ಆಹಾರ, ಉಡುಪು ಮತ್ತು ಭೂತಗಳು

[ಮಂಗಳೂರಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಫೆಬ್ರವರಿ 23, 2014ರಂದು ಸಮದರ್ಶಿ ವೇದಿಕೆ, ಹೊಸತು ಪತ್ರಿಕೆ ಹಾಗೂ ವಿವಿ ಕಾಲೇಜಿನ ಕನ್ನಡ ಸಂಘಗಳ ಆಶ್ರಯದಲ್ಲಿ ನಡೆದ ”ಆಹಾರ ಪರಂಪರೆ, ಆರೋಗ್ಯ -ಸಂವಾದ” ಕಾರ್ಯಕ್ರಮದಲ್ಲಿ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ]

ಮನುಷ್ಯರು ಇಂದು ಹೆಚ್ಚೆಚ್ಚು ಜ್ಞಾನಿಗಳಾಗುತ್ತಿದ್ದಾರೆ ಎಂದು ಅಂದುಕೊಂಡಿರುವ ಈ ಕಾಲಮಾನದಲ್ಲೂ – ನಾವು ಸೇವಿಸುವ ಆಹಾರ ಅಥವಾ ಧರಿಸುವ ಉಡುಪು ಆಯಾಯ ಸ್ಥಳಕ್ಕೆ ಅನುಗುಣ ಎಂದು ಉದಾಹರಣೆ ಕೊಟ್ಟು ಮನದಟ್ಟು ಮಾಡಬೇಕಾದ ದಯನೀಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇರಲಿ, ಈಗ ನಾನೂ ಕೂಡ ಉದಾಹರಣೆಗಳ ಮೂಲಕವೇ ಹೇಳುವೆ : ಬೆಂಗಳೂರು ದೂರದರ್ಶನದಲ್ಲಿದ್ದ ಕನ್ನಡಿಗ ಎನ್.ಕೆ. ಮೋಹನ್‌ರಾಂರನ್ನು ದೂರದ ಈಶಾನ್ಯ ರಾಜ್ಯದ ಷಿಲ್ಲಾಂಗ್ ಕೇಂದ್ರಕ್ಕೆ ಸಹಾಯಕ ನಿರ್ದೇಶಕರನ್ನಾಗಿಸಿ ಎತ್ತಂಗಡಿ ಮಾಡಲಾಗುತ್ತದೆ. ಆ ದೂರದರ್ಶನ ಕೆಂದ್ರದ ನಿರ್ದೇಶಕರು ಸ್ಥಳೀಕರು, ಅಸ್ಸಾಂನವರು. ಅವರೊಂದು ಸಲ ರಜಾ ಹಾಕಿ ಹೋದಾಗ ಈ ನಮ್ಮ ಮೋಹನ್‌ರಾಂ ಪ್ರಭಾರ ನಿರ್ದೇಶಕರಾಗಿ ಕಾರ್‍ಯನಿರ್ವಹಿಸಬೇಕಾಗಿ ಬರುತ್ತದೆ. ಅವರು ನಿರ್ದೇಶಕರ ಕುರ್ಚಿ ಮೇಲೆ ಪ್ರಶಾಂತವಾಗಿ ಕೂತಿರುವಾಗ ಧುತ್ತನೆ ಎರಡು ಉದ್ದುದ್ದ ಹಾವುಗಳು ಅವರ ಮುಂದೆ ಪ್ರತ್ಯಕ್ಷವಾಗಿ ತಲೆಯಾಡಿಸತೊಡಗುತ್ತವೆ. ಬೆದರಿದ ಮೋಹನ್‌ರಾಂ ಒಂದೇ ಉಸಿರಿಗೆ ಹಾವಾಡಿಗರನ್ನು ಕರೆಸಿ ಆ ಹಾವುಗಳನ್ನು ಹಿಡಿಸಿ, ಹಿಡಿದವರಿಗೆ ಕೈತುಂಬಾ ದುಡ್ಡು ಕೊಟ್ಟು ’ಕಾಡಿಗೆ ಬಿಟ್ಟುಬಿಡಿ’ ಎಂದು ಇಂಗ್ಲಿಷ್ ಕನ್ನಡ ತಿಳಿಯದ ಅವರೊಡನೆ ಹಾವಭಾವಗಳ ಮೂಲಕ ಮಾತಾಡಿ ಕಳಿಸಿಕೊಟ್ಟು ಕಣ್ಣು ಮುಚ್ಚದೆ ಉಸಿರಾಡತೊಡಗುತ್ತಾರೆ. ಆದರೆ ಈ ಉಸಿರಾಟದ ಗತಿ ನಾಳೆಗೆ ಏರುಪೇರಾಗುವ ಸ್ಥಿತಿ ಕಾದಿರುತ್ತದೆ. ಯಾಕೆಂದರೆ ಮೋಹನ್‌ರಾಂ ಹಾವು ಹಿಡಿಸಿದ ಸುದ್ದಿ ನಿರ್ದೇಶಕರ ಕಿವಿ ಕಚ್ಚಿರುತ್ತದೆ. ಆ ನಿರ್ದೇಶಕರು ಆಫೀಸಿಗೆ ಬಂದು ಮೊದಲು ಮಾಡಿದ ಡ್ಯೂಟಿ ಈ ಕರ್ನಾಟಕಿ ಮೋಹನ್‌ರಾಂರನ್ನು ಕರೆಸಿ ರೇಗಾಡುತ್ತ ಕೇಳಿದ ಪ್ರಶ್ನೆ : ಏನ್ರೀ ನೀವು? ನಾನು ಎಷ್ಟೊಂದು ದಿನಗಳಿಂದ ಆ ಹಾವುಗಳನ್ನು ನೋಡ್ತಾ ಇದ್ದೆ. ಆ ಎರಡನ್ನೂ ನೀವೇ ತಿಂದುಬಿಟ್ರಾ? ಮೋಹನ್‌ರಾಂಗೆ ಆಘಾತವಾಗುತ್ತದೆ. ಅಲ್ಲಿ ಹಾವೂ ಆಹಾರ, ಮೀನಿನ ಥರವೆ.

