ಒಂದು ದಲಿತ ಆತ್ಮಕತೆ -ನಟರಾಜ್ ಹುಳಿಯಾರ್

 

nataraj
ಈ ಜಾನಪದ ಕತೆ ನಿಮ್ಮೂರ ಕಡೆಯೂ ಇರಬಹುದು: ಚಳಿಯಲ್ಲಿ ಹೊದೆಯಲು ಕಂಬಳಿ ಕೂಡ ಇಲ್ಲದೆ ನಡುಗುತ್ತಾ ಮಲಗಿದ ಬಡವನ ಗುಡಿಸಿಲಿಗೆ ಕಳ್ಳನೊಬ್ಬ ನುಗ್ಗುತ್ತಾನೆ. ತನ್ನ ಕಂಬಳಿ ತೆಗೆದು ಬದಿಗಿಟ್ಟು ಗುಡಿಸಿಲನ್ನೆಲ್ಲಾ ತಡಕಾಡಿ ವಾಪಸ್ ಬಂದು ನೋಡುತ್ತಾನೆ: ಅಷ್ಟು ಹೊತ್ತಿಗಾಗಲೇ ಮನೆಯೊಡೆಯ ಕಳ್ಳನ ಕಂಬಳಿ ಹೊದ್ದು ಆನಂದದಿಂದ, “ಆಗಾಗ್ಗೆ ಬರ್ತಿರಣ್ಣ” ಎಂದು ಕೇಳಿಕೊಳ್ಳುತ್ತಾನೆ.
ಒಂದು ನಿರ್ದಿಷ್ಟ ಸಮುದಾಯದಲ್ಲಿ ಹುಟ್ಟಿದ ಕತೆಗಳಲ್ಲಿ ಆ ವರ್ಗದ ದುಃಖ, ಕನಸುಗಳು ಇರುತ್ತವೆಂಬುದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಮೇಲೆ ಹೇಳಿದ ಬಡತನದ ಕತೆ ದಲಿತ ಕತೆಯಾಗಿ ಬದಲಾಗುವ ಈ ಬಗೆ ನೋಡಿ: “ಒಂದೂರಾಗೆ ಗಂಡಹೆಂಡ್ತೀರಿದ್ರು. ಇಬ್ಬರೂ ಹಳೆ ಮಟ್ಟ ರಿಪೇರಿ ಮಾಡ್ಕಂಡು ಹೊಟ್ಟೆ ಹೊರೀತ್ರಿದ್ದು. ಇರೋಕ್ಕೊಂದು ಗುಡ್ಲು. ಉಡಾಕ್ಕೂಂದು ದುಪ್ಟಿ. ಆ ದುಪ್ಟೀನ್ನೇ ರಾತ್ರಿ ಹ್ರೆತ್ನಾಗೆ ಇಬ್ರೂ ಸೇರಿ ಹೊದ್ಕೊಂಡು ಮಲಗ್ತಿದ್ರು. ಬೆಳಕಾಗುತ್ತಿದ್ದಂತೆ ಹೆಚಿಡತಿ ಅದೇ ದುಪ್ಟೀನ ಸೀರೆ ಮಾಡ್ಕಂಡು ಉಟ್ಕಳ್ತಿದ್ಲು.”
