ಉಂಟೆ, ಪ್ರಜ್ಞೆಗೂ ಹೊಕ್ಕುಳಬಳ್ಳಿಯ ನಂಟು?

[ಮೈಸೂರು ವಿಶ್ವ ವಿದ್ಯಾಲಯದ ಇಂಗ್ಲಿಷ್ ವಿಭಾಗವು 2014 ರ ಸೆಪ್ಟೆಂಬರ್ ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತೀಯ ಭಾಷಾ ಸಾಹಿತ್ಯ  ಸಾಮ್ಯತೆಯ ಕುರಿತು ನಡೆಸಿದ ವಿಚಾರ ಸಂಕಿರಣದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ]

 

 

ದೂರದ ಆಸ್ಟ್ರೇಲಿಯಾದ ಭೂಮಿ ತಾಯಿಯ ಚೊಚ್ಚಲ ಮಕ್ಕಳಾದ ಡಾ.ಜ್ಹಾನ್ ಲಿಯಾನ್, ಮೇಲ್ಹಿ ಮಂಕಾರ, ಡಾ.ಡೈಲಾನ್‌ಕೋಲ್ಮನ್ ಹಾಗು ಬ್ರೆಂಟನ್ ಮೆಕೆನ್ನಾ ಈ ನಾಲ್ವರ ಭಾವಚಿತ್ರದೊಡನೆ ನನ್ನ ಭಾವಚಿತ್ರ ಕೂಡ ಒಂದೆಡೆ ಪ್ರಕಟವಾಗಿದೆ. ಇದು ಉದ್ದೇಶಪೂರ್ವಕವೊ, ಆಕಸ್ಮಿಕವೊ ನನಗೆ ಗೊತ್ತಿಲ್ಲ. ಆದರೆ ಇದರಿಂದಾಗಿ ಈ ಚೊಚ್ಚಲ ಮಕ್ಕಳೊಡನೆ ನನಗೂ ಸಂಬಂಧ ಉಂಟಾದಂತಾಗಿ ನಾನು ವಿಸ್ಮಯಗೊಂಡಿದ್ದೇನೆ. ಇದರೊಡನೆ ನೆನಪಾಗುತ್ತಿದೆ – ಕನ್ನಡ ಲೇಖಕ ವಿಕ್ರಂ ವಿಸಾಜಿ ಪಶ್ಚಿಮಬಂಗಾಲದಲ್ಲಿ ಕೆಲದಿನ ಇದ್ದಾಗ ಅಲ್ಲೊಬ್ಬ ಸಂತಾಲ್ ಆದಿವಾಸಿ ಪಂಗಡಕ್ಕೆ ಸೇರಿದ ಯುವಕವಿಯೊಬ್ಬ ಬಂಗಾಳಿ ಭಾಷೆಗೆ ಅನುವಾದವಾಗಿರುವ ನನ್ನ ಪುಟ್ಟಕತೆ ’ಅಮಾಸ’ವನ್ನು ತೋರಿಸಿ ಈ ಕತೆ ಬರೆದವನ ಬಗ್ಗೆ ಹೇಳಿ ಎಂದು ಕೇಳಿದನಂತೆ. ವಿಕ್ರಂ ವಿಸಾಜಿ ನನ್ನ ಬಗೆಗೆ ವಿವರಿಸಿದ ಮೇಲೆ ಆ ಆದಿವಾಸಿ ಹುಡುಗನ ಮುಂದಿನ ಪ್ರಶ್ನೆ: ’ಈ ಕತೆಗಾರ ಆದಿವಾಸಿಯೇ?’ ಅಂತ. ಅದಕ್ಕೆ ವಿಕ್ರಂ – ’ಆದಿವಾಸಿಯಲ್ಲ, ಅಸ್ಪೃಶ ದಲಿತ’ ಇತ್ಯಾದಿ ಹೇಳಿದ ಮೇಲೂ ಆ ಆದಿವಾಸಿ ಹುಡುಗ- ಈ ಮಹಾದೇವ ಆದಿವಾಸಿಯೇ. ಇದನ್ನು ಆದಿವಾಸಿ ಮಾತ್ರ ಬರೆಯಲು ಸಾಧ್ಯ. ಆ ಕತೆ ನನ್ನ ಕತೆಯೇ ಅಂದನಂತೆ. ನನಗೆ ಅದನ್ನು ಕೇಳಿ ಇದು ತರ್ಕಾತೀತ ಕರುಳ ಕಾಣುವಿಕೆ ಇರಬೇಕೇನೋ ಅನಿಸಿತು. ಉಂಟೆ, ಪ್ರಜ್ಞೆಗೂ ಹೊಕ್ಕಳಬಳ್ಳಿ ನಂಟು?

