ಈಗಲಾದರೂ ಬೆಳಕಿನ ಬೇಸಾಯದತ್ತ

ಕರ್ನಾಟಕದ ಕೃಷಿಗೆ ಹೊಸಬೆಳಕು ತಂದು ಕೊಟ್ಟ ಸ್ವಾಮಿಆನಂದ್‌ರವರ ’ಸುಭಾಷ್ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’ ಪುಸ್ತಕದಲ್ಲಿಒಂದು ಪ್ರಯೋಗ ಬರುತ್ತದೆ. ಅದು ಹೀಗಿದೆ :
ನೂರುಕೆ.ಜಿ ಹಸಿ ಕಬ್ಬಿನ ಜಲ್ಲೆಗಳನ್ನು ಕಡಿದು ತನ್ನಿ. ಆ ಕಬ್ಬುಗಳನ್ನು ಬಿಸಿಲಲ್ಲಿ ಪೂರ್ತಿ ಒಣಗಿಸಿ. ಒಣಗಿದ ಕಬ್ಬುಗಳನ್ನು ಈಗ ತೂಕಕ್ಕಿಡಿ. ಅವುಗಳ ತೂಕ ಕರಾರುವಕ್ಕಾಗಿ ೨೨ ಕೆ.ಜಿ ಬರುತ್ತದೆ. ಹಾಗಾದರೆ ಉಳಿದ ೭೮ ಕೆ.ಜಿ ಏನಾಯಿತು? ಏನಾಯಿತೆಂದರೆ ಆ ಕಬ್ಬಿನಲ್ಲಿದ್ದ ನೀರೆಲ್ಲ ಆವಿ ಆಯಿತು. ಆ ನೀರು ವಾತಾವರಣದಿಂದ ಲಭಿಸಿದ್ದು; ಮತ್ತೆ ವಾತಾವರಣ ಸೇರಿತು. ಈಗ ಮತ್ತೆ ಆ ಉಳಿದ ೨೨ ಕೆ.ಜಿ ಕಬ್ಬುಗಳಿಗೆ ಬೆಂಕಿ ಹಚ್ಚಿರಿ. ಅದು ಉರಿದು ಬೂದಿಯಾಗಲಿ. ಇದನ್ನು ತೂಗಿದರೆ ಆ ಬೂದಿಯ ತೂಕ ಕೇವಲ ಒಂದೂವರೆ ಕೆ.ಜಿ ಬರುತ್ತದೆ! ಇದರ ಅರ್ಥ ಏನು? ಅಂದರೆ ಆ ಇಡೀ ನೂರು ಕೆ.ಜಿ ಕಬ್ಬಿನ ಜಲ್ಲೆಗಳಿಗೆ ಭೂಮಿಯ ಕೊಡುಗೆ ಒಂದೂವರೆ (೧.೫) ಕೆ.ಜಿ ಮಾತ್ರ. ಕಬ್ಬು ಉರಿಯುವಾಗ ಸೂರ್ಯನಿಂದ ಸ್ವೀಕರಿಸಿದ ೨೨ ಕೆ.ಜಿಯು ಜ್ವಾಲೆರೂಪ ಪಡೆದು ಹಾಗೂ ಕಾರ್ಬನ್‌ಡೈಆಕ್ಸೈಡ್‌ನಿಂದ ಬಂದದ್ದು ಹೊಗೆಯ ರೂಪ ತಾಳಿ ಮತ್ತೆ ವಾತಾವರಣ ಸೇರಿದವು. ಆಗ ೧.೫ ಕೆ.ಜಿ ಬೂದಿ ಮಾತ್ರ ಉಳಿಯಿತು.ಇದನ್ನು ನೆನಪಿಟ್ಟುಕೊಳ್ಳಬೇಕಾಗಿದೆ- ನೂರು ಕೆ.ಜಿ. ಕಬ್ಬಿನ ಜಲ್ಲೆಗಳಲ್ಲಿ ಭೂಮಿಯ ಕೊಡುಗೆ ಕೇವಲ ೧.೫ ಕೆಜಿ ಮಾತ್ರ..

