಲೆ ಮೊಟ್ಟಿಯಿಟ್ಟು, ಆ ಗೂಡನ್ನು ಮುಚ್ಚಲೆಂದು ಮತ್ತಷ್ಟು ಮಣ್ಣು ತರಲು ಹೊರಗೆ ಹೋಗುತ್ತದೆ. ಹುಳುವನ್ನು ಗೂಡಿನೊಳಗೆ ಎಳೆದು ತರುವವರೆಗೆ ಮರೆಯಲ್ಲಿಯೇ ಕೂತು ಕಾಯುತ್ತಿದ್ದ ನೊಣವು ತಾಯಿ ಕಣಜ ಹೊರಗೆ ಹೋಗುತ್ತಿದ್ದಂತೆಯೇ, ಕುಡಿಕೆಯತ್ತ ಬಂದು ಅದರ ಮೇಲೆ ಹಾರಾಡುತ್ತ ತನ್ನದೇ ಮರಿಗಳನ್ನು ತಪತಪನೆ ಆ ಗೂಡಿನೊಳಗೆ ಬೀಳಿಸಿ ಹಾರಿ ಮರೆಯಾಗುತ್ತದೆ. ಗೂಡಿನೊಳಗೆ ಬಿದ್ದ ಆ ನೊಣದ ಮರಿಗಳು, ಮೆಲ್ಲಗೆ ಅಲ್ಲಿರುವ ಹುಳುವಿನ ಕೆಳಗೆ ಸರಿದು ಅವಿತುಕೊಳ್ಳುತ್ತವೆ. ಇದಾವುದರ ಪರಿವೆಯೇ ಇಲ್ಲದ ತಾಯಿ ಕಣಜ, ಮಣ್ಣು ತಂದು ಕುಡಿಕೆಯ ಬಾಯನ್ನು ಮುಚ್ಚಿ ಹೊರಡುತ್ತದೆ – ತನ್ನ ಮಕ್ಕಳ ಪೋಷಣೆಗೆ ಬೇಕಾದ ವ್ಯವಸ್ಥೆ  ಮಾಡಿರುವೆನೆಂಬ ನಂಬಿಕೆಯಿಂದ, ತನ್ನ ಮೊಟ್ಟೆಗಳು ಮರಿಗಳಾಗಿ ಆಹಾರ ತಿಂದು ಬೆಳೆದು ಹೊಸ ಕಣಜಗಳಾಗಿ ಹೊರಬರುತ್ತವೆ ಎಂಬ ಭರವಸೆಯಿಂದ. ಆದರೆ, ಅದರ ಮೊಟ್ಟೆಗಳಿಂದ ಮರಿಗಳು ಹೊರಗೆ ಬರುವಷ್ಟರಲ್ಲಿಯೇ, ನೊಣದ ಮರಿಗಳು ಅಲ್ಲಿನ ಆಹಾರವನ್ನು ತಮ್ಮದಾಗಿಸಿಕೊಂಡಿರುತ್ತವೆ. ಹಾಗಾಗಿ ಆ ಕುಡಿಕೆಯ ಒಳಗೆ ಕಣಜದ ಸಂತತಿಯ ಬದಲಿಗೆ ನೊಣದ ಮರಿಗಳು ಬೆಳೆಯುತ್ತವೆ. ಕಣಜವು ನೊಣ ಮಾಡಿದ ಮೋಸಕ್ಕೆ ಬಲಿಯಾಗಿರುತ್ತದೆ.
ಇಂತಹ ಮೋಸದಾಟಗಳು ಜೀವಪ್ರಪಂಚದಲ್ಲಿ ಎಲ್ಲೆಲ್ಲೂ ಕಾಣಸಿಗುತ್ತವೆ. ಉದಾಹರಣೆಗೆ ಕಾಗೆಗೆ ಕಾಣದಂತೆ ಅದರ ಗೂಡಿನಲ್ಲಿ ಕೋಗಿಲೆ ತನ್ನ ಮೊಟ್ಟೆಯಿಟ್ಟು ಕಾಗೆಗೆ ಅದರದೇ ಮೊಟ್ಟೆಗಳೆಂದು ನಂಬಿಸಿ, ಅದರ ಕೈಯಲ್ಲಿಯೇ ಅವನ್ನು ಬೆಳೆಸುವ ಕ್ರಮದಲ್ಲೂ ಇಂತದೆ ಮೋಸವನ್ನು ಕಾಣುತ್ತೇವೆ. ಅಲ್ಲೆಲ್ಲ, ತಮ್ಮ ಮಕ್ಕಳ ಏಳಿಗೆಗಾಗಿ ಬೇರೊಬ್ಬರ ಮಕ್ಕಳ ಊಟವನ್ನು ಕದಿಯುವ ಸ್ವಾರ್ಥವನ್ನು ಕಾಣಬಹುದಾದರೂ ಅವನ್ನು `ಕೆಟ್ಟ’ವರ್ತನೆ ಎಂದು ಯಾರೂ ಹೀಗಳೆಯುವುದಿಲ್ಲ. ವಿಕಾಸದ ಕಿಟಕಿಯಿಂದ ಅವಲೋಕಿಸಿ, `ಇವು ನೊಣ ಮತ್ತು ಕೋಗಿಲೆಗಳು ತಮ್ಮ ಸಂತತಿಗಳ ವೃದ್ದಿಗಾಗಿ ಬೆಳೆಸಿಕೊಂಡಿರುವ ಮಸಲತ್ತುಗಳು’ ಎಂದಷ್ಟೆ ತೀರ್ಮಾನಿಸಿ ಬಿಟ್ಟುಬಿಡುತ್ತೇವೆ. ಆ ಪ್ರಪಂಚದಲ್ಲಿ ಆ ಮಸಲತ್ತುಗಳನ್ನು ಅಳವಡಿಸಿಕೊಳ್ಳುವುದೆ `ಸರಿ’ಯಾದ ಕ್ರಮ. ಆ ಕ್ರಮವನ್ನು ಪಾಲಿಸದ ಜೀವಿಗಳು ಉಳಿಯವು. ಹಾಗೆಂದೆ ಅವುಗಳ ಪ್ರಪಂಚವನ್ನು ಅವಲೋಕಿಸುವಾಗ ಆ ವರ್ತನೆಗಳನ್ನು `ಒಳ್ಳೆ’ಯವು `ಕೆಟ್ಟ’ವು ಎಂದು ವರ್ಗೀಕರಿಸುವುದಿಲ್ಲ. ಆ ಪ್ರಪಂಚದಲ್ಲಿ ಸರಿ ತಪ್ಪುಗಳ ಪರಿಕಲ್ಪನೆಯೆ ಇಲ್ಲ.
ಪ್ರಾಣಿಗಳಿಂದಲೆ ಮಾನವನೂ ವಿಕಾಸಗೊಂಡಿರುವುದರಿಂದ ತಮ್ಮ ಮಕ್ಕಳನ್ನು ಬೆಳೆಸುವೋಸುಗ ಬೇರೊಬ್ಬರ ಮಕ್ಕಳ ಊಟಕ್ಕೆ ಕನ್ನ ಹಾಕುವ ಈ ಸ್ವಾರ್ಥ ಬುದ್ದಿ ಅವನಲ್ಲಿಯೂ ತುಂಬಿರುವುದು ಸ್ವಾಭಾವಿಕ. ಆದ್ದರಿಂದ, ಬೇರೊಬ್ಬರನ್ನು ವಂಚಿಸಿ, ಅವರ ಮಕ್ಕಳಿಗೆ ಸಲ್ಲಬೇಕಿದ್ದ ಸಂಪತ್ತನ್ನು ತಮ್ಮ ಮಕ್ಕಳ ಉದ್ದಾರಕ್ಕೆ ಕಸಿದುಕೊಳ್ಳುವ ಮಸಲತ್ತುಗಳನ್ನು