ಆಧುನಿಕ ಭಾರತದ ದಿಕ್ಕು ರೂಪಿಸಿದ ನಿರ್ಣಾಯಕ ಚರ್ಚೆಗಳು-ನಟರಾಜ ಹುಳಿಯಾರ್

     ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಹತ್ತು ಸಂಪುಟಗಳಲ್ಲಿ ಪ್ರಕಟವಾಗಿರುವ “ಭಾರತದ ಸಂವಿಧಾನ ರಚನಾ ಸಭೆಯ ಚರ್ಚೆಗಳು”[ನಡವಳಿಗಳು] ಕೃತಿಶ್ರೇಣಿ ಕುರಿತು ಲೇಖಕರಾದ ನಟರಾಜ ಹುಳಿಯಾರ್ ಅವರು 10.2.2019 ರ ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ಬರೆದಿರುವ ಲೇಖನ ನಮ್ಮ ಓದಿಗಾಗಿ ಇಲ್ಲಿದೆ…     
ಸ್ವಾ ತಂತ್ರ್ಯೋತ್ತರ ಭಾರತವನ್ನು ನಿರ್ಮಿಸಿದ ನೇತಾರರ ಬೌದ್ಧಿಕ ಸಿದ್ಧತೆ, ಇತಿಹಾಸ ಪ್ರಜ್ಞೆ, ಬದ್ಧತೆ, ನ್ಯಾಯಯುತ ಸಮಾಜ ನಿರ್ಮಾಣದ ಆಶಯ, ಭಾರತದಲ್ಲಿ ರೂಪುಗೊಂಡ ಸಾಮಾಜಿಕ ನ್ಯಾಯದ ಪಯಣದ ಅನನ್ಯತೆ- ಇವೆಲ್ಲದರ ಬಗ್ಗೆ ಕಾಳಜಿ ಇರುವವರೆಲ್ಲ ಭಾರತ ಸಂವಿಧಾನದ ರಚನಾ ಸಭೆಯ ಚರ್ಚೆಗಳ (ಕಾನ್ಸ್ಟಿಟುಯೆಂಟ್‌ ಅಸೆಂಬ್ಲಿ ಡಿಬೇಟ್ಸ್) ನಡಾವಳಿಗಳನ್ನು ಅಗತ್ಯವಾಗಿ ಓದುತ್ತಿರಬೇಕಾಗುತ್ತದೆ. ಈ ಚರ್ಚೆಗಳ ಆರಂಭದಲ್ಲಿ ನೆಹರೂ ಅವರು ಮಂಡಿಸಿದ ಸಮಾನತೆಯ ವಿಶಾಲ ಆಶಯ ಮುಂದೆ ಅಂಬೇಡ್ಕರ್ ಅವರಿಂದ ವ್ಯಾಪಕ ವಿಸ್ತಾರ ಪಡೆದು ಈ ಚಾರಿತ್ರಿಕ ದಾಖಲೆಯುದ್ದಕ್ಕೂ ಹಾಸುಹೊಕ್ಕಾಗಿದೆ.