-ತುಂಬಾಡಿ ರಾಮಯ್ಯನವರ ‘ಮಣೆಗಾರ’ ಎಂಬ ಆತ್ಮಕತೆಯಲ್ಲಿ ಬರುವ ಮೇಲೆ ಹೇಳಿದ ಕತೆಯ ಈ ರೂಪವನ್ನು ನೋಡಿ ಈ ಕತೆ ಆದಿಮರೂಪಿಯಾದದ್ದರಿರಬಹುದು ಎನ್ನಿಸಿತು. ಪ್ರೊ.ಕಾಳೇಗೌಡ ನಾಗವಾರ ಅವರು ಕಳಿಸಿದ ಈ ಆತ್ಮಕತೆಯನ್ನು ಒಂದೇ ಪಟ್ಟಿನಲ್ಲಿ ಓದಿ ಮುಗಿಸಿದಾಗ ನನ್ನ ನೆನಪಿನಲ್ಲಿ ಉಳಿದ ಚಿತ್ರಗಳಲ್ಲಿ ಇದೂ ಒಂದು. ಸಾಹಿತಿಯಲ್ಲದ ರಾಮಯ್ಯ ತಮ್ಮ ಕತೆ ಹೇಳುವ ರೀತಿ ಕೂಡ ಈ ಜಾನಪದಕತೆಯ ಶೈಲಿಯಲ್ಲೇ ಇದೆ. ಈವರೆಗೂ ಅಷ್ಟಾಗಿ ಏನನ್ನೂ ಬರೆಯದ ರಾಮಯ್ಯ ತಮ್ಮ ಬಾಲ್ಯದ ಘಟನೆಗಳನ್ನು ಒಮ್ಮೆ ಕವಿ ಜಿ.ವಿ.ಆನಂದಮೂರ್ತಿಯವರಿಗೆ ಹೇಳುತ್ತಿದ್ದಾಗ, ಆನಂದಮೂರ್ತಿ ಅವನ್ನೆಲ್ಲಾ ಪುಸ್ತಕ ರೂಪದಲ್ಲಿ ಬರೆಯಲು ಹೇಳುತ್ತಾರೆ. ಆ ನೆನಪುಗಳನ್ನು ಓದಿ ಮುನ್ನುಡಿ ಬರೆದ ಕಾಳೇಗೌಡರು ರಾಮಯ್ಯನವರಿಗೆ ‘ತುಂಬಾಡಿ ರಾಮಯ್ಯ’ ಎಂದು ಹೆಸರಿಡುತ್ತಾರೆ.
ರಾಮಯ್ಯನವರ ಆತ್ಮಕತೆ ಮೆಲ್ಲಗೆ ನಿಮ್ಮ ಒಳಕ್ಕಿಳಿಯುವುದು ಇಲ್ಲಿ  ಅಸ್ಪೃಶ್ಯನೊಬ್ಬ ತನ್ನ ಕತೆ ಹೇಳುತ್ತಿದ್ದರೂ ಆತ್ಮಮರುಕ ಹೆಚ್ಚಿಗೆ ಇಲ್ಲದಿರುವುದರಿಂದ. ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡರೆ ಹಣ ಕೊಡುತ್ತಾರೆಂಬ ಆಸೆಯಿಂದ ಆಪರೇಷನ್ ಮಾಡಿಸಿಕೊಂಡ ಅಪ್ಪ ಆಸ್ಪತ್ರೆಯ ಊಟವನ್ನು ಮನೆಮಂದಿಯ ಜೊತೆ ಹಂಚಿಕೊಳ್ಳಲು ತಂದ ಪ್ರಸಂಗ ಹೇಳುವಾಗ ಕೂಡ ರಾಮಯ್ಯ ನಿರ್ಲಿಪ್ತವಾಗಿರಬಲ್ಲರು. ಹಾಗೆಯೇ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಾ ತಾವು ಓದಿದ್ದನ್ನೂ ಗೊಣಗದೆ ದಾಖಲಿಸಬಲ್ಲರು. ನಗರಕ್ಕೆ ಓದಲು ಹೊರಟ ಹುಡುಗನ ಮನೆಯವರ ಅಳಲನ್ನು ‘ತಬ್ಬಲಿಯು ನೀನಾದೆ ಮಗನೆ’ ಎಂಬ ನುಡಿಗಟ್ಟಿನಲ್ಲಿ ಗ್ರಹಿಸಬಲ್ಲರು. ತಮ್ಮ ಹಳ್ಳಿಯಲ್ಲಿ ಅಸ್ಪೃಶ್ಯರೂ ಸವರ್ಣೀಯ ಕೆಳಜಾತಿಯವರೂ ಬಡತನ-ಕಡುಬಡತನಗಳ ನಡುವೆ ಇದ್ದರೆಂಬುದನ್ನು ರಾಮಯ್ಯ ಬಾಲ್ಯದಲ್ಲೇ ಕಂಡುಕೊಂಡರು. ಸ್ಕೂಲಿನ ರಜಾ ದಿನಗಳಲ್ಲಿ ಅಪ್ಪನ ಜೊತೆ ಹಳ್ಳಿಗಳಿಗೆ ಚಪ್ಪಲಿ ಹೊಲೆಯಲು ಹೋಗುತ್ತಿದ್ದ ದಿನಗಳ ಬಗ್ಗೆ ರಾಮಯ್ಯ ಬರೆಯುತ್ತಾರೆ:
“…..ಹಳ್ಳಿಯವರ ಚಪ್ಪಲಿಗಳನ್ನು ರಿಪೇರಿ ಮಾಡುವುದೆಂದರೆ, ಅದಕ್ಕಿಂತ ರಣಹಿಂಸೆಯ ಕೆಲಸ ಮತ್ಯಾವುದೂ ಇಲ್ಲ. ಅವರ ಚಪ್ಪಲಿಗಳು ಎಷ್ಟು ಸವೆದಿರುತ್ತಿದ್ದವು ಎಂದರೆ, ಕೆಲವು ಚಪ್ಪಲಿಗಳಿಗೆ ಹಿಮ್ಮಡಿಗಳೇ ಇರುತ್ತಿರಲಿಲ್ಲ! ಮತ್ತೂ ಕೆಲವು ಚಪ್ಪಲಿಗಳಿಗೆ ಟಾಕಾ ಹಾಕಲು ಅಥವಾ ಮೊಳೆ ಹೊಡೆಯಲು ಒಂದು ರಾಗಿ ಕಾಳಿನಷ್ಟೂ ಜಾಗವಿರದೆ ಕಿತ್ತು ಹೋಗಿರುತ್ತಿದ್ದವು.”
ಅಸ್ಪೃಶ್ಯತೆಯನ್ನು ಆಚರಿಸುವ, ಪೋಷಿಸುವ ಜಾತಿಗಳ ವಿರುದ್ಧ ಕೂಡ ರಾಮಯ್ಯನವರು ತೀರಾ ಕಹಿಯಾಗಲಾರರು. ಇದಕ್ಕೆ ತುಮಕೂರು ಜಿಲ್ಲೆಯ ತುಂಬಾಡಿ ಗ್ರಾಮದಲ್ಲಿ ಇದ್ದ ವಿಚಿತ್ರ ಸಾಮರಸ್ಯವೂ ಕಾರಣವಿರಬಹುದು. ದಲಿತರ ಮೇಲೆ ಹಲ್ಲೇ ಎಂಬುದನ್ನೇ ಕೇಳರಿಯದ ಊರು ತುಂಬಾಡಿ. ಒಂದೂ ಮುಸ್ಲಿಂ ಕುಟುಂಬವಿರದ ಈ ಊರಿನಲ್ಲಿ ಬಾಬಯ್ಯನ ಜಾತ್ರೆಯನ್ನು ಎಲ್ಲ ಜನಾಂಗದವರೂ ಆಚರಿಸುತ್ತಾರೆ. ಈ ಹಳ್ಳಿಯಲ್ಲಿ ಲಿಂಗಾಯತರ ಎರಡು ಮನೆ ಹಾಗೂ ಜೈನರ ಎರಡು ಮನೆಗಳನ್ನು ಬಿಟ್ಟರೆ, ಉಳಿದೆಲ್ಲ ಜಾತಿಗಳವರು ಪರಸ್ಪರ ಎಲ್ಲರನ್ನೂ ಅಣ್ಣ, ತಮ್ಮ, ತಂಗಿ, ಚಿಕ್ಕಪ್ಪ, ದೊಡ್ಡಪ್ಪ, ತಾತ, ಅತ್ತೆ ಎಂದೇ ಸಂಬೋಧಿಸ್ಮತ್ತಾರೆಂದು ರಾಮಯ್ಯ ಬರೆಯುತ್ತಾರೆ: “ಕುರುಬರ ಬೀರಯ್ಯನವರ ಹೆಂಡತಿ ಮುತ್ತಮ್ಮ ಮತ್ತು ಪುಟ್ಟರಂಗಯ್ಯನವರ ಹೆಂಡತಿ ನರಸಮ್ಮನವರು ನನಗೆ ನಮ್ಮ ಹಳ್ಳಿಯ ಸಂಪ್ರದಾಯದಂತೆ ಅತ್ತೆಯಾಗಬೇಕು. ಅವರೂ ಕೂಡ ನನ್ನನ್ನು ‘ಅಳಿಯ’ ಎಚಿದೇ ಕೂಗುತ್ತಿದ್ದರು.”
