ಅನ್ನಭಾಗ್ಯದಂತಹ ಆಹಾರ ಭದ್ರತೆ ಕುರಿತು -ನಿತ್ಯಾನಂದ ಬಿ. ಶೆಟ್ಟಿ,

                                                                                                                       anna bhaghya                                                                                                                                   ನಿತ್ಯಾನಂದ ಬಿ. ಶೆಟ್ಟಿ,  ತುಮಕೂರು

                           

                                                      ಇನ್ನಾರಿಗೆ ದೂರಲಿ ಕೂಡಲಸಂಗಮದೇವ

ಘಟನೆ-1: ಎಸ್ ಎಂ ಕೃಷ್ಣ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ದೇಶದಲ್ಲೇ ಮೊದಲಿಗೆ ಜಾರಿಗೆ ತಂದಿತ್ತು. ಆಗಲೂ ಪರ/ವಿರೋಧ ಚರ್ಚೆ ಭಾರೀ ಬಿರುಸಾಗಿ ನಡೆದಿತ್ತು. ನಮ್ಮನ್ನು ಸುತ್ತುವರಿದಿರುವ ಶೈಕ್ಷಣಿಕ/ಸಾಮಾಜಿಕ ಸಂಗತಿಗಳೆಲ್ಲವೂ ಬಿಸಿಯೂಟದ ಅನ್ನದ ಬಟ್ಟಲಿನ ಸುತ್ತ ಕುಣಿಯುತ್ತಿದ್ದವು. ನಾನು ಆಗ ಮೂಡುಬಿದಿರೆಯಲ್ಲಿ ಅಧ್ಯಾಪಕನಾಗಿದ್ದೆ. ವೈಯಕ್ತಿಕ ಕುತೂಹಲದಿಂದ ಮಧ್ಯಾಹ್ನದ ಒಂದು ಹೊತ್ತು ನನ್ನ ಇಬ್ಬರು ವಿದ್ಯಾರ್ಥಿಗಳೊಂದಿಗೆ ಸರಕಾರೀ ಶಾಲೆಯೊಂದಕ್ಕೆ ಭೇಟಿ ನೀಡಿದೆ. ಎಲ್ಲ ಮಕ್ಕಳಲ್ಲೂ ನಜ್ಜುಗುಜ್ಜಾದ ಅಲ್ಯೂಮಿನಿಯಂ ತಟ್ಟೆಗಳು.(ಬಟ್ಟಲುಗಳು) ಆದರೆ ಒಂದು ಮಗು ಎರಡು ಎಲೆಗಳನ್ನು ಹಿಡಿದುಕೊಂಡು ಕುಳಿತಿತ್ತು. ಕೆಸುವಿನ [colocasia] ಎಲೆಗಳು ಅವು. (ಈ ಎಲೆಗಳ ರಸ ಸೋಕಿದರೆ ವಿಪರೀತ ತುರಿಕೆ) ನಾನು ಟೀಚರ್ ಅನ್ನು ಕೇಳಿದೆ. ಈ ಮಕ್ಕಳು ಯಾಕೆ ತಟ್ಟೆ ತಂದಿಲ್ಲ. ಆಗ ಟೀಚರ್ ಅಂದರು ‘ಸಾರ್, ಅದಕ್ಕೂ ಅವರಲ್ಲಿ ದುಡ್ಡಿಲ್ಲ. ಆ ಹುಡುಗ ಎರಡು ಎಲೆ ತಂದಿದ್ದಾನಲ್ಲ. ಅದು ಅವನ ತಮ್ಮನಿಗೆ. ಅವನಿಗೆ ಇನ್ನೂ ನಾಲ್ಕು ವರ್ಷ. ಈ ಶಾಲೆಗೆ ಅವನು ಪ್ರವೇಶವೇ ಪಡೆದಿಲ್ಲ. ಆದರೆ ಮನೆಯಲ್ಲಿ ಕೂಳಿಲ್ಲ. ಸ್ಕೂಲ್‍ಗೆ ಬಂದು ಹೊಟ್ಟೆ ತುಂಬಿಸ್ಕೋತಾರೆ ಪಾಪ. ಭಾನುವಾರÀ ಅವರು ಊಟಕ್ಕೆ ಏನು ಮಾಡುತ್ತಾರೆ ಎಂಬುದೇ ನನ್ನ ಚಿಂತೆ’. ಇದು ಶಿಕ್ಷಣಕಾಶಿ, ಆಧುನಿಕತೆಯ ಹೆಬ್ಬಾಗಿಲು, ಬುದ್ಧಿವಂತರ ಜಿಲ್ಲೆ ಇತ್ಯಾದಿ ಏನೇನೋ ವಿಶೇಷಣಗಳನ್ನು ಪಡೆದುಕೊಂಡ ಜಿಲ್ಲೆಯಲ್ಲಿನ ನನ್ನ ಅನುಭವ.