ಆಸ್ಟ್ರೇಲಿಯಾದ ಅಲ್ಲಿನ ಜೀವನ, ಸಾಹಿತ್ಯದ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ. ಪ್ರೊ.ಸಿ.ನಾಗಣ್ಣ ಅವರು ಅನುವಾದಿಸಿದ ‘Rabbit Proof Fence’-ಅನುಭವ ಕಥನ ಓದಿರುವೆ. ಜೊತೆಗೆ ಅಲ್ಲಿನ ನಾಕಾರು ಆದಿವಾಸಿಗಳ ದಂತಕತೆಗಳು ಹಾಗೂ ಪವಿತ್ರ ಸತೀಶ್‌ಕುಮಾರ್ ಅನುವಾದಿಸಿರುವ ಕವಿಯತ್ರಿ ವೊಡೆಗೂರು ನೂನಕಲ್‌ಅವರ ‘We Are Going’ ಸಂಕಲನದ ಕವಿತೆಗಳು-ಇವಿಷ್ಟೇ ಓದಿರುವುದು. ಇಷ್ಟರಲ್ಲೇ ನಾನು ನಾಡಿ ಹಿಡಿದು ಹೇಳುವುದಾದರೆ -ಕ್ಯಾತ್‌ವಾಕರ್ ಎಂದು ಸಾಮ್ರಾಜ್ಯಶಾಹಿ ಸೋಂಕಿನ ಹೆಸರು ಪಡೆದು ಕವಿಯತ್ರಿಯಾಗಿ ಪ್ರಸಿದ್ಧರಾಗಿದ್ದ ಈಕೆ, ಕೊನೆಗೆ ತನ್ನ ಬುಡಕಟ್ಟಿನ ಹೆಸರನ್ನೆ ಅಂದರೆ ವೊಡೆಗೂರು ನೂನಕಲ್ ಎಂದು ಪುನರ್ ನಾಮಕರಣ ಮಾಡಿಕೊಳ್ಳುತ್ತಾರೆ. ಇದು ಸಾಧಾರಣ ಕ್ರಿಯೆ ಅಲ್ಲ. ನಿಜಬಣ್ಣದಲ್ಲಿ ನಿಲ್ಲುವಿಕೆ. ಪೊರೆ ಕಳಚಿ ಮತ್ತೊಮ್ಮೆ ಹುಟ್ಟುವಿಕೆ ಇದು. ಜೊತೆಗೆ ವೊಡೆಗೂರು ನೂನಕಲ್ ಎನ್ನುವುದು ಕನ್ನಡದಂತೆಯೇ ಕೇಳಿಸುತ್ತದೆ.

