ಹಿಮದಗ್ನಿಯನ್ನು ಬಿಗಿದಪ್ಪುವ ತವಕ-ನಾಗೇಶ್ ಹೆಗಡೆ

 

ಬೆಂಗಳೂರಿನ ನಡುವಣ ಬೆಳ್ಳಂದೂರಿನ ಕೆರೆಯಲ್ಲಿ ಹೊಗೆ, ಬೆಂಕಿ ಚಿಮ್ಮಿದಾಗ ಅಗ್ನಿಶಾಮಕ ದಳದವರು ಧಾವಿಸಿ ನೀರಿನ ಕಾರಂಜಿಯನ್ನು ಚಿಮ್ಮಿಸಿದ್ದು ನೆನಪಿದೆ ತಾನೆ? ಸುಮಾರು ಅದೇ ಕಾಲಕ್ಕೆ, ಅದನ್ನೇ ನೆನಪಿಸುವಂತೆ ಚೀನೀಯರು ಸಮುದ್ರದ ನಡುವೆ ಹೊಗೆ, ಉಗಿ, ಬೆಂಕಿಯನ್ನು ಸೃಷ್ಟಿಸಿ ಕುಣಿದು ಕುಪ್ಪಳಿಸಿದರು. ಜಗತ್ತಿನಲ್ಲೇ ಮೊದಲ ಬಾರಿ ಎಂಬಂತೆ ಅವರು ಸಾಗರ ತಳದಿಂದ ಹೊಸ ಇಂಧನವೊಂದನ್ನು ಹೊರ ತೆಗೆದಿದ್ದರು.

ಒಂದೂವರೆ ಕಿಲೊಮೀಟರ್ ಆಳದಲ್ಲಿ ಅತಿಶೀತಲ ಸ್ಥಿತಿಯಲ್ಲಿ ಮಂಜಿನ ಗಡ್ಡೆಯಂತೆ ಕೂತಿದ್ದ ಮೀಥೇನ್ ಸ್ಫಟಿಕವನ್ನು ಅವರು ಮೊದಲ ಬಾರಿಗೆ ಹೊರಕ್ಕೆಳೆದರು. ಗಾಳಿಗೆ ಸ್ಪರ್ಶವಾದದ್ದೇ ತಡ, ಸ್ಫಟಿಕ ಒಡೆಯಿತು. ಕಿಡಿಯ ಸ್ಪರ್ಶವಾಗಿದ್ದೇ ತಡ ಬೆಂಕಿ ಸ್ಫೋಟಿಸಿತು. ಹೊರತೆಗೆದ ಆ ವಸ್ತುವಿಗೆ ‘ಹಿಮದಗ್ನಿ’ ಎಂದರು, ‘ಬರ್ಫದಬೆಂಕಿ’ ಎಂದರು, ‘ಬೆಂಕಿಗಟ್ಟಿ’ ಎಂದರು.

ಅಲ್ಲೊಂದೇ ಅಲ್ಲ, ನಮ್ಮ ಮಂಗಳೂರಿನ ಆಚಿನ ಸಮುದ್ರತಳದಲ್ಲೂ ಮೀಥೇನ್ ಗುಳ್ಳೆಗಳು ಆಳ ಕೆಸರಿನ ಆಳದಲ್ಲಿ ಭಾರೀ ಒತ್ತಡದಲ್ಲಿ ಹೆಪ್ಪುಗಟ್ಟಿದ ರೂಪದಲ್ಲಿ ಹೇರಳ ಪ್ರಮಾಣದಲ್ಲಿ ಇವೆಯೆಂದು ಎಂದೋ ಅಂದಾಜು ಮಾಡಲಾಗಿದೆ. ಅವಕ್ಕೆ ‘ಕ್ಲಾಥ್ರೇಟ್’ ಅಥವಾ ‘ಹೈಡ್ರೇಟ್ಸ್’ ಎನ್ನುತ್ತಾರೆ.

ಕೆಲವು ಕಡೆ ಬರೀ ಮೀಥೇನ್ ಇದ್ದರೆ, ಇನ್ನು ಕೆಲವು ತಾಣಗಳಲ್ಲಿ ಅಂಟಿನ ಉಂಡೆಯಂಥ ‘ನೊಡ್ಯೂಲ್ಸ್’ ಜೊತೆಗೆ ಮೀಥೇನ್ ಚಂಡುಗಳು ಸಿಗುತ್ತವೆ. ಅದೃಷ್ಟ ಖುಲಾಯಿಸಿದರೆ ಪ್ಲಾಟಿನಮ್ಮಿಗಿಂತ ಹೆಚ್ಚಿನ ಬೆಲೆ ಬಾಳುವ ಯಿಟ್ರಿಯಂ, ನಿಯೊಡಿಯಂ, ಟೆಲ್ಯುರಿಯಂ ಮುಂತಾದ ವಿರಳಲೋಹಗಳೂ ಸಿಗಬಹುದು. ಆದರೆ ಅನಿಲ ಗುಳ್ಳೆಗಳಿಂದ ಕೂಡಿದ ಕೆಸರಿನ ಮುದ್ದೆಯನ್ನು ಹೊರಕ್ಕೆ ತೆಗೆಯುವುದು ತೈಲವನ್ನು ತೆಗೆದಷ್ಟು ಸುಲಭ ಅಲ್ಲ. ಅದು ತೀರಾ ತೀರಾ ಸವಾಲಿನ ಕೆಲಸ.

ಅಷ್ಟು ಆಳದಲ್ಲಿ ಪಾತಾಳಗರಡಿ ಇಳಿಸಿದ ತಕ್ಷಣ ಗುಳ್ಳೆ ಪಕ್ಕಕ್ಕೆ ಸರಿದು ಜಾರಿಕೊಳ್ಳುತ್ತದೆ. ಕೆಸರಿನ ತಳದಿಂದ ಪಾರಾಗಿ ಅದು ಹಿಗ್ಗುತ್ತ ಮೇಲಕ್ಕೆ ಬಂದು ಬೃಹದಾಕಾರ ತಾಳಿ ಗಾಳಿಗೆ ಬಂದಾಕ್ಷಣ ಒಡೆದು ಆಕಾಶಕ್ಕೆ ಸೇರಿ ಬಿಡುತ್ತದೆ. ಅದೆಷ್ಟೇ ನಾಜೂಕಾಗಿ ಪೀಪಾಯಿಗಳಲ್ಲಿ ತುಂಬಿ ಮೇಲಕ್ಕೆ ತಂದರೂ ತೆರೆದು ನೋಡಿದರೆ ಬರೀ ಕೆಸರುಗಸಿ. ನಸೀಬಿದ್ದರೆ ಕೆಲವು ವಿರಳಲೋಹ ಸಿಗಬಹುದು.

ಚೀನೀಯರು ಎಂಥ ತಂತ್ರವನ್ನು ಬಳಸಿದರೊ, ಅಂತೂ ಹಿಮದಗ್ನಿ ಹಡಗಿನ ಮೇಲೆ ಬಂದು ಹೊಗೆ ಕಕ್ಕಿದ್ದನ್ನು ಜಗತ್ತಿನ ಎಲ್ಲ ವಾರ್ತಾ ಏಜೆನ್ಸಿಗಳಿಗೂ ರವಾನಿಸಿದರು. ಭೂಮಿಯ ಆಳದಲ್ಲಿ ಹೊಸದೊಂದು ಸಂಪತ್ತಿನ ಮೇಲೆ ತಮ್ಮ ಧ್ವಜವನ್ನು ನೆಟ್ಟೆವೆಂದು ಘೋಷಿಸಿದರು. ಅದೇ ತಂತ್ರವನ್ನು ಅವರು ಇನ್ನಷ್ಟು ಮತ್ತಷ್ಟು ಸುಧಾರಿಸಿ ಕ್ರಮೇಣ ತಾಂತ್ರಿಕ ಏಕಸ್ವಾಮ್ಯವನ್ನು ಸ್ಥಾಪಿಸುತ್ತಾರೆ. ಮುಂದೆ ಎಲ್ಲ ದೇಶಗಳೂ ಸಮುದ್ರ ತಳಕ್ಕೆ ಲಗ್ಗೆ ಹಾಕಲು ಬಯಸಿದರೆ ಅಂಥ ಸಾಹಸಕ್ಕೆ ಚೀನೀಯರೇ ತಾಂತ್ರಿಕ ನಾಯಕರಾಗಿರುತ್ತಾರೆ. ಚೀನೀಯರೇ ಕಾಲಾಳುಗಳೂ ಆಗಿರುತ್ತಾರೆ.

