`ಸೂಲಾಡಿ ಬಂದೋ ತಿರುತಿರುಗೀ’-ಪ್ರೊ.ಕೆ.ಸುಮಿತ್ರಾಬಾಯಿ

[2018ರಲ್ಲಿ ಅಭಿರುಚಿ ಪ್ರಕಾಶನದಿಂದ ಮುದ್ರಣಗೊಂಡಿರುವ, ಪ್ರೊ.ಕೆ.ಸುಮಿತ್ರಾಬಾಯಿ ಅವರ  `ಸೂಲಾಡಿ ಬಂದೋ ತಿರುತಿರುಗೀ’- ಬಾಳ ಕಥನದ ಒಂದು ಭಾಗ…17.6.2018ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಯಲ್ಲಿ ಪ್ರಕಟವಾಗಿದೆ. ಅದು ನಮ್ಮ ಬನವಾಸಿಯ ಓದುಗರಿಗಾಗಿ ….]

 

ನಮ್ಮ ಮೈಸೂರು ಸಂಸ್ಥಾನದ ಅರಸರು ಲಲಿತ ಕಲೆಗಳನ್ನು ಉಳಿಸಿ ಬೆಳೆಸುವ ಮಹಾಪೋಷಕರಾಗಿದ್ದರು. ಈ ಪರಂಪರೆಯ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಜನಸಾಮಾನ್ಯರ ಮಕ್ಕಳಿಗೂ ಲಲಿತಕಲೆಗಳ ಕಲಿಕೆ ಸಾಧ್ಯವಾಗಲಿ ಎಂಬ ಉದ್ದೇಶದಿಂದ ಅಂದಿನ ಕುಲಪತಿ ಡಾ.ಶ್ರೀಮಾಲಿಯವರ ಕಾಲದಲ್ಲಿ ಸಂಗೀತ ಮತ್ತು ನೃತ್ಯ ಕಾಲೇಜು ಮೈಸೂರಿನ ಆಕಾಶವಾಣಿ ಕಟ್ಟಡದಲ್ಲಿ 1965ರಲ್ಲಿ ಪ್ರಾರಂಭಗೊಂಡು, ಆನಂತರ ಮಾನಸಗಂಗೋತ್ರಿಯಲ್ಲಿ ಸಂಗೀತ ನೃತ್ಯಕ್ಕೆ ಹೇಳಿಮಾಡಿಸಿದಂತೆ ಕಟ್ಟಡವನ್ನು ನಿರ್ಮಿಸಿ 1971-72ರಲ್ಲಿ ಸ್ಥಳಾಂತರಿಸಲಾಯಿತು. ಆದರೆ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ… ಬಿಳಿ ಆನೆ ಸಾಕಿದಂತೆ… ಇರೋ ಮೂರು ಮತ್ತೊಂದು ವಿದ್ಯಾರ್ಥಿಗಳಿಗೆ ಅಷ್ಟೊಂದು ಜನ ಅಧ್ಯಾಪಕರಿದ್ದಾರೆ, ಅಷ್ಟು ದೊಡ್ಡಕಟ್ಟಡವಿದೆ… ಸುಮ್ಮಸುಮ್ಮನೆ ಆರ್ಥಿಕ ಹೊರೆ ಎಂಬ ದೂರು ಕೂಡ ಇತ್ತು. ಸೆನೆಟ್ ಮತ್ತು ಸಿಂಡಿಕೇಟ್‍ಗಳಲ್ಲೂ ಚರ್ಚೆಗೆ ಒಳಗಾಗಿ ಸಂಗೀತ, ನೃತ್ಯ, ನಾಟಕ ಮತ್ತು ಗಮಕ ಕಲೆಗಳ ಜತೆ ಕೆಲ ಮಾನವಿಕ ವಿಷಯಗಳನ್ನು ಬೋಧಿಸಲು ಅವಕಾಶ ಕಲ್ಪಿಸಿಕೊಡಲಾಯಿತು. ಈಗ ಇದಕ್ಕೆ ಲಲಿತ ಕಲೆಗಳ ಕಾಲೇಜು ಎಂದು ಮರು ನಾಮಕರಣವಾಗಿದೆ.

ಮಹಾರಾಜ, ಯುವರಾಜ, ಸಂಜೆ ಕಾಲೇಜು, ದೈಹಿಕ ಶಿಕ್ಷಣದ ಕಾಲೇಜು ಮತ್ತು ಲಲಿತಕಲೆಗಳ ಕಾಲೇಜು- ಇವು ಒಂದರಂತೆ ಇನ್ನೊಂದಿಲ್ಲ. ನನ್ನ ಪ್ರಕಾರ ಇವುಗಳನ್ನು ಪರಸ್ಪರ ಹೋಲಿಸುವುದೇ ಸರಿಯಲ್ಲ. ಮಾನವಿಕ ವಿಷಯಗಳಲ್ಲಿ- ಒಂದು ತರಗತಿಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುತ್ತಾರೆ. ವಿಜ್ಞಾನ ತರಗತಿಯಲ್ಲಿ 60ರೊಳಗೆ ಸೀಮಿತ. ಆದರೆ ಸಂಗೀತ/ ಭರತನಾಟ್ಯದ ತರಗತಿಯಲ್ಲಿ 5ರಿಂದ 10 ಜನ ವಿದ್ಯಾರ್ಥಿಗಳಿಗೆ ಮಾತ್ರ ಕಲಿಸಲು ಸಾಧ್ಯ. ಇದರ ವಿಶೇಷತೆಯನ್ನು ಅರ್ಥ ಮಾಡಿಕೊಳ್ಳದೆ ಅಪಹಾಸ್ಯಕ್ಕೆ ಈ ಕಾಲೇಜು ಒಳಗಾಗಿತ್ತು.