ಘಟನೆ-2: ಕಾಲಾಂತರದಲ್ಲಿ ಉದ್ಯೋಗನಿಮಿತ್ತವಾಗಿ ನಾನು ತುಮಕೂರಿಗೆ ಬಂದೆ. ನನ್ನ ಪಕ್ಕದ ಮನೆಯಲ್ಲಿ ಸರಕಾರೀ ಉರ್ದು ಪ್ರಾಥಮಿಕ ಶಾಲೆಯ ಟೀಚರ್ ಒಬ್ಬರು ವಾಸವಾಗಿದ್ದರು. ಪ್ರತಿ ಭಾನುವಾರವೂ ಅವರು ಅರ್ಧದಿವಸದ ಮಟ್ಟಿಗಾದರೂ ಶಾಲೆಗೆ ಹೋಗುತ್ತಿದ್ದರು. ಯಾಕೆ ಟೀಚರ್ ಭಾನುವಾರ ಯಾಕೆ ಸ್ಕೂಲ್‍ಗೆ ಹೋಗ್ತೀರಿ.? ಅಂದೆ ನಾನು. ಅದಕ್ಕವರು ‘ಇಲ್ಲ ಸಾರ್, ನಾನು ಭಾನುವಾರ ಹೋಗದೆ ಮಕ್ಕಳಿಗೇ ಏನೋ ಸ್ವಲ್ಪ ಬೇಯಿಸಿ ಹಾಕದೆ ಇದ್ದೇ ಅಂದರೆ ಸೋಮವಾರ ನಮ್ಮ ಶಾಲೆಗೆ ಯಾವ ಮಕ್ಕಳೂ ಬರೋ ಸ್ಥಿತಿಯಲ್ಲಿ ಇರಲ್ಲ ಸಾರ್’ ಅಂದರು. ಇದು ಪ್ರತಿನಿತ್ಯ ಅನ್ನದಾಸೋಹ ನಡೆಯುವ ಊರಿನ ಘಟನೆ.

