ಜನಾಂದೋಲನಗಳ ಮಹಾಮೈತ್ರಿಯ ಆಶಯ -ದೇವನೂರ ಮಹಾದೇವ

[6.11.2016ರಂದು ಮೈಸೂರಿನಲ್ಲಿ ನಡೆದ ಜನಾಂದೋಲನಗಳ ಮಹಾಮೈತ್ರಿ ಘೋಷಣಾ ಸಮಾರಂಭದ ಆಶಯ ನುಡಿಗಳನ್ನಾಡಿದ ದೇವನೂರ ಮಹಾದೇವ ಅವರ ಮಾತುಗಳ ಪೂರ್ಣ ಪಾಠ.]

mahamaitri photo

ಇತ್ತೀಚೆಗೆ ಗೆಳೆಯ ಮಂಜುನಾಥದತ್ತ, ತೇಜಸ್ವಿಯವರು ಹೇಳುತ್ತಿದ್ದುದನ್ನು ನೆನಪಿಸಿದರು – ಗಾಂಧಿ ಪ್ರತಿಮೆ ‘ಹೋಗು ಹೋಗು’ ಅಂತ ಸನ್ನೆ ಮಾಡ್ತಾ ಇರುವಂತೆ ಇದ್ದರೆ ಅದು ‘ಬಾ ಬಾ’ ಅಂತ ಕರೆದಂತೆ ಭಾಸವಾಗುತ್ತಂತೆ. ಅದೇ ಗೋಡ್ಸೆ ಪ್ರತಿಮೆ ‘ಬಾ ಬಾ’ ಅಂತ ಸನ್ನೆ ಮಾಡ್ತಾ ಇರುವಂತೆ ಇದ್ದರೆ ಅದು ‘ಹೋಗು ಹೋಗು’ ಅಂತ ಭಾಸವಾಗುತ್ತದಂತೆ. ಇತ್ತೀಚೆಗೆ ಈ ಅಯೋಮಯ ಸ್ಥಿತಿಗೆ ಹೆಚ್ಚೆಚ್ಚು ಒಳಗಾಗಿ ನಾನು ಕಣ್ಣು ಬಾಯಿ ಬಿಡುತ್ತಿರುವೆ.

ದಯವಿಟ್ಟು ಆಲಿಸಿ: “ದೇಹದ ಯಾವುದೇ ಅಂಗಕ್ಕೆ ಗಾಯವಾದರೆ ಇಡೀ ದೇಹಕ್ಕೆ ನೋವಾಗುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಗೆ ನೋವಾದರೆ ಇಡೀ ಸಮಾಜ ನೋವು ಅನುಭವಿಸಬೇಕು” – ಇದನ್ನು ಓದಿದಾಗ, ಅರೆ ಇದು ನಾನೇ ಹೇಳಿದಂತೆ ಇದೆಯಲ್ಲ ಅಂತ ಅನ್ನಿಸಿಬಿಟ್ಟಿತು. ನಾನು ಯಾರಿಗೂ ಭಾಷಣ ಬರೆದು ಕೊಟ್ಟಿರಲಿಲ್ಲ. ಆ ಹೇಳಿಕೆಯ ಕೆಳಗೆ ಹೆಸರು ನೋಡಿದರೆ ನರೇಂದ್ರ ಮೋದಿ ಅಂತ ಇತ್ತು. ಗಾಬರಿಗೆ ಬಿದ್ದೆ. ನರೇಂದ್ರ ಮೋದಿ ಅವರು ಮುಂದುವರೆದು “ಎಲ್ಲರೊಂದಿಗೆ ಸೇರಿ ಎಲ್ಲರ ಅಭಿವೃದ್ಧಿ ಎಂಬ ತಮ್ಮ ಸರ್ಕಾರದ ಘೋಷಣೆ ಸಮಾಜದ ಕಟ್ಟಕಡೆಯ ಮನುಷ್ಯನ ಅಭಿವೃದ್ಧಿಯನ್ನು ಖಾತರಿಪಡಿಸುವ ಬದ್ಧತೆ” ಅನ್ನುತ್ತಾರೆ ಹಾಗೂ ದೀನ ದಯಾಳ ಉಪಾಧ್ಯಾಯರ ಹೇಳಿಕೆಯನ್ನು ಉಲ್ಲೇಖಿಸಿ – “ಮುಸ್ಲಿಮರನ್ನು ಓಲೈಸುವುದೂ ಬೇಡ ಅಥವಾ ಅವರ ಮೇಲೆ ದೌರ್ಜನ್ಯ ನಡೆಸುವುದು ಬೇಡ, ಅವರನ್ನು ಸಶಕ್ತಗೊಳಿಸಿ” ಎನ್ನುತ್ತಾರೆ. ಮುಂದೆ ‘ದಲಿತರು ಸಾಮರಸ್ಯದಿಂದ ಬಾಳುವಂತಾಗಲು’ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಇದನ್ನು ಯಾವ ರೀತಿ ನೋಡಬೇಕು? ಕನಿಷ್ಠ ಸಾಚರ್ ಸಮಿತಿ ವರದಿ ಅನುಷ್ಠಾನ, ಖಾಸಗೀಕರಣದಲ್ಲಿ ತಳವರ್ಗಕ್ಕೆ ಮೀಸಲಾತಿ ಅನುಷ್ಠಾನ, ಪ್ರಜೆಗಳ ಆಹಾರ ಪದ್ಧತಿ ರಕ್ಷಣೆ, ಗೋ-ಭಯೋತ್ಪಾದನೆಗೆ ಶಿಕ್ಷೆ, ಸಮಾನ ಶಿಕ್ಷಣ – ಇವುಗಳನ್ನಾದರೂ ಜಾರಿಗೆ ತಂದು ಆ ಮಾತುಗಳನ್ನಾಡಿದ್ದರೆ ಅಭಿನಂದಿಸಬಹುದಿತ್ತು. ಹಿಂದೊಮ್ಮೆ ಪ್ರಧಾನಿ ಇಂದಿರಾಗಾಂಧಿಯವರು ಕೂಡ ಕ್ರಾಂತಿಕಾರಿ ಮಾವೋತ್ಸೆತುಂಗ್ ಮಾತಾಡಿದಂತೆ ಮಾತಾಡಿ ಇದೇ ರೀತಿ ನನಗೆ ಗಾಬರಿ ಹುಟ್ಟಿಸಿಬಿಟ್ಟಿದ್ದರು!