ಕುವೆಂಪು ಭಾಷಾಭಾರತಿ ಪ್ರಾಧಿಕಾರ ಪ್ರಕಟಿಸಿರುವ ಈ ಚರ್ಚೆಗಳ ಹತ್ತು ಸಂಪುಟಗಳಲ್ಲಿ ಆಧುನಿಕ ಇಂಡಿಯಾ ವ್ಯಾಖ್ಯಾನಿಸಲೆತ್ನಿಸಿರುವ ನೂರಾರು ವಿಷಯಗಳು, ಅವುಗಳ ಹಲವು ಮುಖಗಳ ಸಮಗ್ರ ಗ್ರಹಿಕೆಗಳು ಹಾಗೂ ಮಹತ್ವದ ಒಳನೋಟಗಳಿವೆ. ಕೇಂದ್ರ, ರಾಜ್ಯ, ಮೀಸಲಾತಿ, ಭಾಷೆ, ಪೌರತ್ವ, ಹಕ್ಕುಗಳು, ಕರ್ತವ್ಯಗಳು, ಒಕ್ಕೂಟ ವ್ಯವಸ್ಥೆ, ಸಮಾನತೆ, ರಾಷ್ಟ್ರೀಯತೆ, ಭಾಷಾವಾರು ಪ್ರಾಂತ್ಯಗಳು, ನ್ಯಾಯಾಂಗ, ಶಾಸಕಾಂಗ, ಸೆಕ್ಯುಲರಿಸಂ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಜ್ಯಪಾಲರ ಅಧಿಕಾರ, ರಾಷ್ಟ್ರದ್ರೋಹ… ಮುಂತಾದ ಪರಿಕಲ್ಪನೆಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶವೊಂದರಲ್ಲಿ ಪಡೆದ ಹೊಸ ವ್ಯಾಖ್ಯಾನಗಳು ಇಲ್ಲಿವೆ. ಕಳೆದ ದಶಕಗಳಲ್ಲಿ ಸುಪ್ರೀಂಕೋರ್ಟ್‌ ಈ ಚರ್ಚೆಗಳ ಮೂಲಕ ಸ್ಪಷ್ಟತೆ ಪಡೆದಿದೆ. ಹಿಂದುಳಿದ ವರ್ಗಗಳ ಆಯೋಗಗಳಿಂದ ಹಿಡಿದು ಅನೇಕ ಬಗೆಯ ಸಮಾಜ ಕಲ್ಯಾಣ ಯೋಜನೆಗಳಿಗೆ ಈ ಚರ್ಚೆಗಳು ಖಚಿತ ಚೌಕಟ್ಟನ್ನು ಒದಗಿಸಿವೆ.
ಬಗೆಬಗೆಯ ದಾಸ್ಯಗಳಿಂದ ನರಳಿದ ದೇಶವೊಂದು ಮೈಕೊಡವಿ ಮೇಲೆದ್ದು ಕೇವಲ ಐವತ್ತು ವರ್ಷಗಳಲ್ಲಿ ತನ್ನೆಲ್ಲ ಸವಾಲುಗಳಿಗೆ ಬೌದ್ಧಿಕ, ವಾಸ್ತವಿಕ ಉತ್ತರ ಹುಡುಕಿಕೊಂಡ ರೋಮಾಂಚಕಾರಿ ದಾಖಲೆಯಿದು. ರಾಜಕೀಯ, ಸಾಮಾಜಿಕ ಪರಿಕಲ್ಪನೆಗಳಿಂದ ಹಿಡಿದು ಭಾಷೆಯ ಉಚ್ಚಾರಣೆಯ ವೈವಿಧ್ಯದವರೆಗೂ ಇಲ್ಲಿ ಚರ್ಚೆಗಳಿವೆ. ಇಲ್ಲಿ ಮತೀಯವಾದಿ, ಮೂಲಭೂತವಾದಿ ಶಕ್ತಿಗಳು ಕೂಡ ತಮ್ಮ ಹಿತಾಸಕ್ತಿಗಳನ್ನು ಸದ್ದಿಲ್ಲದೆ ಮಂಡಿಸಲೆತ್ನಿಸಿದ್ದರೂ, ಅವುಗಳಲ್ಲಿ ಹಲವು ಧ್ವನಿಮತದಿಂದ ತಿರಸ್ಕರಿಸಲ್ಪಟ್ಟಿವೆ. ಇಲ್ಲಿರುವ ನವಭಾರತ ನಿರ್ಮಾಣದ ಚಿಂತನೆಗಳ ಆಳ, ವೈವಿಧ್ಯ ಬೆರಗು ಹುಟ್ಟಿಸುತ್ತದೆ. ಇಂಥ ಅಗಾಧ ಸಿದ್ಧತೆಯಿಂದ ರೂಪುಗೊಂಡ ಸಂವಿಧಾನದ ಆಶಯವನ್ನು ಬುಡಮೇಲುಗೊಳಿಸುವ ಇಂದಿನ ಶಕ್ತಿಗಳನ್ನು ಕಂಡು ಕೋಪ ಉಕ್ಕುತ್ತದೆ.
