ಎದೆಗೆ ಬಿದ್ದ ಅಕ್ಷರ : ಒಂದು ಓದು-ನಾಗಣ್ಣ ಕಿಲಾರಿ

“ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು”

ದೇವನೂರು ಮಹಾದೇವ ಅವರ ಬರಹ ಮತ್ತು ಮಾತನ್ನು ಕುರಿತು ಅತ್ಯಂತ ಕಾತುರ ಮತ್ತು ಕುತೂಹಲದಿಂದ ಕೇಳಿಸಿಕೊಳ್ಳಲು ಕನ್ನಡ ಮನಸ್ಸು ಕಾತರಿಸುತ್ತದೆಂದು ಕಾಣುತ್ತದೆ. ಅಂತಹದ್ದೊಂದು ತವಕಕ್ಕೆ ಅವರ ಈ ಮೊದಲ ಬರಹಗಳಾದ ಕತೆ ಕಾದಂಬರಿ ಮಾತ್ರವಲ್ಲ ಕಳೆದ ನಲವತ್ತು ವರ್ಷಗಳಲ್ಲಿ ಸ್ಪಂದಿಸುತ್ತ ಬಂದ ಪುಟ್ಟ ಪುಟ್ಟ ಬರಹ ಮತ್ತು ಮಾತುಗಳು ಸಹ ಈ ಮಾತಿಗೆ ಸಾಕ್ಷಿಯಾಗಿವೆ. ಒಬ್ಬ ದೊಡ್ಡ ಲೇಖಕನಿಗೆ ಪ್ರಕಾರ ಮುಖ್ಯವಾಗುವುದಿಲ್ಲವೆಂದು ಕಾಣುತ್ತದೆ. ಸಾಮಾಜಿಕವಾದ ಜವಾಬ್ದಾರಿಯ ಮಾತುಗಳು ಯಾವ ರೂಪದಲ್ಲಿದ್ದರೂ, ಅಂದರೆ ರೂಪಕ ಪ್ರತಿಮೆ ಭಾಷಣ ಕಥನ ಕ್ರಮ ನಡೆದ ಘಟನೆ ಹೀಗೆ ಏನನ್ನಾದರೂ ಹೇಳುವಾಗ ನಿನ್ನೆ ಮತ್ತು ನಾಳೆಗಳನ್ನು ತೂಗಿ ಧ್ಯಾನಿಸಿ ಹೊಮ್ಮಿದಂತೆ ಇರುತ್ತವೆ. ಅಲ್ಲದೆ ತಾನು ನಂಬಿದ ತಾತ್ವಿಕ ದೃಷ್ಟಿಕೋನ ಹಾಗೂ ಈ ನಾಡನ್ನು ರೂಪಿಸಿದ ಆರೋಗ್ಯಕರ ಮನಸ್ಸುಗಳಿಂದಲೂ ಸಹ ಹೊಸ ಕಾಣ್ಕೆಗಳನ್ನು ಪಡೆದುಕೊಳ್ಳುತ್ತಾನೆ. ಅಂತಹದೊಂದು ಬಹುದೊಡ್ಡ ಧ್ಯಾನಸ್ಥ ಪ್ರತಿಫಲ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಎಂದು ನನಗನ್ನಿಸುತ್ತದೆ.