ಇನ್ನು ಉಡುಪುಗೆ ಬಂದರೆ – ಕಲ್ಪಿಸಿಕೊಳ್ಳೋಣ : ಇಬ್ಬರು ಭಾರತೀಯ ಸಂಪ್ರದಾಯಸ್ಥರು ಮರಳು ಬಿರುಗಾಳಿಯು ಬೀಸುವ ಅರಬ್ ರಾಷ್ಟ್ರಕ್ಕೆ ಹೋಗಿರುತ್ತಾರೆ. ಅವರು ಎಷ್ಟು ಕಟ್ಟಾ ಸಂಪ್ರದಾಯಸ್ಥರೆಂದರೆ ಸೀರೆ ಪಂಚೆ ಮಾತ್ರ ಧರಿಸಿದ್ದು ಒಳ ಉಡುಪನ್ನು ಬಳಸದ ಕಟ್ಟಾ ಸಂಪ್ರದಾಯಸ್ಥರು. ಅಲ್ಲಿ ಬೀಸುವ ಬಿರುಗಾಳಿ, ರಾಚುವ ಮರಳಿನ ಹೊಡೆತಕ್ಕೆ ಅವರು ಧರಿಸಿದ್ದ ಸೀರೆಪಂಚೆಗಳ ಗತಿ ಏನು? ಯಾವ ತಪಸ್ಸೂ ಮಾಡದೆ ದಿಗಂಬರತ್ವ ಪ್ರಾಪ್ತಿರಸ್ತು ಆಗುತ್ತದೆ.

ಯಾವುದೇ ಯಾರದೇ ಆಹಾರ ಹಾಗೂ ಉಡುಪು ಆ ಮಣ್ಣಿನ ಗಾಳಿ ನೀರು ಬಿಸಿಲು ಚಳಿ ವಾತಾವರಣಗಳ ಒಳಗಿಂದ ಸಹಜವಾಗಿ ಹುಟ್ಟಿದ ವಿವೇಚನೆ ವಿವೇಕದ ಫಲ. ಧರ್ಮ ಕಾರಣ ಎಂದು ಬುರ್ಖಾವನ್ನು ಇಲ್ಲೂ ಧರಿಸುತ್ತಿದ್ದೇವೆ. ಬಿರುಬೇಸಿಗೆಯಲ್ಲೂ ಗುಲಾಮಗಿರಿಯ ಕೋಟುಬೂಟು ಹಾಕುತ್ತಿದ್ದೇವೆ. ನಾವಿಂದು ನಮ್ಮ ವಿವೇಕ ವಿವೇಚನೆಗಳನ್ನು ಸಾಯಿಸಿಕೊಂಡಿದ್ದೇವೆ. ಆಹಾರ ಉಡುಪಿಗೆ ಧರ್ಮ ಜಾತಿಯ ದ್ವೇಷದ ಮೇಲುಕೀಳು ಸೋಂಕು ಅಂಟಿಸಿ ಸಾಯಿಸುತ್ತಿದ್ದೇವೆ.

