ನಮ್ಮ ಪುಟ್ಟಣ್ಣಯ್ಯ-ದೇವನೂರ ಮಹಾದೇವ

[ಪಾಂಡವಪುರದಲ್ಲಿ 2018ಮಾರ್ಚ್‌ 8ರಂದು ‘ಜನ ಸಮುದಾಯದ ದನಿ ಪುಟ್ಟಣ್ಣಯ್ಯ ಅವರಿಗೆ ಹಸಿರು ನಮನ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು ಆ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ]
ಇವತ್ತು ಪುಟ್ಟಣ್ಣಯ್ಯ ಇಲ್ಲದ ಪಾಂಡವಪುರದ ಸಭೆಯಲ್ಲಿ ಮಾತಾಡಬೇಕಾಗಿದೆ. ಕಾಲವಶರಾದರು ಪುಟ್ಟಣ್ಣಯ್ಯ ಎಂದು ತಿಳಿದಾಕ್ಷಣ, ನಾಡಿನ ಉದ್ದಗಲಕ್ಕೂ ಹಬ್ಬಿದ್ದ ಒಂದು ವಿಶಾಲ ವೃಕ್ಷ- ನೆರಳು ಕೊಡುತ್ತ ಆಸರೆಯಾಗಿದ್ದ ಒಂದು ಬೃಹತ್ ವೃಕ್ಷ ಉರುಳಿಹೋಯ್ತು ಅನ್ನಿಸಿಬಿಟ್ಟಿತು. ನಾಡಿನ ದುಃಖ ದುಮ್ಮಾನ ಸಂಕಟಗಳಿಗೆ ತಲೆ ನೇವರಿಸಿ ಸಾಂತ್ವಾನ ಮಾಡುತ್ತಿದ್ದ ಕೈಗಳು ಇಲ್ಲವಾಗಿಬಿಟ್ಟವು ಅನ್ನಿಸಿತು. ಯಾಕೆಂದರೆ, ಇವರು ಮೇಲುಕೋಟೆ ಕ್ಷೇತ್ರಕ್ಕೆ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದರು. ಇದರ ಜೊತೆಗೆ ರಾಜ್ಯದ 224 ಕ್ಷೇತ್ರಗಳ ದುಡಿಯುವ ವರ್ಗಗಳ ದುಃಖ ದುಮ್ಮಾನ ಸಂಕಟಗಳಿಗೆ ಅಭಿವ್ಯಕ್ತಿಯೂ ಆಗಿದ್ದರು.MLA ಜನರಲ್ ಆಗಿದ್ದರು!

ಪುಟ್ಟಣ್ಣಯ್ಯ ನಿಧನರಾಗುವ ಕೆಲವೇ ದಿನಗಳ ಹಿಂದೆ, ಕೆ.ಬೆಟ್ಟಳ್ಳಿಯಲ್ಲಿ ನಡೆದ ಒಂದು ಯುವಜನರ ಸಭೆಯಲ್ಲಿ ಅವರು ಯುವಜನರಿಗೆ ಕೈಮುಗಿದು ಕೇಳಿಕೊಂಡರು- `ಓಟು ನಿಂನಿಮ್ಮ ಆಯ್ಕೆ, ಅದು ಏನೇ ಆಗಿರಲಿ, ನೀವು ದಯವಿಟ್ಟು ಕುಡಿಯಬೇಡಿ, ಜಗಳ ಆಡಬೇಡಿ’- ಪದೇ ಪದೇ ಕೈ ಮುಗಿದು ಕೇಳಿಕೊಂಡರು. ಇಡೀ ಕ್ಷೇತ್ರ ತನ್ನ ಕುಟುಂಬ ಎಂದು ಭಾವಿಸಿದವರು ಮಾತ್ರ ಈ ರೀತಿ ಹೇಳಲು ಸಾಧ್ಯ. ಪುಟ್ಟಣ್ಣಯ್ಯ ಮಚ್ಚರವಿಲ್ಲದ ಮಗುವಿನಂತಿದ್ದರು. ನಾನು ಗಮನಿಸಿದಂತೆ ಪುಟ್ಟಣ್ಣಯ್ಯ ಏನನ್ನಾದರೂ ಓದಿದರೆ ಅದನ್ನು ಅದ್ಭುತವಾಗಿ ಗ್ರಹಿಸುತ್ತಿದ್ದರು. ಆದರೆ ಓದುತ್ತಿದ್ದುದು ಕಡಿಮೆ. ಇವರು ಜೀವನದ ವಿಶ್ವವಿದ್ಯಾನಿಲಯದಲ್ಲಿ ಎದ್ದುಬಿದ್ದು ಕಲಿತವರು. ಪುಟ್ಟಣ್ಣಯ್ಯ ಆಗಾಗ ತಮ್ಮ ಅಪ್ಪಯ್ಯನನ್ನು ನೆನಪಿಸಿಕೊಳ್ಳುತ್ತಿದ್ದದು ಪುಟ್ಟಣ್ಣಯ್ಯನವರ ತಂದೆ ಕಟ್ಟುನಿಟ್ಟಾಗಿ ಒಂದು ನೀತಿಯನ್ನು ಅನುಸರಿಸುತ್ತಿದ್ದರಂತೆ- 1) ಮನೆ ಮಕ್ಕಳೂ ಕೂಡ ಕೆಲಸದವರ ಜೊತೆ ಕೆಲಸ ಮಾಡಬೇಕು. 2) ಕೆಲಸದವರ ಜೊತೆಗೆ ಜಾತಿಭೇದವಿಲ್ಲದೆ ಊಟ ಮಾಡಬೇಕು. 3) ಪಂಕ್ತಿಭೇದ ತಾರತಮ್ಯ ಯಾವ ಕಾರಣಕ್ಕೂ ಇರಬಾರದು.

