ಅಪರಾಧಿಗಿಂತ ಅಪರಾಧ ನಿರ್ಮೂಲನೆ ಮುಖ್ಯ -ನಟರಾಜು ವಿ

nataraj

ಪಠ್ಯ – ಪ್ರಮಾಣ- [ಅಂಕಣ]

‘ಆ ದೇವರು  ಕ್ಷಮಿಸಲಾಗದಂಥ ಪಾಪ ಈ ಜಗತ್ತಿನಲ್ಲಿ ಯಾವುದೂ ಇಲ್ಲ, ದೇವರ ಅನಂತ ಪ್ರೀತಿಯನ್ನು ಬರಿದು ಮಾಡುವಂಥ ಗಂಭೀರ ಪಾತಕವನ್ನು ಮನುಷ್ಯ ಎಸಗಲಾರ. ದೇವರ ಪ್ರೀತಿಯನ್ನು ಮೀರಿಸುವಂಥ ಯಾವುದಾದರೂ ಪಾತಕ ಈ ಜಗತ್ತಿನಲ್ಲಿದೆಯೇ?’

ನ್ಯಾಯ ಮತ್ತು ಧರ್ಮಗಳ ಪರಿಕಲ್ಪನೆಯನ್ನು ಇತ್ತೀಚಿನ ಶತಮಾನಗಳಲ್ಲಿ ಮರುಹದಗೊಳಿಸಿದ ಮಾತುಗಳಿವು.  ಜಗತ್ತು ಕಂಡ ಶ್ರೇಷ್ಠ ಸಾಹಿತಿ, ಕಾದಂಬರಿಕಾರರಲ್ಲಿ ಒಬ್ಬರಾದ ಫ್ಯೋದರ್ ದಸ್ತೊವೆಸ್ಕಿಯ ‘ ಬ್ರದರ್ಸ್ ಕರಮಝೊವ್’ ಕೃತಿಯಲ್ಲಿನ ಈ ಮಾತುಗಳು ನ್ಯಾಯ, ಧರ್ಮ, ತತ್ವಗಳ ಹಿಂದಿನ ಆಶಯಗಳನ್ನು ಸ್ಥೂಲವಾಗಿ ಹಿಡಿದಿಡುತ್ತವೆ. ದೇವರು, ಧರ್ಮ, ಆದರ್ಶಗಳ ಪರಿಧಿಯಲ್ಲಿ ಮೂಡುವಂಥ ಇಂಥ ಮಾತುಗಳು ವಾಸ್ತವದ ಬರ್ಬರ ಕ್ರೌರ್ಯಗಳಿಗೆ, ಪಕ್ಪಪಾತಿ ಅಥವಾ ಕುರುಡು ನ್ಯಾಯಗಳಿಗೆ ಉತ್ತರವಾಗಲಾರವು ಎನ್ನುವ ಭಾವನೆ ನಮ್ಮೆಲ್ಲರಲ್ಲೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಇದು ಕೇವಲ ಆದರ್ಶಯುತವಾದ ಹೇಳಿಕೆ ಎಂದೇ ತೀರ್ಮಾನಿಸಬೇಕಿಲ್ಲ. ಧರ್ಮ ಹಾಗೂ ನೈತಿಕತೆಗಳ ಕೇಂದ್ರ ಕಲ್ಪನೆಗಳನ್ನೇ ನಿಕಷಕ್ಕೆ ಒಡ್ಡಿದ, ತತ್ವಶಾಸ್ತ್ರ ಹಾಗೂ ವೈಚಾರಿಕತೆಯ ಆಯಾಮವನ್ನು ವಿಸ್ತರಿಸಿದ ಫ್ರೆಡ್ರಿಕ್ ನೀಷೆ (ನೀಛ)  ಮಾತುಗಳೂ ಸಹ ದಸ್ತೋವಸ್ಕಿ ಮಾತುಗಳಿಗಿಂತ ಭಿನ್ನವಲ್ಲ.  ನೀಷೆ ತನ್ನ, ‘ದಸ್ ಸ್ಪೋಕ್  ಝರಾತುಷ್ಟ್ರ’, ಕೃತಿಯಲ್ಲಿ ಹೇಳುವ ಮಾತು ಇಲ್ಲಿ ಉಲ್ಲೇಖನೀಯ, “ಯಾರಲ್ಲೆಲ್ಲ ಶಿಕ್ಷಿಸಬೇಕು ಎನ್ನುವ ತುಡಿತವಿರುತ್ತದೆಯೋ ಅವರಲ್ಲಿ ವಿಶ್ವಾಸವಿರಸಬೇಡಿ. ಅವರೊಂದು ಕೆಟ್ಟ ಜನಾಂಗ; ಅವರ ಮುಖದಲ್ಲಿ ಗಲ್ಲಿಗೇರಿಸುವ ಕಟುಕರ ಚಹರೆಗಳು ಇಣುಕುತ್ತಿರುತ್ತವೆ”, ಎನ್ನುತ್ತಾನೆ.

ಮೇಲಿನ ಈ ಮಾತುಗಳನ್ನು ನಾವು ಸಮಕಾಲೀನ ಘಟನಾವಳಿಗಳ ಹಿನ್ನೆಲೆಯಲ್ಲಿ ನೋಡಲು ಸಾಧ್ಯವೇ? ದೇಶವನ್ನೇ ಕಲಕಿದ, ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ  ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜ್ಯೋತಿ ಸಿಂಗ್ (ನಿರ್ಭಯಾ) ದಾರುಣವಾಗಿ ಮರಣವನ್ನಪ್ಪಿದ್ದು ನಮ್ಮ ಕಣ್ಣಮುಂದಿದೆ. ಆಕೆ ಮೇಲೆ ಬರ್ಬರ ಕ್ರೌರ್ಯವೆಸಗಿದವರಲ್ಲಿ ಓರ್ವ ಬಾಲಾಪರಾಧಿಯೂ ಇದ್ದ. ಆತನ ಬಿಡುಗಡೆ ಡಿ.20ರಂದು ಆಗಲಿದೆ ಎನ್ನುವ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ದೇಶದುದ್ದಕ್ಕೂ ನಡೆಯುತ್ತಿವೆ. ಇಂಥ ಹೇಯ, ಬರ್ಬರ ಕೃತ್ಯವನ್ನು ಕೈಗೊಂಡಾತನನ್ನು ಬಹಿರಂಗವಾಗಿ ಓಡಾಡಿಕೊಂಡಿರಲು ಬಿಡಲು ಹೇಗೆ ಸಾಧ್ಯ? ಬಾಲಾಪರಾಧ ಕುರಿತಾದ ಕಾನೂನುಗಳಿಗೆ ತಿದ್ದುಪಡಿ ತರಲು ಇದಕ್ಕಿಂತ ಇನ್ನಾವ ಉದಾಹರಣೆ ಬೇಕು? ಅಸಲಿಗೆ ಇಂಥ ಬರ್ಬರ ಕೃತ್ಯಗಳನ್ನು ಕೈಗೊಂಡವರನ್ನು ಶಿಕ್ಷಿಸುವಾಗ ಹದಿನೆಂಟರ  ವಯೋಮಾನವನ್ನು ಗಡಿ ರೇಖೆಯಂತೆ ಏಕೆ ಪರಿಗಣಿಸಬೇಕು?  ಹದಿನೆಂಟು ತುಂಬುವುದಕ್ಕೂ ಒಂದು ದಿನ ಮುಂಚೆ ಹೇಯ ಹಿಂಸಾ ಕೃತ್ಯವೊಂದರಲ್ಲಿ ತೊಡಗಿದ್ದವನಿಗೂ ಹದಿನೆಂಟು ತುಂಬಿದೊಡನೆಯೇ ಹೀನ ಕೃತ್ಯವೊಂದರಲ್ಲಿ ಭಾಗಿಯಾದವನಿಗೂ ಏನು ವ್ಯತ್ಯಾಸವಿರುತ್ತದೆ?  ಹೀಗೆ ಆಕ್ರೋಶದ ಪ್ರಶ್ನೆಗಳು ಹೆಜ್ಜೆಹೆಜ್ಜೆಗೂ ಎದುರಾಗುತ್ತವೆ. ಬಡವರಿಗೆ ಒಂದು ಬಗೆಯ ಕಾನೂನು, ಶ್ರೀಮಂತರಿಗೇ ಒಂದು ಬಗೆಯ ಕಾನೂನು ಎನ್ನುವ ಅನಿಸಿಕೆ ವ್ಯಾಪಕವಾಗಿ ಜನಸಾಮಾನ್ಯರಲ್ಲಿ ಬಲಗೊಂಡಿರುವ ಸಮಾಜ ನಮ್ಮದು. ಸಹಜವಾಗಿಯೇ ನಮ್ಮನ್ನು ಆಳವಾಗಿ ಕಲಕಿದ ಪ್ರಕರಣಗಳಲ್ಲಿಯಾದರೂ ನ್ಯಾಯ ದೊರೆಯಬೇಕು ಎಂದು ಜನಸಾಮಾನ್ಯರು ಬಯಸುವುದು ಅರ್ಥವಾಗುವಂಥದ್ದೇ.

