ಮಹಿಳಾ ಉದ್ದೇಶಿತ ಆಯವ್ಯಯ-ಮಹಿಳೆಗೇನು ಬೇಕು?-ರೂಪ ಹಾಸನ

women

‘ನಿಮಗೇನು ಬೇಕು?’ ಎಂದು ನಮ್ಮ ಸರ್ಕಾರಗಳು ಎಂದಿಗೂ ಮಹಿಳೆಯರನ್ನು ಕೇಳಿಲ್ಲ! ಆದರೆ ಮಹಿಳೆಯರೇ ಇದೀಗ ಎಚ್ಚೆತ್ತು, ಪುರುಷ ನಿರ್ಮಿತ ಪ್ರಪಂಚದ ಪೊರೆ ಕಳಚಿ ಸಹಜ ದೃಷ್ಟಿಯಿಂದ ಎಲ್ಲವನ್ನೂ ನೋಡುತ್ತಿದ್ದಾರೆ. ಮಹಿಳಾ ದಿನಾಚರಣೆಯ ಈ ಹೊತ್ತು ಮತ್ತು ರಾಜ್ಯ ಆಯವ್ಯಯದ ಲೆಕ್ಕಾಚಾರಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ತನಗೇನು ಬೇಕು? ಎಂಬುದನ್ನು ಮಹಿಳೆಯರೇ ಕೇಳುತ್ತಿದ್ದಾರೆ.
ಬಹು ಮುಖ್ಯವಾಗಿ ಮಹಿಳಾ ಸಂವೇದಿ ಬಜೆಟ್ ಮದ್ಯಪಾನ ನಿಷೇಧ, ಮಹಿಳೆಯ ಅಪೌಷ್ಟಿಕತೆ ನಿವಾರಣೆ, ಆರೋಗ್ಯ, ದೌರ್ಜನ್ಯ ವಿರೋಧಿ ಯೋಜನೆ, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಮುಂತಾಗಿ ಮಹಿಳೆಯ ಕುರಿತ ಸಮಗ್ರ ವಿಚಾರಗಳನ್ನೂ ಒಳಗೊಳ್ಳುವಂತಾಗಬೇಕು. ಎಲ್ಲಾ ಇಲಾಖೆ ಮತ್ತು ವಿವಿಧ ನಿಗಮಗಳಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಕನಿಷ್ಠ 33% ರಷ್ಟಾದರೂ ಹಣವನ್ನು ಮೀಸಲಿಟ್ಟು ಏಕಗವಾಕ್ಷಿ ವ್ಯವಸ್ಥೆಯಡಿ ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸಬೇಕಿರುವುದು ಮುಖ್ಯ.
ಹೆಣ್ಣುಮಕ್ಕಳು ಬಡತನವಿರುವಾಗಲೂ ಹೇಗಾದರೂ ದುಡಿದು ಸಂಪಾದಿಸುತ್ತಿದ್ದರೂ ಕುಟುಂಬದ ಪುರುಷರ ಮದ್ಯಪಾನ ಚಟದಿಂದಾಗಿ ಅದೂ ಮದ್ಯದಂಗಡಿಯ ಪಾಲಾಗುತ್ತಿದೆ. ಜೊತೆಗೆ ನಿತ್ಯ ಮನೆಗಳಲ್ಲಿ ಜಗಳ, ಹೊಡೆದಾಟ, ಹಿಂಸೆ… ‘ನಮಗೆ ನಿಮ್ಮ ಭಾಗ್ಯಗಳು ಬೇಡ. ಮೊದಲು ಮದ್ಯಪಾನ ನಿಷೇಧ ಮಾಡಿ. ನಿಮ್ಮ ಆಯವ್ಯಯದ ಬಹುದೊಡ್ಡ ಪಾಲು ನಮ್ಮ ಕಣ್ಣೀರಿನ ಕಾಣಿಕೆ. ರಾಜ್ಯ ನಡೆಸಲು ಮದ್ಯದಂಗಡಿಗಳನ್ನು ಹೆಚ್ಚಿಸುತ್ತಾ, ಮದ್ಯ ಮಾರಾಟದ ಟಾರ್ಗೆಟ್ ಹೆಚ್ಚಿಸುತ್ತಾ ನಮ್ಮ ಹೊಟ್ಟೆಗೆ ಹೊಡೆಯುತ್ತಿರುವ ಜನಪ್ರತಿನಿಧಿಗಳಿಗೆ ಕರುಳಿಲ್ಲವೇ?’ -ನೊಂದ ಹೆಣ್ಣುಮಕ್ಕಳ ಗೋಳು ಸರ್ಕಾರಕ್ಕೆ ಮುಟ್ಟಬೇಕಿದೆ.
