*ದಕ್ಷಿಣಾಯನ ಕರ್ನಾಟಕ ಅಭಿವ್ಯಕ್ತಿ ಸಮಾವೇಶ’ದ ಪ್ರಾಸ್ತಾವಿಕ ಮಾತು.- ರಾಜೇಂದ್ರ ಚೆನ್ನಿ,

ಸ್ನೇಹಿತರೇ, ಮೊದಲನೆಯದಾಗಿ ನಿಮಗೆಲ್ಲರಿಗೂ ಸ್ವಾಗತ.
ಸಾಮಾನ್ಯವಾಗಿ ಯಾವುದೇ ಕ್ರಿಯೆ, ಕಾರ್ಯಕ್ರಮಗಳು ನಡೆಯುತ್ತಿರುವಾಗ ಹಿಡನ್ ಅಜೆಂಡಾವನ್ನು ಮೊದಲು ಹೇಳುವುದಿಲ್ಲ. ಆದರೆ ನಮ್ಮ ಈ ಸಮಾವೇಶದ ಹಿಡೆನ್ ಅಜೆಂಡಗಳನ್ನು ಮೊದಲಿಗೆ ನಿಮಗೆ ಹೇಳಿಬಿಡುತ್ತೇವೆ.
ಮೊದಲನೆಯದಾಗಿ ನಿಮ್ಮ ಮುಖದ ಮೇಲಿರುವ ಆತಂಕದ ಛಾಯೆಗಳನ್ನು ತೆಗೆದುಹಾಕುವುದು.
ಎರಡನೇಯದು ನಮ್ಮೊಳಗಿನ ಬಿಕ್ಕಟ್ಟುಗಳು, ಸಿಕ್ಕುಗಳನ್ನು ಬಿಡಿಸಿ ಸರಳಗೊಳಿಸುವುದು.
ಮೂರನೇಯದು ಬಹುಮತವೆಂದರೆ ಅದು ಜನಮತ ಅಲ್ಲ. ಜನ ಯಾಕೆ ನಮ್ಮ ಮಾತು ಕೇಳದೇ ಕೋಮುವಾದಿಗಳ ಹಿಂದೆ ಹೋಗುತ್ತಿದ್ದಾರೆ ಎನ್ನುವ ಆತಂಕ ನಮಗಿದೆ. ನಿಜ ಏನೆಂದರೆ ಜನರ ಮನಸ್ಸಿನಲ್ಲಿ ವಿವೇಕ ಇರುತ್ತದೆ. ಅದು ಕೆಲವು ಕಾಲದಲ್ಲಿ ಮಂಕಾಗುತ್ತದೆ. ಈ ಕಾಲದಲ್ಲಿಯೂ ಸಹ. ಆದರೆ ಅವರು ಖಂಡಿತಾ ಜೀವಪರವಾಗಿ ಆಲೋಚಿಸುತ್ತಾರೆ ಎಂಬ ಆತ್ಮವಿಶ್ವಾಸ ಮೂಡಿಸುವುದು.
ಕೊನೆಯದಾಗಿ ಕೆಲವಾರು ವರ್ಷಗಳಿಂದ ಕೆಲವು ಮಾತುನಾಡುವವರ ಗಂಟಲಿನಲ್ಲಿ ಕೂಗುಮಾರಿ ಗುಣ ಬಂದು ಬಿಟ್ಟಿದೆ. ಇದನ್ನು ಎದುರಿಸುವ ಬಗೆ ಏನೆಂಬುದು.
ಈ ಸಮಾವೇಶದ ಒಂದು ಉದ್ದೇಶ ನಾವು ಒಂದುಗೂಡಬೇಕು.
ಕನ್ನಡಕ್ಕೆ ಸುದೀರ್ಘವಾದ ಬಹುತ್ವದ, ಹೋರಾಟದ ಪರಂಪರೆಯಿದೆ. ಕಷ್ಟ ಕಾಲದಲ್ಲಿ ಪ್ರತಿರೋಧ ತೋರಿಸಿದ್ದಾರೆ. ಅದರ ವಾರಸುದಾರರಾಗಬೇಕು ನಾವು.
