ಜಿ.ಎಸ್.ಜಯದೇವ ಅವರ ಹಳ್ಳಿಹಾದಿಗೆ ದೇವನೂರ ಮಹಾದೇವ ಅವರ ಬೆನ್ನುಡಿ

[ಜಿ.ಎಸ್.ಜಯದೇವ ಅವರ ಪ್ರಜಾವಾಣಿ ಅಂಕಣ ಬರಹಗಳ ಸಂಕಲನ ‘ಹಳ್ಳಿಹಾದಿ’ ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದೆ. ಅದಕ್ಕೆ ದೇವನೂರ ಮಹಾದೇವ ಅವರು ಬರೆದ ಬೆನ್ನುಡಿ ಇಲ್ಲಿದೆ.]

“ಆರಂಭದಲ್ಲಿ ಜಿ.ಎಸ್. ಜಯದೇವ ಅವರ ಲೇಖನಗಳು ಒಬ್ಬ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತನ ವಿಶ್ಲೇಷಣೆಗಳಂತೆ ಕಾಣುತ್ತಿದ್ದವು. ಆದರೆ ಆಮೇಲಿನ ಅವರ ಲೇಖನಗಳು, ಆಯ್ಕೆ ಮಾಡಿಕೊಂಡ ವಸ್ತುಗಳು ತಾವೇ ಮಾತಾಡತೊಡಗಿದಂತೆ ನಮ್ಮನ್ನು ಆವರಿಸಿಕೊಂಡುಬಿಡುತ್ತವೆ. ಯಶಸ್ಸನ್ನು ಅರಸುತ್ತಾ ನಾವು ಸೃಷ್ಟಿಸಿಕೊಂಡ ನರಕವನ್ನು ಬಿಚ್ಚಿಡತೊಡಗುತ್ತವೆ. ಸಿಟ್ಟುಗೊಂಡು ನಾವು ಪ್ರೀತಿಸಬೇಕಾದ ಭಾರತವನ್ನು ನಮಗೆ ಕಾಣಿಸುತ್ತವೆ. ಈ ಲೇಖನಗಳ ಉದ್ದಕ್ಕೂ ಅರಣ್ಯ ನಾಶಕಂಡು ಪಾಪೀರನ ಹಕ್ಕಿ ಕೂಗುವ ” ಪಾಪಿಗಳಾ, ಪಾಪಿಗಳಾ!” ಎಂಬ ಸಂಕಟದ ಧ್ವನಿ ಕೇಳಿಸುತ್ತದೆ. ಹಳ್ಳಿಗಾಡಿನ ಆದಿವಾಸಿಗಳ ಬೆರಕೆಸೊಪ್ಪಿನ ತಿಳುವಳಿಕೆಗೂ ಬೆಲೆಯಿದೆ ಎಂಬ ಅರಿವು ಈ ಲೇಖನಗಳಲ್ಲಿ ಪಿಸುಗುಟ್ಟುತ್ತದೆ. “ಉಪ್ಪು ರುಚಿ ಕಳೆದುಕೊಂಡರೆ ಉಪ್ಪಿಗೆ ಉಪ್ಪು ಹಾಕುವವರು ಯಾರು” ಎಂಬ ಮಡುಗಟ್ಟಿದ ವಿಷಾದವೂ ಇವರ ಲೇಖನಗಳ ಆಳದಲ್ಲಿದೆ.

ಅಂತಃಕರಣ ತಾನಾಗಿ, ತಾನು ಇರುವ ಸುತ್ತಲನ್ನು ನೋಡುವ ಈ ಜೀವ ಇಂದು ತುಂಬಾ ಅಪರೂಪವಾಗಿರುವ ಪ್ರೀತಿ ಸಮಾನತೆ ಸಹಬಾಳ್ವೆ ವಿವೇಕಗಳನ್ನು ಅಕ್ಷರ ರೂಪಕ್ಕಿಳಿಸಿದ ಇಲ್ಲಿನ ಲೇಖನಗಳು ಪುಟ್ಟ ಪುಟ್ಟ ಹಣತೆಗಳಂತೆ ಬೆಳಗುತ್ತವೆ.”-ದೇವನೂರ ಮಹಾದೇವ

 

Halli Haadi Book cover page Scaned copy

Halli hadi Back page