ಇದಕ್ಕೆ ತದ್ವಿರುದ್ಧವಾಗಿರುವ ಇನ್ನೆರಡು ಘಟನೆಗಳು

ಘಟನೆ-1: ನನ್ನ ಗೆಳೆಯರಾದ ಅವರು ಮಂಗಳೂರಿನಲ್ಲಿ ಅಧಿಕ ಸಂಬಳ ಇರುವ ಸರಕಾರೀ ಉದ್ಯೋಗಿ. ಅವರ ಹೆಂಡತಿ ಸರಕಾರೀ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಅಧ್ಯಾಪಕಿ. ಅವರಿಗೆ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಮಕ್ಕಳಿಲ್ಲ. ನಾನು ಅವರನ್ನು ಭೇಟಿಯಾದಾಗಲೆಲ್ಲ ಅವರು ಬಿಸಿಯೂಟ ಯೋಜನೆಯ ಬಗ್ಗೆ ವಿಪರೀತ ತಕರಾರು ತೆಗೆಯುತ್ತಿದ್ದರು.ಇತ್ತೀಚೆಗೆ ಅವರು ತಕರಾರು ತೆಗೆಯುವುದನ್ನು ಬಿಟ್ಟಿದ್ದರು. ಯಾಕೆ ಎಂದು ವಿಚಾರಿಸಿದೆ. ಅವರು ಹೇಳಿದ್ದು ಸ್ವಾರಸ್ಯಪೂರ್ಣವಾಗಿತ್ತು. ಅವರ ಹೆಂಡತಿ ಕೆಲಸ ಮಾಡುವ ಶಾಲೆಯಲ್ಲಿ ಈಗ ಬಿಸಿಯೂಟ ಬೇಯುವುದಿಲ್ಲವಂತೆ. ಅಲ್ಲಿಗೆ ಇಸ್ಕಾನ್‍ರವರ ಅಕ್ಷಯಪಾತ್ರೆಯ(ಸರಕಾರೀ ಯೋಜನೆಯನ್ನು ಔಟ್‍ಸೋರ್ಸ್‍ಗೊಳಿಸಿರುವುದರಿಂದ) ಬಿಸಿಯೂಟ ಬರುತ್ತದಂತೆ. ಅದರ ಸಾರಿನ ಘಮವೇ ಬೇರೆ ಅಂತೆ. ಅವರ ಹೆಂಡತಿ ಪ್ರತಿ ಸಂಜೆ ಬರುವಾಗ ಒಂದು ದೊಡ್ಡ ಟಿಫಿನ್ ಬಾಕ್ಸ್‍ನಲ್ಲಿ ಸಾರು-ಅನ್ನ ತರುತ್ತಿದ್ದಾರಂತೆ. ಕಳೆದ ಆರು ವರ್ಷದಿಂದ ಭಾನುವಾರ ಹಾಗೂ ಹಬ್ಬ-ಹರಿದಿನಗಳನ್ನು ಬಿಟ್ಟು ಅವರ ಮನೆಯಲ್ಲಿ ಅವರು ಯಾವತ್ತೂ ಮನೆಯಲ್ಲಿ ಪೂರ್ಣಪ್ರಮಾಣದ ಅಡಿಗೆ ಮಾಡಿದ್ದಿಲ್ವಂತೆ. ರಾತ್ರಿ ಊಟಕ್ಕೆ ಏನೋ ಸ್ವಲ್ಪ ಹಪ್ಪಳ-ಸಂಡಿಗೆ ಹುರ್ಕೊಂಡರೆ ಸಾಕಾಗುತ್ತದಂತೆ.

ಘಟನೆ-2: ಆ ಹುಡುಗನ ಹೆಸರು ನರಸಿಂಹರಾಜು. ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಅವನು ನನ್ನ ವಿದ್ಯಾರ್ಥಿ. ಮನೆಯಲ್ಲಿ ಕಡುಬಡತನ. ಜಾತಿಯಲ್ಲಿ ಅವನು ಆದಿಕರ್ನಾಟಕ ಸಮುದಾಯಕ್ಕೆ ಸೇರಿದವನು. ನಮ್ಮ ವಿಶ್ವವಿದ್ಯಾನಿಲಯದಲ್ಲಿ ರಾತ್ರಿ ಸೆಕ್ಯುರಿಟಿ ಕೆಲಸ ಮಾಡಿ ಬೆಳಿಗ್ಗೆ ಕ್ಲಾಸ್‍ಗೆ ಬರುತ್ತಿದ್ದ ಹುಡುಗ. ಒಂದು ದಿನ ಸಂಜೆ ಹೊತ್ತು ನನ್ನ ಬಳಿ ಬಂದು ‘ಸಾರ್, ತಹಸೀಲ್ದಾರ್‍ರವರಿಗೆ ಒಂದು ಪತ್ರ ಬರೆಯಬೇಕು, ನೀವು ಸಹಾಯ ಮಾಡಬೇಕು ಸಾರ್, ಅಂದ. ‘ಏನು ಪತ್ರ ಅಪ್ಪೀ..?’ ಅಂದೆ ನಾನು. ಅದಕ್ಕವನು “ಸಾರ್, ನನಗೊಬ್ಬ ಅಣ್ಣ ಇದ್ದ. ಅವನು ಹುಟ್ಟು ಅಂಗವಿಕಲ. ಅವನಿಗೆ ಅಂತ್ಯೋದಯ ಕಾರ್ಡ್ ಇತ್ತು. ತಿಂಗಳಿಗೆ ಮೂವತ್ತು ಕೆಜಿ ಅಕ್ಕಿ ಬರುತ್ತಿತ್ತು. ಮೊನ್ನೆ ಅವನು ಸತ್ತು ಹೋಗ್ಬಿಟ್ಟ. ಅದಕ್ಕೆ ಅವನ ಕಾರ್ಡ್ ಕ್ಯಾನ್ಸಲ್ ಮಾಡಬೇಕಿತ್ತು.” ಅಂದ. ನಾನಂದೆ. “ಪರವಾಗಿಲ್ವೋ, ನೀನು ಕಷ್ಟ ಪಡುತ್ತಿದ್ದೀಯಲ್ಲ. ಆ ಅಕ್ಕಿ ನಿನಗೆ ಸಹಾಯಕ್ಕೆ ಬರುತ್ತೆ.”. ಅದಕ್ಕವನು. “ಅಯ್ಯೋ ಬೇಡಿ ಸಾರ್, ನಮ್ಮ ಸಂಸಾರಕ್ಕೆ ಸಿದ್ರಾಮಣ್ಣನ ಅನ್ನಭಾಗ್ಯದ ಅಕ್ಕಿ ಸಿಗುತ್ತೆ. ಉಳಿದ ಖರ್ಚಿಗೆ ನನಗೆ ಸಂಬಳ ಬರುತ್ತೆ. ಇದು ಅಂತ್ಯೋದಯ ಯೋಜನೆಯ ಅಕ್ಕಿ. ಯಾರಾದ್ರೂ ನನ್ನಂತಹ ಬೇರೆ ಬಡವರಿಗೆ ಅನುಕೂಲ ಆಗುತ್ತೆ ಸಾರ್, ನನಗೆ ತಹಸೀಲ್ದಾರ್‍ರವರಿಗೆ ಬರೆಯಬೇಕಾದ ಆ ಪತ್ರದ ಒಕ್ಕಣೆ ಹೇಗಿರ್ಬೇಕು ಅಂತ ಗೊತ್ತಾಗುತ್ತಿಲ್ಲ, ದಯವಿಟ್ಟು ಬರ್ಕೊಡಿ ಸಾರ್”.

