ಜನಾಂದೋಲನಗಳ ಮಹಾಮೈತ್ರಿ- ಗುರಿ, ಕಾರ್ಯಕ್ರಮ, ಕಾರ್ಯಯೋಜನೆ ಹಾಗೂ ಸಂಘಟನಾ ನೀತಿ

                                                                ಜನಾಂದೋಲನಗಳ ಮಹಾಮೈತ್ರಿ
ತಾತ್ಕಾಲಿಕ ವಿಳಾಸ: ಅಭಿರುಚಿ ಪ್ರಕಾಶನ, ನಂ 386, 14ನೆಯ ಮುಖ್ಯರಸ್ತೆ, 3ನೆಯ ಅಡ್ಡರಸ್ತೆ, ಸರಸ್ವತಿ ಪುರಂ, ಮೈಸೂರು-9
ಇಮೇಲ್:.mahamaithri@gmail.com                                                                                                   ದೂರವಾಣಿ-9980560013
ಗುರಿ, ಕಾರ್ಯಕ್ರಮ, ಕಾರ್ಯಯೋಜನೆ ಹಾಗೂ ಸಂಘಟನಾ ನೀತಿ
[ಇದು ಜನಾಂದೋಲನಗಳ ಮಹಾಮೈತ್ರಿಯ ವಿನಮ್ರ ಕರಡು ಪ್ರಸ್ತಾಪ ಮಾತ್ರ.ಇದನ್ನು ಮುಕ್ತ ಚರ್ಚೆಗೆ ಒಳಪಡಿಸಿ ಎಲ್ಲರ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂತಿಮಗೊಳಿಸಬೇಕಿದೆ. ನಿಮ್ಮ ಅಭಿಪ್ರಾಯಗಳನ್ನು ಮೇಲ್ಕಂಡ ವಿಳಾಸ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ]

ಹೋರಾಟದ ಒಡನಾಡಿಗಳೆ,
ನಮ್ಮ ದೇಶದ ಭವಿಷ್ಯ ಹಾಗೂ ಜನಸಾಮಾನ್ಯರ ಬದುಕು ಸಂವಿಧಾನದ ಆಶಯಗಳ ವಿರುದ್ಧ ದಿಕ್ಕಿನಲ್ಲಿ ತೀವ್ರಗತಿಯಲ್ಲಿ ಮಾರ್ಪಡುತ್ತಿವೆÉ. ಜಾಗತೀಕರಣ ಹಾಗೂ ಕೋಮುವಾದೀಕರಣದ, ಕಳೆದ 25 ವರ್ಷಗಳು ನಮ್ಮ ಜನರು ಹೋರಾಡಿ ಗಳಿಸಿಕೊಂಡಿದ್ದ ಹಕ್ಕುಗಳನ್ನೆಲ್ಲಾ ಕಸಿದುಕೊಂಡಿವೆ. ಜನರ ಪ್ರಜ್ಞೆಯ ದಿಕ್ಕನ್ನೇ ಬದಲಾಯಿಸುತ್ತಿವೆ. ಅಧಿಕಾರ ಅಪರಾಧಿಗಳ ಅಡ್ಡೆಯಾಗಿದೆ. ಕಾರ್ಪೋರೇಟ್ ದಣಿಗಳ ಲಾಭದಾಹ ಎಲ್ಲಾ ಜನಸಮುದಾಯಗಳ ಬದುಕನ್ನು ಧ್ವಂಸಗೊಳಿಸುತ್ತಿದೆ. ಮನುವಾದದ ನಂಜು ಮತ್ತು ಭ್ರಷ್ಟಾಚಾರದ ಸುಲಿಗೆ ಎಲ್ಲೆಗಳನ್ನು ಮೀರಿ ಹರಡಿ ಸಮಾಜದ ಸ್ವಾಸ್ಥ್ಯವನ್ನು ನಾಶಗೊಳಿಸುತ್ತಿವೆ. ಒಬ್ಬರಲ್ಲ, ಇಬ್ಬರಲ್ಲ, ಲಕ್ಷಾಂತರ ರೈತರು ದಿಕ್ಕುಗಾಣದೆ ಗುಳೆ ಹೊರಟಿದ್ದಾರೆ ಅಥವಾ ಸಾವಿಗೆ ಶರಣಾಗುತ್ತಿದ್ದಾರೆ. ಕಾರ್ಮಿಕರು ಬದುಕಿನ ಭದ್ರತೆಯನ್ನೆಲ್ಲಾ ಕಳೆದುಕೊಂಡು ಶ್ರಮ ಮಾರಿಕೊಳ್ಳಲು ಅನಾಥರಂತೆ ಊರಿಂದೂರಿಗೆ ಅಲೆಯುತ್ತಿದ್ದಾರೆ. ಯುವಕರು ಓದಿದರೂ ಉದ್ಯೋಗವಿಲ್ಲದೆ ಹಳ್ಳಿಯಲ್ಲೂ-ಪಟ್ಟಣದಲ್ಲೂ ಆಕಾಶ ನೋಡುತ್ತಿದ್ದಾರೆ. ಮಹಿಳೆಯರು ಇತಿಹಾಸದಲ್ಲೇ ಎದುರಿಸದ ಅಪಾಯವನ್ನಿಂದು ಎದುರಿಸುತ್ತಿದ್ದಾರೆ. ಮುಕ್ತ ಮಾರುಕಟ್ಟೆ ನೀತಿಗಳು ಹೆಣ್ಣನ್ನೂ ಮಾರಾಟದ ಸರಕಾಗಿಸುತ್ತಿದ್ದರೆ, ಮಕ್ಕಳೂ ಕೂಡ ನಿರ್ಲಕ್ಷಿತರಲ್ಲಿ ನಿರ್ಲಕ್ಷಿತರಾಗಿ ಶೋಷಣೆಗೊಳಗಾಗುತ್ತಿದ್ದಾರೆ. ದಲಿತರಿಗೆ ಮತ್ತು ಮಹಿಳೆಯರಿಗೆ ಮೇಲೇರಲು ಅರೆಬರೆಯಾಗಿ ಇದ್ದ ಮೀಸಲಾತಿಯ ಮೆಟ್ಟಿಲನ್ನೂ ಸಹ ಖಾಸಗೀಕರಣ ಕಸಿದುಕೊಂಡಿದೆ. ಅಸ್ಪøಶ್ಯತೆಯ ಕ್ರೌರ್ಯ ಇಂದಿಗೂ ತಾಂಡವವಾಡುತ್ತಿದೆ. ಈ ದೇಶದ ಮೂಲನಿವಾಸಿಗಳು, ಅಲ್ಪಸಂಖ್ಯಾತರು, ಅಷ್ಟೇಕೆ ಅಸಮಾನತೆಯ ವ್ಯವಸ್ಥೆಗೆ ಸವಾಲು ಒಡ್ಡುವವರೆಲ್ಲರನ್ನೂ ದೇಶದ್ರೋಹದ ಆರೋಪಕ್ಕೆ ತುತ್ತಾಗಿಸುತ್ತಿದ್ದಾರೆ. ಹಳ್ಳಿಗಳು ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಕಾಣದೆ ಕೊಳೆಗೇರಿಗಳಾಗುತ್ತಿವೆ. ಶಿಕ್ಷಣ, ಆರೋಗ್ಯ, ಸಾರಿಗೆ, ಸಂಪರ್ಕ ಇತ್ಯಾದಿ ಎಲ್ಲಾ ಸೇವಾ ಕ್ಷೇತ್ರಗಳೂ ಖಾಸಗಿಯವರ ಪಾಲಾಗಿ ಸುಲಿಗೆಯ ತಾಣಗಳಾಗಿವೆ. ಆಹಾರ, ಶುದ್ಧ ನೀರು, ಒಳ್ಳೆಯ ಗಾಳಿ ಸಹ ಜನಸಾಮಾನ್ಯರ ಪಾಲಿಗೆ ಇಲ್ಲವಾಗುತ್ತಿದೆ. ಎಲ್ಲವೂ ಕಲುಷಿತ, ಕೃತಕ ಮತ್ತು ದುಬಾರಿ. ಆದರೆ ಬಲಾಢ್ಯರ “ಅಭಿವೃದ್ಧಿ” ಬಿರುಸಾಗಿಯೇ ಸಾಗಿದೆ. ಆಸ್ತಿ ಮತ್ತು ಅಧಿಕಾರ ಒಂದಾಗಿ ನಿಂತಿದೆ. ಉಳ್ಳವರು ಹಾಗೂ ಆಳುವವರು ನಗ್ನ ರೀತಿಯಲ್ಲಿ ಕೈಗೂಡಿಸಿದ್ದಾರೆ. ಇಬ್ಬರೂ ಲೂಟಿಯ ಸಮಾನ ಪಾಲುದಾರರಾಗಿದ್ದಾರೆ.
ದೇಶದ ಮತ್ತು ರಾಜ್ಯದ ಆಗುಹೋಗುಗಳನ್ನೆಲ್ಲಾ ಗಂಭೀರ ರೀತಿಯಲ್ಲಿ ಗಮನಿಸುತ್ತಿರುವ ನಮ್ಮೆಲ್ಲರನ್ನು ಒಂದು ಗಂಭೀರ ಪ್ರಶ್ನೆ ಕಾಡುತ್ತಿದೆ–“ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ನ್ಯಾಯದ ಪರಿಕಲ್ಪನೆಗಳ ಮೇಲಾಗುತ್ತಿರುವ ಆಕ್ರಮಣದಿಂದ ನಮ್ಮ ದೇಶ ಹಾಗೂ ಜನರನ್ನು ಕಾಪಾಡುವುದುಹೇಗೆ?”ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ “ಜನಾಂದೋಲನಗಳ ಮಹಾಮೈತ್ರಿ”.

1. ಗುರಿ ಮತ್ತು ಉದ್ದೇಶ:
a. ಎಲ್ಲಾ ಜೀವಪರ ಶಕ್ತಿಗಳನ್ನು ಒಗ್ಗೂಡಿಸುವ ಮೂಲಕ ಜನರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಒಂದು ಮುಷ್ಠಿಯಾಗಿ ಹೋರಾಡುವುದೇ ಮಹಾಮೈತ್ರಿಯ ಮುಖ್ಯ ಗುರಿ.
b. ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವವನ್ನು ಆಧರಿಸಿದ ಪ್ರಜಾಪ್ರಭುತ್ವ, ಸಂವಿಧಾನದ ಆಶಯವಾಗಿದ್ದು ಅದನ್ನು ಕಾರ್ಯರೂಪಕ್ಕಿಳಿಸಲು ರಚನಾತ್ಮಕ ಕಾರ್ಯಗಳನ್ನು ರೂಪಿಸಿ ಉತ್ತಮ ಸಮಾಜ ಸ್ಥಾಪಿಸುವುದು ನಮ್ಮ ಉದ್ದೇಶ.
c. ಕಾರ್ಪೋರೇಟ್‍ವಾದಿ, ಜಾತಿವಾದಿ, ಕೋಮುವಾದಿ, ಭ್ರಷ್ಟ ಹಾಗೂ ಲಿಂಗ ತಾರತಮ್ಯದ ಶಕ್ತಿಗಳನ್ನು, ನೀತಿಗಳನ್ನು, ಆಚರಣೆಗಳನ್ನು ಹಾಗೂ ಚಿಂತನೆಗಳನ್ನು ಹಿಮ್ಮೆಟ್ಟಿಸುವುದು ಮತ್ತು ಪರ್ಯಾಯವಾಗಿ ಸಮಾನ, ಸ್ವತಂತ್ರ, ಜಾತ್ಯತೀತ, ಭ್ರಷ್ಟರಹಿತ ಸಮಾಜವನ್ನು ಕಟ್ಟುವುದು ಮಹಾಮೈತ್ರಿಯ ಧ್ಯೇಯ.