ನನಗೆ, ಚಿಕ್ಕವನಾಗಿದ್ದಾಗ ಓದಿದ್ದ ಬಕಪಕ್ಷಿಯ ಕತೆ ನೆನಪಾಗಿಬಿಟ್ಟಿತು. ಒಂದು ಕೆರೆಯಲ್ಲಿ ನೀರು ಹಿಂಗಿ ಅಲ್ಲಿನ ಮೀನುಗಳು ಕಷ್ಟಪಡುತ್ತಿದ್ದಾಗ ಅಲ್ಲೇ ವಾಸಿಸುತ್ತಿದ್ದ ಬಕಪಕ್ಷಿಯೊಂದು ಆ ಮೀನುಗಳಿಗೆ ದೂರದಲ್ಲಿರುವ ಸಮೃದ್ಧವಾದ ಕೆರೆಯ ಭ್ರಮೆಯ ಕನಸು ಬಿತ್ತಿ ಆ ಭ್ರಮಾ ಕೆರೆಗೆ ಒಂದೊಂದನ್ನೇ ಒಯ್ಯುತ್ತಾ ಆ ಮೀನುಗಳನ್ನು ಸ್ವಾಹಾ ಮಾಡುತ್ತಿದ್ದ ಕತೆಯಂತೆಯೇ ಇದೂ ಇದೆಯಲ್ಲಾ ಅನ್ನಿಸಿಬಿಟ್ಟಿತು.
ಮತ್ತೂ ಭೀತಿ ಹುಟ್ಟಿಸುವುದೆಂದರೆ- ಹುಸಿಯ ಮೇಲೆ ನಿಂತಿರುವ ಇಂತಹ ಮಿಥ್ಯ ರಾಜಕಾರಣವನ್ನು ಪಾಶ್ಚಿಮಾತ್ಯ ಚಿಂತಕರು Post – Truth Politics  ಅಂದರೆ ‘ಸತ್ತ್ಯೋತ್ತರ ರಾಜಕಾರಣ’ ಎಂದು ವಿಶ್ಲೇಷಣೆ ಮಾಡುತ್ತಿದ್ದಾರಂತೆ! ಜಗತ್ತಿನ ಮುಕ್ಕಾಲು ಭಾಗದ ರಾಜಕಾರಣ ಈ ರೀತಿಯೇ ಜರುಗುತ್ತಿದೆಯಂತೆ. ಸುಗತ ಶ್ರೀನಿವಾಸರಾಜು ತಮ್ಮದೊಂದು ಸಂಪಾದಕೀಯದಲ್ಲಿ ಈ ಬಗ್ಗೆ ಬೆಳಕು ಚೆಲ್ಲುತ್ತಾರೆ. ಸತ್ತ್ಯೋತ್ತರ ರಾಜಕಾರಣ ಅಂದರೆ ಸಹಜವಾಗಿ ಅದು ಸತ್ಯದ ತದನಂತರದ ಸೂಕ್ಷ್ಮಸತ್ಯದ ರಾಜಕಾರಣವಾಗಬೇಕಾಗಿತ್ತು. ಆದರೆ ರಚನಾತ್ಮಕ ಸತ್ಯದ ರಾಜಕಾರಣವನ್ನು ಭೂಗತ ಮಾಡಿ ಅದರ ಮೇಲೆ ಧ್ವಂಸಕ ಮಿಥ್ಯದ ರಾಜಕಾರಣ ರಾರಾಜಿಸುವುದೇ ಇಂದು ಸತ್ತ್ಯೋತ್ತರ ರಾಜಕಾರಣ ಎನ್ನಿಸಿಕೊಂಡುಬಿಟ್ಟಿದೆ. ನಾನು ತತ್ತರಿಸಿ ಹೋದೆ. ಇದು ಮಾನವಕುಲದ ದುರಂತ ಅನ್ನಿಸಿಬಿಟ್ಟಿತು.