ಧ್ಯಾನಿಸಿ ಸಮಾನತೆಯ ಕನಸನ್ನು ಕಾಣುವ ಮತ್ತು ಓದುಗನನ್ನು ಹೆಚ್ಚು ಚಿಂತನೆಗೆ ಹಚ್ಚುವ ಬರಹಗಳು ಇವಾಗಿವೆ. ‘ಎದೆಗೆ ಬಿದ್ದ ಅಕ್ಷರ’ದಲ್ಲಿ ಒಟ್ಟು ತೊಂಬತ್ತು ಲೇಖನಗಳಿವೆ. ಮೂರು ಸಾಲಿನ ಲೇಖನಗಳಿಂದ ಆರೇಳು ಪುಟಗಳ ವ್ಯಾಪ್ತಿಯೊಳಗೆ ಇವೆ. ಏಳು ವಿಭಾಗಗಳನ್ನಾಗಿ ಮಾಡಲಾಗಿದೆ. 1. ಮನವ ಕಾಡುತಿದೆ. 2. ಒಳ ನೋಟ 3. ಮತಾಂಧರ ಮೆದುಳೊಳಗೆ 4. ಹೀಗೇ ಮುಂದುವರೆದರೆ 5. ಮುತ್ತು ಮುಳುಗ ಮತ್ತು ಇತರ 6. ಮುಖಾಮುಖಿ 7. ಸಮಾನತೆಯ ಕನಸನ್ನು ಮತ್ತೆ ಕಾಣುತ್ತ. ನನಗೆ ಈ ವಿಭಾಗಗಳು ನಮ್ಮ ‘ಪ್ರಕಾಶಿಸುತ್ತಿರುವ ಭವ್ಯ ಭಾರತ’ವನ್ನು ಕುರಿತು ಬರೆದ ಮಹಾ ಕಾವ್ಯದ ಒಂದೊಂದು ಸಂಪುಟದಂತೆ ಕಾಣಿಸುತ್ತವೆ. ಒಟ್ಟಾರೆಯಾಗಿ ಎದೆಗೆ ಬಿದ್ದ ಅಕ್ಷರ ಪುಸ್ತಕವನ್ನು ನಾನು ಬದುಕುತ್ತಿರುವ ಭಾರತದ ಮಹಾಕಾವ್ಯದಂತೆ ಓದಿಸಿಕೊಳ್ಳುತ್ತಿದೆ ಮತ್ತು ಧ್ಯಾನಸ್ಥಗೊಳಿಸುತ್ತಿದೆ.
‘ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಕೆಲವು ಲೇಖನಗಳನ್ನು ಈ ಮೊದಲು ಪತ್ರಿಕೆಗಳಲ್ಲಿ ಮತ್ತು ಪಠ್ಯ ಪುಸ್ತಕಗಳಲ್ಲಿ ಓದಿದ್ದೆ. ಅಲ್ಲದೆ ನಾನು ಸಾಹಿತ್ಯದ ಓದನ್ನು ಹಚ್ಚಿಕೊಂಡದ್ದು ಕುವೆಂಪು, ಲಂಕೇಶ್, ತೇಜಸ್ವಿ, ಅನಂತಮೂರ್ತಿ ಇವರ ಕೃತಿಗಳ ಮೂಲಕ. ಲಂಕೇಶ್, ತೇಜಸ್ವಿ, ಅನಂತಮೂರ್ತಿ – ಈ ತ್ರಿಮೂರ್ತಿಗಳಂತೆ ಕನ್ನಡ ಚಿಂತನಾ ಜಗತ್ತನ್ನು ವಿಸ್ತರಿಸಿದ ರೂಪಿಸಿದ ಸಮಕಾಲೀನ ಸಂಘರ್ಷಕ ತ್ರಿವಳಿಗಳು ಇದ್ದಂತೆ, ಬಹುಶಃ  ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲವೇನೋ. ‘ಅವ್ವ’ ಕವಿತೆಯ ಮೂಲಕ ನನ್ನನ್ನು ಬಲವಾಗಿ ಕಾಡಿದ ಲೇಖಕ ಲಂಕೇಶ. ಲಂಕೇಶರ ಸಾಹಿತ್ಯವನ್ನೂ ಮತ್ತು ಅವರ ಕುರಿತು ಯಾರು ಏನೇ ಬರೆದರೂ ಆಸಕ್ತಿಯಿಂದ ಓದುವವ. ‘ತಲೆಮಾರಿನ ತಳಮಳ’ ಲಂಕೇಶರನ್ನು ಕುರಿತ ಪುಸ್ತಕದಲ್ಲಿ ದೇವನೂರು ಮಹಾದೇವರ ಬರಹ ಇದೆ. ಅಲ್ಲಿ ತ್ರಿಮೂರ್ತಿಗಳೆಂದು ನಾಮಕರಣ ಮಾಡಿ ಒಂದೊಂದು ವಾಕ್ಯದಲ್ಲಿ ಅವರ ಚಿಂತನೆಯನ್ನೇ ಮುಷ್ಟಿಲಿಡಿದು ತೋರುತ್ತಾರೆ. ಅಲ್ಲದೆ ಗಾಂಧಿ ಅಂಬೇಡ್ಕರ್ ಮತ್ತು ಈ ದೇಶದ ಸ್ವರೂಪವನ್ನು ಒಂದು ಚಿತ್ರಣದ ಮೂಲಕ ಕಟ್ಟಿಕೊಡುತ್ತಾರೆ. ಇದನ್ನು ಓದಿದ ನಂತರ ಇವರ ಬರವಣಿಗೆಯ ಒಳಗೇ ‘ಅವ್ವ’ ಹರಿದಾಡುತ್ತಿರುವಂತೆ ಅನ್ನಿಸಿತು. ಫಲವತ್ತಾದ ಕಪ್ಪು ನೆಲದ ಅವ್ವ, ಮುತ್ತೈದೆಯಾಗಿ ಕುಂಕುಮ ಇಡದ, ಹರಿದ ಸೀರೆಯಲ್ಲಿ ಯೌವನ ಕಳೆದವಳು, ಗೊಡ್ಡೆಮ್ಮಿಗೂ ಊರೂರು ಹುಡುಕುತ್ತ ಅಲೆವವಳು, ಹರಿಕತೆ ಕೇಳದ, ದೇವರ ಪೂಜಿಸದ, ಒಟ್ಟಾರೆ ಬದುಕೇ ಒಂದು ಪ್ರಾರ್ಥನೆ ಎಂದು ಬದುಕಿದಾಕೆ. ಆ ಬದುಕು ಕೇವಲ ತನ್ನದು ಮಾತ್ರವಲ್ಲ ಅದು ಕುಟುಂಬದ್ದು. ಆ ಕುಟುಂಬ ದೇವನೂರು ಮಹದೇವರು ಹೇಳುವಂತಹ ನಮ್ಮ ಕುಟುಂಬ, ಅದು ಹೀಗಿದೆ:– ‘ಗಾಂಧಿ-ಕಾಠಿಣ್ಯದ ತಂದೆಯಂತೆ. ಜೆಪಿ ಅಸಹಾಯಕ ತಾಯಿ. ವಿನೋಬಾ-ಮದುವೆಯಾಗದ ವ್ರತನಿಷ್ಠ ಅಕ್ಕನಂತೆ. ಲೋಹಿಯಾ-ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ. ಅಂಬೇಡ್ಕರ್-ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ- ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ. ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?’
ಪದವಿ ಹಂತದಲ್ಲೆ ಪಠ್ಯವಾಗಿ ಓದಿದ ‘ಮಾನವೀಯತೆ ಅಂತಾರಲ್ಲ ಅದರ ಬಗ್ಯೆ ’ ಈ ಲೇಖನ ನಾವು ನೋಡಬೇಕಾದ ನೋಟಕ್ರಮವನ್ನು ತಾಯ್ತನದಿಂದ ಹೇಳಿದಂತೆ ಅನಿಸ್ತು. ನಾವೆಲ್ಲ ಅಕಸ್ಮಿಕವಾಗಿಯೇ ಓದಿದವರು. ಈ ಅಕಸ್ಮಾತ್ ಓದಿನಿಂದ ಕಾಣುವ, ಕಾಣಬೇಕಾದ ನೋಟದ ಮಿಡಿತಗಳನ್ನು ನಮ್ಮ ಎದೆಗೆ ತಾಗಿಸುತ್ತದೆ. “ಇಂದು ಒಬ್ಬ ಆದಿ ಜನಾಂಗದವನು ಸಂವೇದನಾಶೀಲನಾದರೆ ಅದೊಂದು ರೌರವ ನರಕ. ಅವನಿಗೆ ಕಾಣುತ್ತೆ- ತನ್ನ ಸಂಬಂಧಿಗಳು ಹಸಿವಿನಿಂದ ಸಾಯ್ತ ಇರೋದು, ಬೀದೀಲಿ ಭಿಕ್ಷೆ ಬೇಡೋದು, ಜೀವಂತ ಸುಡಿಸಿಕೊಳ್ಳೋದು, ಪಶು ಥರ ದುಡಿಯೋದು, ಅವ ದುಡಿಯೋದು ಅವಗೆ ದಕ್ಕದೆ ಇರೋದು, ಇದರ ಜೊತೆಗೆನೆ ಹುಟ್ಟಿದ ತಪ್ಪಿಗೆ ಥೂ ಛೀ ಅನ್ನಿಸಿಕೊಳ್ಳೋದು ಕೂಡ” ಅಕ್ಷರವು ಈ ಸಂವೇದನೆಯನ್ನು ಕಲಿಸಿಕೊಟ್ಟರೆ ಈ ನಾಡಿನ ನರಕದ ಬದುಕಿಗೆ ತುಸು ಮದ್ದು ಸಿಕ್ಕಂತಾಗುತ್ತದೆ.
