‘ನಿರೀಕ್ಷೆ’ ಶಾಲೆಯ ‘ವಿಶೇಷ ಮಕ್ಕಳ’ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ….

(ಮೈಸೂರಿನ ಕುವೆಂಪುನಗರದ ಭುವನೇಶ್ವರಿ ಉದ್ಯಾನವನ, ಆಶ್ರಯ ಟ್ರಸ್ಟ್ 2015 ಜೂನ್ 6ರಂದು ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿನ ಭುವನೇಶ್ವರಿ ಉದ್ಯಾನವನದಲ್ಲಿ ‘ನಿರೀಕ್ಷೆ’ ಶಾಲೆಯ ವಿಶೇಷ ಮಕ್ಕಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡನೆಟ್ಟು ನೀರೆರೆದು ಮಹಾದೇವ ಅವರು ಆಡಿದ ಮಾತುಗಳು ನಮ್ಮ ಮರು ಓದಿಗಾಗಿ…)

ಪರಿಸರ ದಿನಾಚರಣೆಯ ನೆಪದಲ್ಲಿ

1ನಮ್ಮಲ್ಲೊಂದು ಹಾಡಿದೆ: ‘ಶಿವನೆ ನಿನ್ನಾಟ ಬಲ್ಲವರ್ಯಾರಪ್ಪ, ಗುರುವೇ ನಿನ್ನಾಟ ಬಲ್ಲವರ್ಯಾರಪ್ಪ..’ ಮುಂದೆ ಈ ಹಾಡಲ್ಲಿ ಕುಂಬಾರ ಗುಂಡಯ್ಯ ಮಡಿಕೆ ಮಾಡಕ್ಕೆ ಮಣ್ಣು ತುಳೀವಾಗ ಶಿವ ಅಲ್ಲಿ ಕೈಲಾಸದಲ್ಲಿ ಥಾಂ..ಥೋಂ.. ಅಂತ ಕುಣೀತಾ ಇದ್ದ ಅಂತ ಹಾಡಲ್ಲಿ ಬರುತ್ತೆ. ಹಾಗೇ ಮಾದಾರ ಚೆನ್ನಯ್ಯ ಅಂಬಲಿ ಕುಡೀವಾಗ ಶಿವ ಕೈಲಾಸದಲ್ಲಿ ಸೊರಕ್ ಸೊರಕ್ ಅಂತ ಸಂತೋಷದಿಂದ ಕುಡೀತಾ ಇದ್ದ ಅಂತ ಆ ಹಾಡು ಮುಂದುವರೆಯುತ್ತದೆ.. ಇಲ್ಲಿ ಶಿವ ಅಂದ್ರೆ ಪ್ರಕೃತಿ, ವಿವೇಕ, ಅರಿವು ಅಂತ ನಾವು ಅಂದ್ಕೋಬೇಕು. ಯಾವಾಗ ಇಲ್ಲಿಯ ಮನುಷ್ಯ ಚಟುವಟಿಕೆಗಳು ಪ್ರಕೃತಿಗೆ ಪೂರಕವಾಗಿರುತ್ತೋ ಆಗ ಆ ಪ್ರಕೃತಿ ನಳನಳಿಸ್ತಾ ಇರುತ್ತೆ. ಶಿವ ನಗ್ತಾನೆ.

ಇವತ್ತು ಶಿವ ನಗ್ತಾ ಇಲ್ಲ. ವಿಷಕಂಠ ಇರುವ ನಂಜನಗೂಡಿನ ನೀರನ್ನು ಆ ವಿಷಕಂಠನಿಗೂ ಕುಡಿಯಕ್ಕಾಗ್ತಾ ಇಲ್ಲ.. ಇದೊಂದು ಸಣ್ಣ ಉದಾಹರಣೆ ಅಷ್ಟೇ. ಇಡೀ ಭೂಮಿಯಲ್ಲಿ ಇಂತಹ ವಿದ್ವಂಸಕ ಕೃತ್ಯಗಳು ದಿನದಿನಕ್ಕೂ ಹೆಚ್ಚಾಗ್ತಾ ಭೂಮಿ ನಿತ್ರಾಣವಾಗಿದೆ. ಭೂಮಿ ವಿಷಮಯವಾಗಿದೆ.