ಈ ಲೋಕದ ನಡಿಗೆಯ ನಾಡಿ ಹಿಡಿಯುವ ಚೋಮ್‍ಸ್ಕಿ ಬಹಳ ಹಿಂದೆಯೇ- ‘ಸಂಪತ್ತಿನ ಕೇಂದ್ರೀಕರಣದ ಫಲವಾಗಿ ಅಧಿಕಾರದ ಕೇಂದ್ರೀಕರಣ ಉಂಟಾಗುತ್ತದೆ. ಇದರಿಂದ ಉಂಟಾಗುವ ಅಸಮಾನತೆಯ ಕಟುವಾಸ್ತವದ ಫಲವಾಗಿ ಪ್ರಜಾಪ್ರಭುತ್ವಕ್ಕೆ ತುಕ್ಕು ಹಿಡಿಯುತ್ತದೆ, ಇದು ಮಾರಕ’ ಎಂದಿದ್ದರು. ಪ್ರಜಾಪ್ರಭುತ್ವ ಮತ್ತು ಸಮಾನತೆ ಅವಳಿಗಳು ಇದ್ದಂತೆ. ಒಂದಕ್ಕೆ ಏಟಾದರೆ ಇನ್ನೊಂದಕ್ಕೂ ಅದು ಪರಿಣಾಮ ಬೀರುತ್ತದೆ. ಈ ನಿಜವನ್ನು ಹಿಡಿದು ನಮ್ಮ ಸುತ್ತಲಿನ ಜಗತ್ತನ್ನು ನಾವು ನೋಡಬೇಕಾಗಿದೆ.

ಹೀಗೆ ನೋಡಿದರೆ – ಇಂದು ಸಂಪತ್ತಿನ ಕೇಂದ್ರೀಕರಣ ಕೆಲವೇ ವ್ಯಕ್ತಿಗಳಲ್ಲಿ ಎಂದೂ ಇಲ್ಲದಷ್ಟು ಕೇಂದ್ರೀಕರಿಸಲ್ಪಟ್ಟಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಾಗೂ ಸಂಪತ್ತನ್ನು ದೋಚಿ ಕೇಂದ್ರೀಕರಿಸಿಕೊಂಡು ಅದರ ಮೇಲೆ ಕೂತ ವ್ಯಕ್ತಿಗೂ ಇರುವ ಅಂತರ ಎಂದೂ ಇಲ್ಲದಷ್ಟು ಅಂದರೆ ಪಾತಾಳ ಆಕಾಶದಷ್ಟು ಹೆಚ್ಚಿದೆ. ಈ ಅಸಮಾನತೆಯ ಅಬ್ಬರದಲ್ಲಿ ಪ್ರಜಾಪ್ರಭುತ್ವದ ಉಳಿವು ಹೇಗೆ? ಸಮಾನತೆಯನ್ನೇ ಅವಲಂಬಿಸಿ ಜೀವ ಪಡೆಯುವ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವವನ್ನೇ ಅವಲಂಬಿಸಿ ಜೀವ ಪಡೆಯುವ ನ್ಯಾಯ, ಸ್ವಾತಂತ್ರ್ಯ, ಸಹೋದರತೆಗಳು ಅಸಮಾನತೆಯ ಹೊಡೆತಕ್ಕೆ ತತ್ತರಿಸುತ್ತಿವೆ. ಇಂದು ಬಂಡವಾಳ ಸೃಷ್ಟಿಸಿರುವ ಸಂಬಂಧ ಎಷ್ಟು ಕ್ರೂರವಾಗಿದೆ ಎಂದರೆ, ಹಿಂದೆ ಒಂದು ಮಾತು ಚಾಲ್ತಿಯಲ್ಲಿತ್ತು- “ಮನುಷ್ಯರನ್ನು ಪ್ರೀತಿಸು, ವಸ್ತುಗಳನ್ನು ಉಪಯೋಗಿಸು” ಅಂತ. ಈಗ ಅದು ಉಲ್ಟಾ ಆಗಿದೆ. ಇಂದು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ; ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದೇವೆ. ಇಂದು ಮನುಷ್ಯರು ವಸ್ತುಗಳನ್ನು ಕೊಂಡುಕೊಳ್ಳುತ್ತಿಲ್ಲ, ಬದಲಾಗಿ ವಸ್ತುಗಳೇ ಮನುಷ್ಯರನ್ನು ಕೊಂಡುಕೊಳ್ಳುತ್ತಿರುವ ವಿದ್ಯಮಾನ ನಮ್ಮ ಕಣ್ಮುಂದೆಯೇ ಜರುಗುತ್ತಿದೆ. ನಾವು ಇಲ್ಲಿಗೆ ಬಂದು ನಿಂತಿದ್ದೇವೆ. ಈಗ ನಾವು ಏನು ಮಾಡಬೇಕು?