ನನಗೆ ಮರೆಯಲಾಗುತ್ತಿಲ್ಲ. ಹರಿಯಾಣದ ಜಜ್ಜರ್ ಅನ್ನೋ ಊರಿನಲ್ಲಿ ಗೋಮಾಂಸ ಸೇವನೆ ಮಾಡಿದ ಕಾರಣಕ್ಕೆ ಎಂಟು ಜನ ದಲಿತರನ್ನು ಕೊಂದು ಹಾಕಿಬಿಟ್ಟರು. ವೇದ ಉಪನಿಷತ್ ಋಷಿಗಳ ಗೋಮಾಂಸ ಸೇವನೆಯ ಪರಂಪರೆಯನ್ನೇ ಕೊಂದುಬಿಟ್ಟಿದ್ದರ ಪರಿಣಾಮ ಇದು. ಕೊಂದವರು ಗೋರಕ್ಷಣಾ ಮಂಚ್ ಎಂಬ ಸಂಘಟನೆಗೆ ಸೇರಿದವರು. ವಿಶ್ವ ಹಿಂದು ಪರಿಷತ್ ಬೆಂಬಲಿತ ಸಂಘಟನೆ ಇದು. ನಾನು ಅಂದೇ ಘೋಷಣೆ ಮಾಡಿದೆ – ಇಂದಿನಿಂದ ನಾನು ಗೋಮಾಂಸ ಮಾತ್ರ ಸೇವನೆ ಮಾಡುತ್ತೇನೆ ಎಂದು. ಆದರೆ ವಚನಭ್ರಷ್ಟನಾದೆ. ಗೋಮಾಂಸವನ್ನೇನೊ ಸೇವಿಸಿದೆ. ಆದರೆ ಮೀನು ವಗೈರೆ ಬಿಡಲಿಲ್ಲ!

ನನಗೆ ಅರ್ಥವಾಗದೆ ಇರುವುದು ಇದು – ಬಂಗಾಳಿ ಬ್ರಾಹ್ಮಣರಾದ ಭಟ್ಟಾಚಾರ್‍ಯ ಎಂಬ ಪಂಗಡದ ಹೆಸರನ್ನು ನೀವು ಕೇಳಿರಬಹುದು. ಬ್ರಾಹ್ಮಣರಲ್ಲೆ ಇವರು ಎಒನ್ ಬ್ರಾಹ್ಮಣರಂತೆ. ಈ ಪಂಗಡಕ್ಕೆ ಸೇರಿದ ಹುಡುಗಿಯನ್ನು ಗೆಳೆಯ ಸತ್ಯನಾರಾಯಣ ಮಲ್ಲಿಪಟ್ಟಣರ ಮಗ ಮದುವೆಯಾಗುತ್ತಾರೆ. ಆ ಎಒನ್ ಬ್ರಾಹ್ಮಣರಾದ ಭಟ್ಟಾಚಾರ್‍ಯ ಪಂಗಡದ ಸಂಪ್ರದಾಯದಂತೆ, ಮುಂದೆ ಅಳಿಯನಾಗಬೇಕಾದವನು ಮದುವೆಗೆ ಮುನ್ನ ವಧುವಿನ ಮನೆಗೆ ಮೀನು ತೆಗೆದುಕೊಂಡು ಹೋಗಬೇಕಂತೆ. ಅದನ್ನು ಆ ಎಒನ್ ಬ್ರಾಹ್ಮಣರಾದ ಭಟ್ಟಾಚಾರ್‍ಯ ಕುಟುಂಬ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ ಆ ಪ್ರಸಾದವನ್ನು ಕುಟುಂಬದ ಎಲ್ಲರೂ ಸೇವಿಸುತ್ತಾರಂತೆ. ನನಗೆ ಅರ್ಥವಾಗದೇ ಇರುವುದು ಇದಲ್ಲ. ಬ್ರಾಹ್ಮಣರು ಮತ್ತೆ ಮೀನುಮಾಂಸವನ್ನು ತಮ್ಮ ಆಹಾರ ಮಾಡಿಕೊಂಡರೆ ಅದಕ್ಕೆ ಲುಕ್ಸನಾಯ್ತು ಅಂತ ನಾನೇನು ಕೊರಗುವುದಿಲ್ಲ. ಇಲ್ಲಿರುವ ಪ್ರಶ್ನೆ – ಇಲ್ಲಿ ಬ್ರಾಹ್ಮಣರು ಮೀನು ತಿಂದರೆ ಅದು ಸಸ್ಯಾಹಾರ ಎನ್ನಿಸಿಕೊಂಡು ಅದನ್ನೇ ಬೇರೆಯವರು ಸೇವಿಸಿದರೆ ಮಾಂಸಾಹಾರ ಆಗಿಬಿಡುವುದರ ಮರ್ಮ ಏನು? ಅರ್ಥವಾಗುತ್ತಿಲ್ಲ. ಬೆಂಗಾಳಿ ಬ್ರಾಹ್ಮಣರ ಮೀನು ಸೇವನೆ ಸಂಪ್ರದಾಯ ಸಾಂಸ್ಕೃತಿಕ ಅನ್ನಿಸಿಕೊಳ್ಳುತ್ತ ಗೌರವಿಸಿಕೊಳ್ಳುತ್ತದೆ. ಅದೇ ಜಜ್ಜರ್ ದಲಿತರ ಗೋಮಾಂಸ ಸೇವನೆ ಸಂಪ್ರದಾಯ ವಿರೋಧಿ, ಸಂಸ್ಕೃತಿಹೀನ ಎನ್ನಿಸಿಕೊಂಡು ಕೊಲ್ಲಿಸಿಕೊಳ್ಳುತ್ತದೆ.