ಈಗ ಭಾರತದಲ್ಲಿ ಕೇವಲ ನೂರು ಜನರ ಕೈಲಿ ಇಡೀ ದೇಶದ ಸಂಪತ್ತಿನ ಅರ್ಧ ಭಾಗವಿದೆಯಂತೆ. ಮೊದಲು ಸಾವಿರ ಕೋಟಿ ಅಂದ್ರೆ ನಾವು ಅಬ್ಬಬ್ಬಾ ಅಂತಿದ್ದೋ. ಈಗ ಲಕ್ಷ ಕೋಟಿ ಅಂದ್ರೂ ನಮಗೆ ಏನೂ ಅನ್ನಿಸಲ್ಲ. ಈ ಸಂಪತ್ತೆಲ್ಲಾ ಪ್ರಕೃತಿಯನ್ನ ಒಂದಲ್ಲ ಒಂದು ರೀತಿ ಧ್ವಂಸ ಮಾಡೇ ಲೂಟಿ ಹೊಡೆದಿರೋದೇ ಆಗಿರುತ್ತೆ. ಈ ರೀತಿ ಬಂಡವಾಳ ಅಗಾಧವಾಗಿ ಕೆಲವೇ ವ್ಯಕ್ತಿಗಳ ಕೈಗೆ ಕೇಂದ್ರೀಕೃತವಾದರೆ, ನಾವು ಯೋಚನೆ ಮಾಡ್ಬೇಕಾಗುತ್ತೆ ಪ್ರಜಾಪ್ರಭುತ್ವ ಉಳಿಯುತ್ತಾ? ಜನತಂತ್ರ ವ್ಯವಸ್ಥೆ ಉಳೀತದಾ? ಮತ್ತೆ ಇಂಥ ಬಂಡವಾಳದ ಅಟ್ಟಹಾಸದಲ್ಲಿ ಸಾಮಾನ್ಯ ಜನರ ಪ್ರಾಣ ಸಸ್ತಾ ಆಗೋದಿಲ್ಲವಾ? ಸಾವು, ನೋವುಗಳು ಸಾವು ನೋವು ಅನ್ನಿಸದೇ ಹೋಗಿಬಿಡುವಂಥಾ ಸ್ಥಿತಿ ಉಂಟಾಗಲ್ವಾ?

ಇವತ್ತು ನಾವು ನಮ್ಮೆದುರಿಗಿನ ದುರಂತವನ್ನ ಗಮನಿಸ್ಬೇಕು. ಒಂದು ಉದಾಹರಣೆ….. ಸತ್ಯಮೇವ ಜಯತೆ ಎನ್ನೋ ಒಂದು ಟಿವಿ ಕಾರ್ಯಕ್ರಮದಲ್ಲಿ ನಟ ಅಮೀರ್ ಖಾನ್ ಷೋ ತುಂಬಾ ಜನಪ್ರಿಯ ಆಗಿತ್ತು. ಪ್ಲಾಸ್ಟಿಕ್ ತ್ಯಾಜ್ಯವನ್ನ ನಿರ್ವಹಿಸೋದು ಹೇಗೆ ಎಂಬ ಕಾರ್ಯಕ್ರಮ ಅದು. ಆದರೆ ಅದರ ಪ್ರಾಯೋಜಕರು ರಿಲೆಯನ್ಸ್, ಅಂಬಾನಿಯಂತವರು! ಅರ್ಥಾತ್ ಅವರೇ ಪ್ಲಾಸ್ಟಿಕ್ ಉತ್ಪಾದಕರೂ ಆಗಿರಬಹುದು. ರೋಗವೇ ರೋಗ ಲಕ್ಷಣಕ್ಕೆ ಮದ್ದು ಹುಡುಕೋವಂತಾಗಿರೋದು ಇಂದಿನ ದುರಂತ.

ನನ್ನ ಮಾತುಗಳನ್ನ ಹ್ಯಾಗೆ ಮುಂದುವರೆಸಬೇಕೋ ಹೇಗೆ ಕೊನೆಗೊಳಿಸಬೇಕೋ ನನಗೆ ಗೊತ್ತಾಗ್ತಾ ಇಲ್ಲ.. ಬೇಂದ್ರೆಯವರ ಚಿಗರಿ ಕಂಗಳ ಚೆಲುವಿ ಪದ್ಯದ ಸಾಲನ್ನ ನಾವೆಲ್ಲರೂ ನೆನಪಿಟ್ಟುಕೊಳ್ಳೋಣ. ಇದು ಭೂಮಿ ತನ್ನ ವಿಧ್ವಂಸಕ ಮಕ್ಕಳಿಗೆ ಹೇಳುವ ಮಾತು: ‘ಇದು ಒಡವ್ಯಲ್ಲ ಮಗನೇ ಉಸಿರಿದ್ದೊಡಲು’….. ಭೂಮಿ ನಿರ್ಜೀವ ವಸ್ತು ಒಡವೆ ಅಲ್ಲ. ಅದು ಉಸಿರು ತುಂಬಿದ ಜೀವಾಡುವ ಒಡಲು.

ಇಂದಿನ ಪರಿಸರ ದಿನಾಚರಣೆ ಸಂದರ್ಭದಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಬೇಕಾಗಿದೆ. ‘ಪರಿಸರ ಅಂದರೆ ಆಸೆ ಅಹಂಕಾರದ ಮನುಷ್ಯರಾದ ನಾವು ಪರಿಸರದಿಂದ ಭಿನ್ನರಾದವರಲ್ಲ, ಅದು ನಮ್ಮ ಬಳಕೆಗೆ ಮಾತ್ರ ಇರುವ ವಸ್ತು ಅಲ್ಲ. ಪರಿಸರ ಅಂತಂದ್ರೆ ಆ ಪರಿಸರದೊಳಗೆ ನಾವು ಕಿಂಚಿತ್ ಕಣ’ ಅನ್ನುವ ಅರಿವನ್ನ ಪಡೆದುಕೊಳ್ಳುವುದೇ ಆಗಿದೆ. ಈ ಅರಿವು ಪಡೆದಾಗ ಪರಿಸರ ದಿನಾಚರಣೆ ಅರ್ಥಪೂರ್ಣವಾಗುತ್ತದೆ.