ಆಧುನಿಕ ಇಂಡಿಯಾದ ಅನೇಕ ಬಗೆಯ ದಲಿತ, ಪ್ರಗತಿಪರ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಗಳ ಬೇರುಗಳು ಈ ಚರ್ಚೆಗಳಲ್ಲಿವೆ. ಇವತ್ತು ಅನೇಕ ವಿಚಾರಗಳನ್ನು ಅಳ್ಳಕವಾಗಿ ಚರ್ಚಿಸಿ ವಿವಾದ ಎಬ್ಬಿಸುತ್ತಿರುವ ಅವಿವೇಕಿ ರಾಜಕಾರಣಿಗಳು, ವಾಚಾಳಿಗಳು, ಕೂಗುಮಾರಿಗಳು ಈ ಚರ್ಚೆಗಳನ್ನು ಓದುವಷ್ಟಾದರೂ ‘ಸಾಕ್ಷರ’ರಾದರೆ ಎಷ್ಟೋ ಒಳ್ಳೆಯದಾಗುತ್ತದೆ. ಎಪ್ಪತ್ತು ವರ್ಷಗಳ ಕೆಳಗೆ ಇಲ್ಲಿನ ಮುತ್ಸದ್ದಿಗಳು, ನಾಯಕರು, ಚರಿತ್ರಕಾರರು, ಚಿಂತಕರು, ಸಮಾಜವಿಜ್ಞಾನಿಗಳು ದೇಶಕಟ್ಟುವ ಜವಾಬ್ದಾರಿಯನ್ನು ನಿರ್ವಹಿಸಿದ ಈ ಅಪೂರ್ವ ದಾಖಲೆಗಳಲ್ಲಿ ವಿವಿಧ ಜಾತಿ, ಧರ್ಮ, ಪಕ್ಷ, ಮನೋಧರ್ಮ, ಪ್ರದೇಶ, ವರ್ಗ, ವಿಭಿನ್ನ ಚಿಂತನಾ ಕ್ರಮಗಳು… ಎಲ್ಲ ಹಿನ್ನೆಲೆಗಳಿಂದಲೂ ಬಂದ ಚಿಂತಕ, ಚಿಂತಕಿಯರ ಬೌದ್ಧಿಕ ತಯಾರಿ, ಜಗತ್ತಿನಲ್ಲಿ ಪ್ರಜಾಪ್ರಭುತ್ವದ ವಿಕಾಸ ಕುರಿತ ತಿಳಿವಳಿಕೆ ಎಲ್ಲವೂ ಕಾಣುತ್ತದೆ. ದೇಶದ ಜೀವನ್ಮರಣದ ಪ್ರಶ್ನೆಗಳು, ಪರಿಕಲ್ಪನೆಗಳು ಹಲವು ದಿಕ್ಕಿನಿಂದ ಚರ್ಚೆಗಳಿಗೆ, ತಿದ್ದುಪಡಿಗಳಿಗೆ ಒಳಗಾಗಿವೆ. ಸದಸ್ಯರ ಸಾಹಿತ್ಯ ಜ್ಞಾನ, ಇತಿಹಾಸ ಪ್ರಜ್ಞೆ, ಲೋಕಜ್ಞಾನ ಎಲ್ಲವೂ ಇಲ್ಲಿ ನೆರವಾಗಿವೆ.
ಚರ್ಚೆಯೊಂದರಲ್ಲಿ, ‘ಯಾವುದನ್ನಾದರೂ ತೆಗೆದು ಹಾಕಬೇಕೆಂದಾದರೆ, ಒತ್ತಾಯದಿಂದಲ್ಲ; ಒಪ್ಪಿಗೆಯಿಂದ’ ಎನ್ನುವ ಅಂಬೇಡ್ಕರ್, ಸದಸ್ಯರು ಈ ತತ್ವಕ್ಕೆ ಬದ್ಧರಾಗಿರುವಂತೆ ಒಲಿಸುತ್ತಾರೆ. ಚರ್ಚೆಯಲ್ಲಿ ಭಾಗಿಯಾದ ಸದಸ್ಯರೆಲ್ಲ, ‘ಮನವರಿಕೆ ಮಾಡಿಕೊಡು; ಇಲ್ಲಾ ಮನವರಿಕೆ ಮಾಡಿಕೋ’ ಎಂಬ ವಿಶಾಲ ತತ್ವಕ್ಕೆ ಬದ್ಧರಾಗಿದ್ದರಿಂದ ಕೂಡ ಅತ್ಯಂತ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಭಾರತೀಯ ಸಂವಿಧಾನ ರಚನೆಯಾಗಿದೆ. ಈ ಬಗೆ ಎಲ್ಲ ಕಾಲಕ್ಕೂ ಮಾದರಿಯಂತಿದೆ.