ಇಂಥ ಕಾಲೇಜಿಗೆ 1998ರಲ್ಲಿ ನನ್ನನ್ನು ಪ್ರಾಂಶುಪಾಲಳನ್ನಾಗಿ ವಿಶ್ವವಿದ್ಯಾನಿಲಯ ನೇಮಿಸಿ ಬಿಟ್ಟಿತು! ಈ ಸುದ್ದಿ ತಿಳಿದಾಕ್ಷಣ ನನಗೆ ಏನೇನು ನೆನಪಾಯ್ತು ಗೊತ್ತೆ? ನಾನು ಮಿಡಲ್‍ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಗ ನಾನು ಕೂಡ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸೇರಿದ್ದೆ. ಸುಮಾರು ಆರೇಳು ವರ್ಷಗಳ ಕಾಲ ರಂಗಸ್ವಾಮಿ ಅಯ್ಯಂಗಾರರು ಮತ್ತು ಸತ್ಯಲಕ್ಷ್ಮಿ ಟೀಚರ್ ಬಳಿ ಕಲಿತು ಜೂನಿಯರ್ ಪರೀಕ್ಷೆ ಪಾಸು ಮಾಡಿದ್ದೆ. ನಮ್ಮ ಮನೆಯು ಸದಾ ಮಕ್ಕಳು ಮರಿಗಳಿಂದ ತುಂಬಿರುತ್ತಿತ್ತು. ಏಕಾಂತವಾಗಿ ಕುಳಿತು ಅಭ್ಯಾಸ ಮಾಡಲು ಸಾಧ್ಯವಿರಲಿಲ್ಲ. ತುಂಟ ತಮ್ಮಂದಿರ ಕೀಟಲೆಗೆ ಹೆದರಿ ದೇವರಕೋಣೆಯ ಬಾಗಿಲನ್ನು ಭದ್ರಪಡಿಸಿ ಹಾಡಲು ಶುರು ಮಾಡುತ್ತಿದ್ದೆ. ಅದೆಲ್ಲಿರುತ್ತಿದ್ದರೋ ಆ ಕೀಟಲೆ ಸುಬ್ಬರು ಬಾಗಿಲನ್ನು ದಭದಭನೆ ಬಡಿಯುತ್ತಾ, ಬಾಗಿಲ ಸಂದಿಯಿಂದ ದನಿ ಎತ್ತರಿಸಿ ಸಸರಿರೀ… ಗಗಗಗಾಗೀ…. ಗೂಗ್ಗೂ… ನಿಮ್ಮಪ್ಪದಪ್ಪ… ನಮ್ಮಪ್ಪದಪ್ಪ ಎಂದು ಜೋರು ದನಿಯಲ್ಲಿ ಒಟ್ಟಿಗೆ ಕೂಗುತ್ತಿದ್ದರು. ಇದು ನೆನಪಾಗಿ ನಗು ಬಂತು.

ಈ ನಗುವಿನೊಡನೆ ವಿ.ವಿ.ಯ ಕುಲಸಚಿವರಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಸೀದಾ ಕಾಲೇಜಿನ ಒಳಗೆ ಪ್ರವೇಶಿಸಿದೆ. ಉದ್ದಕ್ಕೂ ಕಾರಿಡಾರ್ ಮೇಲೆ ಹೆಜ್ಜೆ ಇಡುತ್ತಾ, ಥಿಯೇಟರ್ ಬಳಿ ಸಾರಿ ಮುಂದುವರಿದು ಮತ್ತೆ ಒಳಾಂಗಣದ ಬಳಿ ಬಂದೆನು. ವಿದ್ಯಾರ್ಥಿನಿಯರು ಅಕ್ಕಕ್ಕಲಾಗಿ ಅಲ್ಲೊಬ್ಬಳು, ಇಲ್ಲೊಂದಿಬ್ಬರು ನಿಂತು- ಕೂತು ಓಡಾಡುವುದನ್ನು ಕಂಡು ಪೆಚ್ಚಾಯಿತು. ನಾಟ್ಯ ವಿಶಾರದೆ ಪ್ರೊ.ವೆಂಕಟಲಕ್ಷ್ಮಮ್ಮ, ಪ್ರೊ.ಸಿಂಧುವಳ್ಳಿ ಅನಂತಮೂರ್ತಿ, ಪ್ರೊ.ರಾಮರತ್ನಂ ಮುಂತಾದ ದಿಗ್ಗಜರ ಕಾಲದಲ್ಲಿದ್ದ ವಿದ್ಯಾರ್ಥಿಗಳ ಕಲರವದ ವಾತಾವರಣ ಕಾಣಲಿಲ್ಲ. ಆಗ ಥಟ್ಟನೆ, ಇಲ್ಲಿಗೆ ಪ್ರಾಂಶುಪಾಲರಾಗಿ ಬರಲು ನಿರಾಕರಿಸಿ ತಾನು ಮಹಾರಾಜ ಕಾಲೇಜಿನಲ್ಲೇ ನಿವೃತ್ತಿಯನ್ನು ಪಡೆಯುತ್ತೇನೆಂದು ಪ್ರಾಧ್ಯಾಪಕರೊಬ್ಬರು ವಿಶ್ವವಿದ್ಯಾನಿಲಯಕ್ಕೆ ಉತ್ತರಿಸಿದ್ದ ಕಾರಣ ತಿಳಿದು ಹೋಯಿತು. ಸ್ನೇಹಿತರ ಮಾತು ಕೇಳಿ ಇಲ್ಲಿಗೆ ಬಂದು ತಪ್ಪು ಮಾಡಿದೆನೆಂದೆನಿಸಿತು. ಪ್ರಾಂಶುಪಾಲರ ಕೊಠಡಿಯೂ ಸುಣ್ಣ ಬಣ್ಣ ಕಾಣದೆ ಇತ್ತು. ಸೀಮೆಎಣ್ಣೆ ದೀಪದಲ್ಲಿ ಎಣ್ಣೆ ಮುಗಿದಾಗ ಇನ್ನೇನು ಬೆಳಕು ಆರಿ ಹೋಗುವ ಸೂಚನೆಯಾಗಿ ದೀಪವು ಕವುರುತ್ತಿದ್ದಂತೆ ಪ್ರಾಂಶುಪಾಲರ ಕುರ್ಚಿ ಬಹಳ ಮಂಕಾಗಿ ಕಂಡಿತು. ದಿನನಿತ್ಯ ಮಹಾರಾಜ ಕಾಲೇಜಿನ ಬೋಧನೆ, ಸ್ನೇಹಿತರ ಮತ್ತು ವಿದ್ಯಾರ್ಥಿಗಳ ಒಡನಾಟಗಳು ಮನಸ್ಸನ್ನು ಮುತ್ತಿಕೊಳ್ಳುತ್ತಿದ್ದವು. ಒಂದು ರೀತಿಯHomesicknessಗೆ ಒಳಗಾದಂತಾದೆನು.