ಸನಾತನಿಗಳು ಸೃಷ್ಟಿಸಿ ಪೋಷಿಸುತ್ತ ಬಂದ ವರ್ಣ ವರ್ಗ ಜಾತಿಗಳ ರೋಗಿಷ್ಠ ಮನೆಯನ್ನು ಧ್ವಂಸ ಮಾಡಬೇಕಾದ ಬಗ್ಗೆ ಕಾಲ ಕಾಲಕ್ಕೆ ಪ್ರಯತ್ನಗಳು ನಡೆದಿವೆ. ಸಮಾನತೆಯ ಹಸಿವು ಮನುಷ್ಯನಾದವನಿಗೆ ಸಹಜವಾಗಿಯೇ ಇರುತ್ತದೆ. ಕಳೆದ ಶತಮಾನದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ಪ್ರಯತ್ನವನ್ನು ದೇವನೂರು ವಿವರಿಸುವುದು ಹೀಗೆ; “ಗಾಂಧಿ ಹಿಂದೂ ಧರ್ಮದ ಜಾತಿಯ ಕಂಬಗಳನ್ನು ಒಳಗಡೆಗೇ ಕೂತುಕೊಂಡು ಗರಗಸದಿಂದ ಕುಯ್ಯೋ ಥರ, ಕುಶಲವಾಗಿ ಕುಯ್ಯುವವನ ಥರ ಕಂಡರು. ಅಂಬೇಡ್ಕರ್ ಹೊರಗೆ ನಿಂತು ಕಲ್ಲು ಎಸೆಯೋ ಥರ ಕಂಡರು. ಅಂದ್ರೆ ಇವರಿಬ್ಬರೂನೂ ವಿರುದ್ಧವಾಗಿ ಕಂಡರು, ವಿರುದ್ಧವಾಗೇ ಇದ್ದರು. ಅದಕ್ಕೆ ದೂರದಲ್ಲಿ ನಿಂತು ನೋಡಿದವರಿಗೆ ಏನಾಗುತ್ತೆ, ಅಂಬೇಡ್ಕರ್ ಎಸೆದ ಕಲ್ಲುಗಳು ಗಾಂಧಿಗೆ ಬಿದ್ದ ಥರಾನೂ ಕಾಣಿಸುತ್ತೆ. ಬೀಳುತ್ತೆ ಕೂಡ. ಆದರೆ ಇಬ್ಬರೂ ಮಾಡುತ್ತಿದ್ದ ಕೆಲಸ ಭಿನ್ನವಾಗಿದೆ ಅಂತ ನನಗೆ ಅನಿಸಲಿಲ್ಲ. ‘ಈ ಸಮಾಜವೆನ್ನುವುದು ರೋಗಿಷ್ಟವಾದ ಗಾಜಿನ ಮನೆ. ಇದನ್ನು ಕೆಡುವದೆ ಸರ್ವೋದಯ ಅಥವಾ ಸಮಾನತೆಯ ಮನೆ ಅಥವಾ ನಾಡನ್ನು ಕಟ್ಟಲಾಗದು. ಇಂತಹ ಸಮಾನತೆಯ ನಾಡಿನ ಕನಸನ್ನು ಕಂಡು ಆ ಕುರಿತು ಮಾತನಾಡಿದವರು ಬುದ್ಧ, ವಚನಕಾರರು, ಗಾಂಧಿ, ಜೆಪಿ, ವಿನೋಬಾ, ಲೋಹಿಯಾ, ಅಂಬೇಡ್ಕರ್ ಮುಂತಾದವರು ಕಾಣಿಸಿಕೊಳ್ಳುತ್ತಾರೆ. ಆದರೆ ದೇವರು, ಧರ್ಮ ತಾಯ್ನಾಡು, ದೇಶಭಕ್ತಿ ಎಂದು ಮೂರೊತ್ತು ಜಪಮಾಡುವವರಿಗೆ ಇವರಾರೂ ಅಷ್ಟು ಮುಖ್ಯವಾಗುವುದಿಲ್ಲ. ಇಂತಹ ಬಿರುಕುಗಳ ಸಂಧಿನ ಕತ್ತಲೆಗೆ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ಬೆಳಕು ಚೆಲ್ಲುತ್ತದೆ. “ಮಕ್ಕಳಿಲ್ಲದ್ದಕ್ಕಾಗಿ ಮಗು ದತ್ತು ತೆಗೆದುಕೊಂಡ ದಂಪತಿಗಳಿಗೆ ಆಮೇಲೆ ಒಂದು ಮಗು ಹುಟ್ಟುತ್ತದೆ, ಬೆಳೆದಂತೆ ಆ ದಂಪತಿಗಳಿಗೆ ಹುಟ್ಟಿದ ಮಗು ಸಂದರ್ಭಕ್ಕೆ ತಕ್ಕಂತೆ ಅಪ್ಪ ಅಮ್ಮ ಎಂದರೆ, ಅದೇ ದತ್ತು ಮಗ, ಮಾತುಮಾತಿಗೂ ಅಪ್ಪಅಮ್ಮ, ಅಪ್ಪಅಮ್ಮ ಅನ್ನುತ್ತಿರುತ್ತದಂತೆ- ಜಪಿಸುವಂತೆ. ಈ ರೀತಿಯೇ ಇದೆಯಲ್ಲವೆ ಆರ್‍ಎಸ್‍ಎಸ್ ಪರಿವಾರದ ದೇಶಭಕ್ತಿ ಜಪ. ಇದು ಏನನ್ನು ಹೇಳುತ್ತದೆ? ದೇಶಭಕ್ತಿ, ರಾಷ್ಟ್ರಪ್ರೇಮ, ಧರ್ಮ ಇಲ್ಲದವರು ಅದು ಇಲ್ಲದುದಕ್ಕಾಗಿ ತಮ್ಮನ್ನು ತಾವೇ ದೃಢಪಡಿಸಿಕೊಳ್ಳಲು ನಡೆಸುತ್ತಿರುವ ಒಂದು ಪ್ರಯತ್ನ ಅಂತಲೊ ಅಥವಾ ಇದೊಂದು ಗೀಳು ಅಂತಲೊ ಅಥವಾ ಅವರ ದೈವವಾದ ‘ಚಾತುರ್ವರ್ಣ’ದ ಸಾಕ್ಷಾತ್ಕಾರಕ್ಕಾಗಿ ಅಂತಲೊ?”