ಈ ವಿಷಮ ಪರಿಸ್ಥಿತಿಯಲ್ಲಿ ನನಗೆ ಸಂವೇದನಾಶೀಲ ಜೀವ, ಮನುಷ್ಯನೊಬ್ಬ ಏರಬಹುದಾದ ಎತ್ತರ ಏರಿದಾತ ರಾಮಕೃಷ್ಣ ಪರಮಹಂಸ ನೆನಪಾಗುತ್ತಾರೆ. ಪರಮಹಂಸರು ಮಹಾಆತ್ಮಗಳನ್ನು ಆವಾಹಿಸಿಕೊಳ್ಳುತ್ತಿದ್ದರಂತೆ. ಆದರೆ ಪ್ರವಾದಿ ಮಹಮ್ಮದ್‌ರ ಆತ್ಮವನ್ನು ಆವಾಹಿಸಿಕೊಳ್ಳಲು ಧ್ಯಾನಸ್ಥರಾದಾಗ ಎಷ್ಟೇ ಪ್ರಯತ್ನಿಸಿದರೂ ಪರಮಹಂಸರೊಡನೆ ಪ್ರವಾದಿ ಆತ್ಮ ಒಳಗೊಳ್ಳುತ್ತಿರಲಿಲ್ಲವಂತೆ, ಬಂದು ದೂರದಲ್ಲೇ ನಿಂತು ಬಿಡುತ್ತಿತ್ತಂತೆ. ಆಗ ಪರಮಹಂಸರಿಗೆ ತಾನು ಗೋಮಾಂಸ ಸೇವಿಸದ ಕಾರಣಕ್ಕಾಗಿ ಪ್ರವಾದಿಗಳ ಆತ್ಮ ತನ್ನೊಳಗೊಳ್ಳುತ್ತಿಲ್ಲ ಎಂದು ಅರಿವಾಗಿ ಗೋಮಾಂಸ ತಿಂದರಂತೆ. ಅದೇನೆ ಇರಲಿ, ಮನುಷ್ಯರಾಗಿ ಹುಟ್ಟಿದ ನಾವು ಮನುಷ್ಯರಾಗಿ ಜೀವಿಸಲು ನಮ್ಮೊಳಗೂ ಹೀಗೆ ಒಳಗೊಳ್ಳುವಿಕೆಯ ಸಂಸ್ಕಾರವೇ ಸಂಸ್ಕೃತಿಯಾಗಿ ಬೆಳಕಾಗಬೇಕಾಗಿದೆ.

ಇದಾಗುತ್ತಿಲ್ಲ. ಹಿಟ್ಲರ್ ಒಬ್ಬ ಸಸ್ಯಹಾರಿ. ಪ್ರಾಣಿಗಳ ಬಗ್ಗೆ ಅವನ ದಯೆ ಅಪಾರ. ಪ್ರಾಣಿಗಳ ಸಂರಕ್ಷಣೆಗಾಗಿಯೇ ವಿಶೇಷ ವಸತಿಗೃಹ ಕಟ್ಟಿಸಿದ್ದಾತ. ಆದರೆ ಆತ ಲಕ್ಷಲಕ್ಷ ಮನುಷ್ಯರನ್ನು ಗ್ಯಾಸ್ ಛೇಂಬರಿನಲ್ಲಿ ಬೇಯಿಸಿ, ಆ ಬೇಯಿಸಿದ ಹೊಗೆಯನ್ನು ಉಸಿರಾಡಿ ಉಂಡಾತ. ಧರ್ಮವೋ, ಜಾತಿಯೋ, ಜನಾಂಗವೊ ದ್ವೇಷದ ಕಿಚ್ಚಿಗೆ ಸಿಕ್ಕಿದರೆ ಇದಾಗುತ್ತದೆ.