 

ಹೀಗೆ ಒಂದು ತಿಂಗಳು ಕಳೆಯುವಷ್ಟರಲ್ಲಿ ವಾಪಸ್ ಪ್ರೊಫೆಸರ್ ಹುದ್ದೆಗೆ ಮಹಾರಾಜಕ್ಕೇನೆ ಹೋಗಬೇಕೆಂಬ ನನ್ನ ಮನವಿಗೆ ಕುಲಪತಿ ಎಸ್.ಎನ್.ಹೆಗ್ಡೆಯವರು Fine Arts college Principal need n’t be a dancer ಎಂದು ತಮ್ಮ ಕೈಗಳನ್ನು ಯಕ್ಷಗಾನದ ಶೈಲಿಯಲ್ಲಿ ತಿರುಗಿಸುತ್ತಾ ಉತ್ತರಿಸಿದರು. ಎರಡನೆಯ ಸಲ ಇದೇ ವಿಷಯವನ್ನು ಪ್ರಸ್ತಾಪಿಸಿದಾಗ, ಹೀಗೆ ಪದೇ ಪದೇ ಬಂದು ಕೇಳುವುದು ಬೇಡ, ನಿಮ್ಮ ಮಾತು ನನ್ನ ಮಂಡೆಯಲ್ಲುಂಟು ಎಂದು ಗಡುಸು ದನಿಯಲ್ಲಿ ಹೇಳಿ ಸಾಗ ಹಾಕಿದರು. ಇನ್ಮುಂದೆ ಈ ಬಗ್ಗೆ ಚಿಂತಿಸಿ ಫಲವಿಲ್ಲವೆಂದರಿತು ಕಾಲೇಜಿನ ಅಭಿವೃದ್ಧಿಯ ಕಡೆ ಗಮನ ಹರಿಸಲುತೊಡಗಿದೆ.

ಲಲಿತಕಲಾ ಕಾಲೇಜಿನ ಬಗ್ಗೆ ಹೊರಜಗತ್ತಿಗೆ ತಿಳಿದಿರುವುದು ತುಂಬಾ ಕಡಿಮೆ. ಅಧ್ಯಾಪಕರು/ವಿದ್ಯಾರ್ಥಿಗಳು ದ್ವೀಪವಾಸಿಗಳಂತೆ ತಮ್ಮಷ್ಟಕ್ಕೆ ಇದ್ದರು. ಯೂನಿವರ್ಸಿಟಿ, ಕಾನೂನು ಕಟ್ಟಳೆಗಳೆಂದರೆ ಇವರು ಮೈಲು ದೂರ. ಕಾಲೇಜಿನ ಆಡಳಿತದವರಿಗೆ ಮಾತ್ರ ಹೊರಜಗತ್ತಿನ ಪರಿವೆ ಎಂಬಂತಿತ್ತು. ಇಲ್ಲಿನ ಬೆರಳೆಣಿಕೆಯಲ್ಲಿದ್ದ ವಿದ್ಯಾರ್ಥಿಗಳನ್ನು ಸಂಭಾಳಿಸಬಹುದಿತ್ತು. ಆದರೆ, 14-15ರಷ್ಟಿದ್ದ ಅಧ್ಯಾಪಕರದ್ದು, ಅವರವರದೇ ಪ್ರಪಂಚ! ಇವರಲ್ಲಿ ಪರಸ್ಪರ ಸ್ನೇಹ-ಸೌಹಾರ್ದತೆಗಳು ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ. ಒಬ್ಬರು ಇನ್ನೊಬ್ಬರ ಮೇಲೆ ದೂರು ಹೇಳುವುದೇ ಪಠ್ಯವಾಗಿತ್ತು. ಯಾವಾಗ ಯಾರು ಯಾರ ಜೊತೆ ಕೈ ಜೋಡಿಸುತ್ತಾರೆ ಎಂಬುದೂ ತಿಳಿಯುತ್ತಿರಲಿಲ್ಲ. ಜತೆಗೆ ನನ್ನ ಹೆಸರು ಸ್ಮಾರ್ಥರು ಮತ್ತು ಮಾಧ್ವರಿಗೆ ಗೊಂದಲ ಉಂಟು ಮಾಡಿರುವಂತೆ ಕಂಡಿತು. ಸನಾತನಿಗಳು ಎಷ್ಟೇ ಉನ್ನತ ಶಿಕ್ಷಣ ಪಡೆದವರಾಗಿದ್ದರೂ ಜಾತಿಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದರು.