ಆ ಭವಿಷ್ಯ ತೀರ ದೂರದಲ್ಲೇನೂ ಇಲ್ಲ. ಸಮುದ್ರದ ತಳದಲ್ಲಿರುವ ಸಂಪತ್ತಿನ ಮೇಲೆ ಎಲ್ಲ ರಾಷ್ಟ್ರಗಳೂ ಕಣ್ಣಿಟ್ಟು ಕೂತಿವೆ. ನಾವು ಮನುಷ್ಯರು ಮಂಗಳ, ಬುಧ ಎಂದೆಲ್ಲ ಬಾಹ್ಯಶೋಧಕ್ಕೆ ಹಣ ಸುರಿಯುವ ಬದಲು ಸಮುದ್ರಶೋಧಕ್ಕೆ ಸುರಿದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಭೂಮಿಯ ಶೇಕಡಾ 60ರಷ್ಟು ಪ್ರದೇಶವನ್ನು ಸಮುದ್ರ ಆಕ್ರಮಿಸಿದ್ದು, ಅದರ ಶೇಕಡಾ 5ರಷ್ಟು ಭಾಗವನ್ನೂ ನಾವು ಶೋಧ ಮಾಡಿಲ್ಲ.

ಅಂಚಂಚಿನ ತೈಲವನ್ನಷ್ಟು ಎತ್ತಿ ಖಾಲಿ ಮಾಡುತ್ತಿದ್ದೇವೆ. ಆಳದಲ್ಲಿ ಅಪಾರ ಪ್ರಮಾಣದ ಖನಿಜ ದ್ರವ್ಯಗಳು ಇವೆ ಎಂಬುದಂತೂ ನಿಜ. ನೆಲದ ಮೇಲೆ ದಕ್ಷಿಣ ಆಫ್ರಿಕದ ಸಡ್‌ಬರಿಯಲ್ಲಿ, ಪೆರುವಿನ ಯನಕೋಚಾದಲ್ಲಿ, ಮೊಂಗೋಲಿಯಾದ ಖಾಂಬೋಜ್‌ನಲ್ಲಿ, ಸೈಬೀರಿಯಾದ ಮಿರ್ನಿಯಲ್ಲಿ, ಚಿಲಿಯ ಚಿಕ್ಕಿಕಾಮಾತಾದಲ್ಲಿ, ಕೆನಡಾದ ಡೈವಿಕ್‌ನಲ್ಲಿ, ನಮ್ಮ ಕೋಲಾರದಲ್ಲಿ, ಚಿನ್ನ, ಬೆಳ್ಳಿ, ವಜ್ರ, ತಾಮ್ರ, ನಿಕೆಲ್, ಕೊಬಾಲ್ಟ್ ಎಲ್ಲ ಸಿಗುವುದಾದರೆ ಸಮುದ್ರದಲ್ಲೂ ಅವು ಅಲ್ಲೆಲ್ಲೋ ಇರಬೇಕಲ್ಲ.

ಇಲ್ಲಿಗಿಂತ ಮೂರು ಪಟ್ಟು ಹೆಚ್ಚಿಗೆ ಇರಬಹುದು. ನಮ್ಮ ಎಲ್ಲ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ, ಬ್ಯಾಟರಿಗಳಿಗೆ, ಸೌರಫಲಕಗಳಿಗೆ ಬೇಕಾದ ವಿರಳಧಾತುಗಳೂ ಅಲ್ಲಿ ಅಲ್ಲಲ್ಲಿ ಸಂಚಯಿತ ರೂಪದಲ್ಲೇ ಇರಲೂಬಹುದು. ಏಕೆಂದರೆ ಭೂಮಿಯ ಮೇಲಿದ್ದಂತೆ ಅವು ಜಡಿಮಳೆಗೆ, ನೀರಿಗೆ, ಗಾಳಿಗೆ ಅವು ಕದಲದೇ ನಿಂತಿವೆ.