d. ಬಲವಾದ ಜನ ಚಳವಳಿ ಇಲ್ಲದೇ ಪರಿಣಾಮಕಾರಿ ಪರ್ಯಾಯ ರಾಜಕಾರಣ ಸಾಧ್ಯವಿಲ್ಲ. ಮಹಾಮೈತ್ರಿಯು ಒಂದು ರಾಜಕೀಯ ಪಕ್ಷವಲ್ಲ. ಆದರೆ ಜನ ಚಳವಳಿಗಳನ್ನಾಧರಿಸಿ ಆಳುವವರನ್ನು ಮತ್ತು ಅಧಿಕಾರಶಾಹಿಯನ್ನು ಉತ್ತರದಾಯಿಗಳನ್ನಾಗಿ ಮಾಡುವುದು, ದುಷ್ಟರನ್ನು ಹಾಗೂ ಮಾತು ತಪ್ಪಿದವರನ್ನು ಬಯಲುಗೊಳಿಸುವುದು ಮತ್ತು ಜನಪರ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಅಗತ್ಯವಿರುವ ರಾಜಕೀಯ ಆಂದೋಲನವನ್ನು ಹಾಗೂ ಜಾಗೃತ ವಾತಾವರಣವನ್ನು ರೂಪಿಸುವುದು ಅದರ ಪ್ರಮುಖ ಗುರಿಗಳಲ್ಲೊಂದು.

2. ಕನಿಷ್ಠ ಕಾರ್ಯಕ್ರಮ:

a. ಬಂಡವಾಳಶಾಹಿ ಪ್ರೇರಿತ ಸರ್ಕಾರದ ಅವೈಜ್ಞಾನಿಕ, ಮೋಸದ ಕೃಷಿ ನೀತಿಗಳಿಂದ ಸೃಷ್ಟಿಯಾಗಿರುವ ಕೃತಕಸಾಲ, ಸುಲಿಗೆ ಮತ್ತು ವಂಚನೆಯ ಕೃಷಿ ಬಿಕ್ಕಟ್ಟಿನ ಶಾಶ್ವತ ಪರಿಹಾರಕ್ಕಾಗಿ ಹೋರಾಡುವುದು. ಕೃಷಿಯ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುವುದು. ವೈಜ್ಞಾನಿಕ ಬೆಲೆ ನೀತಿಗಾಗಿ, ಸರ್ಕಾರದ ಸೂಕ್ತ ಬೆಂಬಲಕ್ಕಾಗಿ ಹೋರಾಡುವುದು, ಬಂಡವಾಳಶಾಹಿ ನಿಯಂತ್ರಿತ, ರಾಸಾಯನಿಕ ಕೃಷಿ ಪದ್ದತಿಗೆ ಪರ್ಯಾಯವಾಗಿ ಸಹಜಕೃಷಿಯನ್ನು ಪ್ರೋತ್ಸಾಹಿಸುವುದು. ದುಡಿಯುವ ಪ್ರತಿ ಕೈಗೆ ಆಯಾ ಸ್ಥಳದಲ್ಲೇ ಉದ್ಯೋಗ ಸೃಷ್ಟಿಸುವಂತೆ ಹಳ್ಳಿಗಳಲ್ಲೇ ಕೃಷಿ ಉತ್ಪನ್ನಗಳನ್ನಾಧರಿಸಿದ ಉಪಕಸುಬು ಮತ್ತು ಗೃಹ ಕೈಗಾರಿಕೆಗಳನ್ನು ಸ್ಥಾಪಿಸಿ ವಲಸೆ ತಡೆಯುವಂತೆ, ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆ ಕೌಶಲ್ಯವನ್ನು ಹೆಚ್ಚಿಸುವಂತೆ, ಸಹಕಾರಿ ಮತ್ತು ಜನಪರ್ಯಾಯ ವ್ಯವಸ್ಥೆಯನ್ನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು. ಆ ಮೂಲಕ ಸ್ವಾವಲಂಬನೆಯನ್ನು ಬೆಳೆಸುವುದು, ಆತ್ಮಹತ್ಯೆಗಳನ್ನು ತಡೆಯುವುದು ಹಾಗೂ ಗ್ರಾಮೀಣ ವಲಸೆಯನ್ನು ತಪ್ಪಿಸುವುದು ನಮ್ಮ ಉದ್ದೇಶ.
b. ಶ್ರಮಜೀವಿಗಳನ್ನು ಅತಂತ್ರ ಮತ್ತು ಅಭದ್ರತೆಯಿಂದ ಪಾರು ಮಾಡುವುದು, ಗುತ್ತಿಗೆ ಹೊರಗುತ್ತಿಗೆ ಹಾಗೂ ಅರೆಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಲು ಹೋರಾಡುವುದು. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಜಾರಿಗೊಳಿಸುವಂತೆ ಮಾಡಲು ಆಳುವವರನ್ನು ಒತ್ತಾಯಿಸುವುದು. ಅಸಂಘಟಿತ ಕಾರ್ಮಿಕರಿಗೆ ಮಾಸಿಕ ಕನಿಷ್ಠ 20000 ರೂಪಾಯಿಗಳನ್ನು ನಿಗದಿಗೊಳಿಸುವಂತೆ ಒತ್ತಡ ಹೇರುವುದು. ಕಾರ್ಮಿಕ ಕಾನೂನುಗಳ ಸುಧಾರಣೆಯ ಹೆಸರಿನಲ್ಲಿ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಕಸಿಯುವ ನೀತಿಗಳ ವಿರುದ್ಧವಾಗಿ ಹೋರಾಡುವುದು.
c. ಕಾರ್ಪೋರೇಟ್, ಭೂಮಾಫಿಯ ಹಾಗೂ ಬಲಾಢ್ಯ ಇಂತಹ ಭ್ರಷ್ಟ ಶಕ್ತಿಗಳ ಕೈಯಲ್ಲಿ ಭೂಮಿ ಕೇಂದ್ರೀಕರಣವಾಗುತ್ತಿರುವುದನ್ನು ತಡೆಯುವುದು. ಬಡವರು ಘನತೆಯಿಂದ ಬಾಳುವಷ್ಟು ಭೂಮಿ, ಗೌರವದಿಂದ ಬದುಕಲು ಬೇಕಾದ ವಸತಿಯನ್ನು ಪಡೆಯುವ ಹಕ್ಕಿಗಾಗಿ ಹೋರಾಟ ರೂಪಿಸುವುದು. ಕೃಷಿ ಭೂಮಿಯನ್ನು ಕೃಷಿಯೇತರ ಬೃಹತ್ ಚಟುವಟಿಕೆಗಳಿಗಾಗಿ ಪರಭಾರೆ ಮಾಡುವುದನ್ನು ತಪ್ಪಿಸುವುದು.
d. ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದು, ಸಹಬಾಳ್ವೆಯನ್ನು ನಾಶಗೊಳಿಸುವ, ಜನರನ್ನು ತಮ್ಮ ನಿಜ ಸಮಸ್ಯೆಗಳಿಂದ ದಿಕ್ಕುತಪ್ಪಿಸುವ, ಮಾನವೀಯ ಸಂಬಂಧಗಳಿಗೆ ಬೆಂಕಿ ಹಚ್ಚಿ ದ್ವೇಷ ರಾಜಕಾರಣ ನಡೆಸುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುವುದು. ಕೋಮುದಳ್ಳುರಿಗೆ ಗುರಿಯಾಗುತ್ತಿರುವ ಅಲ್ಪಸಂಖ್ಯಾತರ ನೋವಿಗೆ ಸ್ಪಂದಿಸಿ ಹೆಗಲಾಗುವುದು. ಕೋಮು ಸಂಚಿನಿಂದ ದಲಿತ-ಶೂದ್ರ ಹಾಗೂ ಅಮಾಯಕ ಯುವಜನರನ್ನು ಹೊರತರಲು ಶ್ರಮಿಸುವುದು. ನಮ್ಮ ನಾಡಿನ ಕೂಡಿ ಬಾಳುವ ಜನಸಂಸ್ಕøತಿಯನ್ನು ಪೋಷಿಸಿ ಬೆಳೆಸುವುದು.
e. ವೇಗಗತಿಯನ್ನು ಪಡೆಯುತ್ತಿರುವ ಜಾತಿವಾದಕ್ಕೆ ಪ್ರತಿರೋಧ ಒಡ್ಡುವುದು. ದಲಿತ-ದಮನಿತ ಸಮುದಾಯಗಳ ನ್ಯಾಯ ಸಮ್ಮತ ಹಕ್ಕುಗಳಿಗಾಗಿ ಹೋರಾಡುವುದು. ಮೀಸಲಾತಿಯನ್ನು ಉಳಿಸಲು, ವೈಜ್ಞಾನಿಕ ಮತ್ತು ಮಾನವೀಯ ನೆಲೆಗಳಲ್ಲಿ ವಿಸ್ತರಿಸಲು ಹಾಗೂ ಎಲ್ಲರಿಗೂ ಸಮಾನ ಅವಕಾಶ ದೊರಕುವಂತೆ ಮಾಡಲು ಶ್ರಮಿಸುವುದು.
f. ಹೆಣ್ಣನ್ನು ಅಡಿಯಾಳೆಂಬಂತೆ, ಕೀಳೆಂಬಂತೆ, ಉಪಭೋಗದ ವಸ್ತುವೆಂಬಂತೆ ಕಾಣುವ ಜೀವವಿರೋಧಿ ಮೌಲ್ಯಗಳು ಹಾಗೂ ಆಚರಣೆಗಳ ವಿರುದ್ಧ ಹೋರಾಡುವುದು. ಹೆಣ್ಣನ್ನು ಅಶ್ಲೀಲವಾಗಿ ಬಿಂಬಿಸಿ ಅವಳ ಘನತೆಗೆ ಧಕ್ಕೆ ತರುತ್ತಿರುವ ಮಾಧ್ಯಮಗಳ ಹುನ್ನಾರದ ವಿರುದ್ಧ ಹೋರಾಡುವುದು. ಲಿಂಗ ತಾರತಮ್ಯ, ಲೈಂಗಿಕ ದೌರ್ಜನ್ಯ, ಹೆಣ್ಣು ಭ್ರೂಣಹತ್ಯೆ ಹಾಗೂ ಮಹಿಳೆಯರ ಮಾರಾಟವನ್ನು ತಡೆಯಲು ರಚನಾತ್ಮಕ ಕಾರ್ಯಕ್ರಮ ರೂಪಿಸುವುದು ಮತ್ತು ಹೋರಾಡುವುದು. ಮಹಿಳೆಯ ಕೌಟುಂಬಿಕ ಸ್ಥಿರಾಸ್ತಿ ಹಕ್ಕು, ಮಹಿಳೆಯರ ಸಮಾನ ಸಹಭಾಗಿತ್ವಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದು. ಮಹಿಳೆಯರ ಅಂತಃಚೈತನ್ಯವನ್ನು ಹಾಗೂ ಸ್ವಾವಲಂಬನೆಯನ್ನು ಬೆಳೆಸಲು ಶ್ರಮಿಸುವುದು.
g. ಮಕ್ಕಳ ಹಕ್ಕಿಗಾಗಿ ದನಿ ಎತ್ತುವುದು. ಬಾಲ್ಯವಿವಾಹ, ಬಾಲ ದುಡಿಮೆ, ಲೈಂಗಿಕ ದುರುಪಯೋಗ, ದುಷ್ಟ ಉದ್ದೇಶಗಳಿಗೆ ಅಸಹಾಯಕ ಮಕ್ಕಳ ಬಳಕೆ ಮುಂತಾದ ಅಪರಾಧಗಳ ವಿರುದ್ಧ ಕೆಲಸ ಮಾಡುವುದು. ಎಲ್ಲ ಮಕ್ಕಳೂ ಶಾಲೆಯಲ್ಲಿರುವಂತೆ, ಓದಿನಲ್ಲಿ ಆಸಕ್ತಿ ಇಲ್ಲದ ಹದಿಹರೆಯದ ಮಕ್ಕಳಿಗೆ ವೃತ್ತಿತರಬೇತಿ ದೊರಕುವಂತೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುವುದು. ಸಮಾನ, ಸಂತಸಮಯ ಹಾಗೂ ಆರೋಗ್ಯಕರ ಪೋಷಣೆ ಎಲ್ಲಾ ಮಕ್ಕಳಿಗೂ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳುವುದು.
