ಈಗಲಾದರೂ ಬೆಳಕಿನ ಬೇಸಾಯದತ್ತ- ಸಹಜ ಕೃಷಿ ಕುರಿತು

[ಸಹಜ ಕೃಷಿ ಕುರಿತು ಮಹಾದೇವ ಅವರು ಅಲ್ಲಿಲ್ಲಿ ಆಡಿದ ಮಾತು ಮತ್ತು ಬರೆದ ಟಿಪ್ಪಣಿಗಳ ಲೇಖನ ರೂಪ]         

 

                                                  

ಕರ್ನಾಟಕದ ಕೃಷಿಗೆ ಹೊಸ ಬೆಳಕು ತಂದು ಕೊಟ್ಟ ಸ್ವಾಮಿ ಆನಂದ್‍ರವರ ‘ಸುಭಾಷ್ ಪಾಳೇಕರರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ’ ಪುಸ್ತಕದಲ್ಲಿ ಒಂದು ಪ್ರಯೋಗ ಬರುತ್ತದೆ. ಅದು ಹೀಗಿದೆ:

“ನೂರು ಕೆ.ಜಿ ಹಸಿ ಕಬ್ಬಿನ ಜಲ್ಲೆಗಳನ್ನು ಕಡಿದು ತನ್ನಿ. ಆ ಕಬ್ಬುಗಳನ್ನು ಬಿಸಿಲಲ್ಲಿ ಪೂರ್ತಿ ಒಣಗಿಸಿ. ಒಣಗಿದ ಕಬ್ಬುಗಳನ್ನು ಈಗ ತೂಕಕ್ಕಿಡಿ. ಅವುಗಳ ತೂಕ ಕರಾರುವಕ್ಕಾಗಿ 22 ಕೆ.ಜಿ ಬರುತ್ತದೆ. ಹಾಗಾದರೆ ಉಳಿದ 78 ಕೆ.ಜಿ ಏನಾಯಿತು? ಏನಾಯಿತೆಂದರೆ ಆ ಕಬ್ಬಿನಲ್ಲಿದ್ದ ನೀರೆಲ್ಲ ಆವಿ ಆಯಿತು. ಆ ನೀರು ವಾತಾವರಣದಿಂದ ಲಭಿಸಿದ್ದು; ಮತ್ತೆ ವಾತಾವರಣ ಸೇರಿತು. ಈಗ ಮತ್ತೆ ಆ ಉಳಿದ 22 ಕೆ.ಜಿ ಕಬ್ಬುಗಳಿಗೆ ಬೆಂಕಿ ಹಚ್ಚಿರಿ. ಅದು ಉರಿದು ಬೂದಿಯಾಗಲಿ. ಇದನ್ನು ತೂಗಿದರೆ ಬೂದಿಯ ತೂಕ ಕೇವಲ ಒಂದೂವರೆ ಕೆ.ಜಿ ಬರುತ್ತದೆ! ಇದರ ಅರ್ಥ ಏನು? ಅಂದರೆ ಆ ಇಡೀ ನೂರು ಕೆ.ಜಿ ಕಬ್ಬಿನ ಜಲ್ಲೆಗಳಿಗೆ ಭೂಮಿಯ ಕೊಡುಗೆ ಒಂದೂವರೆ (1.5) ಕೆ.ಜಿ ಮಾತ್ರ. ಕಬ್ಬು ಉರಿಯುವಾಗ ಸೂರ್ಯನಿಂದ ಸ್ವೀಕರಿಸಿದ 22 ಕೆ.ಜಿಯು ಜ್ವಾಲೆ ರೂಪ ಪಡೆದು ಹಾಗೂ ಕಾರ್ಬನ್ ಡೈಆಕ್ಸೈಡ್‍ನಿಂದ ಬಂದದ್ದು ಹೊಗೆಯ ರೂಪ ತಾಳಿ ಮತ್ತೆ ವಾತಾವರಣ ಸೇರಿದವು. ಆಗ 1.5 ಕೆ.ಜಿ ಬೂದಿ ಮಾತ್ರ ಉಳಿಯಿತು. ಇದನ್ನು ನೆನಪಿಟ್ಟುಕೊಳ್ಳಬೇಕಾಗಿದೆ- ನೂರು ಕೆ.ಜಿ. ಕಬ್ಬಿನ ಜಲ್ಲೆಗಳಲ್ಲಿ ಭೂಮಿಯ ಕೊಡುಗೆ ಕೇವಲ 1.5 ಕೆಜಿ ಮಾತ್ರ..”

ಈ ಹಿನ್ನೆಲೆಯಲ್ಲೇ ನಾವು ಬೆಳೆಯ ವಿಷಯ ಗಮನಿಸಬೇಕು. ನಾವು ಬೆಳೆಯುವ ಯಾವುದೇ ಬೆಳೆ ಇರಬಹುದು–ಅದು ಶೇಕಡ 98.5 ರಷ್ಟನ್ನು ವಾತಾವರಣದಿಂದಲೇ ಪಡೆದುದ್ದಾಗಿರುತ್ತದೆ. ಉಳಿದ ಶೇಕಡ 1.5ರಷ್ಟನ್ನು ಮಾತ್ರ ಭೂಮಿಯಿಂದ ಪಡೆಯುತ್ತದೆ. ಇದು ಮಹಾರಾಷ್ಟ್ರದ ಶ್ರೀಪಾದ ದಾಬೊಳ್ಕರ್, ಸುಭಾಷ್ ಪಾಳೇಕರ್‍ರಂತ ದಾರ್ಶನಿಕರು ಕಂಡ ಸತ್ಯ. ಈ ಸತ್ಯಕ್ಕೆ ನಾವು ಕುರುಡಾಗಿಬಿಟ್ಟಿದ್ದೇವೆ. ಮಣ್ಣು, ಭೂಮಿಯಿಂದಲೇ ಸಸ್ಯಕುಲವು ನಮಗೆ ಆಹಾರ ಕೊಡುತ್ತದೆ ಎಂದು ಮಾನವ ಸಮುದಾಯ ಅಂದುಕೊಂಡುಬಿಟ್ಟಿದೆ. ವಿಜ್ಞಾನಿಗಳೂ ಕೂಡ ಕುರುಡಾಗಿ ಬಿಟ್ಟಿದ್ದಾರೆ ಅಥವಾ ದ್ರೋಹವೆಸಗುತ್ತಿದ್ದಾರೆ. ಹಾಗಾಗಿ ರೈತರ ಶ್ರಮ, ಸಾಲಾಸೋಲಾ ಹಾಗೂ ಸರ್ಕಾರಗಳ ಕೃಷಿ ಯೋಜನೆಗಳೆಲ್ಲಾ ಮಣ್ಣಿಗೆ ದುಡ್ಡು ಸುರಿಯುವುದರಲ್ಲಿಯೇ ಕೊನೆಗಾಣುತ್ತಿದೆ. ಭೂಮಿ, ಭೂಮಿತಾಯಿ, ನಮಗೆ ಆಹಾರ ಕೊಡುತ್ತಾಳೆ ಎಂಬ ನಂಬಿಕೆಯಿಂದಾಗಿಯೇ ಭೂಮಿಗೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಇತ್ಯಾದಿ ಇತ್ಯಾದಿ ಸುರಿದೂ ಸುರಿದೂ ರೈತರನ್ನು ಮಾತ್ರವಲ್ಲ ವ್ಯವಸಾಯವನ್ನೇ ನೇಣಿಗೆ ಹಾಕಿಬಿಟ್ಟಂತಾಗಿದೆ. ರೈತ, ಭೂಮಿಯನ್ನೂ ಸುಟು,್ಟ ತನ್ನನ್ನೂ ಸುಟ್ಟುಕೊಂಡು ಬೂದಿಯಾಗುತ್ತಿದ್ದಾನೆ.

