‘ಅಲ್ಲೇ ಕುಳಿತವರ’ ಕಣ್ಣ ಬೆಳಕಾಗಿಸುವ ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ -ಪ್ರೊ..ಶಿವರಾಮಯ್ಯ

ಪೀಠಿಕೆ
ಒಂದಾನೊಂದು ಘೋರಾರಣ್ಯ. ಶಿವ ಪಾರ್ವತಿ ಎತ್ತಿನ ಅಂಬಾರಿಯಲ್ಲಿ ಆ ಅರಣ್ಯದ ಮೇಲಿಂದ ವಿಹಾರ ಹೋಗ್ತಿದ್ರು. ಆ ಕಾಡಿನಲ್ಲೊಂದು ಕೋಡುಗಲ್ಲು. ಅದರ ಮೇಲೊಂದು ‘ಕಪ್ಪಲ್ನಾಟ’ ಗುಳ್ಳೆನರಿ ((Jaekal)ಕೂತ್ಕೊಂಡು ಒಂದೇ ಸಮ ಊಳಿಡುತ್ತಿತ್ತು. ಅದರ ಸಂಕಟದ ಹನಿಗೆ ಕಾಡೂ ದನಿಗೂಡುತ್ತಿತ್ತು. ಮೇಲೆ ವಿಹಾರ ಹೊರಟಿದ್ದ ಶಿವ ಪಾರ್ವತಿಯರಿಗೂ ಕೇಳಿಸುತ್ತಿತ್ತು. ಪಾರ್ವತಿ ‘ಸ್ವಲ್ಪ ಬಸವನ ನಿಲ್ಲಿಸಿ, ಅದೇನೆಂದು ಕೇಳೋಣ’ ಎಂದಳು. ವಿಹಾರಕ್ಕೆ ಹೊರಟ ಶಿವನಿಗೆ ಕಸಿವಿಸಿ. “ಅದೇನ್ ಪೀಡೆನೊ ಪಿಶಾಚಿನೊ? ದೆವ್ವನೋ, ಭೂತನೋ? ಅದರ ಸಹವಾಸ ಬೇಡ” ಎಂದು ಪತ್ನಿಯ ಮಾತಿಗೆ ಬೆಲೆ ಕೊಡಲಿಲ್ಲ. ಆದರೆ ಪಾರ್ವತಿ ಬಿಡಲಿಲ್ಲ. “ನೀವು ಎತ್ತಿನ ಮೂಗುದಾರ ಹಿಡಿದು ನಿಲ್ಲುಸ್ತೀರೋ, ಇಲ್ಲ ನಾನು ನಾಲಿಗೆ ಕಿತ್ಕಂಡು ಇಲ್ಲಿಂದಲೇ ಬಿದ್ದು ಸಾಯ್ಲೊ?” ಎಂದು ಜೀವ ಬೆದರಿಕೆ ಹಾಕಿದಳು. ಹೆಂಗಸಿನ ಮಾತಿಗೆ ಬೆಲೆ ಕೊಡದ ಗಂಡಸು ಎಲ್ಲಾದರು ಉಂಟೆ? ಮೂರು ಲೋಕದ ಒಡೆಯ ಶಿವ ಎತ್ತಿನ ಮೂಗುದಾರ ಜಗ್ಗಿ ಕೆಳಗಿಳಿಸಿದ. ದನಿ ಬರುತ್ತಿದ್ದ ಕಡೆಗೆ ದಡಬಡನೆ ಓಡಿಬಂದರು. ಕಪ್ಪಲ್ನಾವನ್ನು ಕಂಡು ಯಾಕಪ್ಪ ನರಿ ರಾಜ ಇಷ್ಟು ಸಂಕಟ ನಿನಗೆ? ಎಂದು ಕೇಳಿದರು. ನರಿ ಹೇಳಿತು : “ನನ್ನ ಗೆಣೆಕಾರನೊಬ್ಬ ರೈತ ಮಗ ಇದ್ದಾನೆ. ಅವನು ಬಡವಾ ಎಂದ್ರೆ ಬಡ ಕಾಡಿನ ಅಂಚಿನಲ್ಲಿರುವ ಅವನು ಹೊಲ ಉಳ್ಳುತ್ತತ್ತಿದ್ದಾನೆ. ತನಗೆ ಒಂದು ದಿನ ತುಂಬಾ ಹಸಿವಾಗಿತ್ತು. ಅವನು ಊಳುತ್ತಿದ್ದಲ್ಲಿಗೆ ಹೋಗಿ ನಿಂತೆ. ಅವನ ಅಜ್ಜಿ ಹಣ್ ಹಣ್ಣು ಮುದುಕಿ ಮನೆಯಿಂದ ಅವನಿಗೆ ರೊಟ್ಟಿ ತಂದಳು. ರೈತಮಗ ನನ್ನ ಮುಖ ನೋಡಿ ‘ಏನು ಕಂಕರಾಜ, ನಿನಗೂ ಹಸಿವಾಗಿರಬೇಕು ನಿನ್ನ ಮುಖವೇ ಹೇಳುತ್ತೆ. ತಗೊ ತಿನ್ನು ಎಂದು ನನಗೂ ಒಂದು ರೊಟ್ಟಿ ನೀಡಿದ, ಅವತ್ತಿನಿಂದ ಇದೇ ಪರಿಪಾಠ. ನಾವಿಬ್ಬರೂ ಗೆಣೆಕಾರರಾದೆವು. ಆದರೆ ರೊಟ್ಟಿ ಋಣ ಹೇಗೆ ತೀರಿಸುವುದೆಂದು ನಾನು ಬಹಳ ಚಿಂತೆಗೀಡಾದೆ.ಕಾಲ ಕಳೆಯುತ್ತಿತ್ತು.
ಹೀಗಿರುತ್ತ ಒಂದು ದಿನ ಪಕ್ಕನೆ ಒಂದು ಆಲೋಚನೆ ಬಂತು. ಈ ಗೆಳೆಯನಿಗೆ ಅನುರೂಪಳಾದ ಹೆಣ್ಣು ತಂದು ಮದುವೆ ಮಾಡಿ ಇವನನ್ನು ರಾಜಕುಮಾರನನ್ನಾಗಿ ಮಾಡಬೇಕು ಅನ್ನಿಸಿತು.
ಆದರೆ ಇಂಥ ಬಡ ರೈತಮಗನಿಗೆ ಯಾರು ಹೆಣ್ಣು ಕೊಟ್ಟಾರು? ಮೊದಲು ಇವನು ಸಾಹುಕಾರನಾಗಬೇಕಲ್ಲವೆ? ಎಂದು ಯೋಚಿಸಿ, ಯೋಚಿಸಿ ಕಡೆಗೆ ನಿಮ್ಮನ್ನು ಕುರಿತು ತಪಸ್ಸು ಮಾಡಲಾರಂಭಿಸಿದೆ. ಆದರೆ ನನಗೆ ಜಪ ತಪ ಗೊತ್ತಿಲ್ಲ. ನನ್ನ ಭಾಷೆಯಲ್ಲಿ ಹೀಗೇ ಊಳಿಡುತ್ತಿದ್ದೆ ಎಂದು ಹೇಳಿತು. ಶಿವ ಪಾರ್ವತಿಯರಿಗೆ ಆಶ್ವರ್ಯ ಮತ್ತು ಬೆರಗು. ಸಕಲ ಜೀವಿಗಳ ಯೋಗ ಕ್ಷೇಮ ಅವರದು.
‘ಹಾಗಾದರೆ ಸರಿ ನರಿಯಣ್ಣ ನಮ್ಮಿಂದ ನಿನಗೆ ಏನಾಗಬೇಕು? ನಾವು ನಿನ್ನ ರೈತ ಮಗನಿಗೆ ಹೇಗೆ ಸಹಾಯ ಮಾಡಬೇಕು’ ಎಂದು ಕೇಳಿದರು. ನರಿ ‘ನನ್ನ ಗೆಳೆಯ ಒಬ್ಬ ರಾಜಕುಮಾರನಾಗಬೇಕು. ಅವನಿಗೆ ತಕ್ಕ ಅರಮನೆ ಅಂತಸ್ತು ಎಲ್ಲ ಆಗಬೇಕು ಆಗ ಇನ್ನೊಂದು ರಾಜ್ಯದ ರಾಜ ಅವನಿಗೆ ಕನ್ಯೆ ಕೊಟ್ಟಾನು! ಎಂದು ದುಂಬಾಲು ಬಿದ್ದಿತು. ಕಪ್ಪಲ್ನಾಟದ ದೈನ್ಯ ಕೋರಿಕೆಗೆ ಶೀವ ಪಾರ್ವತಿಯರ ಅಂತಃಕರಣ ಕರಗಿ ಹೋಯಿತು.
‘ತಥಾಸ್ತು! ನರಿಯಣ್ಣ ನಿನ್ನಿಚ್ಛೆಯಂತೆ ಆಗಲಿ’ ಎಂದು ಹೇಳಿ ತಮ್ಮ ಎತ್ತನ್ನು ಏರಿ ಆಕಾಶ ಮಾರ್ಗದಲ್ಲಿ ಮಾಯವಾಗಿಬಿಟ್ಟರು. ಮುಂದಿನ ಕತೆ ಅಷ್ಟೇನು ದೊಡ್ಡದಲ್ಲ. ರೈತಮಗನ ಹೊಲದಲ್ಲಿ ಬಂಧು ಮಾಯನಗರ ಏರ್ಪಟ್ಟಿತ್ತು. ಅವನನ್ನು ನೋಡಿ ಕನ್ಯಾದಾನ ಮಾಡಲು ಸುತ್ತೇಳು ರಾಜ್ಯಗಳ ರಾಜರು ಧಾವಿಸಿ ಬಂದರು. ರೈತಮಗ ಚನ್ನರಾಯಪಟ್ಟಣ ರಾಜಕುಮಾರಿಯನ್ನು ಮೆಚ್ಚಿಕೊಂಡ. ಅದ್ಧೂರಿಯ ಮದುವೆ ನಡೆಯಿತು. ಹೆಣ್ಣು ಗಂಡನ ಮನೆಗೆ ಬಂದಳು. ಎರಡು ಕಡೆಯ ಬೀಗರು ನಡೆದು ಸಂಭ್ರಮಿಸಿ ತಿಂದು ಉಂಡು ಮಲಗಿದರು. ಆದರೆ ಆ ರಾತ್ರಿ ಕಲ್ಲು ನೀರು ಕರಗುವ ಹೊತ್ತಿಗೆ ಮಾಯಾನಗರಿ ಮಾಯವಾಗಿ ಎಲ್ಲರೂ ಹೊಲದ ಮುಳ್ಳು ಕಲ್ಲುಗಳಲ್ಲಿ ಬಿದ್ದಿದ್ದರು. ಇತ್ತ ಮಾಯಕಾರ ಕಪ್ಪಲ್ನಾಟ ನಿಮ್ಮ ಹೆಣ್ಣು ಹೊಸ್ತಿಲು ದಾಟಿದ್ದರಿಂದಲೇ ನಮ್ಮ ಸರ್ವನಾಶವಾಯಿತು ಎಂದು ನಟಿಸಿ ಆರ್ಭಟಿಸಿತು. ಆದರೆ ಹೆಣ್ಣಿನ ತಂದೆ “ನನಗೆ ಗಂಡು ಮಕ್ಕಳಿಲ್ಲ. ನನ್ನ ಅಳಿಯನೇ ಯುವರಾಜ” ಎಂದು ನರಿಗೆ ಸಮಾಧಾನಮಾಡಿದ. ಎಲ್ಲರೂ ಚೆನ್ನರಾಯಪಟ್ಟಣಕ್ಕೆ ನಡೆದರು. ರೈತ ಮಗ ಬಹಳ ಕಾಲ ರಾಜ್ಯವಾಳಿದನು. ಹೀಗೆ ತುಂಡು ರೊಟ್ಟಿಯ ಋಣಕ್ಕೆ ಬಿದ್ ಕಪ್ಪಲ್ನಾಟ ತನ್ನ ಗೆಳೆಯನನ್ನು ರಾಜನನ್ನಾಗಿ ಮಾಡಿತು. ತಾನಾದರೊ ಪುನಃ ಕಾಡು ಸೇರಿತು.
ಮಾದೇವ ಅವರದು ಪಾರ್ವತಿಯ ಅಂತಃಕರಣ ಅವಳ ಇನ್ನೊಂದು ಸಂಬಂಧದ ಕಥನ ಜನಜನಿತ. ತನ್ನ ಮೈ ಮೈಲಿಗೆಯನ್ನೆಲ್ಲ ತೆಗೆದು ಅದಕ್ಕೊಂದು ರೂಪ ಕೊಟ್ಟು ಆನೆ ತಲೆ ತರಿಸಿ ಸಿಕ್ಕಿಸಿ ‘ಈ ಜೀವ್ವೇ ಆ ಜೀವಕ ನಡೀ’ ಎಂದ ತೂರಮ್ಮನಂಥೆ (ಕುಸುಮಬಾಲೆ) ಗಣೇಶನಿಗೆ ಜೀವ ಕೊಟ್ಟವಳು ಪಾರ್ವತಿ. ಹೀಗೆ ಜನಪದ ಆಕರಗಳಿಂದ ಮಾದೇವರ ಕಥನ ಸಾಹಿತ್ಯ ಜೀವಂತಿಕೆಯಿಂದ ಲಕಲಕಿಸುತ್ತದೆ. ಹಾಗೆ ನೋಡಿದರೆ ‘ಎದೆಗೆ ಬಿದ್ದ ಅಕ್ಷರ’ ಒಬ್ಬ ಸಾಮಾನ್ಯನಿಂದ, ಸಾಮಾನ್ಯರಿಗಾಗಿ ಸಾಮಾನ್ಯರಿಗೋಸ್ಕರ ಬರೆದ ಸಬಾಲ್ಟ್ರನ್ ಚರಿತ್ರೆ.
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು ನಿಜ. ಹಾಗೆ ದೇವನೂರ ಮಹಾದೇವ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡಬಹುದು. ಎದೆಗೆ ಬಿದ್ದ ಅಕ್ಷರಕ್ಕೂ ತಲೆಗೆ ಬಿದ್ದ ಅಕ್ಷರಕ್ಕೂ ಭುವಿ ಬಾನುವಿನ ಅಂತರ. ಗಾಂಧೀಜಿ ಎದೆಗೆ ಬಿದ್ದ ಅಕ್ಷರ ಸತ್ಯಾಗ್ರಹ ಅಹಿಂಸೆಯ ಮಾರ್ಗ ಹಿಡಿಯಿತು; ಅದೇ ಹಿಟ್ಲರನ ತಲೆಗೆ ಬಿದ್ದ ಅಕ್ಷರ ಹಿಂಸಾ ರಭಸಮತಿಯಾಗಿ ಲೋಕ ಕಂಟಕನೆನಿಸಿತು. ಆದ್ದರಿಂದ ಅಕ್ಷರ ತಲೆಗೆ ಬೀಳಬಾರದು, ಎದೆಗೆ ಬೀಳಬೇಕು. ಡಿವಿಜಿಯವರು ಹೇಳಿದಂತೆ ಅನಕ್ಷರಸ್ಥರಿಗಿಂತ  ಅಕ್ಷರಸ್ಥರೇ ಹೆಚ್ಚು ಲೋಕಕಂಟಕರಾಗುತ್ತಾರೆ. ಇದು ಯಾವತ್ತಿನ ಅನುಭವ. ಅಕ್ಷರ ಎಂಬುದನ್ನು ಉಲ್ಟಾಯಿಸಿದರೆ ರಾಕ್ಷಸ ಎಂದಾಗುತ್ತದೆ ತಾನೆ? ಆದ್ದರಿಂದ ಶಿಕ್ಷಣ ಎಂದರೆ ರಾಕ್ಷಸರನ್ನು ತಯಾರಿಸುವುದಲ್ಲ; ಸಾಕ್ಷರಸವನ್ನು ತಯಾರಿಸುವುದು ಪಂಪ ಇದನ್ನೇ ಮೂರ್ತೀಕರಿಸಿ ಪರಮ ಜಿನೇಂದ್ರವಾಣಿಯ ಸರಸ್ವತಿ ಎಂದ. ಎದೆಗೆ ಬಿದ್ದ ಅಕ್ಷರ ನೋಡೊದಾದರೆ ಮಹಾದೇವನ ವಾಣಿಯೆ ಸರಸ್ವತಿ ಎಂಬಂತೆ ಅನುಭವಕ್ಕೆ ಬರುತ್ತದೆ. ತನ್ನೆದೆಯ ಸಾಗರಕ್ಕೆ ಬಿದ್ದ ಅಕ್ಷರವನ್ನು ಇವರು ಮುತ್ತು ಮುಳಗ(Pearl Diver) ನಂತೆ ಮುಳುಗಿ ಅವುಗಳನ್ನು ಎತ್ತಿ  ಆಯ್ದು ಆಯ್ದು ಸಪ್ತ ಸ್ವರವಚನದ ಏಳೆಳೆಯ ಅಕ್ಷರ ಮಾಲೆಯನ್ನು ಕೋದು ಸಮಾನತೆ ಉಸಿರಾಡುವ ಜೀವಿಗಳ ಪಾದಗಳಿಗೆ ಅರ್ಪಿಸಿದ್ದಾರೆ.
