ಇಷ್ಟೊಂದು ತೆರಿಗೆ ವಿಧಿಸುವ ಅಗತ್ಯವಿದೆಯೇ?-ಪ್ರಸನ್ನ

ವಿಪರೀತ ತೆರಿಗೆ ವಿಧಿಸುವುದು, ವಿಪರೀತ ಖರ್ಚು ಮಾಡುವುದು, ವಿಪರೀತ ಖರ್ಚು ಮಾಡಿಸುವುದು, ಪ್ರಗತಿಪರ ನಿಲುವು ಎಂದು ತಿಳಿಯತೊಡಗಿವೆ ಸರ್ಕಾರಗಳು. ವಿಪರೀತ ತೆರಿಗೆ ವಿಧಿಸಲು ಮೊದಲು ಮಾಡಿದ್ದು ಬ್ರಿಟಿಷರು, ನಮ್ಮನ್ನು ಗುಲಾಮರನ್ನಾಗಿ ಮಾಡಿದವರು. ದೇಶೀಯ ರಾಜಸತ್ತೆಗಳು ಇಷ್ಟೊಂದು ತೆರಿಗೆ ವಿಧಿಸುತ್ತಿದ್ದಿಲ್ಲ.

ಮಾತ್ರವಲ್ಲ, ವಿಧಿಸಿದ ತೆರಿಗೆ ಹಣದಲ್ಲಿ ಹೆಚ್ಚಿನ ಭಾಗವನ್ನು ಸ್ಥಳೀಯ ಸಂಸ್ಥೆಗಳಿಗೆ, ಸ್ಥಳೀಯ ಖರ್ಚುಗಳಿಗೆಂದು ಬಿಟ್ಟು ಅಲ್ಪಪ್ರಮಾಣವನ್ನು ಮಾತ್ರವೇ ಕೇಂದ್ರೀಯ ಬೊಕ್ಕಸಕ್ಕೆ ಕೊಂಡೊಯ್ಯುತ್ತಿದ್ದವು. ಪಂಚಾಯಿತಿ ಮಟ್ಟದಲ್ಲಿ ನೀರಗಂಟಿ, ಪಟೇಲ, ಶ್ಯಾನುಭೋಗ ಇವರಿಗೆ, ಗೋಮಾಳಗಳು, ಕೆರೆಗಳು ಹಾಗೂ ಕಾವಲುಗಳ ನಿರ್ವಹಣೆಗೆ, ಧರ್ಮಛತ್ರ, ದೇವಸ್ಥಾನ ಹಾಗೂ ಮಸೀದಿಗಳ ನಿರ್ವಹಣೆಗೆ ಹೆಚ್ಚಿನ ಹಣವನ್ನು ಉಳಿಸಿ ಹೋಗುತ್ತಿದ್ದವು ಹಿಂದಿನ ರಾಜಸತ್ತೆಗಳು.

ಆಗೆಲ್ಲ ಕೈಗಾರಿಕೆಗಳಿರಲಿಲ್ಲ. ವಾಣಿಜ್ಯವೆಂಬುದು ಇಷ್ಟು ದೊಡ್ಡದಾಗಿ ಬೆಳೆದಿರಲಿಲ್ಲ. ಗ್ರಾಮೀಣ ಹಾಗೂ ಅರೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸಂತೆಗಳು ಹಾಗೂ ಸಣ್ಣಪುಟ್ಟ ‘ಅಂಗಡಿ’ ವ್ಯಾಪಾರಗಳನ್ನು ಹೆಚ್ಚೆಂದರೆ ಪಂಚಾಯಿತಿಗಳು ನಿಭಾಯಿಸುತ್ತಿದ್ದವು. ಈಗ ವಾಣಿಜ್ಯವೇ ಎಲ್ಲವೂ ಆಗಿದೆ. ವಾಣಿಜ್ಯಕ್ಕಾಗಿ ಎಲ್ಲ ದೇಶಗಳ ಎಲ್ಲ ಗಡಿಗಳನ್ನೂ ತೆರೆದಿಡಲಾಗಿದೆ. ವಾಣಿಜ್ಯ ಅಂತರರಾಷ್ಟ್ರೀಯವಾಗಿದೆ. ಶತ್ರುರಾಷ್ಟ್ರಗಳು, ಅತ್ತ ಯುದ್ಧ ಮಾಡುತ್ತಲೇ ಇತ್ತ ವ್ಯವಹಾರ ಮುಂದುವರೆಸಿಕೊಂಡು ಹೋಗಲು ಹೆಣಗುತ್ತವೆ. ವಾಣಿಜ್ಯವೇ ಸಮಾಜ, ಸಂಸ್ಕೃತಿ, ಭಾಷೆ, ನಡವಳಿಕೆ ಎಲ್ಲವನ್ನೂ ರೂಪಿಸುವ ಏಕೈಕ ಸಂಗತಿಯಾಗಿದೆ ಇಂದು. ವಾಣಿಜ್ಯ ಸಂಬಂಧಿ ತೆರಿಗೆಗಳು ಪೆಡಂಭೂತಗಳಾಗಿವೆ ಇಂದು.

