ಈಗ ಭಾರತ ಮಾತಾಡುತ್ತಿದೆ – ದೇವನೂರ ಮಹಾದೇವ

[ಆದಿವಾಸಿ, ಅಲೆಮಾರಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಸಂಘಟನೆಗಳ ವೇದಿಕೆಯಿಂದ, ಎನ್ ಪಿ ಆರ್, ಎನ್ ಆರ್ ಸಿ ಮತ್ತು ಸಿಎಎ ಅನ್ನು ವಿರೋಧಿಸಿ ಹಾಗೂ ಸಂವಿಧಾನ ಉಳಿವಿಗಾಗಿ 26.1.2020 ರಂದು ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಡಿಯೋ ಕೊಂಡಿ https://www.youtube.com/watch?v=4x4rdcKrgmU [ಕೃಪೆ-ವಾರ್ತಾಭಾರತಿ] ಹಾಗೂ ಅಂದು ಆಡಿದ ಮಾತುಗಳ ತಿದ್ದುಪಡಿಯಾದ ಬರಹ ರೂಪ ಇಲ್ಲಿದೆ.]

ಭಾರತ ಗಣರಾಜ್ಯವಾಗಿ 71ನೇ ವರ್ಷಕ್ಕೆಕಾಲಿಡುತ್ತಿದೆ. ಹೈಸ್ಕೂಲ್‍ನಲ್ಲಿ ‘ಜನರಿಂದ ಜನರಿಗಾಗಿ ಜನರಿಗೋಸ್ಕರ’ ಎಂದು ಎಲ್ಲರೂ ಒಕ್ಕೊರಲಿನಿಂದ ಹೇಳುತ್ತಿದ್ದೆವು. ಹಾಗೇ ಇಂಗ್ಲಿಷಿನಲ್ಲೂ ಕೂಡ Of the  people, By the people, For the people ಎಂದು ಬಾಯಿಪಾಠ ಮಾಡುತ್ತಿದ್ದೆವು. ಒಂದು ದಿನ ಮೇಸ್ಟ್ರು ಬೋರ್ಡ್ ಮೇಲೆ By the people ಅನ್ನುವುದಕ್ಕೆ ಬದಲಾಗಿ Buy the people ಎಂದು ಬರೆದು-‘ಇದರಲ್ಲಿ ಏನಾದರೂ ತಪ್ಪಿದ್ದರೆ ಸರಿ ಮಾಡಿ’ ಎಂದರು. ಇಡೀ ತರಗತಿ ‘ಸರಿಯಾಗಿದೆ ಸಾರ್’ ಎಂದು ಕೂಗಿಕೊಂಡಿತು. ಆಗಲೇ ನಮಗೆ ಕಾಲಜ್ಞಾನಿಗಳಂತೆ ಮುಂದಾಗುವುದು ತಿಳಿದಿತ್ತೋ ಏನೊ! ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಆದರೆ ನಗಲು ಆಗುವುದಿಲ್ಲ. ಆಗ ನಾವು By ಬದಲು Buy ಎಂದು ಹೇಳಿದ್ದು ನಿಜವಾಗಿಬಿಟ್ಟಿದೆ. ಹಣ ಜನರನ್ನು ಕೊಂಡುಕೊಳ್ಳುತ್ತಿದೆ. ಜನತಂತ್ರ ಹಣತಂತ್ರವಾಗಿಬಿಟ್ಟಿದೆ.

