ಅಂಬೇಡ್ಕರ್ ನಮ್ಮೊಳಗೆ ಒಬ್ಬರಾಗಿರಲಿ-ನಾ ದಿವಾಕರ


ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆಯ ಜನ್ಮ ದಿನಾಚರಣೆಯನ್ನು ಇಂದು ಆಚರಿಸುತ್ತಿದ್ದೇವೆ. ಜನ್ಮ ದಿನಾಚರಣೆ ಆಚರಿಸುವುದು ಅಂಬೇಡ್ಕರರನ್ನು ಸ್ಮರಿಸಲೆಂದೋ ಅಥವಾ ಅಂಬೇಡ್ಕರರನ್ನು ನಾವಿನ್ನೂ ಮರೆತಿಲ್ಲ ಎಂದು ಮನದಟ್ಟು ಮಾಡಲೆಂದೋ ಆದರೆ ಅದು ವ್ಯರ್ಥ ಎನಿಸುತ್ತದೆ. ಇಂದು ಅಂಬೇಡ್ಕರರ್ ಸ್ಮರಣೆ ಮತ್ತು ವೈಭವೀಕರಣಕ್ಕಿಂತಲೂ, ಆರಾಧನೆ ಮತ್ತು ಭಜನೆಗಿಂತಲೂ ಮುಖ್ಯವಾಗಿ ಬೇಕಾಗಿರುವುದು ಅಂಬೇಡ್ಕರರನ್ನು ಮತ್ತು ಅವರ ತತ್ವಗಳನ್ನು ಗ್ರಹಿಸುವ ಬಗೆ ಮತ್ತು ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುವ ವಿಧಾನ. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗಗಳು ಯಾವುದು? ಹಿಂಸಾತ್ಮಕವೋ ಅಹಿಂಸಾತ್ಮಕವೋ? ಪ್ರಜಾತಾಂತ್ರಿಕವೋ ಸರ್ವಾಧಿಕಾರವೋ? ಮಾನವತಾವಾದವೋ ಜಾತಿವಾದವೋ? ಹೀಗೆ ಹಲವು ಪ್ರಶ್ನೆಗಳು ನಮ್ಮ ನಡುವೆ ಚರ್ಚೆಯಾಗುತ್ತಿದೆ. ಪ್ರಧಾನವಾಗಿ ಅಂಬೇಡ್ಕರ್ ಮತ್ತು ಅವರ ತತ್ವಗಳನ್ನು ಹಿಂಸೆ ಅಹಿಂಸೆಗಳ ನಡುವೆ ತುಲನಾತ್ಮಕವಾಗಿ ನೋಡುವ ಒಂದು ಧೋರಣೆ ಇಂದು ವ್ಯಾಪಕವಾಗಿದೆ. ಹಾಗೆಯೇ ಅಂಬೇಡ್ಕರ್ ಪ್ರತಿಪಾದಿಸಿದ ನಿಲುವುಗಳನ್ನು ಪ್ರಶ್ನಾತೀತವಾಗಿ ನೋಡುವ ಅಂಧಾಭಿಮಾನವೂ ಹೆಚ್ಚಾಗಿದೆ.
ಪ್ರಜಾತಂತ್ರದ ಚೌಕಟ್ಟಿನಲ್ಲೇ, ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ಚೌಕಟ್ಟಿನಲ್ಲೇ ಭಾರತದ ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲಿ ಫ್ಯಾಸಿಸಂ ನೆಲೆಯೂರುತ್ತಿರುವುದರ ಹಿನ್ನೆಲೆಯಲ್ಲಿ ದಲಿತ ಸಮುದಾಯಗಳು ಸಂಕೀರ್ಣ ಸವಾಲುಗಳನ್ನು ಎದುರಿಸಬೇಕಿದೆ. ಒಂದೆಡೆ ಶ್ರೇಣೀಕೃತ ಜಾತಿವ್ಯವಸ್ಥೆಯ ಶೋಷಣೆಯ ಅಸ್ತ್ರಗಳು ಬಳಸಲ್ಪಡುತ್ತಿದ್ದರೆ ಮತ್ತೊಂದೆಡೆ ಜಾತಿ ದೌರ್ಜನ್ಯ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ವರ್ಗ ಸಂಘರ್ಷ ಮತ್ತು ವರ್ಗ ತಾರತಮ್ಯದ ನೆಲೆಯಲ್ಲಿ ನೋಡಿದಾಗ ಅರೆ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳು ಕಾರ್ಪೋರೇಟ್ ಸ್ವರೂಪ ಪಡೆದಿದ್ದು ಜಾತಿ ದೌರ್ಜನ್ಯಗಳಿಗೆ ಮತ್ತಷ್ಟು ಶಕ್ತಿ ದೊರೆತಂತಾಗಿದೆ. ಈ ಕ್ಲಿಷ್ಟ ಸನ್ನಿವೇಶದಲ್ಲಿ ನಮ್ಮ ಮುಂದಿರುವ ಸವಾಲು ಸಂಘಪರಿವಾರದ ಫ್ಯಾಸಿಸಂ ಮತ್ತು ನರೇಂದ್ರ ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯೇ ಆಗಿದೆ. ಈ ಎರಡೂ ವಿದ್ಯಮಾನಗಳು ಏಕಕಾಲದಲ್ಲಿ ಸಂಭವಿಸುತ್ತಿದ್ದರೂ ಪರಸ್ಪರ ಸಂಬಂಧವೇ ಇಲ್ಲದಂತೆ ಗೋಚರಿಸುತ್ತಿದೆ.