ವಿಪರೀತ ತೆರಿಗೆ ವಿಧಿಸಲು ಹೊರಟೊಡನೆ ತೆರಿಗೆಯ ಭಾರವು ತೆರಿಗೆ ಕೊಡಲಾರದವರ ಮೇಲೆ ಬೀಳುತ್ತದೆ. ತೆರಿಗೆ ಕೊಡಲಾರದವರು ಕಳ್ಳರಂತೆ ಕಾಣತೊಡಗುತ್ತಾರೆ. ಗ್ರಾಮೀಣ ಉತ್ಪಾದಕರು, ಕೃಷಿಕರು, ಕೃಷಿಕೂಲಿಕಾರರು, ಸಣ್ಣವ್ಯಾಪಾರಿಗಳು, ತಳ್ಳುಗಾಡಿಗಳ ವ್ಯಾಪಾರಿಗಳು ಇತ್ಯಾದಿ ‘ಬಹುಸಂಖ್ಯಾತ’ ಜನವರ್ಗ ಕಳ್ಳರಂತೆ ಕಾಣತೊಡಗುತ್ತಾರೆ. ತೆರಿಗೆ ಕೊಡಬಲ್ಲ ಶ್ರೀಮಂತರು ಸತ್ತೆಯ ಸ್ನೇಹಿತರಂತೆ ಕಾಣತೊಡಗುತ್ತಾರೆ.

ಬ್ರಿಟಿಷರು ಬಡರೈತನ ಮೇಲೆ ಶೇಕಡ ಐವತ್ತರಷ್ಟು ತೆರಿಗೆ ವಿಧಿಸಿದ್ದರು. ನೇಕಾರನ ಮೇಲೆ ವಿಪರೀತ ತೆರಿಗೆ ವಿಧಿಸಿದ್ದರು. ರೈತ, ನೇಕಾರ, ಕುಶಲಕರ್ಮಿ ಇತ್ಯಾದಿ ಗ್ರಾಮೀಣ ಜನವರ್ಗವನ್ನು ತೆರಿಗೆಗಳ್ಳರಂತೆ ಕಂಡಿದ್ದರು. ಈಗ ಆಗಿರುವುದೂ ಇದೇ ಆಗಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಎಂಬ ಹೆಸರಿನ ವಾಣಿಜ್ಯ ತೆರಿಗೆ ವ್ಯವಸ್ಥೆಯು ತೆರಿಗೆ ಕೊಡಲಾರದ ಹಾಗೂ ಪಡೆಯಲಾಗದ ಅತಿಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಉದ್ಯಮಿಗಳನ್ನು ವಿನಾಶದ ಅಂಚಿಗೆ ತಳ್ಳಿವೆ.

ಬಡವ ಬಲ್ಲಿದ ಎಂಬ ವ್ಯತ್ಯಾಸವನ್ನೇ ನಗಣ್ಯವಾಗಿಸಿದೆ ಜಿಎಸ್‌ಟಿ. ಎಲ್ಲ ಸರಕುಗಳು ಹಾಗೂ ಎಲ್ಲ ಸೇವೆಗಳಿಗೆ ಸಮಾನ ತೆರಿಗೆ ವಿಧಿಸಿದೆ. ಸರಕಿನ ಉತ್ಪಾದಕ ಬಡವನಿರಲಿ ಶ್ರೀಮಂತನಿರಲಿ, ಸೇವೆಯ ಉತ್ಪಾದಕ ಬಡವನಿರಲಿ ಶ್ರೀಮಂತನಿರಲಿ, ತೆರಿಗೆ ವ್ಯವಸ್ಥೆಯಡಿ ಎಲ್ಲರೂ ಸಮ ಎಂದು ಹೆಮ್ಮೆಯಿಂದ ಸಾರಿದೆ ಈ ವ್ಯವಸ್ಥೆ.

