ಅಂತ್ಯೋದಯ ಕಾರ್ಡುಗಳಿಗಾಗಿ ಮುಗಿಯದ ಹೋರಾಟ!-ಶಾರದಾ ಗೋಪಾಲ

sharadha article photo

ಜನೆವರಿ ಹೊಸ ವರುಷ, ಹೊಸ ಹರುಷವನ್ನು ಬಹಳ ಜನರಿಗೆ ತಂದಿರಬಹುದು. ಇನ್ನೇನು, ಸಂಕ್ರಾಂತಿಹಬ್ಬವೂ ಬಂತು. ಎಳ್ಳು ಬೆಲ್ಲದ ಸವಿಯೊಂದಿಗೆ ಮತ್ತೆ ಎಲ್ಲರಿಗೂ ಹಬ್ಬದ ಹೊಸ ಹುರುಪು. ಎಲ್ಲೆಡೆ ಹಬ್ಬದ ಸಂಭ್ರಮ.
ಹಬ್ಬದ, ಹೊಸ ವರ್ಷದ ಈ ಸಂಭ್ರಮ ಅನೇಕರಿಗೆ ಇಲ್ಲ. ಅಂತ್ಯೋದಯ ಕಾರ್ಡುಗಳಿದ್ದು ಅದನ್ನು ಸರಕಾರ ಹಿಂಪಡೆದುಕೊಂಡಿರುವ ಎಲ್ಲ ಒಂಟಿ ಮಹಿಳೆಯರು, ವಯಸ್ಸು ಹೋದ ವೃದ್ಧರು ಇವರಿಗಂತೂ ಹಬ್ಬವೇ ಇಲ್ಲ, ಯಾಕೆಂದರೆ ಹಬ್ಬ ಮಾಡಲು ಅವರ ಮನೆಯಲ್ಲಿ ಕಾಳೇ ಇಲ್ಲ.
ಖಾನಾಪುರ ತಾಲೂಕಿನ ಗೋಶೆನಟ್ಟಿಯ ಕಲ್ಲವ್ವಳನ್ನೇ ತೆಗೆದುಕೊಳ್ಳಿ, ಆಕೆ ಒಬ್ಬಳೇ ಅಡಿಗೆ ಮಾಡಿಕೊಂಡು ಬದುಕುತ್ತಿದ್ದಾಳೆ. ಗಂಡ ತೀರಿ ಹೋಗಿ ಯಾವುದೋ ಕಾಲವಾಯಿತು. ಮಗನೊಬ್ಬ ಮಾನಸಿಕ ಅಸ್ವಸ್ಥ, ಬೇರೆಯಾಗಿಯೇ ಇರುವ, ಇನ್ನೊಬ್ಬ ಮಗ ದೈಹಿಕ ವಿಕಲ, ಆತನೂ ಬೇರೆಯಾಗಿಯೇ ಇದ್ದಾನೆ ತನ್ನ ಮಡದಿ, ಸಂಸಾರದೊಂದಿಗೆ. ಈಕೆ ಒಬ್ಬಳೇ ಇದ್ದು, ಸರಕಾರ ಕೊಡುವ ಅಂತ್ಯೋದಯ ಕಾರ್ಡಿನಿಂದ 35 ಕೆಜಿ ಕಾಳು ಪಡೆದು ತನ್ನಷ್ಟಕ್ಕೆ ಬೇಯಿಸಿಕೊಂಡು ಜೀವನ ಮಾಡುತ್ತಿದ್ದವಳು. ಕಳೆದ ಎಪ್ರಿಲ್ ತಿಂಗಳಲ್ಲಿ ರೇಷನ್ ಪಡೆಯಲು ಹೋದಾಗಲೆ ಗೊತ್ತಾಗಿದ್ದು, ಆಕೆಯ ಅಂತ್ಯೋದಯ ಕಾರ್ಡು ಇನ್ನು ಇರುವುದಿಲ್ಲ ಎಂದು! ರೇಶನ್‍ ಕೊಡುವಾತ ಅವಳ ಕಾರ್ಡನ್ನು ಹಿಂಪಡೆದುಕೊಂಡು ಆಕೆಗೆ ಖಾನಾಪುರ ಆಫೀಸಿನಲ್ಲಿ ಬೇರೆ ಹಸಿರು ಕಾರ್ಡ್ ಮಾಡಿಸಿಕೊಂಡು ಬರಲು ಹೇಳಿ ಕಳಿಸಿದಾಗ ಈಕೆಗೆ ಏನೂ ಅರ್ಥವಾಗದೆ ಕೊಟ್ಟ ಐದು ಕೆಜಿ ಕಾಳು ಹಿಡಿದು ವಾಪಸಾಗಿದ್ದಳು.ಮತ್ತೆ ಖಾನಾಪುರಕ್ಕೆ ಓಡಿಯಾಟ. ಅನೇಕ ದಿನಗಳ ಮೇಲೆ ಹಸಿರು ಕಾರ್ಡ್ ಸಿಕ್ಕಿತು. ಈಗ ಒಂಬತ್ತು ತಿಂಗಳಾಯಿತು. 5 ಕೆಜಿಯಲ್ಲೇ ಜೀವನ ಮಾಡಬೇಕು.`ಪಿಂಚಣಿ ಬರುತ್ತಿರಬೇಕಲ್ಲ, 500 ರೂ? ಅದನ್ನೇನು ಮಾಡ್ತೀ? ‘ಕೇಳಿದರೆ, ಬಿಪಿ ಇದೆ, ಕಣ್ಣಾಪ್ರೇಶನ್ ಮಾಡಿಸ್ಕೊಂಡಿದ್ದೀನಿ, ಕಣ್ಣು ಸರಿಯಾಗಿ ಕಾಣಂಗಿಲ್ಲ, ಔಷಧ, ಗುಳಿಗೆಗೇ ಆ ದುಡ್ಡು ಹೋಗುತ್ತದೆ ತಾಯಿ’ ಎಂದು ಹೇಳುವಾಗ ಸಾವಕಾಶವಾಗಿ ಸೆರಗಿನ ತುದಿಯನ್ನು ಕಣ್ಣಿಗೆ ಹಚ್ಚುತ್ತಾಳೆ.
`ಮನೆಗೆ ಯಾರಾದ್ರೂ ಬಂದರೆ ಏನಾರೂ ಮಾಡಿಯೇನು, ಕೊಟ್ಟೇನು ಅನ್ನುವ ಹಾಗೇ ಇಲ್ಲ. ಕೊಡುವ ಐದು ಕೆಜಿ ಅಕ್ಕಿ ನನಗೇ ಸಾಕಾಗುವದಿಲ್ಲ, ಎಲ್ಲಿಂದ ಹೆಚ್ಚಿನದು ಮಾಡಲಿ” ನಡುಗುವ ಮಾತಿನ ಕಸಮಳಗಿಯ ಸುಂದ್ರಮ್ಮ ಗಂಗಮ್ಮನಿಗೆ ದನಿಗೂಡಿಸುತ್ತಾಳೆ.ಈ ಸುಂದ್ರಮ್ಮಳ ಕತೆಯೂ ಇಂಥದ್ದೇ. ಗಂಡನಿಲ್ಲ. ಒಬ್ಬಾಕೆಯೇ ಕೂಲಿ ಮಾಡಿಕೊಂಡು ತನ್ನದನ್ನು ತಾನೇ ಬೇಯಿಸಿಕೊಂಡು ಜೀವನ ಮಾಡುತ್ತಿದ್ದಾಕೆ. ಗರ್ಭಕೋಶದ ತೊಂದರೆಯಿಂದ ಬಳಲುತ್ತಿದ್ದಾಕೆಗೆ ಸರಕಾರಿ ಆಸ್ಪತ್ರೆಯಲ್ಲಿ ಆಗುವುದಿಲ್ಲ ಎಂದುಬಿಟ್ಟರು. ಕಡೆಗೆ ತನಗೆ ಬರುವ ಪಿಂಚನಿಯನ್ನು ಎರಡು ವರ್ಷಗಳ ಕಾಲ ಒಪ್ಪಿಟ್ಟು 8000 ರೂ.