ದೊಂಬರ ಪರ ಮತ್ತು ಅರಳಿಮರ-ದೇವನೂರ ಮಹಾದೇವ

[ಎಲ್ಲರಿಗೂ ಹಂಚಿ ಉಣ್ಣುವ ದೊಂಬರ ಪರ ಪದ್ಧತಿ ಮತ್ತು ಎಲ್ಲೆಂದರೆ ಅಲ್ಲಿ ಬೇರು ಬಿಟ್ಟು ಎದ್ದು ನಿಲ್ಲುವ ಅರಳೀಮರದ ಸಮೀಕರಣದೊಂದಿಗೆ ಸಮಾಜವಾದ ಮತ್ತು ಕಮ್ಯುನಿಸಂನ ಮರು ಹುಟ್ಟಿನ ಕಥೆ ಹೇಳಿದ ದೇವನೂರ ಮಹಾದೇವ ಅವರು.]

arali mara
ನಿಮ್ಮ ಜೀವನ ದೃಷ್ಟೀನೋ ಲೋಕದೃಷ್ಟೀನೋ ಯಾವುದು?-ಆಗಾಗ ಈ ಪ್ರಶ್ನೆಗಳು ಎಸೆಯಲ್ಪಡುತ್ತವೆ. ತಾಂತ್ರಿಕ ಪದಗಳಿಂದ ಹೇಳಲು ನನ್ನ ನಾಲಿಗೆ ತೊದಲುತ್ತದೆ. ಅಥವಾ ನಾನು ಕಲಿತ ವಿದ್ಯೆಯಿಂದಲೋ ಪಡೆದ ಜ್ಞಾನದಿಂದಲೋ ಹೇಳಹೊರಟರೆ ನನಗೆ ತುಂಬಾ ಶ್ರಮವಾಗುತ್ತದೆ. ಕಲಿತ ವಿದ್ಯೆಯನ್ನು ಅರಗಿಸಿಕೊಂಡು ಕಣ್ಮುಂದೆ ಕಾಣುವ ಜೀವನ ವಿವರಗಳಲ್ಲಿ ಹೇಳಹೊರಟರೆ… ನನಗೆ ‘ದೊಂಬರ ಪರ’ ಕಾಣುತ್ತದೆ.

ಮನರಂಜನೆ ನೀಡುತ್ತ ಹೊಟ್ಟೆ ತುಂಬಿಸಿಕೊಳ್ಳುವ ನಮ್ಮ ಅಲೆಮಾರಿ ಸಮುದಾಯ ದೊಂಬರು ಆಗಾಗ ‘ಪರ’ ಎಂದು ಮಾಡುತ್ತಾರೆ. ತಾವು ಸಂಗ್ರಹಿಸಿದ ದವಸಧಾನ್ಯಗಳಿಂದ ಒಟ್ಟಿಗೆ ಅಡಿಗೆ ಮಾಡಿ ಒಟ್ಟಿಗೆ ಒಂದು ಮರದ ಕೆಳಗೆ ಉಣ್ಣುತ್ತಾರೆ. ಈ ಸಾಮೂಹಿಕ ಉಣ್ಣುವ ಕ್ರಿಯೆಗೆ ಮೊದಲು- ನಾನಾ ಕಾರಣಗಳಿಂದ ಪಂಕ್ತಿಗೆ ಬರಲಾಗದಿದ್ದವರನ್ನೆಲ್ಲಾ ಲೆಕ್ಕ ಹಾಕಿ ಉದಾ: ನಡೆಯಲಾಗದ ವಯಸ್ಸಾದವರು, ಖಾಯಿಲೆ ಬಿದ್ದು ಬರಲಾಗದವರು, ಬಾಣಂತಿಯರು-ಹೀಗೆ ಪಂಕ್ತಿ ಊಟಕ್ಕೆ ಬಾರದವರ ಪಾಲನ್ನು ಎತ್ತಿಡುತ್ತಾರೆ. ಹೀಗೆ ಮಾಡುವಾಗ ಬಸುರಿ ಹೆಣ್ಣು ಮಕ್ಕಳಿಗೆ ಎರಡು ಪಾಲು ಎತ್ತಿಡುತ್ತಾರೆ. ಒಂದು ಪಾಲು ಆ ಗರ್ಭಿಣಿ ಹೆಂಗಸಿಗೆ, ಇನ್ನೊಂದು ಪಾಲು ಗರ್ಭಸ್ಥ ಶಿಶುವಿಗೆ- ಬಹುಶಃ ಇದು ನನ್ನ ಲೋಕದೃಷ್ಟಿ?

