ನೀಲನಕ್ಷೆ ಎಷ್ಟೋ ಇವೆ, ಕಡತಗಳಾಚೆ ಬರಬೇಕಿವೆ -ನಾಗೇಶ ಹೆಗಡೆ

                                                      environment

 

ಮುಂದಿನ 40 ವರ್ಷಗಳಲ್ಲಿ ಕರ್ನಾಟಕದ ಪರಿಸರ ಸಂವರ್ಧನೆಗೆ ಮೊದಲ ಆದ್ಯತೆ ನೀಡದಿದ್ದರೆ ಇತರ ಎಲ್ಲ ಮುನ್ನೋಟದ ಯೋಜನೆಗಳೂ ಮುಗ್ಗರಿಸುತ್ತ ಹೋಗುತ್ತವೆ.

‘ಭವಿಷ್ಯದ ಬಗ್ಗೆ ಹಿಂದೆಂದೂ ಇಲ್ಲದಷ್ಟು ಆಸಕ್ತಿ ಇದೀಗ ಮೊದಲ ಬಾರಿಗೆ ಬರುತ್ತಿದೆ. ಆದರೆ ತುಸು ವಿಪರ್ಯಾಸದ ಸಂಗತಿ ಏನೆಂದರೆ ನಮ್ಮ ಪಾಲಿಗೆ ಅದು ಇಲ್ಲವೇನೋ ಅನ್ನಿಸುತ್ತಿದೆ’ ಎಂದು ಖ್ಯಾತ ವಿಜ್ಞಾನ ಕತೆಗಾರ ಆರ್ಥರ್ ಕ್ಲಾರ್ಕ್ ಬರೆದಿದ್ದ. ಅಂದರೆ, ನಮಗೆ ಭವಿಷ್ಯವೇ ಇಲ್ಲವೆ?

ತಂತ್ರಜ್ಞಾನವೆಂಬ ಹುಚ್ಚು ಕುದುರೆಗೆ ಅಭಿವೃದ್ಧಿಯೆಂಬ ಅಭದ್ರ ರಥವನ್ನು ಕಟ್ಟಿ ಅದರ ಮೇಲೆ ಗಿಜಿಗಿಜಿ ಮನುಷ್ಯಕೋಟಿ ಸವಾರಿ ಹೊರಟ ವೈಖರಿಯನ್ನು ನೋಡಿದ ಕತೆಗಾರರಿಗೆ ಹಾಗನ್ನಿಸುವುದು ಸಹಜ. ಆದರೆ ಈ ಸವಾರಿಯಲ್ಲಿ ಮನುಷ್ಯ ತೀರಾ ಮೈಮರೆತಿಲ್ಲ; ಜಾಗೃತಿ ಮೂಡುತ್ತಿದೆ; ತನ್ನ ಭವಿಷ್ಯದ ಕುರಿತು ಆತ ಚಿಂತನೆಗೆ ತೊಡಗಿದ್ದಾನೆ ಎಂಬುದೇ ಆಶಾವಾದಕ್ಕೆ ಕಾರಣವಾಗುತ್ತದೆ.

ತನ್ನ ಗಾಡಿ ಪ್ರಪಾತದತ್ತ ಹೊರಟಿದೆ ಎಂಬುದು ಗೊತ್ತಾದಾಗ ಸಹಜವಾಗಿ ಬ್ರೇಕ್ ಹಾಕಲು, ಇಲ್ಲವೆ ಓಟದ ದಿಕ್ಕು ಬದಲಿಸಲು ಯತ್ನಿಸಬೇಕಲ್ಲವೆ? ಯತ್ನಿಸಬೇಕೆಂಬ ಜಾಗೃತಿಯಾದರೂ ನಮ್ಮಲ್ಲಿ ಮೂಡುತ್ತಿದೆಯೆ?

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜಾಗೃತಿ ತುಂಬ ಹಿಂದೆಯೇ ಮೂಡಿದೆ. ದೇಶದ ಬೇರೆ ಯಾವ ರಾಜ್ಯದಲ್ಲೂ ನಡೆದಿರದಷ್ಟು ವೈವಿಧ್ಯಮಯ ಪರಿಸರ ಚಳವಳಿಗಳು 1980ರ ದಶಕದಲ್ಲೇ ನಡೆದಿವೆ. ಈಗಲೂ ನಡೆಯುತ್ತಿವೆ. ಬೇಡ್ತಿ ಚಳವಳಿಯಿಂದ ಹಿಡಿದು ಈಚಿನ ಉಕ್ಕಿನ ಸೇತುವೆಯವರೆಗಿನ ವಿವಾದಗಳು ಇದಕ್ಕೆ ಸಾಕ್ಷಿಗಳಾಗಿವೆ. ಬೇರೆಲ್ಲ ರಾಜ್ಯಗಳಿಗಿಂತ ಮೊದಲು, ಬೇರೆಲ್ಲ ರಾಜ್ಯಗಳಿಗಿಂತ ವಿಸ್ತೃತವಾದ ‘ಪರಿಸರ ಪರಿಸ್ಥಿತಿ ಅಧ್ಯಯನ’ಗಳು ಕರ್ನಾಟಕದಲ್ಲಿ ನಡೆದಿವೆ. ಡಾ. ಶಿವರಾಮ ಕಾರಂತರಂಥ ಪರಿಸರ ಅಭ್ಯರ್ಥಿಯನ್ನು ಲೋಕಸಭೆಯ ಚುನಾವಣೆಗೆ ನಿಲ್ಲಿಸಿದ್ದು, ಸರಕಾರಿ  ನೆಡುತೋಪು ಕಂಪನಿಯನ್ನು ಬರಖಾಸ್ತುಗೊಳಿಸಿದ್ದು, ಸಾವಯವ ಕೃಷಿ ನೀತಿಯನ್ನು ಜಾರಿಗೆ ತಂದಿದ್ದು ಇವೆಲ್ಲ ಚಾರಿತ್ರಿಕ ಹಸುರು ಮೈಲುಗಲ್ಲುಗಳಾಗಿವೆ. ಆದರೆ ಅಭಿವೃದ್ಧಿಯ ಧಾವಂತದ ಓಟದ ದೂಳಿನಲ್ಲಿ ಅವೆಲ್ಲ ಹೂತುಹೋಗಿವೆ ಅದು ಬೇರೆ ಮಾತು.