ಹೀಗೆ ದೇವರನ್ನು ಕುರಿತು ಕೂಡ ಈ ದೇಶ ನಡೆದುಕೊಳ್ಳುತ್ತಿರುವ ರೀತಿ ನಾಚಿಕೆಗೇಡಿನದು. ಹೊಟ್ಟೆ ಮತ್ತು ಬಟ್ಟೆಗೆ ಗತಿ ಇಲ್ಲದಂತಾಗಿ ಸಾಯುತ್ತಿರುವಾಗ ಮಂದಿರಗಳನ್ನು ಕಟ್ಟುವ ಮಾತುಗಳು ನಡೆದಿರುತ್ತವೆ. ನೆರೆಯಲ್ಲಿ, ಬರಗಾಲದಲ್ಲಿ ಬಡಪಾಯಿಗಳ ಹೆಣಗಳು ಉರುಳುವಾಗ, ಬೀದಿಗೆ ಬಂದು ಇಟ್ಟಿಗೆ, ಲೋಹಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗುತ್ತಾರೆ ಮಂದಿರ ಮತ್ತು ಮೂರ್ತಿಗಳನ್ನು ಸ್ಥಾಪಿಸಲು. ‘ಧರ್ಮವಾಗಿಸಲು ದೇವರುಗಳನ್ನೇ ರೌಡಿಗಳನ್ನಾಗಿಸಿದ ದೇಶ ಇದು’ ಹಾಗಾಗಿಯೇ ಬ್ರಾಹ್ಮಣರು ಉಂಡು ಉಳಿದ ಎಂಜಲಿನ ಮೇಲೆ ಮನುಷ್ಯರನ್ನೇ ಉರುಳಿಸುವ ಸೇವೆ ನಾಚಿಕೆ ಇಲ್ಲದೆ ನಡೆಸುತ್ತಾರೆ. ದೇವರನ್ನು ವ್ಯಾಪಾರದ ವಸ್ತುವಾಗಿಸಿಕೊಂಡು ತಾವು ಬದುಕುತ್ತ ಸಮಾಜವನ್ನು ಮೌಢ್ಯಕ್ಕೆ ತಳ್ಳುತ್ತಿರುವಂತವರಿಗೆ, ದೇವನೂರು ಮಹಾದೇವ ಅವರ ಮಂಚಮ್ಮ ದೇವಿ ಕಾಣುವುದು ಸಾಧ್ಯವಿಲ್ಲ. ಈ ದೇಶದ ಬಹು ದೊಡ್ಡ ರೋಗಗಳಾದ ಜಾತಿ ಧರ್ಮ ದೇವರು. ಇವು ಮನುಷ್ಯನನ್ನು ವಿರೂಪಗೊಳಿಸಿದಷ್ಟು ಮತ್ತೊಂದು ಮತ್ತೊಂದಿಲ್ಲ. ಎಂದಿನಿಂದಲೂ ಸಮಾನತೆಯ ಕನಸನ್ನು ಕಾಣಲಾಗದ ವಾತಾವರಣವನ್ನು ನಾಜೂಕಿನಿಂದ ಸೃಷ್ಟಿಸುತ್ತಲೇ ಬರಲಾಗಿದೆ. ಕನಸು ಕಂಡವರನ್ನು ಒಂದೊಂದು ದಾರಿಗೆ ದೂಡಲಾಗಿದೆ. ರಾಮ ಮತ್ತು ಪರಶುರಾಮ ಆರ್‍ಎಸ್‍ಎಸ್ ಬ್ಯಾನರ್‍ನ ಚಿತ್ರವಾಗುವಂತೆ, ಅಜೆಂಡ ಆಗುವಂತೆ ಬುದ್ಧ, ಗಾಂಧಿ, ಅಂಬೇಡ್ಕರ್, ಏಕಲವ್ಯ, ಶಂಭೂಕ ಆಗುವುದಿಲ್ಲ ಏಕೆ?
