ಮನಸ್ಸನ್ನು ಈಗ ಆವರಿಸಿಕೊಂಡಿರುವ ಒಂದಿಷ್ಟು [ಕುವೆಂಪು ಪ್ರತಿಷ್ಠಾನ ಪ್ರಶಸ್ತಿ ಸ್ವೀಕರಿಸಿ]-ದೇವನೂರ ಮಹಾದೇವ

[ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ “ಕುವೆಂಪು ರಾಷ್ಟ್ರೀಯ ಪುರಸ್ಕಾರ-2016” ರನ್ನು ಕುಪ್ಪಳಿಯಲ್ಲಿ 29.12.2016 ರಂದು ಸ್ವೀಕರಿಸುವ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ.]

prashasti

 

ಸಂದರ್ಶಕರೊಬ್ಬರು ನಿಮ್ಮ ಸಾಹಿತ್ಯದ ಬಗ್ಗೆ ಬಂದಿರುವ ವಿಮರ್ಶೆಗಳಲ್ಲಿ ಯಾವುದು ಇಷ್ಟ ಎಂದು ಕೇಳಿದ್ದಕ್ಕೆ ‘ಮಲೆಗಳಲ್ಲಿ ಮದುಮಗಳ ಮೊಮ್ಮಗಳು– ಕುಸುಮಬಾಲೆ’ ಎಂದಿರುವ ಅಭಿಪ್ರಾಯ ಇಷ್ಟ ಅಂದಿದ್ದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿಗೆ ನನ್ನ ಹೆಸರು ಆಯ್ಕೆ ಆಗಿದೆ ಎಂದು ತಿಳಿದ ಕ್ಷಣದ ಜೊತೆಗೆ ಇದೂ ನೆನಪಾಯ್ತು. ಮೊಮ್ಮಗಳಿಗೆ ಹೆತ್ತಮ್ಮನ ಉಡುಗೊರೆ ಅಂತಲೂ ಅನ್ನಿಸಿತು. ಜೊತೆಗೆ ಸಂಕೋಚ ಕಸಿವಿಸಿಯೂ ಆಯ್ತು. ಪ್ರಶಸ್ತಿ ಮಾಹಿತಿಯನ್ನು ಮೊದಲು ನೀಡಿದ ಬಿ.ಎನ್.ಶ್ರೀರಾಮ್‍ಜಿ ಅವರಿಗೆ ‘ಹೆಂಗೂ ಗ್ಯಾರಂಟಿ ಇದೆಯಲ್ಲ, ಸ್ವಲ್ಪ ಅಡ್ವಾನ್ಸ್ ಮಾಡಿ’ ಎಂದು ಹೇಳಿ ಲಘುವಾದೆ.

ಒಂದಕ್ಕೊಂದು ಸಂಬಂಧವಿದೆಯೋ ಇಲ್ಲವೋ ಗೊತ್ತಿಲ್ಲ, ಈಗ ನನ್ನ ಮನಸ್ಸನ್ನು ಆವರಿಸಿಕೊಂಡಿರುವ ಒಂದೆರಡು ಸಂಗತಿಗಳನ್ನಷ್ಟೆ ಹಂಚಿಕೊಳ್ಳುವೆ. ಮೊದಲನೆಯದು- ಇತ್ತೀಚಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆಯ ಮೆರವಣಿಗೆಯ ಫೋಟೊ ಅದು. ಹಳ್ಳಿಹಳ್ಳಿ ಅಲೆಯುತ್ತ ಗ್ರಾಮೀಣ ಪ್ರದೇಶದ ಗರ್ಭಿಣಿ ಮಹಿಳೆ ಮಕ್ಕಳ ಆರೋಗ್ಯಕ್ಕೆ ನೆರವಾಗುತ್ತಾ, ಜೊತೆಗೆ ಸರ್ಕಾರ ಹೇಳುವ ಸರ್ವೆಗಿರ್ವೆ ಮುಂತಾಗಿ ಹತ್ತಾರು ಕೆಲಸ ನಿರ್ವಹಿಸುವ ತಮ್ಮ ಅಲೆದಾಟದ ದುಡಿಮೆಗೆ ತಿಂಗಳಿಗೆ ಕನಿಷ್ಠ ಐದಾರು ಸಾವಿರ ರೂಪಾಯಿಯಾದರೂ ಸಿಗಲಿ ಎಂಬ ಬೇಡಿಕೆಗಾಗಿ ಆ ಮೆರವಣಿಗೆ ನಡೆದಿತ್ತು. ಫರ್ಲಾಂಗುಗಟ್ಟಲೆ ಇದ್ದ ಒಂದು ಸೇತುವೆ ತುಂಬಾ ಚೂರೂ ಜಾಗ ಬಿಡದಂತೆ ತುಂಬಿಕೊಂಡಿದ್ದ ಮೆರವಣಿಗೆ ದೃಶ್ಯ ಆ ಫೋಟೊದಲ್ಲಿತ್ತು. ಆಶಾ ಕಾರ್ಯಕರ್ತೆಯರೆಲ್ಲರೂ ಒಂದೇ ಬಣ್ಣದ ಟೊಮೊಟೊ ಕಲರ್ ಸೀರೆ ತೊಟ್ಟಿದ್ದರು. ಆ ಫೋಟೊ ನೋಡಿ ಅಭಿರುಚಿ ಗಣೇಶ್ ‘ರಸ್ತೆ ಉದ್ದಕ್ಕೂ ಟೊಮೊಟೊ ಹಣ್ಣುಗಳನ್ನು ಚೆಲ್ಲಿದಂತೆ ಕಾಣುತ್ತಿದೆ’ ಅಂದ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬೆಚ್ಚಿದೆ. ಹೌದು, ಆ ರಸ್ತೆ ತುಂಬಾ ಫರ್ಲಾಂಗುಗಳ ಉದ್ದಕ್ಕೂ ರಾಶಿ ರಾಶಿ ಟೊಮೊಟೊ ಹಣ್ಣುಗಳನ್ನು ಚೆಲ್ಲಿದಂತೆಯೇ ಅದಿತ್ತು. ನಮ್ಮ ರೈತರು ಬೆಲೆ ಇಲ್ಲದ್ದಕ್ಕಾಗಿ ರೋಸಿ ಹೋಗಿ ತಾವು ಬೆಳೆದ ಟೊಮೊಟೊಗಳನ್ನು ರಸ್ತೆಗೆ ಸುರಿದು ತಮ್ಮ ಕಿಚ್ಚನ್ನು ಅಭಿವ್ಯಕ್ತಿಸುತ್ತಾರಲ್ಲಾ ಹೆಚ್ಚುಕಮ್ಮಿ ಇದೂ ಅದೇ ರೀತಿ ಕಾಣುತ್ತಿತ್ತು. ಪ್ರಭುತ್ವವು ಬೆಲೆ ಕಳೆದುಕೊಂಡ ತನ್ನ ಪ್ರಜೆಗಳನ್ನು ಬೀದಿಗೆ ಚೆಲ್ಲಿದಂತೆ ಆ ಆಶಾ ಕಾರ್ಯಕರ್ತೆಯರ ಮೆರವಣಿಗೆ ಕಾಣುತ್ತಿತ್ತು.

ಇದೇ ರೀತಿ ಇನ್ನೊಂದು – ಭಾರತದ ಮೂಲನಿವಾಸಿಗಳು ತಮ್ಮ ವಾಸಸ್ಥಾನವಾದ ಕಾಡಿನಿಂದಲೂ ಆಚೆ ದಬ್ಬಿಸಿಕೊಂಡು ನೆಲೆ ಕಾಣುವ ಆಸೆಯಿಂದ ಕೊಡಗಿನ ದಿಡ್ಡಳ್ಳಿ ಬಳಿ ಜೋಪಡಿ ಕಟ್ಟಿಕೊಂಡಿದ್ದರೆ ಅವುಗಳನ್ನು ಜಿಲ್ಲಾಡಳಿತ ಜೆಸಿಬಿಯಿಂದ ನೆಲಸಮ ಮಾಡಿಸಿಬಿಟ್ಟಿತ್ತು. ಈ ದೇಶದ ಮೂಲನಿವಾಸಿಗಳೇ ಬೀದಿಗೆ ಎಸೆಯಲ್ಪಟ್ಟರು. ಈ ಭೂಮಿ ಮೇಲೆ ಮೂಲನಿವಾಸಿಗಳೆಂದರೆ, ನಗರ ಆಟವಾಡುವ ಕಾಲ್ಚೆಂಡಾಗಿ ಬಿಟ್ಟಿದ್ದಾರೆ. ಈ ಪ್ರಪಂಚದ ಕಣ್ಣಿಗೆ ಮೂಲನಿವಾಸಿಗಳೆಂದರೆ ಕಾಡಿನಲ್ಲಿ ವಾಸ ಮಾಡುವ ಮನುಷ್ಯರಿಗೆ ಹತ್ತಿರದ ಯಾವುದೋ ಪ್ರಾಣಿ ಪ್ರಬೇಧ ಎಂಬಂತೆ ಕಾಣುತ್ತಿದೆಯೇ? ನಮ್ಮ ಸೂಕ್ಷ್ಮತೆ, ಸಂವೇದನೆಗಳಿಗೆ ಏನಾಗಿದೆ?