ಆಗುತ್ತಲೇ ಒಬ್ಬರು ಸಹಾಯಕರೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾದಳು. ಕೈಯಲ್ಲಿಯ ದುಡ್ಡೆಲ್ಲ ಖರ್ಚಾಯಿತಾದರೂ ಗರ್ಭಕೋಶದ ತೊಂದರೆ ನಿವಾರಣೆಆಯಿತು.ಈಕೆಗೂ ಬಿಪಿ ಇದೆ.`ಸರಕಾರಿ ಆಸ್ಪತ್ರೆಯಲ್ಲಿ ಬಿಪಿ ಗುಳಿಗೆ ಉಚಿತವಾಗಿಕೊಡುತ್ತಾರಂತಲ್ಲ, ತಗೊಂಬರಬೇಕು?’`ಅವರುನಾಲ್ಕು ಗುಳಿಗೆ ಮಾತ್ರಕೊಡುತ್ತಾರೆ. ಪದೇ ಪದೇ ಆಸ್ಪತ್ರೆಗೆ ಹೋಗಲು ನಮಗೆಲ್ಲಿದೆ ತ್ರಾಣ? ಬಸ್ಸಿಗೆ ದುಡ್ಡು ಹಾಕಬೇಕಲ್ಲ? ಅದಕ್ಕೇ ಮನೆ ಮುಂದೆ ಒಬ್ಬಇಂಜೆಕ್ಷನ್‍ ಡಾಕ್ಟರ್‍ಬರುತ್ತಾನೆ, ತಿಂಗಳಿಗೆ 40 ರೂ.ನ ಔಷಧ ತಗೋತೀನಿ’ ಮತ್ತೆ ಇಂಜೆಕ್ಷನ್ನು ಅದೂ ಇದೂ ಅಂತ ದುಡ್ಡು ಖರ್ಚಾಗಿದ್ದೇ ಗೊತ್ತಾಗಲ್ಲ.’ ಎನ್ನುವ ಈ ತಾಯಿಯ ಅಂತ್ಯೋದಯ ಕಾರ್ಡು ರದ್ದಾಗಿ ಬಿಪಿಎಲ್ ಬಂತು ಕಳೆದ ಎಪ್ರಿಲ್‍ನಲ್ಲಿ. ಅದೇ ವೇಳೆಗೆ ಈಕೆ ಆಸ್ಪತ್ರೆಗೆ ಹೋಗುವ ಪ್ರಸಂಗದಿಂದಾಗಿ ಎಸ್ಸೆಮ್ಮೆಸ್ ಮಾಡುವುದು ತಡವಾಯಿತು. ಹೀಗಾಗಿ ಮೂರು ತಿಂಗಳಾಯಿತು `ನಿಂಗೆ ರೇಶನ್‍ ಇಲ್ಲಮ್ಮ’ ಅಂತೇ ಹೇಳ್ತಾನೆ ಅಂಗಡಿಯವ. ಯಾಕೆ ಅಂತಒಂದಷ್ಟು ಕೇಳು ತಾಯಿ’ ರೇಶನ್‍ ಕಾರ್ಡನ್ನು ಕಣ್ಣ ಮುಂದೆ ಹಿಡಿದಾಗ ಏನೂ ತಿಳಿಯಲಿಲ್ಲ. ಕಡೆಗೆ ಅಧಿಕಾರಿಗಳ ಬಳಿಗೇ ಹೋದಾಗ ಅವರು ದಾಖಲೆಗಳನ್ನು, ಕಂಪ್ಯೂಟರಿನಲ್ಲಿ ನೋಡಿ, `ಇವರು ಎಸ್ಸೆಮ್ಮೆಸ್ ಕಳಿಸಿದ್ದು ತಡವಾಗಿದೆ.’ಎಂದರು.