ನಾವು ಇಂದು ಮಾಡಬಹುದಾದ ಮೊದಲ ಕೆಲಸ – ಮನುಷ್ಯನನ್ನು ಮನುಷ್ಯ ಎಂದು ನೋಡಬೇಕಾದುದೇ ಆಗಿದೆ. ಹಿಡಿತಕ್ಕೆ ಸಿಗದೆ ಓಡುತ್ತಿರುವ ಅಡ್ಡಾದಿಡ್ಡಿ ಅಭಿವೃದ್ಧಿಗೆ ಸಮಾನತೆಯ ಅಳತೆಗೋಲು ಅಳವಡಿಸಿ ನೋಡಬೇಕಾಗಿದೆ. ಆಗ ಮಾತ್ರವೇ ಮನುಷ್ಯಕೇಂದ್ರಿತವಾಗುವುದು, ಆಗ ಮಾತ್ರವೇ ನಮ್ಮ ಸಂವಿಧಾನದ ಮುನ್ನುಡಿಯ ಆಶಯಗಳಾದ – ನ್ಯಾಯ, ಸ್ವಾತಂತ್ರ್ಯ, ಸಹೋದರತೆಗಳು ಉಸಿರಾಡುವುದು.
ಆದರೆ ನಮ್ಮ ಎದುರಿಗೆ ಖಾಸಗಿ ಬಂಡವಾಳಶಾಹಿಯ ಕಾಲ್ಸನ್ನೆಗೆ ಕುಣಿಯುವ ಬಕಪಕ್ಷಿ ವಂಚನೆಯ ಮಿಥ್ಯಾ ರಾಜಕಾರಣವಿದೆ. ಇದರ ಮುಂದೆ ಜನತೆಯ ಆಶಯಗಳೂ ಜನಾಂದೋಲನಗಳ ಹೋರಾಟಗಳೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂಬುವಂತಾಗಿದೆ.

ಜೊತೆಗೇ ಜನತೆಯ ಆಶೋತ್ತರಗಳಿಗೆ ಧ್ವನಿ ಆಗುವ, ಸಮಸ್ಯೆಗಳಿಗೆ ಸ್ಪಂದಿಸುವ ಜನಾಂದೋಲನಗಳಿಗೂ ತುಕ್ಕು ಹಿಡಿದಿದೆ. ಬಹುತೇಕ ಜನಾಂದೋಲನಗಳು ಟ್ರೇಡ್ ಯೂನಿಯನ್ ಸ್ವಭಾವ ಪಡೆದುಕೊಂಡು ಬಾವಿ ಕಪ್ಪೆಗಳಂತಾಗಿಬಿಟ್ಟಿವೆ. ಜೊತೆಗೆ ಈ ಕಾಲದ ಚಲನೆಗೆ ನುಡಿ ಕಂಡುಕೊಂಡಿಲ್ಲ. ಒಂಟಿಕಾಲಲ್ಲಿ ಕುಂಟುತ್ತಿವೆ. ಆಗಾಗ ಪರಸ್ಪರ ಟಾಂಗು ಕೊಟ್ಟುಕೊಳ್ಳುತ್ತಲೂ ಇವೆ. ಈಗಲಾದರೂ ಇಡಿಯಾಗಿ ನೋಡುವ ಕಣ್ಣೋಟ ಮತ್ತು ಗ್ರಹಿಕೆಗಳನ್ನು ಜನಾಂದೋಲನಗಳು ಪಡೆದುಕೊಳ್ಳಬೇಕಾಗಿದೆ – ತಂತಮ್ಮ ಉಳಿವಿಗಾಗಿ. ದಾಯಾದಿಯಂತಿರುವ ಜನಾಂದೋಲನಗಳು ಸೋದರತೆ ಪಡೆದುಕೊಂಡಾಗ ಮಾತ್ರವೇ ಖಾಸಗಿ ಮಿಥ್ಯಾ ರಾಜಕಾರಣಕ್ಕೆ ಮುಖಾಮುಖಿಯಾಗುವ ತ್ರಾಣ ಜನಾಂದೋಲನಗಳಿಗೆ ದಕ್ಕಬಹುದು.