ಪರಿಸರ ಸಮಸ್ಯೆ ಎಲ್ಲ ಕಡೆ ತೀವ್ರ ಸ್ವರೂಪ ತಾಳುತ್ತಿದೆ. ಜಾಗತಿಕ ತಾಪ­ಮಾನ ಏರಿಕೆಯಿಂದಾಗಿ ಮುಂಬರುವ ದಿನಗಳು ಇನ್ನಷ್ಟು ಕಠಿಣವಾಗಲಿವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಎಚ್ಚರಿಸದಿದ್ದರೂ ನಮಗೇ ನೇರ ಗೊತ್ತಾಗುವಷ್ಟು ತೀವ್ರತೆಯಲ್ಲಿ ಪ್ರಕೃತಿ ಮುನಿದೇಳುತ್ತಿದೆ. ಮಳೆ, ಚಳಿ, ಬೇಸಿಗೆ ಈ ಮೂರೂ ಋತುಗಳು ದಿನದಿನಕ್ಕೆ ಭೀಕರವಾಗುತ್ತ ಹೋಗುತ್ತಿವೆ. ದಿಲ್ಲಿಯ ಚಳಿಗಾಲ, ಚೆನ್ನೈ ಮಳೆಗಾಲ, ಭುವನೇಶ್ವರದ ಬೇಸಿಗೆಯ ತುರ್ತುಸ್ಥಿತಿ ನಾಳೆ ನಮ್ಮಲ್ಲೂ ಬಂದೀತು.

ಐಷಾರಾಮಿ ಬದುಕಿಗೆ ಮಾದರಿ ಎನಿಸಿದ್ದ ರಾಜ­ಧಾನಿಗಳೇ ಗೃಹಬಂಧನದ ಮಾದರಿ­ಗಳಾಗುತ್ತಿವೆ. ಇಂಥ ನಗರಭಾಗ್ಯಕ್ಕಾಗಿ ನಿಸರ್ಗವನ್ನು ಕಡೆಗಣಿಸಿದ್ದರಿಂದ ನಮ್ಮ ಅರಣ್ಯಗಳು ಚಿಂದಿಯಾಗಿವೆ. ಮೃಗ­ಪಕ್ಷಿಗಳು ಕಣ್ಮರೆಯಾಗುತ್ತಿವೆ, ಕೆರೆ­ನದಿಗಳು ಬರಿದಾಗುತ್ತಿವೆ. ಅಂತರ್ಜಲ ಖಾಲಿಯಾಗುತ್ತಿದೆ. ದಟ್ಟ ಜನವಸತಿ ಇದ್ದಲೆಲ್ಲ, ಕೊಚ್ಚೆನೀರು, ಪ್ಲಾಸ್ಟಿಕ್ ಬಗ್ಗಡಗಳೇ ಭರ್ತಿಯಾಗುತ್ತಿವೆ. ತುರ್ತು­ಸ್ಥಿತಿ ಬಂದಾಗ ಮಾತ್ರ ರಣವೈದ್ಯಕ್ಕೆ ಮೊರೆ ಹೊಕ್ಕರಾಯಿತೆಂದು ಮುಗುಮ್ಮಾಗಿ ಕೂರು­ವಂತಿಲ್ಲ. ಮುಂದಿನ 40 ವರ್ಷ­ಗಳಲ್ಲಿ ಕರ್ನಾಟಕದ ಪರಿಸರ ಸಂವರ್ಧನೆಗೆ ಮೊದಲ ಆದ್ಯತೆ ನೀಡದಿದ್ದರೆ ಇತರ ಎಲ್ಲ ಯೋಜನೆಗಳೂ ಮುಗ್ಗರಿಸುತ್ತ ಹೋಗುತ್ತವೆ.