`ಸೇಮೇಸು? ಹಂಗಂದ್ರೆ ಏನವ್ವ?’ಎನ್ನುವ ಮುದುಕಿಗೆ ಏನೆಂದು ಉತ್ತರಿಸುವುದು? ತಾನು ಯಾರ ಮೂಲಕವೋ ಎಸ್ಸೆಮ್ಮೆಸ್ ಕಳಿಸಿದ್ದು ಕೂಡ ಆಕೆಗೆ ನೆನಪಿಲ್ಲ. ಡಿಲೀಟಾಗಿದ್ದು ಮತ್ತೆ ಆಹಾರ ಸರಬರಾಜು ಪಟ್ಟಿಯಲ್ಲಿ ಹೆಸರು ಸೇರಿಕೊಳ್ಳಲು ಇನ್ನು ಮೂರು ತಿಂಗಳು ಬೇಕು. ಆ ಮೂರು ತಿಂಗಳು ಆ ಮುದುಕಮ್ಮನಿಗೆ ರೇಶನ್ನಿಲ್ಲ.
ಸರಕಾರದ ಈ ನೀತಿಗೆ ಏನು ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೆ ಮೂಕವಾಗುತ್ತದೆ ನಾಲಿಗೆ, ಸ್ತಬ್ದವಾಗುತ್ತದೆ ಮನಸ್ಸು.ಎಲ್ಲಿದೆ ನ್ಯಾಯ?ಎಲ್ಲಿದೆ ಗೌರವದಿಂದ ಬದುಕುವ ಹಕ್ಕು? ಯಾರನ್ನುದೂಷಿಸುವುದು? ಇಂಥದ್ದೇ ಕತೆಗಳ ಅರವತ್ತಕ್ಕೂ ಹೆಚ್ಚು 60 ಮೀರಿದ ವೃದ್ಧರು ಮೊನ್ನೆ ಖಾನಾಪುರದ ತಹಶೀಲ್ದಾರರ ಕಚೇರಿಯ ಮುಂದೆ`ಜಾಗೃತ ಮಹಿಳಾ ಒಕ್ಕೂಟ’ದ ನೇತೃತ್ವದಲ್ಲಿ ಕಾರ್ಡು ಕೊಡಿ ಎಂದು ಧರಣಿ ಕುಳಿತಿದ್ದಾಗ ಮುಖಕ್ಕೆ ಹೊಡೆದ ವಾಸ್ತವದ ಚಿತ್ರವಿದು.
ಸಾಮಾನ್ಯವಾಗಿ ಕೆಳವರ್ಗದ, ಹಳ್ಳಿಯ ಮಹಿಳೆಯರು ಕಡೆಯ ಉಸಿರಿರುವವರೆಗೂ ದುಡಿಯುತ್ತಲೇ, ಕುಟುಂಬಕ್ಕೆ ತಮ್ಮ ಕೈಲಾದ ಕೊಡುಗೆಯನ್ನು ಕೊಡುತ್ತಲೇ ಇರುತ್ತಾರೆ. ಕುರಿ ಕಾಯುತ್ತಲೋ, ಸಣ್ಣ ಬುಟ್ಟಿಯಲ್ಲಿ ಹೊರಲಾದಷ್ಟು ಹಣ್ಣು ಮಾರುತ್ತಲೋ, ಇಲ್ಲವೆಂದರೆ ಕೌದಿ ಮಾಡುತ್ತಲಾದರೋ ಜೀವನದ ಕೊನೆ ಮುಟ್ಟುವವರಿವರು.ಇಂಥ ಉಪಯುಕ್ತ ಜೀವಿಗಳನ್ನು ಕುಟುಂಬವಾಗಲೀ, ಸಮಾಜವಾಗಲೀ ಹೊರ ಹಾಕುತ್ತಾರೇಕೆ?