-ಈ ಹಿನ್ನೆಲೆಯಲ್ಲೇ ನಾವು ಬೆಳೆಯ ವಿಷಯ ಗಮನಿಸಬೇಕು. ನಾವು ಬೆಳೆಯುವ ಯಾವುದೇ ಬೆಳೆ ಇರಬಹುದು-ಅದು ಶೇಕಡ ೯೮.೫ ರಷ್ಟನ್ನು ವಾತಾವರಣದಿಂದಲೇ ಪಡೆದುದ್ದಾಗಿರುತ್ತದೆ. ಉಳಿದ ಶೇಕಡ ೧.೫ರಷ್ಟನ್ನು ಮಾತ್ರ ಭೂಮಿಯಿಂದ ಪಡೆಯುತ್ತದೆ.

– ಇದು ಮಹಾರಾಷ್ಟ್ರದ ಶ್ರೀಪಾದ ದಾಬೊಳ್ಕರ್, sಸುಭಾಷ್ ಪಾಳೇಕರ್‌ರಂತ ದಾರ್ಶನಿಕರು ಕಂಡ ಸತ್ಯ. ಈ ಸತ್ಯಕ್ಕೆ ನಾವು ಕುರುಡಾಗಿಬಿಟ್ಟಿದ್ದೇವೆ. ಮಣ್ಣು, ಭೂಮಿಯಿಂದಲೇ ಸಸ್ಯಕುಲವು ನಮಗೆ ಆಹಾರ ಕೊಡುತ್ತದೆ ಎಂದು ಮಾನವ ಸಮುದಾಯ ಅಂದುಕೊಂಡು ಬಿಟ್ಟಿದೆ. ವಿಜ್ಞಾನಿಗಳೂ ಕೂಡ ಕುರುಡಾಗಿ ಬಿಟ್ಟಿದ್ದಾರೆ ಅಥವಾ ದ್ರೋಹವೆಸಗುತ್ತಿದ್ದಾರೆ. ಹಾಗಾಗಿ ರೈತರ ಶ್ರಮ, ಸಾಲಾ ಸೋಲಾ ಹಾಗೂ ಸರ್ಕಾರಗಳ ಕೃಷಿ ಯೋಜನೆಗಳೆಲ್ಲಾ ಮಣ್ಣಿಗೆ ದುಡ್ಡು ಸುರಿಯುವುದರಲ್ಲಿಯೇ ಕೊನೆಗಾಣುತ್ತಿದೆ. ಭೂಮಿ, ಭೂಮಿತಾಯಿ, ನಮಗೆ ಆಹಾರ ಕೊಡುತ್ತಾಳೆ ಎಂಬ ನಂಬಿಕೆಯಿಂದಾಗಿಯೇ ಭೂಮಿಗೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಇತ್ಯಾದಿ ಇತ್ಯಾದಿ ಸುರಿದೂ ಸುರಿದೂ ರೈತರನ್ನು ಮಾತ್ರವಲ್ಲ ವ್ಯವಸಾಯವನ್ನೇ ನೇಣಿಗೆ ಹಾಕಿಬಿಟ್ಟಂತಾಗಿದೆ, ರೈತ, ಭೂಮಿಯನ್ನೂ ಸುಟ್ಟು ತನ್ನನ್ನೂ ಸುಟ್ಟುಕೊಂಡು ಬೂದಿಯಾಗುತ್ತಿದ್ದಾನೆ.