ದೇವನೂರು ಮಹಾದೇವರ ಕಥನ ಸಾಹಿತ್ಯವನ್ನು ಅನುಸಂಧಾನ ಮಾಡುತ್ತಾ ಹೋದರೆ ಅದು ಒಂದೆಡೆ ಪ್ರವಾದಿಯ ಕನಸಿನಂತೆಯೂ, ಇನ್ನೊಂದೆಡೆ ‘ಆರಿಗಾರುಪಗೆ’ ಎಂಬ ಸಂತನವಾಣಿಯಂಥೆಯೂ ಮತ್ತೊಂದೆಡೆ ದನಿ ಇಲ್ಲದೆ ಅಲ್ಲೆ ಪಿಸುಗುಟ್ಟುತ್ತ ಕುಳಿತವರ ದನಿಯಂತೆ ಕೇಳಿ ಬರುತ್ತದೆ.ಒಂದೇ ಮಾತಿನಲ್ಲಿ ಹೇಳುವುದಾದರೆ ‘ಎದೆಗೆ ಬಿದ್ದ ಅಕ್ಷರ’ ಕೊನೇ ಪ್ರಜೆಯ ಘನತೆಯ ನೆತ್ತರಿಸುವ ಬರಹ; ದಲಿತರ ದೇವತೆ ಮನೆ ಮಂಚಮ್ಮ ಮೆಚ್ಚಿ ಅಹುದು ಅಹುದು ಎನ್ನಬೇಕು ಹಾಗಿದೆ.

ನೆಲೆ-ಹಿನ್ನೆಲೆ
ಮೇಲಿನ ಮಾತುಗಳನ್ನು ಪರ್ಯಾಲೋಚಿಸುವ ಮುನ್ನ ದೇವನೂರ ಮಹಾದೇವ ಹುಟ್ಟಿದ ಪರಿಸರ, ಬೆಳವಣಿಗೆ, ವಿದ್ಯಾಭ್ಯಾಸ, ಪ್ರೇರಣೆ ಹಾಗೂ ಪ್ರಭಾವ ಇವುಗಳನ್ನು ಕುರಿತು ಕೊಂಚ ವಿಚಾರ ಮಾಡುವುದು ಸರಿ ಎನಿಸುತ್ತದೆ. ಇವರು ಹುಟ್ಟಿದ ಊರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ದೇವನೂರು ಎಂಬ ಗ್ರಾಮ. ಹುಟ್ಟಿದ್ದು: 10-06-1948 ತಂದೆ: ಪೊಲೀಸ್ ನಂಜಯ್ಯ, ತಾಯಿ: ಶ್ರೀಮತಿ ನಂಜಮ್ಮ. ಇವರು ಹುಟ್ಟುವ ಒಂದೇ ವರ್ಷಕ್ಕೆ ಮೊದಲು ದೇಶಕ್ಕೆ ಸ್ವಾತಂತ್ರ್ಯ ಬಂದಿತ್ತು. ಮಕ್ಳು ಹುಟ್ಟುವ ಐದು ತಿಂಗಳ ಮೊದಲೇ ಗಾಂಧಿಯ ಗುಂಡಿಗೆಗೆ ಗುಂಡು ಬಿದ್ದಿತ್ತು. ಹಿಂದುತ್ವವಾದ ತಲೆ ತಗ್ಗಿಸಿತು. ಆ ಮೇಲೆ ಕಾಂಗ್ರೆಸ್ಸಿನ ಆಳ್ವಿಕೆ ಬಂತು ಇದಿಷ್ಟು ರಾಜಕೀಯ ಬೆಳವಣಿಗೆ.
ಇಂತಲ್ಲಿ, ಕೃಷಿಕ ಕುಟುಂಬದಿಂದ ಬಂದಿದ್ದ ತಂದೆ ದಫೇದಾರ ನಂಜಯ್ಯನವರು ಸರ್ಕಾರಿ ನೌಕರರಾಗಿದ್ದುದರಿಂದ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಬೇಕಾಗಿತ್ತು. ಆ ಕಾರಣದಿಂದ ಇವರ ಕುಟುಂಬ ವರ್ಗವಾದ ಊರಿಗೆ ಸಾಗುತ್ತಿತ್ತು. ನಂಜಯ್ಯನವರು ಪೊಲೀಸ್ ಇಲಾಖೆಯಲ್ಲಿ ನೌಕರರಾಗಿದ್ದರೂ ಆ ಗತ್ತು ಗಮ್ಮತ್ತುಗಳಿಲ್ಲದ ಸಾಮಾಜಿಕ ನ್ಯಾಯ ನುಡಿಯೊ ವ್ಯಕ್ತಿಯಾಗಿದ್ದರು.‘ನನ್ಮಕ್ಳು ಮಣ್ಣು ಹಿಡಿದ್ರು ಅದು ಚಿನ್ನ ಆಯ್ತದೆ’ ಎಂಬ ಮೂರು ಮಕ್ಕಳ ತಾಯಿ ನಂಜಮ್ಮ ಸಹನಾಶೀಲ ಗೃಹಣಿ’. ಮಾದೇವರ ಬಾಲ್ಯ ಮತ್ತು ವಿದ್ಯಾಭ್ಯಾಸ ದೇವನೂರು ಮತ್ತು ನಂಜನಗೂಡಿನ ಪರಿಸರದಲ್ಲಿ ಕಳೆಯಿತು. ಊರೂರುಗಳಲ್ಲಿ ಹೊಲಗೇರಿಗಳು, ಮಾದಿಗರ ಹಟ್ಟಿಗಳು ಊರಿಂದ ಹೊರಗೇ ಇರುತ್ತಿದ್ದವು; ಅವರು ಅಸ್ಪೃಶ್ಯರು. ಅವರಿಗೆ ನಂಜನಗೂಡಿನ ನಂಜುಂಡನ ಗರ್ಭಗುಡಿಗೆ ಪ್ರವೇಶವಿಲ್ಲ. ಸಾಮಾಜಿಕ ಪರಿಸ್ಥಿತಿ ಇದು. ಕಪಿಲಾನದಿ ಕಾಲು ತೊಳೆಯುವ ನಂಜನಗೂಡು ಸೀಮೆ ಜನಪದ ಕತೆ ಕಾವ್ಯಗಳ ಜನ್ಮಭೂಮಿ. ಸಮುದ್ರ ಮಂಥನದಿಂದ ಬೀರಲು ಬಂದ ವಿಷವನ್ನು ಧಾರಣೆ ಮಾಡಿದ ಶಿವನೆ ನಂಜುಂಡನಾದ ಅವನಿಗೆ ಗಂಗೆ ಗೌರಿ ಎಂಬ ಇಬ್ಬರು ಹೆಂಡಂದಿರು. ಆದರೂ ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿವ ಜೀವರಸಿಕ ಅವನು. ಆ ಜೀವಿಗೆ ಬೆಟ್ಟದ ಚಾಮುಂಡಿಯೊಂದಿಗೆ ಗೆಣೆತನ. ಅವಳಿಗಾದರೊ ‘ಇನ್ನು ಯಾಕ ಬರಲಿಲ್ಲವ್ವ ಈ ಜೋಗಿ ಜಂಗಮ’ ಎಂಬ ಜಾಗರಣೆ. ದಿನರಾತ್ರಿ ಅವನ ಸ್ವಾಗತಕ್ಕೆಂದು ಬಿಟ್ಟ ಮಂಡೆಯಲ್ಲಿ ಬೆಟ್ಟ ಬಿಟ್ಟಿಳಿಯುವಳು.
ದಕ್ಷಿಣ ಕರ್ನಾಟಕದ ಐದಾರು ಜಿಲ್ಲೆಯಲ್ಲಿ ಜನರ ಬದುಕಿನ ಭಾಗವಾಗಿರುವ ಮಂಟೇಸ್ವಾಮಿ ಮತ್ತು ಮಲೆಯ ಮಹದೇಶ್ವರ ಪರಂಪರೆಗಳು ಹನ್ನೆರಡನೆಯ ಶತಮಾನದ ಜಾತ್ಯಾತೀತ ಕಾಯಕಜೀವಿಗಳಾದ ಶರಣ ಚಳುವಳಿಯಿಂದ ಅನೇಕ ಸಂಕೇತಗಳನ್ನು ಹಾಗೂ ಆಶಯಗಳನ್ನು ಮೈಗೂಡಿಸಿಕೊಂಡಿವೆ. ಆದ್ದರಿಂದ ಸಮಕಾಲೀನವಾಗಿದ್ದುಕೊಂಡೇ ಶಿವಶರಣರೊಂದಿಗೆ ಸಂವಾದ ನಡೆಸಬಲ್ಲವು. ಧರೆಗೆ ದೊಡ್ಡವನಾದ ಮಂಟೇಸ್ವಾಮಿ ಏಳುಮಲೆ ಮಹದೇಶ್ವರನ ಜಾತ್ರೆ-ಯಾತ್ರೆಗಳು ಅಪೂರ್ವ ಕಾವ್ಯ ಕಥನಗಳು. ಇವು ಬ್ರಾಹ್ಮಣ್ಯವನ್ನು ನಿರಾಕರಿಸಿದ ನೀಲಗಾರರ ಹಾಗೂ ಕಂಸಾಳೆ ಕಲಾವಿದರ ಆಡುಂಬೊಲಗಳಾಗಿವೆ. ಒಡೆಯರ ಆಳ್ವಿಕೆಯ ಸಾಂಸ್ಕೃತಿಕ ನಗರಿ ಮೈಸೂರು ಜಾಗತಿಕವಾಗಿ ಕೀರ್ತಿ ಪಡೆದಿದೆ. ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಮಹಾದೇವರ ಮೇಲೆ ಇಂಥ ಪರಿಸರ ಪ್ರಭಾವ ಬೀರಿರುವುದರಲ್ಲಿ ಆಶ್ವರ್ಯವಿಲ್ಲ. ಜೊತೆಗೆ ಬದನವಾಳು ಗಾಂಧಿ ಗ್ರಾಮೋದ್ಯೋಗ ಕೇಂದ್ರ, ಸುತ್ತೂರು ವೀರಶೈವ ಮಹಾಮಠ ಹಾಗೂ ನಂಜನಗೂಡಿನ ಪರೀಕ್ಷೆ ವೈಭವಗಳು ಹಾಗೂ  ತಗಡೂರಿನ ಅಸ್ಪೃಶ್ಯ ವಸತಿ ಹೋರಾಟಗಳು ಸೂಕ್ಷ್ಮ ಸಂವೇದಿ ಮಹಾದೇವರ ಮನಸ್ಸನ್ನು ಕಲಕಿವೆ, ಕದಡಿವೆ, ಚಿಂತೆಗೆ ಹಚ್ಚಿವೆ.
ವಿದ್ಯಾರ್ಥಿ ದೆಸೆಯಲ್ಲಿಯೇ ಮಾದೇವ ವಿಕ್ಟರ್ ಹ್ಯೂಗೋನ ‘ಲೇ ಮಿಜರಬಲ್ಸ್’ (ದುಃಖಾರ್ತರು) ಓದಿದ್ರು. ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಕುವೆಂಪು, ಬೇಂದ್ರೆ ಗಮನ ಸೆಳೆದರು. ಹಾಗೇ ಟಾಲ್‍ಸ್ಟಾಯ್, ಷೇಕ್ಸ್ ಪಿಯರ್, ಪ್ರೇಮಚಂದ್ ಮುಂತಾದ ಲೇಖಕರ ಕೃತಿಗಳಿಗೆ ಮಾರು ಹೋದರು. ಜೊತೆಗೆ ಕನ್ನಡದ ಕಂಬಾರ, ಲಂಕೇಶ್,  ತೇಜಸ್ವಿ, ಆಲನಹಳ್ಳಿ ಕೃಷ್ಣ ಇವರೂ ಕಣ್ಣೆದುರಿಗಿದ್ದರು. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಜೀವ ಸಂಕುಲವೆಲ್ಲ ಒಂದು ಎಂದೆಂಬ ದರ್ಶನ ಅರಿವಿಗೆ ಬಂತು. ಹಾಗೇ ಪಶ್ಚಿಮದ ಮಾಕ್ರ್ವೇಜ್ ಕೂಡ ಗ್ರೇಟ್ ಅನ್ನಿಸಿತು. ಈ ಎಲ್ಲ ಪ್ರೇರಣೆ ಪ್ರಭಾವ ಇವರ ಮೇಲೆ ನಡೆದಿದೆ. ಎಂ.ಎ.(ಕನ್ನಡ) ಪದವಿ (1973) ಪಡೆದ ಆರು ವರ್ಷ ಮೊದಲೇ (1967) ಮಾದೇವ ತನ್ನ ಮೊದಲ ಕತೆ ಬರೆದಿದ್ದರು. ಅವರ ದ್ಯಾವನೂರು ಕಥಾ ಸಂಕಲನ ಬಂದದ್ದು 1973ರಲ್ಲಿ ಒಡಲಾಳ ಬರೆದಿದ್ದು 1979ರಲ್ಲಿ; ‘ಕುಸುಮಬಾಲೆ’ ಬರೆದದ್ದು 1984ರಲ್ಲಿ. ಒಡಲಾಳ ಒಂದು ಅಸ್ಪೃಶ್ಯ ಕುಟುಂಬದ ಘನ ಘೋರ ಬಡತನದ ನಿರೂಪಣೆ; ‘ಕುಸುಮಬಾಲೆ’ ನಂಜನಗೂಡಿನ ಸುತ್ತಿನ ಒಂದು ಸಾಮಾಜಿಕ ಜೀವನ ಚಿತ್ರವನ್ನು ಕಟ್ಟಿ ಕೊಡುವ ಮೂಲಕ ಇಡೀ ಇಂಡಿಯಾದ ಜಾತೀಯತೆ ಹಾಗೂ ವರ್ಗ ವೈಷಮ್ಯದ ದಾರುಣ ಸ್ಥಿತಿಯನ್ನು ಅನಾವರಣ ಮಾಡುವುದಾಗಿದೆ. ಮಾದೇವ ಬರೆಯುವ ಕಾಲ ಘಟ್ಟ ಎಂದರೆ, ಕರ್ನಾಟಕದಲ್ಲಿ ಒಂದು ವಿಶಿಷ್ಟ ಸಂಚಲನಕ್ಕೀಡಾಗಿದ್ದಿತು. ಗಾಂಧೀಜಿಯ ಅಹಿಂಸಾ ಮೌಲ್ಯ ಅಯಸ್ಕಾಂತವಾಗಿದ್ದಿತು. ಡಾ.ಅಂಬೇಡ್ಕರ್ ಆಗು ಮಾಡಿದ ಸಂವಿಧಾನ ಕೊಡ ಮಾಡಿದ ಮೀಸಲಾತಿ ಸೌಲಭ್ಯಗಳಿಂದ ಅಕ್ಷರ ಜಗತ್ತಿಗೆ ಕಣ್ಣು ತೆರೆದ ಅಸ್ಪೃಶ್ಯ ದಲಿತ ಬುಡಕಟ್ಟುಗಳ ಯುವ ಜನರು ತಮ್ಮ ಹಕ್ಕು ಹೋರಾಟಗಳೇನೆಂಬುದನ್ನು ಅರಿಯುವುದರಲ್ಲಿ ಮುಂದಾದರು. ತಮ್ಮ ಕಾಲಿಗೆ ಸಂಕೋಲೆ ಹಾಕಿದವರು ಯಾರು? ಏನು? ಏಕೆ? ಎಂಬುದನ್ನು ಇವರು ಅರ್ಥಮಾಡಿಕೊಳ್ಳಬಲ್ಲವರಾದರು. ಇದೇ ಸಂದರ್ಭದಲ್ಲಿ ಹಲವಾರು ಜನಪರ, ಪ್ರಗತಿಪರ ಸಂಘಟನೆಗಳು ರಾಜ್ಯಾದಂತ ಜನ್ಮ ತಳೆದವು. ಜಾತಿ ವಿನಾಶ ಹೋರಾಟ ವೇದಿಕೆ, ನವನಿರ್ಮಾಣ ಸಮಿತಿ, ಕಲಾವಿದ ಬರಹಗಾರರ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಹಾಗೂ ರಾಜ್ಯ ರೈತ ಸಂಘ ಜೊತೆಗೆ ದಲಿತ ಬಂಡಾಯ ಸಾಹಿತ್ಯ ಚಳುವಳಿ ಮುಂತಾದುವು ವ್ಯವಸ್ಥೆಯ ವಿರುದ್ಧ; ಜಾತೀಯತೆ, ಶೋಷಣೆ, ಭ್ರಷ್ಟಾಚಾರ ಮುಂತಾದವುಗಳ ವಿರುದ್ಧ ದೊಡ್ಡ ದನಿ ಎತ್ತಿದ್ದವು.
ಮಾದೇವ ತನ್ನ ಕಥಾಲೋಕದ ಮೂಲಕ ಕತ್ತಲ ಜಗತ್ತಿನ ಬದುಕನ್ನು ಅನಾವರಣ ಮಾಡುವ ಕಾಲಕ್ಕೆ ಇತ್ತ ಲೋಹಿಯಾರ ಸಮಾಜವಾದ, ಅತ್ತ ಕಮ್ಯೂನಿಸ್ಟ್ ಸಿದ್ಧಾಂತ ಕೈಚಾಚಿ ಕರೆಯುತ್ತಿದ್ದವು. ದಲಿತ ಸಂಘರ್ಷ ಸಮಿತಿ ಹಾಗೂ ರೈತ ಸಂಘಗಳು ಆರ್ಥಿಕ ಸಮಾನತೆಗೆ, ಸಾಮಾಜಿಕ ನ್ಯಾಯಕ್ಕೆ ದಣಿವರಿಯದೆ ಹೋರಾಡುತ್ತಿದ್ದವು. ಕರ್ನಾಟಕದ ರಾಜಕೀಯದಲ್ಲಿ ಕಂಪನವನ್ನುಂಟು ಮಾಡಿದ ಈ ಸಂಘಟನೆಗಳ ಮುಂಚೂಣಿ ನಾಯಕರೊಂದಿಗೆ ಮಾದೇವ ನಿಕಟ ಸಂಬಂಧವನ್ನೂ ಸಕ್ರಿಯ ಪಾತ್ರವನ್ನೂ ವಹಿಸಿದರು. ಶರಣರ ಸಾಮಾಜಿಕ ಚಳುವಳಿಯೊಂದಿಗೆ ವಚನ ಸಾಹಿತ್ಯ ಸೃಷ್ಟಿಯಾದಂತೆ ದಲಿತ ಸಂಘರ್ಷ ಸಮಿತಿ ಹಾಗೂ ರೈತ ಸಂಘದ ಚಳುವಳಿಯೊಂದಿಗೆ ದಲಿತ ಬಂಡಾಯ ಸಾಹಿತ್ಯವೂ ಸೃಷ್ಠಿಯಾಗುತ್ತಿತ್ತು. ನವ್ಯದ ಭರಾಟೆ ತಗ್ಗುತ್ತಿತ್ತು. ಇಂತ ಹೊತ್ತಿನಲ್ಲಿ ಕಂಬಾರ, ಲಂಕೇಶ್, ತೇಜಸ್ವಿ, ಆಲನಹಳ್ಳಿ ಸಿದ್ಧಲಿಂಗಯ್ಯ, ಮಹಾದೇವ ಇವರು ನಡೆದು ಬಂದ ದಾರಿಯ ಕಡೆಗೆ ತಿರುಗಿ ನೋಡದೆ ಬರೆಯಲು ತೊಡಗಿದರು. ದೇವನೂರರ ಕತೆಗಳು, ಕಾದಂಬರಿಗಳು ಬಂದ ಮೇಲೆ ಆ ಕುರಿತು ಕನ್ನಡ ವಿಮರ್ಶೆ ಲವಲವಿಕೆಯಿಂದ ಸ್ವಾಗತಿಸಿತು.
ಸದ್ಯ ಎಲ್ಲಾ ಕೂಡಿ ಕೇವಲ ನೂರ ಅರವತ್ತೈದು ಪುಟಗಳಷ್ಟು ಮಾತ್ರ ಕತೆ, ಕಾದಂಬರಿ ಬರೆದು ಆಧುನಿಕ ಕನ್ನಡ ಸೃಜನಶೀಲ ಸಾಹಿತ್ಯ ಪರಂಪರೆಯಲ್ಲಿ ಕುವೆಂಪು ನಂತರದ ಸ್ಥಾನದಲ್ಲಿ ನಿಲ್ಲಬಲ್ಲ ಹೆಗ್ಗಳಿಕೆ ಮಾದೇವರಲ್ಲಿ ಏನುಂಟು? ಎಂದು ಕೆಲವರು ಕರುಬುವುದುಂಟು. ಆದರೆ ವಿಚಾರ ದಕ್ಷರು ವೈಷಮ್ಯವನ್ನುಳಿದು ಪರಾಮರ್ಶಿಸಿದರೆ ಇವರು ಕರುಬುವುದಕ್ಕೆ ಕಾರಣವಿಲ್ಲ. ಇದೇ ಸಂದರ್ಭದಲ್ಲಿ ‘ಮಾದೇವ ಲೇಖನಿ ಕೆಳಗಿಡಬಾರದಿತ್ತು’ (ಅಗ್ನಿ ಶ್ರೀಧರ್) ಎಂದು ಅವರಿಂದ ಅಪೇಕ್ಷಿಸಿದ್ದುಂಟು. ಅವರ ಅಪೇಕ್ಷೆಗೆ ಸಮಾಧಾನವೆಂಬಂತೆ ಇದೀಗ ‘ಎದೆಗೆ ಬಿದ್ದ ಅಕ್ಷರ’ ಪ್ರಕಟವಾಗಿದೆ. ನನ್ನ ಎದೆಗೆ ಬಿದ್ದ ಅಕ್ಷರದಿಂದ ಮೊದಲು ಎಚ್ಚರಗೊಂಡ ದೇವನೂರಿನ ಈ ಮುಂಗೊಳಿ ಅರುಣೋದಯವಾಗುತ್ತಿದೆ. “ಏಳಿ, ಎಚ್ಚರಗೊಳ್ಳಿ ನಡೆ, ಗುರಿ ಮುಟ್ಟುವ ತನಕ’ ಎಂದು ತಲೆ ಎತ್ತಿ ಕೂಗಿ ಕರೆಯುತ್ತಿದೆ. ಇದು ಶೋಷಕ ನವ ಸಾಮ್ರಾಜ್ಯಶಾಹಿ  ಶಕ್ತಿಗಳ ವಿರುದ್ಧ ಹಾಗೂ ಇಂಡಿಯಾದ ಹಿಂಸಾ ರಭಸಮತಿ ಕೋಮುವಾದಿಗಳ ವಿರುದ್ಧ ಒಟ್ಟಿಗೆ ತಣ್ಣಗೆ ಮುಖಾಮುಖಿಯಾಗುವ ಶಕ್ತಿಯನ್ನು ಹೊಂದಿದೆ. “ಎಲ್ಲ ಮಲಗಿರುವಾಗ ದೊಂಗಲುನ್ನಾರು ಜಾಗ್ರತ” ಎಂದು ಮತ್ತೊಂದು ರೆನೆಸಾನ್ಸ್ಗೆ   ಕರೆ ಕೊಡುತ್ತಿದೆ.
ಈ ಮುಂಗೋಳಿ ಮಾದೇವ ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಅಲ್ಲಿ ಇಲ್ಲಿ ಭಾಷಣ ಮಾಡಿದ ಹಾಗೂ ಬರೆದ ಲೇಖನಗಳನ್ನು ಏಳು ವರ್ಗಗಳಲ್ಲಿ ವಿಂಗಡಿಸಿ ಸಂಗ್ರಹಿಸಲಾಗಿದೆ. ಇಲ್ಲಿ ಇದು ಬಿಡುಗಡೆಯಾದ ಮೇಲೆ ನಾಡಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಸಾಕಷ್ಟು ಸಂಚಲನವನ್ನುಂಟು ಮಾಡಿದೆ. ಹಲವರಿಗೆ ಎದೆ ತುಂಬುವ ಹಾಡಾಗಿ ಕಂಡರೆ, ಒಬ್ಬಿಬ್ಬರಿಗೆ ಆತ್ಮವಂಚನೆಯ ಪಾಡಾಗಿ ಕಂಡಿದೆ; ಮತ್ತೆ ಕೆಲವರಿಗೆ ಮಾಯಕಾರ ಮಾದೇವನ ಆಟವೆಂಬಂತೆಯೂ ಪರಿಣಮಿಸಿದೆ. ಹಾಗೆ ನೋಡಿದರೆ 328 ಪುಟಗಳ ಈ ಕೃತಿ ಮಹಾದೇವರ ಸೃಜನಶೀಲ ಕತೆಯಲ್ಲ, ಕಾದಂಬರಿಯಲ್ಲ, ಆದರೆ ಇನ್ನೊಂದರ್ಥದಲ್ಲಿ ಇದು ಸೃಜನಶೀಲ ಅಲ್ಲ ಎಂದರೆ ಮತ್ತಾವುದು ಸೃಜನಶೀಲ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಎಂದರೆ ಸೃಜನಶೀಲ ಸಾಹಿತ್ಯದ ಮಾನದಂಡಗಳೇ ಈಗ ಬದಲಾಗಬೇಕಾಗಿದೆ. ಯಾಕೆಂದರೆ ಮಾದೇವರ ಸ್ವಾಗತ ಇರಲಿ, ಅಥವಾ ನಮ್ಮನ್ನು ಉದ್ದೇಶಿಸಿ ಮಾತನಾಡುವುದಾಗಲಿ, ಅದು ಕುಮಾರವ್ಯಾಸನಂತೆ ಕೇವಲ ರೂಪಕಾತ್ಮಕ ಶೈಲಿಯೇ. ದೊಡ್ಡ ಕವಿ ಯಾವತ್ತೂ ರೂಪಕದಲ್ಲಿ ಮಾತನಾಡುವುದು ಎಂಬ ಮಾತಿದೆ. ಅದಕ್ಕೆ ಇಲ್ಲಿರುವ ಯಾವ ಬರಹ ಖಂಡವನ್ನಾದರೂ ಪರಾಂಬರಿಸಬಹುದು.

ಉದಾಹರಣೆಗೆ ದೇವರನ್ನು ಕುರಿತು
ದೇವರ ಸ್ವರೂಪವನ್ನು ಕುರಿತು ಶಾಸ್ತ್ರಾಗಮ ಪುರಾಣಗಳೆಲ್ಲ ತೌಡುಕುಟ್ಟಿ ಹೇಳಿಕೋ ತಿರುವಾಗ ಮಾದೇವ ‘ಮನೆ ಮಂಚಮ್ಮ’ ಎಂಬ ಒಂದು ಪುಟ್ಟ ರೂಪಕದಲ್ಲಿ ಮನ ಮುಟ್ಟಿಸಿ ಹೇಳುತ್ತಾರೆ. ಹಾಗಾದರೆ ದೇವರು ಎಂದರೇನು? ದೇವರು ಎಂದರೆ ನಮ್ಮ ಅಳತೆಯ ದೇವರೇ. ಮಾದೇವ ಅದನ್ನು ಹೀಗೆ ಅಂದಾಜಿಸಿ ಹೇಳುತ್ತಾರೆ. ಒಂದೂರಿನಲ್ಲಿ ಮಾರಿ ಗುಡಿ ಕಟ್ಟಲು ಆರಂಭಿಸುತ್ತಾರೆ. ಆಗ ಆ ದೇವತೆ ಒಬ್ಬನ ಮೈ ಮೇಲೆ ಬಂದು ‘ನಿಮಗೆಲ್ಲಾ ಮನೆ ಉಂಟ ಮಕ್ಕಳಾ?’ಎಂದು ಕೇಳುತ್ತಾಳೆ.‘ಇಲ್ಲ ತಾಯಿ’ ಎನ್ನುತ್ತಾರೆ ಭಕ್ತರು.‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’ ಎಂದ ಅವಳು ಮನೆ ಮಂಚಮ್ಮ  ಎಂದು ಕರೆಸಿಕೊಳ್ಳುತ್ತಾಳೆ. ಹಾಗೇ ಆಕ್ರಮ ಗಣಿಗಾರಿಕೆಯ ಹಣದಿಂದ ಜನಾರ್ಧನ ರೆಡ್ಡಿ (ಈಗ ಚಂಚಲಗುಡ್ಡ ಜೈಲು ನಿವಾಸಿ) 45 ಕೋಟಿ ರೂಪಾಯಿಯ ವಜ್ರದ ಕಿರೀಟ ಮಾಡಿಸಿ ತಿರುಪತಿ ತಿಮ್ಮಪ್ಪನಿಗೆ ಇಡಲು ಹೋದಾಗ, ಆ ದೈವ ಸಂಡೂರು ಗಣಿಗಳಲ್ಲಿ ದುಡಿದ ನನ್ನ ಮಕ್ಕಳು ಆಧೋಲೋಕದ ಪ್ರಜೆಗಳಂತಿದ್ದಾರೆ. ನನಗೇಕೆ ವಜ್ರದ ಕಿರೀಟ ಎಂದು ಯಾರ ಮೈಮೇಲಾದರು ಒಂದು ಹೇಳಲಿಲ್ಲ ಏಕೆ?ಮನೆಗೆ ಮಂಚಮ್ಮನ ಮಾತಿನೊಂದಿಗೆ ಈ ಸಂಗತಿಯನ್ನು ಹೋಲಿಸಿದರೆ ಮಾದೇವರ ಸಾಮಾಜಿಕ ನ್ಯಾಯ ಪರಿಕಲ್ಪನೆ ಏನೆಂಬುದು ಅರ್ಥವಾದೀತು.
ಅಂತರಂಗದಿಂದ ಬಹಿರಂಗಕ್ಕೆ ಮಂದ್ರ ಸ್ವರದಲ್ಲಿ ಸಾಗಿಬರುತ್ತಿರುವ ಲೋಕ ಚಿಂತನೆಯ ಅನುಭಾವಗಳನ್ನು ಮಾದೇವ ಏಳು ಬಗೆಯಲ್ಲಿ ವಿಂಗಡಿಸಿದ್ದಾರೆ.ಮನವ ಕಾಡುತಿದೆ, ಒಳನೋಟ, ಮತಾಂದರ ಮೆದುಳೊಳಗೆ, ಹೀಗೇ ಮುಂದುವರಿದರೆ, ಮುತ್ತು ಮುಳುಗ ಮತ್ತು ಇತರ, ಮುಖಾಮುಖಿ ಹಾಗೂ ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ ಈ ಬಂದೊಂದರಲ್ಲೂ ನುಡಿಸಿಟ್ಟ ವೀಣೆಯ ಹಲವಾರು ಸ್ವರ ವಿನ್ಯಾಸಗಳು ಸಾಕರಗೊಂಡಿವೆ. ಈ ಎಲ್ಲವುಗಳಲ್ಲಿ ಕೇಳಿ ಬರುತ್ತಿರುವುದಾದರೂ ಏನು? ‘ಸಂಬಂದ ಅನ್ನೋದು ದೊಡ್ಡದು ಕನಾ’ ಎಂಬ ಒಂದೇ ಜೀವ ಕಾರುಣ್ಯದ ಸಮಕೆಯ ದನಿ.ಇದು ಮಾದೇವರ ಒಟ್ಟು ಸಾಹಿತ್ಯದ ಸಂದೇಶವೂ ಕೂಡ.
ಇವರ ಮನವ ಕಾಡುವ ಸಂಗತಿಗಳಲ್ಲಿ ಮೊದಲಿಗೆ ದೇವರು.ಛಾವಣಿ ಇಲ್ಲದ ಮನೆ ಮಂಚಮ್ಮನ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಮಾದೇವನ ದೇವರಾಯಿತು. ಈ ದೇವರು ಧರ್ಮದ ಮೇಲ್ಮೆಯ ಕಾರಣಕ್ಕಾಗಿ ಜಾಗತಿಕ ಸಮರಗಳು ಜರುಗುತ್ತವೆ. ಮಂದಿರ, ಮಸೀದಿ, ಗುಡಿ ಚರ್ಚುಗಳ ಬಿಟ್ಟು ಜನ ಈಚೆ ಬರುತ್ತಿಲ್ಲ. ಅದಕ್ಕಾಗಿ ಜೆಹಾದ್‍ಗಳು, ಕ್ರುಸೇಡ್‍ಗಳು; ನೆಲದಲ್ಲಿ ಎಲ್ಲಿ ನೀಡಿದರೂ ನೆತ್ತರ ಚಿತ್ತಾರಗಳು! ಇಂತಲ್ಲಿ ಮಾದೇವರ ದೇವರು ಎಷ್ಟು ಸರಳ?ಎಷ್ಟು ಸುಂದರ?ದೃಷ್ಟಿಯಂತೆ ಸೃಷ್ಟಿ. ದೇವರು ನಮ್ಮನ್ನು ಸೃಷ್ಟಿಸಿದ?ಗೊತ್ತಿಲ್ಲ. ಆದರೆ ದೇವರಿಲ್ಲ. ಎನ್ನುವುದೇಕೆ?ಸಮಾಜದ ಸ್ವಾಸ್ಥ್ಯಕ್ಕೆ ಅವರವರ ಅಳತೆಯ ದೇವರು ಸಾಲದೆ?ಇದು ಮಾದೇವರ ಸಾಂತ್ವನ ಧ್ವನಿ.
ಮಾದೇವರ ಮನವ ಕಾಡುವ ಇನ್ನೊಂದು ಸಂಗತಿಯೆಂದರೆ ಲೋಕದ ಹಸಿವು, ದಾರಿದ್ರ್ಯ, ಬಡತನ. ಇದು ಒಂದು ದೇಶದ, ಒಂದು ಜನಾಂಗದ, ಒಂದು ಕಾಲದ ಪ್ರಶ್ನೆಯಲ್ಲ. ಹಸಿವು ದಾರಿದ್ರ್ಯಕ್ಕೆ ಜಾತಿ, ಜನಾಂಗ, ದೇಶ ಕಾಲಗಳೆಂಬ ಗಡಿ ಸೀಮೆಗಳಿಲ್ಲ. ಅದು ಭೂ ಮಂಡಲದ ಯಾವ ಮೂಲೆಯಲ್ಲಿದ್ದರು ಮಾದೇವರ ನಿದ್ದೆ ಕೆಡಿಸುತ್ತದೆ.ಅವರ ಮಾತಿನಲ್ಲೇ ಕೇಳುವುದಾದರೆ; ‘ದಿನ ಸವೆಯುತ್ತದೆ, ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಧಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ? ತನ್ನ ಸುಖ ಲೋಕ ಸುಖ. ತನ್ನ ಕಷ್ಟ ಲೋಕ ಕಷ್ಟ ಎಂದು ಅಲವತ್ತು ಬೀಳುವ ಜನರೇ ನಮ್ಮ ಸುತ್ತ ತುಂಬಿರುವಾಗ ಮಾದೇವರಂತೆ ಲೋಕ ಕಷ್ಟ ತನ್ನ ಕಷ್ಟ ಎಂದು ನಿದ್ದೆಗೆಡುವ ಮಂದಿ ಎಷ್ಟಿದ್ದಾರು? ಬುದ್ಧ, ಏಸು, ಬಸವ, ಗಾಂಧಿ, ಪರಮಹಂಸ, ವಿವೇಕಾನಂದ ನಮ್ಮ ನೆಲದ ಪಂಪ, ಕುಮಾರವ್ಯಾಸ, ಕುವೆಂಪು ಬೇಂದ್ರೆ ಇವರೆಲ್ಲ ನಮ್ಮ ಪುಣ್ಯದಂತೆ ಕಾಣಿಸುತ್ತದೆ. ಸಕಲ ಜೀವಿಗಳಿಗೆ ಲೇಸ ಬಯಸುವುದೇ ಧರ್ಮ ಎಂದರು ಬಸವಣ್ಣ. ಈ ಜೀವ ಕಾರುಣ್ಯದ ಮಾತನ್ನು ಅದಕ್ಕೂ ಪೂರ್ವದಲ್ಲೇ ಬುದ್ಧ ಹೇಳಿದ್ದಾ, ಆದರೂ ಇದು ಮೂರ್ಚಾ ವ್ಯವಸ್ಥೆಯಲ್ಲಿಯೇ ಇದೆ. ಅದನ್ನು ನಾವೀಗ ಎಚ್ಚರಗಿಳಿಸಬೇಕು ಎನ್ನುತ್ತಾರೆ ಮಾದೇವ.