ಮೂಲ ಸೌಲಭ್ಯಗಳ ಮೂರು ವಿಧಗಳು: ಮೂಲ ಸೌಲಭ್ಯ ಎಂದರೆ ಬರೀ ಹೆದ್ದಾರಿ, ಸೇತುವೆ, ವಿದ್ಯುತ್ ಸ್ಥಾವರ, ಅಣೆಕಟ್ಟು, ಪೈಪ್‌ಲೈನ್, ಬಂದರು, ನಿಲ್ದಾಣ ಇಂಥ ಭಾರಿ ಬಂಡವಾಳದ ನಿರ್ಮಾಣಗಳನ್ನೇ ಯೋಜನಾತಜ್ಞರು ಮುಂದೊ­ಡ್ಡುತ್ತಾರೆ. ಅಧಿಕಾರಿ ವರ್ಗ, ರಾಜಕಾರಣಿಗಳು ಮತ್ತು ಗುತ್ತಿಗೆ­ದಾರರೆಂಬ ಮೂರು ಭುಜಗಳ ಉಕ್ಕಿನ ತ್ರಿಕೋನಕ್ಕೆ ಅದೇ ಮೃಷ್ಟಾನ್ನವಾಗಿದೆ. ಮೂಲ ಸೌಲಭ್ಯ ಎಂದರೆ ಅವಿಷ್ಟೇ ಅಲ್ಲ. ಅವೆಲ್ಲಕ್ಕೆ ಬುನಾದಿಯಾಗಿ ಪ್ರಕೃತಿಯ ಮೂಲ ಸೌಲಭ್ಯಗಳು (ಕೆರೆ-ತೊರೆ, ಗೋಮಾಳ, ಅರಣ್ಯಗಳು) ಬೆಳೆಯಬೇಕು. ಜೊತೆಗೆ ಸಾಮಾಜಿಕ ಮೂಲಸೌಲಭ್ಯಗಳು (ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ) ಬೆಳೆಯಬೇಕು. ಇವೆರಡನ್ನು ಕಡೆಗಣಿಸಿ ಅದೊಂದಕ್ಕೇ ಒತ್ತುಕೊಟ್ಟರೆ ಭ್ರಷ್ಟಾಚಾರ, ಹತಾಶ ಮನಃಸ್ಥಿತಿ ಮತ್ತು ಸಾಮಾಜಿಕ ತ್ವೇಷ ಬೆಳೆಯುತ್ತದೆ ಮಾತ್ರವಲ್ಲ ನಾಳಿ­ನವರ ಬದುಕನ್ನು ಅಸ್ಥಿರತೆಯ ಕಂದರಕ್ಕೆ ನೂಕಿದಂತಾಗುತ್ತದೆ.

ಜಲಸಾಕ್ಷರತೆ, ಪರಿಸರ ಸಾಕ್ಷರತೆಗೆ ಆದ್ಯತೆ ನೀಡಿದರೆ ಸುಸ್ಥಿರ ಭವಿಷ್ಯದತ್ತ ರಾಜ್ಯವನ್ನು ಮುನ್ನಡೆಸಲು ಅಷ್ಟೊಂದು ಶ್ರಮ ಬೇಕಾಗಿಯೇ ಇಲ್ಲ. ಜನರಿಗೆ ತಿಳಿಯುವಂತೆ ಹೇಳಿದರೆ, ಈಗಿರುವ ಕಾನೂನು­ಗಳನ್ನೇ ಬಿಗಿಯಾಗಿ ಅನು­ಷ್ಠಾನಕ್ಕೆ ತಂದರೆ ಬಹಳಷ್ಟು ಬದ­ಲಾವಣೆಗಳನ್ನು ಕಾಣಬಹುದು. ಪ್ಲಾಸ್ಟಿಕ್ ಸೇರಿರುವ ತಿಪ್ಪೆರಾಶಿಗೆ ಬೆಂಕಿ ಹಚ್ಚಿದರೆ ಡಯಾಕ್ಸಿನ್ ವಿಷ ಹೊಮ್ಮಿ, ಗರ್ಭ­ದಲ್ಲಿರುವ ಶಿಶುವಿಗೂ ಅಪಾಯ ತರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದ್ದರೂ (ಹಾಗೆ ಬೆಂಕಿ ಹಚ್ಚುವುದು ಕಾನೂನಿನ ಉಲ್ಲಂಘನೆ ಆಗಿದ್ದರೂ) ನಮ್ಮ ನಗರಗಳ ಎಲ್ಲ ಅಧಿಕಾರಿಗಳೂ ವೈದ್ಯರೂ ವಕೀಲರೂ ಮಾಲಿನ್ಯತಜ್ಞರೂ ಕೊನೆಗೆ ಮಾಧ್ಯಮದವರೂ ಅದನ್ನು ಕಡೆಗಣಿಸಿ ನಡೆದಾಡುವುದನ್ನು ಮೈಗೂಡಿಸಿ­ಕೊಂಡಿದ್ದೇವೆ. ಏಕೆಂದರೆ ಅದರ ಅಪಾಯಗಳ ಬಗ್ಗೆ ಹೇಳಬೇಕಾದ ತೀವ್ರತೆಯಿಂದ ಯಾರೂ ಹೇಳುತ್ತಿಲ್ಲ.

