ಬುದ್ಧಿಜೀವಿಗಳನ್ನು ದೂರುವುದರಿಂದ ಹೊಸ ಚಿಂತನೆ ಮೂಡುವುದೇ?-ಪೃಥ್ವಿ ದತ್ತ ಚಂದ್ರ ಶೋಭಿ

 

intellectual

‘ಬುದ್ಧಿಜೀವಿಗಳು ಯಾವಾಗಲೂ ಹಿಂದೂ ವಿರೋಧಿಗಳು’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಳೆದ ಭಾನುವಾರದ ‘ಪ್ರಜಾವಾಣಿ’ಯ ಸಂದರ್ಶನದಲ್ಲಿ ಹೇಳಿದ್ದಾರೆ. ‘ಉಡುಪಿ ಚಲೋ’ ವಿವಾದದ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಅವರು ಆಡಿರುವು­ದರಿಂದ ಬಹುಶಃ ಕರ್ನಾಟಕದ ಪ್ರಗತಿಪರ ಬುದ್ಧಿಜೀವಿಗಳನ್ನೇ ಅವರ ಉದ್ದೇಶಿಸಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ. ಬುದ್ಧಿಜೀವಿಗಳ ವಿರುದ್ಧ ವಿಶ್ವೇಶತೀರ್ಥರು ಕಟುವಾಗಿ ಮಾತನಾಡಿರುವುದು ಇದೇ ಮೊದಲಲ್ಲ. ಹಿಂದೂ ಸಮಾಜವು ಒಟ್ಟಾಗಿರುವುದು ಬುದ್ಧಿಜೀವಿಗಳಿಗೆ ಒಪ್ಪಿಗೆಯಿಲ್ಲ, ಅದರೊಳಗೆ ಭೇದ ಬಿತ್ತುತ್ತಲೆ ಇರುತ್ತಾರೆ ಎನ್ನುವ ಅರ್ಥದ ಮಾತುಗಳನ್ನು ಅವರು ಪದೇ ಪದೇ ಆಡಿದ್ದಾರೆ.

ಬೌದ್ಧ ಮತ್ತು ಕ್ರಿಶ್ಚಿಯನ್ ಮತಗಳಿಗೆ ಸೇರುವಂತೆ ಹಿಂದೂಗಳನ್ನು ಬುದ್ಧಿಜೀವಿಗಳು ಪ್ರಚೋದಿಸಿದ್ದಾರೆ ಎಂದೂ ಅವರು ಈ ಬಾರಿಯ ಸಂದರ್ಶನದಲ್ಲಿ ಹೇಳಿದ್ದಾರೆ.ಬಾಬಾಸಾಹೇಬ್ ಅಂಬೇಡ್ಕರರನ್ನು ಅನುಸರಿಸಿ, ಬೌದ್ಧಮತವನ್ನು ಸೇರುವ ನಡೆಯನ್ನು ಕರ್ನಾಟಕದ ದಲಿತ ಚಳವಳಿಯು ಸಾರ್ವಜನಿಕವಾಗಿಯೇ ಅಳವಡಿಸಿಕೊಂಡಿದೆ. ಕ್ರಿಶ್ಚಿಯನ್ ಮತವನ್ನು ಸೇರುವಂತೆ ಯಾವ ಬುದ್ಧಿಜೀವಿಗಳು ಬಹಿರಂಗವಾಗಿ ಕರೆನೀಡುತ್ತಿದ್ದಾರೊ ನನಗೆ ತಿಳಿಯದು. ಆದರೂ ಸಹ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ವಿಶ್ವೇಶತೀರ್ಥರು ಯಾವುದೋ ಗುಪ್ತ ವಿದ್ಯಮಾನವನ್ನು ಬಹಿರಂಗಪಡಿಸುತ್ತಿಲ್ಲ. ಮೇಲ್ನೋಟಕ್ಕೆ ವಿಶ್ವೇಶತೀರ್ಥರ ಆರೋಪಗಳು ಸರಿಯೆನ್ನಿಸಬಹುದು. ಆದರೆ ನನಗನ್ನಿಸುವಂತೆ ಅವರು ಬಣ್ಣಿಸುವ ವಾಸ್ತವ ಒಂದು ಸೀಮಿತ ಅರ್ಥದಲ್ಲಿ ಮಾತ್ರ ನಿಜ.