ಇರಲಿ, ಭಾರತದಲ್ಲಿ ಅಪರಿಚಿತರು ಪರಸ್ಪರ ಭೇಟಿಯಾದಾಗ ಸಾಮಾನ್ಯವಾಗಿ ಕೇಳುವ ಮೊದಲ ಪ್ರಶ್ನೆ: ’ನೀವು ಯಾವ ಜನ?’ ಕೇಳುವವನೂ ಹೇಳುವವನೂ ಇಬ್ಬರು ’ಜನ’ರೇ ಆಗಿದ್ದು, ಕೇಳುವ ರೂಢಿ ಇದು. ಆದರೆ ಆ ಪ್ರಶ್ನೆಯ ಒಳಾರ್ಥ – ನೀನು ಯಾವ ಜಾತಿಯವನು ಅಂತ. ಒಂದು ಜಾತಿಗೆ ಸೇರಿದವರು ಒಂದು ಜನ, ಇನ್ನೊಂದು ಜಾತಿಗೆ ಸೇರಿದವರು ಇನ್ನೊಂದು ಜನ! ಈ ಅಸಂಗತ ನೆನಪಾದಾಗಲೆಲ್ಲಾ ನನಗೆ ವಿಷಾದ ಉಂಟು ಮಾಡುತ್ತದೆ. ಆದರೆ ಇದಕ್ಕಿಂತಲೂ ದಾರುಣವಾದುದು, ಭೀಕರವಾದುದು ಎಂದರೆ 1770ರ ಸುಮಾರಿನಲ್ಲಿ ಬ್ರಿಟನ್ನಿನ ನಾವಿಕ ಕ್ಯಾಪ್ಟನ್ ಜೇಮ್ಸ್‌ಕುಕ್ ಎಂಬಾತ ಆಸ್ಟ್ರೇಲಿಯಾವನ್ನು ತಲುಪಿ, ಅಲ್ಲಿ ಸುಮಾರು 60-70ಸಾವಿರ ವರ್ಷಗಳಿಂದಲೂ ವಾಸವಾಗಿದ್ದ ಲಕ್ಷಾಂತರ ಮೂಲನಿವಾಸಿಗಳನ್ನು ಲೆಕ್ಕಿಸದೆ ಆಸ್ಟ್ರೇಲಿಯಾವನ್ನು ’ಟೆರನುಲಿಯಸ್’ ಅಂದರೆ ನಿರ್ಜನ ಪ್ರದೇಶ ಎಂದು ಘೋಷಿಸುತ್ತಾನಲ್ಲ, ಅದು. ಅವನ ಐರೋಪ್ಯ ಕಣ್ಣಿಗೆ ಮೂಲನಿವಾಸಿಗಳು ಕನಿಷ್ಟ ಬೇರೆ ’ಜನ’ರಾಗಿಯಾದರೂ ಕಾಣುವುದಿಲ್ಲ. ಇದು ಘೋರ ಕುರುಡು, ಅಮಾನುಷ. ಮಾನವ ಕುಲದ ಚರಿತ್ರೆಯಲ್ಲೆ ಪ್ರಜ್ಞಾಹೀನ ಸ್ಥಿತಿ. ಇದನ್ನು ವೊಡೆಗೂರು ನೂನಕಲ್ ಅವರ ಕವಿತೆಗಳ ಒಳಗಿಂದಲೇ ಒಂದಿಷ್ಟು ಕಾಣಿಸಲು ಪ್ರಯತ್ನಿಸುವೆ. ಅವರ ’ರಕ್ಷಕರು’ ಕವನದಲ್ಲಿ ಅವರ ಇಚ್ಛಾನುಸಾರ ಓಡಾಡಿಸುವರು ನಮ್ಮನ್ನು ಜಾನುವಾರುಗಳಂತೆ ಎಂಬ ಸಂಕಟಮಯ ಸಾಲು ಬರುತ್ತದೆ. ನಾವಿಕ ಜೇಮ್ಸ್‌ಕುಕ್ ಆದಿವಾಸಿಗಳ ಇರುವಿಕೆಯನ್ನು ಲೆಕ್ಕಿಸದೆ – ನಿರ್ಜನ ಪ್ರದೇಶ ಎಂದು ಕರೆದಾಗ ಇದ್ದ ಅವನ ಆ ಅಮಾನುಷತೆ ಈ ಕವನದ ಸಾಲಲ್ಲಿ ಅನುಭವವಾಗಿ ಸಂಭವಿಸುತ್ತದೆ, ಜಾನುವಾರುಗಳಿಗೆ ಮಾತು ಬಂದು ತಮ್ಮ ಮಾಲೀಕನೊಡನೆ ಮಾತಾಡಿದರೆ ಹೇಗಿರುತ್ತದೊ ಹಾಗಿದೆ. ಇಲ್ಲಿ ಮನುಷ್ಯರು ತಲುಪಿದ ಕ್ರೌರ್ಯ ಮತ್ತು ಅಸಹಾಯಕತೆ ಒಟ್ಟಿಗೆ ಕಾಣಿಸಿಕೊಳ್ಳುತ್ತದೆ.

ವೊಡೆಗೂರು ನೂನಕಲ್ ಅವರ ಕವನಗಳ ಜಾಡನ್ನು ಹಿಡಿದು ಮುಂದೆ ಹೋದರೆ-’ಅಕೆಶಿಯ ರಿಡ್’ ಕವನದಲ್ಲಿ, ಮೂಲನಿವಾಸಿಗಳನ್ನು ಜಾನುವಾರುಗಳಂತೆ ಪರಿಗಣಿಸಿದ ಸಾಮ್ರಾಜ್ಯಶಾಹಿಯು ಅವರ ವಾಸಸ್ಥಾನಗಳನ್ನು ಧ್ವಂಸ ಮಾಡುವುದನ್ನು ಮುದುರಿ ಮೂಲೆಗಿಟ್ಟವು ಬುಲ್ಡೋಜರ್‍ಗಳು ಅಪರಾಧವನ್ನು-ಈ ಒಂದು ಸಾಲು ಹೇಳುತ್ತದೆ. ಇದಕ್ಕೆ ವಿವರಣೆ ಅನಗತ್ಯ. ಇಂದಿನ ಜಾಗತೀಕರಣಕ್ಕೂ ಇದು ಬಾಷ್ಯ ನುಡಿದಂತೆ ಇದೆ. ’ನನ್ನ ಪ್ರೀತಿ’ ಕವನದಲ್ಲಿ ಅಪಮಾನ ಮತ್ತು ಅವಹೇಳನ ಹಲ್ಲೆ ಮಾಡಿವೆ ನನ್ನನ್ನು ಎನ್ನುವ ಕವಿಯತ್ರಿ No abos here- ಅಂದರೆ ಮೂಲನಿವಾಸಿಗಳಿಗೆ ಇಲ್ಲಿ ಪ್ರವೇಶವಿಲ್ಲ ಎಂಬಂತಾಗಿ ತಮ್ಮ ನೆಲದಲ್ಲೇ ತಮಗೆ ಪ್ರವೇಶವಿಲ್ಲದ ದಾರುಣತೆಯನ್ನು ದಾಖಲಿಸುತ್ತಾರೆ. ಕೊನೆಗೆ ದಯನೀಯವಾಗಿ ಯಾಚನೆಯನ್ನೂ ಮಾಡುತ್ತಾರೆ. ಮೂಲನಿವಾಸಿ ಹಕ್ಕುಗಳ ಪ್ರಣಾಳಿಕೆ (Aboriginal Charter of Rights)ಯಲ್ಲಿ ಕ್ರಿಸ್ತನನ್ನುಕೊಡಿ, ಶಿಲುಬೆಗೇರಿಸುವುದನ್ನಲ್ಲ ಅಂತಾರೆ. ಅದನ್ನೂ ಕೇಳಿಸಿಕೊಳ್ಳದಿದ್ದಾಗ –