ಜಿಎಸ್‌ಟಿ ಜಾಣತನ ಮಾಡಿದೆ. ಜಾಣ ಮಾತುಗಳ ಮೂಲಕ ತನ್ನ ಅನೈತಿಕತೆಯನ್ನು ಮುಚ್ಚಿಕೊಳ್ಳುತ್ತಿದೆ ಈ ವ್ಯವಸ್ಥೆ. ತೆರಿಗೆ ಕೊಡುವವನು ಹೇಗೂ ಗ್ರಾಹಕನಾದ್ದರಿಂದ ತೆರಿಗೆಯ ಭಾರವು ಉತ್ಪಾದಕನ ಮೇಲೆ ಬೀಳುವುದಿಲ್ಲ, ಹಾಗಾಗಿ ಉತ್ಪಾದಕರನ್ನು ಸಮನಾಗಿ ಕಾಣುವುದು ಪ್ರಗತಿಪರ ಎಂದು ಹೇಳಿದೆ. ಅತಿಸಣ್ಣ ಉತ್ಪಾದಕರು ಹಾಗೂ ವ್ಯಾಪಾರಿಗಳಿಗೆ, ‘ನಿಮಗೆ ಸಾಧ್ಯವಾಗದಿದ್ದರೆ ಜಿಎಸ್‌ಟಿ ವ್ಯವಸ್ಥೆಯಿಂದಲೇ ನೀವು ದೂರವಿರಿ’ ಎಂದಿದೆ. ಇದು ಜಾಣ ಮಾತು.

ಉದಾಹರಣೆಗೆ ಕೈಮಗ್ಗ ಬಟ್ಟೆಯನ್ನೇ ತೆಗೆದುಕೊಳ್ಳಿ. ಕೈಮಗ್ಗ ಬಟ್ಟೆ ಬಡವನ ಉತ್ಪಾದನೆ. ಕಡು ಬಡವರೂ ಗ್ರಾಮೀಣರೂ ಆದ ಲಕ್ಷಾಂತರ ಮಹಿಳೆಯರಿಗೆ ಅದು ನೂಲುವ ಕೆಲಸ ಒದಗಿಸುತ್ತದೆ. ಸಾವಿರಾರು ನೇಕಾರರು ಹಾಗೂ ನೂರಾರು ಬಣ್ಣಕಾರರಿಗೆ ಅವರಿರುವ ಗ್ರಾಮಗಳಲ್ಲಿಯೇ ಕೆಲಸ ಒದಗಿಸುತ್ತದೆ. ಇಂಗ್ಲಿಷರ ವಿರುದ್ಧದ ಹೋರಾಟದಲ್ಲಿ ನಾವು ಎತ್ತಿ ಹಿಡಿದ ಬಾವುಟ ಕೈಮಗ್ಗ ಬಟ್ಟೆ. ಸ್ವತಂತ್ರ ಭಾರತದ ಯಾವುದೇ ಸರ್ಕಾರವೂ ಖಾದಿ ಹಾಗೂ ಕೈಮಗ್ಗ ಬಟ್ಟೆಗೆ ತೆರಿಗೆ ವಿಧಿಸಿರಲಿಲ್ಲ. ಜಿಎಸ್‌ಟಿ ಈಗ ವಿಧಿಸಿದೆ. ಕೈಮಗ್ಗ ಬಟ್ಟೆಯನ್ನು ಕೇವಲ ಬಟ್ಟೆ ಎಂದು ಕಂಡಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಗಳ ಒಂದು ಪ್ರಾಥಮಿಕ ಜವಾಬ್ದಾರಿ, ಬಡವ– ಬಲ್ಲಿದರ ನಡುವಣ ಅಂತರವು ಅತಿಯಾಗದಂತೆ ನೋಡಿಕೊಳ್ಳುವುದು. ಆದಾಯದಲ್ಲಿ ಸಾಧ್ಯವಿದ್ದಷ್ಟು ಸಮಾನತೆ ತರುವುದು. ಆದರೆ ಈಗ ಮಾಡುತ್ತಿರುವಂತೆ ಸಮಾನತೆಯ ಆದರ್ಶವನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾರುಕಟ್ಟೆಯ ಸ್ಪರ್ಧಾತ್ಮಕತೆಯನ್ನು ಸಂಪೂರ್ಣವಾಗಿ ಮುಂದೊತ್ತುವುದು ಅನೈತಿಕತೆ ಹಾಗೂ ಅಸಭ್ಯತೆ.