ಆಸೆಯೇನೊ ಬೆಟ್ಟದಷ್ಟು. ಆದರೆ ಆಳ ಹೇಳತೀರದಷ್ಟು! ಅಲ್ಲಿಗೆ ಕೈಹಾಕುವುದೆಂದರೆ ಸವಾಲುಗಳ ಸರಮಾಲೆಯೇ ಎದುರಾಗುತ್ತದೆ. ಅಲ್ಲೂ ಬೆಟ್ಟಗಳಿವೆ, ಐದಾರು ಕಿಲೊಮೀಟರ್ ಆಳ ಕಣಿವೆಗಳಿವೆ, ವಿಶಾಲ ಬಯಲುಗಳಿವೆ, ಪರ್ವತ ಶ್ರೇಣಿಗಳಿವೆ. ಶಾಂತ ಸಾಗರದ ಪರ್ವತಗಳನ್ನು ಬಾಚಿದರೂ ಭೂಮಿಯ ಮೇಲೆ ಇರುವುದಕ್ಕಿಂತ 22 ಪಟ್ಟು ಹೆಚ್ಚು ಟೆಲ್ಯೂರಿಯಂ ಇದೆ ಎಂದು ಅಂದಾಜು ಮಾಡಲಾಗಿದೆ.

ಸೌರಫಲಕಗಳ ನಿರ್ಮಾಣಕ್ಕೆ ಟೆಲ್ಯೂರಿಯಂ ಬೇಕೇ ಬೇಕು. ಏನೆಲ್ಲ ಇವೆ, ಆದರೆ ಎಲ್ಲವೂ ರಹಸ್ಯದ ಮುಸುಕು ಹೊದ್ದು ಮಲಗಿವೆ. ಶೋಧಕ್ಕೆಂದು ಆಳಕ್ಕೆ ಹೋದ ಹಾಗೆಲ್ಲ ಕತ್ತಲು ಹೆಚ್ಚುತ್ತದೆ, ಒತ್ತಡವೂ ಹೆಚ್ಚುತ್ತ ಹೋಗುತ್ತದೆ. ಒಂದು ಕಿ.ಮೀ ಆಳದಲ್ಲೂ ಶೋಧ ಯಂತ್ರಗಳನ್ನು ಇಳಿಸುವುದೆಂದರೆ ಅಪಾರ ಶಕ್ತಿ ಮತ್ತು ಪ್ರಖರ ಬೆಳಕು ಬೇಕು.

ಅತಿ ಚಳಿಯಿಂದಾಗಿ ಯಾಂತ್ರಿಕ ಸಲಕರಣೆಗಳು ಕೈಕೊಡುತ್ತವೆ. ಎಲ್ಲಕ್ಕಿಂತ ಮುಖ್ಯ ಅಡೆತಡೆ ಎಂದರೆ ಅಲ್ಲಿನ ಪರಿಸರ ಸಮತೋಲವನ್ನು ಹಾಳು ಮಾಡದೆ ಗಣಿಗಾರಿಕೆ ಸಾಧ್ಯವೇ ಇಲ್ಲವಾಗುತ್ತದೆ. ಏಕೆಂದರೆ ತಳದ ಗಸಿ ತುಸುವೇ ಕದಡಿದರೂ ಅಲ್ಲಿನ ಜೀವಲೋಕ ಅಲ್ಲೋಲ ಕಲ್ಲೋಲ ಆಗುತ್ತದೆ.