ಅಯ್ಯಾ, ಬಿಳಿಯ ಗೆಳೆಯನೇ

ನಿಜ ಹೆಮ್ಮೆ ಪಡಲು ಬಹಳವಿತ್ತು ನಿಮ್ಮಲ್ಲಿ
ಕ್ರಿಸ್ತನಿದ್ದ ನಿಮ್ಮಲ್ಲಿ
ಆದರೆ ಅವನನ್ನು ನೀವು ಶಿಲುಬೆಗೇರಿಸಿದಿರಿ
ಇನ್ನೂ ಅದನ್ನೆ ಮಾಡುತ್ತಿರುವಿರಿ ಎನ್ನುತ್ತಾರೆ. ಹಾಗೂ ಬಿಳಿಯ ಮನುಷ್ಯನ ಕ್ರೌರ್‍ಯ ಸ್ವಲ್ಪವಾದರೂ ಅರ್ಥವಾಗದೆ ಕೊನೆಗೆ ಬೇಸತ್ತು- ’ಅಸಂತೃಪ್ತಜನಾಂಗ’ ಕವನದಲ್ಲಿ “Poor white man of the unhappy race”- ಎಂದು ಅಸಹಾಯಕರಾಗಿ ಕೈಚೆಲ್ಲಿ ನುಡಿಯುತ್ತಾರೆ, ಇದು ಬಿಳಿಯ ಜನಾಂಗದ ರಕ್ತದ ಸಮಸ್ಯೆ ಇರಬೇಕೇನೋ ಅನ್ನಿಸುವಂತೆ.

ಹೀಗೆ ಮೂಲನಿವಾಸಿ ಜಗತ್ತಿನ ಸಂವೇದನಾಶೀಲ ಕವಿಯೊಬ್ಬರ ಕಾವ್ಯದ ಸ್ಪಂದನಗಳನ್ನು ಹಿಡಿದು ಆಸ್ಟ್ರೇಲಿಯಾದ ಚರಿತ್ರೆಯ ಹೆಜ್ಜೆ ಗುರುತುಗಳನ್ನು ಹಾಗೂ ಅಲ್ಲಿನ ಸ್ಥಿತ್ಯಂತರಗಳನ್ನು ಗುರುತಿಸಲು ಅಸಹಾಯಕನಾಗಿ ನಾನೂ ಪ್ರಯತ್ನಿಸುತ್ತಿದ್ದೇನೆ. ಆದರೆ ನನ್ನ ಮನಸ್ಸು ದಂತಕತೆಗಳಿಗೇ ಜೋತು ಬೀಳುತ್ತಿದೆ. ಇದು ಯಾರ ಕತೆಯೋ ಎಲ್ಲಿಯದೋ ಗೊತ್ತಿಲ್ಲ. ಅಥವಾ ಎಲ್ಲಾ ಸಾಮ್ರಾಜ್ಯಶಾಹಿಗಳ ಕತೆಯೂ ಇದೇ ಆಗಿರಬಹುದು. ಇಡೀ ಜಗತ್ತನ್ನೇ ಗೆಲ್ಲಲು ಹೊರಟವನೊಬ್ಬ ಲಕ್ಷಲಕ್ಷ ಜನರನ್ನು ಕೊಂದು ನೆಲಕ್ಕುರುಳಿಸಿ ತನ್ನ ಸಾಮರ್ಥ್ಯಕ್ಕೆ ತಾನೇ ಬೀಗುತ್ತಾ ಇರುವಾಗ ಅವನ ಸೈನಿಕರು ಒಂದು ಪಿಶಾಚಿಯನ್ನೋ ನರಭಕ್ಷಕನನ್ನೋ ಹಿಡಿದು ತಂದು ನಿಲ್ಲಿಸಿ ಈತ ಒಂದು ಹೆಣವನ್ನು ಕದ್ದು ಪೊದೆಗೆ ಎಳೆದುಕೊಂಡು ಹೋಗುತ್ತಿರುವಾಗ ಹಿಡಿದು ತಂದೆವು ಎಂದು ಆ ಚಕ್ರವರ್ತಿಗೆ ನಿವೇದಿಸುತ್ತಾರೆ.

