ಉಳ್ಳವರ ಕ್ರೂರ ವ್ಯಂಗ್ಯದ ನಡುವೆ ಇಲ್ಲದವರು ಸೆಣಸಾಡುತ್ತಾ

ಡಾ| ಅಂಬೇಡ್ಕರ್ ನೆನಪಿನ ಜೈಭೀಮ್ ಭವನದಲ್ಲಿ ’ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆ’ ಈಗ ಬಿಡುಗಡೆಯಾಗುತ್ತಿರುವುದು ಏನಾದರೂ ಸ್ವಾತಂತ್ರ್ಯಪೂರ್ವದಲ್ಲಿ -ಅಂಬೇಡ್ಕರ್ ಅವರಿಂದಲೇ ಬಿಡುಗಡೆಯಾಗಿದ್ದರೆ ಹೇಗಿರುತ್ತಿತ್ತು? ಆ ಪರಿಣಾಮದಿಂದಾಗಿ ಇಂದು ಸಮಾಜ ಹೇಗೆ ಎಷ್ಟು ಬದಲಾಗಿರುತ್ತಿತ್ತು? ಇದು ಅಂದಾಜಿಗೆ ಸಿಗದು.

ಅಂಬೇಡ್ಕರ್ ಬೌದ್ಧ ಧರ್ಮ ಹಾಗೂ ಕಮ್ಯುನಿಸಂ ನಡುವೆ ಆಯ್ಕೆಗೆ ತೂಗುಯ್ಯಾಲೆ ಆಡುತ್ತಾರೆ. ಕೊನೆಗೆ ಬೌದ್ಧ ಧರ್ಮ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಬೇಡ್ಕರ್ ಅವರು ಕಮ್ಯುನಿಸಂ ವಿರೋಧಿಸುತ್ತಾರೆ ಎಂದು ವಾದಿಸುವ ಕಟ್ಟಾ ಕಮ್ಯುನಿಸ್ಟರಿಗೆ ನಾನು ’ಅಲ್ರಪ್ಪಾ, ಮದುವೆಯಾಗಲು ನೂರಾರು ಹೆಣ್ಣುಗಳನ್ನು ನೋಡಿ ಕೊನೆಗೆ ಇಬ್ಬರನ್ನು ಆಯ್ಕೆ ಮಾಡಿ ಅವರ ನಡುವೆ ತುಲನೆ ಮಾಡಿ ಒಬ್ಬಳನ್ನು ಮದುವೆ ಮಾಡಿಕೊಂಡರೆ ಅದರ ಅರ್ಥ ಅವರ ದೃಷ್ಟಿಯಲ್ಲಿ ನೀವು ಕಳಪೆ ಅಂತಲ್ಲ, ನೀವು ರನ್ನರ್ ಅಪ್’ ಅಂತ ತಮಾಷೆ ಮಾಡಿದ್ದೆ.

ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆಯಲ್ಲಿ ’ಜಗತ್ತಿನ ದುಡಿಮೆಗಾರರೇ ಒಂದಾಗಿ’ ಎಂಬ ಮಹಾವಾಕ್ಯವಿದೆ. ಇದು ಭೂಮಿ ಮೇಲೆ ಬರೆದ ಬರಹ, ಜೀವಂತ ನುಡಿ. ಆದರೆ ಈ ನುಡಿ ಚಿಗುರುವಂತಾಗಲು ಆ ಸ್ಥಳಕ್ಕೆ ತಕ್ಕಂತೆ ಅಲ್ಲಿನ ಗಾಳಿನೀರು ಮಣ್ಣಿಗೆ ಅನುಗುಣ ಕಸಿಮಾಡಬೇಕಾಗಿದೆ, ಆಗ ಸಮಾನತೆ ಜೀವಾಡುತ್ತದೆ. ಮಾರ್ಕ್ಸ್-ಎಂಗಲ್ಸ್‌ರು ಜಗತ್ತಿನ ದುಡಿಯುವ ವರ್ಗವನ್ನು ಶ್ರಮಜೀವಿ ಎಂದು ಕರೆದು ಯಾಕೆ ಭಾರತದ ಅಸ್ಪೃಶ್ಯರನ್ನು ಕಠಿಣ ಶ್ರಮಜೀವಿಗಳು ಎಂದು ಕರೆಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಭಾರತದ ಕಮ್ಯುನಿಸ್ಟರು ಪ್ರಯತ್ನಿಸಬೇಕಿತ್ತು. ಸಮಾನತೆಯೆಂಬುದು ಕೆಲವು ಸಮುದಾಯಗಳಿಗೆ ವೈಯಕ್ತಿಕ ತುರ್ತು ಆಗಿರುತ್ತದೆ. ಆ ಸಮುದಾಯವೇ ಸಮಾನತಾ ಆಂದೋಲನದ ನಾಯಕತ್ವವಹಿಸುವುದು ಸಮಾನತೆಗೆ ವೇಗೋತ್ಕರ್ಷ ಎಂಬುದನ್ನು ಸೈದ್ಧಾಂತಿಕ ಸಮಾನತೆಯ ಆಶಯದ ಸಂಘಟನೆಗಳು ಅರ್ಥಮಾಡಿಕೊಳ್ಳಬೇಕಾಗಿತ್ತು. ಯಾಕೆಂದರೆ ಒಳತುರ್ತಿನ ಸಮಾನತೆಯ ಆಶಯದ ಜನಸಮುದಾಯವು ಅಡ್ಡಾದಿಡ್ಡಿ ಬೆಳೆದ ವ್ಯವಸ್ಥಿತವಲ್ಲದ ಕಾಡಿನ ಮರಗಿಡಗಳಂತಾದರೆ ಸೈದ್ಧಾಂತಿಕ ಸಮಾನತೆಯ ಸಂಘಟನೆಗಳು ಅಚ್ಚುಕಟ್ಟಾಗಿ ನೆಟ್ಟ ಮರಗಿಡಗಳಂತೆ. ಇದನ್ನು ಕಾಣುವ ಕಣ್ಗಳಿರಬೇಕಾಗಿತ್ತು.

ಒಂದುಕಡೆ, ಇಲ್ಲದವರು ಒಂದಾಗುವುದು ಭಾರತದಲ್ಲಂತೂ ಬಲು ಕಷ್ಟ, ನಿರಾಶ್ರಿತರ ಕ್ಯಾಂಪ್‌ನಂಥ ಭೀಕರ ಪರಿಸ್ಥಿತಿಯಲ್ಲೂ ಎಲ್ಲಾ ಜಾತಿ ಧರ್ಮಗಳವರೂ ಒಂದೇಕಡೆ ವಾಸಿಸುತ್ತ ಒಟ್ಟಿಗೆ ಅಡುಗೆ ಮಾಡಿ ಜತೆಗೂಡಿ ಉಣ್ಣುವ ಪರಿಸ್ಥಿತಿ ಇಲ್ಲದ ದುಸ್ಥಿತಿ ನಮ್ಮದಾಗಿದೆ. ಇನ್ನೊಂದು ಕಡೆ, ನಮ್ಮ ಅಲೆಮಾರಿ ದೊಂಬರ ಸಮುದಾಯದಲ್ಲಿ ಈಗಲೂ ಒಂದು ತಲೆತಲಾಂತರದಿಂದಲೂ ನಡೆದುಕೊಂಡು ಬಂದ ಒಂದು ಪದ್ಧತಿ ಏನೆಂದರೆ-ಈ ಸಮುದಾಯದವರು ವರ್ಷಕ್ಕೆ ಒಂದೆರಡು ಸಲ ಪ್ರತಿಯೊಬ್ಬರೂ ವರಿ(ವಂತಿಕೆ)ಎತ್ತಿ ಎಲ್ಲರೂ ಸೇರಿ ಪರ ಮಾಡುತ್ತಾರೆ. ಆಗ ಅನ್ನಾಹಾರ ಪಾಲಾಕುವಾಗ ಈ ಪರದ ಸ್ಥಳಕ್ಕೆ ಬರಲಾಗದ ವಯಸ್ಸಾದವರಿಗೂ ಬಸುರಿ ಬಾಣಂತಿಯಯರಿಗೂ ಪಾಲನ್ನು ಅವರು ಇರುವಲ್ಲಿಗೇ ಕೊಟ್ಟಿಕಳಿಸುತ್ತಾರೆ. ಅಷ್ಟೆ ಅಲ್ಲ, ಬಸುರಿ ಹೆಣ್ಣು ಮಗಳ ಗರ್ಭದೊಳಗಿರುವ ಶಿಶುವನ್ನೂ ಲೆಕ್ಕ ಹಾಕಿ ಅದಕ್ಕೂ ಒಂದು ಪಾಲು ನೀಡುತ್ತಾರೆ. ಈ ಮಾನವೀಯ ಸಂಸ್ಕೃತಿ ಅಲೆಮಾರಿಯಾಗಿ ಅಲೆಯುತ್ತಿದೆ. ಹಾಗೇ ಕಡುಬಡತನ ಹೇಗಿದೆ ಎಂಬುದಕ್ಕೆ ನಮ್ಮ ಜನಪದರು ತಮ್ಮ ಒಡಲಿನ ಆ ಪಾಡನ್ನೇ ಒಂದು ದಾರುಣ ಹಾಡಾಗಿಸಿದ್ದಾರೆ : ’ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ/ ಒಡಲ ಕಿಚ್ಚಲ್ಲೇ ಹೆಣಬೆಂದೋ/ ದೇವರೆ ಬಡವರಿಗೆ ಸಾವ ಕೊಡಬೇಡ’- ಹೀಗೆ ಬಡತನ ತನ್ನ ಹಾಡನ್ನು ಹಾಡಿಕೊಂಡರೆ ಮತ್ತೊಂದು ಕಡೆ ಇತ್ತೀಚೆಗೆ ಜನರಿಂದಲೇ ಆಯ್ಕೆಯಾದ ’ಜನಪ್ರತಿನಿಧಿಗಳ ವಿಧಾನಸೌಧದೊಳಗೂ ಇನ್ನೊಂದು ಹಾಡು ಓಡಾಡಿತು: ’ಆಶ್ರಯಕ್ಕೆ ಆಶ್ರಯ ಮನೆಯಿರಲು/ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಸಿಗುತ್ತಿರಲು/ ರಾತ್ರಿ ನಶೆಗೆ ಅಗ್ಗದ ಮದ್ಯವಿರಲು/ ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ’ ಇದಕ್ಕೆ ಎಲ್ಲರೂ ನಕ್ಕರು.