ಮಾನವರೂ ಅಳವಡಿಸಿಕೊಂಡಿದ್ದರೆ ಅದು ವಿಕಾಸದ ಫಲವಷ್ಟೆ- ನೊಣ ಮತ್ತು ಕೋಗಿಲೆಗಳಲ್ಲಿದ್ದಂತೆ. ಒಂದೆ ವ್ಯತ್ಯಾಸವೆಂದರೆ ಮಾನವನಲ್ಲಿ ಕಾಣುವ ಈ ಸ್ವಾರ್ಥವನ್ನು ಮಾತ್ರ ನಾವು ಮೋಸ, ವಂಚನೆ, `ಕೆಟ್ಟ’ದ್ದು ಎಂದು ವರ್ಗೀಕರಿಸುತ್ತೇವೆ. ಪ್ರಾಣಿ ಪ್ರಪಂಚದಲ್ಲಿಲ್ಲದ `ಸರಿ’ `ತಪ್ಪು’ಗಳ ಪಟ್ಟವನ್ನು ನಮಗೆ ಕಟ್ಟಿಕೊಳ್ಳುತ್ತೇವೆ. ನಾವೇಕೆ ಹೀಗೆ ಮಾಡಿದ್ದೇವೆ? ಸ್ವಾರ್ಥವೇ ಬದುಕಿನ ಮೂಲಮಂತ್ರವಾಗಿರುವ ಸ್ಥಿತಿಯಿಂದ ಮಾನವ ವಿಕಾಸಗೊಂಡಿರುವುದರಿಂದ ಅವನಿಗೆ ಆ ಸ್ವಾರ್ಥವನ್ನು ತೊರೆಯುವುದು ಕಷ್ಟವೆ. ಹಾಗಿರುವಾಗ ಅವನು ಅದೆಲ್ಲವನ್ನೂ ತೊರೆದು ಒಳ್ಳೆಯವನಾಗಬೇಕೆನ್ನುವುದು ನ್ಯಾಯವೆ? (ಈ ನ್ಯಾಯ ಅನ್ಯಾಯದ ಪ್ರಶ್ನೆಯೂ ನಾವು ಮಾಡಿಕೊಂಡಿರುವ ನ್ಯಾಯಾಲಯದ ಪರಿಣಾಮವೆ!). ಬೇರೊಬ್ಬರ ಒಳಿತಿಗಾಗಿ ತಮ್ಮ ಒಳಿತನ್ನೂ ತ್ಯಾಗ ಮಾಡಬೇಕು ಎನ್ನುವ ನೀತಿ ನಮ್ಮ ವೈಯುಕ್ತಿಕ ಏಳಿಗೆಗೆ ಅಡ್ಡಿ ಒಡ್ಡುತ್ತದೆ. ಅಂತಹ ಚಿಂತನೆ ವಿಕಾಸದ ಮೂಲಕ ನಮ್ಮಲ್ಲಿ ರೂಪುಗೊಂಡಿರುವ ಅಂತರ್ಯದ ತುಡಿತಕ್ಕೆ ವಿರುದ್ದವಾದ ನೀತಿ. ವೈಯುಕ್ತಿಕ ಒಳ್ಳೆಯದಕ್ಕೆ ವಿರುದ್ದವಾದ ಅಂತಹ ವರ್ತನೆಗಳನ್ನು ಪಾಲಿಸಿಕೊಂಡು ಬರಲು ಮಾನವನೇಕೆ ಬದ್ದನಾದ? ನಾವೇಕೆ ಒಳ್ಳೆಯ ಗುಣಗಳನ್ನು ಗೌರವಿಸತೊಡಗಿದ್ದೇವೆ?
ಕಾರಣ ಸರಳ: ನಮ್ಮಲ್ಲಿನ ಸ್ವಾರ್ಥವು ನಮಗೆ ಜೀವ ವಿಕಾಸದ ಬಳುವಳಿಯಾದರೆ, `ಒಳ್ಳೆ’ಯವು ಎಂದು ನಾವು ಗುರುತಿಸಿಕೊಳ್ಳುವ ನೈತಿಕತೆಗಳು ನಮ್ಮ ಸಂಸ್ಕೃತಿಯ ವಿಕಾಸದಿಂದ (Cultural Evolution) ಬಳುವಳಿ. ಡಾರ್ವಿನ್ನನ ವಿಕಾಸವಾದದ ಆವರಣದ ಹೊರಗೆ ನಡೆಯುವ ಈ ಸಂಸ್ಕೃತಿಯ ವಿಕಾಸದ ಪರಿಣಾಮಗಳ ವಿಶಾಲತೆ ಮತ್ತು ವಿಸ್ತಾರಗಳ ಬಗೆಗಿನ ಸಂಶೋಧನೆ ಇತ್ತೀಚೆಗೆ ಮಾನವಶಾಸ್ತ್ರಜ್ಞರಿಗೆ ರಸಬೋಜನವಾಗುತ್ತಿದೆ. ಮಾನವ ಸಣ್ಣ ಗುಂಪುಗಳಲ್ಲಿ ಜೀವಿಸಲು ಪ್ರಾರಂಬಿಸಿದ ಕಾಲದಿಂದಲೂ ಗಟ್ಟಿಗೊಳ್ಳುತ್ತಿರುವ ಈ ಸಂಸ್ಕೃತಿಯ ವಿಕಾಸದ ಫಲವೇ ನಾವಿಂದು ಬಟ್ಟೆ ತೊಡಲು ಕಾರಣ (ಕೆಲವರು ಬಟ್ಟೆ ಬಿಚ್ಚಲೂ ಅವರ ಸಂಸ್ಕೃತಿಯೇ ಕಾರಣ!); ಊರು ಕೇರಿಗಳನ್ನು ಬೆಳೆಸಲು ಕಾರಣ; ರಾಜ್ಯ ದೇಶಗಳನ್ನು ಕಟ್ಟಿ ಹೋರಾಡಲು, ಹಾಗೆ ಬೆಳೆಸಿದ್ದನ್ನು ರಕ್ಷಿಸಿಕೊಳ್ಳಲೂ ಕಾರಣ. ಹಾಗೆಯೇ ಹೆಂಗಸರು ಅರಸಿನ ಕುಂಕುಮ ಹಚ್ಚುವುದು, ಬುರುಕ ಹಾಕುವುದು, ಮದುವೆಯ ನಂತರ ಗಂಡಸರು ಹೆಂಡತಿಯರನ್ನು ತಮ್ಮ ಮನೆಗೆ (patriarchal) ಕರೆದೊಯ್ಯುವುದು, ಇಂತಿಂತಹ ಸಂಬಂಧಗಳಲ್ಲಿಯೇ ಮದುವೆಯಾಗಬೇಕು ಎನ್ನುವ ಆಚರಣೆಗಳು, ಹೀಗೆ ಹಲವು ಆಚಾರ ವಿಚಾರಗಳೂ ಕೂಡ ಈ ಸಂಸ್ಕೃತಿಯ ವಿಕಾಸದ ಪರಿಣಾಮವೆ. ಜೀವ ವಿಕಾಸದಲ್ಲಿ ಪ್ರತಿಜೀವಿಯ ಏಳಿಗೆ ಪ್ರಾಮುಖ್ಯವಾದರೆ ಸಂಸ್ಕೃತಿಯ ವಿಕಾಸದಲ್ಲಿ ಸಮಾಜದ ಏಳಿಗೆ ಪ್ರಾಮುಖ್ಯವಾಗುತ್ತದೆ. ಜೀವ ವಿಕಾಸದ ಪರಿಣಾಮಗಳು ನಮ್ಮ ಡಿಎನ್‍ಎ ನಲ್ಲಿ `ಕೋಡೀ’(ಅoಜe)ಕರಣಗೊಂಡರೆ, ಸಂಸ್ಕೃತಿಯ ವಿಕಾಸದ ಪರಿಣಾಮಗಳು ನಮ್ಮ ಜೀವನ ಕ್ರಮದಲ್ಲಿ ಧರ್ಮನೀತಿಗಳಲ್ಲಿ, ಸಂವಿಧಾನದಲ್ಲಿ `ಕ್ರೋಡೀ’(Code))ಕರಣಗೊಂಡಿವೆ. ಈ ಸಂಸ್ಕೃತಿಯ ವಿಕಾಸದ ಪರಿಣಾಮಗಳು ಭಾಷೆಯ ಉಗಮದಿಂದ ಹಿಡಿದು ವೈಜ್ಞಾನಿಕ ಬೆಳವಣಿಗೆಗಳವರೆಗೆ ಹರಡಿಕೊಂಡಿವೆ.