ಒಂದು ಸಂಘಟನೆಯೊಳಗೇನೇ ಏಗುವುದು ನಿಭಾಯಿಸುವುದು ಕಷ್ಟವಾಗಿರುವಾಗ ಹತ್ತಾರು ಸಂಘಟನೆಗಳ ಒಕ್ಕೂಟದ ಸ್ವರೂಪದೊಳಗೆ ನಿಭಾಯಿಸುವುದರ ಸವಾಲು ಕಡುಕಷ್ಟ ಎಂಬುದು ಎಲ್ಲರಿಗೂ ಇದೆ, ಹಾಗೆಯೇ ನನಗೂ ಇದೆ. ಒಂದು ಅನುಭವದ ಮೂಲಕ ಹೇಳಲು ಪ್ರಯತ್ನಿಸುವೆ. ಕೆಲವು ವರ್ಷಗಳ ಹಿಂದೆ ದಲಿತ ಸಂಘರ್ಷ ಸಮಿತಿಯ ನಾಕಾರು ಬಣಗಳು ಒಟ್ಟಾಗುವ ಪ್ರೇರಣೆಯಿಂದ ಮೈಸೂರಿನಲ್ಲಿ ಒಂದು ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವನ್ನು ಲಕ್ಷ್ಮಣ್ ಹೊಸಕೋಟೆ ಮತ್ತು ದಲಿತ ನೌಕರ ಗೆಳೆಯರು ರೂಪಿಸಿದ್ದರು. ನಾನೂ ಜೊತೆಗೂಡಿದ್ದೆ. ಅಂದು ಕೆ.ಆರ್.ಸರ್ಕಲ್‍ನ ಸುತ್ತಮುತ್ತ ಇರುವ ನಾಕೂ ರಸ್ತೆಗಳಿಂದ ನಾಕೂ ಬಣಗಳು ಪ್ರತ್ಯೇಕವಾಗಿ ಬಂದು ಕೆ.ಆರ್.ಸರ್ಕಲ್‍ನಲ್ಲಿ ಮಿಳಿತವಾಗಿ ಒಂದಾಗಿ ಬೆರೆತು ಒಟ್ಟಾಗಿ ಪುರಭವನಕ್ಕೆ ಮೆರವಣಿಗೆ ನಡೆದು ಒಂದು ಅಭೂತಪೂರ್ವ ಸಮಾರಂಭ ನಡೆಯಿತು. ಆಯ್ತು, ಆದರೆ ಬಣಗಳು ಒಂದಾಗಲಿಲ್ಲ, ನಿಜ. ಆದರೆ ಅದುವರೆಗೂ ಮುಖಕ್ಕೆ ಮುಖಕೊಟ್ಟು ಮಾತಾಡದೆ ದಾಯಾದಿಗಳಂತೆ ಇದ್ದ ದಸಂಸ ಬಣಗಳು ಈ ಸಮಾವೇಶದ ತದನಂತರ ಪ್ರತ್ಯೇಕತೆ ಇಟ್ಟುಕೊಂಡೇ ಸಹೋದರತೆಯಿಂದ ಒಡನಾಡತೊಡಗಿದವು. ಜಂಟೀ ಹೋರಾಟವನ್ನು ಮಾಡತೊಡಗಿದವು. ಈ ಚಲನೆ ಸಾಧಾರಣವಾದುದಲ್ಲ.ಈ ಗುಣಾತ್ಮಕ ಬದಲಾವಣೆ ನಾವು ಗಮನಿಸಿದರಷ್ಟೇ ಕಾಣುತ್ತದೆ.

 