ಒಟ್ಟಾರೆಯಾಗಿ ಅಧ್ಯಾಪಕರು ಮತ್ತು ಆಡಳಿತ ವರ್ಗದವರ ಜಾತಿ ಭಾವನೆಗಳು ಲಲಿತ ಕಲೆಗಳ ಕಾಲೇಜಿನಲ್ಲಿ ನಾಟ್ಯವಾಡುತ್ತಿದ್ದವು. ಮೇಜರ್ ಸಮೂಹದ್ದೊಂದು ಲೈನ್, ಮಧ್ಯಮದವರದ್ದೊಂದು, ಎರಡೂ ಕಡೆ  ತಲೆ ಆಡಿಸುವವರದ್ದು ಇನ್ನೊಂದು, ಹಾಗೇ ಕಾಲಕ್ಕೆ ತಕ್ಕಂತೆ ಬಾಲಂಗೋಸಿಗಳಂತೆ ಆ ಮೂರೂ ಸಮೂಹಗಳನ್ನಿಡಿದುಕೊಂಡು ಓಲಾಡುವವರ ಪಾಡು ಮತ್ತೊಂದು! ಇವೆಲ್ಲಾ ಸೇರಿ ನನ್ನ ಸೆಕ್ಯೂಲರ್ ನಂಬಿಕೆಗಳನ್ನೇ ಅಲ್ಲಾಡಿಸಿಬಿಟ್ಟವು. ಆದರೆ ಈ ಕಾಲೇಜಿನ ವಿಶೇಷವೆಂದರೆ ಎಲ್ಲ ಅಧ್ಯಾಪಕರೂ ವಿದ್ವಾಂಸರಾಗಿದ್ದರು. ಯುಜಿಸಿ ನಿರೀಕ್ಷಿಸುವ ಪಿಹೆಚ್.ಡಿ, ಗ್ರಂಥರಚನೆ ಮುಂತಾದ ಅರ್ಹತೆಗಳು ತುಸು ಹೆಚ್ಚಾಗೇ ಇತ್ತು. ಪ್ರೊ.ವೆಂಕಟಲಕ್ಷ್ಮಮ್ಮ, ಪ್ರೊ.ರಾಮರತ್ನಂ, ಸಿಂಧುವಳ್ಳಿ ಅನಂತಮೂರ್ತಿಯವರಿಂದ ಹಿಡಿದು ಇಂದಿನ ತನಕ ಅನೇಕ ವಿದ್ವಾಂಸರನ್ನೊಳಗೊಂಡಿರುವ ಈ ವಿದ್ಯಾಸಂಸ್ಥೆ ವಿದ್ಯಾರ್ಹತೆಯಲ್ಲಿ ಎಲ್ಲಾ ಕಾಲೇಜಿಗಿಂತ ಹೆಚ್ಚೇ ಇತ್ತು ಅನ್ನಬಹುದು.

ಅಂತೂ ಅನಿವಾರ್ಯವಾಗಿ ನನ್ನ ಆಡಳಿತಾತ್ಮಕಯಾನ ಪ್ರಾರಂಭಿಸಿದೆ. ಪುಣ್ಯಕ್ಕೆ ನಾರಾಯಣಸ್ವಾಮಿಯವರು ಸೂಪರಿಂಟೆಂಡೆಂಟ್ ಆಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಬೆರಳ ತುದಿಯಲ್ಲಿ ವಿ.ವಿ.ಯ ಮತ್ತು ಕೆ.ಸಿ.ಎಸ್.ಆರ್.ನ ಕಾನೂನುಗಳು ನೆಲೆಸಿದ್ದವು. ಆದ ಕಾರಣ ಕಾಲೇಜಿನ ಆಡಳಿತ ಸುಸೂತ್ರವಾಗಿ ನಡೆಯುತ್ತಿತ್ತು. ಒಂದೊಂದಾಗಿ ಆಡಳಿತದ ಬಗ್ಗೆ ಇರುವ ಕಾನೂನು ಕಟ್ಟಳೆಗಳನ್ನು ನಾನೂ ತಿಳಿದುಕೊಳ್ಳತೊಡಗಿದೆ. ಕೆ.ಸಿ.ಎಸ್.ಆರ್. ರೂಲ್ಸ್ ಪುಸ್ತಕವನ್ನು ನಿಧಾನಕ್ಕೆ ಓದಿ ಮನನ ಮಾಡಿಕೊಳ್ಳತೊಡಗಿದೆ. ಅಧೀಕ್ಷಕರು ನನಗೆ ಸರ್ವರೀತಿಯಲ್ಲೂ ಒತ್ತಾಸೆಯಾಗಿದ್ದರು. ಜತೆಗೆ ಪುಟ್ಟಸ್ವಾಮಿಗೌಡರು ಸೀನಿಯರ್ ಅಸಿಸ್ಟೆಂಟ್ ಆಗಿ ಕಾಲೇಜಿಗೆ ಬಂದರು. ಇವರು ಕನ್ನಡ ಎಂ.ಎ. ಓದಿ, ಬೆಂಗಳೂರಿನ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು, ಮೈ.ವಿ.ವಿ.ಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿದ್ದ ವಿಜಯಲಕ್ಷ್ಮಿಯವರನ್ನು ವಿವಾಹವಾದ ಕಾರಣ ಅಧ್ಯಾಪನ ವೃತ್ತಿಯನ್ನು ಬಿಟ್ಟು ಪ್ರ.ದ.ಗುಮಾಸ್ತರಾಗಿ ನಮ್ಮಲ್ಲಿಗೆ ಬಂದರು. ಪುಟ್ಟಸ್ವಾಮಿಗೌಡರು ಹೃದಯವಂತಿಕೆಯುಳ್ಳ ವ್ಯಕ್ತಿ. ಇವರನ್ನು ನೋಡಿದರೆ ಗತಿಸಿದ ನನ್ನ ತಮ್ಮನ ನೆನಪಾಗುತ್ತಿತ್ತು.
ವಿಶ್ವವಿದ್ಯಾನಿಲಯಕ್ಕೆ ಬರೆಯಬೇಕಾದ ಪತ್ರಗಳನ್ನು ಇವರು ಸುಂದರವಾಗಿ ಅಚ್ಚ ಕನ್ನಡದಲ್ಲಿ ಬರೆಯುತ್ತಿದ್ದರು. ಇವರ ಬರವಣಿಗೆ ಮಾದರಿ ಎಂಬಂತೆ ಇರುತ್ತಿತ್ತು. ಇವರು ಸಿದ್ಧಪಡಿಸುತ್ತಿದ್ದ ಪತ್ರಗಳನ್ನು ಓದದೇ ರುಜು ಮಾಡಬಹುದಿತ್ತು. ಈ ಬಗ್ಗೆ ನಿಮ್ಮ ಕನ್ನಡ ಬರವಣಿಗೆ ಇಷ್ಟು ಕ್ರಮಬದ್ಧವಾಗಿರಲು ಏನು ಕಾರಣ ಸಾರ್ ಎಂದು ಕೇಳಿದಾಗ ತಮ್ಮ ಓದು… ವಿವಾಹ… ಮುಂತಾಗಿ ಮಾತಾಡಿದ ಮೇಲೆ ಕಚೇರಿ ಪತ್ರಗಳು ಹೇಗಿರಬೇಕೆಂಬುದನ್ನು ಬಹು ಸರಳವಾಗಿ ತಿಳಿಸಿಕೊಟ್ಟರು. ಅಧೀಕ್ಷಕರಾಗಿದ್ದ ನಾರಾಯಣಸ್ವಾಮಿಯವರ ವರ್ಗಾವಣೆಯಾದ ನಂತರ ನಮ್ಮ ಕಾಲೇಜಿಗೆ ಸೀನಿಯರ್ ಅಸಿಸ್ಟೆಂಟ್ ಆಗಿ ನಾಗಪ್ಪನವರು ಬಂದರು. ಇವರು ಖಡಕ್ ಮನುಷ್ಯ. ಹೆಸರಿಗೆ ತಕ್ಕಂತೆ ತನ್ನ ತಂಟೆಗೆ ಬಂದವರನ್ನು ಬುಸುಗುಡುತ್ತಾ ಬಡಿದು ಹಾಕುತ್ತಿದ್ದರು. ವಿ.ವಿ.ಗೆ ಕಳುಹಿಸುವ ಪತ್ರಗಳು ಮರುಪ್ರಶ್ನೆಗೆ ಈಡಾಗದಂತೆ ಹೇಗೆ ಎಚ್ಚರ ವಹಿಸಬೇಕೆಂಬುದನ್ನು ಸೂಕ್ಷ್ಮವಾಗಿ ನನಗೆ ತಿಳಿಸಿಕೊಟ್ಟರು. ಆಡಳಿತ ನಿರ್ವಹಣೆಯ ವಿಷಯದಲ್ಲಿ ಈ ಮೂವರೂ ನನಗೆ ಗುರುಗಳಂತಾಗಿಬಿಟ್ಟರು.