ಹಸಿವಾಗಿತ್ತು ಪ್ರಭು. ಅದಕ್ಕಾಗಿ ಒಂದೇ ಒಂದು ಎಂದು ಆ ಬಡಪಾಯಿ ಹೇಳಿದಾಗ ಅದಕ್ಕೆ ಚಕ್ರವರ್ತಿಯು- ಎಲ್ಲವನ್ನು ತೆಗೆದುಕೊ, ಮಜಾ ಮಾಡು ಅನ್ನುತ್ತಾನೆ. ಅದಕ್ಕೆ ಆ ಬಡಪಾಯಿಯ ಉತ್ತರ – ಇಲ್ಲ ಪ್ರಭು. ಅವು ನಿಮ್ಮವು – ನನ್ನ ಹಸಿವು ತಮ್ಮಷ್ಟು ಭಯಂಕರ ಅಲ್ಲ ಎಂಬುದು. ಸಾಮ್ರಾಜ್ಯಶಾಹಿಯ ಹಸಿವು, ಯಾವುದೇ ಆಳ್ವಿಕೆಯ ಹಸಿವು ಹೀಗೇ ಇರಬೇಕೇನೋ. ಆಸ್ಟ್ರೇಲಿಯಾದ ಮೂಲನಿವಾಸಿಗಳ ದಂತಕತೆಯಲ್ಲೂ ಅಮಾನುಷವಾದ ಬನ್ಯಿಪ್ ಎಂಬ ನರಭಕ್ಷಕ ಪೆಡಂಭೂತವಿದೆ, ಇದಕ್ಕೆ ಹೆಂಗಸರು ಮತ್ತು ಮಕ್ಕಳ ಮಾಂಸ ಇಷ್ಟವಂತೆ. ಅದರ ವಾಸಸ್ಥಳ ಗಬೂರದಲ್ಲಿ. ಗಬೂರ ಎಂದರೆ ಶಾಂತಕೊಳ ಅಂತ ಹೆಸರಿಗೆ. ಬನ್ಯಿಪ್ ಭೂತದ ದಾಳಿಯಿಂದಾಗಿ ಆ ಶಾಂತಕೊಳ ಅಶಾಂತಗೊಂಡಿದೆ, ಐರೋಪ್ಯರ ದಾಳಿಗೆ ಧ್ವಂಸಗೊಂಡ ಅಲ್ಲಿನ ಮೂಲನಿವಾಸಿಗಳಂತೆ.
ವಡೆಗೂರು ನೂನಕಲ್ ಅವರ ಕವನಗಳಲ್ಲಿ ನನಗೆ ಇಷ್ಟವಾದ ರೋದಿಸುವುದು ಮಡಿದವರಿಗಾಗಿ ಮುಂಜಾವು ಕವನದಲ್ಲಿ ಯಾತನೆ ಮಡುಗಟ್ಟಿ ನಿಲ್ಲುತ್ತದೆ :

ರೋದಿಸುವುದು ಮಡಿದವರಿಗಾಗಿ ಮುಂಜಾವು
ಮುಂಜಾವಿನ ಮಂದ ಬೆಳಕೀಗ
ಮಸುಕಾಗಿದೆ ಮಲಗಿರುವ ಬಿಡಾರದ ಮೇಲೆ.
ಸ್ಮರಿಸುವಳು ಮೊದಲೆದ್ದ ಹಿರಿಯ ಮೂಲಗಿತ್ತಿ:
ಪ್ರತಿ ಮುಂಜಾವಿನ ಮೊದಲ ಕೆಲಸವನ್ನು
ಮೃತಪಟ್ಟವರನ್ನು ನೆನೆಸಿ, ಅವರಿಗಾಗಿ ಅಳುವುದನ್ನು.
ಮೆಲ್ಲನೆ ಆರಂಭಿಸುವಳು ಅವಳ ರೋದನ,
ಆಲಿಸುವರು ಒಬ್ಬರಾದ ಮೇಲೊಬ್ಬರು ಏಳುತ್ತಾ
ಜೊತೆಗೂಡುವರು ವಿಲಪಿಸುವುದರಲ್ಲಿ, ಇಡೀ ಬಿಡಾರವೇ
ರೋದಿಸುವುದು ಮಡಿದವರಿಗಾಗಿ, ಮೃತ ಬಡಪಾಯಿಗಳಿಗಾಗಿ