ಸಸ್ಯ ಸಂಕುಲವು ನೀಡುವ ಆಹಾರ ಎಲ್ಲೆಲ್ಲಿಂದ ಎಷ್ಟೆಷ್ಟು ಸೇರಿ ಹೇಗೆ ಕೂಡಿ ಆಗುತ್ತದೆ ಎಂಬ ತಿಳಿವಳಿಕೆ ಮಾತ್ರ ರೈತರನ್ನು, ವ್ಯವಸಾಯವನ್ನು ಕಾಪಾಡಬಲ್ಲುದು. ಸಸ್ಯ ಸಂಕುಲದ ಆಹಾರ ನಿರ್ಮಾಣಕ್ಕೆ ಭೂಮಿ ನೆಲೆ ಮಾತ್ರ, ಇದರ ಕೊಡುಗೆ ಹೆಚ್ಚೆಂದರೆ ಶೇಕಡ ೨ ರಷ್ಟು ಮಾತ್ರವೇ. ಉಳಿದುದೆಲ್ಲಾ ವಾತಾವರಣದ ನೀರು, ಸೂರ್‍ಯ ಬೆಳಕಿನ ಕೊಡುಗೆ. ಆದರೆ ನಮ್ಮ ಇಂದಿನ ವ್ಯವಸಾಯ ಪದ್ಧತಿಯಲ್ಲಿ ಶೇಕಡ ೨ ರಷ್ಟು ಭೂಮಿಯ ಕೊಡುಗೆಗೆ ಶೇಕಡ ೯೮ರಷ್ಟನ್ನು ವೆಚ್ಚ ಮಾಡುತ್ತಿದ್ದೇವೆ. ವಾತವರಣದ ಕೊಡುಗೆ ಶೇಕಡ ೯೮ರಷ್ಟಕ್ಕೆ ಶೇಕಡ೨ರಷ್ಟು ಮಾತ್ರ ಗಮನ ಕೊಡುತ್ತಿದ್ದೇವೆ.

ಈಗ ಮಾಡಬೇಕಿರುವುದು ಇಷ್ಟೆ : ನಮ್ಮ ವ್ಯವಸಾಯ ಪದ್ಧತಿಯನ್ನು ಉಲ್ಟಾಪಲ್ಟಾ ಮಾಡಬೇಕಾಗಿದೆ. ಅಂದರೆ ಭೂಮಿ, ಮಣ್ಣುಗಳು ಆಹಾರೋತ್ಪಾದನೆಯಲ್ಲಿ ನೆಲೆ ಮಾತ್ರ ಎಂದು ಅರಿತು ಶೇಕಡಾ ೯೮ರಷ್ಟು ಆಹಾರೋತ್ಪಾದನೆಗೆ ಕಾರಣವಾಗುವ ವಾತಾವರಣಕ್ಕೆ, ಪರಿಸರಕ್ಕೆ ಹೆಚ್ಚು ಗಮನ ಕೊಡಬೇಕಾಗಿದೆ. ಸೂಕ್ತ ಬೆಳೆಗಳ ಆಯ್ಕೆ, ಆ ಬೆಳೆಗಳ ಪರಸ್ಪರ ಪೂರಕ ಜೀವನ ಅರಿತುಕೊಂಡು ವಿವಿಧ ಬೆಳೆಗಳನ್ನು ಆಯೋಜಿಸಿ ಜೊತೆಗೆ ಮಣ್ಣಲ್ಲಿ ಹ್ಯೂಮಸ್ ಉಂಟಾಗುವಂತೆ ಹಾಗೂ ಗಿಡಗಳ ಅಗತ್ಯಕ್ಕೆ ತಕ್ಕಂತೆ ಬೆಳಕು ಸಿಗುವಂತೆ ವಾತಾವರಣ ಉಂಟುಮಾಡಿ ಇಡೀ ಕೃಷಿಗೆ ಜೀವ ಕೊಡಬೇಕಾಗಿದೆ. ಇದಿಷ್ಟು ಮಾಡಿದರೆ ಸಾಕು ಅದು ಬೆಳಕಿನ ಬೇಸಾಯವಾಗುತ್ತದೆ. ಆಗ ನಾವು ಹೊರಗಡೆಯಿಂದ ಭೂಮಿಗೆ ಸುರಿಯುವ ಗೊಬ್ಬರ, ಗೋಡು, ಔಷದ, ಮಣ್ಣು ಮಸಿ ಇತ್ಯಾದಿ ಇತ್ಯಾದಿ ಅನಗತ್ಯವಾಗಿಬಿಡುತ್ತವೆ. ಯಾಕೆಂದರೆ, ಈ ಪರಿಸರ ವಾತಾವರಣದ ಬೆಳಕಿನ ಬೇಸಾಯದಲ್ಲಿ ಆ ಮಣ್ಣೇ ಜೀವಂತವಾಗಿ ಫಲವತ್ತಾಗುತ್ತದೆ. ಆಗ ಸಸ್ಯ ಸಂಕುಲ ಆರೋಗ್ಯಕರವಾದ ಸಹಜವಾದ ಫಲ ನೀಡುತ್ತದೆ.