ವಿಶ್ವೇಶತೀರ್ಥರು ಗುರುತಿಸುತ್ತಿರುವ ಬುದ್ಧಿಜೀವಿಗಳು ಆಧುನಿಕ ಭಾರತೀಯ ಸಮಾಜದಲ್ಲಿ ಮಹತ್ತರವಾದ ಬದಲಾವಣೆ­ಗಳಾಗಬೇಕಿದೆ ಎಂದು ನಂಬಿರುವವರು. ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ವೈಯಕ್ತಿಕ ನೆಲೆಯಲ್ಲಿ ಗಣನೀಯವಾಗಿ ಭಾರತೀಯ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಡೆಯಬೇಕೆನ್ನುವ ಹಂಬಲ­ವನ್ನು ಹೊಂದಿರುವವರು.ಈ ಆಶಯದ ಸಾಧನೆಗೆ ಹಿಂದೂ ಧರ್ಮದ ಆಚಾರ, ವಿಚಾರ ಮತ್ತು ನಂಬಿಕೆಗಳು ಅಡ್ಡ ಬರುವುದಾದರೆ, ಅವುಗಳಲ್ಲಿಯೂ ಬದಲಾವಣೆ­ಗಳಾಗಬೇಕು ಎಂದು ವಾದಿಸು­ವವರು. ಇದರಲ್ಲಿ ಸಮಸ್ಯೆ­ಯೇನೂ ನನಗೆ ಕಾಣುವುದಿಲ್ಲ.ಬದಲಾವಣೆಗಳ ಅಗತ್ಯವಿದೆ, ಸುಧಾರಣೆಯಾಗಬೇಕು ಎನ್ನುವ ಬುದ್ಧಿಜೀವಿಗಳು ಎಲ್ಲರೂ ಹಿಂದೂ ಧರ್ಮವನ್ನು ಒಡೆಯಬೇಕೆನ್ನುವ ನಿಲುವಿನ ಪ್ರತಿಪಾದಕರಲ್ಲ. ಅಂದರೆ ನನ್ನ ಮಾತಿನ ಅರ್ಥ ಸರಳವಾದುದು. ಬೌದ್ಧಿಕ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಭಾರತದ (ಅಥವಾ ಕರ್ನಾಟಕದ) ಬುದ್ಧಿಜೀವಿಗಳ ಸಮುದಾಯವು ಹಿಂದೂ ಸಮಾಜದ ವಿಚಾರವನ್ನೂ ಸೇರಿದಂತೆ ಯಾವುದೆ ವಿಷಯದ ಬಗ್ಗೆಯೂ ಒಮ್ಮತದ ಅಭಿಪ್ರಾಯವನ್ನು ಹೊಂದಿಲ್ಲ.

ಹಿಂದೂ ಧರ್ಮದ ಬಗ್ಗೆ ಭಾರತದ ದಾರ್ಶನಿಕ ಚಿಂತಕರು ಮತ್ತು ಬುದ್ಧಿಜೀವಿಗಳು ಮೂರು ಬಗೆಯ ನಿಲುವುಗಳನ್ನು ತಳೆಯುತ್ತಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸನಾತನ ಹಿಂದೂ ಧರ್ಮಕ್ಕೆ ದೊಡ್ಡ ಪ್ರಮಾಣದ ಸುಧಾರಣೆಗಳ ಅಗತ್ಯವಿಲ್ಲ ಎಂದೇ ವಾದಿಸುವ ಸಂಪ್ರದಾಯವಾದಿಗಳು ಮೊದಲ ಗುಂಪಿನವರು. ಇವರಿಗಿಂತ ಭಿನ್ನವಾಗಿ ಆಲೋಚಿಸುವ ಸುಧಾರಕರ ದೊಡ್ಡ ಗುಂಪೂ ಭಾರತದಲ್ಲಿದೆ.ಆಧುನಿಕ ಜಗತ್ತಿನ ಹೊಸ ಮೌಲ್ಯಗಳನ್ನು ಒಪ್ಪಿಕೊಂಡಾಗ ಹಿಂದೂ ಧರ್ಮದಲ್ಲಿ ದೊಡ್ಡ ಪ್ರಮಾಣದ ಸುಧಾರಣೆಗಳು ಆಗಬೇಕಾದ ಅಗತ್ಯವಿದೆ, ಅದನ್ನು ಮಾಡಲು ಸಹ ಸಾಧ್ಯ ಎಂದು ಇವರು ನಂಬುತ್ತಾರೆ. ಇವರುಗಳ ಪೈಕಿ ದಯಾನಂದ ಸರಸ್ವತಿಯವರು, ಸ್ವಾಮಿ ವಿವೇಕಾನಂದರು, ಗೋಖಲೆಯಂತಹವರು ಇದ್ದಾರೆ. ಆಧುನಿಕ ಭಾರತದ ಸಂದರ್ಭದಲ್ಲಿ ಈ ಎರಡನೆಯ ಗುಂಪಿನವರೆ ಬಹುಸಂಖ್ಯಾತರು.

ಈ ಎರಡೂ ಗುಂಪುಗಳಿಗಿಂತ ಭಿನ್ನವಾಗಿ ಚಿಂತಿಸುವ ಮೂರನೆಯ ಗುಂಪು ಸಹ ಇದೆ. ಈ ಗುಂಪಿನವರು ಹಿಂದೂ ಧರ್ಮ ಮತ್ತು ಜಾತಿ ಪದ್ಧತಿಗಳ ಅಳಿವಾಗದೆ ನವಭಾರತದ ನಿರ್ಮಾಣ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ನಿಲುವನ್ನು ತಳೆಯುತ್ತಾರೆ. ಇಂತಹ ಅಭಿಪ್ರಾಯವನ್ನು ಹೊಂದಿರುವವರಲ್ಲಿ ಡಾ. ಲೋಹಿಯಾ ಮತ್ತು ಡಾ. ಅಂಬೇಡ್ಕರ್ ಪ್ರಮುಖರು ಎನ್ನುವುದು ಹೊಸ ವಿಷಯವೂ ಅಲ್ಲ, ಆಶ್ಚರ್ಯದ ಮಾತೂ ಅಲ್ಲ.ಗಮನಿಸಿ. ಹೀಗೆ ಹಿಂದೂ ಧರ್ಮವನ್ನು ಕಟುವಾಗಿ ವಿಮರ್ಶಿಸುವವರು, ಹಿಂದೂ ಧರ್ಮವು ನಾಶವಾಗಬೇಕು ಎನ್ನುವವರು ಸಹ ಹಲವಾರು ದಶಕಗಳ ಕಾಲ ಧರ್ಮ ಮತ್ತು ಸಮಾಜಗಳನ್ನು ಅಧ್ಯಯನ ಮಾಡಿದವರು. ಹಿಂದೂ ಸಮಾಜದಲ್ಲಿ ಮೂಲಭೂತ ಬದಲಾವಣೆಗಳನ್ನು ತರಲು ಸಾಧ್ಯವೆ ಎಂದು ಪ್ರಯತ್ನಿಸಿದವರು. ಈ ಉದ್ದೇಶ ಸಾಧನೆಗಾಗಿ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡವರು. ತಾವು ನಿರೀಕ್ಷಿಸುವ ರೀತಿಯ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ ಎಂದು ಅರಿತ ನಂತರವೆ ಅವರು ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದು.