ಯಾವುದೇ ಒಂದು ಪ್ರಕರಣಕ್ಕೆ ಸೀಮಿತವಾಗದೆ ಆಧುನಿಕ ನ್ಯಾಯಿಕ ಪರಿಕಲ್ಪನೆಯ ಬಗ್ಗೆ, ನ್ಯಾಯದಾನದ ನಿರೀಕ್ಷೆಗಳ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಈ ಸಂದರ್ಭದಲ್ಲಿ ಮುಖ್ಯವೆನಿಸುತ್ತದೆ. ನಮ್ಮ ನ್ಯಾಯದ ಪರಿಕಲ್ಪನೆಯಲ್ಲಿ ಶಿಕ್ಷೆಗೆ ಹೆಚ್ಚು ಮಹತ್ವವಿದೆ. ಅನ್ಯಾಯಕ್ಕೆ, ದೌರ್ಜನ್ಯಕ್ಕೆ ತುತ್ತಾದವರು ನ್ಯಾಯವನ್ನು ಬಯಸುತ್ತಾರೆ ಎಂದರೆ ಅದರ ಅರ್ಥ ತಮ್ಮ ಮೇಲೆ ದೌರ್ಜನ್ಯವೆಸಗಿದವರಿಗೆ ಶಿಕ್ಷೆಯಾಗಬೇಕು ಎನ್ನುವುದಾಗಿರುತ್ತದೆ. ನ್ಯಾಯದಾನ ಎಂದರೆ ಅದು ಆರೋಪಿಗಳಿಗೆ ಶಿಕ್ಷೆಯನ್ನು ನೀಡುವುದು ಎನ್ನುವ ಕಲ್ಪನೆ ನಮ್ಮನ್ನು ಆವರಿಸಿದೆ. ಇಂದಿನ ಎಲ್ಲ ಆಧುನಿಕ ಸಮಾಜಗಳು ಸಹ ‘ಶಿಕ್ಷಿಸುವ ಸಮಾಜಗಳಾಗಿಯೇ’ ಮಾರ್ಪಟ್ಟಿವೆ. ವಿಪರ್ಯಾಸವೆಂದರೆ ಈ ಶಿಕ್ಷೆ ಏನಾದರೂ ಗುರುತರವಾದ ಬದಲಾವಣೆಯನ್ನು ತರುತ್ತಿದೆಯೇ ಎನ್ನುವ ಪ್ರಶ್ನೆಗೆ ಸಮರ್ಪಕವಾದ ಉತ್ತರ ದೊರೆಯುತ್ತಿಲ್ಲ. ಅಪರಾಧ ಪ್ರಮಾಣದಲ್ಲಿ ಜಾಗತಿಕವಾಗಿ ಯಾವುದೇ ಗುರುತರ ಇಳಿಕೆ ಕಂಡುಬರುತ್ತಿಲ್ಲ. ಬಹುಶಃ ಈಗ ಇರುವುದಕ್ಕಿಂತ ಹೆಚ್ಚು ಕಠಿಣವಾದ ಶಿಕ್ಷೆಗಳನ್ನು ಅದೂ ತ್ವರಿತವಾಗಿ ನೀಡುವುದರಿಂದ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುವಂಥ ಜನಪ್ರಿಯ ಅಭಿಪ್ರಾಯಗಳಿವೆ. ‘’ಅರಬ್ ದೇಶಗಳನ್ನು ನೋಡಿ ಅಲ್ಲಿ ಎಷ್ಟು ಬೇಗ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ, ಅದೂ ಸಾರ್ವಜನಿಕವಾಗಿ; ಹಾಗೆ ಮಾಡುವುದರಿಂದ ಜನರಿಗೆ ಕಾನೂನಿನ ಬಗ್ಗೆ ಭಯ ಬರುತ್ತದೆ, ಅಪರಾಧಗಳು ಕಡಿಮೆಯಾಗುತ್ತವೆ”, ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿರುತ್ತವೆ. ವಿಪರ್ಯಾಸವೆಂದರೆ, ಅಂಥ ಶಿಕ್ಷೆಗಳನ್ನು ವಿಧಿಸುತ್ತಿರುವ ಸಮಾಜಗಳಲ್ಲಿ ಅಪರಾಧದ ಸಂಖ್ಯೆ ಬೇರೆ ಸಮಾಜಗಳಿಗಿಂತ ಕಡಿಮೆ ಇದೆ ಎನ್ನುವುದು ನಿಜವಾದರೂ ಅದು ಇಳಿಮುಖವಾಗಿಲ್ಲ. ಅಷ್ಟು ಮಾತ್ರವೇ ಅಲ್ಲ ಅತಿ ಎನಿಸುವ ಬಿಗುವು ಹೊಂದಿರುವ ಈ ಸಮಾಜಗಳಲ್ಲಿ ಜನತೆ ಸದಾಕಾಲ ಆತಂಕಿತರಾಗಿ ಬದುಕುವುದು ಕಂಡುಬರುತ್ತದೆ.  ಶಿಕ್ಷೆ ಹಾಗೂ ಸರ್ಕಾರಗಳ ದಮನಕಾರಿ ನಡವಳಿಕೆಯ ನಡುವಿನ ಗೆರೆ ಇಲ್ಲಿ ಹೆಚ್ಚು ಕಡಿಮೆ ಅಳಿಸಿಯೇ ಹೋಗಿದೆ. ಹಾಗಾಗಿಯೇ ಈ ಸಮಾಜಗಳಲ್ಲಿ ಇತರೆ ದೇಶಗಳ ಹೋಲಿಕೆಯಲ್ಲಿ ಅಪರಾಧಗಳ ಸಂಖ್ಯೆಯಲ್ಲಿ ಕಡಿಮೆ ಪ್ರಕರಣಗಳು ದಾಖಲಾದರೂ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರದಲ್ಲಿ ಬೇರೆ ದೇಶಗಳಿಗಿಂತ ಹೆಚ್ಚು ದಮನಕಾರಿ ಪ್ರವೃತ್ತಿ ಕಂಡುಬರುತ್ತದೆ.