ಎಷ್ಟೋ ಸಾರೆ ಮಕ್ಕಳ ಕುಟುಂಬ ಬೆಳೆದಂತೆ ಸ್ವಇಚ್ಛೆಯಿಂದ ಬೇರೆಯಾಗಿ ಇವರು ಅಲ್ಲೇ ಒಂದು ಖೋಲಿಯಲ್ಲಿ ಪ್ರತ್ಯೇಕ ಅಡಿಗೆಯಲ್ಲಿ ತೊಡಗಿಕೊಳ್ಳುತ್ತಾರೆ. ಕೂಲಿ ನಾಲಿ ಸಿಗುವವರೆಗೆ ಹೇಗೋ ಜೀವನದಾಟುತ್ತದೆ.ಪುಟ್ಟ ಪುಟ್ಟ ಮೊಮ್ಮಕ್ಕಳು ಕೂಡ ಅಜ್ಜಿಯ ಕೈ ತುತ್ತಿಗೆ ಬರುತ್ತಿರುತ್ತಾರೆ. ಯಾರೋ ಪುಣ್ಯಾತ್ಮರು ರೇಶನ್‍ಕಾರ್ಡ್ ಮಾಡಿಸಿಕೊಟ್ಟಿರುತ್ತಾರೆ. ತದ ನಂತರ ಚುನಾವಣೆಕಾರ್ಡು, ಅಧಾರ್‍ಕಾರ್ಡು ಮುಂತಾಗಿ ಸರಕಾರಕ್ಕೆ ಬೇಕಾದ ಎಲ್ಲ ರೀತಿಯ ಗುರುತಿನ ಚೀಟಿಗಳೂ ಇವರ ಬಕ್ಕಳದಲ್ಲಿ ಇರುತ್ತವೆ, ಸರಕಾರಕ್ಕೆ ಮಾತ್ರ ಇವರ ಗುರುತೇ ಇರುವುದಿಲ್ಲ. ಎಸ್ಸೆಮ್ಮೆಸ್ ಕಳಿಸಿಲ್ಲ ಎಂಬ ಕಾರಣಕ್ಕೆಇಂಥವರದ್ದು ಆರಾರು ತಿಂಗಳು ರೇಶನ್‍ನ್ನು ತಡೆ ಹಿಡಿಯುತ್ತದೆ ಸರಕಾರ.
ಸುಪ್ರೀಮ್‍ಕೋರ್ಟಿನ ಆಹಾರದ ಹಕ್ಕಿನ ವಿಚಾರದ ಮಧ್ಯಂತರ ತೀರ್ಪುಗಳಲ್ಲಿ ಅಂತ್ಯೋದಯ ಅನ್ನಯೋಜನೆಗೆ ಸಂಬಂಧಿಸಿದ ಆಜ್ಞೆಯ ಪ್ರಕಾರ, 1.ವಯಸ್ಸಾದವರಿಗೆ, ಸ್ಥಿರತೆ ಇಲ್ಲದವರಿಗೆ, ವಿಕಲ ಚೇತನರಿಗೆ, ಒಬ್ಬಂಟಿಯಾಗಿ ಇರುವ ಗಂಡಸು ಮತ್ತು ಹೆಂಗಸಿಗೆ, ಒಂಟಿಯಾಗಿರುವ ಗರ್ಭಿಣಿ ಮತ್ತು ಹಾಲೂಡುವ ತಾಯಿಗೆ, 2.ಬೇರೆ ಯಾವ ಆಧಾರವೂ ಇಲ್ಲದ ಒಂಟಿ ಮಹಿಳೆ ಮತ್ತು ವಿಧವೆಗೆ, 3.ಬೇರಾವುದೇ ಆಧಾರವಿಲ್ಲದ 60 ವರ್ಷವಾಗಿರುವ, ನಿಯಮಿತ ಆದಾಯ ಇಲ್ಲದವರಿಗೆ, 4. ವಿಕಲ ಚೇತನ ವ್ಯಕ್ತಿಯೇ ಹಿರಿಯನಾಗಿರುವಂಥ ಕುಟುಂಬಕ್ಕೆ, ವೃದ್ಧಾಪ್ಯ, ದೈಹಿಕ ಮತ್ತು ಮಾನಸಿಕ ಬಲ ಕುಸಿದಿರುವಂಥ, ಸಾಮಾಜಿಕ ಸಂಪ್ರದಾಯಗಳಿಂದ, ವಿಕಲ ಚೇತನ ಮಕ್ಕಳಿಂದಾಗಿ ಅಥವಾ ಇನ್ನಾವುದೇ ಕಾರಣಕ್ಕಾಗಿ ಮನೆಯ ವಯಸ್ಕರಿಗೆ ದುಡಿಯಲು ಹೋಗಲು ಸಾಧ್ಯವಿಲ್ಲ ಎಂಬಂಥ ಕುಟುಂಬಗಳಿಗೆ, 5.