ಈ ಅಧಿವೇಶನಗಳ ಕೊನೆಯ ಸಭೆಯಲ್ಲಿ ಅಂಬೇಡ್ಕರ್‌ ಹೇಳುವ ಮಾತುಗಳು: ‘ಎರಡು ವರ್ಷ, ಹನ್ನೊಂದು ತಿಂಗಳು, ಹದಿನೇಳು ದಿನಗಳ’ ಅವಧಿಯಲ್ಲಿ ಒಟ್ಟು 165 ದಿನಗಳ ಕಾಲ ನಡೆದ ಅಧಿವೇಶನಗಳಲ್ಲಿ, ಸದಸ್ಯರು ‘ಒಂದೆಡೆ ಕೂತು ಹೊಸ ಸೂತ್ರಗಳನ್ನು ಕಂಡುಹಿಡಿದು, ಅಪಾರ ತಾಳ್ಮೆ ಪ್ರದರ್ಶಿಸಿ, ಅನೇಕ ವಿಭಿನ್ನ ದೃಷ್ಟಿಕೋನಗಳಿಗೆ ಅವಕಾಶ ಮಾಡಿಕೊಟ್ಟು ತೋರಿದ ಪರಿಶ್ರಮದಿಂದಾಗಿಯೇ ಸಂವಿಧಾನ ರಚನೆಯ ಕಾರ್ಯ ಯಶಸ್ವಿ ಮುಕ್ತಾಯದ ಹಂತ ತಲುಪುವುದು ಸಾಧ್ಯವಾಗಿದೆ.’
ಅಂಬೇಡ್ಕರ್ ಹಾಗೂ ಜಗಜೀವನರಾಂ ಇಬ್ಬರೂ ಭಾರತ ಸರ್ಕಾರದ ಮಂತ್ರಿಮಂಡಲದಲ್ಲಿ ಇರಬೇಕೆಂಬುದು ಗಾಂಧೀಜಿಯವರ ಹಾಗೂ ಅಂದಿನ ಕಾಂಗ್ರೆಸ್ಸಿನ ಆಶಯವಾಗಿತ್ತು. ಆರಂಭದಲ್ಲಿ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದ ಅಂಬೇಡ್ಕರ್‌ ಸಚಿವರಾದ ನಂತರ ಕರಡು ಸಮಿತಿಯ ಅಧ್ಯಕ್ಷರಾದರು. ಈ ಸಭೆಗಳ ಚರ್ಚೆಗಳ ಸಾರವು ಪ್ರಬುದ್ಧ ಸಂವಿಧಾನವಾಗಿ ರೂಪುಗೊಳ್ಳಲು ಎಡೆಬಿಡದೆ ದುಡಿದರು. ಬರಬರುತ್ತಾ ಅನೇಕ ಕಾರಣಗಳಿಗಾಗಿ ಸಮಿತಿಯ ಸದಸ್ಯರು ಹೆಚ್ಚು ಪಾಲ್ಗೊಳ್ಳದಿದ್ದುದರಿಂದ ಸಂವಿಧಾನದ ಅಂತಿಮ ಬರವಣಿಗೆಯ ಜವಾಬ್ದಾರಿ ಅಂಬೇಡ್ಕರ್ ಹೆಗಲೇರಿತು.