ಶಿಕ್ಷೆ ಹಾಗೂ ಶಿಕ್ಷಣ ಎನ್ನುವ ಪದಗಳ ಬೇರು ಒಂದೇ ಆಗಿದ್ದರೂ ಅರ್ಥದಲ್ಲಿ ಗಂಭೀರ ವ್ಯತ್ಯಾಸಗಳಿವೆ. ಶಿಕ್ಷಣ ಎನ್ನುವುದು ತಿದ್ದುವ, ಅರಿವು ಮೂಡಿಸುವ, ಪ್ರಜ್ಞೆಯನ್ನು ವಿಸ್ತರಿಸುವ ಕೆಲಸವಾದರೆ ಶಿಕ್ಷೆ ತಪ್ಪು ಮಾಡಿದವರನ್ನ ಅಥವಾ ಅಪರಾಧವೆಸಗಿದವರನ್ನು ದಂಡಿಸುವ ಕ್ರಮ ಮಾತ್ರವೇ ಆಗಿರುತ್ತದೆ. ಶಿಕ್ಷೆಯ ಭಾಗವಾಗಿ ವಿಧಿಸುವ ಸೆರೆವಾಸಗಳು ನಿಜಕ್ಕೂ ಎಷ್ಟು ಪರಿಣಾಮಕಾರಿ? ಇವುಗಳಿಂದ ಅಪರಾಧಿಗಳ ಮನಃಪರಿವರ್ತನೆಯಾಗುತ್ತದೆಯೇ? ನಮ್ಮ ಜೈಲುಗಳು ಮನಃಪರಿವರ್ತನೆಯ ತಾಣಗಳಾಗಿವೆಯೇ? ರಿಮ್ಯಾಂಡ್ ಹೋಂಗಳು ಬಾಲಾಪರಾಧಿಗಳಲ್ಲಿ ಪರಿವರ್ತನೆ ತರುವಂಥ, ನೈತಿಕಪ್ರಜ್ಞೆಯನ್ನು ಅವರಲ್ಲಿ ಆಳವಾಗಿ ಮೂಡಿಸುವಂಥ ಕೇಂದ್ರಗಳಾಗಿವೆಯೇ? ಈ ಯಾವ ಪ್ರಶ್ನೆಗಳಿಗೂ ನಮ್ಮಲ್ಲಿ ಸಕಾರಾತ್ಮಕ ಉತ್ತರಗಳಿಲ್ಲ. ಜೈಲುಗಳು ಅಪರಾಧವನ್ನು ಕಲಿಸುವ ವಿಶ್ವವಿದ್ಯಾಲಯಗಳಂತೆ ಕೆಲಸ ಮಾಡುತ್ತಿವೆ, ಅಪರಾಧ ಚಟುವಟಿಕೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸುವ ಹಾಗೂ ಅದಕ್ಕೆ ಬೇಕಾದ ನೆಟ್ ವರ್ಕಿಂಗ್ ಮಾಡಿಕೊಳ್ಳುವ ವೇದಿಕೆಗಳಾಗಿ ಪರಿಣಮಿಸಿವೆ ಎಂದು ನಮ್ಮ ಅನೇಕ ದಕ್ಷ ಪೊಲೀಸ್ ಅಧಿಕಾರಿಗಳೇ ಬಹಿರಂಗವಾಗಿ ಬೇಸರಿಸುವುದನ್ನು ನೀವು ಗಮನಿಸಿರಬಹುದು. ನ್ಯಾಯದಾನವೆನ್ನುವುದು ಕೇವಲ ಶಿಕ್ಷಿಸುವ ಅಂಶವನ್ನು ಮಾತ್ರವೇ ಒಳಗೊಂಡಿರುವುದಿಲ್ಲ, ಬದಲಿಗೆ ಅಪರಾಧಿಯ ಮನಃಪರಿವರ್ತನೆಗೆ ಅಗತ್ಯವಾದ ವಾತಾವರಣವನ್ನೂ ಕಲ್ಪಿಸುವುದಾಗಿರುತ್ತದೆ. ನಮ್ಮ ಜೈಲುಗಳು ಅಪರಾಧಿಗಳಲ್ಲಿ ದೈಹಿಕ ಶಿಸ್ತು, ಶ್ರಮ ಪ್ರವೃತ್ತಿಗಳನ್ನು ಅಳವಡಿಸುವತ್ತ ಗಮನಹರಿಸುತ್ತವೆಯೇ ಹೊರತು ಮಾನಸಿಕವಾಗಿ ಅವರನ್ನು ಸ್ವಸ್ಥರನ್ನಾಗಿಸುವ, ಗುಣಮುಖರನ್ನಾಗಿಸುವ ಕಡೆ ಗಮನಹರಿಸುವುದಿಲ್ಲ. ಇದಕ್ಕೆ ಬೇಕಾದಂಥ ಯಾವುದೇ ಸಿದ್ಧತೆಗಳು, ಸೌಕರ್ಯಗಳು ನಮ್ಮ ಜೈಲುಗಳಲ್ಲಿರುವುದಿಲ್ಲ.