ಆದಿವಾಸಿಗಳಿಗೆ ಅಂತ್ಯೋದಯ ಕಾರ್ಡುಗಳನ್ನು ಕೊಡಬೇಕು.
ಸುಪ್ರೀಂಕೋರ್ಟಿನ ಈ ಆಜ್ಞೆಯನ್ನು ಮೀರಿ, ಒಬ್ಬರೇ ಇದ್ದು, 35 ಕೆಜಿ ಕೊಟ್ಟಿದ್ದನ್ನು ಮಾರಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆಅವರಿಂದ ಕಾರ್ಡುಗಳನ್ನು ಕಿತ್ತುಕೊಂಡ ಸರಕಾರವು ಇದು ಸುಪ್ರೀಂಕೋರ್ಟಿನ ಆಜ್ಞೆಯ ಉಲ್ಲಂಘನೆ ಎಂಬ ಅರಿವಾಗಿಅವರಿಗೆ ಕಾರ್ಡುಗಳನ್ನು ಮರಳಿ ಕೊಡಬೇಕೆಂದು ಆದೇಶ ಮಾಡುತ್ತದೆ. ಆ ಆದೇಶದಲ್ಲಿರುವುದೇನು? `60 ವರ್ಷ ಮೇಲ್ಪಟ್ಟ ಹಾಗೂ ಕುಟುಂಬದಿಂದ ಪ್ರತ್ಯೇಕವಾಗಿ ವಾಸವಾಗಿರುವ ವೃದ್ಧದಂಪತಿಗಳಿಗೆ, ವಿಧವೆ ಮನೆಯಮುಖ್ಯಸ್ಥಳಾಗಿದ್ದು ಸಣ್ಣ ಮಕ್ಕಳನ್ನು ಹೊಂದಿದ್ದಲ್ಲಿ, ಅಂಗವಿಕಲರು ಕುಟುಂಬದ ಮುಖ್ಯಸ್ಥರಾಗಿದ್ದಲ್ಲಿ, ಎಚ್‍ಐವಿ ಅಥವಾ ಏಡ್ಸ್ ಪೀಡಿತರಾಗಿದ್ದಲ್ಲಿ, ಕುಷ್ಠರೋಗ ಹೊಂದಿರುವ ಅರ್ಜಿದಾರರಾಗಿದ್ದಲ್ಲಿ, ಸರ್ವೋಚ್ಛನ್ಯಾಯಾಲಯದ ನಿರ್ದೇಶನದಂತೆ ಗುರುತಿಸಲ್ಪಟ್ಟ ಪರಿಶಿಷ್ಟ ವರ್ಗಗಳ ಬುಡಕಟ್ಟುಜನಾಂಗಕ್ಕೆ ಸೇರಿದವರಾಗಿದ್ದಲ್ಲಿ ಇಂಥ ಪ್ರಕರಣಗಳಲ್ಲಿ ಮಾತ್ರ ಅರ್ಜಿಯನ್ನು ಪುರಸ್ಕರಿಸಿ ಬಿಪಿಎಲ್ ನಿಂದ ಅಂತ್ಯೋದಯಕ್ಕೆ ವರ್ಗಾವಣೆ ಮಾಡಬಹುದಾಗಿದೆ’ಎಂದು ಹೇಳುತ್ತದೆ. `ಒಂಟಿ ಮಹಿಳೆ’ ಎಂಬ ವಿಷಯವನ್ನು ತೆಗೆದೇ ಬಿಟ್ಟಿದೆ.