‘ಸ್ವರ್ಗಕ್ಕೆ ಮೂರೇ ಮೈಲಿ’ -ಜೆರೆಮಿ ಸೀಬ್ರೂಕ್ ಕೃತಿಗೆ ಬೆನ್ನುಡಿ

[ಚಿಂತಕ ಜೆರೆಮಿ ಸೀಬ್ರೂಕ್ ಅವರ ಆಯ್ದ ಬರಹಗಳನ್ನು ಕವಯಿತ್ರಿ ರೋಸಿ ಡಿಸೋಜ ಹಾಗು ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರು ಅನುವಾದಿಸಿ, ಸಂಪಾದಿಸಿದ್ದಾರೆ. ‘ಸ್ವರ್ಗಕ್ಕೆ ಮೂರೇ ಮೈಲಿ’ ಎಂಬ ಈ ಕೃತಿಯ ಬರಹಗಳು ಅಭಿವೃದ್ಧಿಯ ಆಗುಹೋಗು, ಜಾಗತೀಕರಣದ ಆಳ -ಹರಿವು, ಮನುಷ್ಯನ ಆಶೆ-ಹತಾಶೆಗಳ ಕುರಿತು ಚಿಂತಿಸುತ್ತದೆ. ಈ ಪುಸ್ತಕವನ್ನು ಅಹರ್ನಿಶಿ ಪ್ರಕಾಶನವು ಹೊರತರುತ್ತಿದ್ದು, ದೇವನೂರ ಮಹಾದೇವ ಅವರು ತಮ್ಮ ನೆಚ್ಚಿನ ಚಿಂತಕನ ಕೃತಿಗೆ ಪುಟ್ಟ ಬೆನ್ನುಡಿ ಬರೆದಿದ್ದಾರೆ. ಅದು ಇಲ್ಲಿದೆ.]

sugata book

ಅಂತಃಕರಣವೇ ಮನುಷ್ಯನ ರೂಪ ಪಡೆದು ಅದು ತಿರುಗುವ ಭೂಮಿಯು ಕಣ್ಣಿಗೆ ಕಾಣುವ ಸ್ಥಳದಲ್ಲಿ ನಿಂತು ವೇಗವಾಗಿ ಚಲಿಸುತ್ತಿರುವ ಈ ಭೂಮಿ ಮೇಲೆ ಅಷ್ಟೇ ವೇಗವಾಗಿ ಜರುಗುತ್ತಿರುವ ಈ ಕಾಲಮಾನದ ಮನುಷ್ಯನ ದುರಾಸೆಗಳಿಗೆ ಸಿಕ್ಕಿ ತತ್ತರಿಸುತ್ತಾ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡುತ್ತಿರುವ ಕಾಲಗತಿ ಮತ್ತು ಪ್ರಪಂಚ ವ್ಯಾಪಾರಗಳನ್ನು ಕಣ್ಣಿಗೆ ಕಟ್ಟುವಂತೆ ಕಾಣಿಸುತ್ತವೆ, ಇಲ್ಲಿನ ಜೆರೆಮಿ ಸೀಬ್ರೂಕ್ ಅವರ ಬರಹಗಳು.

ಜೊತೆಗೆ ಜೆರೆಮಿ ಸೀಬ್ರೂಕ್ ಅವರು ಯಾವ ಪ್ರದೇಶದ ಬಗ್ಗೆ ಬರೆಯುತ್ತಾರೋ ಅದು ಭಾರತ ಇರಬಹುದು, ಬಾಂಗ್ಲಾ ಇರಬಹುದು ಅಥವಾ ಇನ್ನೆಲ್ಲಿಯದೋ ಆಗಿರಬಹುದು. ಅಲ್ಲಿನವರಾಗಿ ಅಲ್ಲಿಯೇ ಹುಟ್ಟಿ ಬೆಳೆದವರು ಎಂಬಂತೆ ಆ ಕಷ್ಟಸುಖಗಳ ಸ್ಪರ್ಶಕ್ಕೆ ಅಕ್ಷರಗಳ ರೂಪ ಕೊಡುತ್ತಾರೆ.

ಮನುಷ್ಯನ ಸ್ವಾವಲಂಬನೆ, ಘನತೆ, ಸಮಾನತೆಗಳ ಹೃದಯ ಬಡಿತದಂತೆ ಇರುವ ಈ ಪುಟ್ಟ ಪುಟ್ಟ ಲೇಖನಗಳ ಪುಸ್ತಿಕೆಯು ನಮ್ಮೊಡನೆ ಇದ್ದರೆ ನಾವೊಂದು ಒಳಗಣ್ಣು ಪಡೆದಂತೆ.