ಇಂಥ ಪ್ರಸಂಗಗಳನ್ನು ವೈಭವೀಕರಿಸಿ ತಮ್ಮೂರಿನಲ್ಲಿ ಅಸ್ಪøಶ್ಯತೆಯೇ ಇರಲಿಲ್ಲವೆಂದೇನೂ ರಾಮಯ್ಯ ಸೂಚಿಸುವುದಿಲ್ಲ. ಅಂಥ ಸನ್ನಿವೇಶಗಳನ್ನೂ ಅವರು ದಾಖಲಿಸುತ್ತಾರೆ: “…..ಆದರೆ ನಮ್ಮ ಹಳ್ಳಿಯಲ್ಲಿದ್ದ ಜೈನರ ಮನೆಗಳಲ್ಲಿದ್ದ ಅಂಗಡಿಗಳಿಗೆ ನಾವು ಸಾಮಾನು ಕೊಳ್ಳಲು ಹೋದರೆ, ಅವರು ತೊಣಚಿ ಹತ್ತಿದ ಹಸು ಎಗರಾಡುವಂತೆ ನಮ್ಮನ್ನು ನೋಡಿದ ಕೂಡಲೆ ಎಗರಾಡುತ್ತಿದ್ದರು. ಎದ್ದು ಓಡಾಡಲಾರದಷ್ಟು ಸ್ಥೂಲದೇಹಿಯಾಗಿದ್ದ ಸಿರಿದೇವಮ್ಮನವರು ಒಂದು ಉದ್ದನೆಯ ಬಿದಿರುಕೋಲಿಗೆ ತಟ್ಟೆಯನ್ನು ಸಿಕ್ಕಿಸಿ ಕುಂತಲ್ಲಿಂದಲೇ ಕಿಟಿಕಿಯಲ್ಲಿ ನಿಂತಿರುತ್ತಿದ್ದ ನಮಗೆ ವ್ಯಾಪಾರ ಮಾಡುತ್ತಿದ್ದರು.” ಆದರೆ ಈ ಬಗೆಯ ಅನುಭವದ ನಡುನಡುವೆಯೇ ಸವರ್ಣೀಯರು ತಮ್ಮ ನರಕವನ್ನು ಮೀರುವ ಉದಾತ್ತವಾದ ಬಗೆಗಳನ್ನೂ ರಾಮಯ್ಯ ನೆನೆಯುತ್ತಾರೆ: “…..ವಡ್ಡಗೆರೆಯಲ್ಲಿ ವಕ್ಕಲಿಗರ ಹುಲಿಯಪ್ಪಜ್ಜ ಎಂಬುವವರು ಊರುಗೋಲು ಹಿಡಿದು ಮಕ್ಕಳಿಗೆಲ್ಲಾ ಸಮನಾಗಿ ಉಪ್ಪಿಟ್ಟು ಹಂಚುವಂತೆ ನೋಡಿಕೊಳ್ಳುತ್ತಿದ್ದರು. ಹುಲಿಯಪ್ಪಜ್ಜನಿಗೆ ಮಕ್ಕಳ ಮೇಲೆ ಪ್ರೀತಿ ಎಷ್ಟಿತ್ತೆಂದರೆ, ಮನೆಯಲ್ಲಿ ತನಗೆ ಕೊಟ್ಟಿದ್ದ ರೊಟ್ಟಿಯನ್ನು ತಿನ್ನದೆ ಬಟ್ಟೆಯಲ್ಲಿ ಮುಚ್ಚಿಟ್ಟುಕೊಂಡು ಬಂದು ಹೊಲೆಮಾದಿಗರ ಹಟ್ಟಿಯ ಬಳಿ ನಿಂತು ಮಕ್ಕಳನ್ನು ಕರೆದು ರೊಟ್ಟಿ ಹಂಚುತ್ತಿದ್ದರು.”
ಮನೆಯಲ್ಲಿ ಊಟವಿಲ್ಲದೆ, ಸ್ಕೂಲಿನಲ್ಲಿ ಮಧ್ಯಾಹ್ನ ಹುಳುಗಳು ತುಂಬಿದ ಉಪ್ಪಿಟ್ಟಿಗೆ ಕಾದು ನಿಂತ ರಾಮಯ್ಯನೆಂಬ ಹುಡುಗ ಮುಂದೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತನಾಗುವ ತನಕದ ಕತೆಯಲ್ಲಿ ಸ್ವಾತಂತ್ರ್ಯೋತ್ತರ ದಲಿತ ವ್ಯಕ್ತಿತ್ವಗಳ ಬೆಳವಣಿಗೆಯ ಕತೆಯೂ ಬೆರೆತು ಹೋಗುತ್ತದೆ. ಅನೇಕ ದಲಿತ ಲೇಖಕರಂತೆ ರಾಮಯ್ಯ ಕೂಡ ಬಾಲ್ಯದ ಬಗೆಗೆ ಮಾತ್ರ ಗಾಢವಾಗಿ ಬರೆದು, ನಚಿತರದ ಕತೆ ಹೇಳುವಾಗ ಸುಮ್ಮನೆ ಓಡತೊಡಗುತ್ತಾರೆ. ದಲಿತ ಕವಿ ಸಿದ್ಧಲಿಂಗಯ್ಯನವರ ‘ಊರುಕೇರಿ’ ಆತ್ಮಕಥನ ಕೂಡ ದಲಿತ ಸಂಘರ್ಷ ಸಮಿತಿಯ ಅನುಭವವನ್ನು ಹೇಳುವಲ್ಲಿ ಯಶಸ್ವಿಯಾಗಿಲ್ಲ. ತುಂಬಾಡಿ ರಾಮಯ್ಯನವರಿಗೂ ಹಾಗೇ ಆಗಿದೆ. ಆದರೂ ಈ ನಡುವೆ ತಮ್ಮ ಪ್ರಜ್ಞೆಯನ್ನು ರೂಪಿಸಿದ ನಾಗಪ್ಪನವರ ಬಗ್ಗೆ ರಾಮಯ್ಯ ಕೊಡುವ ಒಂದು ವಿವರ ಕರ್ನಾಟಕದ ಶೂದ್ರರು ಹಾಗೂ ದಲಿತರಲ್ಲಿ ಉಂಟಾದ ವೈಚಾರಿಕ ಪ್ರಜ್ಞೆಯ ಬೆಳವಣಿಗೆಯ ಅಧ್ಯಯನದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ: “ನಾಗಪ್ಪನವರು ತಮ್ಮ ಮನೆಯಲ್ಲಿ ಸಾಕಷ್ಟು ಪುಸ್ತಕಗಳನ್ನು ಇಟ್ಟುಕೊಂಡಿದ್ದರು. ಅದರಲ್ಲಿ ಕುವೆಂಪುರವರ ಪುಸ್ತಕಗಳು ಹೆಚ್ಚಾಗಿದ್ದವು. ಕುವೆಂಪುರವರ ‘ನೂರು ದೇವರನೆಲ್ಲಾ ನೂಕಾಚೆ ದೂರ’ ಎಂಬ ಕವನವನ್ನು ನಾಗಪ್ಪನವರು ಕಂಠಗತ ಮಾಡಿಕೊಂಡಿದ್ದರು. ‘ನೀವೆಲ್ಲಾ ಕುವೆಂಪು, ಅಂಬೇಡ್ಕರ್ ಅವರಂತೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು’ ಎಂದು ಸದಾ ನಮಗೆ ಹೇಳುತ್ತಿದ್ದರು” ವಿದ್ಯಾರ್ಥಿ ಜೀವನದ ಈ ಪ್ರಭಾವಗಳ ಜೊತೆಗೇ ಪಂಚಮ, ಲಂಕೇಶ್ ಪತ್ರಿಕೆ, ದೇವನೂರ ಮಹಾದೇವರ ಬರವಣಿಗೆಗಳೂ ರಾಮಯ್ಯನವರ ಪ್ರಜ್ಞೆಯನ್ನು ರೂಪಿಸಿದವು.