h. ಸಮಾಜದ ಮೂಲಭೂತ ಅಗತ್ಯಗಳಾದ ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಒಂದೇ ರೀತಿಯಲ್ಲಿ ಸಮಾನವಾಗಿ ಹಾಗೂ ಉಚಿತ ರೀತಿಯಲ್ಲಿ ದೊರಕುವಂತಹ ವಾತಾವರಣಕ್ಕಾಗಿ ಹೋರಾಡುವುದು. ಎರಡೂ ಕ್ಷೇತ್ರಗಳ ಸ್ವಾಸ್ಥ್ಯವನ್ನು ನಾಶಗೊಳಿಸುತ್ತಿರುವ ಖಾಸಗೀಕರಣವನ್ನು ಬಲವಾಗಿ ವಿರೋಧಿಸುವುದು. ಸಮಾನ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಾಗಿ ಹೋರಾಡುವುದು.
i. ಸಮಾಜದ ಮೌಲ್ಯಗಳನ್ನೆಲ್ಲಾ ನಾಶಗೊಳಿಸುತ್ತಿರುವ, ಕಳ್ಳಹಾದಿಗಳನ್ನು ರಾಜಮಾರ್ಗಗೊಳಿಸುತ್ತಿರುವ, ಜನರನ್ನು ಹಕ್ಕು ವಂಚಿತರನ್ನಾಗಿ ಮಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಆಂದೋಲನವನ್ನು ರೂಪಿಸುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಜನರ ಮೇಲ್ವಿಚಾರಣೆಯ ಪದ್ಧತಿಗಳನ್ನು ಬಲಪಡಿಸುವ ಮೂಲಕ ಅಧಿಕಾರದ ಕೇಂದ್ರಗಳನ್ನು ಉತ್ತರದಾಯಿಯಾಗಿಸಲು ಹಾಗೂ ಪಾರದರ್ಶಕಗೊಳ್ಳುವಂತೆ ಮಾಡಲು ಕೆಲಸ ಮಾಡುವುದು.
j. ಪರಿಸರವನ್ನು ಮತ್ತು ಅರಣ್ಯವನ್ನು ಅವೈಜ್ಞಾನಿಕವಾಗಿ ನಾಶಗೊಳಿಸುತ್ತಿರುವ ಕ್ರಮಗಳ ವಿರುದ್ಧ ಜನಾಂದೋಲನವನ್ನು ರೂಪಿಸುವುದು. ಜಲಮೂಲಗಳನ್ನು ರಕ್ಷಿಸಲು ಮತ್ತು ಪುನರುತ್ಥಾನಗೊಳಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದು. ಗಣಿಗಾರಿಕೆ ರಾಷ್ಟ್ರೀಕರಣಗೊಳಿಸಲು ಪ್ರಭುತ್ವದ ಮೇಲೆ ಒತ್ತಡ ಹೇರುವುದು. ಗಿರಿಜನ, ಗುಡ್ಡಗಾಡು ಜನರ ಅರಣ್ಯ ಸಂಬಂಧಿತ ಹಕ್ಕುಗಳಿಗಾಗಿ ಹೋರಾಡುವುದು.
k. ಬಂಡವಾಳಶಾಹಿ ಪ್ರಾಯೋಜಿತ ಪ್ರಸ್ತುತ ‘ಅಭಿವೃದ್ಧಿ’ ಮಾದರಿಯನ್ನು ಸಾರಾಸಗಟು ತಿರಸ್ಕರಿಸುವುದು. ಇದರ ಜಾಗದಲ್ಲಿ ಪ್ರಕೃತಿ, ಸಮಾಜ ಮತ್ತು ಸಂಸ್ಕøತಿಯ ನಡುವೆ ಸೌಹಾರ್ದ ಹಾಗೂ ಅವಿನಾಭಾವ ಸಂಬಂಧ ಇರುವಂತಹ ಜೀವಪರ ಅಭಿವೃದ್ಧಿ ಮಾದರಿಗಾಗಿ ಜನಾಗ್ರಹವನ್ನು ರೂಪಿಸುವುದು.
l. ವಿಕೇಂದ್ರೀಕರಣ, ಬಹುತ್ವ ಹಾಗೂ ಸ್ವಾವಲಂಬನೆಗೆ ಆಧ್ಯತೆ ಇರುವಂತಹ ಸಾಮಾಜಿಕ ವಾತಾವರಣವನ್ನು ಸೃಷ್ಟಿಸಲು ಶ್ರಮಿಸುವುದು.

3. ಪರ್ಯಾಯ ರಾಜಕಾರಣ:
a. ಮೇಲ್ಕಂಡ ಉದ್ದೇಶಗಳು ಈಡೇರಬೇಕಾದರೆ ದುಷ್ಟ ಶಕ್ತಿಗಳ ಕೈಯಲ್ಲಿರುವ ಅಧಿಕಾರ ಜನಪರ ಶಕ್ತಿಗಳ ಕೈಗೆ ಬರಬೇಕಿರುವುದು ಅತ್ಯಗತ್ಯ. ಇದುವರೆಗೆ ಚಳವಳಿಗಳು ಅಳವಡಿಸಿರುವ ಎರಡು ಮಾದರಿಗಳಾದ ಐಕ್ಯ ಚಳವಳಿ ಕಟ್ಟುವ ಅಥವ ನೇರವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಪ್ರಯತ್ನಗಳ ಸಕರಾತ್ಮಕ ಹಾಗೂ ನಕಾರಾತ್ಮಕ ಅನುಭವಗಳೆರಡನ್ನೂ ಗಮನದಲ್ಲಿಟ್ಟುಕೊಂಡು ಮಹಾಮೈತ್ರಿಯು ಮೂರನೇ ಹೊಸ ಮಾರ್ಗವನ್ನು ಅಳವಡಿಸುತ್ತಿದೆ.