ಜಾತೀಯತೆ ಎಂಬುದು ಸನಾತನ ಭಾರತಕ್ಕೆ ಹಿಡಿದ ಗೆದ್ದಲು. ಅದು ತನ್ನ ಸುತ್ತ ಹುತ್ತ ಕಟ್ಟಿಕೊಳ್ಳುತ್ತಲೆ ಇದೆ. ಆ ಹುತ್ತದಲ್ಲಿ ಆಧುನಿಕ ಸ್ವಾರ್ಥ ಹಿತಾಸಕ್ತಿಗಳು ನಿಧಿ ಕಾಯುವ ಸರ್ಪದಂತೆ ಕಾಯುತ್ತಲೇ ಇವೆ. ಸಮಯ ಸಿಕ್ಕಾಗಲೆಲ್ಲಾ ಬಿಲ ಹೊಕ್ಕ ಹಾವುಗಳು ಹೆಡೆ ಎತ್ತಿ ಸಾಮಾಜಿಕ ನ್ಯಾಯಕ್ಕೆ ಇಲ್ಲಿ ಅಡ್ಡಪಡಿಸುತ್ತಲೇ ಇವೆ. ಮಾದೇವ ಇದನ್ನು ಕಠೋರ ರೀತಿಯಲ್ಲಿ ವಿರೋಧಿಸುತ್ತಾರೆ. ಹಿಂದೆ ಒಂದು ಸಂದರ್ಶನದಲ್ಲಿ ‘ಜಾತಿ ಎಂಬುದು ಮಿದುಳಿಗೆ ಬದಲು ಸವರ್ಣೀಯರು ತಮ್ಮ ತಲೆ ಒಳಗೆ ತುಂಬಿಕೊಂಡಿರುವ ಮಲ. ಮೊದಲು ಇದನ್ನು ಅವರಿಗೆ ಅರಿವಾಗಿಸಬೇಕು. ಆಮೇಲೆ ಆಸ್ತಿ ಸಂಬಂಧಿಸಿ ಮಿಳಿತವಾಗಿರುವ ಜಾತತ್ವ ತೆಗೆಯುವ ಕಡೆ ಹೋರಾಡಬೇಕು ಎಂದರು (ಯಾರ ಜಪ್ತಿಗೂ ಸಿಗದ ನವಿಲುಗಳು. ಪು-186) ಇಂದಿಗೂ ಜಾತೀಯತೆಯ ಕೊಳಕು ತೊಡೆದು ಹೋಗುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಒಂದು ಸ್ಪಷ್ಟ ನಿದರ್ಶನ ಇತ್ತೀಚೆಗೆ ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಎಂಬ ಇಬ್ಬರು ಸಮಾಜ ವಿಜ್ಞಾನ ಸಂಶೋಧಕರು ವಚನ ಚಳುವಳಿ ಕುರಿತ ತಮ್ಮ ಸಂಶೋಧನೆಯ ಫಲಿತಗಳನ್ನು ಮಂಡಿಸುತ್ತಾ ‘ಜಾತಿ ಪದ್ಧತಿ ಎಂಬುದು ನಮ್ಮ ಸಮಾಜದ ಲಕ್ಷಣವಲ್ಲ. ಇದು  ಬ್ರಿಟಿಷ್ ವಸಾಹತು ಹುಟ್ಟು ಹಾಕಿದ ತಪ್ಪು ಕಲ್ಪನೆ, ಕೇವಲ ಕಣ್ಕಟ್ಟು’ ಎಂದಿದ್ದಾರೆ. ಇದರ ಹಿಂದಿರುವ ಸವರ್ಣೀಯ ಹುನ್ನಾರ ಏನೆಂಬುದ್ನು ಅರಿತ ಡಾ.ಕೆ.ವೈ.ನಾರಾಯಣಸ್ವಾಮಿಯವರು ‘ಕಣ್ಣ ಗಾಯವನು ಅರಿಯಲುಬಾರದು’ ಎಂದು ತಮ್ಮ ಕಳಕಳಿಯನ್ನು ವ್ಯಕ್ತಪಡಿಸುತ್ತಾ (ಪ್ರಜಾವಾಣಿ: ಸಂಗತ 28 ಮಾರ್ಚ್ 2013) ಅವರು ನೀಡಿರುವ ಮೂರು ಕಾರಣಗಳು ಹೀಗಿವೆ; ಮೊದಲನೆಯದಾಗಿ, ವಚನ ಸಾಹಿತ್ಯದ ಅಧ್ಯಯನದಿಂದ ಮೇಲ್ಜಾತಿಯವರಲ್ಲಿ ಜಾತಿ ತಿರಸ್ಕಾರ ಕಾಣಿಸಿಕೊಂಡರೆ, ಕೆಳಜಾತಿಗಳಲ್ಲಿ ಅವಮಾನಗಳನ್ನು ದಾಟುವ ಆತ್ಮವಿಶ್ವಾಸಕ್ಕೆ ಕಾರಣವಾಗುತ್ತದೆ. ಆದ್ದರಿಂದ ಜಾತಿ ವಿರೋಧದ ಚೈತನ್ಯವನ್ನು ಕುಗ್ಗಿಸಬಹುದು; ಎರಡನೆಯದಾಗಿ ವಚನ ಸಾಹಿತ್ಯದ ಓದು ಮೀಸಲಾತಿಯನ್ನು ಒಪ್ಪುವ ಮನಃಸ್ಥಿತಿಯನ್ನು ಮೇಲ್ಜಾತಿಗಳವರಿಗೆ ಉಂಟು ಮಾಡುತ್ತದೆ. ಆದರೆ ಭಾರತದ ಮುನ್ನೆಡೆಗೆ ಈ ಮೀಸಲಾತಿ ಮತ್ತು ಭ್ರಷ್ಟಚಾರಗಳೇ ಕಂಟಕವಾಗಿದೆ. ಆದ್ದರಿಂದ ಮೀಸಲಾತಿಗೆ ಅಡ್ಡಗಾಲು ಹಾಕುವುದಾಗಿದೆ. ಇನ್ನೂ ಮೂರನೆಯದಾಗಿ ಇಲ್ಲಿರುವ ಇನ್ನೂ ದೂರಗಾಮಿ ದೃಷ್ಟಿ ಏನೆಂದರೆ ಎಲ್ಲ ಜಾತಿಗಳಲ್ಲೂ ಬಡವರಿದ್ದಾರೆ. ಬ್ರಾಹ್ಮಣರಲ್ಲೂ ಬಡವರಿಲ್ಲವೆ? ಆದ್ದರಿಂದ ಅವರಿಗೂ ರಾಷ್ಟ್ರೀಯ ಸಂಪನ್ಮೂಲದಲ್ಲಿ ಪಾಲು ಪಡೆಯುವ ಅವಕಾಶ ಸಿಗಲಿ ಎಂಬುದು. ಆದ್ದರಿಂದ ವಚನ ಸಾಹಿತ್ಯದ ಅಧ್ಯಯನವನ್ನೇ ಮೇಲಿನ ಸವರ್ಣೀಯ ಸಂಶೋಧಕರು ಅಪ್ರಸ್ತುತಗೊಳಿಸುತ್ತಿದ್ದಾರೆಂಬ ಕೆ.ವೈ.ಎನ್. ಅವರ ವಿವೇಕ ಸಾಧರವಾಗಿದೆ. ಮಾದೇವ ಅವರು ಹೇಳಿದಂತೆ ಸವರ್ಣೀಯರು ತಮ್ಮ ತಲೆಯೊಳಗೆ ತುಂಬಿಕೊಂಡಿರುವ ‘ಮಲ’ವನ್ನು ನಿವಾರಿಸುವುದು ಹೇಗೆ?
ವಚನ ಚಳುವಳಿಯ ಬಗ್ಗೆ ಮಹಾದೇವ ಅವರು ಹೇಳುವುದು ಕೂಡ ಇದನ್ನೇ. ವಚನಕಾರರು ಮೊದಲು ವರ್ಣವನ್ನು ವಿರೋಧಿಸಿ ಅವರ್ಣೀಕರಿಸಿದರು; ಎರಡನೆಯದಾಗಿ ದೇವಸ್ಥಾನವನ್ನು ನಿರಾಕರಿಸಿದರು, ಮೂರನೆಯದಾಗಿ ಲಿಂಗ ಸಮಾನತೆಯನ್ನು ಸಾಧಿಸಿದರು, ನಾಲ್ಕನೆಯದಾಗಿ ಜಾತಿ ಪ್ರಶ್ನೆಯನ್ನು ಅಪ್ರಸ್ತುತಗೊಳಿಸಿದರು, ಐದನೆಯದಾಗಿ ಮೋಕ್ಷಕ್ಕೆ ತಪಸ್ಸು ಮಾಡಬೇಕು, ಕಾಡಿಗೆ ಹೋಗಬೇಕು ಎಂಬುದನ್ನು ಒಪ್ಪಲಿಲ್ಲ; ಒಳ್ಳೇದು ಕೆಟ್ಟದ್ದು ಎಂಬುದಿಲ್ಲ. ಪವಿತ್ರರ ಅಪವಿತ್ರ ಎಂಬುದಿಲ್ಲ; ಮುಟ್ಟು ಮೈಲಿಗೆ ಇಲ್ಲ; ಇಬ್ಬರು ಹೆಂಡಿರೊಂದಿಗೆ ಸಂಸಾರ ನಡೆಸಿಯೂ ನೈತಿಕತೆಯನ್ನು ಕಾಪಾಡಿಕೊಳ್ಳಬಹುದು. ವಚನಗಳು ಕಾವ್ಯ ಆಯಿತು. ಬೇರೆ ಧರ್ಮಗಳಲ್ಲಿದ್ದಂತೆ ಇಲ್ಲಿ ಒಬ್ಬ ಪ್ರವಾದಿ ಇಲ್ಲ, ಎಲ್ಲರೂ ಸಮಾನರು. ಹೀಗೆ ಸಮತಾವಾದವನ್ನು, ಸಮಾಜವಾದವನ್ನು ಆ ಹೊತ್ತಿಗೆ ಬದುಕಿ ತೋರಿಸಿದರು. ವಿಷಾದವೆಂದರೆ ಈ ಪರಿಯ ವಚನ ಮೌಲ್ಯಗಳನ್ನು ವೀರಶೈವರು ಮತ್ತು ಇತರ ಸವರ್ಣಿಯರು ಸೇರಿಯೇ ಇಂದು ಅಪಮೌಲ್ಯಗೊಳಸುತ್ತಿರುವುದು. ಸಂಶೋಧಕ ಸಮಾಜ ವಿಜ್ಞಾನಿ ಬಾಲಗಂಗಾಧರ ಅಪ್ರಬುದ್ಧ ಮಾತುಗಳೇ ಇದಕ್ಕೆ ಸಾಕ್ಷಿ.
ಅಸ್ಪೃಶ್ಯನಾಗುವುದೆಂದರೆ ಮಾದೇವರಿಗೆ ಹಿಂಜರಿಕೆ ಏನಿಲ್ಲ. ಕಮೋಡ್ ಕ್ಲೀನ್ ಮಾಡುವಾಗ, ಡ್ರೈನೇಜ್ ಮ್ಯಾನ್ ಹೋಲ್‍ಗಳಿಗೆ ಇಳಿವಾಗ ಪೌರ ಕಾರ್ಮಿಕರ ಮನಸ್ಥಿತಿ ಹೇಗಿರುತ್ತದೆಂಬುದಕ್ಕೆ ಅನುಭವಕ್ಕೆ ತಂದುಕೊಂಡರಾಯಿತು ಎನ್ನುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಗಾಂಧೀಜಿ ಮತ್ತು ಅವರ ಹೆಂಡತಿ ಕಸ್ತೂರಿಬಾ ಮನೆಯಲ್ಲಿ ತಂಗುತ್ತಿದ್ದ ಅತಿಥಿಗಳ ಮಲಮೂತ್ರ ತುಂಬಿದ ಮಡಕೆಗಳನ್ನು ಖುದ್ದಾಗಿ ಹೊರಚೆಲ್ಲಿ ಸ್ವಚ್ಛಮಾಡುತ್ತಿದ್ದರಂತೆ. ತನ್ನ ಆತ್ಮಚರಿತ್ರೆಯಲ್ಲಿ ಗಾಂಧೀಜಿ ಇದನ್ನು ದಾಖಲಿಸಿದ್ದಾರೆ. ಆದ್ದರಿಂದ ನಮ್ಮ ಸಮಾಜದ ಸ್ವಾಸ್ಥ್ಯಕ್ಕೆ ಮುಖ್ಯವಾಗಿ ಮೊದಲು ಆಗಬೇಕಾದುದು ದಲಿತರ ಕೀಳು ಹುಚ್ಚಿನಿಂದ, ಸವರ್ಣೀಯರು ‘ಮೇಲು ಹುಚ್ಚಿ’ನಿಂದ ವಿಮೋಚನೆ ಆಗಬೇಕು ಎಂಬುದು ಮಹಾದೇವರ ಸಲಹೆ. ಒಂದು ಧರ್ಮದಲ್ಲಿ ಧರ್ಮ ಉಂಟೋ ಇಲ್ಲವೋ ಎಂಬ ಅಳತೆಯನ್ನು ಅಹಿಂಸೆ ಮತ್ತು ಐಕ್ಯತೆಯಿಂದ ಅಳೆಯಬೇಕು ಇದು ಮಾದೇವ ಅಹಿಂಸೆಯನ್ನು ಹುಡುಕುವ ಪರಿ.

ದಲಿತ ಚಳುವಳಿ ಬಗ್ಗೆ
ಮಾದೇವರ ಪ್ರಕಾರ ದಲಿತ ಎಂದರೆ ಅಸ್ಪೃಶ್ಯರೊಂದಿಗೆ ಇತರೆ ಅವಮಾನಿತರನ್ನೂ ಒಳಗೊಳ್ಳಬಹುದು. ದಲಿತರು ಎಂದರೆ ಬಡವರು, ಸಾಂಸ್ಕೃತಿಕ ತುಳಿತಕ್ಕೆ ಸಿಕ್ಕಿಯೂ ಆ ಅರಿವಿಲ್ಲದವರು ನಮ್ಗೂ ಓಟ್ ಕಾರ್ಡ್ ಕೊಡ್ಸಿ ಸ್ವಾಮಿ ಎಂದು ಅಲವತ್ತು ಬೀಳುವ ಅಲೆಮಾರಿಗಳಿದ್ದಾರೆ.