ಇಂಥದೇ ಕನಸಿನಲ್ಲಿ ಜನಾಂದೋಲನಗಳ ಮಹಾಮೈತ್ರಿ ಈಗಷ್ಟೇ ಕಣ್ಣುಬಿಡುತ್ತದೆ. ಈ ಮಹಾಮೈತ್ರಿಯೆಂಬ ಹೆಸರಿಟ್ಟವರು ರಾಘವೇಂದ್ರ ಕುಷ್ಟಗಿ ಅವರು. ಈ ಹೆಸರು ನಮಗೆ ಒಂದು ಕಣ್ಣನ್ನೇ ಕೊಟ್ಟಂತಾಗಿದೆ. ಮಹಾಮೈತ್ರಿ ಅದು ನಾಮಪದವಲ್ಲ. ಹಾಗಾಗಿ ಇದು ಹತ್ತರ ಜೊತೆಗೆ ಮತ್ತೊಂದು ಎಂಬಂತಾಗುವ ಸಂಘಟನೆ ಅಲ್ಲ. ಮಹಾಮೈತ್ರಿ ಗುಣವಾಚಕ. ಮೈತ್ರಿಯ ಗುಣವನ್ನು ನಾವು ಅಂದರೆ ಎಲ್ಲ ಜನಾಂದೋಲನಗಳು ಪರಸ್ಪರ ಪಳಗಿಸಿಕೊಳ್ಳುತ್ತ ಒಡನಾಡುವ ಸ್ವಭಾವ ಪಡೆದುಕೊಳ್ಳುವ ಪ್ರಕ್ರಿಯೆ. ಇದು ಸದಾ ಒಳಗೊಳ್ಳುತ್ತಲೇ ಹೋಗುವ ಪ್ರಕ್ರಿಯೆ – Present continuous tense. ಹಾಗಾಗಿ ಜನಾಂದೋಲನಗಳ ಚಲನೆಗೆ ವೇಗ ತಂದುಕೊಡುವ ನಿರಂತರ ಪ್ರಕ್ರಿಯೆಯಲ್ಲಿ ಮಹಾಮೈತ್ರಿಯು ಎಚ್ಚರ ವಿವೇಕದೊಡನೆ ವೇಗವರ್ಧಕ ಆಗಬೇಕಾಗಿದೆ.

 

ಹಾಗಾಗಿ ಮಹಾಮೈತ್ರಿಯು ಯಾವುದೇ ಜನಮುಖಿ ಹೋರಾಟದ ನೋವಿನಲ್ಲೂ ತನ್ನದೂ ಒಂದಂಶವಾದರೂ ಇರುತ್ತದೆ ಎಂಬ ಅರಿವಿನಲ್ಲಿ, ಉಳಿದ ಜನಾಂದೋಲನಗಳು ಸ್ಪಂದಿಸುವಂತಾಗಲು ವೇಗವರ್ಧಕದಂತೆ ಕೆಲಸ ಮಾಡುತ್ತದೆ. ಒಂದು ಆಲೋಚನೆಯು ಪರಾಗಸ್ಪರ್ಶದಂತೆ ಇನ್ನೆಲ್ಲೋ ಕೂಡಿ ಕ್ರಿಯೆಯಾಗಿ ಫಲಿಸುವ ಅಂತರ್ಗತ ಸಂಬಂಧವನ್ನು ಕಾಣುತ್ತ, ಹಾಗೆಯೇ ಒಬ್ಬ ವ್ಯಕ್ತಿ ನೈತಿಕವಾಗಿ ಮಾಡುವ ಒಂಟಿ ಹೋರಾಟಕ್ಕೂ ಸ್ಪಂದಿಸುವ ಸಂವೇದನಾಶೀಲತೆಯನ್ನು ಸಮಾಜದಲ್ಲಿ ಉಂಟುಮಾಡಲು ಮೈತ್ರಿ ಸ್ಪಂದಿಸುತ್ತದೆ.