ದಕ್ಷಿಣಾಯನ ಯಾಕೆಂದರೆ ನಾವು ಇಂದು ನಡೆಯುತ್ತಿರುವ ಹಲವು ಚಳವಳಿಗಳು ಮತ್ತು ಹೋರಾಟಗಳನ್ನು ಗೌರವಪೂರ್ವಕವಾಗಿ ನೆನಪು ಮಾಡಿಕೊಳ್ಳುತ್ತೇವೆ. ಹಲವು ವಿಚಾರಗಳಿಗೆ ಹಲವಾರು ಜನ ಹಲವಾರು ಸಿದ್ಧಾಂತಗಳನ್ನು ಇಟ್ಟುಕೊಂಡು ಹೋರಾಟಗಳು ನಡೆಯುತ್ತಲೇ ಇವೆ. ಪ್ರಭುತ್ವ ದಮನಕೋರ ಹಲ್ಲೆಗಳ ವಿರುದ್ಧ ಪ್ರಬಲ ಪ್ರತಿರೋಧ  ಕಟ್ಟುತ್ತಿದ್ದಾರೆ. ಇದನ್ನು ಒಂದು ವೇದಿಕೆಯಲ್ಲ, ಒಂದು ಚಾವಡಿಯ ಕೆಳಗೆ ಕೂತು ಮಾತಾಡಬೇಕಿದೆ. ನಂತರ ಅದು ಸಮುದಾಯದ ಜೊತೆಗಿನ ಮಾತಾಗಬೇಕಿದೆ.
ಜೀವವಿರೋಧಿ ಶಕ್ತಿಗಳು ಜೀವವಿರೋಧದ ತತ್ವ ಹೇಳಿ ಜನರನ್ನು ಬುಟ್ಟಿಗೆ ಹಾಕಿಕೊಂಡಿವೆ. ಆದರೆ ಜನರೊಟ್ಟಿಗೆ ಇರಬೇಕಾದ ಬರಹಗಾರರು ಚದುರಿ ಹೋಗಿದ್ದಾರೆ ಅವರನ್ನು ಒಂದುಗೂಡಿಸಿ ಎಂದು ನನಗೆ ಒಂದು ಇ ಮೇಲ್ ಸಂದೇಶ ಬಂದಿದೆ. ಇದು ಸತ್ಯವಾದ ಮಾತು.
ದಕ್ಷಿಣಾಯನ ಇದು ಒಂದು ಸಂಘಟನೆಯಲ್ಲ. ಏನಾದರೂ ತಪ್ಪುಗಳಾದರೆ ಶಿಕ್ಷೆ ನೀಡಲು ಕೆಲವರು ಬೇಕಲ್ಲ. ಅದಕ್ಕೆ ಯಾರದರೊಬ್ಬರು ಸಹಿ ಮಾಡಬೇಕಲ್ಲ ಅದಕ್ಕೆ ನಾವು ಮೂರ್ನಾಲ್ಕು ಜನ ಸಹಿ ಮಾಡುತ್ತಿದ್ದೇವೆ ಅಷ್ಟೇ.
ಇದೊಂದು ಪಯಣ, ಅಭಿಯಾನ, ಪ್ರಯೋಗವೇ ದಕ್ಷಿಣಾಯನವಾಗಿದೆ.
ನಮಗೆ ಸಿದ್ಧ ಸಿದ್ಧಾಂತಗಳ ಗೊಡವೆಯಿಲ್ಲ. ಮತ್ತು ಯಾವುದೇ ಹುನ್ನಾರ ಇಲ್ಲ. ಬರಹಗಾರರ, ಕಲಾವಿದರ, ಸೃಜನಶೀಲ ವ್ಯಕ್ತಿಗಳ ಒಕ್ಕೂಟವಾಗಿದೆ.