-ನನ್ನ ಜೀವನಾನುಭವದ ಈ ಮೇಲಿನ ಘಟನೆಗಳು ಕುಂ.ವೀ, ದೇಜಗೌ, ಭೈರಪ್ಪರಂಥ ಹಿರಿಯರು ಅನ್ನಭಾಗ್ಯದಂತಹ ಆಹಾರಭದ್ರತೆಯ ಕಾರ್ಯಕ್ರಮವನ್ನು ಹೊಸದಾಗಿ ನೋಡುವಂತೆ ಮಾಡಿಯಾವು ಎಂಬುದು ನನ್ನಂತಹ ಕಿರಿಯನ ವಿಶ್ವಾಸ.

ನಾನು ಗಮನಿಸಿದಂತೆ ಅನ್ನಭಾಗ್ಯದ ಈ ವಾಗ್ವಾದದಲ್ಲಿ ಯಾರು ನಿಜವಾದ ಫಲಾನುಭವಿಗಳೋ ಅವರು ಇವತ್ತಿನವರೆಗೆ ಮಾತಾಡಿಲ್ಲ. ಯಾಕೆಂದರೆ ಅವರಿಗೆ ತಿನ್ನುವ ಬಾಯಿ ಇದೆ. ಆದರೆ ಹೇಳಿಕೊಳ್ಳುವ ಬಾಯಿಯಿಲ್ಲ. ವಿಷಾದವೆಂದರೆ ಬಾಯಿ ಇಲ್ಲದವರ ಪರವಾಗಿ ಮಾತಾಡಬೇಕಾದ ನಾಗರಿಕ ಸಮಾಜದ ಪ್ರತಿನಿಧಿಗಳಾದವರು ತಮಗೆ ಮಾತಾಡಲು ಬರುತ್ತದೆ ಎಂಬ ಒಂದೇ ಅರ್ಹತೆಯಿಂದ ಬಡವರ ಹಕ್ಕಿನ ಅನ್ನದÀ ಚೀಲಕ್ಕೂ ಕನ್ನ ಹಾಕುತ್ತಿದ್ದಾರೆ.

ಅನ್ನಭಾಗ್ಯ ಯೋಜನೆ ಬೇಕೋ ಬೇಡವೋ ಎಂಬುದರ ಚರ್ಚೆಯೇ ಇಂದು ಅಪ್ರಸ್ತುತ. ಯಾಕೆಂದರೆ ಈ ಯೋಜನೆ ಏನಿದೆ ಅದು ಬಡತನ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗದ ಭಾರತದಂತಹ ದೇಶದಲ್ಲಿ ಜಾರಿಗೊಳಿಸಲೇಬೇಕಾದ ಆಹಾರಭದ್ರತೆಗೆ ಸಂಬಂಧಪಟ್ಟಂತಹ ಸಂಗತಿ.