b. ಮಹಾಮೈತ್ರಿಯು ದುಷ್ಟ ರಾಜಕಾರಣಕ್ಕೆ ಪ್ರತಿಯಾಗಿ ಜನರಾಜಕಾರಣದ ಕೇಂದ್ರವಾಗಿ ಕೆಲಸ ಮಾಡುತ್ತದೆ. ಜನ ಚಳವಳಿಗಳ ಆಶೋತ್ತರಗಳನ್ನೆಲ್ಲಾ ಸಾಂದ್ರೀಕರಿಸಿ ಜನಾಗ್ರಹಗಳನ್ನು ಒಳಗೊಂಡಿರುವ ಜನತೆಯ ಪ್ರಣಾಳಿಕೆಯನ್ನು ಸಮಾಜದ ಮುಂದಿಡುತ್ತದೆ. ಆ ಪ್ರಣಾಳಿಕೆಯ ಆಶಯಗಳಿಗೆ ಮಾರಕವಾಗಿರುವ ಪಕ್ಷಗಳನ್ನು ಬಹಿಷ್ಕರಿಸುವಂತೆ ಜನರಿಗೆ ಕರೆ ನೀಡುತ್ತದೆ. ಪ್ರಣಾಳಿಕೆಯ ಆಶಯಗಳ ಜೊತೆ ನಿಲ್ಲುವ ವಾಗ್ದಾನ ನೀಡುವ ಶಕ್ತಿಗಳನ್ನು ಷರತ್ತುಬದ್ಧವಾಗಿ ಬೆಂಬಲಿಸುತ್ತದೆ. ಜನಪರ ಶಕ್ತಿಗಳು ಅಧಿಕಾರಕ್ಕೆ ಬರಲು ಬೇಕಾದಂತಹ ಜಾಗೃತಿ ಮತದಾರರಲ್ಲಿ ಮೂಡಿಸುವಂತಹ ಆಂದೋಲನವನ್ನು ಕೈಗೆತ್ತಿಕೊಳ್ಳುತ್ತದೆ.
c. ಜನ ವಿರೋಧಿ ಶಕ್ತಿಗಳನ್ನು ಮಣಿಸುವ, ಜನಪರ ಶಕ್ತಿಗಳನ್ನು ಗೆಲ್ಲಿಸುವ ರಾಜಕೀಯ ವ್ಯೂಹತಂತ್ರವನ್ನು ಎಲ್ಲರ ಜೊತೆಗೂಡಿ ರೂಪಿಸಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತದೆ.
d. ಬಲಾಢ್ಯರಿಗೇ ಗೆಲ್ಲುವ ಅವಕಾಶಗಳು ವಿಫುಲವಾಗಿರುವ ಪ್ರಸ್ತುತ ಚುನಾವಣಾ ಮಾದರಿಯ ಜಾಗದಲ್ಲಿ ಜನಪರ ಶಕ್ತಿಗಳು, ವಿಶೇಷವಾಗಿ ಶೋಷಿತ ಹಾಗೂ ನಿರ್ಲಕ್ಷಿತ ಸಮುದಾಯಗಳ ನಿಜವಾದ ಪ್ರತಿನಿಧಿಗಳು ಅಧಿಕಾರಕ್ಕೆ ಬರಲು ಅನುವಾಗುವಂತಹ ಪರ್ಯಾಯ ಚುನಾವಣಾ ಮಾದರಿಯನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತದೆ.
e. ಯಾರೇ ಗೆದ್ದರೂ ಜನತೆಯ ಪ್ರಣಾಳಿಕೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತದೆ ಹಾಗೂ ಕಣ್ಗಾವಲಿಡುತ್ತದೆ. ಮಾತು ತಪ್ಪಿದ ಶಕ್ತಿಗಳನ್ನು ತರಾಟೆಗೆ ತೆಗೆದುಕೊಳ್ಳುವ, ಅಂತಹವರನ್ನು ಅಧಿಕಾರದಿಂದಿಳಿಸಿ ಪರ್ಯಾಯ ಶಕ್ತಿಗಳನ್ನು ಮುನ್ನೆಲೆಗೆ ತರುವ ಜನಾಧಿಕಾರದ ಶಕ್ತಿಯಾಗಿ ಕೆಲಸ ಮಾಡುತ್ತದೆ.
4. ಕಾರ್ಯಯೋಜನೆ:
a. ತಮ್ಮ ಹಕ್ಕುಗಳ ಬಗ್ಗೆ, ತಮಗಾಗುತ್ತಿರುವ ವಂಚನೆ ಬಗ್ಗೆ ಹಾಗೂ ನ್ಯಾಯ ಪಡೆಯುವ ಮಾರ್ಗೋಪಾಯಗಳ ಬಗ್ಗೆ ಅನೇಕ ಸೃಜನಶೀಲ ವಿಧಾನಗಳು ಹಾಗೂ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುವುದು.
b. ಶೋಷಿತ, ವಂಚಿತ ಸಮುದಾಯಗಳ ನಡುವೆ ಕೆಲಸ ಮಾಡುತ್ತಿರುವ ಜನ ಚಳವಳಿಗಳನ್ನು ಒಂದು ಬಲವಾದ ಮುಷ್ಠಿ ಎಂಬಂತೆ ಒಟ್ಟುಗೂಡಿಸಿ ದಿಟ್ಟವಾಗಿ ಹೋರಾಡಬಲ್ಲ ಪ್ರಜ್ಞಾವಂತ ‘ಜನಬಲ’ವನ್ನು ಕಟ್ಟಿ ಮೇಲ್ಕಂಡ ಗುರಿ ಸಾಧನೆಗಾಗಿ ಹಾಗೂ ತಕ್ಷಣದ ಕನಿಷ್ಠ ಸಾಮಾನ್ಯ ಕಾರ್ಯಕ್ರಮಕ್ಕಾಗಿ ಹೋರಾಡುವುದು.
c. ಹೋರಾಟಗಾರರ ನಡುವಿರುವ ಅನೈಕ್ಯತೆಯನ್ನು, ಅಂತರವನ್ನು, ಪೂರ್ವಾಗ್ರಹಗಳನ್ನು ದೂರಮಾಡಲು ಶ್ರಮಿಸುವುದು. ಪರಸ್ಪರ ಗೌರವದ ಜೊತೆ ಹಾಗೂ ಪರಸ್ಪರ ಸಕ್ರಿಯ ಸಹಕಾರದ ಜೊತೆ ಸುಸ್ಥಿರ ಸಮಾಜ ನಿರ್ಮಾಣದ ಕ್ರಿಯೆಯಲ್ಲಿ ತೊಡಗುವಂತಹ ವಾತಾವರಣ ನಿರ್ಮಿಸುವುದು. ಎಲ್ಲಾ ಕ್ಷೇತ್ರಗಳಲ್ಲಿನ ಜನಪರ ಶಕ್ತಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಬಲಪಡಿಸುವುದು.
d. ಬಲಾಢ್ಯರ ವಂಚಕ ರಾಜಕಾರಣದ ವಿರುದ್ಧ ಜನ ಸಾಮಾನ್ಯರ ನಿಷ್ಠೂರ ಸತ್ಯದ ರಾಜಕಾರಣವನ್ನು ಚಲಾವಣೆಗೆ ತರುವುದು. ಜನಹೋರಾಟದ ಐಕ್ಯಕೇಂದ್ರವಾಗಿ ಆಳ್ವಿಕೆಯನ್ನು ಪ್ರಭಾವಿಸುವಂತಹ ಹೊಸ ರೀತಿಯ ರಾಜಕೀಯ ಆಂದೋಲನವನ್ನು ಆರಂಭಿಸುವುದು.
e. ನಿಶ್ಯಕ್ತರಿಗೆ ಶಕ್ತಿ ತುಂಬುವಂತಹ, ಆರೋಗ್ಯಕರ ಮಾದರಿಗಳನ್ನು ಮುಂದೆ ತರುವಂತಹ, ಪರ್ಯಾಯ ಸಮಾಜದ ಮಾದರಿಗಳನ್ನು ಬೆಳೆಸಿ, ಕನಸನ್ನು ಕಟ್ಟಿಕೊಡುವಂತಹ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

5. ಸಂಘಟನಾ ನೀತಿ:
       a. ಸಂಘಟನಾ ಸ್ವರೂಪ:
i. ಜನಾಂದೋಲನಗಳ ಮಹಾಮೈತ್ರಿಯು ಜನ ಚಳವಳಿಗಳ ಒಂದು ಒಕ್ಕೂಟವಾಗಿದೆ. ಎಲ್ಲಾ ಸಹಭಾಗಿ ಸಂಘಟನೆಗಳ ಸ್ವತಂತ್ರ ಕಾರ್ಯಕ್ರಮ, ಅಸ್ತಿತ್ವ ಹಾಗೂ ಅಸ್ಮಿತೆಗೆ ಧಕ್ಕೆಯಾಗದಂತೆ ಸಮಾನ ಆಶಯಗಳಿಗಾಗಿ ಎಲ್ಲರೂ ಒಗ್ಗೂಡಿ ಹೋರಾಡುವ ವೇದಿಕೆಯಾಗಿರುತ್ತದೆ.
ii. ಇದೊಂದು ಪರ್ಯಾಯ ಜನರಾಜಕಾರಣದ ಕೇಂದ್ರವಾಗಿ ಕೆಲಸ ಮಾಡುತ್ತದೆ. ಆದರೆ ಅದು ಒಂದು ರಾಜಕೀಯ ಪಕ್ಷವೂ ಅಲ್ಲ ಅಥವ ಯಾವುದೇ ಒಂದು ರಾಜಕೀಯ ಪಕ್ಷವನ್ನು ಮಾತ್ರ ಬೆಂಬಲಿಸುವ ವೇದಿಕೆಯೂ ಆಗಿರುವುದಿಲ್ಲ.
iii. ಇದು ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯದ ಪರಿಕಲ್ಪನೆಗಳ ಜೊತೆ ಕೆಲಸ ಮಾಡುವ ಎಲ್ಲಾ ಶಕ್ತಿಗಳನ್ನೂ ಒಗ್ಗೂಡಿಸಲು ಪ್ರಯತ್ನಿಸುತ್ತದೆ.
iv. ಸಂಘಟನೆಗಳು ಇದರ ಮೂಲ ಆಧಾರಸ್ಥಂಭಗಳಾಗಿರುತ್ತವೆ. ಜೊತೆಗೆ ಆರೋಗ್ಯಕರ ಸಮಾಜಕ್ಕಾಗಿ ಶ್ರಮಿಸುತ್ತಿರುವ ಒಂದಷ್ಟು ದಕ್ಷ ವ್ಯಕ್ತಿಗಳನ್ನೂ ಒಳಗೊಂಡಿರುತ್ತದೆ.
       b. ಸಂಘಟನಾ ರಚನೆ:
i. ವಿವಿಧ ಜನ ಚಳವಳಿಗಳನ್ನು, ವಿವಿಧ ಪ್ರಾಂತ್ಯಗಳನ್ನು, ವಿವಿಧ ಜನಸಮುದಾಯಗಳನ್ನು ಹಾಗೂ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವಂತಹ ಪ್ರಮುಖರನ್ನೊಳಗೊಂಡಿರುವಂತಹ “ರಾಜ್ಯ ಸಮನ್ವಯ ಮಂಡಳಿ” ಪ್ರಜಾತಂತ್ರವನ್ನು ಜಾರಿ ಮಾಡುವ ಮೂಲ ರಚನೆಯಾಗಿರುತ್ತದೆ.
ii. “ರಾಜ್ಯ ಸಮನ್ವಯ ಮಂಡಳಿ”ಯಲ್ಲಿ ಎಲ್ಲಾ ರಾಜ್ಯ ಮಟ್ಟದ ಸಂಘಟನೆಗಳಿಗೂ ಕನಿಷ್ಠ ಎರಡು ಸದಸ್ಯರ ಪ್ರಾತಿನಿಧ್ಯವಿರುತ್ತದೆ. ಹೆಚ್ಚಿನ ಪ್ರಾತಿನಿಧ್ಯ ಅಗತ್ಯವಿದ್ದಲ್ಲಿ ಸಂಘಟನೆಯ ವ್ಯಾಪ್ತಿ ಹಾಗೂ ಮಹಾಮೈತ್ರಿಯ ಕೆಲಸದಲ್ಲಿ ಅದರ ತೊಡಗಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ವಸಮ್ಮತಿಯ ಆಧಾರದ ಮೇಲೆ ತೀರ್ಮಾನಿಸಲಾಗುತ್ತದೆ. ರಾಜ್ಯ ಸಮನ್ವಯ ಮಂಡಳಿಯು ಹೆಚ್ಚಾಗಿ ಸಂಘಟನಾ ಪ್ರಾತಿನಿಧ್ಯವನ್ನು ಹೊಂದಿರುತ್ತದೆ. ಆದರೆ ಮಹಾಮೈತ್ರಿಯ ಉದ್ದೇಶದಲ್ಲಿ ಸಕ್ರಿಯವಾಗಿ ಕೈಗೂಡಿಸುವ ಪ್ರಮುಖ ವ್ಯಕ್ತಿಗಳನ್ನು ಸಹ ಒಳಗೊಂಡಿರುತ್ತದೆ. ಅಲ್ಲದೆ ರಾಜ್ಯ ಸಮನ್ವಯ ಮಂಡಳಿಯಲ್ಲಿ ಮಹಾಮೈತ್ರಿ ಸಕ್ರಿಯವಾಗಿರುವ ಪ್ರತಿ ಜಿಲ್ಲೆಯಿಂದ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ.