ಈ ಮೂರನೆಯ ಗುಂಪಿನವರ ಪ್ರಭಾವ ಕರ್ನಾಟಕದ ಬುದ್ಧಿಜೀವಿಗಳ ಮೇಲಾಗಿದೆ ಎನ್ನುವುದು ನಿಜವೆ. ಆದರೆ ಹಿಂದೂ ಧರ್ಮದ ಅಥವಾ ಜಾತಿ ಪದ್ಧತಿಯ ವಿರುದ್ಧ ನಿಲುವನ್ನು ತಳೆ­ಯುತ್ತಿರುವ ಬುದ್ಧಿಜೀವಿಗಳು ಆ ಮೂಲಕ ಭಾರತೀಯ ನಾಗರಿಕತೆಯನ್ನೇ ತಿರಸ್ಕ­ರಿಸು­ತ್ತಿಲ್ಲ.ಭಾರತದ ರಾಷ್ಟ್ರೀಯತೆಯನ್ನು ಪ್ರಶ್ನಿಸುತ್ತಿಲ್ಲ.  ಇಂದಿನ ಭಾರತ ದೇಶದ ಸಮಗ್ರತೆ, ಅಖಂಡತೆ ಅಥವಾ ಭದ್ರತೆಗೆ ಕಂಠಕ ತರುತ್ತಿಲ್ಲ. ಸರಿಯೋ, ತಪ್ಪೊ, ಅವರೂ ಭಾರತೀಯ ನಾಗರಿಕತೆಯನ್ನು, ಭಾರತದ ರಾಷ್ಟ್ರೀಯತೆಯನ್ನು ಕುರಿತಾದ ತಮ್ಮದೆ ಆದ ಗ್ರಹಿಕೆಯನ್ನು ಹೊಂದಿದ್ದಾರೆ. ಆದರೆ ಇದಾವುದೂ ಅವರನ್ನು ಪರಕೀಯರನ್ನಾಗಿಸುವುದಿಲ್ಲ. ಕನ್ನಡದ ಬುದ್ಧಿಜೀವಿಗಳ ಮೇಲೆ ಪಾಶ್ಚಾತ್ಯ ಚಿಂತನೆಯ, ಮೌಲ್ಯಗಳ ಪ್ರಭಾವವಾಗಿರಬಹುದು. ಆದರೆ ಅವರ ಚಿಂತನೆ ಭಾರತೀಯ ಪರಂಪರೆ­ಗಳಿಂದಲೂ ರೂಪುಗೊಂಡಿದೆ. ಅಂದರೆ ಅವರುಗಳ ಆತ್ಮವು ಪಶ್ಚಿಮದಿಂದ ಆಮದಾಗಿಲ್ಲ.

ಕನ್ನಡದ ಸಂದರ್ಭದಲ್ಲಿಯೇ ನೋಡುವುದಾದರೆ, ನಮ್ಮ ಅತ್ಯುತ್ತಮ ಬುದ್ಧಿಜೀವಿಗಳು ವಾಲ್ಮೀಕಿ, ಬುದ್ಧ, ಮಿಲ್ಟನ್, ಪಂಪ, ಬಸವಣ್ಣ, ಶೇಕ್ಸ್‌ಪಿಯರ್ ಮತ್ತು ಮಂಟೇಸ್ವಾಮಿಯರೆಲ್ಲರನ್ನೂ, ಇವರ ಜೊತೆಗೆ ಆಧುನಿಕ ಚಿಂತಕರನ್ನೂ ಜೀರ್ಣಿಸಿಕೊಂಡು, ತಮ್ಮ ಸಂವೇದನೆ ಮತ್ತು ಚಿಂತನೆಗಳನ್ನು ಕಟ್ಟಿಕೊಂಡವರು. ಭಾರತ ಮತ್ತು ಪಶ್ಚಿಮಗಳೆರಡನ್ನೂ ಮುಕ್ತವಾಗಿ ಸ್ವೀಕರಿಸುವ ಶಕ್ತಿಯನ್ನು ಪಡೆದಿರುವವರು. ಇವರು ಯಾವು­ದರಲ್ಲೂ ನಂಬಿಕೆಯಿರದ, ಎಲ್ಲವನ್ನೂ ತಿರಸ್ಕರಿಸುವ ನಿಹಿಲಿಸ್ಟರಲ್ಲ. ಶ್ರದ್ಢೆ ಮತ್ತು ವೈಚಾರಿಕತೆಗಳು ಜೊತೆ ಜೊತೆಗೆ ಇರಲು ಸಾಧ್ಯ ಎನ್ನುವುದನ್ನು ಕನ್ನಡದ ಬುದ್ಧಿಜೀವಿಗಳು ಸೊಗಸಾಗಿ ತೋರಿಸು­ತ್ತಾರೆ. ಈ ಮಾತುಗಳು ಸಾಮಾನ್ಯ ತಿಳಿವಳಿಕೆಯವು ಎನ್ನಿಸಿದರೂ, ಇಂದಿನ ಸಂದರ್ಭದಲ್ಲಿ ಪುನರುಚ್ಚರಿಸಬೇಕಿರುವ ಅಗತ್ಯವೂ ನಮ್ಮ ಮುಂದಿದೆ.