 
ಅಂಬೇಡ್ಕರ್ ಅವರ ವಿದ್ವತ್ತು, ಸಹನೆ, ಹಲವು ದೇಶಗಳ ಸಂವಿಧಾನಗಳ ಆಳವಾದ ಗ್ರಹಿಕೆ, ಕಾನೂನು ಜ್ಞಾನ, ಸಮಸಮಾಜ ನಿರ್ಮಾಣಕ್ಕೂ ಸಂವಿಧಾನಕ್ಕೂ ಇರಬೇಕಾದ ಸಂಬಂಧ ಕುರಿತ ಖಚಿತತೆ… ಇವೆಲ್ಲವೂ ಸದಸ್ಯರ ಮನಗೆಲ್ಲುತ್ತಾ ಹೋಗುತ್ತವೆ. ಸದಸ್ಯರ ಟೀಕೆ, ವ್ಯಂಗ್ಯಕ್ಕೆ ಉತ್ತರ, ಉತ್ತಮ ಸಲಹೆಗಳ ಸ್ವೀಕಾರ, ಹಾದಿತಪ್ಪಿದ ಚರ್ಚೆಗಳಿಗೆ ಸರಿಯಾದ ದಿಕ್ಕು… ಇವೆಲ್ಲವನ್ನೂ ಖಚಿತ ನಿಲುವಿನಿಂದ ನಿಭಾಯಿಸುತ್ತಾ ಅಂಬೇಡ್ಕರ್ ದೇಶದ ಬೌದ್ಧಿಕ ನಾಯಕರಾಗಿ ಬೆಳೆದ ರೀತಿಯೂ ಇಲ್ಲಿ ದಾಖಲಾಗಿದೆ. ಹಲವು ದಶಕಗಳ ಕಾಲ ಕಾಂಗ್ರೆಸ್ಸನ್ನು ವಿರೋಧಿಸಿದ್ದ ಅಂಬೇಡ್ಕರ್, ಈ ಅಧಿವೇಶನಗಳ ಕೊನೆಗೆ ಕಾಂಗ್ರೆಸ್‌ ಸದಸ್ಯರ ಕ್ರಮಬದ್ಧತೆ, ಶಿಸ್ತು, ಜ್ಞಾನ ಹಾಗೂ ಶಕ್ತಿಯನ್ನು ಮುಕ್ತವಾಗಿ ಹೊಗಳಿರುವುದು ಕೂಡ ಐತಿಹಾಸಿಕ ದಾಖಲೆಯಾಗಿದೆ. ಈ ಚರ್ಚೆಗಳ ಕೊನೆಗೆ ಅಂಬೇಡ್ಕರ್ ಬಗ್ಗೆ ಹತ್ತಾರು ಸದಸ್ಯರ ಮೆಚ್ಚುಗೆ ಕೂಡ ಅಂಬೇಡ್ಕರ್ ವಿವಿಧ ವರ್ಗಗಳ ಬುದ್ಧಿಜೀವಿಗಳ ಮನಗೆದ್ದ ವಿಶಿಷ್ಟ ದಾಖಲೆಯಂತಿದೆ.
ಕೊನೆಗೆ ಸಾವಿರಾರು ಪುಟಗಳ ಸಭಾನಡಾವಳಿಗಳನ್ನು ಅಧ್ಯಯನ ಮಾಡಿ, ಬಹುತೇಕ ಏಕಾಂಗಿಯಾಗಿ ಸಂವಿಧಾನದ ಅಂತಿಮ ಕರಡನ್ನು ಸಿದ್ಧಪಡಿಸಿ ಒಪ್ಪಿಸುವ ಹೊತ್ತಿಗೆ ಅಂಬೇಡ್ಕರ್ ಅವರ ಆರೋಗ್ಯ ಶಿಥಿಲವಾಗತೊಡಗಿತ್ತು.