ನಾನು ಈ ಕಾಲೇಜಿನ ಪ್ರಾಂಶುಪಾಲಳಾಗಿ ಬಂದ ನಂತರ, ಕಾಲೇಜಿನಲ್ಲಿ ಅಪರೂಪದ ರಾಗಗಳ ಬಗ್ಗೆ ಪ್ರಖ್ಯಾತ ಸಂಗೀತಗಾರರಿಂದ ಕಾರ್ಯಾಗಾರಗಳನ್ನು ಏರ್ಪಡಿಸಿದೆ. ಅವು ತುಂಬಾ ಯಶಸ್ವಿಯಾದವು. ಇದನ್ನೆಲ್ಲಾ ಗಮನಿಸಿ ಶ್ರೀ ಜಯಚಾಮರಾಜ ಒಡೆಯರ್‍ಅವರ ಕಾರ್ಯದರ್ಶಿಯಾಗಿದ್ದ ದಿ|| ಶ್ರೀ ನಾರಾಯಣಸ್ವಾಮಿಯವರು ಶ್ರೀ ಜಯಚಾಮರಾಜ ಒಡೆಯರ್ ದತ್ತಿಗೆ 5 ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದರು. ತೆರೆಮರೆಯ ಕುತಂತ್ರಗಳೂ ಯಥೇಚ್ಛವಾಗೇ ಇದ್ದವು. 2.2.2000ರಲ್ಲಿ ಜರುಗಿದ ಶ್ರೀ ಜಯಚಾಮರಾಜ ಒಡೆಯರ್ ಸ್ಮರಣಾರ್ಥ ಕಾರ್ಯಕ್ರಮದ ವಿವರ ನೀಡಿದರೆ ಈ ಕಾಲೇಜಿನ ಮರ್ಮ ಅರ್ಥವಾಗುತ್ತದೆ. ಮೊದಲಿಗೆ ವಿದ್ವಾನ್ ಆರ್.ಕೆ.ಪದ್ಮನಾಭ ಮತ್ತು ಡಿ.ವಿ.ನಾಗರಾಜ್‍ರ ದ್ವಂದ್ವ ಗಾಯನವು ಯಶಸ್ವಿಯಾಗಿ ನಡೆಯಿತು. ಯಾವುದೇ ಕೊರತೆ ಕಾಣಲಿಲ್ಲ. ಗಾಯಕರು ಕಾರ್ಯಕ್ರಮಕ್ಕೆ ಆಗಮಿಸಿದಾಗ ಕಾಲೇಜಿನ ವಿದ್ವಾಂಸರು ಓಡೋಡಿ ಹೋಗಿ ಅವರುಗಳನ್ನು ಸಂತೋಷದಿಂದ ಹಸ್ತಲಾಘವ ನೀಡಿ ಗೌರವದಿಂದ ಕೊಠಡಿಯೊಂದಕ್ಕೆ ಕರೆದೊಯ್ದು ಉಪಚರಿಸಿದರು. ಅವರು ಶ್ರುತಿ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರು. ಮಾನಿಟರ್ಸ್ ಮತ್ತು ಮೈಕ್‍ಗಳೆಲ್ಲವೂ ಸುಸ್ಥಿತಿಯಲ್ಲಿದ್ದವು. ನನಗಿದು ಮೊದಲ ದೊಡ್ಡ ಕಾರ್ಯಕ್ರಮವಾಗಿದ್ದ ಕಾರಣ, ಸದ್ಯ ಎಲ್ಲವೂ ಸಾಂಗವಾಗಿ ನೆರವೇರಿತೆಂದು ಸಂತಸಪಟ್ಟೆನು.

ಮರುದಿನ ವಿದ್ವಾನ್ ಸುದರ್ಶನ್ ಮತ್ತು ವಿದ್ವಾನ್ ರವಿಶಂಕರ್‍ರವರ ದ್ವಂದ್ವ ಮೃದಂಗ ಲಯ ವಿನ್ಯಾಸ ಕಾರ್ಯಕ್ರಮಕ್ಕೆ ಅನೇಕ ತೊಡಕುಗಳು ಎದುರಾಗಲು ಪ್ರಾರಂಭವಾದವು. ಈ ಕಲಾವಿದರನ್ನು ಕರೆತರುವ ಜವಾಬ್ದಾರಿ ಹೊತ್ತವರು ಅದೇ ಕಾರನ್ನು ಗ್ಯಾಸ್ ದೀಪ ತರಲೆಂದು ತೆಗೆದುಕೊಂಡು ಹೋದರಂತೆ. ವೇಳೆ ಮೀರುತ್ತಿತ್ತು. ಕಾರ್ಯಕ್ರಮ ನಡೆಯದಿದ್ದರೆ ಏನ್ ಮಾಡೋದು? ಎಂಬ ಚಿಂತೆ ಕಾಡಿತು. ಕಲಾವಿದರು ಬಂದರು ಎಂದು ಅಟೆಂಡರ್ ಹೇಳಿದ್ದೇ ತಡ, ದಾಪುಗಾಲು ಹಾಕುತ್ತಾ ಕೊಠಡಿಯಿಂದಾಚೆಗೆ ಹೋದರೆ, ಅಲ್ಲಿ ಅವರನ್ನು ಎದುರುಗೊಂಡು ಸ್ವಾಗತಿಸಲು ಕಾಲೇಜಿನ ಕಲಾವಿದರ್ಯಾರೂ ಬಂದಿರಲಿಲ್ಲ. ಇದು ಗಾಬರಿಯನ್ನುಂಟು ಮಾಡಿದರೂ ಸಾವರಿಸಿಕೊಂಡು, ಎಲ್ಲರೂ ಎಲ್ಲಿದ್ದಾರೆ ಕರೆಯಿರಿಎಂದು ಹೇಳುತ್ತಾ ಹೂಗುಚ್ಛ ಹಿಡಿದು ಮುಂಬಾಗಿಲ ಕಡೆ ಓಡಿದೆ.

ಆಗ ಅಧ್ಯಾಪಕರೊಬ್ಬರು ಬೆನ್ನ ಹಿಂದಿಂದ, ಅಯ್ಯೋ ಮೇಡಂ ಯಾಕಿಷ್ಟು ಅವಸರ? ಎಂದು ಉದಾಸೀನವಾಗಿ ಹೇಳಿದ್ದು ಕೇಳಿಸಿತು. ಅಯ್ಯೋ ಶಿವನೇ ಆ ಕಲಾವಿದರನ್ನು ಆಹ್ವಾನಿಸಿರುವುದು ನಾವು, ಅವರು ಈ ಕಾಲೇಜಿಗೆ ಬರಲು ಮೊದಲು ಹಿಂದೇಟು ಹಾಕಿದ್ದರು, ಅಂಥಾದ್ದರಲ್ಲಿ ಅವರಿಗೆ ಹೀಗೆ ಅವಮರ್ಯಾದೆ ಮಾಡಿದರೆ ಕೋಪ ಬಂದು ವಾಪಸ್ ಹೊರಟರೆ? ಕಾರ್ಯಕ್ರಮ ರದ್ದಾಗುವುದರಲ್ಲಿ ಅನುಮಾನವಿರಲಿಲ್ಲ. ನನ್ನ ಗಾಬರಿ ಆತಂಕ ಮೇರೆ ಮೀರಿತ್ತು. ನನ್ನ ಆತಂಕವನ್ನು ಗಮನಿಸಿದ ಅಧ್ಯಾಪಕರು ತಮ್ಮ ಧರ್ಮ ಸಾಯಿಸಿ, ಅತಿಥಿಗಳನ್ನು ತಾನೇ ಕರೆದೊಯ್ಯುವೆನೆಂದು ಹೇಳಿ, ನೀವ್ಯಾಕೆ ಅವರಿಗೆ ಹೂಗುಚ್ಛ ನೀಡಿದಿರಿ… ಅದೆಲ್ಲ ಬೇಕಾಗಿರಲಿಲ್ಲ ಎಂದು ಕುಹಕವಾಡಿದರು. ಅವರಿಗೆ ಕಾಫಿ ತಿಂಡಿ ಏರ್ಪಾಡಾಗಿರುವುದನ್ನು ಆ ಅಧ್ಯಾಪಕರಿಗೆ ನೆನಪಿಸಿದರೂ ಕೇಳಿಸಿಕೊಳ್ಳಲಿಲ್ಲ. ಕಲಾವಿದರು ತಮ್ಮ ಮೃದಂಗಗಳ ಶ್ರುತಿಯನ್ನು ಸಿದ್ಧ ಮಾಡಿಕೊಳ್ಳಲು ವ್ಯವಸ್ಥೆಯಾಗಿದ್ದ ಕೊಠಡಿಗೂ ಕರೆದೊಯ್ಯದೆ ಸೀದಾ ವೇದಿಕೆಯ ಮೇಲಕ್ಕೆ ಅವರನ್ನು ಕರೆದೊಯ್ದರು! ಯಾಕೆ ಹೀಗೆ ಮಾಡಿದಿರಿ? ಎಂದಾಗ ಆಗಲೇ ತಡವಾಗಿರುವ ಕಾರಣ ನೀಡಿದರು! ಈ ಕಾಲೇಜಿನ ಬಗ್ಗೆ ತಾಳದವರನ್ನು ಕಂಡರೆ ತಂಬೂರಿಯವರಿಗೆ ಆಗಲ್ಲ; ತಂಬೂರಿಯವರನ್ನು ಕಂಡರೆ ತಬಲದವರಿಗಾಗಲ್ಲ…’ ಅಂತ ಒಂದು ಜೋಕ್ ಇತ್ತು. ಇದನ್ನು ನಾನು ಕಣ್ಣಾರೆ ಕಾಣುವಂತಾಯಿತು!