‘ಮಣೆಗಾರ’ ಎಂಬ ಈ ಆತ್ಮಕಥನ ಓದಿದ ನಂತರ ತಲೆಯಲ್ಲಿ ಉಳಿದ ಚಿತ್ರಗಳಲ್ಲಿ ಆಯ್ದ ಕೆಲವನ್ನು ಕೊಡುವ ಮೂಲಕ ಈ ಬರಹವನ್ನು ರೂಪಿಸಲೆತ್ನಿಸಿದ್ದೇನೆ. ಬರಬರುತ್ತಾ ರಾಮಯ್ಯ ವಂದನಾರ್ಪಣೆಯ ಪಟ್ಟಿ ಕೊಡುತ್ತಾರೆ, ಕೆಲವೊಮ್ಮೆ ಅನಗತ್ಯ ಮಾನವಶಾಸ್ತ್ರೀಯ ವಿವರಗಳನ್ನು ಕೊಡುತ್ತಾರೆ…. ಎಂದೆಲ್ಲ ಅನ್ನಿಸತೊಡಗಿದರೂ ಅವರ ಏರಿಳಿತವಿಲ್ಲದ ಬರವಣಿಗೆ ನಮ್ಮನ್ನು ಕದಡುವಂತಿದೆ. ರಾಮಯ್ಯನವರ ಪುಸ್ತಕದಲ್ಲಿ ನನ್ನನ್ನು ಬಹುವಾಗಿ ಆವರಿಸಿದ ಒಂದು ‘ಅ-ಸಾಮಾಜಿಕ’ ಘಟನೆಯನ್ನು ಹೇಳಿ ಈ ಬರಹ ಮುಗಿಸುತ್ತೇನೆ. ಅದು ರಾಮಯ್ಯ ತಮ್ಮ ಅಪ್ಪನ ಜೊತೆ ಚಪ್ಪಲಿ ರಿಪೇರಿ ಮಾಡಲು ಹೋದಾಗ ನಡೆದ ಒಂದು ವಿಚಿತ್ರ ಘಟನೆ:
“…..ಆವೊತ್ತು ಕಾಡುಗೊಲ್ಲರ ಪೈಕಿ ಒಬ್ಬಾತ ನಾವು ಚಪ್ಪಲಿ ರಿಪೇರಿ ಮಾಡುತ್ತಿದ್ದ ಜಾಗಕ್ಕೆ ತನ್ನ ಪಿಳ್ಳಂಗೋವಿಯೊಂದಿಗೆ ಬಂದ. ಅಪ್ಪನಿಂದ ಚಪ್ಪಲಿ ರಿಪೇರಿ ಮಾಡಿಸಿಕೊಂಡವನು, ತನ್ನ ಪಿಳ್ಳಂಗೋವಿಯನ್ನು ಅಲ್ಲೇ ಮರೆತು ಕುರಿ ಎಬ್ಬಿಸಲು ಹೊರಟುಹೋದ. ಅಲ್ಲಿ ಅವನ ಚಪ್ಪಲಿ ಹೊಲೆದ ಮೇಲೆ, ಸಾಮಾನುಗಳನ್ನು ನಾನು ‘ತಿದಿ’ಯಲ್ಲಿಟ್ಟೆ. ಅದಾವ ಮಾಯದಲ್ಲೋ ನನಗೂ ಗೊತ್ತಾಗದೆ ಮರೆತು ಅಲ್ಲೇ ಇದ್ದ ಪಿಳ್ಳಂಗೋವಿಯನ್ನೂ ‘ತಿದಿ’ಯಲ್ಲಿಟ್ಟೆ. ಕುರಿ ಎಬ್ಬಿಸುವ ಕೆಲಸವಾದ ಮೇಲೆ ಕಾಡುಗೊಲ್ಲರವನು ತನ್ನ ಪಿಳ್ಳಂಗೋವಿಯನ್ನು ಜ್ಞಾಪಿಸಿಕೊಂಡು ಅಲ್ಲಿ-ಇಲ್ಲಿ ಹುಡುಕಾಡಿ ಎಲ್ಲೂ ಸಿಗದೆ ಕೊನೆಗೆ ನಾವಿದ್ದಲ್ಲಿಗೆ ಬಂದು ಅಪ್ಪನ ಹತ್ತಿರ ತನ್ನ ಪಿಳ್ಳಂಗೋವಿ ಕೇಳಿದ. ಪಿಳ್ಳಂಗೋವಿ ನಮ್ಮ ತಿದಿಯಲ್ಲಿದ್ದದ್ದು ಅಪ್ಪನಿಗೆ ಗೊತ್ತಿರಲಿಲ್ಲ. ಆದ್ದರಿಂದ ಅಪ್ಪ ಅವನಿಗೆ ಪಿಳ್ಳಂಗೋವಿಯನ್ನು ನಾವು ನೋಡಲಿಲ್ಲವೆಂದೂ, ನೀನದನ್ನು ಇಲ್ಲಿಗೆ ತಂದೇ ಇರಲಿಲ್ಲವೆಚಿದೂ ಇನಿಕಿಲ್ಲದಂತೆ ಹೇಳಿದ. ಆದರೆ ಅವನಾದರೋ ಕುರಿಗಳನ್ನು ಒಂಟಿಯಾಗಿ ಕಾಯುವಾಗ, ರಾತ್ರಿ ಹೊತ್ತು ಬೆಂಕಿ ಮುಂದೆ ಚಳಿ ಕಾಯಿಸಿಕೊಳ್ಳುವಾಗ ತನಗಿದ್ದ ಒಂದೇ ಒಂದು ಸಂಗಾತಿಯನ್ನು ನಮ್ಮಪ್ಪನ ಮಾತಿಗೆ ಮರುಳಾಗಿ ಕಳೆದುಕೊಳ್ಳಲು ತಯಾರಿರಲಿಲ್ಲ. ಅಪ್ಪನ ಮಾತನ್ನು ಸ್ಮತರಾಂ ಒಪ್ಪದೆ ತಿದಿಯನ್ನು ತಡಕಿಯೇ ಬಿಟ್ಟ. ತಿದಿಯಲ್ಲಿದ್ದ ಪಿಳ್ಳಂಗೋವಿ ಅವನ ಕೈಗೆ ಸಿಕ್ಕಿತು. ತಿದಿಯಿಂದ ಅವನು ಪಿಳ್ಳಂಗೋವಿಯನ್ನು ಹೊರತೆಗೆದದ್ದನ್ನು ನೋಡಿ ಅಪ್ಪನ ಮುಖ ಕಳೆಗುಂದಿತು. ನನಗೂ ಕಸಿವಿಸಿಯಾಗಿ ತಲೆತಗ್ಗಿಸಿದೆ. ಅನಾಯಾಸವಾಗಿ ನನ್ನೆಡೆಗೆ ಬಂದಿದ್ದ ಪಿಳ್ಳಂಗೋವಿ ಮಣೆಗಾರ ಹುಡುಗನಿಗೆ ನುಡಿಯಲ್ಲೊಲ್ಲದೆ ತನ್ನೊಡೆಯನಿಗೆ ದನಿಯಾಗಲು ಮರಳಿ ಅವನ ಕೈ ಸೇರಿತ್ತು. ಅಪ್ಪ ಮಾತ್ರ ಏನೂ ಹೇಳಲಾಗದೆ ಸುಮ್ಮನೆ ಕುಳಿತಿದ್ದ.”
ಈಚೆಗೆ ನನ್ನಲ್ಲಿ ಅಪಾರ ಕೃತಜ್ಞತೆ ಹುಟ್ಟಿಸಿದ ಪುಸ್ತಕಗಳಲ್ಲಿ ‘ಮಣೆಗಾರ’ ಕೂಡ ಒಂದು.

ಗಾಳಿ ಬೆಳಕು (ಸಾಂಸ್ಕೃತಿಕ  ಬರಹಗಳು) (ಮಾರ್ಚ್ 22, 2000)