ಅಂಬೇಡ್ಕರ್ ಪರಿನಿರ್ವಾಣ ದಿನದಂದು – ದೇವನೂರ ಮಹಾದೇವ

[ಅಂಬೇಡ್ಕರ್ ಪರಿನಿರ್ವಾಣ ದಿನವಾದ 6.12.2020ರಂದು ಮೈಸೂರಿನಲ್ಲಿ, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ನಡೆದ, 2020ರ ಡಿಸೆಂಬರ್ 6ರಿಂದ 14 ಏಪ್ರಿಲ್ 2021ರವರೆಗೆ ರಾಜ್ಯಾದ್ಯಂತ ನಡೆಯಲಿರುವ “ಜನಜಾಗೃತಿ ಅಭಿಯಾನ”ದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ]
ಬಹುತೇಕರು ಸತ್ತ ನಂತರ ಬದುಕಿರುವವರ ನೆನಪಲ್ಲಿ ಕೆಲ ದಿನ ಉಳಿದು ಆಮೇಲೆ ಮರೆಯಾಗುತ್ತಾರೆ. ಇದು ಕಾಲದ ಮಹಿಮೆ. ಆದರೆ ಇನ್ನೂ ಒಂದು ವಿಶೇಷವಾದ ಕಾಲದ ಮಹಿಮೆ ಇದೆ- ಕೆಲವರು ಸತ್ತ ಮೇಲೆಯೂ ಹೆಚ್ಚೆಚ್ಚು ಬದುಕುತ್ತಾರೆ. ಈ ಚೋದ್ಯ ಅಂಬೇಡ್ಕರ್ ಅವರಲ್ಲಿ ಬೆರಗಾಗುವಷ್ಟು ಇದೆ. ಹಾಗೇ ಗಾಂಧಿಯವರಲ್ಲು ಕೂಡ. ಇದನ್ನು CAA, NRC, NPR ಪ್ರತಿಭಟನೆಯಲ್ಲಿ ಕಣ್ಣಾರೆ ಕಂಡೆವು. ಇವರು ಹೆಚ್ಚು ಜೀವಂತವಾಗಿದ್ದಾರೆ.
ಈ ದಿನ ನಾನು ಸಂವಿಧಾನದ ಮೂರನೆ ಸುತ್ತಿನ ಕರಡು ಪಠಣದಲ್ಲಿ ಅಂಬೇಡ್ಕರ್ ಅವರು ನುಡಿದ ಜ್ವಲಂತ ನುಡಿಗಳನ್ನು ನೆನಪಿಸುತ್ತಿರುವೆ. ಇದು ತುಂಬಾ ಅಂದ್ರೆ ತುಂಬಾನೆ ಸಣ್ಣದು. ಇರಬಹುದು. ಆದರಿಲ್ಲಿ ಇಡೀ ಜೀವ ಸಂಕುಲವನ್ನು ತನ್ನೊಳಗೆ ತುಂಬಿಕೊಂಡವನೊಬ್ಬನ ಒಡಲಿನಿಂದ ಆ ಮಾತುಗಳು ಒಡಮೂಡಿದಂತಿವೆ. ಆ ಸಂವಿಧಾನದ ಸಭೆ, ದಿನಾಂಕ 17, ನವೆಂಬರ್ 1949ರಲ್ಲಿ ಜರುಗುತ್ತದೆ. ಆಗ ನಾನು ಅಂಬೆಗಾಲಿಡುವ ಕೂಸಾಗಿದ್ದೆ.
ಈಗ ಅಂಬೇಡ್ಕರ್ ಅವರ ಆ ಮಾತುಗಳು:
“ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ. ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ ಮತ ಪಂಗಡಗಳ ಜೊತೆಗೆ ಇನ್ನು ಮುಂದೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೆ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ತಮ್ಮ ಜಾತಿ ಮತ ಪಂಗಡಗಳಿಗಿಂತ ದೇಶವನ್ನು ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಜಾತಿ ಮತ ಪಂಗಡಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ. ರಾಜಕೀಯ ಪಕ್ಷಗಳು, ಜಾತಿ ಮತ ಪಂಗಡಗಳನ್ನು ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು.”