ಕಡತಗಳ ಕತ್ತಲಲ್ಲಿ ಕನ್ನಡ ಕಾಣೆ: ಕರ್ನಾಟಕದ ಅತಿ ದೊಡ್ಡ ಸಮಸ್ಯೆ ಏನೆಂದರೆ ಕನ್ನಡದ್ದು! ಪರಿಸರ ರಕ್ಷಣೆಯ ಯಾವುದೇ ಪ್ರಸ್ತಾವನೆ ಬಂದರೂ ಅದನ್ನು ಜನರಿಗೆ ತಿಳಿಗನ್ನಡದಲ್ಲಿ ತರ್ಜುಮೆ ಮಾಡಿ ತಲುಪಿಸುವ ಜಾಯಮಾನ ನಮ್ಮಲ್ಲಿಲ್ಲ. ಮಾಧವ ಗಾಡ್ಗೀಳ್ ವರದಿ ಜಾರಿಗೆ ಬಂದರೆ ‘ಹಳ್ಳದ ಮರಳನ್ನು ಎತ್ತುವಂತಿಲ್ಲ; ಸಂಕ ಹಾಕುವಂತಿಲ್ಲ; ಮನೆ ಕಟ್ಟುವಂತಿಲ್ಲ’ ಎಂದು ಸುಳ್ಳುಸುಳ್ಳೇ ಮಲೆನಾಡಿನ ಮುಗ್ಧರನ್ನು ಹೆದರಿಸಿ ಪಟ್ಟಭದ್ರ ಹಿತಾ­ಸಕ್ತಿಗಳು ಅಂಥ ಪ್ರಸ್ತಾವನೆಗೆ ಅಡ್ಡಗಾಲು ಹಾಕುತ್ತವೆ. ಆ ವರದಿಯನ್ನು ಸ್ಥಳೀಯ ಭಾಷೆಯಲ್ಲಿ ತರ್ಜುಮೆ ಮಾಡಿ ವಿತರಿಸಬೇಕೆಂದು ಸಮಿತಿಯೇ ಹೇಳಿ­ದ್ದರೂ ಸರಕಾರ ಅದನ್ನು ಮಾಡಿಲ್ಲ, ಕೇರಳದವರು ಮಾಡಿದ್ದಾರೆ.

ಇನ್ನು ಯುರೇನಿಯಂ ಗಣಿಗಾರಿಕೆಯಂಥ ಅಪಾಯಕಾರಿ ಯೋಜನೆಗಳು ಬರುವಾಗ ಇದಕ್ಕೆ ತದ್ವಿರುದ್ಧ ವಿದ್ಯಮಾನ ನಡೆಯುತ್ತದೆ: ಜನರನ್ನು ಎಚ್ಚರಿಸ­ಬೇಕಾದ ಅಂಶಗಳು ಸರಕಾರದ್ದೇ ವರದಿ­ಯಲ್ಲಿದ್ದರೂ ಅವು ಕಡತದಲ್ಲೇ ಉಳಿಯುತ್ತವೆ; ಜನರನ್ನು ಕತ್ತಲಲ್ಲೇ ಇಡಲಾಗುತ್ತದೆ. ಜನರಷ್ಟೇ ಅಲ್ಲ, ಜನರಿಂದ ಆಯ್ಕೆಯಾಗಿ ಹೋದ ಶಾಸಕರೂ ನಾಡನ್ನು ತಟ್ಟಬಲ್ಲ ಗಂಭೀರ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಯಾರದೋ ಮಾತನ್ನು ನಂಬಿ ತೀರ್ಮಾನ ಕೈಗೊಳ್ಳುತ್ತಾರೆ.

ಪಶ್ಚಿಮ ಘಟ್ಟಗಳಿಗೆ ಯುನೆಸ್ಕೊ ’ವಿಶ್ವ ಪರಂಪರೆಯ ತಾಣ’ ಎಂಬ ಬಿರುದನ್ನು ನೀಡಲು ಯುನೆಸ್ಕೊ ಮುಂದಾಗಿದ್ದರೂ ಅದು ನಮ್ಮ ರಾಜ್ಯಕ್ಕೆ ಬೇಡವೆಂದು ನಮ್ಮ ಶಾಸಕರೆಲ್ಲ ಒಕ್ಕೊರಲಿನಲ್ಲಿ ತಿರಸ್ಕರಿಸಿ­ದಂಥ ‘ನಾಚಿಕೆಗೇಡಿ’ ಪ್ರಸಂಗ ಈ ಸಾಲಿಗೆ ಸೇರುತ್ತದೆ. ಒಬ್ಬ ಮುಖ್ಯಮಂತ್ರಿಯಂತೂ ಅಧಿಕಾರ ಬಿಡುವ ಮುಂಚಿನ ಒಂದೇ ಸಂಪುಟ ಸಭೆಯಲ್ಲಿ 28 ಕೈಗಾರಿಕೆಗಳಿಗೆ ಲೈಸೆನ್ಸ್ ನೀಡುವ ನಿರ್ಧಾರಕ್ಕೆ ಒಪ್ಪಿಗೆ ಪಡೆದು ಸಹಿ ಹಾಕಿದರು. ‘ದೂರದೃಷ್ಟಿ’ ಎಂಬುದು ಮುಂದಿನ ಚುನಾವಣೆ­ಯವರೆಗಷ್ಟೇ ಸೀಮಿತವಾಗಿರುವಾಗ ನಾಡಿನ ಭವಿಷ್ಯಕ್ಕೆ ಮಸಿ ಬಳಿಯಬಲ್ಲ ನಿರ್ಧಾರಗಳು ಜಾರಿಗೆ ಬರುತ್ತವೆ.