ಈ ವಿಷಮ ಸನ್ನಿವೇಶದಲ್ಲಿ ದಲಿತ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಂಘರ್ಷದ ಹಾದಿ ತುಳಿಯಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಜಾತಿ ಪ್ರಜ್ಞೆ ಮತ್ತು ದಲಿತ ಪ್ರಜ್ಞೆಗಳ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸುವುದು ತುರ್ತು ಅಗತ್ಯ ಎನಿಸುತ್ತದೆ. ದಲಿತ ಪ್ರಜ್ಞೆ ಯಾವ ನೆಲೆಯಲ್ಲಿ, ಯಾವ ಸಂದರ್ಭದಲ್ಲಿ, ಯಾವ ಪ್ರಮಾಣದಲ್ಲಿ ಸಾರ್ವತ್ರಿಕತೆ ಪಡೆದರೆ ದಲಿತ ಸಮುದಾಯಗಳ ಆಶೋತ್ತರಗಳು ಈಡೇರಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ದುರಂತ ಎಂದರೆ ದಲಿತ ಸಮುದಾಯಗಳಲ್ಲಿ ಜಾತಿ ಪ್ರಜ್ಞೆ ಗಟ್ಟಿಯಾಗುತ್ತಿದೆ, ದಲಿತ ಪ್ರಜ್ಞೆ ಕ್ಷೀಣಿಸುತ್ತಿದೆ. ಜಾತಿ ಪ್ರಜ್ಞೆ ಸ್ಥಾಪಿತ ವ್ಯವಸ್ಥೆಯ ಬತ್ತಳಿಕೆಯ ಅಸ್ತ್ರದಂತೆ ಕಾರ್ಯ ನಿರ್ವಹಿಸುತ್ತದೆ. ದಲಿತ ಪ್ರಜ್ಞೆ ಅಧಿಪತ್ಯ ರಾಜಕಾರಣ ಮತ್ತು ಸಾಂಸ್ಕೃತಿಕ ಅಧಿಪತ್ಯವನ್ನು ಸಮರ್ಥವಾಗಿ ಎದುರಿಸುವ ಅಸ್ತ್ರವಾಗುತ್ತದೆ. ದಲಿತ ಚಳುವಳಿಗಳು ಈ ಎರಡರ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವುದು ನಮ್ಮ ಮುಂದಿನ ಪ್ರಶ್ನೆ.