ಕರ್ನಾಟಕ ಅಲೆಮಾರಿ ಮಹಾಸಭಾದ ಅಧ್ಯಕ್ಷ ಡಾ.ಬಾಲಗುರುಮೂರ್ತಿಯವರು ಹೇಳುವಂತೆ ಇಂತವರ ಸಂಖ್ಯೆ ದೇಶದಲ್ಲಿ 14 ಕೋಟಿಯಷ್ಟಿದೆ. ಇವರಿಗೆಲ್ಲಾ ಇನ್ನೂ ಓಟಿನ ಸ್ವಾತಂತ್ರ್ಯವೇ ಸಿಕ್ಕಿಲ್ಲ ಎಂದ ಮೇಲೆ, ಸ್ವಾತಂತ್ರ್ಯ ಎಂಬುದು ಯಾರಿಗೆ ಬಂದಿದೆ? ಮತ್ತು ಹೇಗೆ ಬಂದಿದೆ? ಎಂದು ಕೇಳಬೇಕಾಗುತ್ತದೆ. ಮಾದೇವರ ಮನವ ಕಾಡುವ ವಿಚಾರ ಇಂಥಹ ಘನತೆಯನ್ನು ಕುರಿತದ್ದು. ಪಿ.ಸಾಯಿನಾಥ ಅವರ “ಬರ ಅಂದ್ರೆ ಎಲ್ಲರಿಗೂ ಇಷ್ಟ”(Everybody loves good drought ಕನ್ನಡಕ್ಕೆ -ಜಿ.ಎನ್.ಮೋಹನ್) ಎಂಬ ಪುಸ್ತಕ ಮೇಲಿನ ಮಾತುಗಳಿಗೆ ಸ್ಪಷ್ಟ ದಾಖಲೆಗಳನ್ನು ಒದಗಿಸುತ್ತದೆ. ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಜಾರ್‍ಖಂಡ್ ಮುಂತಾದ ರಾಜ್ಯಗಳಲ್ಲಿ ಬುಡಕಟ್ಟು ಜನರ ಬದುಕಿನ ದಾರುಣ ಸ್ಥಿತಿಯನ್ನು ನಾವಿಲ್ಲಿ ಲಕ್ಷಿಸಬಹುದು. ದೇವನೂರ ಮಹಾದೇವರ ಕಲ್ಪನೆಗೂ ಮೀರಿದ ದಲಿತ್ ಸ್ಥಿತಿ ಈ ಬುಡಕಟ್ಟು ಜನರದಾಗಿದೆ.ಆದರೆ ದೇಶಾದ್ಯಂತ ಇರುವ ದಲಿತ ಸಂಘಟನೆಗಳು ಇಂಥವರ ಪುರೋಭಿವೃದ್ಧಿಯನ್ನು ಮರೆತು ಅಂಬೇಡ್ಕರ್ ಪ್ರತಿಮೆಗೆ ಎತ್ತಿ ನಿವಾಳಿಸಿ ಒಗೆದ ಈಡುಗಾಯಿ  ಚೂರುಗಳಂತೆ ಪುಡಿ ಪುಡಿಯಾಗುತ್ತಿವೆ. ಇಂತಲ್ಲಿ ದಲಿತ ಸಂಘರ್ಷ ಸಮಿತಿಯು ‘ಬುದ್ಧನೆಡೆಗೆ ಮರಳಿ ಮನೆಗೆ’ ಎಂದು ಇತ್ತು. ಬೌದ್ಧ ಧರ್ಮಕ್ಕೆ ಸೇರಬೇಕೆ? ಬೇಡವೇ? ಎಂಬ ಚರ್ಚೆ ಮಾಡುತ್ತಿರುವುದು ಅನಗತ್ಯ. ಈಗ ದಸಂಸ ಮಾಡಬೇಕಾದ ಕೆಲಸವೆಂದರೆ ತನ್ನೊಡನೆ ಎಲ್ಲಾ ಬಣಗಳನ್ನು ಸೇರಿಸಿಕೊಂಡು ‘ಬುದ್ಧ ವಿಹಾರ’ ಸ್ಥಾಪಿಸಬೇಕಾಗಿದೆ ಎನ್ನುವರು ಅವರು.

ಕಾವ್ಯದ ಉಗಮ
ಮಾದೇವ ಅವರಿಗೆ ಕಾವ್ಯ ಹುಟ್ಟುವ ಬಗ್ಗೆ ಕುತೂಹಲ. ತಾಯಿ ಗರ್ಭದೊಳಗಿರುವ ಶಿಶು ತನ್ನ ತಾಯಿ ಮಾತಿನ ಭಾವಕ್ಕೆ ಸ್ಪಂದಿಸುತ್ತದೆ ಎಂಬುದು ಇತ್ತೀಚಿನ ಸಂಶೋಧನೆ. ಆಗ ತಾನೇ ಹುಟ್ಟುವ ಕಾವ್ಯದೊಳಗೂ ಜೀವಾಡುವ ರೀತಿ ಹೀಗೇ ಇರಬಹುದೇ? ಎಂಬುದು ಇವರ ಅನಿಸಿಕೆ. ಮಹಾಭಾರತದಲ್ಲಿ ಇದಕ್ಕೆ ಸಂವಾದಿಯಾದ ಒಂದು ಪ್ರಸಂಗ ಇದೆ. ಕೃಷ್ಣಾ ತನ್ನ ಗರ್ಭಿಣಿ ತಂಗಿ ಸುಭದ್ರೆಯನ್ನು ರಥದಲ್ಲಿ ಕೂರಿಸಿಕೊಂಡು ದ್ವಾರಕೆಗೆ ಹೊರಟಿದ್ದ. ತಂಗಿಗೆ ಬೇಸರ ಕಳೆಯಲೆಂದು ಯಾವುದೋ ಒಂದು ಯುದ್ಧವರ್ಣನೆ ಮಾಡುತ್ತಿದ್ದನಂತೆ. ಯುದ್ಧ ಎಂದರೆ ಹೆಣ್ಣು ಮಕ್ಕಳಿಗೆ ಆಗದು. ಮತ್ತು ಪ್ರಯಾಣದ ಆಯಾಸ ಬೇರೆ ಸುಭದ್ರೆಗೆ ತೂಕಡಿಕೆ, ನಿದ್ದೆ ಹೋದಳು ಆದರೆ ಕೃಷ್ಣ ಮಾಮನ ಕತೆಗೆ ಅವಳ ಗರ್ಭದೊಳಗಣ ಶಿಶು (ಅಭಿಮನ್ಯು) ಹೂಗುಟ್ಟುತ್ತಿತ್ತಂತೆ.
‘ಸಂಬಂಧ ಅನ್ನೋದು ದೊಡ್ಡದು ಕನಾ’ ಎಂದು ಮಂತ್ರ ಜಪಿಸುವ ಮಾಟಗಾರ ಮಾದೇವ. ಇವರ ಮನುಷ್ಯ ಸಂಬಂಧದ ಚಿಂತನೆಯು  ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಆದಿಕವಿ ಪಂಪನ ಹಾಗೂ ‘ಮನುಜ ಮತ ವಿಶ್ವಪಥ’ ಎಂದ ಆಧುನಿಕ ಕವಿ ಕುವೆಂಪು ಜಾತಿಯದು. ಮಾನವಶಾಸ್ತ್ರ, ಶರೀರಶಾಸ್ತ್ರಗಳ ಸಂಶೋಧನೆಗಳ ಪ್ರಕಾರ ಪ್ರತಿಯೊಂದು ಜಾತಿ ಜನಾಂಗವೂ ಸಾಕರಗೊಂಡಿದೆ. ಆದ್ದರಿಂದ No race in Pure. ಜರ್ಮನಿಯ ನಾಯಿಗಳಾಗಲಿ, ಇಂಡಿಯಾದ ಚಿತ್ಪಾವನ ಬ್ರಾಹ್ಮಣರಾಗಲಿ ಇಸ್ತೇಲಿಸ್ ಯೆಹೂದಿಗಳಾಗಲಿ ‘ನಾವು ಕುಲೋತ್ತಮರು’ ಎಂದು ಹೇಳುವುದು ಕೇವಲ ಭ್ರಮೆ. ಸೂರ್ಯವಂಶ, ಚಂದ್ರವಂಶಗಳೆಂಬ ವಂಶ ಶ್ರೇಷ್ಠತೆಯೇ ಮನುಕುಲದ ಮಾರಣ ಹೋಮಕ್ಕೆ ಕಾರಣವಾದ ಯುದ್ಧಗಳನ್ನು ಹುಟ್ಟು ಹಾಕಿತು. ಮತಾಂಧ ಪುರೋಹಿತರ ಮತ್ತು ಇಳಾಧಿಪತಿಗಳ ಶ್ರೇಷ್ಠತೆಯ ವ್ಯಸನಕ್ಕೆ ಇತಿಮಿತಿ ಇಲ್ಲ. ಇದನ್ನೇ ಮಹಾಕಾವ್ಯಗಳು ಹಾಡಿ ಹರಸಿದವು. ಅದು ಯಾರಿಗೂ ಅರ್ಥವಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಸಾಹಿತ್ಯ ಮಾಡುವ ಕೆಲಸವಾದರೂ ಏನು? ಅದರ ಜವಾಬ್ದಾರಿ ಏನು? ಎಂಬುದೆ ಮಾದೇವರ ಮನಸ್ಸನ್ನು ಕಾಡುವ ಸಂಗತಿ. ಅನಕ್ಷರಸ್ಥರಿಗೆ ಸಾಹಿತ್ಯ ಅರ್ಥವಾಗುವುದಿಲ್ಲವಲ್ಲ? ಎಂಬ ಪ್ರಶ್ನೆಗೆ ಇವರ ಉತ್ತರ ವಚನ ಓದಿ ಎಂಬುದಷ್ಟೆ ಅಕ್ಷರಸ್ಥರಿಗೂ ಅರ್ಥವಾಗದ ವಚನ ಅನಕ್ಷರಸ್ಥರಿಗೆ ಅರ್ಥವಾಗುತ್ತದೆಯಲ್ಲ!. ಆದ್ದರಿಂದ ಸಾಮಾನ್ಯರಿಗೆ ತಲುಪುವ ಸಾಹಿತ್ಯ ರಚನೆಯಾಗಬೇಕೆಂಬುದು ಇವರ ಒತ್ತಾಸೆ. ಅದು ದನಿ ಇಲ್ಲದೆ ಮಲಗಿರುವವರ ದನಿಯನ್ನು ಗುರ್ತಿಸುತ್ತಾ, ಸಮಾಜದ ಚಾಲನೆಗೆ ವೇಗವರ್ಧಕವಾಗಬೇಕು ಎಂದೆನ್ನುತ್ತಾರೆ ಮಾದೇವ.
ಮಾದೇವರ ಒಳನೋಟ ಕಾವ್ಯಾತ್ಮಕವಾದುದು. ಒಂದು ಉದಾಹರಣೆ ಮೂಲಕ ಇದನ್ನು ಸ್ಪಷ್ಟಪಡಿಸಬಹುದು. ಅಸ್ಪೃಶ್ಯತೆಯ, ಜಾತೀಯತೆಯ ಭೂತದ ಮೂಲವನ್ನು ಹುಡುಕುತ್ತಾ ಹೊರಟ ಮಾದೇವ ತಲುಪುವುದು ಬೇತಾಳ ಮತ್ತು ವಿಕ್ರಮರಾಯನ ಕಥೆಗೆ. ಈ ಜಾತೀಯತೆಯ ಭೂತವನ್ನು ಓಡಿಸುವುದು ಹೇಗೆ?ಎಂದು ತ್ರಿವಿಕ್ರಮನಿಗೆ ಬೇತಾಳ ಪ್ರಶ್ನೆ ಹಾಕುತ್ತದೆ. ಸರಿ ಉತ್ತರ ಹೇಳದಿದ್ದರೆ ಅವನ ತಲೆ ಸಹಸ್ರ ಹೋಳಾಗುತ್ತದೆ. ಹೊಲೆ ಮಾದಿಗರು ಹಾಗೂ ಜಾತಿಯಿಂದ ಸಂಕುಚಿತಗೊಂಡವರು ಇತ್ತ ಗಮನ ಹರಿಸದಿದ್ದರೆ, ಅವರ ತಲೆ ಸಹಸ್ರ ಚೂರಾಗುವುದು. ಆದ್ದರಿಂದ ಒಗ್ಗೂಡಿ ಅಸ್ಪೃಶ್ಯತೆಯ ಮೂಲವನ್ನು ಹುಡುಕಿ ಅಗೆಯಬೇಕು ಆ ಮೇಲೆ ಸುಟ್ಟುಹಾಕಬೇಕು ಎಂಬುದು ಇವರ ಒತ್ತಾಸೆ. ಸವರ್ಣೀಯರಲ್ಲಿರುವ ಅಸ್ಪೃಶ್ಯತೆಯೆಂಬ ಮಲವನ್ನು ಹೊರಹಾಕಬೇಕು. ಕುವೆಂಪು ಇದನ್ನೇ ಮೊದಲು ನಮ್ಮ ತಲೆಗೇ ನಾವು ಗುಂಡಕ್ಕಿಕೊಳ್ಳಬೇಕು ಎಂದದ್ದು.
ದಲಿತ ಮನಸ್ಸಿನ ದುಗುಡ ಮಾದೇವರನ್ನು ಸದಾ ಆವರಿಸಿರುತ್ತದೆ. ರಾಜಕೀಯವಾಗಿ ಇಂದಿರಾಗಾಂಧಿ ಇರುವವರೆಗೆ ಅವರನ್ನೇ ದೇವತೆಯನ್ನಾಗಿ ಆರಾಧಿಸಿದರು ದಲಿತರು. ಆನಂತರ ಜನತಾಪಕ್ಷ ಅಧಿಕಾರಕ್ಕೆ ಬರುವಂತೆ ಬೆಂಬಲಿಸಿದರು. ಆದರೆ ಇದು ಕಾಂಗ್ರೆಸ್ ಪಕ್ಷ ಕಲ್ಪಿಸಿಕೊಟ್ಟಿರುವುದಕ್ಕಿಂತ ಎರಡರಷ್ಟನ್ನಾದರೂ ಜೀತ, ಸಾಲ, ಗಿರವಿ, ಭೋಗ್ಯ ಇತ್ಯಾದಿ ಬಗ್ಗೆ ಕಲ್ಪಿಸಿ ಕೊಡಬಹುದೆಂದು  ಬಯಸಿದರಾದರೂ ಅದೂ ಕೂಡ ವಚನ ಭ್ರಷ್ಟವಾಯಿತು. ಇದೇ ಪರಿಸ್ಥಿತಿ ಇವತ್ತಿಗೂ ಸಹ ಮುಂದುವರಿಯುತ್ತಿದೆ. ದಿನಕಳೆದ ಹಾಗೆಲ್ಲಾ ಇವರ ದುಗುಡ ಸುತ್ತಿಸುತ್ತುವುದೆ ಹೊರತು ಬಿಚ್ಚಿ ಬಿಡಬಹುದೆಂಬ ನೆಚ್ಚು ಕಾಣುತ್ತಿಲ್ಲ. ಹೆಂಡ, ದನದ ಬಾಡು ಅವಮಾನದ ಸಂಕೇತವಾಗಿದೆ. ಇವು ಪ್ರತಿಷ್ಠಿತ ಹೋಟೆಲ್‍ನಲ್ಲಿ ತಿಥಿ ಊಟ ಆಗುವವರೆಗೂ ಈ ಆಹಾರ ಪಾನೀಯಗಳಿಗೆ ಅಂಟಿದ ಅವಮಾನ ಹೋಗಲಾರದು. ಈ ಅವಮಾನದ ಅಂಶ ತೆಗೆದರೆ ಮಾತ್ರ ಇವು ಸಹಜ ‘ಆಹಾರ’ ಆಗುವುದು. ಆದರೆ ಅಲ್ಲಿವರೆಗೆ ಏನು ಮಾಡುವುದು ಎಂದು ಮಾದೇವರ ದುಗುಡ.

ಶೋಷಣೆ ಮತ್ತು ಅವಮಾನಕ್ಕೆ ಈಡಾಗುವುದರಲ್ಲಿ ಹೆಣ್ಣು ಜಾತಿ ಮತ್ತು ದಲಿತ ಜಾತಿ ಸಮಾನ ದುಃಖಿಗಳು. ಹಾಗಾದರೆ ಏನು ಮಾಡಬೇಕು? ಇದಕ್ಕಾಗಿ ಕಳೆದುಕೊಳ್ಳುವುದೇನೂ ಇಲ್ಲ ಜಗತ್ತಿನ ಎಲ್ಲ ಹೆಣ್ಣು ಜಾತಿಯೂ ಹಾಗೂ ಎಲ್ಲ ದಲಿತ ಜಾತಿಯೂ ಕೈ ಕೈ ಹಿಡಿದು ತಮ್ಮ ಬಿಡುಗಡೆಗಾಗಿ ಜೊತೆಗೂಡಿ ನಡೆಯಬೇಕು. ‘ಜಗತ್ತಿನ ಶ್ರಮಿಕರೆ ಒಂದಾಗಿ, ಇದಕ್ಕಾಗಿ ಕಳೆದುಕೊಳ್ಳುವುದೇನೂ ಇಲ್ಲ, ಐಕ್ಯತೆಯ ಹೊರತಾಗಿ’ ಎಂದ ಕಾರ್ಲ್ ಮಾಕ್ರ್ಸ್ ಹೆಣ್ಣು ಜಾತಿ ಮತ್ತು ದಲಿತ ಜಾತಿ ಇದನ್ನು ನೆನೆಯಬೇಕು.
‘ಲೋ ಹೊಲೆ ಮಾದಿಗ’… ‘ಏಸಾನಿ’… ಇಂಥ ಮಾತುಗಳನ್ನು ಕೇಳಿದಾಗ ಯಾರಿಗಾದರೂ ಏನನ್ನಿಸಬಹುದು.‘ಕುಲವಂ ನಾಲಿಗೆ ನುಡಿಸೀತು’ ಎಂಬ ನಾಣ್ಗುಡಿಯಂತೆ ಅಂಥವರ ಕೀಳುತನವನ್ನೇ ಈ ಸಂಭೋದನೆಯಲ್ಲಿ ಕಾಣಬಹುದು. ಇದಕ್ಕೆ ಮಾದೇವರ ಪ್ರತಿಕ್ರಿಯೆ ಎಂದರೆ, ಲಾಗಾಯ್ತಿನಿಂದ ಪಾಳೆಗಾರಿಕೆ ಜುಟ್ಟು ಹಿಡಿದು ನಡೆದು ಬರುತ್ತಿರುವ ಬ್ರಾಹ್ಮಣ್ಯದ ನಡಿಗೆ ಇದು.