ಹಾಗೆ ನೋಡಿದರೆ ನಾವು ಹೆಮ್ಮೆ ಪಡಬೇಕಾದ ಅನೇಕ ಸಂಗತಿಗಳು ಕಡತಗಳಲ್ಲಿವೆ. ಇತರೆಲ್ಲ ರಾಜ್ಯಗಳಿಗಿಂತ ಮೊದಲು ನಮ್ಮಲ್ಲಿ ಸುಸ್ಥಿರ ಅಭಿವೃದ್ಧಿಯ ಸೂತ್ರಗಳು ರೂಪುಗೊಂಡಿವೆ. ಕರಾವಳಿ ಜಿಲ್ಲೆಯ ಧಾರಣ ಸಾಮರ್ಥ್ಯದ ಅಧ್ಯಯನ ಅನ್ನಿ, ಹವಾಮಾನ ವೈಪರೀತ್ಯದ ನಿವಾರಣೆಯ ಮಾರ್ಗೋಪಾಯ ವರದಿ ಅನ್ನಿ (ಒಂದಲ್ಲ, ಎರಡೋ ಮೂರೋ ಪ್ರತ್ಯೇಕ ಅಧ್ಯಯನಗಳು) ಆಗಿ ಕಡತಗಳಲ್ಲಿ, ವೆಬ್‌ಸೈಟುಗಳಲ್ಲಿ ಕೂತಿವೆ) ಕನ್ನಡಕ್ಕೆ ಬರುತ್ತಿಲ್ಲ. ಶಿಕ್ಷಣದಲ್ಲಿ ಪರಿಸರ ಅಧ್ಯಯನ ಕಡ್ಡಾಯ ಮಾಡಬೇಕೆಂದು ನಮ್ಮ ಸಂತೋಷ್ ಹೆಗ್ಡೆಯವರು ಸರ್ವೋಚ್ಚ ನ್ಯಾಯಾಧೀಶರಾಗಿ ಆಜ್ಞೆ ಮಾಡಿದ್ದರೂ ಅದೊಂದು ಕಾಟಾಚಾರದ ಇಂಗ್ಲಿಷ್ ಪಠ್ಯಕ್ರಮವಾಗಿ ಕೂತಿದೆ.

ಪರಿಸರ ನಿರ್ವಹಣೆಯ ಹತ್ತು ಮಾದರಿಗಳು
ಹವಾಮಾನ ಬದಲಾವಣೆಯ ಸಂಕಟಗಳನ್ನು ಎದುರಿಸಬೇಕೆಂದರೆ ನೀರಿನ ನಿರ್ವಹಣೆ, ಬರ ನಿರ್ವಹಣೆ, ತ್ಯಾಜ್ಯ ಮರುಬಳಕೆ ಮತ್ತು ಶಕ್ತಿ ಉತ್ಪಾದನೆಯ ಸಮಗ್ರ ತಂತ್ರಜ್ಞಾನ ಜನರಿಗೆ ಲಭ್ಯವಿರಬೇಕು. ಅದರಲ್ಲೇ ಉದ್ಯೋಗ ಸೃಷ್ಟಿ ಕೂಡ ಸಾಧ್ಯವಾಗಬೇಕು. ಇವುಗಳ ಬಗ್ಗೆ ಲೇಖನ, ಭಾಷಣಗಳು ಬಂದರೆ ಸಾಲದು; ಯುವಜನರಿಗೆ ಅವೆಲ್ಲ ಕಣ್ಣಾರೆ ನೋಡಲು ಸಿಗಬೇಕು. ಅಂಥ ಹತ್ತು ಮಾದರಿ ಪ್ರಾತ್ಯಕ್ಷಿಕೆಗಳನ್ನು ಇನ್ನು ಐದು ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬೇಕು.

1. ಮಳೆಕೊಯ್ಲಿನ ಪ್ರಾತ್ಯಕ್ಷಿಕೆ: ಬರಪೀಡಿತ ಪ್ರತಿ ಜಿಲ್ಲೆಯ ಯಾವುದೇ ಒಂದು ಹಳ್ಳಿಯಲ್ಲಿ ಒಂದು ನೈಜ ಮಳೆನೀರಿನ ಘಟಕವನ್ನು ಆರಂಭಿಸಬೇಕು. ಜನವರಿಯಿಂದ ಜೂನ್‌ವರೆಗೆ ಬಾಯಾರಿಕೆಗೆ ಹಾಗೂ ಅಡುಗೆಗೆ ಸಾಲುವಷ್ಟು ನೀರಿನ ಉಸ್ತುವಾರಿ ಹೇಗೆಂದು ಜನರಿಗೆ ತಿಳಿಯಬೇಕು. ಅಂಥ ಕೊಯ್ಲುಕಟ್ಟೆಯ ನಿರ್ಮಾಣಕ್ಕೆ ಅದೇ ಹಳ್ಳಿಯ ಜನರಿಗೆ ತರಬೇತಿ ನೀಡಿ, ತ್ಯಾಜ್ಯನೀರಿನ ಯುಕ್ತಬಳಕೆಯ ವಿಧಾನವನ್ನೂ ತಿಳಿಸಬೇಕು.