ಇತ್ತೀಚೆಗೆ ಪ್ರಧಾನಿ ಮೋದಿಯವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭವನ್ನು ಕರ್ನಾಟಕ ಮರೆತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಧಾನಿಗೆ ಕರ್ನಾಟಕದ ಪ್ರವಾಹ, ನೆರೆ ಅದರ ಪಕ್ಕದಲ್ಲೆ ಬರ ಈ ಬವಣೆಗಳನ್ನೆಲ್ಲಾ ನಿವೇದಿಸಿ ಜನರ ದುಃಖದುಮ್ಮಾನಕ್ಕೆ ನೆರವಾಗಲು 36 ಸಾವಿರ ಕೋಟಿ ನೆರವಿಗಾಗಿ ಯಾಚಿಸುತ್ತಾರೆ. ಪ್ರಧಾನಿ ಕಣ್ಣೆತ್ತೂ ನೋಡುವುದಿಲ್ಲ. ಅವರ 56 ಇಂಚಿನ ಎದೆ ಕಲ್ಲಾಗಿರಬೇಕೇನೊಎಂಬಂತಿರುತ್ತದೆ. ಆ ಕಲ್ಲೆದೆಯ ಪ್ರಧಾನಿಯು ರಾಜ್ಯಕ್ಕೆ ತೆರಿಗೆಯಿಂದ ಬರಬೇಕಾದ ರಾಜ್ಯದ ಪಾಲನ್ನೇ ಇನ್ನೂ ನೀಡಿಲ್ಲ. ಆದರೆ ಪ್ರಧಾನಿಗಳು ತಮಗೆ ಪ್ರಿಯ ಬಂಡವಾಳಶಾಹಿ ಕಂಪನಿಗಳಿಗೆ ತೆರಿಗೆ ರಿಯಾಯಿತಿ ಕೊಡುವುದಕ್ಕೆ ಹಾಗೂ ಅವರ ಬ್ಯಾಂಕ್ ಸಾಲ ಮಾಫಿ ಮಾಡುವುದಕ್ಕೆಯಾವ ಚೌಕಾಸಿಯನ್ನೂ ಮಾಡುವುದಿಲ್ಲ. ಯಾರಿಗೋಸ್ಕರ ಸರ್ಕಾರ ಅಂದರೆ- ಕ್ರೋನಿ ಬಂಡವಾಳಶಾಹಿ ಕಂಪನಿಗಳಿಗೋಸ್ಕರವೇನೊ ಎಂಬಂತಿದೆ.

ಈಗ ನಮ್ಮಗಣರಾಜ್ಯಉರುಫ್‍ ಜನರಾಜ್ಯ ಎಲ್ಲಿಗೆ ಬಂದಿದೆ? NPR, NRC, CAA ಕಾಯ್ದೆಗಳಿಗನುಸಾರ ಜನರು, ತಾವು ಇಲ್ಲಿನ ಜನ ಎಂದು ಸಾಬೀತುಪಡಿಸಬೇಕು ಎಂಬಲ್ಲಿಗೆ ಬಂದಿದೆ. ಈ ಕಾಯ್ದೆಗಳು ಏನೆಲ್ಲಾ ಅನಾಹುತಗಳನ್ನು ಮಾಡಬಹುದೆಂದು ಮೊನ್ನೆಮೊನ್ನೆ ಬೆಂಗಳೂರಲ್ಲಿ ಧ್ವಂಸವಾದ ಗುಡಿಸಲುಗಳ ಅವಶೇಷಗಳು ಸಾಕ್ಷಿ ಹೇಳುತ್ತವೆ. ಅಲ್ಲಿನ ಜೋಪಡಿಗಳಲ್ಲಿ ವಾಸ ಮಾಡುತ್ತಿದ್ದವರು, ನೆರೆ ಬರಕ್ಕೆ ತುತ್ತಾಗಿ ದುಡಿದು ತಿನ್ನಲು ಕರ್ನಾಟಕದ ಮೂಲೆಮೂಲೆಗಳಿಂದ ಬಂದ ಸಂಕಟದ ಜನರು.

ಇಂಥವರನ್ನು ರಾತ್ರೋ ರಾತ್ರಿ ಕಿತ್ತು ಬೀದಿಗೆಸೆದು ಬಿಟ್ಟರು. ಕೊಟ್ಟಕಾರಣ? ಅನುಮಾನಾಸ್ಪದ ಬಾಂಗ್ಲಾ ವಲಸಿಗರು ಇರಬಹುದೇನೊ ಅಂತ!. ಆಳ್ವಿಕೆಗೆ ಅಧಿಕಾರಶಾಹಿಗೆ ನಿಜ ಬೇಕಿಲ್ಲ. ತನಗೆ ಬೇಡವಾದ್ದನ್ನು ನಿರ್ದಯವಾಗಿ ಕಿತ್ತು ಎಸೆಯುವುದಷ್ಟೆ ಬೇಕು. NPR, NRC, CAA ಜಾರಿಗೆ ಬಂದರೆ ದೇಶದಾದ್ಯಂತ ಇದೇ ಆಗುತ್ತದೆ ಎನ್ನುವುದಕ್ಕೆ ಶಾಸ್ತ್ರ ಕೇಳಬೇಕಾಗಿಲ್ಲ.