ಆದರೆ ಅತಿಥಿ ಕಲಾವಿದರು ತಮ್ಮ ಅಸಮಾಧಾನವನ್ನು ಕಿಂಚಿತ್ತೂ ತೋರಿಸಿಕೊಳ್ಳಲಿಲ್ಲ. ಕಾರ್ಯಕ್ರಮ ಶುರುವಾಗೇಬಿಟ್ಟಿತು. ಸುದರ್ಶನ್‍ರ ಮೃದಂಗವಾದನ ಲಯಬದ್ಧವಾಗಿ ಕೇಳುಗರ ಕಿವಿಯನ್ನು ತುಂಬತೊಡಗಿತು. ಆದರಿದು ಮುಂದಿನ ಸಾಲಿನಲ್ಲಿ ಕುಳಿತಿರುವವರಿಗೆ ಮಾತ್ರ ಕೇಳಿಸುತ್ತಿತ್ತು, ಅಲ್ಲದೇ, ಪ್ರಧಾನ ಕಲಾವಿದರಿಗೆ ಸಾಥ್ ನೀಡುತ್ತಿದ್ದ ನಾಗರಾಜ್‍ರ ಮೃದಂಗದ ಲಯವು ಯಾಕೋ ದೊಡ್ಡ ಶಬ್ದ ಮಾಡುತ್ತಿತ್ತು. ಬೆನ್ನ ಹಿಂದೆ ಕುಳಿತವರೊಬ್ಬರು- ಯಾರಪ್ಪಾ ಅದು? ಮೃದಂಗದವನ ಧೊಪ್…ಧೊಪ್! ನಮ್ಮ ಕಿವಿಗಳು ಇಂದು ಉಳಿಯೋದು ಕಷ್ಟ ಎಂದು ಅಪಹಾಸ್ಯ ಮಾಡುತ್ತಿದ್ದರು. ಎಲ್ಲೋ ಏನೋ ಎಡವಟ್ಟು ಆಗಿದೆ ಎಂಬುದು ಖಾತ್ರಿಯಾಗಿ ಪಕ್ಕದಲ್ಲಿದ್ದ ಅಧ್ಯಾಪಕರನ್ನು ವಿಚಾರಿಸಿದೆ. `ಅಯ್ಯೋ ಮೇಡಂ… ಮೈಕ್‍ಗಳನ್ನು ಸರಿಯಾಗಿ ಕೊಟ್ಟಿಲ್ಲ, ಸಾಥ್ ನೀಡುವ ಕಲಾವಿದರಿಗೆ ಸೌಂಡ್ ಜಾಸ್ತಿ ಕೊಟ್ಟು, main artist ಗೆ ಸೌಂಡ್ ಕೊಟ್ಟಿಲ್ಲ…. ಜತೆಗೆ ತೆರೆಯ ಹಿಂದೆ ಮಾನಿಟರ್ಸ್‍ಗಳು ಇದ್ದರೂ ಆನ್ ಮಾಡಿಲ್ಲ” ಎಂದರು! ನಿನ್ನೆಯ ದಿನದ ಸಂಗೀತ ಕಛೇರಿಗೆ ಎಲ್ಲವೂ ಸಮರ್ಪಕವಾಗಿತ್ತಲ್ಲ… ಈಗ ಏನಾಗಿದೆ? ಎಂದು ಪ್ರಶ್ನಿಸಿದೆ. ಹಾಗೇ ನೋಡ್ತಾ ಇರಿ, ನಿಮಗೇ ಎಲ್ಲವೂ ಅರ್ಥವಾಗುತ್ತೆ ಎಂದರು. ಈಗ ನೀವೇ ಹೋಗಿ ಅಟೆಂಡರ್‍ಗೆ ಹೇಳಿ ಸರಿಪಡಿಸಿರಿ ಎಂದು ಸೂಚಿಸಿದೆ. ತದನಂತರ ಕೊಂಚ ಸುಧಾರಿಸಿದಂತೆ ಕಂಡು ಬಂದರೂ ಪೂರ್ತಿ ಸರಿಯಾಗಲೇ ಇಲ್ಲ.