ಹಾಗೆಯೆ ಇನ್ನೂ ಬಗೆಹರಿಯದ, ಕಿತ್ತು ತಿನ್ನುತ್ತಿರುವ ಹಳೆನೋಟು ಹೋಗಿ ಹೊಸ ನೋಟು ತಂದ ಅವಾಚಿತರ ಹೆಚ್ಚುಕಮ್ಮಿ ವಾರಾನುಗಟ್ಟಲೆ ಭಾರತ್ ಬಂದ್‍ನಂತೆಯೇ ಇತ್ತು. ಸಂಜಯ್‍ಗಾಂಧಿ ಕಾರ್ಯವೈಖರಿಯ ಇದರ ಲಾಭ ನಷ್ಟ ಈಗ ಬೇಡ, ಇದಿರಲಿ. ದಕ್ಷಿಣಅಮೆರಿಕಾದ ವೆನಿಜುವೆಲಾ ದೇಶದಲ್ಲೂ ಇತ್ತೀಚೆಗಷ್ಟೇ ಕರೆನ್ಸಿ ಬದಲಾವಣೆ ಆಯ್ತು. ಅಲ್ಲಿ ಕ್ಷೋಭೆ ಉಂಟಾಯ್ತು. ಹತ್ತಾರು ಜನರೂ ಸತ್ತರು. ನಿಯಂತ್ರಿಸಲಾರದೆಯೋ ಅಥವಾ ತನ್ನ ಪ್ರಜೆಗಳ ಜೀವಕ್ಕೆ ಬೆಲೆ ಕೊಟ್ಟೋ ಅದೇನೇ ಇರಲಿ ವೆನಿಜುವೆಲಾ ಅಧ್ಯಕ್ಷ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾನೆ. ನೆನಪಿರಲಿ, ಆ ದೇಶದ ಅಧ್ಯಕ್ಷ ಸರ್ವಾಧಿಕಾರಿ. ಆದರೆ ಭಾರತದಲ್ಲಿ ಜನ ನೋಟು ಬದಲಾವಣೆ ಸಂಕಷ್ಟವನ್ನು ಸಹಿಸಿಕೊಂಡರು. ನೂರಾರು ಜನ ಕ್ಯೂನಲ್ಲಿ, ಬ್ಯಾಂಕ್‍ನಲ್ಲಿ ನಿಂತು ಜೀವ ಕಳೆದುಕೊಂಡರು.ಕೆಲವರು ಇದನ್ನು ಒಳ್ಳೆ ಸಾವು ಅಂದುಕೊಂಡಿರಲೂಬಹುದು. ಒಟ್ಟಿನಲ್ಲಿ ಭಾರತೀಯರು ಇದನ್ನು ಸಹಿಸಿಕೊಂಡರು. ನೆನಪಿರಲಿ, ಭಾರತದ ಪ್ರಧಾನಿ ಸರ್ವಾಧಿಕಾರಿ ಅಲ್ಲ; ಜನಪ್ರತಿನಿಧಿ. ತನ್ನ ಪ್ರಜೆಗಳು ತನ್ನ ನಿರ್ಧಾರದ ಕಾರಣವಾಗಿ ಜೀವ ಕಳೆದುಕೊಂಡಿದ್ದನ್ನು ದೇಶಸೇವೆಯೆಂದು ಅವರು ಭಾವಿಸಿದಂತೆ ಕಾಣುತ್ತದೆ. ಇದು ಅರ್ಥವಾಗದೆ ಒದ್ದಾಡುತ್ತಿರುವೆ.