ನಾವೂ ನಕ್ಕೆವು. ನಾವು ಪ್ರಶ್ನಿಸಲಿಲ್ಲ. ನಾವು ಪ್ರಶ್ನಿಸಬೇಕಿತ್ತು- ವಾಸಕ್ಕೆ ಬಂಗಲೆಯಿರುವವನು, ಮನೆತುಂಬಾ ತರಾವರಿ ದವಸ ಧಾನ್ಯ ತುಂಬಿಕೊಂಡವನು, ರಾತ್ರಿ ನಶೆಗೆ ದೇಶ ವಿದೇಶಗಳ ಅತಿ ಬೆಲೆಯ ಮದ್ಯ ಇಟ್ಟುಕೊಂಡವನು-ತನ್ನ ಕೆಲಸಕ್ಕೆ ಬೆಂಕಿ ಹಚ್ಚು ಅನ್ನುತ್ತಾನೆಯೇ? ಈ ಪ್ರಶ್ನೆ ಮಾಡಬೇಕಿತ್ತು. ನಮ್ಮ ವಿಧಾನಸೌಧವು, ಇಲ್ಲದವರು ಯಾಕಾಗಿ ದುಡಿಯುತ್ತಾರೆ? ಯಾರಿಗಾಗಿ ದುಡಿಯುತ್ತಾರೆ? ಇದನ್ನು ಪ್ರಶ್ನೆ ಮಾಡಬೇಕಾಗಿತ್ತು. ಹಾಗೇ ಉಳ್ಳವರು ಯಾರಿಗಾಗಿ ದುಡಿಯುತ್ತಾರೆ? ಯಾಕಾಗಿ ದುಡಿಯುತ್ತಾರೆ? ಇದನ್ನೂ ಪ್ರಶ್ನೆ ಮಾಡಬೇಕಾಗಿತ್ತು. ಬದುಕನ್ನು ಎಳೆದುಕೊಂಡು, ದೂಡಿಕೊಂಡು ಸತ್ತರೆ ಸಾಕಪ್ಪಾ ಎಂದು ಸಾಗುವವರ ಮೇಲೆ ಸವಾರಿ ಮಾಡುವ ಉಳ್ಳವರ ಕ್ರೂರ ವ್ಯಂಗ್ಯವಿದು. ಹಸಿದವರು ಹೊಟ್ಟೆಗಿಲ್ಲದೆ ಗುಲಾಮರಂತೆ ಹೇಳಿದಷ್ಟನ್ನು ಮಾಡಿಕೊಂಡು ಆಯ್ಕೆ ಇಲ್ಲದೆ ಬಿದ್ದಿರಬೇಕು ಎಂಬ ವಾಂಛೆ ಹೀಗೆಲ್ಲ ಅಣಕಿಸುತ್ತದೆ. ಚರಿತ್ರೆಯೆಂದರೆ ಇದೇ ಕತೆ ಇದೇ ವ್ಯಥೆಯಾಗಿಬಿಟ್ಟಿದೆ. ನಮ್ಮಲ್ಲೇ ಭಾರತದ ನಗರವಾಸಿಗಳು ದಿನಕ್ಕೆ ಮೂವತ್ತು ರೂಪಾಯಿ ಪಡೆದರೆ, ಹಳ್ಳಿಗಾಡಲ್ಲಿ ಇಪ್ಪತ್ತು ಚಿಲ್ಲರೆ ರೂಪಾಯಿ ಪಡೆದರೆ ಆ ಭಾರತದ ಪ್ರಜೆಗಳು ಬಡತನ ರೇಖೆಯಿಂದ ಮೇಲೆತ್ತಲ್ಪಡುತ್ತಾರೆ! ಹೀಗೆಲ್ಲಾ ಅಣಕಿಸುವವರು ತಿಂಗಳಿಗೆ ಕೇವಲ ಒಂದೇ ಒಂದು ದಿನ ಪೌರಕಾರ್ಮಿಕರ ಕೆಲಸವನ್ನೋ ಹಮಾಲಿ ಕೆಲಸವನ್ನೋ ಮಾಡಿ ಅವರು ಪಡೆಯುವ ಕೂಲಿಯನ್ನೇ ಪಡೆದು ಅಷ್ಟರಲ್ಲೇ ಆ ದಿನ ಜೀವಿಸಿ ಧನ್ಯತೆ ಅನುಭವಿಸಿದರೆ ಮಾತ್ರ ಭಾರತ ಪ್ರಕಾಶಿಸುತ್ತದೆ. ಆಗ ಭಾರತಕ್ಕೆ ಏನುಬೇಕೋ ಅದು ಅರ್ಥವಾಗಲೂಬಹುದು.