ಏತನ್ಮಧ್ಯೆ ನನ್ನ ಮೊಮ್ಮಗ ಅರವಿಂದನಿಗೆ ಮೃದಂಗವಾದನದ ಗೀಳು ಇದ್ದ ಕಾರಣ, ನನ್ನ ಟೇಪ್‍ರೆಕಾರ್ಡರ್‍ಗೆ ಹೊಸ ಕ್ಯಾಸೆಟ್ ಹಾಕಿ ಸ್ಪೀಕರ್ ಮುಂದೆ ಇಡಲು ಅಟೆಂಡರ್‍ಗೆ ನೀಡಿದ್ದೆ. ಇದನ್ನೂ ಆನ್ ಮಾಡದೆ ಕೆಲ ಹೊತ್ತು ಹಾಗೇ ಇಟ್ಟಿದ್ದನ್ನು ಇ.ಎಂ.ಎಂ.ಆರ್.ಸಿ.ಯ ವಿದ್ಯಾರ್ಥಿಯ ಗಮನಕ್ಕೆ ಬಂದು ಅವನೇ ಆನ್ ಮಾಡಿದನಂತೆ. ಬರೇ ಅರ್ಧದಿಂದ ಮಾತ್ರ ರೆಕಾರ್ಡ್ ಆಗಿದೆ. ಇಷ್ಟೆಲ್ಲಾ ಅಡ್ಡಿ ಬಂದರೂ ಕಲಾವಿದರು ಕಛೇರಿ ನಡೆಸಿಕೊಟ್ಟರು. ಕಲಾವಿದರ ಬಗ್ಗೆ ನಮ್ಮ ಕಾಲೇಜಿನ ಕಲಾವಿದರ ಅಸಹನೆಗೆ ಕಾರಣವೇನೆಂದು ಆಮೇಲೆ ವಿಚಾರಿಸಿದೆ. ಸುದರ್ಶನ್ ಅವರು ಮೂಲತಃ ಒಬ್ಬ ಇಂಜಿನಿಯರ್. ಆದರೆ ಮೃದಂಗವೇ ತಮ್ಮ ಜೀವನವೆಂದು ಸ್ವೀಕರಿಸಿ ಇದ್ದ ಕೆಲಸ ಬಿಟ್ಟು ತನ್ನನ್ನು ಈ ಕಲೆಗೆ ಸಮರ್ಪಿಸಿ ಕೊಂಡಿದ್ದರು. ಜತೆಗೆ ಇವರು ಯಾರೊಂದಿಗೂ ಓತ್ಲಾ ಹೊಡೆಯದ ಖಡಕ್ ವ್ಯಕ್ತಿತ್ವವುಳ್ಳವರೆಂದು ಗೊತ್ತಾಯಿತು. ನನಗೆ ಅವರ ಬಗ್ಗೆ ಹೆಮ್ಮೆಯಾಯಿತು, ಗೌರವವೂ ಹೆಚ್ಚಿತು. ಜಯಚಾಮರಾಜ ಒಡೆಯರ್ ಸ್ಮರಣಾರ್ಥ ಕಾರ್ಯಕ್ರಮಗಳು ಮುಗಿದಾಗ, ಸದ್ಯ ಮುಗಿಯಿತು ಎಂದು ನಿಟ್ಟುಸಿರು ಬಿಡುವಂತಾಯಿತು.

ಈ ನಿಟ್ಟುಸಿರುಗಳ ನಡುವೆಯೂ 2000ನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ UGC ನ್ಯಾಕ್ ಸಮಿತಿಯು ಪಂಚತಾರಾ `ಎ’ ಶ್ರೇಷ್ಠತಾ ಮಾನ್ಯತೆಯನ್ನು ನೀಡಿರುವುದಕ್ಕೆ ಈ ಮಾನ್ಯತೆಯೊಳಗೆ ಲಲಿತಕಲಾ ಕಾಲೇಜಿನ ಸಾಧನೆಯೂ ವಿಶೇಷವಾಗಿ ಸೇರಿದೆ. ಈ ನಡುವೆ ಈ ಲಲಿತಕಲಾ ಕಾಲೇಜಿನ ಬಗ್ಗೆ ಒಂದು ಸುಂದರವಾದ Rhythm of Mysore University ಎಂಬ ಬ್ರೋಷರ್ ಅನ್ನು ರೂಪಿಸಿದೆ. ಇದರಲ್ಲಿ ಲಲಿತಕಲಾ ಕಾಲೇಜಿನ ಹಿರಿಮೆ ಹಾಗೂ ಕಾಲೇಜಿನ ವಿದ್ವಾಂಸರ ಮಹತ್ವದ ಜತೆಗೆ ಸ್ವದೇಶ, ವಿದೇಶಗಳಿಂದ ಇಲ್ಲಿಗೆ ಬಂದು ತರಬೇತಿ ಪಡೆದು ಪ್ರಸಿದ್ಧರಾಗಿರುವ ಕಲಾವಿದರ ಸಚಿತ್ರ ಪರಿಚಯ, ಹಾಗೆಯೇ ಹಾಲಿ ನನ್ನ ಕಾಲಾವಧಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ವಿವರಗಳು ಅದರೊಳಗೆ ಅಡಕವಾಗಿತ್ತು. ಈ ಪುಟ್ಟ ಬ್ರೋಷರ್ ಪ್ರಕಟವಾದ ಮೇಲೆ ಕಾಲೇಜಿನ ಬಗ್ಗೆ ಎಗತಾಳೆ ಮಾಡುತ್ತಿದ್ದವರು ಕೂಡ- ಈ ಕಾಲೇಜನ್ನು ಉಳಿಸಿಕೊಳ್ಳಬೇಕು ಎಂದು ಹೇಳತೊಡಗಿದರು. ಇನ್ನೇನು ಬೇಕು?

ನಾನು ಈ ಕಾಲೇಜನ್ನು ಆಗಾಗ ನೆನೆಸಿಕೊಳ್ಳುತ್ತೇನೆ- ನಿವೃತ್ತಿಯ ದಾರಿಯಲ್ಲಿದ್ದವಳಿಗೆ ಜೀವನದ ಔನ್ನತ್ಯದ ಕಡೆ ದೃಷ್ಟಿಸುವಂತೆ ಈ ಕಾಲೇಜಿನ ಸಂಗೀತಮಯ ವಾತಾವರಣ ನನಗೆ ನೀಡಿತು. ಇದನ್ನು ಮರೆಯಲಾರೆ. ಈಗಲೂ ಸಮಯ ಸಿಕ್ಕಾಗ ಒಂದು ಗಳಿಗೆ ಕಾಲೇಜಿನೊಳಗೆ ನುಗ್ಗಿ ಕಾಲಾಡಿಸಿಕೊಂಡು ಬರುವ ರೂಡಿ ಇಟ್ಟುಕೊಂಡಿದ್ದೇನೆ.