-ಹೀಗೆ ಮುಂದುವರೆಯುವ ಈ ಕವನವನ್ನು ಇಂಗ್ಲಿಷ್‌ನಲ್ಲಿ ಅಲ್ಲದೆ ತನ್ನ ಜನರಾಡುವ ತಾಯ್ನುಡಿಯಲ್ಲೇ ಬರೆದಿದ್ದರೆ ಹೇಗಿರುತ್ತಿತ್ತು? ಅದರ ಲಯ, ಅದರ ವಾಸನೆ, ಅದರ ಸ್ಪರ್ಶ ಜಗತ್ತಿಗೆ ಹೆಚ್ಚಿನದನ್ನು ಹೇಳಬಹುದಿತ್ತೇ? ಎಪಿಕ್ ಒಂದರ ಬೀಜವಾಗಬಹುದಿತ್ತೆ? ಗೊತ್ತಿಲ್ಲ. ನನಗೆ ಇಷ್ಟವಾದ ಇನ್ನೊಂದು ’ಶಿಲಾಯುಗ’ ಕವನದಲ್ಲಿ- ಎಲೈ ಬಿಳಿಯನೇ ಕಾಲ ಮಾತ್ರವಿದೆ ನಮ್ಮ ನಡುವೆ ಎಂದು ಒಂದು ಬೆರಗಿನ ಸತ್ಯದ ಸಾಲು ಬರುತ್ತದೆ. ಕರಿಯ-ಬಿಳಿಯ ಈ ಇಬ್ಬರ ನಡುವೆ ಈಗ ಇರುವ ಕಾಲದ ಅಂತರವನ್ನು ತೆಗೆದು ಇಬ್ಬರನ್ನೂ ಮೂಲನಿವಾಸಿಗಳ ಒಂದೇ ಕಾಲಮಾನದಲ್ಲಿ ಇಟ್ಟುಬಿಟ್ಟರೆ-ಇಂದು ಅಟ್ಟಹಾಸ ಮಾಡುತ್ತಿರುವ ಸಾಮ್ರಾಜ್ಯಶಾಹಿ ಬಿಳಿಯನೂ ಕೂಡ ಕರಿಯನ ಜೊತೆಗೆ ಆ ಕಾಲಮಾನದಲ್ಲಿ ಆಗ ಆಹಾರಕ್ಕೆ ಅಲೆದಾಡುತ್ತ ಗವಿಗಳ ಪೊಟರೆಯಲ್ಲಿ ಇರುವುದು ಕಾಣಿಸುತ್ತದೆ. ಹಾಗೇ ಈ ಶಿಲಾಯುಗದ ಬುಡಕಟ್ಟುಗಳ ಕರಿಯ ಮೂಲನಿವಾಸಿಗಳಲ್ಲಿ ವಿವೇಕದ ಕತೆಗಳ ಗಣಿ ಇರುವುದು ಕಾಣಿಸುತ್ತದೆ.