ಇಲ್ಲಿ ನಾವು ಮುಖಾಮುಖಿಯಾಗಬೇಕಾಗಿದೆ. ಇದು ಬಲು ಕಷ್ಟ. ಸಾಮ್ರಾಜ್ಯಶಾಹಿ ಸುಲಿಗೆ ಇಂದು ನವಿರಾಗಿ ಮೋಹಿನಿ ಎಂಬ ದೆವ್ವದ ರೂಪದಲ್ಲಿದೆ. ಇಲ್ಲಿ ಅಕ್ಕನ- “ತೆರಣಿಯ ಹುಳ ತನ್ನ ಸ್ನೇಹಕ್ಕೆ /ತಾನೇ ಮನೆಯ ಮಾಡಿ/ ತಾನೇ ಸಾವ ತೆರನಂತೆ-” ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣಗಳ ಆಕ್ಟೋಪಸ್ ಹಿಡಿತಕ್ಕೆ ಸಿಕ್ಕಿ ಭೂಮಿ ಒದ್ದಾಡುತ್ತಿದೆ. ಹಿಂದೆ ಸುಲಿಗೆ ದುಷ್ಟವಾಗಿ ಕಾಣುತ್ತಿತ್ತು. ಇಂದು ಸೆಳೆತವಾಗಿ ಆಕರ್ಷಕವಾಗಿದೆ. ಹಿಂದೆ ಯುದ್ಧವೆಂದರೆ ಯುದ್ಧವೇ ಆಗಿತ್ತು. ಹೆಣಗಳು ಉರುಳುತ್ತಿದ್ದವು. ಇಂದು ಯುದ್ಧವೆಂದರೆ ವ್ಯಾಪಾರವಾಗಿಬಿಟ್ಟಿದೆ. ಆ ಯುದ್ಧಗಳಲ್ಲಿ ಒಂದೇ ಸಲ ಸತ್ತರೆ ಈ ಯುದ್ಧಗಳಲ್ಲಿ ಇಂಗ್ಲೆಂಡಿನ ಚಿಂತಕ ಜೆರೆಮಿ ಸೀ ಬ್ರೂಕ್ ಅವರಿಗೆ ಕಾಣುವ ಹಾಗೆ ಸಾವು ಕಂತಿನ (ಇನ್‌ಸ್ಟಾಲ್ಮೆಂಟ್) ಸಾವಾಗಿದೆ. ಈ ಸಾವು ಸಾವು ಎನಿಸುತ್ತಿಲ್ಲ. ಭೂಮಿಯನ್ನು ರಕ್ತ ಚೆಲ್ಲಿ ಪಡೆದು ಪರತಂತ್ರದಿಂದ ಪಡೆದು ಪಾರಾದ ನಾವೇ ಈಗ ಪರತಂತ್ರವನ್ನೆ ಮೋಹಿಸಿ ಪಡೆದದ್ದನ್ನು ಕಳೆದುಕೊಳ್ಳುತ್ತಿದ್ದೇವೆ. ಸಮಾನತೆ ಮತ್ತು ಸಂಪತ್ತು ಅಭಿವೃದ್ಧಿ ಜೊತೆಜೊತೆಯಾಗಿ ಹೆಜ್ಜೆಯಿಡುವವರೆಗೂ ಇದು ಇದ್ದದ್ದೇ, ಆದರೆ ಸಾಮ್ರಾಜ್ಯಶಾಹಿ ತೊಡಿಸಿದ ಸರಪಳಿ ಚಿನ್ನದ ಚೈನಾಗಿ ಕಾಣುತ್ತ್ತದೆ. ಹೀಗಾಗೇ ಹಿಂದೆ ಕಪ್ಪು ಬಿಳುಪಿನ ನಡುವೆ ಸ್ವಾತಂತ್ರ್ಯ ಹೋರಾಟ ನಡೆದರೆ ಇಂದು ನೂರೆಂಟು ಬಣ್ಣಗಳ ನಡುವೆ ಸ್ವಾತಂತ್ರ್ಯ ಹೋರಾಟ ನಡೆಯಬೇಕಾಗಿದೆ.