ಆಲನಹಳ್ಳಿ ಕೃಷ್ಣ ಮತ್ತು ದೇವನೂರ ಮಹಾದೇವ ತುಂಬ ಆತ್ಮೀಯರಾಗಿದ್ದರು. ಮೈಸೂರಿನಿಂದ ಆಲನಹಳ್ಳಿ ತೋಟಕ್ಕೂ ಹೋಗಿಬರುತ್ತಿದ್ದರು. ಕೆಲಸಗಾರರನ್ನು ಅಲ್ಲಿ ಕೃಷ್ಣ ‘ಲೋ ಬಾರ್ಲಾ! ಲೇ ಬಾರಮ್ಮಿ’ ಎಂದು ಮಾತಾಡಿಸುತ್ತಿದ್ದುದನ್ನು ಮಾದೇವ ಕೇಳಿ ಖಿನ್ನರಾಗಿ ‘ಹಿಂಗೆಲ್ಲ ಮಾತಾಡ್ಸದು ಸರೀನಾ?’ಅಂದರು. ಕೃಷ್ಣ ನಕ್ಕು ‘ಮಾದೇವ, ಅದ್ಕೆ ನಿನಗೆ ಏನು ಗೊತ್ತಾಗಲ್ಲ ಅನ್ನದು’ ಎಂದು ತನ್ನ ಮಾತಿನಲ್ಲಿ ಜಾತಿ ಸೋಂಕಿಲ್ಲ ಎಂಬುದನ್ನು ತೋರಿದ್ದರು. ಆದರೆ ದೇವರಾಜು ಅರಸು ಮನೆಗೊಮ್ಮೆ ಆಲನಹಳ್ಳಿ ಕೃಷ್ಣ ಹೋಗಿದ್ದಾಗ ಅರಸು ಹೆಂಡ್ತಿ ‘ಯಾರಯ್ಯ ಅಲ್ಲಿ ನೀನು? ಅಲ್ಲಿ ಯಾರೊ ಎತ್ನೇ ಗೌಡ್ರೊ ಏನೋ ಅಂತ ಇದ್ನಲ್ಲಾ?ಅವನ ಮೊಮ್ಮಗನ’ ಅಂತ ಕೇಳಿಬಿಡುವುದೇ? ಹೀಗೆ ಆಲನಹಳ್ಳಿಗೆ ಅರ್ಥವಾಗುವುದು ಮತ್ತು ಅರ್ಥವಾಗದಿರುವುದು ಉಂಟು ಎನ್ನುತ್ತಾರೆ ಮಾದೇವ.
ಕನ್ನಡ ನಾಡಿನ ಮಣ್ಣಿನಲ್ಲಿ ಒಬ್ಬ ನಾಡಾಡಿ ಕಟ್ಟಿದ ಗೋವಿನ  ಕತೆ ಯಾರಿಗೆ ಗೊತ್ತಿಲ್ಲ? ಇದರ ಒಳನೋಟ ಏನು ಎಂಬುದು ಪಂಡಿತರಿಗೂ ತಿಳಿದಿಲ್ಲ. ಹಾಗಾದರೆ ಗೋವಿನ ಕತೆ ಏನು ಹೇಳುತ್ತಿದೆ? ದೈಹಿಕವಾಗಿ ದುರ್ಬಲನಾದ ಶೋಷಿತ (ಹಸು)ನ ನಿಜದ ಎದುರು ದೈಹಿಕ ಪ್ರಬಲನಾದ ಶೋಷಕ (ಹುಲಿ) ತಂತಾನೇ ಕುಸಿಯುತ್ತಾನೆ ಎಂಬ ಸತ್ಯವನ್ನು ಇದು ತನ್ನ ಗರ್ಭದಲ್ಲಿಟ್ಟುಕೊಂಡಿದೆ. ಈ ಕಥಾರೂಪಕ ಗಾಂಧೀಜಿಯ ಮೆಚ್ಚಿಗೆಗೆ ಪಾತ್ರವಾಗಿತ್ತು.
ಜೀತ ಬಿಡುಗಡೆಯ ಹಾದಿ  ಯಾವುದು ಎಂದು ಸದಾ ಚಿಂತಿಸುತ್ತಿದ್ದ ಮಾದೇವರಿಗೆ ಒಮ್ಮೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಜೀತದಾಳುಗಳು ಭೂಮಾಲೀಕರ ಹಾಲಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ತಮ್ಮನ್ನೆಲ್ಲಾ ಬೀದಿ ಪಾಲು ಮಾಡಿದ ಟ್ರ್ಯಾಕ್ಟರ್, ಜೆ.ಸಿ.ಬಿ. ಯಂತ್ರಗಳನ್ನೆಲ್ಲಾ ಪುಡಿಪುಡಿ ಮಾಡುತ್ತಿದ್ದರು. ಎಚ್ಚರವಾದ ಮೇಲೆ ಉಳಿಯಬೇಕಾದರೆ ಈ ಕನಸು ನನಸಾಗಬೇಕು ಎಂದುಕೊಳ್ಳುತ್ತಾರೆ.ನಿಜವಾಗಿಯೂ ಇದು ಮಾದೇವರ ನಿರಾಸೆ ಕಟ್ಟಿದ ಕನಸೋ ಅಥವಾ ಕಂಡ ಕಾಣ್ಕೆಯೋ ಇಂದು ದಲಿತರ ಪರಿಸ್ಥಿತಿಯೇ ಅದನ್ನು ಹೇಳಬೇಕಾಗಿದೆ.
ಇವರು ಹಿಂದೆ ಧಾಳಿ ಮಾಡಿದ ಧಾಳಿಕೋರರಿಗೆ ಹುಟ್ಟಿ ಸಂತಾನವೋ ಇವರು ಎಂಬಂತೆ ಭೂಮಿಯ ಹೊರ ಮೈ ಒಳಮೈ ಎಲ್ಲವನ್ನೂ ಧ್ವಂಸ ಮಾಡಿ ದೋಚುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸಿ ಸಂಪತ್ತನ್ನು ಸೊರೆಗೊಳ್ಳುವ ಮಂದಿಯನ್ನು ಕಟುವಾಗಿ ಛೇಡಿಸುತ್ತಾರೆ. ಮಾನ್ಯ ಕುವೆಂಪು ಹೇಳಿದರು.‘ಹುಟ್ಟುತ್ತಾ ವಿಶ್ವ ಮಾನವ, ಬೆಳೆಯುತ್ತಾ ಅಲ್ಪಮಾನವ’ ಎಂದು.ಅಂದರೆ, ನಾವು ಬೆಳೆಯುತ್ತ ನಮ್ಮ ಮಗುತನ ಕಳೆದುಕೊಳ್ಳುತ್ತೇವೆ. ದೊಡ್ಡವರಾಗುತ್ತ ಒಡಕಾಗುತ್ತೇವೆ. ಬುದ್ಧಿ ಬೇರೆ ಭಾವ ಬೇರೆ ಛಿದ್ರವಾಗುತ್ತದೆ. ಆದ್ದರಿಂದ ಕಾವ್ಯ ಎಂದರೆ ‘ಬುದ್ಧಿಭಾವಗಳ ವಿದ್ಯುದಾಲಿಂಗನ’ ಮಗುವಿನ ಮುಗ್ಧತೆ ಬೆರದು ಉಳಿಯಬೇಕು ಎಂಬುದು ಮಾದೇವರ ಕಳಕಳಿ.
ಮಾದೇವ ಮಾತಾಡಿದರೆ ರೂಪಕದಲ್ಲಿ ಎಂಬುದಕ್ಕೆ ಇನ್ನೊಂದು ಉದಾಹರಣೆ :ಅವರು ಹೇಳುವ ಗಂಡಭೇರುಂಡ ಪಕ್ಷಿ ಕಥೆ ಪ್ರಸ್ತುತ ಎಡಗೈ-ಬಲಗೈ ದಲಿತರು ಮೀಸಲಾತಿ ಬಗ್ಗೆ ಕಚ್ಚಾಟಕ್ಕೆ ನಿಂತಿದ್ದಾರಷ್ಟೆ. ಗಂಡ ಭೇರುಂಡ ಎರಡು ತಲೆಯುಳ್ಳ ಒಂದು ದೇಹದ ಹಕ್ಕಿ. ಒಮ್ಮೆ ಒಂದು ಹಣ್ಣು ತಿನ್ನುವ ಸಂದರ್ಭದಲ್ಲಿ ಎರಡು ಬಾಯಿಗೂ ಪೈಪೋಟಿ. ಅದು ಎಂಥಾ ಹಣ್ಣು ಎಂದು ಪರೀಕ್ಷಿಸದೆ ನಾಮುಂದು ತಾಮುಂದು ಎಂದು ತಿನ್ನಲು ಹೊರಟವು. ಕೊನೆಗೆ ಒಂದು ಬಾಯಿ ತಿಂದು ಹಾಕಿತು. ಆದರೆ ಅದು ವಿಷದ ಹಣ್ಣು. ಪಕ್ಷಿ ಸತ್ತಿತು. ದಲಿತರ ಜಗಳ ಹೀಗಾಗಬಾರದು ಕೊಡು ಕೊಳುಗೆಯ ಕೂಡು ಬಾಳು ಆಗಬೇಕು ಎಂಬುದು ಮಾದೇವರ ಕಳಕಳಿ.
ಮತಾಂಧರ ಮೆದುಳೊಳಗೆ ಏನಿದೆ ಎಂಬುದು ನಿಗೂಢ. ಆರ್.ಎಸ್.ಎಸ್. ಕೊಡುವ ಪರ್ಯಾಯ ಹೆಸರುಗಳೋ ಭಯಂಕರವಾಗಿವೆ. ದೇಶಭಕ್ತಿ, ರಾಷ್ಟ್ರಪ್ರೇಮ, ಧರ್ಮ, ತ್ಯಾಗ, ಬಲಿದಾನ ಇತ್ಯಾದಿ, ಇತ್ಯಾದಿ. ಭಾರತೀಯ ಸಂಸ್ಕೃತಿಯ ಗುತ್ತಿಗೆದಾರರಂತೆ ವರ್ತಿಸುತ್ತಾರೆ.  ಬಾಬರಿ ಮಸೀದಿ ಧ್ವಂಸ, ಬಾಬಾ ಬುಡನ್‍ಗಿರಿ ವಿವಾದ, ಕರಾವಳಿಯ ಕೋಮುಗಲಭೆಗಳಿಂದ ಇವರು ಸಾಧಿಸಿದ್ದೇನು? ಎಂಬುದರಲ್ಲಿ ಮುಚ್ಚು ಮರೆ ಇಲ್ಲ. ಹಣ, ಅಧಿಕಾರಕ್ಕೆ ಹಾತೊರೆದ ಮಂದಿ ದೇವರು ಧರ್ಮವನ್ನು ಬೀದಿಗೆಳೆಯುತ್ತಾರೆ. ರಾಮನೆಂಬ ದೇವರನ್ನು ಬಲಿಗೊಟ್ಟು ದೆಹಲಿ ಸಿಂಹಾಸನ ಏರಲು ತವಕಿಸುತ್ತಾರೆ. ಮಸೀದಿ ಧ್ವಂಸದಲ್ಲಿ ಕೈ ಜೋಡಿಸಿದವರು ಮುಖ ಮರೆಸಿಕೊಂಡು ತಿರುಗಬೇಕಾಗಿತ್ತು. ಆದರೆ ಎಲ್ಲ ತಿರುಗಾ ಮರುಗ, ಜೈ ಜೈ ಎಂದು ಮೆರವಣಿಗೆ ಹೊರಟರು. ತಮ್ಮೊಟ್ಟಿಗೆ ಶೂದ್ರ ಸಂಕುಲವನ್ನು ಮರುಳು ಮಾಡಿ ಸೇವಕರನ್ನಾಗಿ ಮಾಡಿಕೊಂಡುಬಿಟ್ಟರು. ವಿಚಿತ್ರ ಎಂದರೆ ಕೋಮುಗಲಭೆ ಹುಟ್ಟಿಸುವವರೆ ಆಯಾಯ ಜಾತಿಮತಗಳಿಗೆ ರಕ್ಷಕರಂತೆ ಕಾಣುವುದು. ಇನ್ನೂ ದುರಂತವೆಂದರೆ ಆಯಾಯಾ ಜಾತಿಮತಗಳೂ ಕೇಡಿಗರನ್ನೇ ತಮ್ಮ ರಕ್ಷಕರು ಎಂಬಂತೆ ಭ್ರಮಿಸುತ್ತಿರುವುದು. ಇಂಥ ಪರಿಸ್ಥಿತಿಯಲ್ಲಿ ಮಾದೇವರ ಪ್ರಶ್ನೆ ಎಂದು ಹೇಳಿ, ಹೇಗೆ ಉಳಿಯುವ?
ಈ ಭಜರಂಗದಳದ ಭಕ್ತರಿಗೆ ವಚನ ಪಾಲಕ ರಾಮ ಬೇಕಾಗಿಲ್ಲ. ಅವನು ಅಯೋಧ್ಯೆಯಿಂದ ಈಗಾಗಲೇ ಪರಾರಿಯಾಗಿದ್ದಾನೆ. ಅವನನ್ನು ಉಳಿದವರು ಹುಡುಕಬೇಕಾಗಿದೆ. ಹನುಮನೇ ತನ್ನ ಎದೆಯನ್ನು ಬಗೆದು ತೋರಿಸಬೇಕಾಗಿದೆ. 1949ರಲ್ಲಿ ರಾತ್ರೋರಾತ್ರಿ ರಾಮಲಾಲನ ವಿಗ್ರಹವಿಟ್ಟು ಪ್ರಕರಣದಿಂದ, ಇಡಿಸಿಕೊಂಡ ಆ ದೇವರಿಗೂ ಗೌರವ ತರುವುದಿಲ್ಲ. ಪೂಜಿಸುವ ಭಕ್ತರಿಗೂ ಗೌರವ ತರುವುದಿಲ್ಲ. ಭಾರತವು ಜಾತಿ ಮತಾಂಧತೆಗಳಿಂದ ಜರ್ಜರಿತವಾಗಿದೆ ಎನ್ನುವ ಮಾದೇವ ಜಾತಿ ಎಂಬುದು ಭಾರತ ಎಂಬ ವೃಕ್ಷದ ಕೊಂಬೆಗಳನ್ನು ಕತ್ತರಿಸುತ್ತಿದ್ದರೆ, ಮತಾಂಧತೆ ಎಂಬುದು ವೃಕ್ಷದ ಬೇರುಗಳನ್ನು ಕತ್ತರಿಸುತ್ತದೆ. ಜಾತಿ ಮತಾಂಧತೆಗಳಿಂದ ತಪ್ಪಿಸಿಕೊಂಡು ದೇಶ ಉಳಿಸಬೇಕಾಗಿದೆ. ಇದೇ ದೇಶ ಭಕ್ತಿ ಎಂದು ಹೇಳುವುದು ಅವರ ಜಾತ್ಯಾತೀತ ನಿಲುವು. ಮತಾಂಧತೆ ಮೊದಲು ಮಾಡುವ ಕೆಲಸ ಎಂದರೆ ತನ್ನವರ ಕಣ್ಣು, ಮಿದುಳು ಮತ್ತು ಹೃದಯ ಒಂದೊಂದನ್ನೇ ಕಿತ್ತು ಹಾಕಿ ವಿವೇಕ ಶೂನ್ಯರನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು. ಆದ್ದರಿಂದ ನಾವು ತುರ್ತಾಗಿ ನಮ್ಮ ಮಕ್ಕಳ ಕಣ್ಣು ಮಿದುಳು ಹೃದಯಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ ಎಂದು ಮಾದೇವ ಬಾರಿ ಬಾರಿಗೂ ವಿನಂತಿಸಿಕೊಳ್ಳುತ್ತಾರೆ.
ಅಂತಃಕರಣ ಇಲ್ಲದ ಖಾಸಗೀಕರಣ, ಜಾಗತೀಕರಣ, ಉದಾರೀಕರಣ ಹೀಗೇ ಮುಂದುವರಿದರೆ, ಕಾರ್ಪೋರೇಟ್ ಸೆಕ್ಟರ್ ದವಡೆಗೆ ಸಿಕ್ಕಿರುವ ಭಾರತ ತನ್ನನ್ನು ಬಿಡಿಸಿಕೊಂಡು ಬಚಾವಾಗದಿದ್ದರೆ, ನಾಳಿನ ಭಾರತ ಹೇಗಿರಬಹುದು? ಮಾದೇವ ಯಾಕಾದರೂ ಹೀಗೆ ಅಂದುಕೊಂಡರೋ? ಆ ರೀತಿ ಅಂದು ಕೊಂಡದ್ದಕ್ಕಾಗಿ ಅವರ ಕಣ್ಮುಂದೆ ಎರಡು ದುಃಸ್ವಪ್ನಗಳು ಬಂದು ಕೂತಿವೆಯಂತೆ.