ಏಕೆಂದರೆ ಪರಶುರಾಮ ತಂದೆಯ ವಾಕ್ಯ ಪರಿಪಾಲನೆಗೆ ತಾಯಿಯ ತಲೆಕಡಿದವನು. ಅಂದರೆ ಹೆಣ್ಣಿಗೆ ಸ್ವಾತಂತ್ರ್ಯ ನೀಡದವನು ಮತ್ತು ತಂದೆ ಸತ್ತಾಗ ಎಡೆಮಾಡಲು ಈ ನಾಡಿನಲ್ಲಿ ಬದುಕಿದ ಆರ್ಯೇತರರ (ದ್ರಾವಿಡರು/ಶೂದ್ರರು) ತಲೆಕಡಿದು ನೆತ್ತರು ನೆಲಕ್ಕೆ ಬೀಳದಂತೆ ತಂದು ತಂದೆಯ ಘೋರಿಗೆ ಅರ್ಪಿಸಿದವನು. ರಾಮನಂತು ರಾಮಾಯಣ. ಶಂಭೂಕನಂತಹ ಶೂದ್ರನ ತಲೆಕಡಿದವನು. ಇವನೂ ಹೆಣ್ಣಿಗೆ ಸ್ವಾತಂತ್ರ್ಯ ನೀಡದ ಅನುಮಾನಿಗ. ಇಂತಹ ನೆರಳಿನಲ್ಲಿ ಬದುಕುವವರಿಗೆ, ಎಲ್ಲರಿಗೂ ನೆರಳಾದ ಮೇಲೆ ನನಗೆ ನೆರಳು ಮಾಡಿ ಎನ್ನುವ ಮಂಚಾಲೆಮ್ಮ ದೇವತೆ ಹೇಗೆ ತಾನೆ ಕಂಡಾಳು. ಸಮಾನತೆಯ ಕನಸನ್ನು ಕಂಡವರು ಸನಾತನಿಗಳ ವಕ್ರತೆಯಿಂದ ಚಂಡಿ ಚಾಮುಂಡಿ ದುರ್ಗಿ ರಾಕ್ಷಸರಾದರು. ಬೆರಳನ್ನು ಕತ್ತರಿಸಿಕೊಂಡರು. ಪುಣ್ಯಕೋಟಿ ಕತೆಯ ಹುಲಿ ಪಾಪ ಪ್ರಜ್ಞೆಯಲ್ಲಿ ನರಳಿ ಆತ್ಮಹತ್ಯೆಯ ದಿಕ್ಕು ತುಳಿಯುವಂತೆ ಮಾಡಿದರು. ಕನಕನನ್ನು ಹೊರಗೆ ನಿಲ್ಲಿಸಿದರು. ಮನುಷ್ಯನಿಗೆ ಮನುಷ್ಯ ಮುಖ್ಯವಾಗದೆ ಗೋವುಗಳು ಮನುಷ್ಯನಿಗಿಂತ ಮುಖ್ಯವಾಗಿ ಗದ್ದಲವೆದ್ದಿದೆ. ರಾಮಜನ್ಮ ಭೂಮಿಯ ಗದ್ದಲವಂತೂ ಈ ದೇಶಾದ್ಯಂತ ಮನುಷ್ಯತ್ವದ ಕಣ್ಣುಗಳಿಗೆ ಧೂಳು ಕವಿಸಲಾಯಿತು. ಇಂತಹ ಉಸಿರಾಡಲು ಅಡಚಣೆಯಾಗುವ ವಾತಾವರಣದಲ್ಲಿ ಎದೆಗೆ ಬಿದ್ದ ಅಕ್ಷರ ಉಸಿರನ್ನು ನೀಡಿದೆ. ಸನಾತನಿಗಳಿಗೆ ಭೂತಕಾಲವಿಲ್ಲದೆ ಬದುಕಿಲ್ಲ. ಹಾಗಾಗಿಯೆ ಡಾಂಬರು ಬಂದುದು ಕತೆಯು ಭಾರತೀಯ ಪರಂಪರೆ ನೀಡಿದ ಉಸಿರುಗಟ್ಟುವಂತಹ ಬದುಕನ್ನು ಮತ್ತು ಅದನ್ನು ಮೀರುವ ಕ್ರಮವನ್ನು ವಿವರಿಸುತ್ತದೆ. ಮತ್ತು ಊರಿನ ನಾಕು ಐಕಳ ಎದೆಗೆ ಬಿದ್ದ ನಾಕಕ್ಷರ ಬೆಳಕನ್ನು ಮೂಡಿಸಿದೆ. ಎಲ್ಲರನ್ನು ಕತ್ತಲೆಗೆ ದೂಡಿ ಕಂದೀಲಿನ ಬೆಳಕಿನಲ್ಲಿರುವ ಪಟೇಲ, ಗೌಡ, ಶಾನುಬೋಗ ಮುಂತಾದವರ ಪರಂಪರೆಯ ದರ್ಪದ ಬೆಳಕಲ್ಲದ ಬೆಳಕು ನಂದಿ ಹೊಸಬೆಳಕಿಗೆ ಬೆರಳು ತೋರಿದಂತಿದೆ. “….ಹಿಂದಕ್ಕೆ ಬಂದರೆ ಕಳ್ಳಿ ಕವುಚಿಕೊಂಡ ಅದು ಗವ್ವನೆ ಊರವರೆಗೂ ಬಂದು ದೆವ್ವ ನಿಂತ ಅರಳಿ ಮರಗಳ ಬಳಚಿ ಮುಂದೆ ಮೂರು ಸೆಲೆಯಾಗಿ ಒಡೆದುಕೊಂಡು ಊರೊಳಕ್ಕೆ ಧಾವಿಸುತ್ತದೆ. ಹಿಂದೆ ಸೆಲೆ ಹೊಂಟ ಬೀದಿಯ ಅಕ್ಕಪಕ್ಕ ಒತ್ತೊತ್ತು ಹಟ್ಟಿಗಳು ತಕ್ಕೈಸಿಕೊಂಡಿದ್ದು ಉಸಿರಾಡಲೂ ಅಡಚಣೆ ಮಾಡುವಂತೆ ಮೊದಲು ನೋಟಕ್ಕೆ ಗಕ್ಕ ಕಾಣಬರುತ್ತದೆ.” ಇಂತಹ ಇಕ್ಕಟ್ಟಿನ ಉಸಿರುಗಟ್ಟಿಸುವ ವಾತಾವರಣಕ್ಕೆ ಎದೆಗೆ ಬಿದ್ದ ಅಕ್ಷರ, ಲಕುಮ ರಾಜಪ್ಪ ಮಾದು ಶಂಭು ಮುಂತಾದವರಿಗೆ ಸುತ್ತಲು ನಡೆಯುತ್ತಿರುವ ಅಸಮಾನತೆಗಳು ಕಾಣಲು ಮತ್ತು ಸಮಾನತೆಗಾಗಿ ದನಿ ಎತ್ತಲೂ ಸಾಧ್ಯವಾಗಿಸುತ್ತದೆ.
ಇಂತಹ ಹಲವಾರು ಸಾಧ್ಯವಾಗಿಸುವ ಬರಹಗಳ ವೈವಿಧ್ಯತೆ ಪುಸ್ತಕದಲ್ಲಿ ಕಂಡು ಬರುತ್ತದೆ. ದೇವರು, ಅಸ್ಪೃಶ್ಯತೆ, ಮಹಿಳೆ, ದಲಿತ ಚಳುವಳಿ, ಕೃಷಿ, ಗೋಹತ್ಯೆ ನಿಷೇಧ, ಕತೆ, ವ್ಯಕ್ತಿ ಚಿತ್ರ, ಮೀಸಲಾತಿ, ಬ್ರಾಹ್ಮಣರ ಬಹಿರಂಗ ಸಭೆಯ ಅಂತರಂಗದಲ್ಲಿ ಕೆಲ ಕಾಲ….ಮುಂತಾಗಿ. ಹೀಗೆ ಹತ್ತು-ಹಲವು ವಿಷಯಗಳನ್ನು ಅತ್ಯಂತ ಪ್ರಾಮಾಣಿಕವಾದ ಮತ್ತು ಖಚಿತ ನಿಲುವುಗಳನ್ನು ಮಂಡಿಸುತ್ತದೆ.

 

ನಾಗಣ್ಣ ಕಿಲಾರಿ
ಸಹಾಯಕ ಪ್ರಾಧ್ಯಾಪಕರು
ಕನ್ನಡ ವಿಭಾಗ
ಸರಕಾರಿ ಮಹಾವಿದ್ಯಾಲಯ, ಸಿಂಧನೂರು
ರಾಯಚೂರು-ಜಿಲ್ಲೆ

ಮೊ; 9972607208
ಮಿಂಚಂಚೆ :nagannakilari1982@gmail.com