ವಾಸ್ತವದಲ್ಲಿ ಪಾಶ್ಚಾತ್ಯ ಚಿಂತನೆಯ ಪ್ರಭಾವದಿಂದ ತಪ್ಪಿಸಿಕೊಳ್ಳಬೇಕಿರುವುದು ಭಾರತೀಯ ಸಾಂಪ್ರದಾಯಿಕತೆಯ ವಕ್ತಾರರೆ. ಅವರಲ್ಲಿ ಕಂಡುಬರುವ ಬಹುದೊಡ್ಡ ಮಿತಿಯಿದು: ತಮ್ಮ ಚಿಂತನೆ ಮತ್ತು ಆಚರಣೆಗಳಲ್ಲಿ ಪಾಶ್ಚಾತ್ಯ ಮೂಲದ ಆಧುನಿಕ ನಾಗರಿಕತೆಯನ್ನು ಸಂಪೂರ್ಣ­ವಾಗಿ ತಿರಸ್ಕರಿಸಿ, ಅದರಾಚೆಗಿನ ಹೊಸ ಪ್ರಪಂಚವೊಂದನ್ನು ಭಾರತೀಯ ಪರಂಪರೆಗಳಿಂದಲೇ (ಅದರಲ್ಲೂ ಸನಾತನ ಹಿಂದೂ ಧರ್ಮದ ಸಂಪನ್ಮೂಲಗಳಿಂದಲೇ) ಕಲ್ಪಿಸಿಕೊಳ್ಳುವುದು ಅವರಿಂದ ಆಗುತ್ತಿಲ್ಲ.20ನೆಯ ಶತಮಾನದ ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಿಗಾಗಲಿ, ಇಂದಿನ ಸಂಪ್ರದಾಯವಾದಿ ಬುದ್ಧಿ­ಜೀವಿಗಳಿಗಾಗಲಿ ಅಥವಾ ಬೇರೆ ಬೇರೆ ಹಿಂದೂ ಪರಂಪರೆಗಳನ್ನು ಪ್ರತಿನಿಧಿಸುವ  ಪೇಜಾವರ ಸ್ವಾಮೀಜಿಯವರಂತಹ ಸಾಧುಸಂತರಿಗಾಗಲಿ, ಅವರೆಲ್ಲರ ಬಹುದೊಡ್ಡ ವೈಫಲ್ಯ ಇದೇನೆ.