ಇಲ್ಲಿ ಅಲೆಮಾರಿಗಳಿದ್ದಾರೆ. ಊರಿಂದ ಊರಿಗೆ ಅಲೆಯುವುದೇ ಇವರ ಜೀವನದ ಗತಿ. ಇವರಿಗೆ ನಿಮ್ಮಅಪ್ಪಅಮ್ಮ ಹುಟ್ಟಿದ ಊರು ಯಾವುದು ಎಂದು ಕೇಳಿದರೆ ಅವರು ಏನು ಹೇಳಬೇಕು? ಇಲ್ಲಿ ಆದಿವಾಸಿಗಳು ಇದ್ದಾರೆ ಕಾಡಲ್ಲಿ. ಎಲ್ಲರಿಗಿಂತಲೂ ಇವರೇ ಮೊದಲಿಗರು. ಅಲ್ಲೆ ಹುಟ್ಟಿ ಅಲ್ಲೆ ಮಣ್ಣಾಗಿ ಕಾಡನ್ನು ಫಲವತ್ತು ಮಾಡಿದವರು ಇವರು. ಇವರಿಗೆ ಅವರ ಅಪ್ಪ ಅಮ್ಮ ಹುಟ್ಟಿದ ದಿನಾಂಕ ಕೇಳಿದರೆ ಅವರು ಏನೆಂದು ಹೇಳಬೇಕು? ಇಷ್ಟೇ ಸಾಕಲ್ಲವೆ ಅವರನ್ನು ಕಾಡಿಂದ ತೆಗೆದು ಎಸೆಯುವುದಕ್ಕೆ? ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಕಂಪನಿಗಳಿಗೆ ನೀಡುವುದಕ್ಕೆ? ಹೀಗೆಯೇ ದಲಿತರು, ಅಲ್ಪಸಂಖ್ಯಾತರು, ಸ್ಲಂಜೀವಿಗಳು, ಹಿಂದುಳಿದ ವರ್ಗ ಹಾಗೂ ಮದುವೆಯಾಗಿ ಗಂಡನ ಮನೆ ಸೇರುವ ಮಹಿಳೆಯರು, ಗ್ರಾಮೀಣ ಜನತೆ ಇತ್ಯಾದಿ ಜನಸಮುದಾಯಗಳ ಬಹುಸಂಖ್ಯಾತರ ಪಾಡು ಇದೇ ಆಗಿಬಿಡುವ ಸಂಭವ ಇದೆ. ಇದನ್ನು ಪ್ರಶ್ನಿಸಿದರೆ ದೇಶದ್ರೋಹ ಅನ್ನುತ್ತಾರೆ. ಆರ್ಥಿಕತೆಯನ್ನು ಮುಳುಗಿಸುತ್ತಿರುವುದು ಇವರಿಗೆ ದೇಶದ್ರೋಹವಲ್ಲ! ನಿರುದ್ಯೋಗವನ್ನು ವೃದ್ಧಿಸುತ್ತಿರುವುದು, ಬೆಲೆ ಏರಿಕೆಯನ್ನು ಮೇಲುಮೇಲಕ್ಕೆ ಏರಿಸುತ್ತಿರುವುದು ದೇಶದ್ರೋಹ ಅಲ್ಲ! ಆದರೆ ಇದನ್ನೆಲ್ಲಾ ಪ್ರಶ್ನಿಸಿದರೆ, ದೇಶದ್ರೋಹವಾಗುತ್ತದೆ.

