ಶಿಕ್ಷಣಕ್ಕೆ ಮೂರು ಮಾತು-ದೇವನೂರ ಮಹಾದೇವ

[13.7.2019 ರಂದು ಚಾಮರಾಜನಗರದ ದೀನಬಂಧು ಟ್ರಸ್ಟ್ ಆವರಣದಲ್ಲಿ ನಡೆದ “ಮಕ್ಕಳ ಲೋಕದ ಮನಸುಗಳ ದುಂಡು ಮೇಜಿನ ಸಭೆ” ಯಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಸಾರಾಂಶ ಇಲ್ಲಿದೆ. ಚಿತ್ರದಲ್ಲಿ ಸಭೆಯನ್ನು ಆಯೋಜಿಸಿದ್ದ ಧಾರವಾಡದ ಚಿಲಿಪಿಲಿ ಬಳಗದ ಶಂಕರ ಹಲಗತ್ತಿ, ದೀನಬಂಧು ಆಶ್ರಮದ ಜಿ.ಎಸ್.ಜಯದೇವ್, ಚಾಮರಾಜನಗರದ ರಂಗವಾಹಿನಿಯ ನರಸಿಂಹಮೂರ್ತಿ…. ಇನ್ನಿತರರಿದ್ದಾರೆ.]

 

ಕೊಠಾರಿ ಆಯೋಗದ ಒಂದು ಮಾತು ಹೀಗಿದೆ: “ಸಮಾನ ಶಿಕ್ಷಣವನ್ನು ಅನುಷ್ಠಾನ ಮಾಡದಿದ್ದರೆ, ಶಿಕ್ಷಣವೇ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಹೆಚ್ಚಿಸಿ ಮತ್ತಷ್ಟು ಕಂದರ ಉಂಟುಮಾಡುತ್ತದೆ”

ಈಗ ನಾವು ನಮ್ಮನ್ನ ಪ್ರಶ್ನಿಸಿಕೊಳ್ಳಬೇಕಾಗಿದೆ. ಭಾರತದ ಶಿಕ್ಷಣ ಏನು ಮಾಡುತ್ತಿದೆ? ಕೊಠಾರಿಯವರು ಮೇಲಿನ ಮಾತು ಹೇಳುವಾಗ ಆಗ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚೆಂದರೆ ಎರಡು ಮೂರು ಬಗೆಯ ಅಸಮಾನತೆಯ ತಾರತಮ್ಯದ ಶಿಕ್ಷಣ ಇತ್ತೇನೊ. ಆದರೆ ಇಂದು? ಒಂಬತ್ತು ಬಗೆಯ ಶಿಕ್ಷಣ ತಾರತಮ್ಯ ಇದೆ. ಹಾಗಾಗಿ ಇಂದಿನ ಶಿಕ್ಷಣವೇ ಛಿದ್ರಗೊಂಡ ಭಾರತದ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಉಲ್ಬಣಗೊಳಿಸಿ ಭಾರತವನ್ನು ಮತ್ತಷ್ಟು ಛಿದ್ರಗೊಳಿಸುತ್ತಿದೆ. ಇದು ಒಳ್ಳೆಯದಲ್ಲ. ಚಾತುರ್ವರ್ಣ ಪದ್ಧತಿಯ ನವರೂಪ ಇದು. ಭಾರತ ತನ್ನ ಐಕ್ಯತೆಯನ್ನು ಶಿಕ್ಷಣ ಕ್ಷೇತ್ರದಿಂದಲೆ ಆರಂಭಿಸಬೇಕಾಗಿದೆ.