ಪ್ರಜ್ಞೆ ಮತ್ತು ಸಂವೇದನೆಗಳ ತಾಕಲಾಟದ ನಡುವೆಯೇ ದಲಿತ ರಾಜಕಾರಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಸಹ ದಲಿತ ರಾಜಕಾರಣ ಕೇವಲ ದಲಿತ ರಾಜಕಾರಣಿಗಳ ಅಧಿಕಾರ ದಾಹದ ಆಕರಗಳಾಗಿವೆ. ಪ್ರಾಯಶಃ ಐವತ್ತು ವರ್ಷಗಳ ದಲಿತ ಹೋರಾಟದ ಅವಧಿಯಲ್ಲಿ ದಲಿತ ಪ್ರಜ್ಞೆ ಮತ್ತು ದಲಿತ ಸಂವೇದನೆಯ ಭೂಮಿಕೆಯ ಮೇಲೆ ದಲಿತ ರಾಜಕಾರಣದ ಚರ್ಚೆ ನಡೆದೇ ಇಲ್ಲ ಎನಿಸುತ್ತದೆ. ರೋಹಿತ್ ವೇಮುಲ, ಕನ್ನಯ್ಯ ಕುಮಾರ್ ಒಂದು ಸಾಂದರ್ಭಿಕ ಪ್ರತಿಮೆಗಳಂತೆ ದಲಿತ ಸಮುದಾಯವನ್ನು ಜಾಗೃತಗೊಳಿಸಿದ್ದಾರೆ. ಊನ ಮತ್ತು ದಾದ್ರಿ ದಲಿತ ಪ್ರಜ್ಞೆಯನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಬಡಿದೆಬ್ಬಿಸಿದೆ. ಆದರೆ ಈ ಘಟನೆಗಳ ಹಿನ್ನೆಲೆಯಲ್ಲಿ ಮಡುಗಟ್ಟಿರುವ ಆಕ್ರೋಶ, ಹತಾಶೆ ಮತ್ತು ಆಕ್ರಂದನಗಳಿಗೆ ಸ್ಪಂದಿಸುವ ಒಂದು ಸಾರ್ವತ್ರಿಕ ವೇದಿಕೆ ಸೃಷ್ಟಿಯಾಗುತ್ತಿಲ್ಲ. ಶೋಷಿತ ಸಮುದಾಯಗಳ ಹೋರಾಟದ ಪರಂಪರೆಯಲ್ಲಿ ಒಂದು ಶತಮಾನ ಸವೆಸಿರುವ ಯಾವುದೇ ಸಮಾಜದಲ್ಲಿ ಊನ ಕ್ರಾಂತಿಯ ಕಿಡಿಯಾಗಿ ಹೊರಹೊಮ್ಮಬೇಕಿತ್ತು. ಆದರೆ ಅಂಬೇಡ್ಕರ್ ಹಿಂಸಾವಾದಿಯೋ ಅಹಿಂಸಾವಾದಿಯೋ ಎಂಬ ಶುಷ್ಕ ಚರ್ಚೆಗಳಲ್ಲೇ ಈ ಕ್ರಾಂತಿಯ ಕಿಡಿಗಳು ಈಗಾಗಲೇ ನಂದಿ ಹೋಗಿವೆ. ಊನ ರಾಜಕೀಯ ಪ್ರೇರಿತ ಘಟನೆ ಅಲ್ಲ, ಸಂಸ್ಕೃತಿ  ಪ್ರೇರಿತ ಘಟನೆ. ಆದರೆ ಈ ಘಟನೆ ಸಾಂಸ್ಕೃತಿಕ  ರಾಜಕಾರಣದ ಹೊಸ ನೆಲೆಗಳಿಗೆ ಭೂಮಿಕೆಯಾಗಬಹುದಿತ್ತು. ಹಾಗಾಗದಿರಲು ಕಾರಣ ಈ ದೇಶದ ತರುಣ ಜನತೆಯಲ್ಲಿನ ರಾಜಕೀಯ ಪ್ರಜ್ಞೆಯ ಕೊರತೆ ಮತ್ತು ಮಾನವ ಸಂವೇದನೆಯ ಕೊರತೆ.
ರಾಜಕಾರಣ ಎಂದರೆ ಕೇವಲ ಅಧಿಕಾರ ರಾಜಕಾರಣ ಮಾತ್ರವೇ ಎಂಬ ಭ್ರಮೆ ಸೃಷ್ಟಿಸಿದ ದೇಶದ ಮುಖ್ಯವಾಹಿನಿಯ ಪಕ್ಷಗಳು ದಲಿತರೊಳಗಿನ ಯುವಸಮುದಾಯವನ್ನು ಸೆಳೆಯಲು ಬಳಸಿದ್ದು ಅಂಬೇಡ್ಕರರ ತತ್ವಗಳನ್ನಲ್ಲ, ಬದಲಾಗಿ ಅಂಬೇಡ್ಕರರ್ ಪ್ರತಿಮೆಗಳನ್ನು, ರೂಪಕಗಳನ್ನು. ಹಾಗಾಗಿ ದಲಿತ ವ್ಯಕ್ತಿಯೊಬ್ಬರು ಅಧಿಕಾರದ ಚುಕ್ಕಾಣಿ ಹಿಡಿಯುವುದೇ ದಲಿತ ರಾಜಕಾರಣದ ಪರಾಕಾಷ್ಠೆಯ ಸಂಕೇತ ಎಂಬ ಭ್ರಮೆ ಸೃಷ್ಟಿಸಲಾಯಿತು. ಇದೇ ಸಂದರ್ಭದಲ್ಲಿ ಮಂಡಲ್ ರಾಜಕಾರಣದ ವ್ಯಾಪ್ತಿ ಹೆಚ್ಚಾದಂತೆಲ್ಲಾ ದಲಿತ ರಾಜಕಾರಣದ ಸವಾಲುಗಳೂ ಹೆಚ್ಚಾದವು. ಅಂಬೇಡ್ಕರ್ ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ನೇಪಥ್ಯಕ್ಕೆ ಸರಿದು, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದಲಿತರ ಹಿತಾಸಕ್ತಿಗಳೇ ದಲಿತ ರಾಜಕಾರಣದ ಭೂಮಿಕೆಗಳಾದವು. 