ನಾವಿನ್ನೂ ಅಲ್ಲಿಯ ಜೀವಲೋಕದ ಕಾಲುಭಾಗವನ್ನೂ ನೋಡಿಲ್ಲ. ಹತ್ತು ಕಿ.ಮೀ. ಆಳದಲ್ಲಿ ಜ್ವಾಲಾಮುಖಿ ಇವೆ. ತಲೆಕೆಳಗಾದ ಜಲಪಾತಗಳಿವೆ. ಬಿಸಿನೀರನ್ನು, ಕಪ್ಪು ಗಂಧಕವನ್ನು ಚಿಮಣಿಯಂತೆ ನಿರಂತರ ಕಕ್ಕುವ ಡೊಂಬಗಳಿವೆ. ಸೂರ್ಯರಷ್ಮಿಯ ನೆರವಿಲ್ಲದೆ ವಿಕಾಸಗೊಂಡ ವಿಲಕ್ಷಣ ಜೀವಸಂತತಿಗಳಿವೆ. ಅನ್ಯಗ್ರಹಗಳಲ್ಲಿ ಇರಬಹುದೆಂದು ಊಹಿಸಿಕೊಳ್ಳುವ ಏನೆಲ್ಲ ಇಲ್ಲೇ ಇವೆ.

ಅವನ್ನೆಲ್ಲ ಸಮೀಕ್ಷೆ ಮಾಡಲು ಸಮರ್ಥ ಯಂತ್ರಸಾಮಗ್ರಿಗಳು ಈಗಿನ್ನೂ ವಿಕಾಸಗೊಳ್ಳಬೇಕಿದೆ. ಆದರೆ ಅದಕ್ಕಿಂತ ಮೊದಲೇ ಅಲ್ಲಿನ ಖನಿಜ ಸಂಪತ್ತು, ಶಕ್ತಿ ಸಂಪತ್ತಿನ ಮೇಲೆ ಕಣ್ಣಿಟ್ಟು ಲಾಖ್ಹೀಡ್ ಮಾರ್ಟಿನ್‌ನಂಥ ಕಂಪನಿಗಳು ಖನಿಜಶೋಧಕ್ಕೆಂದು ಜಲಾಂತರ್ಗಾಮಿ ಡೋಝರ್‌ಗಳನ್ನು ನಿರ್ಮಿಸುತ್ತಿವೆ.

ಪಾಪುವಾ ನ್ಯೂಗಿನಿಯ ಬಳಿ ಒಂದು ಕಿಲೊಮೀಟರ್ ಆಳದಲ್ಲಿ ತರಾವರಿ ಖನಿಜಗಳು ಒಂದೇ ತಾಣದಲ್ಲಿ ಸಿಗುತ್ತವೆ ಎಂಬುದನ್ನು ಅರಿತು ಅಲ್ಲಿಗೆ ಲಗ್ಗೆ ಹಾಕಲು ಸಿದ್ಧತೆ ನಡೆಸಿವೆ. ಅದನ್ನು ತಡೆಗಟ್ಟಲು ಪರಿಸರ ಸಂರಕ್ಷಣ ಸಂಸ್ಥೆಗಳು ಸಜ್ಜಾಗುತ್ತಿವೆ. ಈ ಮಧ್ಯೆ ಉತ್ತರ ಧ್ರುವದ ಆರ್ಕ್‌ಟಿಕ್ ಬಳಿಯ ತೆಳ್ಳನ್ನ ಹಿಮದಲ್ಲಿ ತೈಲ ಬಾವಿ ಕೊರೆಯಲು ಹೊರಟ ನಾರ್ವೆ ಸರಕಾರದ ವಿರುದ್ಧ ಅಲ್ಲಿನದೇ ನಾಗರಿಕರು ನ್ಯಾಯದ ಕಟ್ಟೆಗೆ ಏರಿದ್ದಾರೆ.

ದೂರದ ಸಂಪತ್ತು ನಮ್ಮದೆಂದು ಉದ್ದುದ್ದ ತೋಳಿನವರು ಬರ್ಮಾದ ಕಾಡಿನಲ್ಲೊ ಅಂಟಾರ್ಕ್‌ಟಿಕಾದ ಹಿಮಖಂಡದಲ್ಲೊ ಅದರಾಚಿನ ಗ್ರಹದಲ್ಲೆಲ್ಲೊ ಧ್ವಜ ಊರಿ ಬರುವುದು ಹಿಂದಿನಿಂದಲೂ ರೂಢಿಯಲ್ಲಿದೆ. ರಷ್ಯನ್ನರು 2007ರಲ್ಲಿ ಆರ್ಕ್‌ಟಿಕ್ ಬಳಿ ನೀರೊಳಗೆ ಟೈಟಾನಿಯಂ ಧ್ವಜ ನೆಟ್ಟು ಅದೆಲ್ಲ ತಮ್ಮದೇ ಎಂದು ಹೇಳಿಕೊಂಡು ಪೀಕಲಾಟ ಮಾಡಿಕೊಂಡಿದ್ದು ಈ ಅಂಕಣದಲ್ಲಿ ದಾಖಲಾಗಿತ್ತು. ಹಾಗೆಲ್ಲ ಮಾಡಬಾರದೆಂದು ‘ಅಂತರರಾಷ್ಟ್ರೀಯ ಸಾಗರತಳ ಪ್ರಾಧಿಕಾರ’ವನ್ನು ರೂಪಿಸಲಾಗಿದೆ.