ಹಿಂದೊಮ್ಮೆ ನಾನು ದೇಶಪ್ರೇಮದ ಬಗ್ಗೆ ಬರೆದಿದ್ದೆ. ಅದು ಇಂದಿಗೆ ಹೆಚ್ಚಾಗಿ ಲಗತ್ತಾಗುತ್ತದೆ. ಒಂದು ಕುಟುಂಬ. ಗಂಡ ಹೆಂಡತಿ. ಮಕ್ಕಳಿಲ್ಲ. ಒಂದು ಹುಡುಗನ್ನ ದತ್ತು ತಗೋತಾರೆ. ಮರುವರ್ಷವೇ ಆ ದಂಪತಿಗಳಿಗೆ ಮಗು ಹುಟ್ಟುತ್ತದೆ. ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಈ ದತ್ತುಮಗ ಬಾಯಿ ಬಿಟ್ಟರೆ ದಿನಕ್ಕೆ ಸುಮಾರು ಸಲ ಅಪ್ಪಅಮ್ಮ, ಅಪ್ಪಅಮ್ಮ ಅಂತಿರುತ್ತಾನೆ. ಆದರೆ ನೈಸರ್ಗಿಕ ಮಗ ಯಾವಾಗಲೋ ಒಂದು ಸಲ ಅನಿವಾರ್ಯವಾದರೆ ಮಾತ್ರ ಅಪ್ಪಅಮ್ಮಅನ್ನುತ್ತಾನೆ. ಇದು ಕತೆಯಲ್ಲ, ವಾಸ್ತವ. ಇದನ್ನು ಮನಃಶಾಸ್ತ್ರಜ್ಞರಲ್ಲಿ ಪ್ರಸ್ತಾಪಿಸಿದೆ. ಅವರೆಂದರು- `ದತ್ತುಮಗನಿಗೆ ಗೊತ್ತು, ತಾನು ಅವರ ಮಗನಲ್ಲ ಅಂತ. ಅದಕ್ಕಾಗಿ ಪದೇ ಪದೇಅಂತಿರುತ್ತಾನೆ’ ಅಂದರು. ನನಗೆ ಅಯ್ಯೋ ಅನ್ನಿಸಿತು. ಇದಿರಲಿ, ಬಾಯಿಬಿಟ್ಟರೆ ದೇಶಭಕ್ತಿ, ದೇಶಪ್ರೇಮ ಎನ್ನುವವರನ್ನು ಕಂಡಾಗ ಅಂಥವರ ಸುಪ್ತಮನಸ್ಸಿನೊಳಗೆ ದತ್ತುಮಗನ ಕತೆಯೇ ಇರಬೇಕೇನೋ, doubtful ದೇಶವಾಸಿಗಳೇನೋ ಎಂದು ಸಂಶಯವಾಗುತ್ತದೆ. ಈ doubtful ದೇಶಭಕ್ತರನ್ನೂ ನಾನು ಬೇಡ ಅನ್ನುವುದಿಲ್ಲ, ಇಲ್ಲೇ ಹುಟ್ಟಿ ಈ ನೆಲದಲ್ಲಿ ಅಂಬೆಗಾಲಿಟ್ಟು ನಡೆದಾಡುವ ಕಂದಮ್ಮಗಳೆಲ್ಲಾ ಇಲ್ಲಿನವರೇ ಎನ್ನುವವನು ನಾನು. ಆದರೆ ಭಾರತದ ನೈಸರ್ಗಿಕ ಮಕ್ಕಳನ್ನೇ ದೇಶದ್ರೋಹಿಗಳು ಎಂದು ಕರೆದರೆ ಇದೆಂಥ ದುರಂತ! ಈ NPR, NRC, CAA ಕಾಯ್ದೆಗಳು ಇದನ್ನು ಮಾಡಲು ಹೊರಟಿದೆ.