ನಮ್ಮಲ್ಲಿ ಕೆಲವರು ಎದುರಾಳಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರದೇ ರೀತಿಯಲ್ಲಿ ಮಾತಾಡುತ್ತಿದ್ದೇವೆ. ಇದರಿಂದ ಆ ಮಾತು ಅರ್ಥ ಕಳೆದುಕೊಂಡಿದೆ. ದುಷ್ಟ ವ್ಯಕ್ತಿಗಳ ಮತ್ತು ಶಕ್ತಿಗಳ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ ಕಟ್ಟಬೇಕಿದೆ.
ಇದಕ್ಕೆ ನೆಲೆ ಯಾವುದೆಂದರೆ ನಮ್ಮ  ಪರಂಪರೆಯ ನುಡಿಗಟ್ಟು ಮತ್ತು ಭಾಷೆಯನ್ನು ಪರಿಶೀಲನೆ ಮಾಡಿಕೊಂಡು.. ಇಂದಿಗೆ ಅಳವಡಿಸಿಕೊಳ್ಳಬೇಕಿದೆ.
ಕಣ್ಣೆದುರಿಗಿನ ಸರ್ವಾಧಿಕಾರಿ ನಾಳೆ ಇಲ್ಲಿಗೂ ಬರಬೇಕಿದೆ. ಹಾಗಾಗಿ ನಾವು ಮೊದಲು ಮನಸ್ಸನ್ನು ಬದಲಿಸುವ ಕೆಲಸ ಆಗಬೇಕು.
ಪಂಪನಿಂದ ಆರಂಭವಾಗಿರುವ ಪರಂಪರೆಯ ಪ್ರಭುತ್ವವನ್ನು ಪ್ರಶ್ನೆ ಮಾಡುವುದನ್ನು ನಮಗೆ ಕಲಿಸಿದೆ. ಈ ವಿವೇಕ ಕನ್ನಡ ಸಂಸ್ಕೃತಿಯ ಆತ್ಮವಾಗಿದೆ.
ಕುವೆಂಪು ಮಲೆಗಳಲ್ಲಿ ಮದುಗಳಲ್ಲಿ  ಸ್ಥಳೀಯ ದೇವತೆಗಳನ್ನು ಪ್ರತಿಷ್ಠಪಿಸಬೇಕು ಎಂದು ಬರೆದಿದ್ದಾರೆ. ಇದು ಸ್ಥಳೀಯ ಬಹು ಸಂಸ್ಕೃತಿಯ, ಬಹುತ್ವವನ್ನು ಗೌರವಿಸುವ  ಈ ಕಲ್ಪನೆಯನ್ನು ದಕ್ಷಿಣಾಯನ ಇಟ್ಟುಕೊಂಡಿದೆ. ಕರ್ನಾಟಕ ಮಾತ್ರವಲ್ಲದೇ ದೇಶದ ೧೨ ರಾಜ್ಯಗಳಲ್ಲಿ  ದಕ್ಷಿಣಾಯನ ಪ್ರಬಲವಾಗಿದೆ.
ಸಿನಿಮಾ, ಬರಹ, ಚಿತ್ರಗಳ ಮೂಲಕ ನಮ್ಮ ಜೀವಪರ ಅಂಶಗಳನ್ನು ಸಮರ್ಥಿಸುವ ಕೆಲಸ ಮಾಡಬೇಕಿದೆ.
ಬಹುತ್ವ ಎನ್ನುವ ಕಲ್ಪನೆ ನಮ್ಮ ಕನಸಿನ ಭಾರತವಾಗಿದೆ. ಭಾರತವನ್ನು ಕೆಲವರು ಹೈಜಾಕ್ ಮಾಡಿದ್ದಾರೆ. ಮೊನ್ನೆ ಒಬ್ಬ ಮಾಜಿ ಸಂಸದ ಹೇಳಿದ್ದಾನೆ. ನಾವು ಜನಾಂಗೀಯ ನಿಂದನೆ ಮಾಡುವುದಿಲ್ಲ ಹಾಗಿದ್ದರೆ ಇಷ್ಟು ದಿನ ದಕ್ಷಿಣ ಭಾರತದ ಕಪ್ಪು ಜನರೊಟ್ಟಿಗೆ ಹೇಗೆ ಬದುಕುತ್ತಿದ್ದೇವು ಎಂದು ಹೇಳಿದ್ದಾನೆ..