ಹಿಂದಿನ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಅವರ ವಿಶೇಷ ಕಾಳಜಿಯಿಂದ ಈ ಚರ್ಚೆಗಳನ್ನು ಕನ್ನಡಕ್ಕೆ ತರುವಂತೆ ಭಾಷಾಭಾರತಿ ಪ್ರಾಧಿಕಾರಕ್ಕೆ ಕೋರಿದ್ದರು. ಪ್ರಾಧಿಕಾರ ಎರಡು ವರ್ಷಗಳ ಅವಧಿಯಲ್ಲಿ ಈ ಮಹತ್ತರ ಯೋಜನೆಯನ್ನು ಪೂರೈಸಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿದೆ. ಇಂಥ ಚಾರಿತ್ರಿಕ ಸಂಪುಟಗಳನ್ನು ಕನ್ನಡಕ್ಕೆ ತಂದಿರುವ ಎಲ್ಲ ಭಾಷಾಂತರಕಾರರು, ಪರಿಶೀಲಕರು, ಕರಡು ತಿದ್ದಿದವರ ಅಪೂರ್ವ ಶ್ರಮಕ್ಕೆ ಕೃತಜ್ಞತೆ ಹೇಳಲೇಬೇಕು. ಆದರೂ, ಅಲ್ಲಲ್ಲಿ ಉಳಿದಿರುವ ದೋಷಗಳು, ಸಂವಾದಿ ಪದಗಳ ಸಂದಿಗ್ಧತೆ, ಭಾಷೆಯ ಪೆಡಸುತನ, ಅಸ್ಪಷ್ಟತೆಗಳನ್ನು ಮುಂದಿನ ಮುದ್ರಣಗಳಲ್ಲಿ ಪರಿಶೀಲಿಸಿ ಸರಿಪಡಿಸಿಕೊಳ್ಳುವ ಅಗತ್ಯವಿದೆ. ಇಲ್ಲೇ ಇನ್ನೊಂದು ಸಮಸ್ಯೆಯನ್ನೂ ಚರ್ಚಿಸಬೇಕು. ಈ ಯೋಜನೆಯನ್ನು ನಿರ್ವಹಿಸಿರುವವರು ಹಿಂದಿನ ತಲೆಮಾರಿನ ಹಿರಿಯ ಭಾಷಾಂತರಕಾರರು. ಮುಂದೆ ಇಂಥ ಬೃಹತ್‌ ಭಾಷಾಂತರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಹೊಸ ತಲೆಮಾರುಗಳು ದೊಡ್ಡಮಟ್ಟದಲ್ಲಿ ಸಿದ್ಧವಾಗದಿದ್ದರೆ ಕನ್ನಡ ಸಂಸ್ಕೃತಿಗೆ ಹೊಸ ಚಿಂತನೆಗಳ ಕೊರತೆ ಎದುರಾಗುತ್ತದೆ.
ಹೊಸ ಭಾಷಾಂತರಕಾರರಿಗೆ ಆಕರ್ಷಕ ಫೆಲೋಶಿಪ್‌ಗಳನ್ನು ಕೊಟ್ಟು ಅವರನ್ನು ಸಜ್ಜುಗೊಳಿಸುವ ಕೆಲಸವನ್ನು ಕೂಡ ಕುವೆಂಪು ಭಾಷಾಭಾರತಿ ಪ್ರಾಧಿಕಾರದಂಥ ಸಂಸ್ಥೆಗಳು ದೊಡ್ಡಮಟ್ಟದಲ್ಲಿ ಕೈಗೆತ್ತಿಕೊಳ್ಳಬೇಕು.
ಹಾಗೆಯೇ ಈ ಸಂಪುಟಗಳ ಸಂಪಾದನ ಸಮಿತಿಯ ಸದಸ್ಯರಾದ, ಕನ್ನಡದ ಹಿರಿಯ ಲೇಖಕರಾದ
ಡಾ. ಸಿದ್ಧಲಿಂಗಯ್ಯ ಹಾಗೂ ದೇವನೂರ ಮಹಾದೇವ ಇಬ್ಬರೂ ಅಚ್ಚಿಗೆ ಮುನ್ನ ಈ ಸಂಪುಟಗಳ ಅಂತಿಮ ಕರಡುಗಳನ್ನು ವ್ಯವಧಾನದಿಂದ ಓದುವ ಔದಾರ್ಯ ತೋರಿದ್ದರೆ ಇವು ಇನ್ನಷ್ಟು ದಕ್ಷವಾಗಿರುತ್ತಿದ್ದವು. ಆ ಕಾಲವೂ ಬರಲಿ!