ಇಲ್ಲಿ – ಭಾರತ ಯಾವುದನ್ನು ಸಹಿಸಿಕೊಳ್ಳುತ್ತದೆ, ಯಾವುದನ್ನು ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಗಮನವಿಟ್ಟು ನೋಡುತ್ತಿದ್ದೇನೆ ಅಷ್ಟೆ. ನಮಗೆ ಅನ್ಯಾಯ ಅನ್ಯಾಯ ಅನ್ನಿಸುವುದಿಲ್ಲ, ತಾರತಮ್ಯ ತಾರತಮ್ಯ ಅನ್ನಿಸುವುದಿಲ್ಲ. ಛಿದ್ರತೆ ಛಿದ್ರತೆ ಅನ್ನಿಸುತ್ತಿಲ್ಲ. ಇಂದಿನ ಎಳೆಯ ಮಕ್ಕಳ ಪ್ರಾಥಮಿಕ ಶಿಕ್ಷಣ ಪದ್ಧತಿ ನೋಡಿದರೂ ಅದೂ ಕೂಡ ಛಿದ್ರಗೊಂಡ ಭಾರತವನ್ನು ಇನ್ನಷ್ಟು ಛಿದ್ರಗೊಳಿಸುವಂತೆಯೆ ಇದೆ. 1963-64ರಲ್ಲೆ ಕೊಠಾರಿ ಶಿಕ್ಷಣ ಆಯೋಗವು–“ಸಮಾನ ಶಿಕ್ಷಣ ಅನುಷ್ಠಾನ ಮಾಡದಿದ್ದರೆ, ಶಿಕ್ಷಣವೆ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಹೆಚ್ಚಿಸಿ ಮತ್ತಷ್ಟು ಕಂದರ ಉಂಟು ಮಾಡುತ್ತದೆ” ಎಂದಿತ್ತು. ಈ ಮಾತಿಗೆ ಈಗ 52ನೇ ವರ್ಷ ನಡೆಯುತ್ತಿದೆ. ಈ ಮಾತಿಗೆ ನಾವು ಬೆಳ್ಳಿಹಬ್ಬ ಆಚರಿಸಬೇಕಾಗಿತ್ತು. ಆಚರಣೆಯಲ್ಲಿ ಮುಂದು ನಾವು. ನಡೆ ಇಲ್ಲದ್ದಕ್ಕಾಗಿ ಇರಬೇಕು. ಇಂದಿನ ನಮ್ಮ ಪ್ರಾಥಮಿಕ ಶಿಕ್ಷಣ ಪದ್ಧತಿಯು ತನ್ನ ಎಳೆಯ ಮಕ್ಕಳ ಶಿಕ್ಷಣದಲ್ಲೆ ಪಂಕ್ತಿಭೇದ ಮಾಡುತ್ತಾ ಇಲ್ಲೆ ತಾರತಮ್ಯದ ಜಾತಿ ವರ್ಗ ಗ್ರಾಮ – ಹೀಗೆ ಭೇದಭಾವದ ಪಂಚವರ್ಣ ಶಿಕ್ಷಣ ಪದ್ಧತಿ ಅಳವಡಿಸಿಕೊಂಡು ಎಳೆಯ ಮಕ್ಕಳನ್ನು ಪಳಗಿಸುತ್ತಿದೆ. ಅವರು ಕಲಿತು ದೊಡ್ಡವರಾದ ಮೇಲೆ ಜಾತಿ ವರ್ಗ ಗ್ರಾಮ ಭೇದಭಾವಗಳಿಗೆ ಹೇಗೆ ತಾನೆ ಸ್ಪಂದಿಸುತ್ತಾರೆ? ಅವರು ಕಟ್ಟಬಹುದಾದ ನಾಡು ಯಾವುದು? ಜಗತ್ತಿನ ಯಾವ ಸ್ವತಂತ್ರ ರಾಷ್ಟ್ರವೂ ತನ್ನ ಮಕ್ಕಳ ಶಿಕ್ಷಣದಲ್ಲಿ ಹೀಗೆ ಭೇದಭಾವ ಮಾಡಿರಲಾರದು. ಹೀಗೇನೇ ಮಾತೃಭಾಷಾ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ವಿಚಾರವೂ ಕೂಡ. ಕುಪ್ಪಳಿಯಲ್ಲಿ ಆಲಿಸಿದರೆ ಇಲ್ಲಿ ಹುಟ್ಟಿದ ಶಿಶುವೊಂದು ಮಹಾಕವಿಯಾಗಿ ‘ಕನ್ನಡವೆನೆ ಕುಣಿದಾಡಾವುದೆನ್ನೆದೆ’ ಎಂದು ನುಡಿದಿದ್ದು ಕೇಳಿಸಲೂಬಹುದು. ಆದರೆ ಇಂದು ಕನ್ನಡ ಕನ್ನಡಿಗರ ಕಾಲ್ತುಳಿತಕ್ಕೇನೆ ಸಿಕ್ಕಿ ಅದರ ನರಳಾಟ ಮಾತ್ರ ಕೇಳಿಸುತ್ತಿದೆ.