`ಬೇರೆ ಬೇರೆ ಕಾರಣಕ್ಕೆ ದುಡಿಯಲು ಸಾಧ್ಯವಿಲ್ಲದ’ ಎಂಬ ಅಂಶವನ್ನೂ ಕಡೆಗಣಿಸಿ ದೇವದಾಸಿಯರಿಗೆ ಸಿಗಬೇಕಾದ ಅಂತ್ಯೋದಯ ಕಾರ್ಡುಗಳನ್ನು ಸಿಗದಂತೆ ಮಾಡಿದೆ.`ಸಣ್ಣ ಮಕ್ಕಳನ್ನು ಹೊಂದಿದ್ದ ವಿಧವೆ ಕುಟುಂಬದ ಮುಖ್ಯಸ್ಥಳಾಗಿದ್ದು’ಎಂದು ಹೇಳುತ್ತದಾದರೂ ಸರಕಾರದ ಆದೇಶದ ಆಶಯ ಕೆಳಗಿನ ನೌಕರರವರೆಗೆ ತಲುಪದೆ ಸ್ಥಳೀಯ ವಿಚಾರಣೆಗೆ ಬಂದಾಗ ಅವರು ದೇವದಾಸಿ ಕುಟುಂಬವನ್ನೂ, ಮಕ್ಕಳನ್ನು ಸಲಹುತ್ತಿರುವ ವಿಧವೆಯನ್ನೂ ಆಕೆಗೆ 60 ವರ್ಷವಾಗಿಲ್ಲ ಎಂಬ ಒಂದೇ ಕಾರಣಕ್ಕೆ ಕಡೆಗಣಿಸಿಬಿಡುತ್ತಾರೆ. ಅವರ ಅಂತ್ಯೋದಯ ಅನೂರ್ಜಿತವಾಗುತ್ತದೆ.
ಇದಕ್ಕೆ ಉದಾಹರಣೆ ಹಂದೂರಿನ ಕಾಶವ್ವ.ದೇವದಾಸಿ ಪದ್ಧತಿ ನಿಷೇಧವಾಗಿ ಆ ಅರಿವು ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಹರಡುತ್ತಿರುವಂಥ ದಿನಗಳಲ್ಲಿ ದೇವದಾಸಿಯಾದ ಹೆಣ್ಣುಮಗಳಿವಳು. ದೇವದಾಸಿ ಎಂಬ ಕಾರಣಕ್ಕೆ ತನ್ನ ಮನೆಯಿಂದ ಹೊರಗಾಗಿ, ಭೂಮಿ, ಆಸ್ತಿ ಯಾವುದನ್ನೂ ಪಡೆಯದ ಈಕೆ ಇಂದು `ಇನ್ನೂ ವಯಸ್ಸಾಗಿಲ್ಲ’ಎಂಬ ಕಾರಣಕ್ಕೆಅಂತ್ಯೋದಯಕ್ಕೆ ಹೊರತಾಗುತ್ತಾಳೆ. ಹಾಗೆಯೇ ಹೊಸೆಟ್ಟಿ ಯಮಾದೇವಿ. ಮೂರು ಚಿಕ್ಕಚಿಕ್ಕ ಮಕ್ಕಳನ್ನು ಉಡಿಗೆ ಹಾಕಿ ಅಪಮೃತ್ಯುವಿಗೀಡಾದ ಗಂಡ, ಇನ್ನೂಇಪ್ಪತ್ತಾರೆಂಟು ವರ್ಷದ ಈ ಹೆಣ್ಣುಮಗಳು ಮುದುಕಿಯಾಗಿಲ್ಲ ಎಂಬ ಕಾರಣಕ್ಕೆ ಅಂತ್ಯೋದಯ ಪಡೆಯುವುದಿಲ್ಲ. ಲವ್ ಮಾಡಿ ಮದುವೆಯಾಗಿ, ಮಗು ಪಡೆದೂ ಹಿರಿಯರಿಂದ ಒಪ್ಪಿಗೆ ಇಲ್ಲದ ಕಾರಣಕ್ಕಾಗಿ ಗಂಡನ ಮನೆಯಿಂದ ಪರಿತ್ಯಕ್ತಳಾಗಿರುವ ವನಿತಾ ಚಿಕ್ಕ ಮಗನಿದ್ದೂ ಅಂತ್ಯೋದಯ ಕಾರ್ಡು ಪಡೆಯಲರ್ಹ ಆಗುವುದಿಲ್ಲ.