ಆದರೆ ಬಿಡುಗಡೆಗೆ ಜೊತೆಗೂಡಬೇಕಾದವರು ಜೊತೆಯಾಗೂ ಇಲ್ಲ. ಉದಾಹರಣೆಗೆ- ತೆಲಂಗಾಣ ಹೋರಾಟದ ನಂತರ ಕಮ್ಯುನಿಸ್ಟ್ ಪಕ್ಷವು ಒಂದು ನಿಲುವಿಗೆ ಬರಲಾಗದೆ ಕಾಲಾನುಕ್ರಮದಲ್ಲಿ ಮೂರು ಭಿನ್ನ ನಿಲುವಿಗೆ ಬಂದು ಮೂರು ಪಕ್ಷಗಳಾಗಿ ಒಡೆಯುತ್ತವೆ. ತದನಂತರ ಮೂರು ಮೂವತ್ತಾಗುತ್ತದೆ. ಇವೆಲ್ಲಾ ಒಂದೇ ಒಂದು ಪಕ್ಷವಾಗಿ ಉಳಿದಿದ್ದರೆ ಆ ಭಿನ್ನಾಭಿಪ್ರಾಯಗಳನ್ನು ತನ್ನ ಒಡಲೊಳಗೇ ಇಟ್ಟುಕೊಂಡು ಬಹುಮತಕ್ಕೆ ಗೌರವಿಸಿ ಬದ್ಧರಾಗಿದ್ದರೆ ಇಂಥ ಒಂದು ಪಕ್ಷದ ಅಂದರೆ ಭಿನ್ನಾಭಿಪ್ರಾಯಗಳನ್ನು ಸಮತೋಲಿಸಿಕೊಂಡು ಹೋಗುವ ಧಾರಣಾಶಕ್ತಿ ಪಡೆದವರ ಜೊತೆಗೆ ಸಮಷ್ಟಿ ಮನಸ್ಸು ಕನೆಕ್ಟಾಗುತ್ತಿತ್ತೇ? ಏಕಾಭಿಪ್ರಾಯದ ಕಣ್ಣು ಕಪಾಟಿನ ಓಟದ ಪಕ್ಷಗಳು ಸಮಷ್ಟಿ ಮನಸ್ಸನ್ನು ಮುಟ್ಟುವ ಸಾಧ್ಯತೆ ಕಮ್ಮಿ ಇರಬಹುದೇ? ಈ ಸಮಷ್ಟಿ ಮನಸ್ಸಿನ ವಾತವರಣದಲ್ಲಿ ಕಮ್ಯುನಿಷ್ಟರೊಡನೆ ಸಮಾಜವಾದಿಗಳು ಜೊತೆಗೆ ಸಮಾನತೆಯ ಆಶಯದ ಎಲ್ಲಾ ಐಡೆಂಟಿಟಿ ಸಂಘಟನೆಗಳೆಲ್ಲಾ ಕೂಡುವ ಸಾಧ್ಯತೆ ಹೆಚ್ಚುತ್ತಿತ್ತೇ? ಎಷ್ಟೇ ಒಳ್ಳೆಯ ಗುರಿಗಳು, ಎಷ್ಟೋ ಹೋರಾಟಗಳು ನಡೆದರೂ ಜನತಂತ್ರ ವ್ಯವಸ್ಥೆಯಲ್ಲಿ ಅದು ಓಟುಗಳಾಗಿ ಪರಿವರ್ತನೆ ಆಗುವುದು ಆ ಪಕ್ಷ ಅಥವಾ ಒಕ್ಕೂಟದ ಒಗ್ಗಟ್ಟು, ಸಮತೋಲನ ಹಾಗೂ ಅದರ ತಾಳಿಕೊಳ್ಳುವ ಧಾರಣಾ ಶಕ್ತಿಯತ್ತ ಜನತೆಯ ಒಳಗಣ್ಣು ಅಪೇಕ್ಷಿಸುತ್ತದೆಯೇ? -ಹೀಗೆಲ್ಲಾ ನನ್ನೊಳಗೆ ಸುಳಿದಾಡುತ್ತಿದೆ.