ಸಂವಿಧಾನದಲ್ಲಿ–’India is a Federal Union of State’ ಎಂದು ಹೇಳಿ ಒಕ್ಕೂಟ (Federal) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜೊತೆಗೇ 22 ಭಾರತೀಯ ಭಾಷೆಗಳನ್ನು ಅಧಿಕೃತ ಎಂದು ಗುರುತಿಸಲಾಗಿದೆ. ಇವು ರಾಜ್ಯ ಭಾಷೆಗಳು. ಆಯಾಯ ರಾಜ್ಯದೊಳಗೆ ಪ್ರಾಬಲ್ಯ ಪಡೆದಿರುವ ಭಾಷೆ ಅಧಿಕೃತ ಭಾಷೆಯಾದರೆ ಆ ರಾಜ್ಯದೊಳಗಿರುವ ಇತರ ಭಾಷೆ, ಉಪಭಾಷೆಗಳನ್ನು ಮಾತೃಭಾಷೆಗಳು ಎಂದು ಸಂವಿಧಾನ ಗುರುತಿಸಿದೆ. ಒಂದು ರಾಜ್ಯದೊಳಗೆ ಇರುವ ಪ್ರಬಲ ಅಧಿಕೃತ ಭಾಷೆಯು ತನ್ನ ರಾಜ್ಯದೊಳಗಿರುವ ಇತರ ಭಾಷೆ, ಉಪಭಾಷೆಗಳ ಮೇಲೆ ದಬ್ಬಾಳಿಕೆ ಮಾಡಬಾರದೆಂಬ ಎಚ್ಚರವಹಿಸಿ – ಅಧಿಕೃತವಲ್ಲದ ಭಾಷೆಗಳಿಗೆ ಮಾತೃಭಾಷೆಗಳು ಎಂದು ಸಂವಿಧಾನ ಪರಿಗಣಿಸಿದೆ. ಮಾತೃಭಾಷಾ ಮಾಧ್ಯಮದ ತೀರ್ಪು ನೀಡುವಾಗ ಸಂವಿಧಾನಕರ್ತರ ಆ ವಿವೇಕ ವಿವೇಚನೆಗಳನ್ನು ಮನಗಾಣಬೇಕಾಗಿತ್ತು. ಆದರೆ ನಮ್ಮ ಉಚ್ಛ ನ್ಯಾಯಲಯದ ಉಚ್ಛ ನ್ಯಾಯಾಧೀಶರುಗಳು ಅದನ್ನೇ ದುರುಪಯೋಗಪಡಿಸಿಕೊಂಡು ಮಾತೃಭಾಷಾ ಹೆಸರಲ್ಲೆ ಮಾತೃದ್ರೋಹ ಮಾಡಿಬಿಟ್ಟರು. ತೀರ್ಪು ನೀಡುವಾಗ ಸಂವಿಧಾನದ ಆಶಯದ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯಲ್ಲಿ ರಾಜ್ಯಭಾಷೆ ಹಾಗೂ ಮಾತೃಭಾಷೆಗಳನ್ನು ಪರಿಗಣಿಸಲಿಲ್ಲ. ಇನ್ನೂ ದುರಂತವೆಂದರೆ ಯಾರಿಗೂ ಅವರವರ ಮಾತೃಭಾಷೆ ಅವರವರಿಗೆ ಬೇಡವಾಗಿದೆ! ಈ ದುರಂತವೂ ನಮಗೆ ದುರಂತ ಅನ್ನಿಸಲಿಲ್ಲ. ಜಗತ್ತಿನ ಯಾವ ಸ್ವತಂತ್ರ ದೇಶವೂ ತನ್ನ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡೆಗಣಿಸಿ ಗುಲಾಮಗಿರಿ ಭಾಷಾ ನೀತಿ ಅನುಸರಿಸಿರಲಾರದು. ನಾವು ಸ್ವಾತಂತ್ರ್ಯ ಪಡೆದಿದ್ದೇವೋ ಇಲ್ಲವೊ ನೋಡಿಕೊಳ್ಳಬೇಕಾಗಿದೆ.