ಪ್ರತಿ ಗ್ರಾಮದಲ್ಲಿ ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರತಿ ಮನೆಗೆ ಶೌಚಾಲಯ, ನೀರು, ವಿದ್ಯುಚ್ಛಕ್ತಿ ಸರಬರಾಜು ಜೊತೆಗೆ ಜೀವನ ನಿರ್ವಹಣೆಗೆ ಇರುವ ಸ್ಥಳದಲ್ಲೇ ಕೆಲಸ ನೀಡುವ ಗೃಹಕೈಗಾರಿಕೆ…..ಇವುಗಳಿಂದ ಗ್ರಾಮೀಣ ಹೆಣ್ಣುಮಕ್ಕಳ ಸಂಕಷ್ಟ ತಪ್ಪುವುದರ ಜೊತೆಗೆ ಗ್ರಾಮಗಳು ಸ್ವಾವಲಂಬನೆಗೊಂಡು ನಗರ ವಲಸೆ ತಪ್ಪುತ್ತದೆ. ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲದಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಸಿದಿದ್ದು, ಭೂಮಿಯನ್ನು ಅವಲಂಬಿಸಿ ದುಡಿಯುತ್ತಿದ್ದ ಕುಟುಂಬಗಳೆಲ್ಲವೂ ಈಗ ಕಂಗಾಲಾಗಿವೆ. ಮಹಿಳೆಯ ಆರ್ಥಿಕ ಸ್ವಾವಲಂಬನೆಗಾಗಿ ವೃತ್ತಿ/ಕೌಶಲ್ಯ ತರಬೇತಿ ಮತ್ತು ಅರ್ಧದಷ್ಟಾದರೂ ಸಹಾಯಧನವನ್ನೊಳಗೊಂಡ ವಿಶೇಷ ಸಾಲ ಯೋಜನೆಯನ್ನು ಸರ್ಕಾರ ತುರ್ತಾಗಿ ಜಾರಿಗೊಳಿಸಿದರೆ ಮಾತ್ರ ಕುಟುಂಬಗಳು ಉಳಿದೀತು. ಪ್ರತಿ ಗ್ರಾಮಪಂಚಾಯಿತಿಗೆ ಒಂದರಂತಾದರೂ ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯ ಆಧಾರದಲ್ಲಿ ಗೃಹಕೈಗಾರಿಕೆ ಅಥವಾ ಗುಡಿಕೈಗಾರಿಕೆಯ ಘಟಕವನ್ನು ಸರ್ಕಾರವೇ ರೂಪಿಸಿ, ಮಹಿಳೆಯರ ಉತ್ಪನ್ನಕ್ಕೆ ಮಾರಾಟ ಜಾಲವನ್ನು ಕಲ್ಪಿಸಿ ಕೊಡಬೇಕು. ಜೊತೆಗೇ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಯೂ ಆದರೆ ಮಾತ್ರ ಗ್ರಾಮೀಣ ಭಾರತ ಉಳಿಯುತ್ತದೆ.
ಇದರ ಜೊತೆಗೆ, ಒಂದು ಕಡೆ ಕರ್ನಾಟಕದಲ್ಲಿ ಹೆಣ್ಣು-ಗಂಡಿನ ಅನುಪಾತ ತೀವ್ರವಾಗಿ ಹೆಚ್ಚುತ್ತಿದ್ದು, ಹೆಣ್ಣುಭ್ರೂಣಹತ್ಯೆ ಎಗ್ಗಿಲ್ಲದೇ ನಡೆಯುತ್ತಿದೆ. ಇನ್ನೊಂದು ಕಡೆ ಸಾಮಾಜಿಕ ಪಿಡುಗಾದ ಬಾಲ್ಯವಿವಾಹ. ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 6807 ಅಪ್ರಾಪ್ತ ಹೆಣ್ಣುಮಕ್ಕಳು ತಾಯಂದಿರಾಗಿರುವುದು ವರದಿಯಾಗಿದೆ. ಅಪೌಷ್ಟಿಕತೆಯಿಂದ ತಾಯಾಗುವ ಸಂದರ್ಭದಲ್ಲೇ ತಾಯಿ-ಮಗು ಇಬ್ಬರೂ ಸಾವಿಗೀಡಾಗುವ ಪರಿಸ್ಥಿತಿ ಹೆಚ್ಚಿನ ಮಟ್ಟದಲ್ಲಿದೆ. ಈ ಸಮಸ್ಯೆಗಳ ತಡೆಗಾಗಿ ಪ್ರತ್ಯೇಕ ಆಯೋಗ ರಚನೆಯಾಗಿ ಲೋಕಾಯುಕ್ತ ಮಾದರಿಯಲ್ಲಿ ಕೆಲಸ ನಿರ್ವಹಿಸಿದಾಗ ಮಾತ್ರ ಹೆಣ್ಣು ಜೀವ ಉಸಿರಾಡಬಹುದು.