ಇಂದು ಮನಶ್ಶಾಸ್ತ್ರ ಎನ್ನುವುದು ವಿಸ್ತಾರವಾಗಿ ಬೆಳೆದಿರುವಂಥ ಅಧ್ಯಯನ ಶಿಸ್ತಾಗಿದೆ. ಆದರೆ ಇಂದಿಗೂ ಮನುಷ್ಯ ಹಿಂಸೆಯೆಡೆಗೆ, ಅಪರಾಧಗಳೆಡೆಗೆ ಏಕೆ ವಾಲುತ್ತಾನೆ, ಅಪರಾಧಗಳೆಡೆಗೆ ಏಕೆ ಆಕರ್ಷಣೆ ಬೆಳೆಸಿಕೊಳ್ಳುತ್ತಾನೆ ಎನ್ನುವ ಬಗ್ಗೆ ನಿರೀಕ್ಷಿಸಿದಷ್ಟು ಚರ್ಚೆಗಳು, ಅಧ್ಯಯನಗಳು ಆಗಿಲ್ಲ. ಅಲ್ಲದೆ ಮನಶ್ಶಾಸ್ತ್ರ ಹಾಗೂ ನ್ಯಾಯದಾನದ ಕಲ್ಪನೆಗಳನ್ನು ಒಟ್ಟಿಗೆ ತರುವ ಪ್ರಯತ್ನಗಳೂ ನಡೆದಿಲ್ಲ. ಅಪರಾಧಗಳ ವಿವಿಧ ಚಹರೆಗಳು ಅದರ ಹಿಂದಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕಾರಣಗಳ ಬಗ್ಗೆ, ಆಧುನಿಕ ಜೀವನಶೈಲಿ ಒಡ್ಡುವ ಆಮಿಷಗಳು, ನೀಡುವ ಪ್ರಚೋದನೆಗಳು ನಮ್ಮ ನ್ಯಾಯದಾನದ ಕಲ್ಪನೆಯಲ್ಲಿ ಬಹುಮುಖ್ಯವಾಗಿ ಪರಿಗಣಿತವಾಗಬೇಕು. ಆಧುನಿಕ ಜೀವನಶೈಲಿ ಒಡ್ಡುವ ವಾಂಛೆಗಳು, ಮುಕ್ತತೆಯನ್ನು ವಿವಿಧ ಸಂಸ್ಕೃತಿ, ಮನಸ್ಥಿತಿಗಳ ಹಿನ್ನೆಲೆಯಿಂದ ಬಂದ ವ್ಯಕ್ತಿಗಳು, ಸಮೂಹ ವ್ಯಾಖ್ಯಾನಿಸುವ ರೀತಿ, ನೋಡುವ ಹಾಗೂ ಪ್ರತಿಕ್ರಿಯಿಸುವ ಕ್ರಮ ಇವೆಲ್ಲ ನ್ಯಾಯದ ಪರಿಕಲ್ಪನೆಯಡಿ ಚರ್ಚೆಗೆ ಒಳಪಡಬೇಕಾದ ಅಂಶಗಳು. ಮನುಷ್ಯನನ್ನು ಉನ್ಮತ್ತನನ್ನಾಗಿಸುವ ಅಂಶಗಳು, ಅವನಲ್ಲಿ ವಿಕೃತಿಯನ್ನು ಪ್ರಚೋದಿಸಲು ಕಾರಣವಾದ ಸಂಗತಿಗಳು, ಅವುಗಳ ಹಿಂದಿನ ಆಲೋಚನಾ ಕ್ರಮ ಇವುಗಳನ್ನು ಪರಿಗಣನೆಗೆ ಒಳಪಡಿಸದೆ ಹೋದರೆ ಅಪರಾಧಿಯನ್ನು ಶಿಕ್ಷಿಸುತ್ತೇವೆಯೇ ಹೊರತು ಅಪರಾಧಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ. ಅಪರಾಧಗಳನ್ನು ವ್ಯಕ್ತಿಗತ ಚಹರೆಯಲ್ಲಿ, ಕಲಮುಗಳಡಿಯಲ್ಲಿ ನೋಡುವುದಕ್ಕೆ ಮಾತ್ರವೇ ನಮ್ಮ ನ್ಯಾಯದಾನದ ಪ್ರಕ್ರಿಯೆ ಸೀಮಿತವಾಗುತ್ತಿದೆ. ಅದೇ ರೀತಿ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಯ ಬಗ್ಗೆ ಮಾತ್ರವೇ ನಮ್ಮ ಸಮಾಜ ಆಸಕ್ತಿ ತೋರುತ್ತಿದೆ. ಅಪರಾಧಗಳನ್ನು ತಡೆಯುವುದು ಕೇವಲ ಕಲಮುಗಳ ಕೆಲಸವಾಗಲಿ, ನ್ಯಾಯಾಧೀಶರ ಕೆಲಸವಾಗಲಿ ಅಲ್ಲ. ಸಮಾಜದಲ್ಲಿ ಬೇರಿಳಿಸುತ್ತಿರುವ ಕುತ್ಸಿತ ಮನಸ್ಥಿತಿ, ಹಿಂಸಾ ವಿನೋದ, ಮೃಗೀಯ ಮನರಂಜನೆ, ತೀರದ ತೃಷೆಗಳಿಗೆ ಹೇಗೆ ಮುಖಾಮುಖಿಯಾಗಬೇಕು ಎನ್ನುವ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಸಮಾಜದ ಕರ್ತವ್ಯ ಸಹ. ಸಮಾಜದ ಸ್ವಾಸ್ಥ್ಯವನ್ನು ಕೇವಲ ನ್ಯಾಯಾಲಯಗಳು ಮಾತ್ರವೇ ಕಾಪಾಡಬೇಕೆ? ಆ ಜವಾಬ್ದಾರಿ ನಾಗರಿಕ ಸಮಾಜಕ್ಕಿಲ್ಲವೇ? ಈ ವಿಚಾರದಲ್ಲಿ ನಾಗರಿಕ ಸಮಾಜದ ಸಂಘಟಿತ ಪ್ರಯತ್ನಗಳೇನು?  ಇನ್ನಾದರೂ ಇಂಥ ಪ್ರಶ್ನೆಗಳನ್ನು ನಾವು ಒಂದು ಸಮಾಜವಾಗಿ ಗಂಭೀರವಾಗಿ ಪರಿಗಣಿಸದೆ ಹೋದರೆ ಭವಿಷ್ಯವೆನ್ನುವುದು ಮತ್ತಷ್ಟು ಮಸುಕಾಗಲಿದೆ.

ಈ ಹಿನ್ನೆಲೆಯಲ್ಲಿ ಪರಿಗಣಿಸಿದಾಗಲೆ ನೀಷೆಯ ಮಾತುಗಳು ನಮಗೆ ಮುಖ್ಯವೆನಿಸುತ್ತವೆ. ನಾವು ಶಿಕ್ಷಿಸುವ ಸಮಾಜವಾಗಿ ಮಾತ್ರವೇ ಸೀಮಿತಗೊಳ್ಳದೆ, ತಿದ್ದುವ ಸಮಾಜವಾಗಿ ಮಾರ್ಪಡಬೇಕು. ನಮ್ಮ ಆಕ್ರೋಶಗಳು ಅಪರಾಧಿಗಳ ಕಡೆಯಿಂದ ಅಪರಾಧಗಳ ಕುರಿತು ತರ್ಕಿಸುವ, ಅಪರಾಧಗಳನ್ನೆಸಗುವ ಮನಸ್ಥಿತಿ, ಪರಿಸರಗಳನ್ನು ಸ್ವಸ್ಥವಾಗಿಸುವ ಕಡೆಗೆ ರಚನಾತ್ಮಕವಾಗಿ ತಿರುಗಬೇಕು. ತನ್ನ ತಪ್ಪಿನ ಬಗ್ಗೆ ತಪ್ತ ಹೃದಯದಿಂದ ತಿದ್ದಿಕೊಳ್ಳುವಂಥ ವಾತಾವರಣ ನಿರ್ಮಾಣವಾದಾಗ ಮಾತ್ರ ನಮ್ಮ ನಾಗರಿಕತೆಗೆ ಅರ್ಥ ಬರುತ್ತದೆ.