1970ರ ದಶಕದ ಕ್ರಾಂತಿಕಾರಿ ಹೋರಾಟಗಳ ಫಲಾನುಭವಿಗಳ ಪೈಕಿ ಒಂದು ಗುಂಪು ರಾಜಕೀಯ ನೆಲೆಯಲ್ಲಿ ಸ್ಥಾಪಿತ ವ್ಯವಸ್ಥೆಯನ್ನೇ ಸಂರಕ್ಷಿಸುವ ರಾಜಕೀಯ ಪಕ್ಷಗಳಲ್ಲಿ ಬೆರೆತುಹೋದರೆ ಮತ್ತೊಂದು ಬೌದ್ಧಿಕ ವಲಯದ ಗುಂಪು ತನ್ನದೇ ಆದ ನೆಲೆ ಕಂಡುಕೊಳ್ಳಲಾರದೆ ಆಳುವ ವರ್ಗಗಳ ಬಾಲಂಗೋಚಿಗಳಾದವು. ಬೆಂಗಳೂರಿನ ಮಲಗುಂಡಿ ಪ್ರಕರಣದ ನಂತರ, ಊನ ಘಟನೆಯ ನಂತರ ಈ ಬಾಲಂಗೋಚಿಗಳು ವಹಿಸಿದ್ದ ದಿವ್ಯ ಮೌನ ದಲಿತ ರಾಜಕಾರಣದ ಶವಪೆಟ್ಟಿಗೆಯ ಸಂಕೇತವಾಗಿ ಕಾಣುತ್ತವೆ.
ಈ ಗೊಂದಲಗಳ ನಡುವೆಯೇ ಇಂದು ಕೋಮುವಾದಿ ಫ್ಯಾಸಿಸಂ ದೇಶದ ಬಹುಸಂಖ್ಯಾತ ಜನತೆಯ ಆಹಾರ ಪದ್ಧತಿಯ ಮೇಲೆ ತನ್ನ ಆಕ್ರಮಣ ನಡೆಸಲು ಮುಂದಾಗಿದೆ. ಒಂದು ಹೊತ್ತಿನ ಕೂಳಿಗಾಗಿ, ನಾಳಿನ ಭವಿಷ್ಯಕ್ಕಾಗಿ, ಜೀವನದ ಸುರಕ್ಷತೆಗಾಗಿ ದಿನನಿತ್ಯ ಪರದಾಡುತ್ತಿರುವ ಶೋಷಿತ ಸಮುದಾಯಗಳು, ದಲಿತರು, ಆದಿವಾಸಿಗಳು ಈ ಆಕ್ರಮಣಕಾರರ ಸೇನೆಯ ಕಾಲಾಳುಗಳಾಗಿರುವುದು ದುರಂತವಾದರೂ ಸತ್ಯ. ಇಲ್ಲಿ ಅಂಬೇಡ್ಕರ್ ನೆನಪಾಗುತ್ತಾರೆ. ಸಂಘಪರಿವಾರ ಸೃಷ್ಟಿಸಿರುವ ಹಿಂದೂ ಜಾಗೃತಿಯ ರಾಜಕಾರಣದಲ್ಲಿ ದಲಿತರು ತಮ್ಮ ಮತೀಯ ಅಸ್ಮಿತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. 1950ರ ದಶಕದಲ್ಲಿ ಅಂಬೇಡ್ಕರ್ ಎದುರಿಸಿದ್ದ ಗೊಂದಲವನ್ನು ಇಂದು ಇಡೀ ದಲಿತ ಸಮುದಾಯವೇ ಎದುರಿಸುತ್ತಿದೆ. ಈ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ದಲಿತ ಚಳುವಳಿಗಳು, ದಲಿತ ನಾಯಕರು ಮತ್ತು ಯುವಪಡೆಗಳು ಹಿಂದೂ ಅಸ್ಮಿತೆಗೆ ಪೂರಕವಾಗುವಂತೆ ಆರಾಧನೆ ಮತ್ತು ವೈಭವೀಕರಣದಲ್ಲೇ ತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಂಬೇಡ್ಕರ್ ಆರಾಧನೆಯ ಕೇಂದ್ರವಾದಷ್ಟೂ ಸಂಘಪರಿವಾರದ ಕೈಗೊಂಬೆಯಾಗುತ್ತಾರೆ ಎನ್ನುವುದನ್ನು ದಲಿತ ತರುಣರು ಗಮನಿಸಬೇಕಿದೆ. ಈಗಾಗಲೇ ನರೇಂದ್ರ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದೆ. ಯೋಗಿ ಆದಿತ್ಯನಾಥ್ ಇದನ್ನು ಸಾಕಾರಗೊಳಿಸಲಿದ್ದಾರೆ.