ಇನ್ನೊಂದು, ಮಹಿಳೆಯರ ಅಪೌಷ್ಟಿಕತೆ ಸಮಸ್ಯೆ. ಇದನ್ನು ತಡೆಯಲು 10-18 ವರ್ಷದ ಎಲ್ಲಾ ಹೆಣ್ಣುಮಕ್ಕಳ ಆರೋಗ್ಯದ ವರದಿ ದಾಖಲಿಸಿ, ‘ಸಬಲ’ ಯೋಜನೆಯ ಆಹಾರವು ಗ್ರಾಮದ ಎಲ್ಲಾ ಅಪೌಷ್ಟಿಕ ಕಿಶೋರಿಯರಿಗೂ ಲಭ್ಯವಾಗುವಂತೆ ಮಾಡಬೇಕಿದೆ. ಆಹಾರ ಭದ್ರತಾ ಕಾಯಿದೆಗನುಗುಣವಾಗಿ ರೇಶನ್ ಕಾರ್ಡುಗಳು ಮಹಿಳೆಯರ ಹೆಸರಲ್ಲಿಯೇ ಇದ್ದು, ಸ್ಥಳೀಯ ಆಹಾರಧಾನ್ಯವನ್ನು ಕಡ್ಡಾಯವಾಗಿ ಪಡಿತರದಲ್ಲಿ ಕೊಡುವಂತಾಗಬೇಕು. ಜೊತೆಗೆ ತಾಯಿ/ ಶಿಶುಮರಣ ತಡೆಯಲಿಕ್ಕಾಗಿ ಎಲ್ಲಾ ಬಡ ಗರ್ಭಿಣಿ, ಬಾಣಂತಿಯರಿಗೂ ತಾಯ್ತನದ ಭತ್ಯೆಗಳನ್ನು ಕೊಡಬೇಕಿದೆ. ಹದಿಹರೆಯದವರಿಗೆ ವೃತ್ತಿ ಶಿಕ್ಷಣವನ್ನೂ ಒಳಗೊಂಡಂತೆ, ಮೂಲ ಶಿಕ್ಷಣ ನೀಡಲು ಶಾಲೆಯಿಂದ ಹೊರಗಿರುವ ಎಲ್ಲಾ ಹೆಣ್ಣುಮಕ್ಕಳನ್ನೂ ಒಳ ತರಲು ಸಮರ್ಥ ಯೋಜನೆಗಳನ್ನು ರೂಪಿಸಿದರೆ ಮಾತ್ರ ಹೆಣ್ಣುಮಕ್ಕಳ ಬದುಕು ಹಸನಾದೀತು.
ಹಾಗೇ, ಕೃಷಿ ಕಾರ್ಮಿಕರನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಅಸಂಘಟಿತ ಮಹಿಳಾ ಕಾರ್ಮಿಕರಿಗೆ ಐ.ಎಲ್.ಒ.[ಇಂಟರ್‍ನ್ಯಾಷನಲ್ ಲೇಬರ್ ಆರ್ಗನೈಸೇಷನ್] ನಿಗದಿಪಡಿಸಿದ ಮಾನದಂಡವನ್ನು ಅನ್ವಯಿಸಿ ಸಶಕ್ತವಾದ ಕಲ್ಯಾಣ ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮತ್ತು ಅಂಗನವಾಡಿ ನೌಕರರ ಕೆಲಸದ ಸಮಯವನ್ನು ವಿಸ್ತರಿಸಿರುವ ಕಾರಣಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರದ ಕನಿಷ್ಟ ವೇತನ ದರದಂತೆ ವೇತನವನ್ನು ರೂ. 10,500/-ಕ್ಕೆ ಹೆಚ್ಚಿಸಿ ಆದೇಶ ಮಾಡುವುದು ಸೂಕ್ತ ಮಾನದಂಡವಾಗಿದೆ. ಹೀಗೆಯೇ ಆಶಾ ಕಾರ್ಯಕರ್ತೆಯರು ಅತ್ಯಂತ ಕಠಿಣ ಕೆಲಸಗಳನ್ನು ಸಮಾಜದ ತಳ ಹಂತದಿಂದ ಮಾಡುತ್ತಿದ್ದು ಇವರಿಗೆ ಮಾಸಿಕ ಕನಿಷ್ಠ 5000/-ವೇತನವನ್ನಾದರೂ ನಿಗದಿಪಡಿಸಬೇಕು. ಆಶಾಗಳಿಗೆ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗಾಗಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಕಲ್ಯಾಣ ಯೋಜನೆಗಳನ್ನು ರೂಪಿಸಿದಾಗ ಮಾತ್ರ ಮಹಿಳಾ ಕಾರ್ಮಿಕರನ್ನು ಸೂಕ್ತವಾಗಿ ಗೌರವಿಸಿದಂತಾಗುತ್ತದೆ.