ಮಹಾಮೈತ್ರಿಯು ಸಮಾನತಾ ಆಶಯಗಳನ್ನು ನೆಲೆಗಟ್ಟು ಮಾಡಿಕೊಂಡು ವೈವಿಧ್ಯಮಯದ ಚಿಂತನಾ ಎಳೆಗಳನ್ನೂ ಹಾಗೂ ವಿಭಿನ್ನ ಅಭಿವ್ಯಕ್ತಿ, ಧ್ವನಿ, ಶೈಲಿ, ವೈಖರಿಗಳನ್ನೂ ಒಳಗೊಳ್ಳುವುದು ಅದರ ನಡಿಗೆಯಾಗಬೇಕು. ಉದಾಹರಣೆಗೆ- ಎಳೆಯ ಗೆಳೆಯ ಹುಲಿಕುಂಟೆಮೂರ್ತಿ ಮಾತಾಡುತ್ತ- “ಬಿರುಸಿನ ನೇರನೇರ ನುಡಿಗಟ್ಟು ಬಳಸದೇ, ರೂಪಕದ ಭಾಷೆ ಬಳಸಿದರೆ ಅದು ಸಮಾಧಾನ ತಂದುಕೊಟ್ಟು ಹೋರಾಟದ ವೇಗಕ್ಕೆ ತಡೆಯಾಗುತ್ತದೆ” ಎಂಬರ್ಥದಲ್ಲಿ ನುಡಿದರು. ಇದು ನನ್ನ ಬಗ್ಗೆಯೇ ಅನ್ನಿಸಿತು. ಇರಲಿ, ನೋಡೋಣ: ವಚನಕಾರರಲ್ಲಿ- ಬಿರುಸಿನ ನೇರಾನೇರ ನುಡಿಗಟ್ಟಿನ ಅಂಬಿಗರ ಚೌಡಯ್ಯನೂ ಇದ್ದನು. ಅಂತರಂಗ ಬಹಿರಂಗ ತಳಮಳದ ಬಸವಣ್ಣನೂ ಇದ್ದನು. ಭಾವಾವೇಶದ ಅಕ್ಕನೂ ಇದ್ದಳು. ದೇವರನ್ನು ‘ಹೋಗಲೋ…’ ಅನ್ನುವ ಮಾದಾರ ಧೂಳಯ್ಯನೂ ಇದ್ದನು. ಕಾಲವನ್ನು ಹಿಡಿಯುವ ಒಗಟಿನ ಅಲ್ಲಮನೂ ಇದ್ದನು. ಇದ್ದರೂ ಅವರೆಲ್ಲರ ಆಳದ ಆಶಯ ಒಂದೇ ಆಗಿತ್ತು, ಅಭಿವ್ಯಕ್ತಿಯೂ ಅವರವರ ಅಂತರಂಗದ ಸ್ಪರ್ಶದಲ್ಲಿ ವೈವಿಧ್ಯಮಯವಾಗಿತ್ತು. ವಚನಕಾರರೆಲ್ಲರೂ ಅಂಬಿಗರ ಚೌಡಯ್ಯನ ರೀತಿಯಲ್ಲಿಯೇ ಕೂಗಿ ಮಾತನಾಡುತ್ತಿದ್ದರೆ, ಅದನ್ನು ಕಲ್ಪಿಸಿಕೊಂಡರೆ ಇದು ತಂತಾನೆ ಅರ್ಥವಾಗುತ್ತದೆ. ಬಹುತ್ವವನ್ನು ಸಹನೆಯಿಂದ ಕಾಪಾಡಿಕೊಳ್ಳಬೇಕು. ನನ್ನದೂ ಆಶಯಗಳ ಕುಡಿ ದಲಿತ ದಮನಿತರ ಸಂಘಟನೆಯ ಹುಲಿಕುಂಟೆ ಮೂರ್ತಿಯ ವಿಭಿನ್ನ ಧ್ವನಿಗೆ ಅವಕಾಶ ಸಿಗುವಂತಾಗಲು, ಅವರ ನುಡಿ ನನ್ನ ನುಡಿಯಂತೆ ಇಲ್ಲದಿದ್ದರೂ, ಅದಕ್ಕಾಗಿ ನಾನು ಕಾತರಿಸುತ್ತೇನೆ. ಹಾಗೇ ಇನ್ನಿತರ ಬಗೆಬಗೆಗಳಿಗೂ ಕೂಡ. ಹಾಗೇನೇ ಅವರೂ ನನ್ನ ಬಗೆಯ ಅಭಿವ್ಯಕ್ತಿಗೂ ಅವಕಾಶ ಕಲ್ಪಿಸುವ ಒಲವು ಸಹನೆ ಪಡೆದುಕೊಳ್ಳಬೇಕು. ನೆನಪಿಟ್ಟುಕೊಳ್ಳೋಣ, ಸಹಿಸಲಸಾಧ್ಯ ಪರಿಸ್ಥಿತಿಯಲ್ಲಿ ಯಾರೂ ಸೋಲಿಸಲಾಗದ ಬೆಪ್ಪುತಕ್ಕಡಿ ಇವಾನ್‍ನ ಬಗೆಯೂ ಕೂಡ ನಮಗೆ ಬದುಕುಳಿಯುವ ಸುಳಿವಾಗಬಹುದು. ಇಲ್ಲಿ, ನಾನು ಹಾಗೂ ಹುಲಿಕುಂಟೆಮೂರ್ತಿ ನೆಪ ಮಾತ್ರ. ಈ ನೆಪದಲ್ಲಿ ಮೈತ್ರಿಯ ಸ್ವಭಾವ ಹಿಡಿಯಲು ಪ್ರಯತ್ನಿಸುತ್ತಿರುವೆ.
ಹೀಗೆ ಸಮಾನತಾ ಆಶಯಗಳ ಹೋರಾಟಕ್ಕೆ ಬಗೆಬಗೆಯ ದಾರಿಗಳನ್ನೂ ಒಳಸುಳಿವುಗಳನ್ನೂ ಮಹಾಮೈತ್ರಿಯು ಸೃಷ್ಟ್ಯಾತ್ಮಕವಾಗಿ ಹುಡುಕಾಡುತ್ತದೆ. ಇಂದು ಪುರುಷ