ಅಂಬೇಡ್ಕರ್ ಅವರ ಈ ಮಾತುಗಳನ್ನು ಓದಿದಾಗಿಲಿಂದಲೂ ಅವು ನನ್ನನ್ನು ಹಿಂಬಾಲಿಸುತ್ತಿವೆ. ಜೊತೆಗೆ ಒಂದು ಪ್ರಶ್ನೆಯೂ ಬೆಂಬಿಡದೆ ಕಾಡುತ್ತದೆ- 1949ನೇ ಇಸವಿಯ ಅಂಬೇಡ್ಕರ್ ಅವರ ಮಾತುಗಳು ಆ ಕಾಲಕ್ಕೆ ಹೆಚ್ಚಿಗೆ ಸಲ್ಲುತ್ತವೊ ಅಥವಾ 2021 ನೇ ಇಸವಿಗೆ ಹೆಚ್ಚಿಗೆ ಸಲ್ಲುತ್ತವೊ? ಈ ಪ್ರಶ್ನೆ ಬಂದಾಗಲೆಲ್ಲ ಅಂದಿಗಿಂತ ಇಂದಿಗೇನೆ ಹೆಚ್ಚಿಗೆ ಸಲ್ಲುತ್ತವೆ ಎಂದು ಅನ್ನಿಸುತ್ತಲೇ ಬಂದಿದೆ. ಆ ಮಾತುಗಳೊಳಗಿನ ಆತಂಕ, ವಿವೇಕ, ಎಚ್ಚರಗಳು ಇಂದು ನಮ್ಮನ್ನು ಕೈ ಹಿಡಿದು ನಡೆಸಲು ಇರುವ ಬೆಳಕಿನಂತೆ ಗೋಚರಿಸುತ್ತದೆ.
ದಲಿತ ಸಂಘರ್ಷ ಸಮಿತಿ ಒಕ್ಕೂಟವು ಅಂಬೇಡ್ಕರ್ ಪರಿನಿರ್ವಾಣ ದಿನ ಬಿಡುಗಡೆ ಮಾಡಿದ ಕರಪತ್ರದ ಬರವಣಿಗೆಯಲ್ಲಿ 1949ನೇ ಇಸವಿಯ ಅಂಬೇಡ್ಕರ್ ಆತಂಕದ ಮಾತುಗಳು ಇವತ್ತಿಗೆ ವಾಸ್ತವವಾಗಿ ನಮಗೆ ಎದುರಾಗಿದೆಯೇನೋ ಎಂದು ಅನಿಸಿಬಿಡುತ್ತದೆ. ಈ ಕರಪತ್ರದಲ್ಲಿ ಒಂದು ಮಾತು ಬರುತ್ತದೆ – ಏಣಿಯ ಮೆಟ್ಟಿಲುಗಳನ್ನು ಒಂದೊಂದಾಗಿ ಕೀಳಲಾಗುತ್ತಿದೆ ಅಂತ. ಹೌದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯನ್ನು ಹಿನ್ನಡೆ ಮಾಡುತ್ತಿದೆ. ಇದು ಪೈಶಾಚಿಕ ನಡೆ. ದೆಹಲಿಯಲ್ಲಿ ಒಂದು ವಾರದಿಂದಲೂ ರೈತಾಪಿ ಜನಸಮುದಾಯದ ಲಕ್ಷಾಂತರ ಜನರು ಸೇರಿ ಹಗಲು ರಾತ್ರಿ ಎನ್ನದೇ ಚಳಿ ಮಳೆ ದೂಳು ಎನ್ನದೇ, ಕೊರೋನಾದಲ್ಲಿ ಸತ್ತರೂ ಸರಿಯೇ ಎಂದು ನಿಶ್ಚಯಿಸಿಕೊಂಡು ಬಿಜೆಪಿ ಸರ್ಕಾರದ ಕೃಷಿ ನೀತಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತುಕತೆ ನೆಪದಲ್ಲಿ ವಂಚಿಸುತ್ತಿರುವುದನ್ನು ನೋಡಿದರೆ ಇದಕ್ಕೆ ನೋಡಲು ಕಣ್ಣಿಲ್ಲ, ಹೃದಯದಲ್ಲಿ ಕಲ್ಲಿದೆ, ಅದಕ್ಕೆ ಮನುಷ್ಯತ್ವವೇ ಇಲ್ಲ ಅನ್ನಿಸಿಬಿಡುತ್ತದೆ. ಇದನ್ನು ಪೈಶಾಚಿಕ ಹಿನ್ನಡೆ ಅನ್ನದೇ ಮತ್ತೇನು ಹೇಳಬೇಕು?