ಎಲ್ಲೇ ಏನನ್ನೇ ಶೋಧ ಮಾಡುವುದಾದರೂ ಮೊದಲು ಈ ಪ್ರಾಧಿಕಾರದ ಅನುಮತಿ ಪಡೆಯಬೇಕು. ಈಗಾಗಲೇ ಅತಿಯಾಗಿ ಸಮುದ್ರವನ್ನು ದೋಚಿದ್ದರಿಂದ ಮತ್ಸ್ಯ ಸಂಪತ್ತು ಬಹುವಾಗಿ ಕ್ಷೀಣಿಸಿದೆ. ಇನ್ನು ಹತ್ತು ವರ್ಷಗಳಲ್ಲಿ ಸಾಗರಗಳಲ್ಲಿ ಮೀನುಗಳಿಗಿಂತ ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತವೆ ಎಂಬ ಅಂದಾಜಿದೆ. ತೈಲಮಾಲಿನ್ಯ, ವಿಕಿರಣ ಮಾಲಿನ್ಯ, ರಸಗೊಬ್ಬರ ಮಾಲಿನ್ಯ ಮೆಕ್ಸಿಕೊ ಕೊಲ್ಲಿಯಲ್ಲಿ ಸಾವಿರಾರು ಕಿಲೊಮೀಟರ್ ದೂರದವರೆಗೆ ಪಸರಿಸಿದೆ. ಸಮುದ್ರವೆಂದರೆ ಮನುಷ್ಯನ ದೌರ್ಜನ್ಯದ ಪರಾಕಾಷ್ಠೆಯ ಕಣವಾಗಿದೆ.

ಪ್ರತಿವರ್ಷ ಹತ್ತಾರು ಲಕ್ಷ ಡಾಲ್ಫಿನ್‌ಗಳು, ಕಡಲಾಮೆಗಳು, ಸಾಗರಪಕ್ಷಿಗಳು ನಮ್ಮಿಂದಾಗಿ ಸಾವಪ್ಪುತ್ತಿವೆ. ಸಮುದ್ರವೆಂದರೆ ಇಡೀ ಮಾನವಕೋಟಿಯ ಕೊಳೆ ತುಂಬುವ ಕೊಟ್ಟಕೊನೆಯ ಪಾತ್ರೆಯಾಗಿದೆ. ನಾವು ಕಕ್ಕುವ ಕಾರ್ಬನ್ ಡೈಆಕ್ಸೈಡ್‌ನಿಂದಾಗಿ ಹವಳದ ದಿಬ್ಬಗಳೆಲ್ಲ ಬಿಳಿಚಿಕೊಂಡು ಸಾಯುತ್ತಿವೆ. ಇವನ್ನೆಲ್ಲ ಚರ್ಚಿಸಲೆಂದೇ ಎರಡು ವಾರಗಳ ಹಿಂದೆ ‘ವಿಶ್ವ ಸಾಗರ ದಿನ’ದ ಸಂದರ್ಭದಲ್ಲಿ ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಮೊದಲ ಬಾರಿಗೆ ವಿವಿಧ ದೇಶಗಳ 6000 ಪ್ರತಿನಿಧಿಗಳ ಸಾಗರ ಸಮ್ಮೇಳನ ನಡೆಯಿತು.