2. ಬದಲೀ ಶಕ್ತಿಯ ಪ್ರಾತ್ಯಕ್ಷಿಕೆ: ರಾಜ್ಯದ ಒಂದಾದರೂ ಇಡೀ ಪಟ್ಟಣ ಸೌರಶಕ್ತಿ, ಗಾಳಿಶಕ್ತಿ ಮತ್ತು ತನ್ನದೇ ತಿಪ್ಪೆಶಕ್ತಿಯಿಂದ ತನ್ನ ಅಗತ್ಯದ 100% ವಿದ್ಯುತ್ತನ್ನು ಪಡೆಯುವಂತೆ ಯೋಜನೆ ರೂಪಿಸಬೇಕು. ಪ್ರತಿ ತಾಲ್ಲೂಕಿನ ಒಂದು ಪಂಚಾಯ್ತಿ ಕಚೇರಿ ಇಂಥ ನವೀಕೃತ ಶಕ್ತಿಮೂಲಗಳಿಂದ ತನಗೆ ಬೇಕಾದ ವಿದ್ಯುತ್ ಶಕ್ತಿಯನ್ನು ತಾನೇ ಪಡೆಯುವಂತಿರಬೇಕು.

3. ಜೈವಿಕ ಇಂಧನದ ಪ್ರಾತ್ಯಕ್ಷಿಕೆ: ಪ್ರತಿ ಜಿಲ್ಲೆಯಲ್ಲೂ ಒಂದು ಶಕ್ತಿವನವನ್ನು ಬೆಳೆಸಬೇಕು. ಇಂಧನ ಸಸ್ಯಗಳ ಮೊಳಕೆ, ನರ್ಸರಿಯಿಂದ ಆರಂಭಿಸಿ ಎಣ್ಣೆ ತೆಗೆಯುವ ಗಾಣ, ಆ ಎಣ್ಣೆಯಿಂದ ಓಡುವ ಪಂಪ್‌ಸೆಟ್ ತನಕ ಎಲ್ಲವೂ ಅಲ್ಲಿರಬೇಕು. ಕನಿಷ್ಠ ಒಂದು ಹಳ್ಳಿಯಾದರೂ ಇನ್ನು ಹತ್ತು ವರ್ಷಗಳಲ್ಲಿ ತನ್ನ ಮೋಟಾರು ಇಂಧನ ಅಗತ್ಯದ ಶೇ. 50ರಷ್ಟನ್ನಾದರೂ ತಾನೇ ಉತ್ಪಾದಿಸುವಂಥ ಮಾದರಿ ಅಲ್ಲಿ ರೂಪುಗೊಳ್ಳಬೇಕು.

4 ಜಲಪೂರಣ ಪ್ರಾತ್ಯಕ್ಷಿಕೆ: ಪ್ರತಿ ಜಿಲ್ಲೆಯ ಒಂದಾದರೂ ಅತಿಚಿಕ್ಕ ಜಲಾನಯನ ಪ್ರದೇಶದ ಪ್ರತಿ ಹನಿ ಮಳೆಯೂ ನೆಲದಲ್ಲಿ ಇಂಗುವಂತೆ ಮಾದರಿ ರೂಪಿಸಬೇಕು. ಎಂಥ ದೊಡ್ಡ ಮಳೆ ಬಂದರೂ ನೀರಿನ ಒಂದು ಹನಿಯೂ ಹಳ್ಳದಗುಂಟ ಹರಿದು ಹೋಗದಂಥ ವ್ಯವಸ್ಥೆ ಅಲ್ಲಿರಬೇಕು.

5. ಉಪ್ಪಿನಂಶ ನಿವಾರಣಾ ಘಟಕ: ಕರಾವಳಿಯ ಪ್ರತಿ ತಾಲ್ಲೂಕಿನಲ್ಲಿ ಸಮುದ್ರದ ನೀರನ್ನು ಸೌರಶಕ್ತಿಯ ಮೂಲಕ ಸಿಹಿನೀರನ್ನಾಗಿ ಪರಿವರ್ತಿಸುವ ಒಂದೊಂದು ಘಟಕವನ್ನು ಸ್ಥಾಪಿಸಬೇಕು.