ಸಂಸ್ಕೃತಿಯ ವಿಕಾಸ ನಮ್ಮ ಸಮಾಜದ ಸಮೂಹ ಚಿಂತನೆಯ ಫಲವೆಂದೆ ಭಾವಿಸಬಹುದು. ಸಮುದಾಯಗಳನ್ನು ಕಟ್ಟಿಕೊಂಡು ಬದುಕಲು ಪ್ರಾರಂಭಿಸಿದ ಮಾನವನಿಗೆ ಅದರಿಂದಾಗುವ ಲಾಭಗಳ ಪರಿಚಯವಾಗತೊಡಗಿತು. ಅಪಾಯಕಾರಿ ಘಟನೆಗಳನ್ನು ಎದುರಿಸುವಲ್ಲಿ, ಒಟ್ಟಿಗೆ ಬಾಳುವುದರ ಪ್ರಯೋಜನಗಳನ್ನು ಅರಿತುಕೊಂಡ- ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಅತೀವೃಷ್ಟಿಯ ಸಮಯವೆ ಇದಕ್ಕೊಂದು ನಿದರ್ಶನ. ಶತ್ರುಗಳನ್ನು ಎದುರಿಸುವಾಗ ಒಗ್ಗಟ್ಟಿನಲ್ಲಿರುವ ಲಾಭ ಅರಿತುಕೊಂಡ. ಸಮುದಾಯಗಳಲ್ಲಿ ಬದುಕುವಾಗ ಜ್ಞಾನವನ್ನು ಹಂಚಿಕೊಳ್ಳುವುದರ ಪ್ರಯೋಜನವನ್ನೂ ಅರಿತ. ಎಲ್ಲರೂ ಸ್ವಾರ್ಥಿಗಳಾದರೆ, ಅಥವ ತಮ್ಮ ವೈಯಿಕ್ತಿಕ ಒಳಿತನ್ನೇ ಹೆಚ್ಚಿಸಲು ತೊಡಗಿದರೆ, ಅಂತಹ ಸಮಾಜದಲ್ಲಿ ಅಂತರ್ಕಲಹಗಳು ಹೆಚ್ಚುತ್ತವೆ ಎಂದರಿತ. ಬದಲಿಗೆ ಸಮಾಜಮುಖಿ ನಡತೆಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಿ, ಅಂತರಿಕ ಒಗ್ಗಟ್ಟು ಹೆಚ್ಚಿ ಸಮುದಾಯದ ಔನ್ನತ್ಯ ಹೆಚ್ಚುತ್ತದೆ; ಇದರಿಂದ ತನ್ನ ವೈಯುಕ್ತಿಕ ಏಳಿಗೆ ಹೆಚ್ಚುತ್ತದೆ ಎಂದೂ ಅರಿತ. ಆದ್ದರಿಂದ ಈ ಸಮುದಾಯ ಸದಾ ಒಡೆಯದೆ, ಒಗ್ಗಟ್ಟಾಗಿ ಬಾಳಬೇಕಾದರೆ ಸದಸ್ಯರು ಪೈಪೋಟಿಗೆ ತೊಡಗದೆ, ಕೈಜೋಡಿಸಬೇಕೆಂದೂ ಅರಿತ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮ ವೈಯುಕ್ತಿಕ ಆಸೆ ಆಕಾಂಕ್ಷೆಗಳನ್ನು ಒಂದಷ್ಟು ಮಟ್ಟಿಗಾದರೂ ತ್ಯಾಗ ಮಾಡಬೇಕೆಂದೂ ಅರಿತ. ಅದರಂತೆ ಕೆಲವು ಅಲಿಖಿತ `ಕಾನೂನು’ ಗಳನ್ನು ಎಲ್ಲರೂ ಪಾಲಿಸಬೇಕೆಂದು ತೀರ್ಮಾನಿಸಿದರು. ಹಾಗೆ ಸೃಷ್ಟಿಯಾದ ರೀತಿನೀತಿಗಳೆ ಈ `ಒಳ್ಳೆ’ಯ ಮತ್ತು `ಕೆಟ್ಟ’ ಗುಣಗಳು. ಇವೆಲ್ಲವೂ ಸಾಮಾನ್ಯವಾಗಿ ವೈಯುಕ್ತಿಕ ಒಳಿತಿಗೆ ವಿರುದ್ದವೆನಿಸಿದರೂ ಸಮುದಾಯಕ್ಕೆ ಒದಗುವ ಉಪಯೋಗದಿಂದ ಪರೋಕ್ಷವಾಗಿ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ-ಟ್ರಾಫಿಕ್ ವೃತ್ತಗಳಲ್ಲಿ ಎಲ್ಲರೂ ಕಾನೂನು ಪಾಲಿಸಿದರೆ ಯಾರೋ ಕೆಲವರಿಗೆ ತಾತ್ಕಾಲಿಕವಾಗಿ ತಡೆಯೆನಿಸಿದರೂ, ಇಡೀ ಸಮುದಾಯಕ್ಕೆಒಳ್ಳೆಯದಾಗುವಂತೆ. ಹಾಗಾಗಿ `ಒಳ್ಳೆ’ಯ ನಡತೆಪೋ ಗಳೆಲ್ಲವೂ ವಿಕಾಸಗೊಂಡಿರುವುದು, ಮೇಲ್ನೋಟಕ್ಕೆ ವೈಯುಕ್ತಿಗವಾಗಿ ವಿರುದ್ದ ಎನಿಸಿದರೂ ಅಂತಿಮವಾಗಿ ಎಲ್ಲರೂ ಅದರಿಂದ ಲಾಭ ಪಡೆಯುವುದು ಖಂಡಿತ.
`ಒಳ್ಳೆ’ಯವರು `ಕೆಟ್ಟ’ವರು ಎನ್ನುವ ವ್ಯಾಖ್ಯಾನ ಆಯಾಕಾಲದ ಸಮಾಜದ ಒಳಿತಿಗಾಗಿ ನಾವೇ ಬೆಳೆಸಿಕೊಂಡಿರುವ ಪರಿಪಾಟವಷ್ಟೆ. ಕಾಲಕಾಲಕ್ಕೆ ಅವುಗಳ ಪ್ರಸ್ತುತತೆಯೂ ಬದಲಾಗುವುದನ್ನು ಅರಿಯುವುದೂ ಮುಖ್ಯ. `ಸತಿಯೊಡನೆ ಸಹಗಮನ’ ಮಾಡದ ಹೆಣ್ಣು ಒಂದು ಕಾಲದಲ್ಲಿ `ಸರಿ’ಯಾದ ಕೆಲಸ ಮಾಡದ `ಕೆಟ್ಟವಳಾಗಿದ್ದಳು. ಆದರೆ ಇಂದು ಹಾಗೆ ಮಾಡಿಕೊಳ್ಳುವವರು ನಿಜಕ್ಕೂ ಮತಿ-`ಹೀನ’ರು. ಹಿಂದೆ `ಕಾಡುಮೃಗ’ಗಳನ್ನು ಬೇಟೆಯಾಡಿ, ಊರಮಂದಿಗೆ ರಕ್ಷಣೆ ಕೊಡುವುದು ಗೌರವಯುತವಾಗಿದ್ದು ಹಾಗೆ ಮಾಡಿದವರಿಗೆ ವೀರಗಲ್ಲುಗಳನ್ನು ನೆಡುತ್ತಿದ್ದರು. ಆದರೆ ಇಂದು ಹುಲಿಯೇ ಊರಿಗೆ ನುಗ್ಗಿ ತೊಂದರೆ ಕೊಡುತ್ತಿದ್ದರೂ ಅದನ್ನು ಹೊಡೆದು ಬೇಟೆಯಾಡುವುದು ಕಾನೂನಿನ ದೃಷ್ಟಿಯಿಂದಷ್ಟೆ ಅಪರಾಧವಲ್ಲದೆ, ಪರಸರವಾದಿಗಳ ದೃಷ್ಟಿಯಲ್ಲೂ `ಕೆಟ್ಟ’ ವರ್ತನೆ! ನಮ್ಮ ಧರ್ಮ ನೀತಿಗಳೂ ಸಹ ಸಮುದಾಯಗಳ ಒಳಿತಿಗಾಗಿ ವಿಕಾಸಗೊಂಡಿರುವ ವ್ಯವಸ್ಥೆಗಳು. ಅವನ್ನು ಕಲ್ಲಿನಲ್ಲಿ ಕೆತ್ತಿರುವ ಆದೇಶಗಳಂತೆ ಅನುಸರಿಸುವುದು ಮೂರ್ಖತನವೇ ಸರಿ.