ಪ್ರಧಾನ ವ್ಯವಸ್ಥೆಯಿಂದಾಗಿ ಪ್ರತಿಭಟನೆಯ ಅಸ್ತ್ರ-ಹತಾರೆಗಳೂ ಕೂಡ ಗಂಡು ಸ್ವಭಾವದವುಗಳೇ ಆಗಿಬಿಟ್ಟಿವೆ. ಗಂಡು ಸ್ವಭಾವದ ಅರೆಬೆತ್ತಲೆ ಮೆರವಣಿಗೆ, ಬಂದ್, ಮುತ್ತಿಗೆ, ರಸ್ತೆತಡೆ, ಮುರಿದು ಹಾಕುವುದು, ಹೊರ ಏಟು, ಸಂಘರ್ಷ ಇವು ಹೆಚ್ಚಾಗಿ ಬೀದಿಯಲ್ಲಿವೆ. ಅದೇ ಹೆಣ್ಣು ಸ್ವಭಾವದ ಪ್ರತಿಭಟನೆಯ ಅಸ್ತ್ರ-ಹತಾರೆಗಳಾದ ಅಸಹಕಾರ, ಪ್ರತಿರೋಧ, ರಚನಾತ್ಮಕತೆಯ ಕೆಲಸ, ಸುಧಾರಣೆ, ಸತ್ಯಾಗ್ರಹ ಹಾಗೂ ಯಾರಾದರು ಮೈಮುಟ್ಟಲು ಬಂದರೆ ಯಾರಿಗೂ ಗೊತ್ತಾಗದಂತೆ ಸೇಫ್ಟಿಪಿನ್ನಲ್ಲಿ ಚುಚ್ಚುವ ಒಳೇಟು… ಇತ್ಯಾದಿಗಳು ಮಹಿಳೆಯಂತೆಯೇ ಮನೆಯೊಳಗೆ ಇವೆ. ಹೋರಾಟಕ್ಕೆ ಈ ಎರಡನ್ನೂ ಕೂಡಿಸಲು ಮಹಾಮೈತ್ರಿಯು ಪ್ರಯೋಗಶೀಲವಾಗುತ್ತದೆ. ಈ ಪ್ರಯೋಗಶೀಲತೆ ನಮ್ಮ ನೋಟವನ್ನೇ ಬದಲಿಸಿ ದಿಕ್ಕುದೆಸೆ ಕಾಣಿಸಬಹುದು. ಉದಾಹರಣೆಗೆ – ರಾಸಾಯನಿಕಗೊಬ್ಬರ, ಕಂಪನಿಬೀಜ, ರಾಸಾಯನಿಕ ಔಷಧಗಳನ್ನು ಕೊಂಡುಕೊಳ್ಳದೆ ಮಾಡುವ ರಚನಾತ್ಮಕ ನೈಸರ್ಗಿಕ ಕೃಷಿಯು ಅಷ್ಟರಮಟ್ಟಿಗೆ ಕಾರ್ಪೋರೇಟ್ ಸೆಕ್ಟರ್‍ಗೆ ಅನ್ನ-ನೀರು ಕೊಡದೇ ಸಾಯಿಸುವ ಗೆರಿಲ್ಲಾ ವಾರ್‍ನಂತಾಗಿಬಿಡುತ್ತದೆ. ಹಾಗೇ ಸರ್ಕಾರಿ ಶಾಲೆಗಳನ್ನು ಸಾರ್ವಜನಿಕ ಎಚ್ಚರ-ಸಹಕಾರದಲ್ಲಿ ಉಳಿಸಿಕೊಳ್ಳುವ ಹೆಣ್ಣು ಸ್ವಭಾವದ ಈ ಸಂಭಾಳಿಸುವ ಕ್ರಿಯೆ ಅಷ್ಟರಮಟ್ಟಿಗೆ ಖಾಸಗಿಯನ್ನು ತಡೆದು ಬದುಕುಳಿಯುವ ದಾರಿಯಾಗಿ ಕಾಣಬಹುದು. ಹೀಗೆ ನೋಡುವ ಕಣ್ಣು ನಮಗೆ ಬಂದರೆ ಬಿಡುಗಡೆಯ ದಾರಿಗಳೂ ನಮಗೆ ಬಿಚ್ಚಿಕೊಳ್ಳುತ್ತದೆ.

ಇದೆಲ್ಲಾ ಹೇಳುವುದು ಸುಲಭ. ನಡೆಯುವುದು ಕಷ್ಟಸಾಧ್ಯ. ಇದು ವಚನಕಾರರು ನಡೆದಾಡಿರುವ ನೆಲವಾದ್ದರಿಂದ ಕಷ್ಟವಾದರೂ ಸಾಧ್ಯ ಎಂದುಕೊಂಡಿದ್ದೇನೆ.