ಪಾಶ್ಚಾತ್ಯ ಚಿಂತನೆಯ ಪ್ರಭಾವದಿಂದ ಬಿಡಿಸಿಕೊಳ್ಳಬೇಕು ಎಂದು ವಾದಿಸುವಾಗಲೇ ಪಾಶ್ಚಾತ್ಯರು ಕಟ್ಟಿಕೊಂಡ ಆಧುನಿಕ ನಾಗರಿಕತೆಯ ರಚನೆಗಳನ್ನೇ ಹಿಂದೂ ಸಾಂಪ್ರದಾಯಿಕತೆಯ ವಕ್ತಾರರು ಪುನಾರಚಿಸುತ್ತಿದ್ದಾರೆ.  ಸಾವರ್ಕರ್ ಅವರಿಂದ ಬಾಬಾ ರಾಮದೇವ್‌ರ ತನಕ ಈ ಕಥನ ಬದಲಾಗುತ್ತಿಲ್ಲ. ಹಾಗಾಗಿಯೆ ಇವರ ಕಲ್ಪನೆಯ ಹಿಂದೂ ಸಮುದಾಯವು ಇಸ್ಲಾಂ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನೆ ಹೋಲುತ್ತದೆ. ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆಗಳು ಪಾಶ್ಚಾತ್ಯ ಮಾದರಿಯಿಂದ ಹೊರಬರುತ್ತಿಲ್ಲ.  ಅಲ್ಲದೆ ಭಾರತೀಯ ಜ್ಞಾನ ಪರಂಪರೆಗಳು ಮತ್ತು ದೇಸಿ ತಂತ್ರಜ್ಞಾನಗಳ ಬಗ್ಗೆ ಮಾತನಾಡುವವರೆ ಆಧುನಿಕ ತಂತ್ರಜ್ಞಾನವನ್ನು ಕಲಿಸುವ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದಾರೆ. ಮಾರುಕಟ್ಟೆ ಮತ್ತು ಕೊಳ್ಳುಬಾಕ ಸಂಸ್ಕೃತಿಯೇ ಕೇಂದ್ರವಾಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ತಿರಸ್ಕರಿಸಿ, ಹೊಸ ಬಗೆಯ ಆರ್ಥಿಕ ಚಿಂತನೆಯನ್ನು ಮಾಡುವ ಧೈರ್ಯ ಇಲ್ಲಿ ಕಾಣುವುದಿಲ್ಲ.

ಇದಕ್ಕೆ ಪ್ರತಿಯಾಗಿ, ಆಧುನಿಕ ನಾಗರಿಕತೆಯಾಚೆಗೆ ಬದುಕನ್ನು ಕಲ್ಪಿಸಿಕೊಳ್ಳುವ ಧೈರ್ಯ ತೋರಿಸಿದ ಬಹುದೊಡ್ಡ ಉದಾಹರಣೆಯೆಂದರೆ ಗಾಂಧೀಜಿ ಮಾತ್ರ.ಉದಾಹರಣೆಗೆ ಅವರು ರೈಲ್ವೆ ವ್ಯವಸ್ಥೆಯಾಗಲಿ, ವೈದ್ಯರು ಮತ್ತು ವಕೀಲರುಗಳಿಲ್ಲದ ಪ್ರಪಂಚವೊಂದರ ರೂಪುರೇಷೆಗಳನ್ನು ನಮ್ಮ ಮುಂದಿಟ್ಟರು. ಅಂದರೆ ಆಧುನಿಕ ಸಾರಿಗೆ ವ್ಯವಸ್ಥೆಯಾಗಲಿ, ಆಧುನಿಕ ವೈದ್ಯಕೀಯ ಜ್ಞಾನವಾಗಲಿ ಅಥವಾ ಪಾಶ್ಚಾತ್ಯ ಮಾದರಿಯ ಕೋರ್ಟ್‌ ವ್ಯವಸ್ಥೆಯಿಲ್ಲದ ಬದುಕನ್ನು ಭಾರತವೇಕೆ ಕಟ್ಟಬಾರದು ಎಂದು ಅವರು ಕೇಳಿದರು. ಇದು ಪ್ರಾಯೋಗಿಕವೋ ಅಲ್ಲವೊ ಎನ್ನುವುದು ಎರಡನೆಯ ವಿಚಾರ. ಆದರೆ ಆ ಬಗೆಯ ದಿಟ್ಟತನ ಹಿಂದೂ ಸಾಂಪ್ರದಾಯಿಕತೆಯ ಚಿಂತಕರಲ್ಲಿ ಕಾಣುತ್ತಿಲ್ಲ ಎನ್ನುವುದು ಓದುಗರ ಗಮನಿಸಬೇಕಿರುವ ಅಂಶ.