ಒಂದು, ಮುಂಬೈನಲ್ಲಿ ಸಾವಿರಾರು ಗುಡಿಸಲುಗಳ ನಡುವೆ ಒಂದು ಅರಮನೆ ಇದೆ. ಈ ಅರಮನೆ ಕಾರ್ಪೋರೇಟ್ ಕುಳ ಅಂಬಾನಿಯದು. ನಾಳೆ ಇಡೀ ಭಾರತವೇ ಹೀಗಾಗಿ ಬಿಡಬಹುದೆ? ಇನ್ನೊಂದು ನಮ್ಮ ಬಳ್ಳಾರಿ ಜಿಲ್ಲೆ.  ಇಲ್ಲಿ ಅದಿರು ತೆಗೆದೂ ತೆಗೆದೂ ಇಡೀ ಭೂಮಿ ಹಳ್ಳವಾಗಿದೆ. ಇಲ್ಲಿ ಗಾಳಿ, ನೀರು ಕೆಂಪಾಗಿವೆ. ನಾಳೆ ಇಡೀ ಭಾರತವೇ ಹೀಗಾಗಿ ಬಿಡಬಹುದೆ? ಮಾದೇವರ ಈ ದುಃಸ್ವಪ್ನಗಳು ಸಾಕಾರವಾಗದಿರಲಿ. ಹಾಗಾಗದಿರುವುದಕ್ಕೆ ನಾವು ಮಾಡಬಹುದಾದ ಕಾರ್ಯಕ್ರಮಗಳೇನಾದರೂ ಉಂಟೆ? ಎಂದರೆ ದಲಿತ ಸಂಘಟನೆಗಳಲ್ಲಿ ಒಕ್ಕೂಟದ ಮನೋಭಾವ ಒಕ್ಕೂಟದ ಕಾರ್ಯ ಚಟುವಟಿಕೆ ಪಡೆದುಕೊಳ್ಳುವುದು ಇಂದಿನ ತುರ್ತಾಗಿದೆ. ಜೊತೆಗೆ ‘ಸಂವಿಧಾನವೇ ನಮ್ಮ ಧರ್ಮ’ ಎಂಬ ಮಾತು ಮುಂದೊತ್ತಿ ಆಡಬೇಕಾದ್ದು; ಉಳಿದ ಧರ್ಮಗಳೆಲ್ಲ ಅವರವರವ ಮನೆಯಲ್ಲಿ ಮಾತ್ರ. ಹೀಗಾದರೆ ಮಾತ್ರ ಭಾರತದ ಉಳಿವು; ಇಲ್ಲ ಹೀಗೆ ಮುಂದುವರೆದರೆ, ದೇಶಕ್ಕೆ ಉಳಿಗಾಲವಿಲ್ಲ. ಪುತಿನ ಅವರು ಹೇಳುವಂತೆ ದೇಶ ಅಂದ್ರೆ ಏನನ್ಕೊಂಡ್ಬಿಟ್ಟಿದ್ದೀರಯ್ಯಾ? ಅದೇನು ಮಣ್ಣಾಕಲ್ಲಾ, ಮರಗಿಡಗಳಾ? ಜನ; ದೇಶ ಅಂತಂದ್ರೆ ಜನ’ ಇದು ಪುತಿನ ಅವರು ಹಚ್ಚಿಟ್ಟ ಹಣತೆ; ಕೆಡಿಸಬಾರದು. ನವ ಸಾಮ್ರಾಜ್ಯಶಾಹಿಗಳ ಯುದ್ಧ ದಾಹ (ಎಣ್ಣೆ ಯುದ್ಧ)ವನ್ನು ಮಾದೇವ ಆಕಾಶದಲ್ಲಿ ರಣಹದ್ದುಗಳು ಎಂಬ ರೂಪಕದಲ್ಲಿ ವಿಡಂಬಿಸುತ್ತಾರೆ. ಬುಷ್ ಮ್ಯನ್ ಕೇವ್ ಮ್ಯಾನ್‍ಗಳು ಇರಾಕ್‍ನ್ನು ಧ್ವಂಸ ಮಾಡಿದ ಸಂದರ್ಭದಲ್ಲಿ ಅವರಾಡಿದ ಮಾತಿದು. ಈ ಯುದ್ಧದ ಅಂತಿಮ ಫಲಿತಾಂಶವೇನು? ಕೇವಲ ಇರಾಕ್‍ನ ಪತನವೆ? ಅಲ್ಲ ವಿಶ್ವಸಂಸ್ಥೆ ಎಂಬ ಚಿಗುರುತ್ತಿದ್ದ ಕನಸಿನ ಪತನ. ಇವರ ಮಾತು ಯಥಾರ್ಥವಾಗುತ್ತಿದೆ.
ವೆಸ್ಟ್ ಇಂಡೀಸ್‍ನಲ್ಲಿ ಭಾರತೀಯ ಸಂಜಾತರನ್ನು ಕೂಲಿಗಳು ಅಂತ ಕರೆಯುತ್ತಾರಂತೆ. ಪ್ರಸ್ತುತ  ಗ್ರಾಮೀಣ ಭಾರತವೆಲ್ಲ ನಗರಾಭಿಮುಖವಾಗಿ ಹೊರಟ ಕೂಲಿಗಳ ದೇಶವೇ ಆಗುತ್ತಿದೆ. ಇದಕ್ಕೆ ಕಾರಣ ಕೃಷಿ ಆರ್ಥಿಕತೆ ಬುಡಮೇಲಾಗಿ ಮಲಗಿದ್ದು, ಸಹಜ ಕೃಷಿ ಮರೆತ ಭಾರತ ಹೀಗಾಯಿತು. ಹೀಗೇ ಮುಂದುವರಿದರೆ ಸಮಸ್ತ ಕೃಷಿಕರು ಕೂಲಿಗಳಾಗುವುದು ಅನಿವಾರ್ಯ.

ಮಾತೃಭಾಷೆ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮ ಆಗುವುದಾದರೆ ಒಂದು ಭಾಷೆಯಾಗಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಕಲಿಸುವುದು ಹೆಚ್ಚು ಉಪಯುಕ್ತ ಎಂಬ ಮಾದೇವರ ನಿಲುವು ಮತ್ತು ಸಲಹೆಯು, ಪ್ರಯೋಗಾತ್ಮಕವಾಗಿದೆ.
ಕಲೆಯ ಉಗಮ ಹೇಗೆ?ಎಂಬ ಬಗ್ಗೆ ಅನೇಕ ಸೂತ್ರ – ವ್ಯಾಖ್ಯೆಗಳಿವೆ. ಆದರೆ ಈ ಹುಟ್ಟಿನ ಜಾಡು ಹಿಡಿದು ಹೊರಟ ಮಾದೇವ ಹೇಳುವುದು ನಮ್ಮ ಸಾಮಾಜಿಕ ಸಂದರ್ಭಕ್ಕೆ ಒಪ್ಪುವ ರೀತಿ ಇದೆ. ಕಲಾವಿದ ತನ್ನ ಆಳಕ್ಕೆ ಅಂದರೆ ತನ್ನ ಸುಪ್ತ ಮನಸ್ಸಿಗೆ ಇಳಿದಂತೆಲ್ಲಾ ದಲಿತ-ಮುಸ್ಲಿಂ-ಬ್ರಾಹ್ಮಣ ಈ ಹೊರ ಪೊರೆ ಕಳಚಿ ಮಾನವೀಯವಾಗಿ ಇನ್ನೂ ಹೆಚ್ಚೆಂದರೆ ಜೀವ ಸಂಕುಲದ ಸ್ಪಂದನವಾಗಿ ನಿಲ್ಲಬಹುದು. ಈ ಸ್ಪಂದನಕ್ಕೆ ತನ್ನ ಸುತ್ತಲ ಪರಿಸರ ಕಚ್ಚಾ ವಸ್ತುಗಳಂತೆ ತೊಡಗಬಹುದು. ಇರುವುದೆಲ್ಲಾ ಒಂದೇ ಜೀವ ಅನ್ನಿಸಿಬಿಡಲೂಬಹುದು. ಹೀಗಾದಾಗ ಮಾತ್ರ ಒಬ್ಬ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣನೂ ಸಹ ಒಡಲಾಳದ ‘ಸಾಕವ್ವ ನನ್ನ ಅಜ್ಜಿ’ ಎಂದು ಸ್ವೀಕರಿಸುತ್ತಾನೆ. ಹೀಗೆ ತನ್ನ ಸ್ವಂತ ಅನುಭವವನ್ನೇ ಉಲ್ಲೇಖಿಸಿ ಹೇಳುತ್ತಾರೆ.

ಪಂಪನ ಬಗ್ಗೆ ಮಾದೇವರ ಪ್ರತಿಕ್ರಿಯೆ ಅಪರೂಪ ಎಂಬಂತಿದೆ. ಕುಮಾರವ್ಯಾಸ ದೇಸಿಯನ್ನು ಬಳಸಿಕೊಂಡಿದ್ದರೆ, ಪಂಪ ದೇಸಿಯೇ ತಾನಾಗುತ್ತಾನೆ. ಹಳ್ಳಿಗನೊಬ್ಬ ಹಳ್ಳಿರ್ಗಳಲ್ಲೇ ಚಕ್ರವರ್ತಿಯ ಗಾಂಭೀರ್ಯ ಘನತೆ ಪಡೆದದ್ದು. ಇದನ್ನು ಕಂಡು ಈ ಕಾಲದ ಧಾರ್ಮಿಕರು, ಪಂಡಿತರು ಛೀ,ಥೂ ಅಂದಿರುತ್ತೀರ ಎನ್ನುವ ಮಾದೇವ ಆ ಪಂಪನ ಹೊಸ ಓದಿಗೆ ಒಂದು ಪ್ರವೇಶ ತೆರೆಯುತ್ತಾರೆ.
ಕತೆಗಳು, ಒಡಲಾಳ ಬರೆಯುವಾಗ ಮಾದೇವ ತನ್ನ ನೇರ ಅನುಭವಗಳಿಗೆ ಹೆಚ್ಚು ಒತ್ತು ಕೊಟ್ಟವರಾದರೂ ‘ಕುಸುಮಬಾಲೆ’ ಬರೆಯುವಾಗ ಹಾಗೆ ತನ್ನದೇ ನೇರ ಅನುಭವದ ಪರಧಿಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಹೇಳುತ್ತ ಚದುರಂಗದ ವೈಶಾಖದಲ್ಲೂ ಇಂಥ ಗುಣವೇ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಕಲಾವಿದನ ಆಥೆಂಟಿಸಿಟಿ ಪ್ರಶ್ನೆಗೆ ಇದು ಉತ್ತರ.
ಮುತ್ತು ಮುಳುಗನಂತೆ ಕನ್ನಡ ಸಾಹಿತ್ಯ ಸಾಗರದ ಅಣಿ ಮುತ್ತುಗಳಂತ ಹಳಗನ್ನಡ ಕೃತಿಗಳನ್ನು ಸಂಪಾದಿಸಿ, ಪುನರ್‍ಪಠ್ಯ ಸಿದ್ಧಗೊಳಿಸಿ, ಸರಳಗೊಳಿಸಿ, ಹೊಸಗನ್ನಡಕ್ಕೆ ಅನುವಾದಿಸಿ ಕೃತಿ ಮೌಲ್ಯ ವಿಮರ್ಶೆಯಲ್ಲಿಯೇ ತಮ್ಮ ದೀರ್ಘಾವದಿ ಬದುಕನ್ನು ಸವೆಸಿ, ಇಳಿ ವಯಸ್ಸಿನಲ್ಲಿ ಠಾಣಾಂತರಿಸಿ ಪದ್ಯಗಳನ್ನೂ ಬರೆದು, ಇದೆಲ್ಲ ಇನ್ನು ಸಾಕು ಎನಿಸಿದಾಗ ತನ್ನ 94 ನೆಯ ವಯಸ್ಸಿನಲ್ಲಿ ಸಲ್ಲೇಖನ ವ್ರತ ಹಿಡಿದವರಂತೆ ಅನ್ನಾಹಾರ ತೊರೆದು ಕಣ್ಣು ಮುಚ್ಚಿದ ನಾಡೋಜ ಡಾ.ಎಲ್.ಬಸವರಾಜು. ದೇವನೂರ ಮಹಾದೇವ ಎಂದರೆ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಅನಿಮತ್ತ ಅಕ್ಕರೆ; ಮಗನೆಂಬಂತೆ ಹತ್ತಿರ ಕರೆದು ಮುದ್ದಿಸಿದವರು.ಮಾದೇವ ‘ಕುಸುಮಬಾಲೆ’ಯನ್ನೂ ಅವರ ಕೈಗಿರಿಸಿ ಬಂದ ಎರಡೇ ದಿನದಲ್ಲಿ ಅದನ್ನುಹೊಸ (ಶಿಷ್ಟ) ಕನ್ನಡಕ್ಕೆ ಲಯ ವಿನ್ಯಾಸಗೊಳಿಸಿ ಅಚ್ಚರಿ ಹುಟ್ಟಿಸಿದರು. ಅವರ ಅಕ್ಕರೆಯ ಮಹಾಪೂರದಲ್ಲಿ, ಅವರ ಪ್ರತಿಭಾ ವಿಲಾಸದಲ್ಲಿ ತೇಲಿ ಹೋದ ಮಾದೇವ ಎದೆ ತುಂಬಿ ಕೃತಜ್ಞತೆಯನ್ನು ಅರ್ಪಿಸುತ್ತಾರೆ.
ಲಂಕೇಶ್ ಎಂಬ ತಲ್ಲಣಿಸುವ ಜೀವ ಎಂದೂ, ಅರಸು ಚಕ್ರವರ್ತಿಯಂತೆ ಎಂದು ದೇವರಾಜು ಅರಸರನ್ನು ಕುರಿತೂ, ಅನಂತಮೂರ್ತಿಯವರಿಗೆ ತಾನೇ ಗಾಯತ್ರಿಮಂತ್ರವನ್ನು ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ, ಭಾರತದ ಮನಸ್ಸಿಗೆ ಚಲನೆ ಬರುತ್ತಿರಲಿಲ್ಲವೆ? ಎಂದು ಕೇಳುತ್ತಾರೆ. ಪ್ರೋ.ಎಂ.ಡಿ.ನಂಜುಂಡಸ್ವಾಮಿ ಸಂದರ್ಶನ ಮಾಡುತ್ತ ಅವರು ಹೇಳಿದ, ಅಸ್ಪೃಶ್ಯತೆ ವಿರುದ್ಧವಾಗಿ, ಜಾತೀಯತೆ ವಿರುದ್ಧವಾಗಿ ಊರಿಗೆ ಒಂದೇ ಬಾವಿ, ಅಂಥರ್ ಜಾತಿವಿವಾಹ, ಅಸ್ಪೃಶ್ಯನ ಮನೆಯಲ್ಲಿ ಉಂಡವನೇ ರೈತ ಸಂಘದಲ್ಲಿ ಓಟು ಹಾಕುವ ಹಕ್ಕುಳ್ಳವನು ಇತ್ಯಾದಿ ಮಾತುಗಳನ್ನು ಇಲ್ಲಿ ದಾಖಲಿಸಿರುವುದು ದೇಶದ ಚರಿತ್ರೆಯ ಚಲನಶೀಲ ಗತಿಗೆ ಮುನ್ನೋಟ ಇದ್ದಂತಿದೆ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಚಳುವಳಿ ಮಾಡುತ್ತಿದ್ದಂತೆಯೇ ಡಾ.ಲೋಹಿಯಾರವರು ಭಾರತೀಯ ಭಾಷೆಗಳಲ್ಲಿಯೂ ಸಮಾನತೆ ತರಲು ಹೋರಾಡುತ್ತಿದ್ದುದನ್ನು ನೆನೆಯುತ್ತಾರೆ.‘ಗಾಂಧಿ- ಕಾರುಣ್ಯದ ತಂದೆಯಂತೆ, ಜೆ.ಪಿ.ಅಸಹಾಯಕ ತಾಯಿ, ವಿನೋಬಾ ಮದುವೆಯಾಗದ ವ್ರತನಿಷ್ಠ ಅಕ್ಕನಂತೆ, ಲೋಹಿಯಾ-ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ. ಅಂಬೇಡ್ಕರ್ – ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ ನಾನು ಇಲ್ಲಿನ ಸಂತಾನ, ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?” ಇದು ಮಾದೇವರ ಭಾರತ ದರ್ಶನದ ನೋಟ.