ಈ ಕಾಲಕ್ಕೆ ತಕ್ಕಂತೆ ಸಮಾನತೆಯ ಕನಸನ್ನು ಕಸಿಮಾಡುವ ಪ್ರತಿಭೆ ಇಂದು ಬೇಕಾಗಿದೆ. ನಮ್ಮ ನಮ್ಮ ಆಲೋಚನೆಗಳು ಚಿಂತನೆಗಳು ಕರ್ಮಠವಾಗದಂತೆ, ಗೊಡ್ಡು ಆಗದಂತೆ ನಾವೂ ನಮ್ಮನ್ನು ಕಾಪಾಡಿಕೊಳ್ಳಬೇಕಾಗಿದೆ. ಉದಾಹರಣೆಗೆ, ನನ್ನ ಮೊಮ್ಮಗ ಅರವಿಂದ್ ಚಿಕ್ಕವನಾಗಿದ್ದಾಗ ಬೇಬಿ ಜಾನ್ಸನ್ ಬ್ಲಾಸಂ ಸಾಬೂನು ಬಳಸುತ್ತಿದ್ದ. ಅವನ ಮೇಲಿನ ಮೋಹಕ್ಕೆ ಬೇಬಿ ಜಾನ್ಸನ್ ಬ್ಲಾಸಂ ಸಾಬೂನನ್ನೇ ನಾನೂ ಬಳಸಲು ಶುರು ಮಾಡಿದೆ. ಅವನು ಬೆಳೆದಂತೆ ನಾನಾ ಸಾಬೂನುಗಳನ್ನು ಬಳಸುತ್ತಾ ಈಗ ಯಾವ ಸಾಬೂನು ಬಳಸುತ್ತಿದ್ದಾನೋ ನನಗೆ ಗೊತ್ತಿಲ್ಲ. ಆದರೆ ನಾನು ಮಾತ್ರ ಬೇಬಿ ಜಾನ್ಸನ್ ಬ್ಲಾಸಂ ಸಾಬೂನನ್ನೇ ಇನ್ನೂ ಬಳಸುತ್ತಿದ್ದೇನೆ. ಬದಲಾವಣೆಯ ಜಗತ್ತು ನನ್ನ ಮೊಮ್ಮಗನದಾದರೆ ಅದರ ಚಲನಶೀಲತೆಗೆ ಅಳವಡದೆ ನಾನಿದ್ದೇನೆ. ಹಳೆಯ ಹತಾರಗಳಲ್ಲೇ ಸದಾ ಬದಲಾಗುವ ಈ ಜಗತ್ತಿನೊಡನೆ ವ್ಯವಹರಿಸಿದರೆ ಅದು ಸ್ಪಂದಿಸುವುದಿಲ್ಲವೇನೊ. ಹೀಗೆ ಆಲೋಚನೆಗಳೂ ಚಿಂತನೆಗಳೂ ಎಲ್ಲವೂ ಇರಬೇಕು. ಈ ಅರಿವು ನಮಗೆ ದಿಕ್ಕುದೆಸೆ ಕಾಣಿಸಬಹುದೇ? ಬದಲಾಗುತ್ತಿರುವ ಜಗತ್ತಿನ ಒಳಗಿನಿಂದಲೇ ಸಮಾನತೆಯ ನಡಿಗೆ ಹಿಡಿಯುವ ಪ್ರತಿಭೆ ನಮ್ಮದಾದರೆ ಅದು ನಮಗೂ ಹೊಸ ನಡೆನುಡಿ ತಂದುಕೊಡಬಹುದೇ?