ಸಾಮಾಜಿಕ ಭದ್ರತೆಗೆ ಸಂಬಂಧಪಟ್ಟಂತಹ ಅನ್ನಭಾಗ್ಯದಂತಹ ಯೋಜನೆ ಅದರ ಎಲ್ಲ ಅರ್ಹ ಫಲಾನುಭವಿಗಳನ್ನು ತಲುಪುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ನಾಗರಿಕ ಸಮಾಜ ತನ್ನ ದೃಷ್ಟಿ ಹರಿಸಬೇಕಾಗಿದೆ. ನಾನೇ ಖುದ್ದು ನೋಡಿದಂತೆ ಎಷ್ಟೋ ಮಂದಿ ರೇಷನ್ ಅಂಗಡಿ ಮುಂದೆ ತಮ್ಮ ಕಾರು ನಿಲ್ಲಿಸಿ ಡಿಕ್ಕಿಯಲ್ಲಿ ಅನ್ನಭಾಗ್ಯದ ಅಕ್ಕಿ ತಗೊಂಡು ತಮ್ಮ ಮನೆಯಲ್ಲಿ ಸಾಕಿರುವ ನಾಟಿಕೋಳಿಗಳಿಗೆ ಮೇವು ಕೊಡುವವರಿದ್ದಾರೆ. ಬಡವರು ಅಕ್ಕಿ ತಗೊಂಡು ಹೊಟೇಲ್ ಮಾಲೀಕರಿಗೆ ಕೆಜಿಗೆ ಹತ್ತು ರೂಪಾಯಿಯಂತೆ ಮಾರುತ್ತಿದ್ದಾರೆ ಎನ್ನುವವರು ಇದನ್ನೂ ಸ್ವಲ್ಪ ಕಣ್ಣರಳಿಸಿ ನೋಡಬೇಕಾಗಿದೆ. ಆದರೆ ಇನ್ನೊಂದೆಡೆ ಈ ಭಾಗ್ಯ ಯೋಜನೆಯ ಅಕ್ಕಿ ಪಡೆಯಬೇಕಿದ್ದರೆ ಶಾಲೆಗೆ ಹೋಗುವ ಬಡವರ ಸಣ್ಣ-ಸಣ್ಣ ಮಕ್ಕಳೂ ಕೂಡ ಅಕ್ಕಿ ಬಂದ ದಿವಸ ಶಾಲೆ ತಪ್ಪಿಸಿ ರೇಷನ್ ಅಂಗಡಿಗೆ ಹೋಗಿ ತಮ್ಮ ಹೆಬ್ಬೆಟ್ಟು ಒತ್ತಿ (ಬಯೋಮೆಟ್ರಿಕ್) ತಮ್ಮ ಪಾಲಿನ ಅಕ್ಕಿ ಪಡೆಯುತ್ತಿದ್ದಾರೆ. ದುಡಿಮೆಗೆ ಹೋಗಬೇಕಾದವರು ತಮ್ಮ ದಿನದ ಕೂಲಿಗೆ ಎರವಾಗಿ ರೇಷನ್ ಅಂಗಡಿಯ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಶ್ರೀಮಂತ/ಮಧ್ಯಮವರ್ಗದ ಜನರ ಮನೆಯಲ್ಲಿ ಪಾತ್ರೆ ತಿಕ್ಕುವ ಹೆಣ್ಣುಮಕ್ಕಳ ಬೆರಳುಗಳೇ ಸವೆದು ಅವರು ಎಷ್ಟು ಬಾರಿ ಬಯೋಮೆಟ್ರಿಕ್ ಒತ್ತಿದರೂ ಅವರಿಗೆ ಅಕ್ಕಿನೇ ಸಿಗುತ್ತಿಲ್ಲ. ನೆರೆದ ಜನರ ನಡುವೆ ಸವೆದ ಬೆರಳಿನ ಈ ಹೆಣ್ಣುಮಗಳು ಅವಮಾನದಿಂದ ಅಪರಾಧಿಯಂತೆ ತಲೆತಗ್ಗಿಸಿ ಇತ್ತ ಕೂಲಿಯೂ ಇಲ್ಲದೆ, ಅತ್ತ ಅಕ್ಕಿಯೂ ಇಲ್ಲದೆ ನಡೆಯುತ್ತಿದ್ದಾಳೆ. (ಇಂತಹ ಘಟನೆಗಳ ಬಗ್ಗೆ ನಮ್ಮ ಕುಂ.ವೀ ಇನ್ನೊಂದು ಕಥೆ ಬರೆಯುತ್ತಿದ್ದರೆ ‘ದೇವರ ಹೆಣ’ ಕಥೆಯ ಹಾಗೆ ಇನ್ನೊಂದು ‘ಅನ್ನಬ್ರಹ್ಮನ ಹೆಣ’ ಬೀಳುತ್ತಿತ್ತೋ ಏನೋ?) ಯೋಜನೆಯ ಈ ಬಗೆಯ ವಿಧಿ-ವಿಧಾನಗಳು ನಮ್ಮ ನಾಗರಿಕ ಸಮಾಜ ದುಡಿದು ತಿನ್ನುವ ಬಡವರನ್ನು ಭಿಕ್ಷುಕರಂತೆ/ಅಪರಾಧಿಗಳಂತೆ ನಡೆಸುತ್ತಿದೆ ಎಂದು ಅನ್ನಿಸುತ್ತಿಲ್ಲವೇ..? ಅವರು ಬಡವರೆಂಬ ಒಂದೇ ಕಾರಣಕ್ಕೆ ಮಾನವ ಘನತೆಯನ್ನು ಅಲ್ಲಗಳೆಯಲಾಗುತ್ತಿದೆ ಎಂದೂ ಅನ್ನಿಸುತ್ತಿಲ್ಲವೇ? ಅದರ ಬಗ್ಗೆ ಯಾಕೆ ಸಂವಾದ ನಡೆಯಲ್ಲ..?