ಹಾಗೇ ಈಗೀಗ ಇತ್ತೀಚಿನ ಭಾರತದ ಪಿಡುಗು – ನಗರ ಪ್ರದೇಶಗಳ ಸುತ್ತಮುತ್ತ ಜಾತಿ ಟೌನ್‍ಷಿಪ್‍ಗಳು ಹೆಚ್ಚಾಗುತ್ತಿವೆ. ಆಯಾ ಜಾತಿಯವರು ಇತರರೊಡನೆ ಸೇರಿ ಬೆರೆಯದೆ ಒಂದು ಕಡೆಯೇ ಬದುಕುವ ಪ್ರವೃತ್ತಿ ಹೆಚ್ಚುತ್ತಿದೆ. ವಿಪ್ರರ ಟೌನ್‍ಷಿಪ್, ಲಿಂಗಾಯಿತರ ಟೌನ್‍ಷಿಪ್ ಇತ್ಯಾದಿ. ಈ ರೋಗ ಮುಂದೆ ಇತರರಿಗೂ ಹರಡಬಹುದು. ನಾವಂದುಕೊಂಡಿದ್ದೋ- ಭಾರತೀಯರು ವಿದ್ಯಾವಂತರಾದರೆ ಹಾಗೂ ಆರ್ಥಿಕವಾಗಿ ಸದೃಢರಾದರೆ ಜಾತಿಯ ಗೂಡುಗಳಿಂದ ಹೊರಬಂದು ಪ್ರತ್ಯೇಕತೆ ಕರಗಬಹುದು ಅಂತ. ಆದರೆ ಈಗ ಹೆಚ್ಚಾಗುತ್ತಿರುವ ಜಾತಿ ಟೌನ್‍ಷಿಪ್ ಹಾವಳಿಯು ಜಾತಿಯನ್ನು ಘನೀಕೃತವಾಗಿಸುತ್ತಿದೆ. ಇದನ್ನು ಎಲ್ಲರೂ ಸಹಜ ಅಂದುಕೊಂಡು ಬಿಟ್ಟಿದ್ದೇವೆ! ಇದು ಭಾರತ ಮತ್ತೆ ಛಿದ್ರತೆಯ ಕಡೆಗೆ ಇಡುತ್ತಿರುವ ಹಿಂದ್ಹೆಜ್ಜೆ ಎಂದು ನಮಗೆ ಅನ್ನಿಸುತ್ತಿಲ್ಲ ಯಾಕೆ? ಇಂಥವು ಸಹಿಸಿಕೊಳ್ಳುತ್ತೇವೆ. ಆದರೆ ಎಲ್ಲಿ ಸಹಿಸಿಕೊಳ್ಳಬೇಕೋ ಅಲ್ಲಿ ಅಸಹನೆ ಭುಗಿಲೇಳುತ್ತದೆ. ಉದಾಹರಣೆಗೆ ಸಮಾಜ ಒಳಗೊಳ್ಳದೆ ಊರಾಚೆ ಬದುಕುವ ಅವಮಾನಿತ ಅಸ್ಪೃಶ್ಯರು, ಕಾಡಲ್ಲಿ ಜೀವಿಸುತ್ತಿರುವ ನಮಗೆಲ್ಲಾ ಮೂಲನಿವಾಸಿಗಳಾದ ಆದಿವಾಸಿಗಳು, ಜೊತೆಗೆ ಊರನ್ನು ಸೇರದೆ ಅಲೆದಾಡುವ ಅಲೆಮಾರಿಗಳನ್ನು ಒಳಗೊಂಡು ಐಕ್ಯ ಭಾರತವನ್ನು ಕಟ್ಟುವತ್ತ ಇರುವ ಒಂದು ಸಣ್ಣ ಹೆಜ್ಜೆ ಮೀಸಲಾತಿಯ ಬಗ್ಗೆ ಇಲ್ಲಿ ಅಸಹನೆ ಕುದಿಯುತ್ತಿದೆ. ಭಾರತದ ಜಾತ್ಯಸ್ಥ ಮನಸ್ಸು ಎಲ್ಲಿ ಸಹಿಸಿಕೊಳ್ಳಬಾರದೋ ಅಲ್ಲಿ ಸಹಿಸಿಕೊಳ್ಳುತ್ತದೆ, ಆದರೆ ಎಲ್ಲಿ ಸಹಿಸಿಕೊಳ್ಳಬೇಕೋ ಅಲ್ಲಿ ಅಸಹನೆ. ಭಾರತಕ್ಕೆ ತಗುಲಿರುವ ರೋಗವಾದರೂ ಯಾವುದು?