ಅಂದರೆ, ಭಾರತದಿಂದ ಭಾರತಿಯತೆಯನ್ನು ಬೇರ್ಪಡಿಸಿ ಬಲಿ ಕೊಡುವ ಸಂಚು ನಡೆಯುತ್ತಿದೆ. ಭಾರತವು ಜಾತಿಮತ ಮೂಢನಂಬಿಕೆ ತಾರತಮ್ಯಗಳಿಂದ ನರಳುತ್ತಿದ್ದರೂ ಇಂಥಲ್ಲೆ ಹುಟ್ಟಿದ ಜಾತಿಮತ ಭಿನ್ನಭಾವಗಳನ್ನು ಮೀರಿದ ದಾರ್ಶನಿಕರು, ಸಾಧು ಸಂತರು, ಋಷಿಮುನಿಗಳು ಹಾಗೂ ಮಾನವೀಯ ಅಂತಃಕರಣದ ಮಹಾತ್ಮರು ಇತಿಹಾಸದುದ್ದಕ್ಕೂ ಭಾರತದ ಅಂತಃಸತ್ವವಾದ ಭಾರತಿಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಂದು ಗಾಂಧಿ ಅಂಬೇಡ್ಕರರು ಭಾರತಿಯತೆಯನ್ನು ಕಾಪಾಡುವ ಧಿಃಶಕ್ತಿಯಾಗಿ ಜೀವಂತವಾಗಿದ್ದಾರೆ- ಆಳವಾಗಿ ಬೇರೂರಿರುವ ಎರಡು ಬೃಹತ್ ವೃಕ್ಷಗಳಂತೆ. ಈ ಈರ್ವರಿಗೆ ಮತಾಂಧ ಫ್ಯಾಸಿಸ್ಟ್ ಶಕ್ತಿಗಳು ಒಳೇಟು, ಹೊರೇಟು ಕೊಟ್ಟು ಕತ್ತರಿಸುತ್ತಾ ಬರುತ್ತಿದೆ. ಆದರೆ ಈ ಗಾಂಧಿ, ಅಂಬೇಡ್ಕರ್‍ಗಳು ಯಾವ ತಳಿಯೋ ಕಾಣೆ. ಕತ್ತರಿಸಿದಷ್ಟೂ ಚಿಗುರುವ ವೃಕ್ಷಗಳಂತಿದ್ದಾರೆ. ಭಾರತೀಯತೆಯನ್ನು ಬಲಿಕೊಡುವ NPR, NRC, CAA ಪ್ರತಿಭಟನೆಯ ಸ್ಫೋಟದಲ್ಲಿ ಇದು ಪ್ರಖರ ಬೆಳಕಿನಂತೆ ಕಾಣುತ್ತಿದೆ.

ಈ ಬೆಳಕು ಭಾರತದ ಉದ್ದಗಲಕ್ಕೂ ಚೆಲ್ಲುತ್ತಿದೆ. ಆದರೂ ಹೌದು, ಕಷ್ಟವಿದೆ. ಇಂದು ಭಯೋತ್ಪಾದಕ ರಾಜಕಾರಣ ದೇಶವನ್ನು ಆಳುತ್ತಿದೆ. ಈ `ಭಯೋತ್ಪಾದಕ ರಾಜಕಾರಣ’ ಪದ ನನ್ನದಲ್ಲ. NPR, NRC, CAA ಪರಿಶೀಲಿಸಿ ಎಂದು ಬಿಜೆಪಿ ಉನ್ನತ ಮುಖಂಡರಿಗೆ “ಭಯೋತ್ಪಾದಕ ರಾಜಕಾರಣ ಸಲ್ಲ” ಎಂದವರು ಚಂದ್ರಬೋಸ್. ಇವರು ಸುಭಾಷ್‍ಚಂದ್ರಬೋಸ್‍ರ ಸೋದರ ಮೊಮ್ಮಗ. ವಿಶೇಷವೆಂದರೆ, ಈತ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ! ಭಾರತ ಮಾತೆಯ ಸುಪುತ್ರರು ಅಲ್ಲೂ ಇರಬಹುದು, ಎಲ್ಲೆಲ್ಲೂ ಇರಬಹುದು, ಈಗ ಭಾರತ ಮಾತಾಡಬೇಕಾಗಿದೆ. ಸಾಮಾನ್ಯವಾಗಿ ಯಾವುದೇ ರಾಜಕೀಯ ಸಾಮಾಜಿಕ ಹೋರಾಟಗಳಲ್ಲಿ ತಟಸ್ಥವಾಗಿರುತ್ತಿದ್ದ ಬೆಂಗಳೂರಿನ IIM, IISC ವಿದ್ಯಾರ್ಥಿಗಳು NPR, NRC, CAA ಪ್ರತಿಭಟಿಸುತ್ತ “ಮೌನ ಇನ್ನು ಮುಂದೆ ನಮ್ಮಆಯ್ಕೆಅಲ್ಲ” ಎಂದು ಘೋಷಿಸಿದ್ದಾರೆ. ಇದನ್ನು ಕೇಳಿದಾಗ- ಹೌದು ಈಗ ಭಾರತ ಮಾತಾಡುತ್ತಿದೆ.