ದೇವನೂರು ಕಥೆ ಹೇಳಿದರು-ಎನ್ ಸಂಧ್ಯಾರಾಣಿ

[‘ರಂಗ ನಿರಂತರ’ ತಂಡ ಸಿಜಿಕೆ ನೆನಪಿನ ನಾಲ್ಕನೆಯ ಆವೃತ್ತಿಯ ಉತ್ಸವ ನಡೆಸುತ್ತಿದ್ದಾರೆ. 15.5.2017 ರಂದು ಉತ್ಸವವನ್ನು ಕಥೆಗಳ ಮೂಲಕ ದೇವನೂರ ಮಹಾದೇವ ಉದ್ಘಾಟಿಸಿದರು. ಅದರ ನಿರೂಪಣೆ 16.5.2017ರ ಅವಧಿ ವೆಬ್ ಮ್ಯಾಗಝಿನ್ ನಲ್ಲಿ ಎನ್. ಸಂಧ್ಯಾರಾಣಿ ಅವರು ಮಾಡಿದ್ದಾರೆ.]

Avadhi | May 16, 2017

 

ನಿನ್ನೆ ದೇವನೂರು ಮಹಾದೇವ ಕಲಾಕ್ಷೇತ್ರದಲ್ಲಿ ನೆರೆದಿದ್ದ ಜನರಿಗೆ ಕಥೆ ಹೇಳಿದರು.

’ಒಂದೂರಿನಲ್ಲಿ ಒಬ್ಬ ಬಡವಿ. ಒಂದ್ಸಲ ಅವರಣ್ಣ ಬಂದು ಊರಲ್ಲಿ ಮದುವೆ ಇದೆ ಅಂತ ಕರೀತಾನೆ. ಪಾಪ ಹೋಗಬೇಕು ಅಂತ ಆಸೆ, ಆದರೆ ಉಡಲು ಒಳ್ಳೆ ಸೀರೆ ಇಲ್ಲ. ಪಕ್ಕದವರ ಮನೆಯಲ್ಲಿ ಸೀರೆ ಈಸ್ಕೊಂಡು ಮದುವೆಗೆ ಹೋಗ್ತಾಳೆ. ಬಡವರ ಮನೆ ಹೆಣ್ಣು, ಅಲ್ಲಿ ಹೋದರೂ ಕೆಲಸ ತಪ್ಪುವುದಿಲ್ಲ. ಸೀರೆ ಕೊಳೆಯಾದೀತೆಂದು ಅಡಿಗೆ ಮನೆ ತೊಲೆಗೆ ಸೀರೆ ನೇತು ಹಾಕಿರುತ್ತಾಳೆ. ಅವಳ ದುರದೃಷ್ಟ. ಬೆಂಕಿಯ ಜ್ವಾಲೆ ತಾಕಿ ಸೀರೆ ಸುಟ್ಟುಹೋಗುತ್ತದೆ. ಅವಳ ಮೇಲೆ ಆಕಾಶವೇ ಕಳಚಿಬೀಳುತ್ತದೆ…’

‘…ಮದುವೆ ಮುಗಿದಿದೆ. ಊರಿಗೆ ಹೇಗೆ ಹೋಗೋದು, ಪಕ್ಕದ ಮನೆಯವರಿಗೆ ಏನು ಹೇಳುವುದು ಅನ್ನುವುದು ಅವಳ ಚಿಂತೆ. ಬರುವಾಗ ದಾರಿಯಲ್ಲಿ ಒಂದು ಹಾವು ಸತ್ತು ಬಿದ್ದಿರುತ್ತದೆ. ಆಕೆ ಒಂದು ನಿರ್ಧಾರ ಮಾಡುತ್ತಾಳೆ. ಈ ಹಾವನ್ನು ನೀರಿನಲ್ಲಿ ಬೇಯಿಸಿ ಮನೆಯವರೆಲ್ಲಾ ತಿಂದುಬಿಡೋದು, ಎಲ್ಲರೂ ಸತ್ತುಬಿಡಬಹುದು. ಸಮಸ್ಯೆಗೆ ಇದೊಂದೇ ಪರಿಹಾರ ಎನ್ನುವುದು ಅವಳ ಆಲೋಚನೆ. ಮನೆಗೆ ಬಂದು ನೀರಿನಲ್ಲಿ ಹಾವು ಬೇಯಿಸುತ್ತಾರೆ, ಅದು ಬಂಗಾರದ ಹಾವಾಗುತ್ತದೆ. ನಮ್ಮ ಜನಪದದವರಿಗೆ ಬಡವರನ್ನೂ ಬದುಕಿಸುವ ಕಾಳಜಿ ಇತ್ತು’.

ಇನ್ನೊಂದು ಕಥೆ.