ಭಾರತವು ತನ್ನ ಸಂವೇದನಾಹೀನತೆಯ ಕುಷ್ಠ ಲಕ್ಷಣವನ್ನೇ ಪರಂಪರೆ ಸಂಸ್ಕೃತಿ ಅಂತ ಅದರ ಸುತ್ತ ಸುತ್ತುತ್ತಿದೆ. ಇಂಥಲ್ಲಿ ಕುಟುಕು ಜೀವದಲ್ಲಿ ಉಸಿರಾಡುತ್ತಿರುವ ಭಾರತದ ಸಂವೇದನಾಶೀಲ ಸಂಸ್ಕೃತಿ ಪರಂಪರೆಗಳನ್ನು ನಮ್ಮ ಉಳಿವಿಗೆ ಉಳಿಸಿಕೊಳ್ಳಬೇಕಾಗಿದೆ. ಹೇಗೆ? ಕೆಲವು ದಿನಗಳ ಹಿಂದೆ ವಡ್ಡಗರೆ ಚಿನ್ನಸ್ವಾಮಿ ಜತೆ ಮಾತಾಡ್ತ ಅವರ ಲೇಖನವೊಂದರಲ್ಲಿ ‘ಸುಸ್ಥಿರ ಕೃಷಿ’ ಪದ ಬಳಸಿದ್ದಕ್ಕೆ ಆಕ್ಷೇಪಣೆ ಮಾಡಿದೆ. ಯಾವುದು ಸ್ಥಿರ ಅಂತ ಕೇಳಿದೆ. ಇಂಗ್ಲಿಷ್‍ನ sustainable  ಪದದ ಅಳವಡಿಕೆ ಸುಸ್ಥಿರ. ಅಲ್ಲಿನ ಅರ್ಥದಲ್ಲೂ ವ್ಯತ್ಯಾಸವಿದೆ. ಬಾಳಿಕೆ, ತಾಳಿಕೆ ಕನ್ನಡ ಪದಗಳೇ sustainableಗೆ ಹತ್ತಿರವಾಗಿದೆ. ಆತ ಮುಗ್ಧವಾಗಿ ಕೇಳಿಸಿಕೊಳ್ಳುತ್ತಿದ್ದುದರಿಂದ ನಾನು ಅಷ್ಟಕ್ಕೆ ನಿಲ್ಲಿಸದೆ, ಇರಲಿ ಅಂತ ಸ್ವಲ್ಪ ನನ್ನ ವ್ಭೆದಾಂತ ಜ್ಞಾನವನ್ನು ಪ್ರದರ್ಶಿಸಿದೆ. ಭಾರತದ ಆಲೋಚನಾ ಕ್ರಮದಲ್ಲಿ – ಸ್ಥಿರ (Permanent) ಪರಮ [Absolute) ಪರಿಕಲ್ಪನೆಗಳೂ ಒಂದು ಕಡೆ ಇದೆ. ಇನ್ನೊಂದು ಕಡೆ–ಅನಿತ್ಯ (Impermanent) ಎಂಬ ಶ್ರಮಣ ಆಲೋಚನಾ ಕ್ರಮವೂ ಇದೆ. ವಿಪಶ್ಯನ ಧ್ಯಾನ ಎಂದರೆ ಸಂವೇದನೆಗಳನ್ನು ಅನಿತ್ಯ ಅಂತ ನೋಡುವಿಕೆ (witness] ಆಗಿದೆ. ಸ್ಥಿರ (Permanent) ಅಂತ ನೋಡುವುದು ವೈದಿಕ, ಹಾಗೇ ಅನಿತ್ಯ (Impermanent) ಅಂತ ನೋಡುವುದು ಅವೈದಿಕ ಎಂದಿದ್ದೆ.

ಅದು ಯಾಕೋ ಇಲ್ಲಿಗೆ ಕನೆಕ್ಟ್ ಆಗುತ್ತಿದೆ. ಪರಮ, ಸ್ಥಿರ ಈ ಆಲೋಚನಾಕ್ರಮಗಳಿಂದಾಗಿ ಭಾರತದ ಮನಸ್ಸು ಬದಲಾವಣೆಗೆ ಒಗ್ಗದೆ ಒದ್ದಾಡುತ್ತಿದೆಯೆ? ವೇದಾಂತ ಹೇಳುತ್ತ, ಬದನೆಕಾಯಿ ತಿನ್ನುತ್ತ ನಮ್ಮ ಸಂವೇದನೆ ಸೂಕ್ಷ್ಮತೆಗಳಿಗೆ ನಾವೇ ನಮ್ಮ ಕೈಯ್ಯಾರ ಹೊಗೆ ಹಾಕುತ್ತಾ ಅದನ್ನು ನೋಡದವರಂತೆ ಇದ್ದೇವೆ. ಇಂದಿನ ಜಾತಿಟೌನ್‍ಷಿಪ್ ಇತ್ಯಾದಿ ಇತ್ಯಾದಿ ಪ್ರತ್ಯೇಕ [Impermanent) ತೆ ತಾರತಮ್ಯಗಳನ್ನು ಪ್ರಾಣ ಎಂಬಂತೆ ಉಳಿಸಿಕೊಳ್ಳುತ್ತಿರುವುದಕ್ಕೆ ಇದೂ ಕಾರಣವಿರಬಹುದೆ?