ಸಮಸ್ಯೆ ಉದ್ಯಮಪತಿಗಳದ್ದು. ಅವರ ಜೇಬಿನಲ್ಲಿ ಹಣದ ಸಂಗ್ರಹ ಹೆಚ್ಚು. ಹಣದ ಚಲಾವಣೆ ಹೆಚ್ಚು. ಹಾಗಾಗಿ, ಪ್ರಜಾಪ್ರಭುತ್ವವೂ ಸೇರಿದಂತೆ ಎಲ್ಲ ರಾಜಕೀಯ ವ್ಯವಸ್ಥೆಗಳೂ ಉದ್ಯಮಗಳ ಹಣಸಂಗ್ರಹಣೆಯ ಮಿತಿಯನ್ನು ನಿಯಂತ್ರಿಸಬೇಕು. ಉದ್ಯಮಗಳನ್ನು ನಿಯಂತ್ರಿಸುವುದು ಸರ್ಕಾರಗಳ ಪ್ರಾಥಮಿಕ ಜವಾಬ್ದಾರಿಯಾಗಿದೆ.

1992ರಲ್ಲಿ, ಅತ್ತ ಬಾಬರಿ ಮಸೀದಿ ಬಿತ್ತು, ಇತ್ತ ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಉದ್ಯಮಗಳ ಮೇಲಿನ ನಿಯಂತ್ರಣಗಳು ಬಿದ್ದು ಹೋದವು. ಈ ಪ್ರಕ್ರಿಯೆಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಮೊದಲು ಮಾಡಿತು. ಈಗ, ಬಿಜೆಪಿ ನೇತೃತ್ವದ ಸರ್ಕಾರ ಸಾಕಷ್ಟು ಹುಮ್ಮಸ್ಸಿನಿಂದಲೇ ಈ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬರುತ್ತಿದೆ.

ನಿಜ. ಬಡವರ ಸ್ಥಿತಿಗತಿಯು ಈ ನಡುವೆ ಆರ್ಥಿಕವಾಗಿ ಕೊಂಚ ಸುಧಾರಿಸಿದೆ, ಬಡವರ ಬಳಿಯೂ ಪುಡಿಗಾಸು ಓಡಾಡತೊಡಗಿದೆ, ಮೊಬೈಲು ಓಡಾಡತೊಡಗಿದೆ, ಬಡವರೂ ಬೈಕು ಓಡಾಡಿಸತೊಡಗಿದ್ದಾರೆ. ಆದರೆ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅವರು ದಿವಾಳಿಯಾಗುತ್ತಿದ್ದಾರೆ.

ಬಡವ ತನ್ನ ಉತ್ಪಾದಕತೆಯನ್ನು ಕಳೆದುಕೊಂಡಿದ್ದಾನೆ. ಕೂಲಿ ಮಾಡಲಿಕ್ಕೆ, ಮಾರಾಟ ಮಾಡಲಿಕ್ಕಾಗಿ ನಗರಗಳಿಗೆ ಗುಳೆ ಎದ್ದಿದ್ದಾನೆ. ನೆಲೆ ಕಳೆದುಕೊಂಡಿದ್ದಾನೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ನಗರ ಪ್ರದೇಶಗಳ ಕೊಳಚೆಗೆ ಬಂದು ಸೇರುತ್ತಿದ್ದಾನೆ. ನಿಸರ್ಗದ ಸಿಹಿನೀರಿನಂತಿದ್ದವನು ರಾಸಾಯನಿಕ ಕೊಳಚೆ ನೀರಾಗಿ ಪರಿವರ್ತಿತನಾಗುತ್ತಿದ್ದಾನೆ. ಇದು ಒಳಿತೆಂದರೆ ಒಳಿತು, ಕೆಡುಕೆಂದರೆ ಕೆಡುಕು.