ಇದನ್ನು ನಾನು ಬನ್ನೂರು ಕೃಷ್ಣಪ್ಪನವರ ತೋಟದಲ್ಲಿ ನನ್ನ ಕಣ್ಣಾರೆ ಕಂಡೆ. ಆ ತೋಟದ ನಡುವೆ ಅಲ್ಲಲ್ಲಿ ಇರುವ ದಾಳಿಂಬೆ, ಕಿತ್ತಳೆ, ಮೊಸಂಬಿ ಬೆಳೆಗಳಿಂದಲೇ ಒಂದು ರೈತ ಕುಟುಂಬ ಬದುಕಿ ಬಿಡಬಹುದೆನಿಸುತ್ತದೆ. ಇದನ್ನೇ ವ್ಯಾಪಕವಾಗಿ ಮಾಡಿದರೆ ಭಾರತವೂ ಬದುಕಿಬಿಡುತ್ತದೆ ಅನ್ನಿಸಿತು !

ಈ ಬೆಳಕಿನ ಬೇಸಾಯದತ್ತ ಗೆಳೆಯ ಅಂಶಿ ಪ್ರಸನ್ನಕುಮಾರ್ ಅವರ ’ಅನ್ನದಾತನ ಆತ್ಮಕತೆ’ ಪುಸ್ತಕ ಮೊದಲ ಹೆಜ್ಜೆ ಇಡುತ್ತದೆ. ಆ ಕಡೆ ಗಮನ ಸೆಳೆಯುತ್ತದೆ. ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತದೆ. ಆದರೆ ನೆನಪಿಡಬೇಕು : ಪರಸ್ಪರ ಸಹಕಾರಿ ಸಸ್ಯಗಳ ವಿವಿಧ ಗಿಡ ಮರ ಬೆಳೆ ಆಯೋಜನೆ, ಭೂಮಿಯ ಮೇಲೆ ಹ್ಯೂಮಸ್ ಉಂಟಾಗಿಸುವ ಹೊದಿಕೆ, ಬೆಳಕಿನ ಸದ್ಬಳಕೆ ಹಾಗೂ ಪೂರಕವಾಗಿ ಜೀವಾಮೃತ-ಈ ಎಲ್ಲವೂ ಕೂಡಿದರೆ ಮಾತ್ರ ಸಂಪೂರ್ಣ ಫಲ ಕಾಣುತ್ತೇವೆ. ಇಂದು, ಅರೆಬರೆ ಹಾಗೂ ಸಾವಯವ ಎಲ್ಲಾ ಬೆರೆಕೆಯಾಗಿ ಚೌಚೌ ಆದುದೇ ನೈಸರ್ಗಿಕ ಕೃಷಿ ಅನ್ನಿಸಿಕೊಂಡುಬಿಟ್ಟಿದೆ! ಈಗಲಾದರೂ ವ್ಯವಸಾಯವೇ ಸುಸ್ತಾಗುತ್ತಿರುವ ಈ ಸಂದರ್ಭದಲ್ಲಿ ವಾತಾವರಣದ ಬೆಳಕಿನ ಬೇಸಾಯದ ಕಡೆಗೆ ನಾವು ಮುಂದಿನ ಹೆಜ್ಜೆಗಳನ್ನು ಇಡಬೇಕಾಗಿದೆ.

-ದೇವನೂರ ಮಹಾದೇವ