‘ಒಬ್ಬ ರಾಜನಿಗೆ ಏಳು ಜನ ಗಂಡು ಮಕ್ಕಳು, ಒಬ್ಬಳೇ ಮಗಳು. ಕೊನೆಯ ಮಗನಿಗೆ ಕಾಲು ಕುಂಟು. ಒಂದ್ಸಲ ರಾಕ್ಷಸನೊಬ್ಬ ರಾಜಕುಮಾರಿಯನ್ನು ಹೊತ್ತುಕೊಂಡು ಹೋಗುತ್ತಾನೆ. ಅಣ್ಣಂದಿರು ಅವಳನ್ನು ಹುಡುಕಲು ಹೋಗುತ್ತಾರೆ. ಕುಂಟ ತಾನೂ ತಯಾರಾಗುತ್ತಾನೆ. ಎಲ್ಲರೂ ಹಾಸ್ಯ ಮಾಡಿ ಅವನನ್ನು ಬಿಟ್ಟು ಹೋಗುತ್ತಾರೆ. ರಾಕ್ಷಸ ಅವರನ್ನೂ ಸೆರೆಯಾಳಾಗಿಸುತ್ತಾನೆ. ಕೊನೆಗೆ ಆ ಕುಂಟ ಹೋಗಿ ತನ್ನ ವಾಕ್ಚಾತುರ್ಯದಿಂದ ರಾಕ್ಷಸನನ್ನು ಸೋಲಿಸಿ ಎಲ್ಲರನ್ನೂ ಬಿಡಿಸುತ್ತಾನೆ. ಕಥೆ ಹೇಳುವ ಅಜ್ಜಿಗೆ ಕುಂಟನನ್ನೂ ಗೆಲ್ಲಿಸುವ ಮನಸ್ಸಿತ್ತು’.

ಊರಕಡೆ ದೇವರಿಗೆ ಪರ ಮಾಡುತ್ತಿದ್ದರು. ಆಗ ಊರಿನಲ್ಲಿ ಒಟ್ಟಾಗಿ ಅಡಿಗೆ ಮಾಡಿಸುತ್ತಿದ್ದರು. ಬಂದವರೆಲ್ಲರಿಗೂ ಪಾಲು ಮಾಡುವ ಮೊದಲು ಅಲ್ಲಿ ಬರಲಾಗದ ವಯಸ್ಸಾದವರಿಗೆ ಪಾಲು ತೆಗೆದಿಡುತ್ತಿದ್ದರು. ಊರಿನಲ್ಲಿ ಗರ್ಭಿಣಿ ಹೆಂಗಸರಿದ್ದರೆ ಅವರಿಗೆ ಎರಡು ಪಾಲು ತೆಗೆದಿಡುತ್ತಿದ್ದರು. ತಾಯಿಯದು ಒಂದು ಪಾಲು, ಇನ್ನೂ ಹುಟ್ಟದಿದ್ದ ಮಗುವಿನದು ಒಂದು ಪಾಲು. ಹಂಚಿಕೊಳ್ಳುವ ಗುಣ ಅಲ್ಲಿಂದ ಶುರು ಆಗುತ್ತಿತ್ತು’.

ಈ ಮೂರು ಕಥೆ ಸೇರಿ, ಅದಕ್ಕೊಂದು ಆಕಾರ ಕೊಟ್ಟರೆ ಅದು ನಮ್ಮ ಸಿಜಿಕೆ. ಅವರು ಎಲ್ಲರಿಗೂ ಪಾಲು ತೆಗೆದಿಡುತ್ತಿದ್ದರು. ಎಲ್ಲಾ ನಿರಾಕರಣೆಗೊಂಡವರಿಗೂ, ಎಲ್ಲಾ drop outs ಗಳಿಗೂ ಅವರ ಪ್ರೀತಿಯಲ್ಲಿ ಪಾಲು ತೆಗೆದಿಡುತ್ತಿದ್ದರು.

ಮೂರು ಕಥೆ ಹೇಳಿದ ದೇವನೂರು ಅವುಗಳನ್ನು ಸೇರಿಸಿ ಇನ್ನೊಂದು ಚಿತ್ರ ಕಟ್ಟಿ ಕೊಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ನಿನ್ನೆಯಿಂದ ಸಿಜಿಕೆ ಸಂಭ್ರಮ. ’ರಂಗ ನಿರಂತರ’ ತಂಡ ಸಿಜಿಕೆ ನೆನಪಿನ ನಾಲ್ಕನೆಯ ಆವೃತ್ತಿಯ ಉತ್ಸವ ನಡೆಸುತ್ತಿದ್ದಾರೆ. ಡಾ ವಿಜಯಮ್ಮ ಈ ಆವೃತ್ತಿಯ ಅಧ್ಯಕ್ಷರು. ನಿನ್ನೆ ಕಲಾಕ್ಷೇತ್ರದಲ್ಲಿ ನಾಡಿನ ಸಾಕ್ಷೀಪ್ರಜ್ಞೆ ದೇವನೂರು ಮಹಾದೇವ ಅವರು ಉತ್ಸವವನ್ನು ಉದ್ಘಾಟಿಸಿದರು.

ಉತ್ಸವವನ್ನು ಕಥೆಗಳ ಮೂಲಕ ಉದ್ಘಾಟಿಸಿದ ಮಹಾದೇವ ಸಿಜಿಕೆಯನ್ನು ಕಾಣದವರ ಹೃದಯಕ್ಕೂ ಸಿಜಿಕೆಯವರನ್ನು ಕಾಣಿಸಿದರು.

ಇನ್ನು ಐದು ದಿನಗಳು, ಅಂದರೆ ಈ ತಿಂಗಳ ೨೦ನೆಯ ತಾರೀಖಿನವರೆಗೂ ಕಲಾಕ್ಷೇತ್ರದ ಸಂಜೆಗಳು ಸಿಜಿಕೆ ಹೆಸರಿನಲ್ಲಿ ರಂಗುಗೊಳ್ಳಲಿವೆ.