ಮತ್ತೊಂದು ಅನಾಹುತವನ್ನು ಇದೇ ದಶಕಗಳಲ್ಲಿ ನಾವು ಮೊದಲ ಬಾರಿಗೆ ಗಮನಿಸತೊಡಗಿದ್ದೇವೆ. ಪ್ರಕೃತಿ ಮುನಿಸಿಕೊಳ್ಳುವ ಅನಾಹುತ. ಪ್ರಕೃತಿಮಾತೆ, ಮಾನಸಿಕ ಕ್ಲೇಷಕ್ಕೆ ಸಿಲುಕಿಕೊಂಡ ಮುದಿ ಮಹಿಳೆಯಂತೆ, ಕೂದಲು ಕೆದರಿಕೊಂಡು, ಮೈಯ ಮೇಲಣ ಹಸಿರು ಬಟ್ಟೆ ಹರಿದುಕೊಂಡು, ಗಲೀಜಾಗಿ, ಹುಚ್ಚುಚ್ಚಾಗಿ, ಅಲೆಯತೊಡಗಿದ್ದಾಳೆ. ಯಾವಾಗಲೋ ಮಳೆ ಸುರಿಸುತ್ತಾಳೆ, ಯಾವಾಗಲೋ ಮರೆತು ಬಿಡುತ್ತಾಳೆ. ಇಲ್ಲವೇ ಸುರಿಸುತ್ತಲೇ ಉಳಿಯುತ್ತಾಳೆ, ಇಲ್ಲವೇ ಸುರಿಸುವುದನ್ನೇ ಮರೆತುಬಿಡುತ್ತಾಳೆ. ಮಾತೆಯ ಜ್ವರ ಮಕ್ಕಳ ಮೈಗೂ ಹರಡಿ ನಾವೆಲ್ಲರೂ ಬಿಸಿಲಿಗೆ ಸಿಕ್ಕು ಒದ್ದಾಡ ತೊಡಗಿದ್ದೇವೆ. ಪ್ರಕೃತಿಮಾತೆಯ ಹೊಟ್ಟೆಯ ವಿಷ ನಮ್ಮ ಹೊಟ್ಟೆಗೆ, ಅವಳ ಮನಸ್ಸಿನ ಕ್ಲೇಷ ನಮ್ಮ ಮನಸ್ಸಿಗೆ ಬಂದು ಸೇರಿದೆ. ಇದು ಇಂದಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂದರ್ಭ.

ಈ ಸಂದರ್ಭದಲ್ಲಿ ಜಿಎಸ್‌ಟಿ, ಬಡವನ ಬದುಕಿಗೆ ಬರೆ ಎಳೆದಿದೆ. ಬಡವನ ಬಳಿ ಹಣ ಕಡಿಮೆ ಇದ್ದರೇನಂತೆ ಅವನೂ ಉಣ್ಣಬೇಕು ತಾನೇ? ಅವನೂ ಉಡಬೇಕು ತಾನೇ? ಸಾವಿರಪಟ್ಟು ಶ್ರೀಮಂತಿಕೆ ಇದ್ದರೇನಂತೆ ಶ್ರೀಮಂತನೂ ಒಂದೇ ಊಟ ಉಣಬೇಕು ತಾನೇ? ಒಂದೇ ಬಟ್ಟೆ ತೊಡಬೇಕು ತಾನೇ? ಬಡವನ ಉತ್ಪಾದನೆಯ ಮೂಲಕ್ಕೆ ಕೊಡಲಿ ಪೆಟ್ಟು ಇಟ್ಟಿದೆ ಜಿಎಸ್‌ಟಿ.

ಬಡವರ ಉತ್ಪನ್ನಗಳು ಕೈಉತ್ಪನ್ನಗಳು. ಅವು ಸಹಜ ಉತ್ಪನ್ನಗಳು. ಆದ್ದರಿಂದ ದುಬಾರಿ ಉತ್ಪನ್ನಗಳು. ಉದಾಹರಣೆಗೆ ಖಾದಿ ಸೀರೆ, ಸೂರತ್ತಿನ ಸಿಂಥೆಟಿಕ್ ಸೀರೆಗಳಿಗಿಂತ ದುಬಾರಿ. ದುಬಾರಿ ಏಕೆಂದರೆ ಖಾದಿ ಸೀರೆಯನ್ನು ನಿಜವಾದ ಕೈಗಳಿಂದ, ನಿಜವಾದ ಹತ್ತಿಯಿಂದ, ನಿಜವಾದ ನೂಲು ತೆಗೆದು, ನಿಜವಾದ ಮಗ್ಗಗಳಲ್ಲಿ ಹಾಕಿ, ನಿಜವಾದ ಸೀರೆಯಾಗಿ ನೇಯಲಾಗುತ್ತದೆ. ಹೀಗೆ ಮಾಡಲಿಕ್ಕೆ ಶ್ರಮ ಹಿಡಿಯುತ್ತದೆ. ಹಾಗಾಗಿ ಯಂತ್ರನಾಗರಿಕತೆಯೊಳಗೆ ಶ್ರಮದ ಉತ್ಪನ್ನಗಳು ದುಬಾರಿ.