ಅದರಲ್ಲೊಂದು ಇಂದೂ ಕೂಡ ಭೂಮಿಗೇ ಪಾಠವಾಗಬಲ್ಲ ಆಸ್ಟ್ರೇಲಿಯಾದ ಬುಡಕಟ್ಟೊಂದರ ದಂತಕತೆ-ಮುಂಜಿಂಗೀ ಕತೆ. ಸಪ್ತಸೋದರಿಯರು ನಕ್ಷತ್ರಪುಂಜವಾದ ಕತೆ. ಜನಾಂಗವು ಉದಯಿಸಿದ ಹೊಸದರಲ್ಲಿ ಯಾತ್ರೂಕರು, ಅಂದರೆ ಕನ್ಯೆಯರು ದೇಹವು ಮನಕ್ಕೆ ಶರಣಾಗಬೇಕಾದ ಅವಶ್ಯಕತೆಯನ್ನು ಅರಿಯುತ್ತಾರೆ. ದೇಹದ ಶರಣಾಗತಿ ಎಂದರೆ ದೈಹಿಕ ಹಸಿವು, ನೋವು, ಭಯಗಳ ಪರಿಣಾಮವನ್ನು ನಿಯಂತ್ರಿಸಿಕೊಳ್ಳುವುದೇ ಆಗಿದೆ. ಇಂದು ಹಸಿವಾಗದಂತೆ, ನೋವಾಗದಂತೆ, ಭಯವಾಗದಂತೆ ಮಕ್ಕಳನ್ನು ಬೆಳೆಸುತ್ತಿರುವ ನಮ್ಮ ನಾಗರಿಕ ಎನ್ನಿಸಿಕೊಂಡ ಜನಾಂಗಕ್ಕೆ ಈ ಕತೆ ಕಪಾಳಕ್ಕೆ ಹೊಡೆಯುತ್ತದೆ. ಮುಂದೆ ಈ ಸಪ್ತಕನ್ಯೆಯರು ಬುಡಕಟ್ಟಿನ ಹಿರಿಯರ ಸಮ್ಮತಿ ಪಡೆದು ಅಗ್ನಿಪರೀಕ್ಷೆಗಳಿಗೆ ಒಳಗಾಗಿ ಹಸಿವನ್ನು ಸಹಿಸಿಕೊಂಡು, ನೋವನ್ನು ನುಂಗಿಕೊಂಡು, ಭಯವನ್ನು ಗೆದ್ದು ಪರಮಚೇತನದ ಕೃಪೆಗೊಳಗಾಗಿ – ಮುಂಜಿಂಗಿ (ಪ್ಲಯೊಡಿಸ್) ನಕ್ಷತ್ರಪುಂಜವಾಗಿ ತಮ್ಮ ಪೀಳಿಗೆಗೆ ಬೆಳಕಾಗುತ್ತಾರೆ. ಹಾಗೇ ಆಫ್ರಿಕಾದ ಯಾವುದೋ ಮೂಲನಿವಾಸಿ ಪಂಗಡವೊಂದರಲ್ಲಿ ಮದುವೆಯಾಗಲು ಬಯಸುವ ಗಂಡು-ಹೆಣ್ಣು, ದೇಹ ಕೂಡುವ ಮೊದಲು ಮನಸ್ಸು ಕೂಡಬೇಕೆಂದು, ಬೆತ್ತಲಾಗಿ ಪರಸ್ಪರರು ತಲೆಗೆ ತಲೆ ಅಂಟಿಸಿ ಇಡೀ ರಾತ್ರಿ ಜೊತೆಗೂಡಿ ಕಳೆಯುವ ಆಚರಣೆಯೊಂದು ಇದೆ. ಆ ಭಾವಚಿತ್ರ ನನ್ನ ಕಣ್ಣಿಗೆ ಬಿದ್ದಾಗ ಅದು ದೇವತೆಗಳದೇನೋ ಎಂಬಂತೆ ಕಣ್ಣು ಮಿಟುಕಿಸದೆ ನೋಡಿದೆ. ದೇಹತೃಪ್ತಿಗೆ ತಹತಹಿಸುತ್ತಿರುವ ಇಂದಿನ ಜಗತ್ತು ಈ ಮನೋಜ್ಞ ಕತೆಯನ್ನು ತುಳಿದುಕೊಂಡು ಓಡಾಡುತ್ತಿದೆ.