ಸಮುದ್ರ ಸಾಯುತ್ತಿದೆ, ನಮ್ಮ ಕಣ್ಣೆದುರೇ ಸಾಯುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದ ಅಧ್ಯಕ್ಷ ಪೀಟರ್ ಥಾಮ್ಸನ್ ಹೇಳಿದರು. ವಾರವಿಡೀ ನಡೆದ ಸಮ್ಮೇಳನದ ಕೊನೆಯಲ್ಲಿ ವಿವಿಧ ದೇಶಗಳು ಒಟ್ಟು 1300 ಆಶ್ವಾಸನೆಗಳನ್ನು ವಿಶ್ವಸಂಸ್ಥೆಗೆ ಕೊಟ್ಟವು. ಯಾವುದನ್ನೂ ನಡೆಸಿಕೊಡುವಂತೆ ಯಾರಿಗೂ ಯಾವ ಕಟ್ಟುಪಾಡುಗಳೂ ಇಲ್ಲವಲ್ಲ! ಅತ್ಯಂತ ಹೆಚ್ಚು ತಿಮಿಂಗಿಲಗಳನ್ನು ಕೊಲ್ಲುವ ಜಪಾನ್ ಹಾಗೂ ಅತ್ಯಂತ ವಿಶಾಲ ಸಮುದ್ರವನ್ನು ಆಕ್ರಮಿಸಿ ಕೂತ ಅಮೆರಿಕ ಎರಡೂ ಅಲ್ಲಿ ಬಾಯಿ ಬಿಡಲೇ ಇಲ್ಲ.

ಭಾರತದ ಪ್ರತಿನಿಧಿಗಳು ಅಲ್ಲಿಗೆ ಹೋಗಿ ಹದಿನೇಳು ಆಶ್ವಾಸನೆಗಳನ್ನು ಕೊಟ್ಟು ಬಂದಿದ್ದಾರೆ. ಆರ್ಕ್‌ಟಿಕ್ ಸಂಶೋಧನೆಗೆ ತುಸು ಧನ ಸಹಾಯ; ದ್ವೀಪರಾಷ್ಟ್ರಗಳಿಗೆ ಕೈಲಾದಷ್ಟು ತಾಂತ್ರಿಕ ಸಹಾಯ ಇವೆಲ್ಲ ಸರಿ. ಈಗಾಗಲೇ ಅವೆಲ್ಲ ಸಂದಾಯವಾಗುತ್ತಿವೆ. ನಮ್ಮ ಖ್ಯಾತ ‘ಸಾಗರಮಾಲಾ’ ಯೋಜನೆಯ ಪ್ರಕಾರ, ಕರಾವಳಿಯುದ್ದಕ್ಕೂ ಎರಡು ಸಾವಿರಕ್ಕೂ ಮಿಕ್ಕ ಮೀನುಗಾರರ ಸಂಘಟನೆಗಳಿಗೆ ಒಳ್ಳೆಯದಾಗಲೆಂದು 20 ಆಧುನಿಕ ಬಂದರುಗಳನ್ನು ನಿರ್ಮಿಸಬೇಕಿದೆ. ಆದರೆ ಈ ಎಲ್ಲ ನಿರ್ಮಾಣದಲ್ಲೂ ಚಿಕ್ಕ ಮೀನುಗಾರರ ಸಂಘಗಳನ್ನು ಹೊರಗಿಟ್ಟು ದೊಡ್ಡ ಕಂಪನಿಗಳಿಗೆ ಅವಕಾಶ ಕೊಡಲಾಗುತ್ತಿದೆ ಎಂದು ಸಂಘಗಳೇ ಪ್ರತಿರೋಧ ವ್ಯಕ್ತಪಡಿಸಿವೆ.

ಮೇಲಾಗಿ ದೇಶ ವಿದೇಶಗಳಿಂದ ಸಮುದ್ರವನ್ನು ಬಾಚಲೆಂದು ಬೃಹತ್ ಕಂಪನಿಗಳಿಗೆ ಗುತ್ತಿಗೆ ನೀಡುವ ಯೋಜನೆಗೂ ವಿರೋಧ ವ್ಯಕ್ತವಾಗುತ್ತಿದೆ. ‘ಅದು ಸಮುದ್ರಕ್ಕೂ ಒಳ್ಳೆಯದಲ್ಲ, ಮೀನುಗಾರರಿಗೂ ಒಳ್ಳೆಯದಲ್ಲ’ ಎನ್ನುತ್ತಾರೆ, ಕೇರಳದ ಫ್ರೆಂಡ್ಸ್ ಆಫ್ ಮರಿನ್ ಲೈಫ್ ಸಂಘಟನೆಯ ರಾಬರ್ಟ್ ಪಾಣಿಪಿಲ್ಲಾ.