ಈ ಪೈಶಾಚಿಕ ನಡೆಯಲ್ಲೂ ಒಂದು ರಿದಂ ಇದೆ. ನೋಡಿ ಭಾರತದ ಸಂವಿಧಾನವನ್ನು ಒಪ್ಪದೇ ಇರುವವರು ತಮ್ಮದೇ ಒಂದು ಸಂವಿಧಾನವನ್ನು ಬಚ್ಚಿಟ್ಟುಕೊಂಡವರು ಇಂದು ಆಳ್ವಿಕೆ ಮಾಡುತ್ತಿದ್ದಾರೆ. ಇವರು ಭಾರತದ ಸಂವಿಧಾನವನ್ನು ಮೊದಲು ಇಲ್ಲದಂತೆ ಮಾಡಲು ನೋಡುತ್ತಾರೆ. ಆಗಲಿಲ್ಲವಾ? ಅದರ ಶೀಲ ಕೆಡಿಸುತ್ತಾರೆ. CAA, NPR, NRC ಒಳಗೆ ಮಾಡಿದ್ದು ಇದೇನೆ. ಈ ನೆಲದಲ್ಲಿ ಹುಟ್ಟಿದ ಕಂದಮ್ಮಗಳು ಇಲ್ಲಿನ ಪೌರರು ಎನ್ನುವ ಮುನ್ನಡೆ ಕಡೆಗೆ ನಾವು ಸಾಗಬೇಕಿತ್ತು. ಅದನ್ನು ಹಿನ್ನಡೆ ಮಾಡಿಬಿಟ್ಟರು. ಹಾಗೇನೇ ಮೀಸಲಾತಿ ವಿಚಾರದಲ್ಲೂ ಕೂಡ. ಮಂಡಲ್ ವಿರೋಧಕ್ಕೆ ಹಿನ್ನಲೆ ಗಾಯಕರು ಯಾರು? ಓರ್ವ ವಿದ್ಯಾರ್ಥಿಯನ್ನೂ ಬೆಂಕಿಗೆ ಆಹುತಿ ಮಾಡಿಬಿಟ್ಟರು. ಈಗ ಅವರೇ ಅಧಿಕಾರಕ್ಕೆ ಬಂದ ಮೇಲೆ? ಮೀಸಲಾತಿ ಇಲ್ಲ ಮಾಡಬೇಕು. ಅದು ಅವರಿಗೆ ಆಗುತ್ತಿಲ್ಲ. ಹಾಗಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಹೆಸರಲ್ಲಿ ಮೀಸಲಾತಿ ಕೊಟ್ಟರು. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಪರಿಕಲ್ಪನೆಯನ್ನೇ ನೆಲ ಕಚ್ಚಿಸಿಬಿಟ್ಟರು. ಸಾಮಾಜಿಕ ನ್ಯಾಯ ಅಂಗಾತ ಬಿತ್ತು. ಮೀಸಲಾತಿಯ ಶೀಲ ಹರಣವಾಯ್ತು.