ಹೌದು, ಇದು ಸ್ಥೂಲವಾಗಿ ಸಮಾಜವಾದದ, ಕಮ್ಯುನಿಸಂನ ಪರಿಸರವಾದದ ಜೀವನಕ್ರಮವಾಗಿದೆ, ಹೌದು. ದೊಂಬರು ಪರ ಮಾಡುವಾಗ ನೆರಳಾಗಿದ್ದ ಬಂಧುತ್ವದ ಸಮಾನತೆಯ ಹಂಚಿ ಉಣ್ಣುವ ಮರ ಇಂದು ಈ ಕಾಲಮಾನಕ್ಕೆ ಸಿಕ್ಕಿ ಉರುಳಿ ಹೋಗಿದೆ ಅನ್ನುತ್ತಾರೆ. ಆದರೆ ಅದು ಉರುಳಿಹೋದದ್ದು ಅಲ್ಲ; ಬಕಾಸುರ ಬಂಡವಾಳಕ್ಕೆ ಬಲಿಯಾದ ಮನುಷ್ಯ ತನ್ನ ಮನುಷ್ಯತ್ವವನ್ನು ಕಳೆದುಕೊಂಡು ಆ ಮರವನ್ನು ಕತ್ತರಿಸಿ ಉರುಳಿಸಿದ್ದು ಅದು. ಅದಕ್ಕೆ ಇಂದು- ಸಮಾಜವಾದದ, ಕಮ್ಯುನಿಸಂನ ಮರ ಉರುಳಿಹೋಗಿದೆ ಎಂಬ ನುಡಿಗಟ್ಟನ್ನು ಈ ಜಾಗತೀಕರಣ ಚಾಲ್ತಿಗೆ ತಂದಿದೆ.

ಆದರೆ, ಉರುಳಿಹೋಗಿದೆ ಎಂದು ಹೇಳಲಾಗುತ್ತಿರುವ ಆ ಮರ, ಸಮಾಜವಾದ, ಕಮ್ಯುನಿಸಂನ ಸಮಾನತೆಯ ಮರ ಇದೆಯಲ್ಲಾ ಅದು ಅರಳಿಮರದಂತೆ. ಅರಳಿಮರವನ್ನು ಕತ್ತರಿಸಿ ಧ್ವಂಸ ಮಾಡಿದರೂ ಅದರ ಹುಟ್ಟು ಅಲ್ಲಿರಲಿಲ್ಲ ಅನ್ನಿಸಿದರೂ, ಆದರೂ ಆ ಧ್ವಂಸಗೊಂಡ ಅರಳಿಮರದ ಬೇರು ಎತ್ತೆತ್ತ ಚಾಚಿಕೊಂಡಿತ್ತೋ ಅಲ್ಲೆಲ್ಲ ಆ ಮರದ ಬೇರಿನ ಗಿಣ್ಣು ಕಣ್ಣುಗಳಿಂದಲೇ ಅರಳಿಗಿಡವೊಂದು ಆ ನೆಲದ ಜಾಯಮಾನಕ್ಕೆ ಅನುಗುಣವಾಗಿ ಚಿಗುರುತ್ತದೆ. ಕಾಂಕ್ರಿಟ್ ಗೋಡೆಯನ್ನು ಸೀಳಿಕೊಂಡೂ ಆ ಬೇರು ಚಿಗುರಿ ಮರವಾಗಿ ಬೆಳೆಯುತ್ತದೆ. ಹೀಗೆ ಸಮಾಜವಾದದ, ಕಮುನ್ಯಿಸಂನ ಕನಸೂ ಚಿಗುರುತ್ತದೆ, ಆ ನೆಲದ ಜಾಯಮಾನಕ್ಕೆ ಅನುಗುಣವಾಗಿ. ಯಾಕೆಂದರೆ ಮನುಷ್ಯನಿಗೆ ಮನುಷ್ಯನಾಗಿ ಬದುಕಬೇಕೆಂಬ ವಾಂಛೆ ಮನುಷ್ಯನೊಳಗೂ ಇದೆಯಲ್ಲವೆ?