ಸರಿ ತಪ್ಪುಗಳನ್ನು ವಿವೇಚಿಸುವುದರಲ್ಲಿ ಮತ್ತೊಂದು ಮೂರ್ಖತನವಿದೆ: ಇದು `ಕೆಟ್ಟ’ದ್ದನ್ನು ಮಾಡಿಯೂ ತಮ್ಮನ್ನು ಸಮರ್ಥಿಸಿಕೊಳ್ಳುವವರ ವಾದ. ಅದು ಹೀಗಿದೆ: ಸಮಾಜದಲ್ಲಿ ಎಲ್ಲರೂ ಒಳ್ಳೆಯವರೇ ಆಗಿದ್ದು, ಕೆಟ್ಟವರೆ ಇಲ್ಲದಿದ್ದಿದ್ದರೆ, ನಾವು ಯಾರನ್ನೂ ಒಳ್ಳೆಯವರೆಂದು ಹೇಳಲಾಗುತ್ತಿರಲಿಲ್ಲ. ಕೆಟ್ಟವರಿಗೆ ಹೋಲಿಸಿದಾಗ ಮಾತ್ರ `ಒಳ್ಳೆ’ಯವರನ್ನು ಒಳ್ಳೆಯವರೆಂದು ಹೇಳಲು ಸಾಧ್ಯ. ಹಾಗಾಗಿ `ಒಳ್ಳೆ’ಯವರು ಒಳ್ಳೆಯವರಾಗಿ ಕಾಣುತ್ತಿರುವುದು `ಕೆಟ್ಟ’ವರು ಕೆಟ್ಟವರಾಗಿ ಬಾಳಿ ಅದರ ದುರ್ಬಾಗ್ಯವನ್ನು ತಮ್ಮ ಹೆಗಲಮೇಲೆ ಹೊತ್ತಿರುವುದರಿಂದ. ಕೆಟ್ಟವರ ಈ ತ್ಯಾಗದಿಂದಲೆ ಒಳ್ಳೆಯವರು ಗೌರವ, ಘನತೆ ಪಡೆಯುತ್ತಿರುವುದು. ಆದ್ದರಿಂದ ಒಳ್ಳೆಯವರಿಗಾಗಿ ಇಂತಹ ತ್ಯಾಗ ಮಾಡುತ್ತಿರುವ ಕೆಟ್ಟವರೇ ನಿಜಕ್ಕೂ `ಒಳ್ಳೆ’ಯವರು; ಹಾಗೂ ಅವರ ಈ ತ್ಯಾಗಮನೋಭಾವದ ಲಾಭ ಪಡೆದು `ಒಳ್ಳೆ’ಯವರೆಂಬ ಗೌರವ ಗಿಟ್ಟಿಸಿಕೊಂಡು ಸಮಾಜದ ಎಲ್ಲ ಸವಲತ್ತುಗಳಿಗೆ ಬಾಜ್ಯರಾಗಿರುವ, ಒಳ್ಳೆಯವರೆ ನಿಜಕ್ಕೂ ಸ್ವಾರ್ಥಿಗಳು; ಕೆಟ್ಟವರನ್ನೆ ಆಧರಿಸಿ ಬದುಕುತ್ತಿರುವ ಪರಾವಲಂಬಿಗಳು. ಹಾಗಾಗಿ ಒಳ್ಳೆಯವರು ನಿಜಕ್ಕೂ ಕೆಟ್ಟವರು ಮತ್ತು ಅವರಿಗಾಗಿ ತಮ್ಮತನವನ್ನೆ ತ್ಯಾಗ ಮಾಡಿರುವ ಕೆಟ್ಟವರು ನಿಜಕ್ಕೂ ಒಳ್ಳೆಯವರು.
ಇಂತಹ ಸುರುಳು ಸುತ್ತಿನ ತತ್ವವನ್ನಾಧರಿಸಿದ ಮೂರ್ಖ ವಾದಗಳನ್ನು ತೊರೆದು ಎಲ್ಲರೂ ಒಳ್ಳೆಯದನ್ನು ಪಾಲಿಸಿದರೆ ಪ್ರಪಂಚ ಎಂದಿಗೂ ಎಲ್ಲರಿಗೂ ಒಳ್ಳೆಯದಾಗಿರುತ್ತದೆ. ಮಾನವನ ಸಮುದಾಯ ಜೀವನ ಆನಂದದಾಯಕವಾಗುತ್ತದೆ. ವಸುದೈವ ಕುಟುಂಬವು ಸ್ವರ್ಗವಾಗುತ್ತದೆ. ಇಡೀ ಪ್ರಪಂಚವೇ `ಒಳ್ಳೆ’ಯದನ್ನು, `ಒಳ್ಳೆ’ಯವರನ್ನು ಮೆಚ್ಚಿ, ಹೊಗಳುತ್ತಿರುವುದು ವಸುದೈವ ಕುಟುಂಬದ ಬೆಳವಣಿಗೆಗಾಗಿ, ಸುಖಜೀವನಕ್ಕಾಗಿ. ಮತ್ತು ಅದರಿಂದ ಎಲ್ಲ ಮಾನವರಿಗೂ ಸಿಗುವ ವೈಯುಕ್ತಿಕ ಒಳಿತಿಗಾಗಿ.