ಗಾಂಧೀಜಿ ಪ್ರತಿನಿತ್ಯದ ಬಳಕೆಯ ವಸ್ತುಗಳ ತಯಾರಿಕೆಯ ಬಗ್ಗೆ ಹೇಗೆ ಯೋಚಿಸುತ್ತಾರೆ ಗಮನಿಸಿ. ಅವರ ದೃಷ್ಟಿಯಲ್ಲಿ ಸಾಬೂನು, ಬಟ್ಟೆ ಇತ್ಯಾದಿ ವಸ್ತುಗಳನ್ನು ಪ್ರತಿಯೊಂದು ಕುಟುಂಬವೂ ತನ್ನ ಅಗತ್ಯಕ್ಕೆ ಬೇಕಾದಷ್ಟು ತಯಾರಿಸಿಕೊಳ್ಳಬಹುದು. ಹೆಚ್ಚೆಂದರೆ ಗ್ರಾಮದ ಮಟ್ಟದಲ್ಲಿಯೆ ಬಹುಪಾಲು ಅಗತ್ಯಗಳ ಪೂರೈಕೆ ಮಾಡಿಕೊಳ್ಳಬಹುದು. ಅದಕ್ಕೆ ಪ್ರತಿಯಾಗಿ ಬಾಬಾ ರಾಮದೇವ್ ಅವರು ಅನುಸರಿಸುವ ಪಥವನ್ನು ನೋಡಿ. ಆಗ ಗಾಂಧಿ ಅವರ ಗ್ರಾಮಸ್ವರಾಜ್ಯಕ್ಕೆ ಪರ್ಯಾಯವಾಗಿ ರಾಮದೇವ್ ಅವರ ಕಾರ್ಪೊರೇಟ್ ಸ್ವರಾಜ್ಯದ ವ್ಯತ್ಯಾಸಗಳು ಸ್ಪಷ್ಟವಾಗುತ್ತವೆ. ಮಾರುಕಟ್ಟೆ ವ್ಯವಸ್ಥೆಯೊಳಗೆ ವ್ಯವಹರಿಸಲು ಆಶಿಸುವ ರಾಮದೇವ್ ‘ಪತಂಜಲಿ’ ಕಂಪೆನಿಯನ್ನು ಸ್ಥಾಪಿಸಿದರು. ಅವರ ಉದ್ದೇಶ ಹಿಂದೂಸ್ತಾನ್ ಯೂನಿಲೀವರ್‌ನಂತಹ ಬಂಡವಾಳಶಾಹಿ ಕಂಪೆನಿಯನ್ನು ಕಟ್ಟುವುದು, ಬಂಡವಾಳಶಾಹಿ ವ್ಯವಸ್ಥೆಯನ್ನೇ ತಿರಸ್ಕರಿಸುವುದಲ್ಲ.
ರಾಮದೇವ್ ಅವರ ಶಾಲೆಗಳೂ ಸಿಬಿಎಸ್‌ಇ ಪಠ್ಯಕ್ರಮದ ಸಂಸ್ಥೆಗಳು. ಇಲ್ಲಿ ಗಾಂಧೀಜಿ ಅಥವಾ ಟ್ಯಾಗೋರ್ ಮಾಡಿದ ರೀತಿಯ ದಿಟ್ಟ ಶೈಕ್ಷಣಿಕ ಪ್ರಯೋಗಗಳನ್ನು ಬಾಬಾ ರಾಮದೇವ್ ಆಗಲಿ ಅಥವಾ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಸಾವಿರಾರು ಹಿಂದೂ ಧಾರ್ಮಿಕ ಸಂಸ್ಥೆಗಳೇಕೆ ಮಾಡುತ್ತಿಲ್ಲ? ಬುದ್ಧಿಜೀವಿಗಳನ್ನು ದೂರುವುದರಿಂದ ಹೊಸ ಚಿಂತನೆ ಮೂಡುವುದಿಲ್ಲ. ಅದಕ್ಕೆ ದಿಟ್ಟತನ, ನಿರಂಕುಶಮತಿ ಮತ್ತು ಪ್ರಖರ ಚಿಂತನೆಯ ಅಗತ್ಯವಿದೆ.