ಇದರ ಜೊತೆಗೆ ಆಸ್ಟ್ರೇಲಿಯಾದ ಇನ್ನೊಂದು ಮೂಲನಿವಾಸಿಗಳ ದಂತಕತೆಯಲ್ಲಿ ಪ್ರಾಣಿ ಸಮುದಾಯದೊಳಗೆ ಅಲಕ್ಷಿತವಾಗಿದ್ದು ಗೇಲಿಗೊಳಗಾಗುತ್ತಿದ್ದ ಆಮೆಯು ತನ್ನ ಚಿಪ್ಪು ಪಡೆದುಕೊಂಡು ಉಳಿದ ಪ್ರಾಣಿಸಂಕುಲವನ್ನು ರಕ್ಷಿಸಿದ ಕತೆ ಇದೆ.. ಆದಿವಾಸಿಗಳು, ಅಸ್ಪೃಶ್ಯರು, ಆಚೆ ಎಸೆಯಲ್ಪಟ್ಟವರು ಹಾಗೂ ಎಸೆಯಲ್ಪಡುತ್ತಿರುವ ಇಡೀ ಜಗತ್ತಿನ ಕಡೆಗಣಿಸಲ್ಪಟ್ಟಿರುವ ಸಮುದಾಯಗಳಿಗೆಲ್ಲಾ ಆಮೆಯು ಕುಲ ಚಿಹ್ನೆ (ಟೊಟೆಮ್) ಆಗಬೇಕಾಗಿದೆ. ನಿಧಾನ ನಡಿಗೆ, ಅಪಾಯ ಎದುರಾದಾಗ ತಲೆ ಒಳಗೆಳೆದುಕೊಳ್ಳುವುದು, ಏಟುಬಿದ್ದರೂ ಸಾಯದ ಚಿಪ್ಪು ಪಡೆದು ಇಡೀ ಅಲಕ್ಷಿತ ಸಮುದಾಯ ಉಳಿಯಬೇಕಾಗಿದೆ. ಉಳಿದು, ಇಂದಿನ ದಾಹದ ಜಗತ್ತನ್ನು ಆ ದಾಹದಿಂದ ಬಿಡುಗಡೆಗೊಳಿಸಿ ಉಳಿಸ ಬೇಕಾಗಿದೆ. ಈ ಬಗೆಯ ದಂತಕತೆಗಳು, ಇದರೊಡನೆ ‘Rabbit Proof Fence’ ಅನುಭವಕಥನದ ಪಯಣ – ಇಂಥವುಗಳನ್ನು ಮೂಲದ್ರವ್ಯ ಮಾಡಿಕೊಂಡು ರೋದಿಸುವುದು ಮಡಿದವರಿಗಾಗಿ ಮುಂಜಾವುನಂತೆ ಆಸ್ಟ್ರೇಲಿಯಾದ ಮೂಲನಿವಾಸಿಗಳು ತಮ್ಮ ಮೂಲ ಭಾಷೆಯಲ್ಲೇ ಅದರ ಎಲ್ಲಾ ಲಯ, ವಾಸನೆ, ಸ್ಪರ್ಶಗಳೊಡನೆ ಹಾಡಾಗಿ, ಲಾವಣಿಯಾಗಿ, ನಾಟಕವಾಗಿ ಎಲ್ಲಾ ಬುಡಕಟ್ಟುಗಳ ಕತೆ-ಉಪಕತೆಗಳನ್ನೂ ಜೊತೆ ಕೂಡಿಸಿಕೊಂಡು ಕೂಡುತ್ತಾ ಅದೊಂದು ವೃಕ್ಷದಂತಾದರೆ ಮಹಾಕಾವ್ಯವೊಂದು ಈ ಕಾಲಮಾನದಲ್ಲೂ ಸಂಭವಿಸಬಹುದೇ?

ಕೊನೆಗೊಂದು ಮಾತು: ಇಷ್ಟಿದ್ದೂ ಹೀಗಿದ್ದೂ ತಮ್ಮದೇ ನೆಲದಲ್ಲಿ ಜರ್ಝರಿತರಾಗಿರುವ ಅಲ್ಲಿನ ಮೂಲನಿವಾಸಿಗಳು, ಇತ್ತೀಚಿಗಷ್ಟೇ ಆಸ್ಟ್ರೇಲಿಯಾಕ್ಕೆ ಹೊರಗಿನಿಂದ ಬಂದು ಸ್ಥಳಿಯರನ್ನೇ ಧ್ವಂಸಿಸಿದ ಆಳ್ವಿಕೆಯ ಪರಕೀಯ ಐರೋಪ್ಯರಿಗೆ : -ನೀವು ನಮ್ಮ ನೆಲಕ್ಕೆ ಬಂದು ಕೇವಲ ಇನ್ನೂರು ಚಿಲ್ಲರೆ ವರ್ಷಗಳು ಮಾತ್ರ. ನಿಮ್ಮ ನಾಡಿಗೆ ನೀವು ಹೋಗಿ ಎಂದಿಲ್ಲ ! ಆಸ್ಟ್ರೇಲಿಯಾದಲ್ಲಿರುವ ಪರಕೀಯ ಐರೋಪ್ಯರು ಇನ್ನಾದರೂ ಅಲ್ಲಿನ ಮೂಲನಿವಾಸಿಗಳಂತೆ ಮನುಷ್ಯರಾಗಬೇಕಾಗಿದೆ. ಆದಿವಾಸಿ ಪ್ರಣಾಳಿಕೆಯ ನುಡಿಯು‘Banish bans and conquer caste’ (ನಿಷೇಧಕ್ಕಿರಲಿ ನಿಷೇಧ: ಧ್ವಂಸವಾಗಲಿ ಜಾತಿ) ನಡೆಯಾಗಬೇಕಿದೆ. ಆದಿವಾಸಿಗಳನ್ನು ಕೇಂದ್ರ ಮಾಡಿಕೊಂಡು, ಘನತೆಯ, ತಾರತಮ್ಯಗಳಿಲ್ಲದ ಮಾನವೀಯ ಆಸ್ಟ್ರೇಲಿಯಾವನ್ನು ಕಟ್ಟಬೇಕಾಗಿದೆ, ಹಾಗೇ ಹಸಿವು, ಅವಮಾನ, ಅಸ್ಪೃಶ್ಯತೆ, ತಾರತಮ್ಯಗಳಿಂದ ತತ್ತರಿಸುತ್ತಿರುವ ಭಾರತವನ್ನು ಕೂಡ.