6. ಗೋಬರ್ ಅನಿಲದ ಪ್ರಾತ್ಯಕ್ಷಿಕೆ: ಪ್ರತಿ ಜಿಲ್ಲೆಯಲ್ಲೂ ಒಂದಾದರೂ ಮಾದರಿ ಡೈರಿಯನ್ನು ಸ್ಥಾಪಿಸಬೇಕು. ಹಾಲು ಉತ್ಪಾದಿಸುವ ಎಲ್ಲರ ಮನೆಯಲ್ಲೂ ಗೋಬರ್ ಅನಿಲದಿಂದ ವಿದ್ಯುತ್ ಉತ್ಪಾದನೆ,  ನೀರಿನ ಮಿತಬಳಕೆ ಹಾಗೂ ಎರೆಹುಳು ಗೊಬ್ಬರ ಪ್ರಾತ್ಯಕ್ಷಿಕೆ ಇರಬೇಕು.

7. ಇಂಧನರಹಿತ ಇಟ್ಟಿಗೆ ಬಟ್ಟಿ: ಸೌದೆಯ ಅಥವಾ ಭತ್ತದ ಹೊಟ್ಟಿನ ಶಾಖವನ್ನು ಬಳಸದೆ ಹಸಿಮಣ್ಣಿನ ಒತ್ತಿಟ್ಟಿಗೆ ತಯಾರಿಸುವ ಘಟಕವೊಂದನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬೇಕು. ಶ್ರಮಶಕ್ತಿಯಿಂದಲೇ ಅಂಥ ಇಟ್ಟಿಗೆಯಿಂದ ಕಟ್ಟಿದ ಮನೆಯೊಂದು ನೋಡಲು ಸಿಗಬೇಕು.

8. ಹೂಳುಗುಂಡಿ ಅನಿಲ ಘಟಕ: ಪ್ರತಿ ಜಿಲ್ಲೆಯಲ್ಲೂ ಒಂದು ಪಟ್ಟಣದ ಎಲ್ಲ ಜೈವಿಕ ತ್ಯಾಜ್ಯಗಳನ್ನೂ ಒಂದೆಡೆ ಸಂಗ್ರಹಿಸಿ ಮೀಥೇನ್ ಅನಿಲದಿಂದ ವಿದ್ಯುತ್ ಉತ್ಪಾದನೆ ಹೇಗೆಂದು ತೋರಿಸಬೇಕು. ಹೀಗೆ ಪಡೆದ ವಿದ್ಯುತ್ ಶಕ್ತಿಯಿಂದ ಅದೇ ಊರಿನ ಚರಂಡಿ ನೀರನ್ನು ಸಂಸ್ಕರಿಸಿ, ಆ ನೀರಿನಲ್ಲಿ ಶಕ್ತಿವನವನ್ನು ಬೆಳೆಸಬೇಕು.

9. ಜೈವಿಕ ತ್ಯಾಜ್ಯ ಮರುಬಳಕೆ ಪ್ರಾತ್ಯಕ್ಷಿಕೆ: ರಾಜ್ಯದ ಒಂದಾದರೂ ಅಕ್ಕಿಗಿರಣಿಯ ಬಳಿ ಎಲ್ಲ ಭತ್ತದ ಹೊಟ್ಟನ್ನು ಪ್ಲೈಬೋರ್ಡ್‌ಗಳನ್ನಾಗಿ ಪರಿವರ್ತಿಸುವ ಮಾದರಿ ಘಟಕ ಇರಬೇಕು. ರೈತರು ಬಿಸಾಕುವ ಹೆಚ್ಚುವರಿ ಕಬ್ಬಿನ ರವುದಿ, ಮೆಕ್ಕೆ ಜೋಳದ ದಂಟು, ತೆಂಗಿನ ನಾರು ಇವುಗಳನ್ನೂ ತರಿಸಿ ಜೈವಿಕ ಪ್ಲಾಸ್ಟಿಕ್ ಉತ್ಪಾದನೆಯ ಘಟಕ ಅಲ್ಲಿರಬೇಕು. ಅದಕ್ಕೆ ಬೇಕಾದ ಶಕ್ತಿ ಕೂಡ ಅಲ್ಲೇ ಸಿಗಬೇಕು.

10. ಪರಿಸರ ನಿರ್ವಹಣಾ ಡಿಪ್ಲೊಮಾ: ರಾಜ್ಯದ ಒಂದಾದರೂ ಜಲಾನಯನ ಪ್ರದೇಶದಲ್ಲಿ ಈ ಒಂಬತ್ತೂ ಪ್ರಾತ್ಯಕ್ಷಿಕೆಗಳು ಯಾವುದೇ ದೋಷವಿಲ್ಲದೆ ಕೆಲಸ ನಿರ್ವಹಿಸುವ ವ್ಯವಸ್ಥೆಯಾಗಬೇಕು. ಅದನ್ನು ವರ್ಷವಿಡೀ ನಿರ್ವಹಿಸುವಲ್ಲಿ ತರಬೇತಿ ಪಡೆದವರಿಗೆ ಡಿಪ್ಲೊಮಾ ನೀಡಬೇಕು.