ಎದೆಗೆ ಬಿದ್ದ ಅಕ್ಷರದ ‘ಬ್ರಾಹ್ಮಣರ ಬಹಿರಂಗ ಸಭೆಯ ಅಂತರಂಗದಲ್ಲಿ ಕೆಲ ಕಾಲ ಎಂಬ ಅಧ್ಯಾಯ ರನ್ನನ ಗಧಾಯುದ್ಧ ಕಾವ್ಯದಲ್ಲಿ ತಲೆ ಮರೆಸಿಕೊಂಡಿರುವ ನಾಟಕದ ಹಾಗೆ ಕಂಡುಬರುತ್ತದೆ. ಆದ್ದರಿಂದಲೆ ಈ ಆಧ್ಯಾಯವನ್ನು ಮತ್ತೆ ಮತ್ತೆ ಓದಬೇಕು ಅನ್ನಿಸುವುದು. ಅದರ ಮತಿತಾರ್ಥ ಇಷ್ಟು: ಒಮ್ಮೆ ಕುವೆಂಪು ‘ಮೈಸೂರು ಮಿತ್ರ’ ಪತ್ರಿಕೆಗೆ ಸಂದರ್ಶನ ನೀಡಿ ಹೇಳಿದ್ದರು; ‘ಹಿಂದಿನವರು ಏನು ಮಾಡಿದರು? ವೇದ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕು. ವೇದ ಪಠನ ಮಾಡಿದ ಶೂದ್ರನ ನಾಲಿಗೆ ಕತ್ತರಿಸಬೇಕು ಎಂದು ಹೇಳುತ್ತಾ ಶಿಕ್ಷಣ ವಿರೋಧಿ ಪ್ರವೃತ್ತಿಯನ್ನು ಬೆಳಸಿದ್ದರು. ಈ ದೃಷ್ಟಿಯಿಂದ ಹಿಂದೂ ಧರ್ಮದಂತಹ ಅನಿಷ್ಟ ಧರ್ಮ ಬೇರೊಂದಿಲ್ಲ. ಯಾರೇ ಆಗಲಿ ಅಂಥ ಒಂದು ಧರ್ಮದಲ್ಲಿ ಹುಟ್ಟಿದುದಕ್ಕೆ ತಲೆ ತಗ್ಗಿಸಬೇಕೇ ಹೊರತು ಬದಲಾಗಿ ಅವರನ್ನು ಪ್ರತಿಭಟಿಸುವ ಸಭೆ ಕರೆದು, ಮೊದಲೇ ಹೆಂಡ ಕುಡಿದ ಕೋತಿಗೆ ಚೇಳು ಕಡಿದು ದೆವ್ವ ಹಿಡಿದರೆ ಹೇಗಾಡುತ್ತೊ ಹಾಗೆ ಆಡ ತೊಡಗಿದರು. ಆ ತ್ರಿಮತಸ್ಥರ ವಾಕ್‍ಠೀವಿ ಕೇಳುವ ಒಳಾಸೆಯಿಂದ ಹೋಗಿದ್ದ ಮಹಾದೇವ ಮತ್ತು ಆಲನಹಳ್ಳಿ ಕೃಷ್ಣ ಇವರು ಆ ‘ಮಹಾಬ್ರಾಹ್ಮಣ’ರ ಆಟಾಟೋಪಗಳಿಗೆ ಸಾಕ್ಷಿಯಾದರು, ಮಹಾದೇವ ಕುವೆಂಪು ಅವರಿಗೆ ಯಾರ ಮೇಲೂ ದ್ವೇಷ ಇಲ್ಲ. ನಮ್ಮಲ್ಲಿನ ಈ ಮೇಲು ಕೀಳು ಜಾತಿ ಭೇದ ಮತ ಮೌಢ್ಯದ ಬಗ್ಗೆ ಅವರಿಗೆ ಆಕ್ರೋಶ, ಆವರ ತುಡಿತ ಸಮಾನತೆಗಾಗಿ ಮಾತ್ರ; ಇಷ್ಟು ಹೇಳುವಾಗ ಅವರ ಮೈಕೈ ಕಿತ್ತು ಕೊಳ್ಳಬೇಕಾಯಿತು. ಶ್ರೀ ಕೃಷ್ಣರಿಗೆ ಅವಕಾಶವನ್ನೇ ಕೊಡಲಿಲ್ಲ. ಅವರ ಮೇಲೆ ಹಲ್ಲೆ ನಡೆದದ್ದು. ಕೃಷ್ಣ ಮಠದಲ್ಲಿ ಇವರನ್ನೂ ಕೂಡಿ ಹಾಕಿದ್ದು ಇತ್ಯಾದಿ ಈ ಪ್ರಹಸನವನ್ನು ಮಾದೇವ ಎಂದಿನ ತಮ್ಮ ದೂರ ನಿಂತ ನೆಲೆಯಲ್ಲಿ ಬರೆಯುತ್ತಾರೆ. ಓದುಗರಿಗೆ ರಸವತ್ತಾದ ನಾಟಕ ನೋಡಿದಂತೆ ಯೆಹೂದಿ ಜನಾಂಗ ಕ್ರಿಸ್ತಪೂರ್ವ ಸಾವಿರಾರು ವರ್ಷಗಳಿಂದಲೂ ತಾವು ಕಂಡ God promised Land  ಕನಸನ್ನು ಕಾಣುತ್ತಾ, ಅಲೆಮಾರಿಗಳಾಗಿ ದೇಶ ದೇಶಾಂತರ ಸುತ್ತುತ್ತಾ, ನಾಝಿ ಹಿಟ್ಲ್ ರನ ಕಾನ್ಸನ್ ಟ್ರೇಷನ್ ಕ್ಯಾಂಪ್‍ಗಳಲ್ಲಿ ಲಕ್ಷಾಂತರ ಜೀವತೆತ್ತೂ ಸಹ ತಮ್ಮ ಕನಸನ್ನು ಜೀವಂತ ಉಳಿಸಿಕೊಂಡು, ಕಡೆಗೂ 1950ರ ದಶಕದಲ್ಲಿ ಸ್ವತಂತ್ರ ಇಸ್ರೇಲ್ ರಾಷ್ಟ್ರವನ್ನು ಪಡೆದರು. ಇದು ಸ್ವಪ್ನ ಜಗತ್ತಿನ ಮಹಾಯಾನ. ನಮ್ಮ ದೇವನೂರಿನ  ಮಾದೇವರೂ ಕೂಡ ಹೀಗೆ ಜನ್ಮಜನ್ಮಾಂತರದಲ್ಲೂ ಮತ್ತೆ ಮತ್ತೆ ಸಮಾನತೆಯ ಕನಸನ್ನು ಹೊತ್ತು ತಿರುಗುವ ಮನುಷ್ಯನಂತೆ ಕಾಣುತ್ತಾರೆ. God must be Crazy ಅಲ್ಲವೇ? ಅರವತ್ತು ದಾಟಿದ ಮೇಲೂ ಇವರು ಮತ್ತೆ ಸಮಾನತೆಯ ಅದೇ ಕನಸನ್ನು ಕಾಣಲು ಹೊರಟಿರುವುದು ಇನ್ನೇನು? ನಮ್ಮ ಕಂಫರ್ಟ್ ಜೋನಿನ ಸಾಹಿತಿಗಳಿಗೆ ವಿಚಿತ್ರ ಎನಿಸಬಹುದಾದರೂ ಯೆಹೂದಿಗಳ ಹೋರಾಟದ ಕನಸನ್ನು ನೆನೆದರೆ ಇವರ ಕನಸು ಸಹ ಬರುವುದರ ಕಣ್ಸನ್ನೆ ಎಂದೆ ಹೇಳಬಹುದು. ಇವರ ಕನಸಿಗೂ ಎದೆಗೆ ಬಿದ್ದ ಅಕ್ಷರಕ್ಕೂ ಜೈವಿಕ ಸಂಬಂಧ ಇದೆ. ಇವರ ಎದೆಗೆ ಅಕ್ಷರ ಬೀಳದಿದ್ರೆ ಎಲ್ಲೋ ಜೀತ ಮಾಡ್ತ ಇರಬೇಕಾಗಿತ್ತು. ಕಲಿಯದಿದ್ದರೆ ನಾನು ಸಹ ಕೊಟ್ಟಿಗೆಯ ಕಸ ಬಾಚುತ್ತ ಇರಬೇಕಾಗಿತ್ತು ಎಂದು ಕುವೆಂಪು ಕೂಡ ಹೇಳಿದ್ದರಲ್ಲವೇ? ಆದಿ ಜನಾಂಗದಲ್ಲಿ ಹುಟ್ಟಿದವನಿಗೆ ಅಕ್ಷರ ಬೀಳದಿದ್ದರೆ ಅದೊಂದು ಜೀವಂತ ನರಕ. ಒಡಲಾಳದ ಸಾಕವ್ವ ಎಂದಂತೆ ಇದಕ್ಕಿಂತ ರೌರವನರಕ ಇನ್ನೆಲ್ಲಿ ಇದ್ದೀತು? ಅದು ಊರಾಚೆ ಪರಕೀಯವಾಗಿ ಬಿದ್ದು ನರಳುತ್ತಿರುವ ಅಸ್ಪೃಶ್ಯತೆಯ ಆಕ್ರಂದನ, ಕೋಪ, ತಾಪ ಚೀರುತ್ತಿರುವುದು, ಅದು ಪ್ರೀತಿಗಾಗಿ, ಸಮಾನತೆಗಾಗಿ, ಮಾನವತೆಯ ಸ್ಪರ್ಶಕ್ಕಾಗಿ ಕಾಯುತ್ತಿರುವುದು. ಆದರೆ ಇನ್ನೆಷ್ಟು ದಿನ? ಚಿತ್ತ ಜಾಗೃತ ಕನಸು ಕರುಣಾಳು ಬಾ ಬೆಳಕೆ ಎಂದು ಸಮಾನತೆಗಾಗಿ ಮಾದೇವರ ಕಾಡುತ್ತಿದೆ.
ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಪ್ರತ್ಯೇಕತಾ ಅಪಾರ್ಥೈಡ್ (ವರ್ಣಭೇದ) ಕಾನೂನುಗಳು ಕೊನೆಗೊಂಡು ಅದಕ್ಕೆ ಕಾರಣರಾಗಿದ್ದ ಬಿಳಿಯರ ಘನತೆ ಕೊಂಚ ಹೆಚ್ಚಿದಂತಾಗಿದೆ ಆದರೆ ಭಾರತದಲ್ಲಿ ಮಾತ್ರ ವರ್ಣಭೇದದ ಮುತ್ತಾತನಂತಿರುವ ಅಸ್ಪೃಶ್ಯತೆ ಮಾತ್ರ ಕಾನೂನು ಮರೆಯಲ್ಲಿ ದೆವ್ವದಂತೆ ಕಾಡುತ್ತಿದೆ. ಕ್ಯಾನ್ಸರ್‍ನಂತೆ ಸಾವಿರಾರು ವರ್ಷಗಳಿಂದ ದಲಿತ ಪ್ರತಿಭೆಗಳನ್ನು ಹುಟ್ಟುವ ಮೊದಲೇ ಇದು ಚಿವುಟಿ ಬಿಡುತ್ತಿದೆ. ಜನ್ಮಾಂತರ ಕರ್ಮ ಪ್ರಾರಬ್ಧ ಎಂಬ ಕರ್ಮ ಸಿದ್ಧಾಂತವನ್ನು ಹುಟ್ಟು ಹಾಕಿದ ಇಲ್ಲಿನ ಇಬ್ಬಂದಿ ಜನ ಅದಕ್ಕೆ ಧರ್ಮ, ದೇವರು, ಶಾಸ್ತ್ರಗಳನ್ನು ಅಡ್ಡ ಹಿಡಿದು ಅಸ್ಪೃಶ್ಯತೆ ಮುಂದುವರಿಯಲು ಕಾರಣರಾಗಿದ್ದಾರೆ. ಇದು ಮಾದೇವರ ಖಿನ್ನತೆಗೆ ಕಾರಣ. ನಮ್ಮ ಪವಿತ್ರ ಸಂವಿಧಾನಕ್ಕೆ ಮನು ಧರ್ಮಶಾಸ್ತ್ರದ ‘ಭೂತ’ ಚೇಷ್ಟೆ ವಕ್ಕರಿಸಿದೆ. ಈ ಭೂತವನ್ನು ಬಿಡಿಸಿ ಬೇಗ ಸಂವಿಧಾನದ ಆಶಯಗಳು ಕೈಗೂಡುವಂತಾಗಬೇಕು ಎಂದು ಬಯಸುತ್ತಾರೆ.
ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷರಾಗಿ ಒಪ್ಪಿಕೊಂಡುದಕ್ಕೆ ಮಾದೇವ ಕೊಡುವ ಸಮರ್ಥನೆಯೆ ಅವರ ವ್ಯಕ್ತಿತ್ವ ಎಂತಹುದು ಎಂಬುದನ್ನು ಸಾದರಿಪಡಿಸುತ್ತದೆ. ರಾಜಕೀಯ ಎಂಬುದು ಈಗ ಭ್ರಷ್ಟರೂ, ಜಾತಿವಾದಿಗಳು ಹಣ ಆಧಿಕಾರ ಲಾಲಸಿಗರೂ ಆದ ಕುಬ್ಬ ರಾಜಕಾರಣಿಗಳ ಕೈಗೆ ಹೋಗುತ್ತ ಅಸಹ್ಯ ಹುಟ್ಟಿಸುತ್ತದೆ. ಹಿಂದೆ ಅಂಬೇಡ್ಕರ್ ಮತ್ತು ಲೋಹಿಯಾ ಅವರು ಕಟ್ಟಬೇಕೆಂದುಕೊಂಡಿದ್ದ ಸಮಾಜವಾದಿ ಪಕ್ಷ ಪ್ರಯತ್ನ ಅಂಬೇಡ್ಕರ್ ಅವರ ನಿಧನದಿಂದ ಅಲ್ಲಿಗೆ ನಿಂತಿತು. ಆ ತತ್ವ ಸಿದ್ಧಾಂತದ ಅಡಿಗಲ್ಲಿನ ಮೇಲೆ ನಾವಿಂದು ಹೊಸ ಪಕ್ಷವನ್ನು ಕಟ್ಟಬೇಕೆಂದು ದಲಿತ ಸಂಘರ್ಷ ಸಮಿತಿಯ ಒಂದು ಬಣ, ರೈತ ಸಂಘದ ಒಂದು ಬಣ ಮುಂತಾದವು. ಅದಕ್ಕೆ ಕರುನಾಡ ಸೇನೆಯ ಕೈ ಜೋಡಿಸಿ ಸರ್ವೋದಯ ಕರ್ನಾಟಕವೆಂಬ ಹೊಸ ಪಕ್ಷದ ಉದಯವಾಯಿತು. ಮಹಿಳೆ, ದಲಿತ, ರೈತ, ಆದಿವಾಸಿ, ಹಿಂದುಳಿದ ಹೀಗೆ ಎಲ್ಲಾ ಕ್ಷೇತ್ರಕ್ಕೂ ಪ್ರಾತಿನಿಧ್ಯ ನೀಡಬೇಕೆಂಬ ಪೃವೃತಿ ಸಹನೆಯಿಂದ ನಾಡ ಕಟ್ಟಬೇಕೆಂಬ ಆಶಯದೊಂದಿಗೆ, ಅಂತರಜಲ ಮಟ್ಟ ಇಳಿಯದಂತೆ ನೋಡಿಕೊಳ್ಳುವ, ಬೀಜ, ಗೊಬ್ಬರ ಕ್ರಿಮಿನಾಶಕಗಳನ್ನು ದೂರ ಇಡುವದೂ, ನೈಸರ್ಗಿಕ ಕೃಷಿಗೆ ಇಂಬೂ ಕೊಡುವುದೂ, ನೀರು, ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ, ಉದ್ಯೋಗ ಖಾತ್ರಿ ಇತ್ಯಾದಿ ಕಾರ್ಯಕ್ರಮಗಳನ್ನು ಗ್ರಾಮಾಂತರ ಪ್ರದೇಶಕ್ಕೆ ವಿಸ್ತರಿಸುವುದೂ ಇತ್ಯಾದಿ ಆಸೆಯಿಂದ ಗಾಂಧೀಜಿ ಕನಸಿನ ಸರ್ವೋದಯ ಕರ್ನಾಟಕವು ಜನ್ಮ ತಾಳಿತು. ಅದಕ್ಕೆ ದೇವನೂರ ಮಹಾದೇವರನ್ನು ಅಧ್ಯಕ್ಷರನ್ನಾಗಿ ನಾಮಕರಣ ಮಾಡಲಾಯಿತು. ಇದನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಅವರು ಹೇಳಿದ ಮಾತು ಅಂದರೆ ‘ಅಯ್ಯೋ ಮಾದೇವನೇ ರಾಜಕಾರಣ ಮಾಡುವುದಾದರೆ ಇನ್ನು ನಮಗ್ಯಾವ ಲೆಕ್ಕ’ ಎಂದು ಕೊಂಡು ಸಮಾನತೆ, ಐಕ್ಯತೆ, ಅಭಿವೃದ್ಧಿಗೆ ಆಶಿಸುವವರೆಲ್ಲರೂ ಸುಮ್ಮನಿರದೆ ರಾಜಕಾರಣಕ್ಕೆ ಇಳಿಯುವಂತಾದರೆ ನನ್ನ ಅಧ್ಯಕ್ಷತೆ ಯಶಸ್ವಿಯಾದಂತೆ ಎಂದರು. ಆದರೆ ಆ ಮೇಲಿನ ಕರ್ನಾಟಕದ ರಾಜಕೀಯ ಇತಿಹಾಸ ಏನಾಯಿತೆಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಪಕ್ಷವೂ ಬಾಲಗ್ರಹ ಪೀಡಿತವಾಗಿ ಸೊರಗಿ ಹೋಯಿತು.
ಮಾದೇವರ ಈ ರಾಜಕೀಯ ನಡೆಯನ್ನೇ ಗುಮಾನಿಯಿಂದ ನೋಡಲಾಯಿತು. ಇದು ಆತ್ಮವಂಚನೆಯ, ಸಮೂಹಗಳ ಗೈರುಹಾಜರಿಯ, ಕೇವಲ ಪ್ರಲೋಭನೆಯ ರಾಜಕೀಯವೆಂದು ಅಪಪ್ರಚಾರ ಮಾಡಲಾಯಿತು. ಆದರೆ  ಸ್ತುತಿ ನಿಂದನೆಗಳು ಬಂದರೆ ಕೂಡಲ ಸಂಗಮನ ಶರಣರು ಸಮಾಧಾನಿಯಾಗಿರಬೇಕು ಎಂಬ ವಚನದಂತೆ ಮಾದೇವ ಮಾತ್ರ ಸಮಾಧಾನದಿಂದಲೇ ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ ‘ನಾಡೋಜ’ನಾಗಿ ಎದೆಗೆ ಬಿದ್ದ ಅಕ್ಷರ’ದ ಬಿತ್ತನೆಯಿಂದ ‘ಅಲ್ಲೆ ಕುಳಿತವರ’ ಕಣ್ಣ  ಬೆಳಕಾಗಿಸುವ ಪ್ರಯತ್ನವನ್ನು ಬಿಡದವರಾಗಿದ್ದಾರೆ.
____________________________________
‘ಅರುಹು ಕುರುಹು’, ಜೂನ್ 2013