ಬರಗೆಟ್ಟ ರಾಜಕಾರಣಿಗಳಿಂದ ಚುನಾವಣೆ -ದೇವನೂರ ಮಹಾದೇವ

ಉಪಚುನಾವಣೆ-2017 ಕುರಿತು 31.3.2017ರ ಆಂದೋಲನ ಪತ್ರಿಕೆಗೆ ಸ್ವರಾಜ್ ಅಭಿಯಾನದ ಮುಖ್ಯಸ್ಥರಾದ ದೇವನೂರ ಮಹಾದೇವ ಅವರು ನೀಡಿರುವ ಸಂದರ್ಶನ.

 

swaraj

 

ಪ್ರಶ್ನೆ: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಅಭ್ಯರ್ಥಿಯನ್ನು ಏಕೆ ನಿಲ್ಲಿಸಲಿಲ್ಲ?

ದೇಮ: ಸರ್ವೋದಯ ಪಕ್ಷವನ್ನು ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ವಿಲೀನ ಮಾಡುವ ಕೆಲಸದಲ್ಲಿ ನಾವು ಮುಳುಗಿಹೋಗಿದ್ದೆವು. ಅಷ್ಟೊತ್ತಿಗಾಗಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಮುಗಿದುಹೋಗಿತ್ತು. ಮೇಲಾಗಿ ನಾವು, ನಮ್ಮ ಪಕ್ಷ ಕಟ್ಟುವ ಕೆಲಸವನ್ನು ಏನೇನೂ ಮಾಡಿರಲಿಲ್ಲ. ನಿಂತರೆ ಅದು ಕೇವಲ ಸಾಂಕೇತಿಕವಾಗಿ ಬಿಡುತ್ತಿತ್ತು. ಹಾಗಾಗಿ ಈ ಉಪಚುನಾವಣೆಯಲ್ಲಿ ನಮ್ಮ ಸ್ಪರ್ಧೆ ಇಲ್ಲ.

ಪ್ರಶ್ನೆ: ಈ ಉಪಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ?

ದೇಮ: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಸಹಜ ಮರಣದಿಂದ ಚುನಾವಣೆ ಬಂದಿದೆ. ನಂಜನಗೂಡು ಕ್ಷೇತ್ರದಲ್ಲಿ “ಪ್ರತಿಷ್ಠೆಗಾಗಿ ಪಕ್ಷ ಹತ್ಯೆ ರಾಜಕಾರಣ”ದಿಂದಾಗಿ ಚುನಾವಣೆ ಬಂದಿದೆ. ಇದು ನೈತಿಕವಾಗಿ ಸರಿಯಿಲ್ಲ. ಇಂತಹ ಬರ ಪರಿಸ್ಥಿತಿಯಲ್ಲಿ ಬರಗೆಟ್ಟ ರಾಜಕಾರಣಿಗಳು ಚುನಾವಣೆ ಮಾಡುತ್ತಿದ್ದಾರೆ.

ಪ್ರಶ್ನೆ: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ತಮ್ಮದು ಪಕ್ಷಾಂತರ ಇರಬಹುದು, ಆದರೆ ತತ್ವಾಂತರ ಅಲ್ಲ ಎನ್ನುತ್ತಾರಲ್ಲಾ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ದೇಮ: ಏನಪ್ಪ, ಇದು ನನಗೆ ಅರ್ಥವಾಗಲ್ಲ. ನನಗೆ ಅರ್ಥವಾಗುವುದು ಏನೆಂದರೆ ಇದು ತತ್ವ ಇಲ್ಲದ ರಾಜಕಾರಣ ಅಥವಾ ನಾನತ್ವ ರಾಜಕಾರಣ.

ಪ್ರಶ್ನೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಸ್ವರಾಜ್ ಇಂಡಿಯಾದವರು ನಮ್ಮ ದಾರಿಯಲ್ಲಿ ಇದ್ದಾರೆ. ಕವಲು ದಾರಿಯಲ್ಲಿ ಬಂದು ನಮ್ಮನ್ನು ಸೇರಿಕೊಳ್ಳುತ್ತಾರೆ” ಎಂದು ಅಸಂಬ್ಲಿಯಲ್ಲಿ ಪುಟ್ಟಣ್ಣಯ್ಯನವರಿಗೆ ಉತ್ತರ ಕೊಡುತ್ತಾ ಹೇಳಿದ್ದಾರಲ್ಲಾ, ಅದಕ್ಕೆ ನೀವೇನು ಹೇಳುತ್ತೀರಾ?