ಮನೆ-ಮತ ಕಳಕೊಂಡ ಜೀವಿಗಳು
ಅಭಿವೃದ್ಧಿ ಯೋಜನೆಗಳಿಗೂ ಪರಿಸರ ಸಮತೋಲಕ್ಕೂ ತಿಕ್ಕಾಟ ಎಲ್ಲ ಕಡೆ ಇದ್ದೇ ಇದೆ. ಇದಕ್ಕೆ ಮೂಲ ಕಾರಣ ಏನೆಂದರೆ ಹರಿಯುವ ನೀರು, ಬೀಸುವ ಗಾಳಿ, ವಲಸೆ ಹೋಗುವ ಪ್ರಾಣಿಪಕ್ಷಿ ಈ ಯಾವವೂ ಮನುಷ್ಯನಿರ್ಮಿತ ಗಡಿಗಳನ್ನು ಮಾನ್ಯ ಮಾಡು­ವುದಿಲ್ಲ. ಎರಡನೆಯದಾಗಿ, ಅತಿವೃಷ್ಟಿ ಅನಾವೃಷ್ಟಿಯ ಚಕ್ರಗಳು ನಮ್ಮ ಐದೈದು ವರ್ಷಗಳ ಚುನಾವಣಾ ಕ್ಯಾಲೆಂಡರನ್ನೂ ಪಂಚ ವಾರ್ಷಿಕ ಯೋಜನೆಗಳನ್ನೂ ಟ್ರಾನ್ಸ್‌ಫರ್ ಸೀಸನ್ನನ್ನೂ ಮಾನ್ಯ ಮಾಡುವುದಿಲ್ಲ. ನಾವೂ ಅಷ್ಟೆ, ಯೋಜನೆಗಳನ್ನು ರೂಪಿಸುವಾಗ ಕಾಡಾನೆ, ಸಿಂಗಳೀಕ, ಕಾಳಿಂಗ ಸರ್ಪಗಳು, ಮಂಗಟ್ಟೆ ಪಕ್ಷಿಗಳೇ ಮುಂತಾದ ಪ್ರಾಣಿಲೋಕದ ಸದಸ್ಯರು ನಮ್ಮ ನಾಡಿನ ಜೀವಿಗಳು ಎಂಬುದೂ ಗಮನಕ್ಕೇ ತರುವುದಿಲ್ಲ. ಅಥವಾ ತೇಜಸ್ವಿಯವರು ಹೇಳಿದ ಹಾಗೆ, ಮತ ಹಾಕುವ ಹಕ್ಕೇ ಅವಕ್ಕಿಲ್ಲ ಪಾಪ. ಎಲ್ಲವೂ ಮನುಷ್ಯರ, ಅದರಲ್ಲೂ ಅನುಕೂಲಸ್ಥರ ತೆಕ್ಕೆಗೆ.

ಈ ಮಧ್ಯೆ ಸರಕಾರಿ ಕಾರ್ಯಾಚರಣೆಯ ವೈಖರಿ ನೋಡಿ: ಒಬ್ಬ ದಕ್ಷ ಅಧಿಕಾರಿಯ ಆಡಳಿತದಲ್ಲಿ ಸೊಂಪಾಗಿ ಬೆಳೆಯುವ ಅರಣ್ಯ ಪ್ರದೇಶ ಆತನ ಟ್ರಾನ್ಸ್‌ಫರ್ ಆಗುತ್ತಿದ್ದ ಹಾಗೆ ಸೊರಗಲು ತೊಡಗುತ್ತದೆ. ಎಲ್ಲೋ ಜಪಾನದ್ದೋ ಅಥವಾ ನಾರ್ವೆ ದೇಶದ್ದೋ ಸಹಾಯಧನ ಸಿಕ್ಕಾಗ ನಳನಳಿಸುವ ವನಗಳು ಅಥವಾ ಕೆರೆಕಟ್ಟೆಗಳು ಅಂಥ ವಿದೇಶೀ ನೆರವು ಬತ್ತಿ ಹೋದ ತಕ್ಷಣ ಒಣಗುತ್ತವೆ.

ಒಂದು ರಾಜಕೀಯ ಪಕ್ಷದ ಅಧಿಕಾರದ ಅವಧಿಯಲ್ಲಿ ರೂಪುಗೊಂಡ (ಉದಾ: ಜೈವಿಕ ಇಂಧನ) ಮಂಡಲಿ ಉತ್ತಮ ಕೆಲಸ ಮಾಡುತ್ತ ರಾಷ್ಟ್ರಮಟ್ಟದ ಮಾನ್ಯತೆ ಪಡೆದರೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಮೂಲೆ­ಗುಂಪಾಗುತ್ತದೆ. ಪರಿಸರ ಕುರಿತ ಒಂದು ನಿರ್ದಿಷ್ಟ ಧೋರಣೆ, ಒಂದು ಶಾಶ್ವತ ನೀತಿ ನಮ್ಮಲ್ಲಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡಲು ಟೆಂಡರ್ ಕರೆಯೋಣವೆ? ನೀರು ತುಂಬಿದ ಕೆರೆಗೇ ಬೆಂಕಿ ಹೊತ್ತಿಸಿದ ರಾಜಧಾನಿ ನಮ್ಮದು!
ಕರ್ನಾಟಕದ ಅಭಿವೃದ್ಧಿ ಎಂದರೆ ಮತ ಹಾಕುವವರನ್ನು ಮೆಚ್ಚಿಸುವುದಷ್ಟೇ ಅಲ್ಲ.