ಭಾರತವೂ ಸೇರಿದಂತೆ ಒಟ್ಟಾರೆಯಾಗಿ ಬಹುಪಾಲು ಮಧ್ಯಮವರ್ಗದ ಜನರು ಇಂದು ಮಾನವೀಯ ಸಂವೇದನೆಗಳನ್ನು ಕಳೆದುಕೊಂಡವರೇ ಆಗಿದ್ದಾರೆ. ಇದು ಎಲ್ಲ ಕಾಲದ ಸತ್ಯವೂ ಹೌದು. (ಹಿಟ್ಲರ್ ಯಹೂದಿಗಳ ನರಮೇಧ ನಡೆಸುವಂತಹ ಸಂದರ್ಭದಲ್ಲಿ ಬೆಳಿಗ್ಗೆ ‘ಹಲೋ’ ಎಂದ ನೆರೆಮನೆಯವನೇ ಮಧ್ಯಾಹ್ನದ ಹೊತ್ತಿಗೆ ಇಲ್ಲ ಎಂದು ಗೊತ್ತಾದಾಗಲೂ ಸಂಜೆ ವೇಳೆಗೆ ಐಸ್‍ಕ್ರೀಮ್ ತಿನ್ನಲು ಬಂದ ಜರ್ಮನ್ ಮಧ್ಯಮವರ್ಗದ ಜನರಿದ್ದಂತೆ) ಮಧ್ಯಮವರ್ಗದ ಒಟ್ಟೂ ಬದುಕಿನಲ್ಲಿರುವ ಹುಸಿತನಗಳು, ಪೆÇಳ್ಳುನಂಬಿಕೆಗಳು, ಇಡಿಯ ಸಮಾಜ ಇಸ್ತ್ರಿ ಮಾಡಿದ ಬಟ್ಟೆಯಂತೆ ಮಟ್ಟಸವಾಗಿ, ಗರಿಗರಿಯಾಗಿ ಇರಬೇಕೆಂಬ ಈ ವರ್ಗದ ಬಯಕೆಗಳು ನಮ್ಮ ಸಾಹಿತ್ಯಿಕ ಧೀಮಂತರನ್ನೂ ಅಟಕಾಯಿಸಿಕೊಂಡು ಬಿಟ್ಟರೆ ಇನ್ನಾರಿಗೆ ದೂರಲಿ ಕೂಡಲಸಂಗಮದೇವ.