iii. ಈ “ರಾಜ್ಯ ಸಮನ್ವಯ ಮಂಡಳಿ”ಯು ತನ್ನ ತೀರ್ಮಾನಗಳನ್ನು ಜಾರಿಗೆ ತರಲು ಕಾರ್ಯಕಾರಿ ಮಂಡಳಿ, ಅಧ್ಯಕ್ಷೀಯ ಮಂಡಳಿ, ಸಲಹಾ ಮಂಡಳಿ ಹಾಗೂ ವಿವಿಧ ನಿರ್ದಿಷ್ಟ ಕರ್ತವ್ಯಗಳ ಮೇಲೆ ಕೆಲಸ ಮಾಡುವ ಉಪ ಸಮಿತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ.
iv. ಇದೇ ಮಾದರಿಯಲ್ಲಿ “ಜಿಲ್ಲಾ ಮೈತ್ರಿ ಮಂಡಳಿ”ಗಳನ್ನು ಸಹ ರಚಿಸಲಾಗುತ್ತದೆ.

      c. ಸಂಘಟನಾ ಸದಸ್ಯತ್ವ:

i. ಮಹಾಮೈತ್ರಿಯು ಮುಖ್ಯವಾಗಿ ಸಂಘಟನೆಗಳಿಗೆ ಸದಸ್ಯತ್ವವನ್ನು ನೀಡುತ್ತದೆ. ಸಹಜವಾಗಿಯೇ ಸದಸ್ಯತ್ವ ಪಡೆದ ಸಂಘಟನೆಗಳ ಸದಸ್ಯರೆಲ್ಲರನ್ನೂ ಮಹಾಮೈತ್ರಿಯ ಸದಸ್ಯರೆಂದೇ ಪರಿಗಣಿಸಲಾಗುತ್ತದೆ.
ii. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಪ್ರಮುಖ ವ್ಯಕ್ತಿಗಳಿಗೆ ನೇರ ಸದಸ್ಯತ್ವ ನೀಡುವ ವಿಧಾನವೂ ಇರುತ್ತದೆ. ಆದರೆ ಸದಸ್ಯತ್ವ ನೀಡುವ ಮುನ್ನ ಅವರನ್ನು ಬಲ್ಲ ಕನಿಷ್ಠ ಮೂರು ಜನ ಸಮಿತಿ ಸದಸ್ಯರು ಅವರ ಹೆಸರನ್ನು ಸೂಚಿಸಬೇಕಾಗುತ್ತದೆ.

d. ಸಂಘಟನಾ ಸಂಸ್ಕೃತಿ  :
i. ಜನಾಂದೋಲನಗಳ ಮಹಾಮೈತ್ರಿಯು ಪ್ರಜಾತಾಂತ್ರಿಕ ಪದ್ದತಿಗಳನ್ನು ಹಾಗೂ ಮೌಲ್ಯಗಳನ್ನು ಸೃಜನಶೀಲ ವಿಧಾನದಲ್ಲಿ ಕಾರ್ಯರೂಪಕ್ಕಿಳಿಸಲು ಶ್ರಮಿಸುತ್ತದೆ. ಒಳಗೊಳ್ಳುವಿಕೆ ಮತ್ತು ಪಾರದರ್ಶಕತೆ ಅದರ ಸಂಘಟನಾ ಮೌಲ್ಯವಾಗಿರುತ್ತದೆ.
ii. ಮಹಾಮೈತ್ರಿಯನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡ ಎಲ್ಲಾ ಸಂಘಟನೆಗಳಿಗೂ ಹಾಗೂ ವ್ಯಕ್ತಿಗಳಿಗೂ ರಚನೆಗಳಲ್ಲಿ ಪ್ರಾತಿನಿಧ್ಯ ದೊರಕುವಂತೆ ಮಾಡಲು ವಿಶೇಷ ಎಚ್ಚರಿಕೆವಹಿಸುತ್ತದೆ.
iii. ಪ್ರತಿ ಸಮಿತಿಗಳಲ್ಲೂ ಯುವಜನತೆಗೆ, ಮಹಿಳೆಯರಿಗೆ ಹಾಗೂ ಶೋಷಿತ ಜನಸಮುದಾಯಗಳ ಹಿನ್ನೆಲೆಯವರಿಗೆ ಆಧ್ಯತೆ ಹಾಗೂ ಸೂಕ್ತ ಪ್ರಾತಿನಿಧ್ಯ ದೊರಕುವಂತೆ ನೋಡಿಕೊಳ್ಳುವುದು ಬಹುಮುಖ್ಯ ಮಾನದಂಡವಾಗಿರುತ್ತದೆ.
iv. ಮಹಾಮೈತ್ರಿಯು ಸಂಪನ್ಮೂಲಗಳಿಗಾಗಿ ಬಂಡವಾಳಶಾಹಿಗಳನ್ನಾಗಲೀ, ಬಲಾಢ್ಯ ಹಾಗೂ ಶೋಷಕ ಶಕ್ತಿಗಳನ್ನಾಗಲೀ ಆಧರಿಸದೆ ಜನ ಸಾಮಾನ್ಯರನ್ನು ಹಾಗೂ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಮಾತ್ರವೇ ಆಧರಿಸುತ್ತದೆ.

*****