ಇನ್ನೊಂದು: Drop outs ಸಮಸ್ಯೆ ಅನ್ನುತ್ತೇವೆ ನಾವು. ಸಮಾಜ Drop outsನ್ನು waste ಎಂದು ನೋಡುತ್ತದೆ. ಸಂವೇದನಾಶೀಲರಾದ ಕೆಲವು ಕಡೆ ವಿದೇಶದಲ್ಲಿ Drop outsಗಳನ್ನು ‘ವಿಶೇಷ ಪ್ರತಿಭೆ’ ಎಂದು ಪರಿಗಣಿಸುತ್ತಾರೆ. ಅವರೊಳಗಿನ ನೃತ್ಯ, ಹಾಡು, ಚಿತ್ರ, ತಂತ್ರಜ್ಞತೆ ಇತ್ಯಾದಿ ಹಲವಾರು ಸೆಲೆಗಳು ಒಳಗಿಂದ ಅರಳುವಂತೆ ವಾತಾವರಣ ನಿರ್ಮಿಸುತ್ತಾರೆ; ತರಬೇತಿ ನೀಡುತ್ತಾರೆ. ಹೀಗಾದಾಗ ಅವಮಾನ ಅಭಿಮಾನವಾಗಿ ರೂಪಾಂತರಗೊಳ್ಳುತ್ತದೆ. waste ಸಂಪತ್ತಾಗುತ್ತದೆ. ಭಾರತಕ್ಕೆ ಈ ಪ್ರಕ್ರಿಯೆ ಹೆಚ್ಚಾಗಿ ಬೇಕಾಗಿದೆ. ಇದನ್ನು ಆಯಾಯ ಶಾಲೆಯ ಆವರಣಗಳಲ್ಲೆ ಸಂಜೆ ಒಂದು ಗಂಟೆ ಹಾಗೂ ರಜಾದಿನಗಳಲ್ಲಿ ಜೊತೆಗೆ ಹುಣ್ಣಿಮೆಯ ರಾತ್ರಿ- ಈ ಕಾಲಾವಕಾಶದಲ್ಲೆ ವಿಶೇಷ ಪ್ರತಿಭೆ ಅರಳಿಸಬಹುದು. ಔಪಾಚಾರಿಕ ಶಿಕ್ಷಣಕ್ಕೆ ಕೊಡುವಷ್ಟೆ ಮಹತ್ವವನ್ನು ಇಂಥ ಅನೌಪಚಾರಿಕ ಮಹಾಶಿಕ್ಷಣಕ್ಕೂ ನೀಡಬೇಕಾಗಿದೆ.

ಆಮೇಲೆ ಮತ್ತೊಂದು: ಇಂದಿನ ನಮ್ಮ ಶಾಲಾ ಶಿಕ್ಷಣ ನೋಡಿದರೆ- ಕೋಳಿಫಾರಂ ನೋಡಿದಂತಾಗುತ್ತದೆ. ಶಿಕ್ಷಣದ ಹೆಸರಲ್ಲಿ ಮಕ್ಕಳ ಬುರಡೆಯೊಳಗೆ ಮಾಹಿತಿ ತುಂಬುತ್ತಿದ್ದೇವೆ. ಬುರಡೆಯೊಳಗೆ ಮಾಹಿತಿಯೇ ಆವರಿಸಿಕೊಂಡು ಮಕ್ಕಳಲ್ಲಿ ಹುಟ್ಟಿನೊಡನೆ ಸಹಜವಾಗಿರುವ ಕಲ್ಪನೆ, ಭಾವನೆ, ಸಂವೇದನೆ- ಇತ್ಯಾದಿ ಮನುಷ್ಯ ಸ್ಪಂದನಗಳು ಮುರುಟಿಕೊಳ್ಳುವಂತೆ ಇಂದಿನ ಶಿಕ್ಷಣ ಪದ್ಧತಿ ಮಾಡುತ್ತಿದೆ. ನಾವು ಕಳೆದುಕೊಳ್ಳುತ್ತಿದ್ದೇವೋ ಅಥವಾ ಪಡೆದುಕೊಳ್ಳುತ್ತಿದ್ದೇವೋ? ಮಾಹಿತಿಯು ತನ್ನಷ್ಟಕ್ಕೆ ತಾನೇ ಮಾನವೀಯ ಅಲ್ಲ. ಬುದ್ಧಿಪೂರ್ವಕ cut and paste ಜ್ಞಾನ ಆಗಿಬಿಡಬಹುದು. ಆದರೆ ಕಲ್ಪನೆ, ಭಾವನೆ, ಸಂವೇದನೆಗಳು ತಮ್ಮಷ್ಟಕ್ಕೆ ತಾವೇ ಮಾನವೀಯ. ಈ ಗುಣಗಳನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಈ ಗ್ರಹಿಕೆ ನಮ್ಮೊಳಗಿದ್ದರೆ ನಾವು ಮಾಡುವ ಯಾವುದೇ ಚಟುವಟಿಕೆ ಕ್ರಿಯೆಗಳು ಮಾನವೀಯ ಸ್ಪರ್ಶ ಪಡೆದುಕೊಳ್ಳುತ್ತವೆ.