ನಮ್ಮ ಅಕ್ಕಪಕ್ಕದ ರಾಜ್ಯದ ಯೋಜನೆಗಳ ಕಡೆ ಕಣ್ಣಾಡಿಸಿದರೂ ನಮಗೊಂದಿಷ್ಟು ದಾರಿಗಳು ಸಿಗುತ್ತವೆ. ಉದಾಹರಣೆಗೆ-ಮನೆಕೆಲಸ ಮಾಡುವ ಮಹಿಳಾ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ತಮಿಳುನಾಡಿನಲ್ಲಿ ‘ತಮಿಳುನಾಡು ಮನೆಕೆಲಸ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿ’ ಕಾಯ್ದೆ (2007)ಯಲ್ಲಿ ಇರುವಂತೆ ‘ತ್ರಿಪಕ್ಷೀಯ ಕ್ಷೇಮಾಭಿವೃದ್ಧಿ ಮಂಡಳಿ”, ಉದ್ಯಮಶೀಲತೆಯ ಸಾಮರ್ಥ್ಯದ ಕೇರಳದ ‘ಕುಡುಂಬಶ್ರೀ’ಯೋಜನೆ, ಆಂಧ್ರದ ಸ್ವಸಹಾಯ ಗುಂಪುಗಳ ಪಂಚಾಯತ್ ಮಟ್ಟದ ಫೆಡರೇಷನ್‍ಗಳ ಸಶಕ್ತ ಮಾದರಿಗಳನ್ನು ಅಧ್ಯಯನ ಮಾಡಿ ಗುಣಾತ್ಮಕ ಅಂಶಗಳನ್ನು ರಾಜ್ಯವು ಅಳವಡಿಸಿಕೊಂಡು ಸಮರ್ಪಕ ಕಲ್ಯಾಣ ಯೋಜನೆಗಳನ್ನು ರೂಪಿಸಲು ಮನಸು ಮಾಡಬೇಕಷ್ಟೇ.
ಬಡತನ, ಅನಕ್ಷರತೆ, ಅತ್ಯಾಚಾರ, ಬಾಲ್ಯವಿವಾಹ, ಮೋಸ, ಕಳ್ಳಸಾಗಾಣಿಕೆ, ಮಾರಾಟ….. ಸಮಸ್ಯೆಗಳಿಗೆ ಸಿಕ್ಕಿ ಜರ್ಜರಿತರಾಗುತ್ತಿರುವ ಹೆಣ್ಣುಮಕ್ಕಳಿಗಾಗಿ, ಅನಿವಾರ್ಯವಾಗಿ ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕಿ ಹೊರಬರಲು ತವಕಿಸುತ್ತಿರುವ ಸಾವಿರಾರು ಹೆಣ್ಣುಮಕ್ಕಳಿಗೆ, ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ವ್ಯಾಪಕವಾಗುತ್ತಿರುವ ಗುಜ್ಜರ್ ಮದುವೆ ಹೆಸರಿನ ವಧು ರಫ್ತು ಉದ್ಯಮವನ್ನು ನಿರ್ಬಂಧಿಸಲು ಹಾಗೂ ಹೆಣ್ಣುಮಕ್ಕಳ ನಾಪತ್ತೆ, ಕಳ್ಳಸಾಗಾಣಿಕೆ ಹಾಗೂ ಮಾರಾಟ ಜಾಲಗಳನ್ನು ನಿಯಂತ್ರಿಸಲು, ಮುಂದೆಯೂ ಹೆಣ್ಣುಮಕ್ಕಳು ಈ ಜಾಲದಲ್ಲಿ ಬೀಳುವುದನ್ನು ತಡೆಗಟ್ಟಲು ಇವರಿಗಾಗಿಯೇ ಪ್ರತ್ಯೇಕವಾಗಿ ರಾಜ್ಯಮಟ್ಟದ ಪ್ರಬಲ ಕೋಶವೊಂದನ್ನು ರೂಪಿಸಬೇಕು. ಅದು ಅವರಿಗೆ ತಕ್ಷಣದ ಪರಿಹಾರ ಧನ ವಿತರಣೆ, ವಸತಿ, ವಿದ್ಯಾಭ್ಯಾಸ, ವೃತ್ತಿ ತರಬೇತಿ, ಉದ್ಯೋಗದ ವ್ಯವಸ್ಥೆಯನ್ನು ಮಾಡಿ, ಪುನರುಜ್ಜೀವನ, ರಕ್ಷಣೆ, ಸ್ವಾವಲಂಬನೆಗೆ ದಾರಿಯನ್ನು ತೋರುವಂತಾಗಬೇಕು. ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರ ಪರವಾಗಿ ಈಗಿರುವ ಕಾನೂನನ್ನು ಸರಿಯಾಗಿ ಮತ್ತು ತುರ್ತಾಗಿ ಅನುಷ್ಠಾನಗೊಳಿಸಲು ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳು, ಮಹಿಳಾ ನ್ಯಾಯಾಲಯಗಳು, ತಕ್ಷಣವೇ ರೂಪುಗೊಳ್ಳುವ ಅಗತ್ಯ ಹೆಚ್ಚಾಗಿದೆ. ಶೋಷಿತರ ರಕ್ಷಣೆ, ಪೋಷಣೆ, ಪುನರುಜ್ಜೀವನಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಬಾಲಮಂದಿರಗಳು, ವಸತಿನಿಲಯಗಳು, ಸ್ವೀಕಾರ ಕೇಂದ್ರ, ಉಜ್ವಲಾ ಮತ್ತು ಸ್ವಾಧಾರ ಕೇಂದ್ರಗಳನ್ನು ಪ್ರಾರಂಭಿಸಿದರೆ ಮಾತ್ರ ಬೀದಿಗೆ ಬೀಳುವ ಹೆಣ್ಣಿಗೆ ನೆಲೆ ಸಿಕ್ಕೀತು.
ರಾಜ್ಯದ ವಿವಿಧ ಗೊಲ್ಲರಹಟ್ಟಿ, ಲಂಬಾಣಿ ತಾಂಡಾ, ಗಿರಿಜನರ ತಾಂಡಾಗಳ ಹೆಣ್ಣುಮಕ್ಕಳ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆಯ ಮೂಲಕ ಅನವಶ್ಯಕವಾಗಿ ತೆಗೆಯಲಾಗುತ್ತಿದ್ದು, ಅವರೀಗ ಅನೇಕ ಬಗೆಯ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆ ಹೆಣ್ಣುಮಕ್ಕಳಿಗೆ ತುರ್ತಾಗಿ ಪರಿಹಾರಧನ ಮತ್ತು ಮಾಸಿಕ ನಿಗದಿತ ಪಿಂಚಣಿಯನ್ನು ನೀಡುವುದು ಸರ್ಕಾರದ ಮಾನವೀಯ ಜವಾಬ್ದಾರಿಯಾಗಿದೆ. ಜೊತೆಗೆ ಈ ಕುರಿತ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕಾದ ಕನಿಷ್ಟ ಕರ್ತವ್ಯವನ್ನು ಸರ್ಕಾರ ನಿರ್ವಹಿಸಬೇಕಾಗಿದೆ.
ಇವು ಮುಖ್ಯವಾದ ಮತ್ತು ತುರ್ತಾಗಿ ಆಗಬೇಕಾದ ಕೆಲಸಗಳಷ್ಟೇ. ಬಜೆಟ್ ಮಂಡನೆ ಪೂರ್ವದಲ್ಲಿ ರಾಜ್ಯಾದ್ಯಂತದ ವಿವಿಧ ಮಹಿಳಾ ಪರ ಸಂಘಟನೆಗಳನ್ನೂ, ಎಲ್ಲ ಇಲಾಖೆಗಳ ಒಂದು ಸಮನ್ವಯ ಸಭೆಯನ್ನು ಕರೆದು, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಂತಾದರೆ ಮಹಿಳಾ ಪರ ಬಜೆಟ್ ಸ್ವಲ್ಪವಾದರೂ ಅರ್ಥಪೂರ್ಣವಾಗಿ ರೂಪಿಸಲು ಸಾಧ್ಯವಾಗುತ್ತದೆ.