ಒಟ್ಟಿನಲ್ಲಿ ಇಂದು ಆಹಾರ ಉಡುಪುಗಳು ಆಹಾರ ಉಡುಪುಗಳಾಗಿ ಉಳಿದಿಲ್ಲ. ಆಹಾರ ಕೂಡ ಧರ್ಮ, ಜಾತಿ, ಜನಾಂಗಗಳ ಅಸಹನೆ, ದ್ವೇಷಕ್ಕೆ ತುತ್ತಾಗಿ ತತ್ತರಿಸುತ್ತಿವೆ. ಈ ಧರ್ಮ, ಜಾತಿ ಜನಾಂಗಗಳು ತಮ್ಮ ದ್ವೇಷಕ್ಕೆ ತಾವು ತಂತಮ್ಮ ಮನೆ ಒಳಗೆ ಇದ್ದರೆ ಹೇಗೋ ನಡೆದುಕೊಂಡು ಹೋಗುತ್ತದೆ. ಯಾವಾಗ ಧರ್ಮಗಳ ಮೂಲಭೂತಗಳು, ಜಾತಿಗಳ ಮರಿಪಿಶಾಚಿಗಳು ಉಲ್ಬಣಗೊಂಡು ಬೀದಿಗೆ ಬೀಳುತ್ತವೋ ಆಗ ಅವು ಮನುಷ್ಯರನ್ನೇ ಆಹಾರ ಮಾಡಿಕೊಳ್ಳುತ್ತವೆ :ಸಮಾಧಿಗಳನ್ನು ಹೆಚ್ಚಿಸುತ್ತವೆ. ಯಾರದೇ ಯಾವುದೇ ಜನಾಂಗ, ಧರ್ಮ ಜಾತಿ ಸಿದ್ಧಾಂತಗಳ ಮೂಲಭೂತವಾದ ಇದಕ್ಕೆ ಹೊರತಲ್ಲ. ಅದಕ್ಕೇ ಒಂದು ಸಭೆಯಲ್ಲಿ ’ಆರ್‌ಎಸ್‌ಎಸ್ ಎಂದರೆ ಹಿಂದೂ ಜಮಾತೆ ಇಸ್ಲಾಂ. ಹಾಗೆ ಜಮಾತೆ ಇಸ್ಲಾಂ ಎಂದರೆ ಮುಸ್ಲಿಂ ಆರ್‌ಎಸ್‌ಎಸ್’ ಎಂದೆ. ಇಂಥವುಗಳು ಸಯಾಮಿ ಅವಳಿಗಳು. ಪ್ರೀತಿಯಿಲ್ಲದಿದ್ದರೂ ಪರವಾಗಿಲ್ಲ, ಸಹನೆಯನ್ನು ಬೆಳೆಸಿಕೊಂಡರೆ ಅದಾದರೂ ನಮ್ಮನ್ನು ರಕ್ಷಿಸ ಬಹುದು.

ಈಗ ವಿಜ್ಞಾನಿ ಜಗದೀಶ್‌ಚಂದ್ರ ಬೋಸರ ಒಂದು ಸೂಕ್ಷ್ಮ ವೈಜ್ಞಾನಿಕ ಕಾಣ್ಕೆ – ಸಸ್ಯಗಳು ಗಿಡಮರಗಳು ತರಕಾರಿಗಳನ್ನು ಕತ್ತರಿಸುವಾಗ ಏಟಾದಾಗ ಹೇಗೆ ನರಳುತ್ತವೆ, ಹೇಗೆ ಚಿತ್ಕರಿಸುತ್ತವೆ – ಎಂಬುದನ್ನು ನಾವು ಆಗಾಗ ನೆನಪಿಸಿಕೊಂಡರೆ ಆ ದರ್ಶನ ಹೇಳುವುದು ಕೇಳಿಸತೊಡಗುತ್ತದೆ: ’ಮಾಂಸಾಹಾರ ಎಂದರೆ ಗೋಚರವಾದ ಜೀವ ಆಹಾರ : ಸಸ್ಯಾಹಾರ ಎಂದರೆ ಅಗೋಚರವಾದ ಜೀವ ಆಹಾರ’.