ಹೀಗೆಯೇ ಭಾರತದ ಹಣೆಬರಹವೂ ಕೂಡ. ಭಾರತದಲ್ಲಿ ಹುಟ್ಟಿದಾಗಲೇ ಹುಟ್ಟಿದವರ ಹಣೆಬರಹ ನಿರ್ಧರಿಸಲ್ಪಟ್ಟಿರುತ್ತದೆ. ಅವರು ಸಮೂಹ ಮಂದೆಯಂತೆ ಸುತ್ತುತ್ತಾ ಜೀವಿಸುತ್ತಾರೆ. ಕೆ.ಸಿ.ರಘು ‘ಹಣೆಬರಹ ಎಂಬುದು ಆಧುನಿಕ ಜಗತ್ತಿನ ದೊಡ್ಡ ಜೋಕ್’ ಎಂಬ ಲೇಖನವೊಂದರಲ್ಲಿ– “ನಮ್ಮ ಗುಣಾಣುಗಳ ವ್ಯವಹಾರ ಕೂಡ ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಕಾರ್ಯರೂಪಕ್ಕೆ ತರಬಹುದು…. ನಮ್ಮ ಜೀನ್ಸ್ ಗಳ (ವಂಶವಾಹಿ) ಮೇಲೊಂದು ಹೊದಿಕೆ ಇದೆ. ಇದು ವ್ಯಕ್ತಿಗೆ ಸಮಾಜವಿದ್ದಂತೆ…. ಹಾಗಾಗಿ ಒಳಜಗತ್ತಿನ ಮಾರಕ ಮಾರ್ಪಾಟಿಗೆ ಹೊರಜಗತ್ತಿನ ಸಂಬಂಧ ಅಂಟಿಕೊಂಡಿದೆ…” ಎಂದು ನರವಿಜ್ಞಾನದ ಅಧ್ಯಯನಗಳನ್ನು ಉಲ್ಲೇಖಿಸಿ ಮುಂದೆ ಹೇಳುತ್ತಾರೆ – “ಸಮಾಜದಲ್ಲಿ ಹೂತುಹೋಗಿರುವ ಗೊಡ್ಡು ಸಂಪ್ರದಾಯ, ಪೂರ್ವಗ್ರಹಪೀಡಿತ ನಂಬಿಕೆ, ರಕ್ತಗುಣ, ಹುಟ್ಟುಗುಣ, ಹಣೆಬರಹ, ನಿತ್ಯನಾರಕಿಗಳು… ಮುಂತಾದ ತಪ್ಪು ಪರಿಕಲ್ಪನೆಯ ಕತ್ತಲನ್ನು ಹೊರದಬ್ಬಲು ಈ ರೀತಿಯ ವೈಜ್ಞಾನಿಕ ಬೆಳಕು ನಮ್ಮ ಸಹಾಯಕ್ಕೆ ಬರುತ್ತಿದೆ” ಎಂದು ಬೆಳಕು ಚೆಲ್ಲುತ್ತಾರೆ. ಬಾಲಂಗೋಚಿ ಇಲ್ಲದ ಪಟದಂತೆ ಬಕಾಸುರ ಬಂಡವಾಳಶಾಹಿ ಕಂಪನಿಗಳ ಕೈಗೆ ಸಿಕ್ಕು ತೂರಾಡುತ್ತಿರುವ ಭಾರತವು ಪ್ರೀತಿ ಸಹನೆ ಸಮಾನತೆ ಕಡೆಗೆ ಚಲಿಸುವಂತಾಗಲು, ನಾವೂ ಬದಲಾಗಬಹುದು, ನಾವೂ ಸಂವೇದನಾಶೀಲರಾಗಬಹುದು, ಈ ಬದಲಾವಣೆ ನಮ್ಮ ಕೈಯಲ್ಲೂ ಇದೆ- ಇದು ನಮಗೆ ಮೊದಲು ಅರಿವಾಗಬೇಕಾಗಿದೆ.

ಈಗ ಎಲ್ಲಿಂದ ಆರಂಭಿಸೋಣ? ನಿರಂಕುಶಮತಿಗಳಾಗಿ –ಇಲ್ಲಿಂದ.