ಅಪ್ಪ ಕಲಿಸಿದ ಈ ಮೊದಲ ಪಾಠವೇ ಪುಟ್ಟಣ್ಣಯ್ಯನವರ ವ್ಯಕ್ತಿತ್ವ ಆಗಿತ್ತು. ಹಾಗಾಗೇ ಒಬ್ಬಳು ದಲಿತ ಮುದುಕಿ ಸಣ್ಣತಾಯಕ್ಕ ತನ್ನ ಪಾತ್ರೆ ಪಗಡ ಕಾಸಿನ ಸರ ಆಸ್ತಿಪಾಸ್ತಿ ತನ್ನದು ಅಂತ ಏನಿತ್ತೊ ಅದನ್ನೆಲ್ಲಾ ಪುಟ್ಟಣ್ಣಯ್ಯನವರ ಹೆಸರಿಗೆ ವಿಲ್ ಮಾಡಿದ ಅಸಾಧಾರಣ ಘಟನೆ ಇಲ್ಲಿ ಸಂಭವಿಸುತ್ತದೆ. ಒಬ್ಬರ ಜೀವಿತಾವಧಿಯಲ್ಲಿ ಇದಕ್ಕಿಂತ ದೊಡ್ಡದು ಬಹುಶಃ ಯಾವುದೂ ಇರಲಾರದು. ಆಗಾಗ ಪುಟ್ಟಣ್ಣಯ್ಯ, ಗತಿಸಿದ ಹಿರೀಕರಿಗೆ ಎಡೆ ಇಡುವ ಮಾರ್ಲಮಿ ಹಬ್ಬ- ಪಕ್ಷದ ಬಗ್ಗೆ ಹೇಳುತ್ತಿದ್ದರು: ಪಕ್ಷ ಎಂದರೆ ನಮ್ಮ ಹಿರೀಕರನ್ನು ನೆನಪಿಸಿಕೊಳ್ಳುವ ದಿನ… ನಮ್ಮ ಅಯ್ಯ ಅಜ್ಜ ಇಂತಿಂಥ ಒಳ್ಳೆ ಕೆಲಸ ಮಾಡಿದ್ದರು; ನಮ್ಮ ಅವ್ವ, ಅಜ್ಜಿ ಇಂತಿಂಥ ಒಳ್ಳೆ ಕೆಲಸ ಮಾಡಿದ್ದರು ಅಂತ ನೆನಪಿಸಿಕೊಳ್ಳೊ ದಿನ. ಆ ಒಳ್ಳೆ ಕೆಲಸಗಳನ್ನು ನಾವೂ ಮುಂದುವರಿಸಬೇಕು ಎಂದು ಪ್ರತಿಜ್ಞೆ ಮಾಡುವ ದಿನ ಅನ್ನುತ್ತಿದ್ದರು. ಈಗ ಪುಟ್ಟಣ್ಣಯ್ಯ ಪಿತೃವಾಗಿಬಿಟ್ಟಿದ್ದಾರೆ. ಇಂದು ಅವರನ್ನು ನೆನಸಿಕೊಳ್ಳುವುದೆಂದರೆ ಅವರ ಒಳ್ಳೆಯ ಕೆಲಸವನ್ನು ಮುಂದುವರಿಸುವ ಹೊಣೆಗಾರಿಕೆ ಹೊತ್ತು ಕೊಳ್ಳಬೇಕಾದ ದಿನ. ಇದು ಈಗ ನಾಡಿನ ಯುವಜನತೆ ಮೇಲಿದೆ, ಯುವಜನತೆ ಪ್ರತಿಜ್ಞೆ ಮಾಡಬೇಕಾಗಿದೆ.