ಜಿಎಸ್‌ಟಿ ನಂತರದಲ್ಲಿ ಶ್ರಮದ ಉತ್ಪನ್ನಗಳು ಮತ್ತಷ್ಟು ದುಬಾರಿಯಾಗಲಿವೆ, ಮತ್ತಷ್ಟು ಮಾರುಕಟ್ಟೆ ಕಳೆದುಕೊಳ್ಳಲಿವೆ. ನೇಕಾರರು, ಈಗಾಗಲೇ ಅರ್ಧ ಊಟ ಮಾಡುತ್ತಿರುವವರು ಇನ್ನು ಮುಂದೆ ಕಾಲು ಊಟ ಮಾಡಬೇಕಾಗುತ್ತದೆ. ನೇಕಾರನ ಹೆಂಡತಿ, ಈಗಾಗಲೇ ಬತ್ತಲಾಗಿರುವವಳು, ಇನ್ನು ಮುಂದೆ ಚರ್ಮವನ್ನೇ ಹರಿದುಕೊಂಡು ಮಾನ ಮುಚ್ಚಿಕೊಳ್ಳಬೇಕಾಗುತ್ತದೆ.

ಕೈಉತ್ಪನ್ನಗಳನ್ನು ಕರಮುಕ್ತಗೊಳಿಸಿ ಎಂಬ ಕರನಿರಾಕರಣೆ ಸತ್ಯಾಗ್ರಹವೊಂದು ಆರಂಭವಾಗಿದೆ. ಕರವನ್ನು ಕೊಡದೆ, ಕರವನ್ನು ಪಡೆಯದೆ ಪ್ರತಿಭಟನೆಯ ರೂಪದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕೈಉತ್ಪನ್ನಗಳನ್ನು ಮಾರುತ್ತಿದ್ದಾರೆ ಸತ್ಯಾಗ್ರಹಿಗಳು. ಸರ್ಕಾರಗಳು ನಮ್ಮನ್ನು ಬಂಧಿಸುವುದಾದರೆ ಸಂತೋಷ, ಜಿಎಸ್‌ಟಿಯನ್ನು ಬಂಧಿಸುವುದಾದರೆ ಮತ್ತೂ ಸಂತೋಷ ಎನ್ನುತ್ತಿದ್ದಾರೆ ಸತ್ಯಾಗ್ರಹಿಗಳು.

ಅನೇಕರು ತಪ್ಪಾಗಿ ತಿಳಿದಿರುವಂತೆ ಕೈಉತ್ಪನ್ನಗಳೆಂದರೆ ಕೈಮಗ್ಗ ಮಾತ್ರವೇ ಅಲ್ಲ. ಕೃಷಿ ಉತ್ಪನ್ನವೂ ಕೈಉತ್ಪನ್ನವಾಗಬಲ್ಲದು, ಆಗಬೇಕು. ರೈತರ ಸಹಕಾರ ಸಂಘಗಳ ಮೂಲಕ ಫೆಡರೇಷನ್‌ಗಳ ಮೂಲಕ ಮಾರಾಟವಾಗುವ ಆಹಾರ ಪದಾರ್ಥಗಳೂ ಶೂನ್ಯಕರದ ಸವಲತ್ತನ್ನು ಅನುಭವಿಸಬೇಕು. ರೈತರೂ ಗ್ರಾಮೀಣ ಉತ್ಪಾದಕರೇ ಸರಿ. ಮೂಲತಃ, ಗ್ರಾಹಕರು ನಡೆಸುತ್ತಿರುವ ಚಳವಳಿಯಿದು. ಗ್ರಾಮೀಣ ಉತ್ಪಾದಕರ ಪರವಾಗಿ, ಮುನಿದು ಹುಚ್ಚಾಗಿರುವ ಪ್ರಕೃತಿ ಮಾತೆಯ ಪರವಾಗಿ, ಗ್ರಾಹಕರು ನಡೆಸುತ್ತಿರುವ ಚಳವಳಿಯಿದು.