ದೇಮ: ಸ್ವರಾಜ್ ಇಂಡಿಯಾದ “ಸ್ವರಾಜ್ ಒಳನೋಟ” ಪುಸ್ತಿಕೆಯಲ್ಲಿ ಒಂದು ಮಾತು ಬರುತ್ತದೆ- “ಇಂದಿನ ನಮ್ಮ ವ್ಯವಸ್ಥೆ ಕೇವಲ ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದ ಒಂದು ವ್ಯವಸ್ಥೆಯಲ್ಲ, ಬದಲಾಗಿ ಭ್ರಷ್ಟಾಚಾರವೇ ಸಾಂಸ್ಥೀಕರಣಗೊಂಡು ತಾನೇ ಒಂದು ವ್ಯವಸ್ಥೆಯಾಗಿಬಿಟ್ಟಿದೆ. ಹಾಗಾಗೇ ಈಗಿರುವ ಆಡಳಿತ ವ್ಯವಸ್ಥೆಯಲ್ಲಿ ನಿಷ್ಠಾವಂತ ಹಾಗೂ ದಕ್ಷತೆ ಇರುವವರು ಆಳ್ವಿಕೆ ನಡೆಸಿದರೂ ಕೂಡ ಸ್ವರಾಜ್ ಕನಸು ಈಡೇರದು” ಎಂದಿದೆ. ಇದು ಸಿದ್ದರಾಮಯ್ಯನವರ ಅನುಭವಕ್ಕೆ ಈಗಾಗಲೇ ಬಂದಿರಬೇಕು. ನಮ್ಮದು ಕವಲು ದಾರಿಯಲ್ಲ, ನೇರ ದಾರಿ. ಸಿದ್ದರಾಮಯ್ಯ ಏನಾದರೂ ಮಾಡಬೇಕು ಎಂಬ ಕಳಕಳಿ ಉಳ್ಳವರೆಂದು ಈಗಲೂ ನಾನು ನಂಬುತ್ತೇನೆ. ಯಾವ ಪುರುಷಾರ್ಥಕ್ಕಾಗಿ ಈ ರಾಜಕಾರಣ! ಬದಲಾಗಿ ನಮ್ಮ ನೇರ ರಾಜಕಾರಣ ಸ್ವರಾಜ್ ಇಂಡಿಯಾಕ್ಕೆ ಅವರು ಬರಲಿ.

ಪ್ರಶ್ನೆ: ಯಾರಿಗೆ ಮತ ಹಾಕಬೇಕು ಎನ್ನುತ್ತೀರಾ?

ದೇಮ: ಎಲ್ಲರೂ ಹೇಳುತ್ತಾರೆ ಅಭಿವೃದ್ಧಿ ಅಭಿವೃದ್ಧಿ ಅಂತ. ಅದೇನು ಅಭಿವೃದ್ಧಿಯೋ ಯಾರ ಅಭಿವೃದ್ಧಿಯೋ? ನಂಜನಗೂಡು ಸುತ್ತಲಿನ ನೀರು ಜಮಿನಿ ಡಿಸ್ಟಲರಿಯಿಂದ ವಿಷವಾಗಿದೆ. ವಿಷಕಂಠನ ಊರಿನಲ್ಲಿ ಜನರು ವಿಷ ನೀರನ್ನು ಕುಡಿದು ರೋಗದ ಗೂಡಾಗಿದ್ದಾರೆ.  ಜಾನುವಾರುಗಳೂ ಕುಡಿಯದ ನೀರನ್ನು ಜನರಿಗೆ ಕುಡಿಸುತ್ತಿದ್ದಾರೆ. ಮತ ಕೇಳಲು ಬರುವ ರಾಜಕಾರಣಿಗಳಿಗೆ “ಬಿಸಿಲರಿ ಬೇಡ, ನಂಜನಗೂಡು ನೀರನ್ನೇ ಕುಡಿಯಿರಿ” ಎಂದು ಆ ನೀರು ಕುಡಿಸಿರಿ. ಯಾವ ಪಕ್ಷದವರು ಹೆಚ್ಚು ನೀರನ್ನು ಕುಡಿಯುತ್ತಾರೋ ಅದರ ಮೇಲೆ ಮತದಾರರೇ ನಿರ್ಧರಿಸಲಿ.