ಜಪಾನ್ ಅಥವಾ ಚೀನಾ ದೇಶಗಳಲ್ಲಿ ಇಂಥ ಕಾಳಜಿಗಳಿಗೆ ಜಾಗವೇ ಇಲ್ಲವೇನೊ. ಜಪಾನ್‌ನಲ್ಲಿ ಚಿಕ್ಕ ಮೀನುಗಾರರೇ ಇಲ್ಲ. ಚೀನಾದಲ್ಲಿ ಅಂಥವರಿಗೆ ಧ್ವನಿಯೇ ಇಲ್ಲ. ಅಲ್ಲಿನ ಉದ್ಯಮಿಗಳ ಗಮನವೆಲ್ಲ ನೀರಿನ ತಳದಲ್ಲಿರುವ ಹಿಮದಗ್ನಿಯ ಕಡೆಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನೀಯರು ಕ್ಲಾಥ್ರೇಟ್‌ಗಳನ್ನು ಎತ್ತಿ ಜೈ ಎನ್ನುತ್ತಿದ್ದ ಹಾಗೇ ಜಪಾನೀಯರು ತಮ್ಮ ಶೀಮಾ ದ್ವೀಪಕಲ್ಪದಲ್ಲಿ ಆಳ ಸಮುದ್ರದಿಂದ ಅಂಥದ್ದೇ ಬೆಂಕಿಯುಂಡೆಗಳನ್ನು ಮೇಲಕ್ಕೆತ್ತಿ ಜಗತ್ತಿಗೆ ತೋರಿಸಿದರು.

ಮುಂದಿನ 800 ವರ್ಷಗಳ ವರೆಗೆ ಜಗತ್ತಿಗೆ ಬೇಕಿದ್ದ ಎಲ್ಲ ಶಕ್ತಿಯನ್ನೂ ಪೂರೈಸುವಷ್ಟು ಕ್ಲಾಥ್ರೇಟ್ ಉಂಡೆಗಳು ಸಮುದ್ರ ತಳದಲ್ಲಿವೆ ಎಂದು ಹೇಳಲಾಗುತ್ತಿದೆ. ಆದರೆ ಅಂಥ ಮೀಥೇನ್ ಹಿಮದುಂಡೆಗಳನ್ನು ಎತ್ತಲು ಹೋದರೆ ಅರ್ಧಕ್ಕಿಂತ ಹೆಚ್ಚು ಭಾಗ ವಾಯುಮಂಡಲಕ್ಕೆ ಸೋರಿ ಹೋಗುತ್ತದೆ.

ವಾತಾವರಣವನ್ನು ಬಿಸಿ ಮಾಡುವಲ್ಲಿ ಕಾರ್ಬನ್ ಡೈಆಕ್ಸೈಡ್‌ಗಿಂತ ಮೀಥೇನ್ ಇಪ್ಪತ್ತು ಪಟ್ಟು ಹೆಚ್ಚು ಉಗ್ರವೆಂಬುದು ಎಂದೋ ಸಾಬೀತಾಗಿದೆ. ಆದರೆ ಎಲ್ಲರ ಕಣ್ಣೂ ಸಮುದ್ರತಳದ ಕಡೆ ಇರುವಾಗ ಆಕಾಶ ನೋಡಲು ಪುರುಸೊತ್ತು ಯಾರಿಗಿದೆ? ನಾವೇ ನೋಡಬೇಕು! ಮೋದಿಯವರ ಅಮೆರಿಕ ಭೇಟಿಯ ಫಲಶ್ರುತಿಯಾಗಿ ನಮ್ಮ ಕರಾವಳಿಗೆ 22 ಡ್ರೋನ್‌ಗಳು ಬರಲಿವೆ.