ಈ ರೀತಿ ಎಷ್ಟಂಥ ಹೇಳುವುದೂ? ಆದರೂ ಭಾರತದ ಬುಡ ಕತ್ತರಿಸುತ್ತಿರುವ ಕೆಲವನ್ನು ನಾವು ಮರೆಯಬಾರದು. GST ತಂದು ರಾಜ್ಯಗಳ ಸ್ಥಿತಿಯನ್ನು ಭಿಕ್ಷುಕ ಮಾಡಿಬಿಟ್ಟರು. ಇಂದು ರಾಜ್ಯಗಳಿಗೆ ಅಸ್ತಿತ್ವ ಇದೆಯಾ? ದೇಶದಲ್ಲಿ ಒಕ್ಕೂಟ ಸ್ವರೂಪ ಇದೆಯಾ? ರಾಜ್ಯಗಳು ಪಕ್ಷಾತೀತವಾಗಿ ಎಚ್ಚರಗೊಳ್ಳಬೇಕಾಗಿದೆ. ಹಾಗೇನೇ ಸ್ವಾಯತ್ತ ಸಂಸ್ಥೆಗಳ ಕತ್ತಿನ ನರ ಕುಯ್ದು, ಅವುಗಳ ಕತ್ತು ವಾಲಿ ನೇತಾಡುತ್ತಿವೆ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರುತ್ತಾ ಆ ದುಡ್ಡಲ್ಲಿ ಸರ್ಕಾರ ಕಾಲಾಯಾಪನೆ ಮಾಡುತ್ತಿದೆ. ಎಲ್ಲವೂ ಇಂಥವೇ. ಭಾರತವು ಭಾರತವಾಗಿ ಉಳಿಯುತ್ತದೆಯೇ? ಹೇಳುವುದು ತುಂಬಾ ಕಷ್ಟ. ಭಾರತದಲ್ಲಿ ಸರ್ಕಾರವೇ ಜನಸಮುದಾಯವನ್ನು ಸದೆ ಬಡಿದು ಬಂಡವಾಳಶಾಹಿಗಳಿಗೆ ಉಣಬಡಿಸುವ ಕೆಲಸ ನಡೆಯುತ್ತಿದೆ.
ಇಂಥಹ ದುರಿತ ಕಾಲದಲ್ಲಿ ನಾಕಾರು ದಲಿತ ಬಣಗಳು ಒಟ್ಟಾಗಿರುವುದು ಒಂದು ಆಶಾಕಿರಣ. ಹಾಗೇ ಇತ್ತೀಚೆಗೆ ದಲಿತರೂ, ರೈತರೂ, ಕಾರ್ಮಿಕರೂ ಜೊತೆಗೂಡಿಕೊಂಡು ಆಂದೋಲನ ನಡೆಸುತ್ತಿರುವುದು ತುಂಬಾ ದೊಡ್ಡ ಬೆಳವಣಿಗೆ. ನಾವು ನೆನಪಿಟ್ಟುಕೊಳ್ಳಬೇಕು- ಮಹಿಳೆಯರೂ ನಾಯಕತ್ವ ವಹಿಸದಿದ್ದರೆ ಇದು ಅಪೂರ್ಣ. ಮತ್ತೆ ಮತ್ತೆ ಹೇಳುತ್ತಿದ್ದೇನೆ – ಸಂಘಟನೆಗಳು ಸಮುದಾಯದೊಳಗೆ ಕರಗಿ ಹೋಗಬೇಕು. ಅಲ್ಲಿ ಸಹನೆ, ಪ್ರೀತಿ, ಸಮಾನತೆ ಬಿತ್ತಬೇಕು. ಆಗ ಕರ್ನಾಟಕ ನಿಮ್ಮದು, ಅದು ನನ್ನದೂ ಕೂಡ.