ಮತ್ತೊಬ್ಬ ಗೋವಾದಲ್ಲಿ ಮಂತ್ರಿ ಹೇಳುತ್ತಾನೆ ನಮ್ಮ ಬೀಚ್ ಗಳನ್ನು ಸ್ವಚ್ಛ ಮಾಡಬೇಕು, ಅಲ್ಲಿರುವ ಲಂಬಾಣಿಗಳನ್ನು ಹೊರಹಾಕಬೇಕು ಅನ್ನುವ ದಾಷ್ಟ್ರ್ಯ  ತೋರುತ್ತಾನೆ. ಇಂತಹ ದುಷ್ಟ ಶಕ್ತಿಗಳ ವಿರುದ್ಧ ನಾವು ಹೋರಾಡಬೇಕಿದೆ.
ಇದು ಬಹುವಚನ ಭಾರತ. ನಮ್ಮ ಕಲ್ಪನೆಯ ಪ್ರಜಾಪ್ರಭುತ್ವ ಇದೆ. ನಮಗೆ ಇಷ್ಟವಾದ ಹಾಗೆ ಯಾರಿಗೂ ತೊಂದರೆ ಕೊಡದೆ ಬದುಕುವ ಹಕ್ಕು. ನೈಸರ್ಗಿಕ ರೀತಿಯಲ್ಲಿ ತಮ್ಮಷ್ಟಕ್ಕೆ ತಾವೇ ಚೆನ್ನಾಗಿ ಬೆಳೆದು ಬಣ್ಣ ಬಣ್ಣಗಳಿಂದ ಕಂಗೊಳಿಸುವ ರೀತಿ ಇದಾಗಿದೆ.
ಎರಡನೆಯದಾಗಿ ಸಂವಾದ ಎನ್ನುವುದನ್ನು ಬಳಸುತ್ತಿದ್ದೇವೆ. ನಾವು ವಿಚಾರವಂತರು, ಬುದ್ಧಿಜೀವಿಗಳು ಪಾತಕ ಮಾಡಿದ್ದೇವೆ. ಅದೆಂದರೆ ನಾವೊಂದು  ಸ್ಥಾನವನ್ನು ಕಲ್ಪಿಸಿಕೊಂಡು ಅಲ್ಲಿ ನಿಂತು ಅಧಿಕಾರದಿಂದ ಜನರಿಗೆ ವಿಚಾರ ಹೇಳುವುದಾಗಿದೆ. ಈಗ ಕೆಳಗಿಳಿದು ಅ ಸಮುದಾಯದೊಟ್ಟಿಗೆ ಬೆರೆತು ಕಲಿತು ಕಲಿಸಬೇಕು.
ವಿಕೇಂದ್ರೀಕರಣ ನಮ್ಮ ಮತ್ತೊಂದು ಪ್ರಮುಖ ಆದ್ಯತೆಯಾಗಿದೆ. ಅಧಿಕಾರ ಒಂದೇ ಕಡೆ ಇದ್ದಾಗ ಅಪಾಯಗಳು ಕಾಣುತ್ತವೆ. ಬಹುಮುಖವಾದ ವಿಕೇಂದ್ರೀಕೃತ, ಆರೋಗ್ಯಕರ, ನಿರ್ಭೀತ ಸಮಾಜ ಕಟ್ಟುವ ಕೆಲಸವನ್ನು ನಾವೆಲ್ಲರೂ ಮಾಡೋಣ. ಧನ್ಯವಾದಗಳು.