ಸಂವಿಧಾನದ, ಸುಪ್ರೀಂಕೋರ್ಟಿನ ಆಶಯಗಳಿಗೆ ಸರಕಾರ, ಆಹಾರ ಇಲಾಖೆ ಹೀಗೆ ತಿಲಾಂಜಲಿ ಕೊಟ್ಟಾಗ 60, 70 ಮೀರಿದ ಈ ವೃದ್ಧೆಯರು, ಪರಿತ್ಯಕ್ತೆಯರು, ವಿಧವೆಯರು, ತಮ್ಮ ಅಂತ್ಯೋದಯ ಕಾರ್ಡುಗಳಿಗಾಗಿ, ತನ್ಮೂಲಕ ಗೌರವದ ಬದುಕಿಗಾಗಿ ಕಚೇರಿಗಳ ಎದುರು ಧರಣಿ ಕೂಡಬೇಕಾಗುತ್ತದೆ. ವಯಸ್ಸಾದವರಿಗೆ ಗೌರವ ಕೊದುವ ಸಂಸ್ಕೃತಿಯನ್ನು ನಾವು ಮರೆತಾಗ ಸರಿರಾತ್ರಿಯವರೆಗೂ ಇವರು ಧರಣಿ ಮುಂದುವರೆಸಬೇಕಾಗುತ್ತದೆ. ಸಂಬಳ, ಭತ್ಯೆಗಳೆಲ್ಲ ಇದ್ದು, 60 ವರ್ಷವಾಗುತ್ತಲೆ ಬೇಕಾದಷ್ಟು ಪಿಂಚಣಿ ಭಾಗ್ಯವಿರುವ ಅಧಿಕಾರಿಗಳಿಗೆ ಈ ಆಧಾರಹೀನ ಮಹಿಳೆಯರು ಅನ್ನಕ್ಕೆ ದಂಡವಾಗಿಕಾಣುತ್ತಾರೆ. ಕೂತು ಉಣ್ಣುವವರಾಗಿ, ಕೊಟ್ಟ ಕಾಳನ್ನು ಮಾರಿಕೊಳ್ಳುವವರಾಗಿ ಕಾಣುತ್ತಾರೆ. ಒಂದೊಂದು ಒಂದೊಂದು ಹಿಡಿ ಕಾಳಿಗೆ ಒಂದೊಂದು ತುತ್ತು ಅನ್ನಕ್ಕೆ ಅವರು ಮಾಡುವ ತಪಸ್ಸುಇವರಿಗೆ ಕಾಣಲು ಸಾಧ್ಯವೇ ಇಲ್ಲ. ಜೀವನದ ತುಟ್ಟತುದಿ ತಲುಪಿದರೂ `ದುಡಿಯುವ ಭಾಗ್ಯ’ ಮಾತ್ರ ಇವರಿಗೆ ತಪ್ಪುವುದಿಲ್ಲ.
***