ಇಂದು ಅಂಬೇಡ್ಕರ್ ಮತ್ತು ಅವರ ತತ್ವಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬ ಪ್ರಶ್ನೆ ನಮ್ಮ ಮುಂದಿನ ಸವಾಲು ಆಗಿದೆ. ಮೀಸಲಾತಿ ಮತ್ತು ಸಾಂವಿಧಾನಿಕ ಸವಲತ್ತುಗಳು ಜನಸಾಮಾನ್ಯರ ಅಭ್ಯುದಯದ ಮಾರ್ಗಗಳಾಗದೆ ರಾಜಕೀಯ ಮತಬ್ಯಾಂಕುಗಳ ಠೇವಣಿಗಳಂತಾಗಿರುವುದು ಕಣ್ಣಿಗೆ ಕಾಣುವ ಸತ್ಯ. ಈ ನೆಲೆಯಲ್ಲೆ ಅಂಬೇಡ್ಕರ್ ನಮ್ಮವರೊಳಗೊಬ್ಬರಾಗಿರಬೇಕೋ ಅಥವಾ ನಮ್ಮಿಂದ ದೂರದಲ್ಲಿನ ಸಿಂಹಾಸನದಲ್ಲಿ ಆಸೀನರಾಗಿರಬೇಕೋ ಎಂದು ನಾವು ನಿರ್ಧರಿಸಬೇಕಿದೆ. ಜೈಭೀಂ ಘೋಷಣೆ ರಾಜಕೀಯ ಪರಿಭಾಷೆಯಲ್ಲಿ ವಿಕಾಸ ಹೊಂದದೆ ಹೋದರೆ ಬಹುಶಃ ಅಂಬೇಡ್ಕರ್ ಜನಸಾಮಾನ್ಯರ ಸಂವೇದನೆಗಳಿಗೆ ನಿಲುಕದ ಮಹಾತ್ಮರಾಗಿ ಪ್ರತಿಮೆಗಳಲ್ಲಿ ಬಂಧಿಯಾಗಿಬಿಡುತ್ತಾರೆ. ಈಗಾಗಲೇ ಮಾಯಾವತಿ ಇಂತಹ ಕ್ಷುದ್ರ ರಾಜಕಾರಣಕ್ಕೆ ಸ್ಪಷ್ಟ ಭೂಮಿಕೆ ಒದಗಿಸಿದ್ದಾರೆ. ವಿಪರ್ಯಾಸವೆಂದರೆ ಇಂದಿನ ತರುಣ ಜಗತ್ತಿನಲ್ಲೂ ಇದೇ ಪ್ರವೃತ್ತಿ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂಬೇಡ್ಕರ್ ತಮ್ಮ ತತ್ವಗಳ ಮೂಲಕ, ಮಾನವೀಯ ಚಿಂತನೆಗಳ ಮೂಲಕ ಶೋಷಿತ ಸಮುದಾಯಗಳ ಬಳಿಗೆ ಬರುತ್ತಿದ್ದಾರೆ. ಆದರೆ ನಾವು ಅಂಬೇಡ್ಕರರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ, ಪ್ರತಿಮೆಗಳಲ್ಲಿ ಬಂಧಿಸಿ ಭಜನಾ ಮಂಡಲಿಗಳ ಮೂಲಕ ಆರಾಧ್ಯ ದೈವವನ್ನಾಗಿ ಮಾಡುತ್ತಿದ್ದೇವೆ. ಅಂಬೇಡ್ಕರ್‍ಗೆ ಏಕೆ ಮಹಾತ್ಮ ಎಂಬ ಗೌರವ ದೊರೆತಿಲ್ಲ ಎಂಬ ಪ್ರಶ್ನೆಯೂ ಹರಿದಾಡುತ್ತಿದೆ . ಭಾರತ ಭಾಗ್ಯ ವಿಧಾತ ಎಂಬ ನಾಟಕೀಯ ಪ್ರಹಸನಗಳ ಮೂಲಕ ಅಂಬೇಡ್ಕರರನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ.
ಈ ಪ್ರಯತ್ನಗಳ ಸಾಫಲ್ಯ ವೈಫಲ್ಯಗಳೇನೇ ಇರಲಿ, ಸದುದ್ದೇಶಗಳೇನೇ ಇರಲಿ ಇಂದಿನ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ನಮ್ಮೊಳಗೊಬ್ಬರಾಗಿರಬೇಕೇ ಅಥವಾ ಬೌದ್ಧಿಕವಾಗಿ ಉನ್ನತ ಪೀಠಾರೋಹಿಯಾಗಬೇಕೇ ಎಂಬ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಸಂಘಪರಿವಾರದ ವಿಕೃತ ಹಿಂದೂ ಧರ್ಮದ ಸಂರಕ್ಷಣೆಗಾಗಿ, ಹಿಂದುತ್ವ ನೆಲೆಯ ಗೋವಿನ ರಾಜಕಾರಣದ ಕಾಲಾಳುಗಳಾಗಿ ತಮ್ಮ ಅಸ್ಮಿತೆಯನ್ನೇ ಕಳೆದುಕೊಳ್ಳುವ ಅಪಾಯವನ್ನು ಶೋಷಿತ ಸಮುದಾಯಗಳು ಎದುರಿಸುತ್ತಿವೆ. ಈ ದಲಿತ ಅಸ್ಮಿತೆಯನ್ನು ದಲಿತ ಪ್ರಜ್ಞೆ ಮತ್ತು ದಲಿತ ಸಂವೇದನೆಯ ನೆಲೆಯಲ್ಲಿ ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಅಂಬೇಡ್ಕರ್ ಧರ್ಮ ವಿರೋಧಿ ಅಲ್ಲ ನಿಜ ಆದರೆ ಮಾನವೀಯ ಸಂವೇದನೆಯೇ ಇಲ್ಲದ ಧರ್ಮವನ್ನು ಒಪ್ಪುವವರಾಗಿರಲಿಲ್ಲ. ದುರಂತ ಎಂದರೆ ಇಂದು ಅದೇ ಅಮಾನುಷ ಧಾರ್ಮಿಕ ನೆಲೆಗಳಲ್ಲಿ ಅಂಬೇಡ್ಕರ್ ವಿಜೃಂಭಣೆ ನಡೆಯುತ್ತಿದೆ. ಇದಕ್ಕೆ ಕಾರಣ ಏನೇ ಇರಬಹುದು, ಈ ವಿದ್ಯಮಾನವನ್ನು ವಿರೋಧಿಸುವ ಮತ್ತೊಂದು ವೈಚಾರಿಕ ಭೂಮಿಕೆ ಸಿದ್ಧವಾಗುತ್ತಿಲ್ಲ. ದೈವ ಭಂಜಕ ಅಂಬೇಡ್ಕರರಿಗೆ ದೈವೀಕ ಸ್ವರೂಪ ನೀಡುವ ಪ್ರಯತ್ನಗಳು ಫ್ಯಾಸಿಸ್ಟ್ ಶಕ್ತಿಗಳಿಂದಲೇ ನಡೆಯುತ್ತವೆ. ಈ ವಿಕೃತಿಯ ವಿರುದ್ಧ ಜಾಗೃತರಾಗದಿದ್ದರೆ ಅಂಬೇಡ್ಕರ್ ಖಂಡಿತವಾಗಿಯೂ ಮಹಾತ್ಮ ಪಟ್ಟ ಪಡೆಯುತ್ತಾರೆ. ಆದರೆ ನಮ್ಮವರೊಳಗೊಬ್ಬರಾಗಿರುವುದಿಲ್ಲ.
ನಮ್ಮ ಆಯ್ಕೆ ಯಾವುದು ? ಇದು ಅಂಬೇಡ್ಕರರ 125ನೆಯ ಜನ್ಮದಿನದಂದು ನಮ್ಮನ್ನು ಕಾಡಬೇಕಿರುವ ಪ್ರಶ್ನೆ.
.