ಸಸ್ಯ ಸಂಕುಲವು ನೀಡುವ ಆಹಾರ ಎಲ್ಲೆಲ್ಲಿಂದ ಎಷ್ಟೆಷ್ಟು ಸೇರಿ ಹೇಗೆ ಕೂಡಿ ಆಗುತ್ತದೆ ಎಂಬ ತಿಳಿವಳಿಕೆ ಮಾತ್ರ ರೈತರನ್ನು, ವ್ಯವಸಾಯವನ್ನು ಕಾಪಾಡಬಲ್ಲುದು. ಸಸ್ಯ ಸಂಕುಲದ ಆಹಾರ ನಿರ್ಮಾಣಕ್ಕೆ ಭೂಮಿ ನೆಲೆ ಮಾತ್ರ. ಇದರ ಕೊಡುಗೆ ಹೆಚ್ಚೆಂದರೆ ಶೇಕಡ 2 ರಷ್ಟು ಮಾತ್ರವೇ. ಉಳಿದುದೆಲ್ಲಾ ವಾತಾವರಣದ ನೀರು, ಸೂರ್ಯನ ಬೆಳಕಿನ ಕೊಡುಗೆ. ಆದರೆ ನಮ್ಮ ಇಂದಿನ ವ್ಯವಸಾಯ ಪದ್ಧತಿಯಲ್ಲಿ ಶೇಕಡ 2 ರಷ್ಟು ಭೂಮಿಯ ಕೊಡುಗೆಗೆ ಶೇಕಡ 98ರಷ್ಟು ಶ್ರಮ, ಹಣಕಾಸು ವೆಚ್ಚ ಮಾಡುತ್ತಿದ್ದೇವೆ. ಹಣ ಶ್ರಮ ಕೇಳದ ಅಂದರೆ ವಿವೇಕ ವಿವೇಚನೆಯ ವಾತವರಣದ ಕೊಡುಗೆಯಾದ ಶೇಕಡ 98ರಷ್ಟಕ್ಕೆ ಶೇಕಡ 2ರಷ್ಟು ಮಾತ್ರ ಗಮನ ಕೊಡುತ್ತಿದ್ದೇವೆ.

ಈಗ ಮಾಡಬೇಕಿರುವುದು ಇಷ್ಟೆ: ನಮ್ಮ ವ್ಯವಸಾಯ ಪದ್ಧತಿಯನ್ನು ಉಲ್ಟಾಪಲ್ಟಾ ಮಾಡಬೇಕಾಗಿದೆ. ಅಂದರೆ ಭೂಮಿ, ಮಣ್ಣುಗಳು ಆಹಾರೋತ್ಪಾದನೆಯಲ್ಲಿ ನೆಲೆ ಮಾತ್ರ ಎಂದು ಅರಿತು ಶೇಕಡಾ 98ರಷ್ಟು ಆಹಾರೋತ್ಪಾದನೆಗೆ ಕಾರಣವಾಗುವ ವಾತಾವರಣಕ್ಕೆ, ಪರಿಸರಕ್ಕೆ ಹೆಚ್ಚು ಗಮನ ಕೊಡಬೇಕಾಗಿದೆ. ಅಂದರೆ ಸೂಕ್ತ ಬೆಳೆಗಳ ಆಯ್ಕೆ, ಆ ಬೆಳೆಗಳ ಪರಸ್ಪರ ಪೂರಕ ಜೀವನ ಅರಿತುಕೊಂಡು ವಿವಿಧ ಬೆಳೆಗಳನ್ನು ಆಯೋಜಿಸಿ, ಜೊತೆಗೆ ಮಣ್ಣಲ್ಲಿ ಹ್ಯೂಮಸ್ ಉಂಟಾಗುವಂತೆ ಹಾಗೂ ಗಿಡಗಳ ಅಗತ್ಯಕ್ಕೆ ತಕ್ಕಂತೆ ಬೆಳಕು ಸಿಗುವಂತೆ ವಾತಾವರಣ ಉಂಟುಮಾಡಿ ಇಡೀ ಕೃಷಿಗೆ ಜೀವ ಕೊಡಬೇಕಾಗಿದೆ. ಇದಿಷ್ಟು ಮಾಡಿದರೆ ಸಾಕು ಅದು ಬೆಳಕಿನ ಬೇಸಾಯವಾಗುತ್ತದೆ. ಆಗ ನಾವು ಹೊರಗಡೆಯಿಂದ ಭೂಮಿಗೆ ಸುರಿಯುವ ಗೊಬ್ಬರ, ಗೋಡು, ಔಷಧ, ಮಣ್ಣು ಮಸಿ ಇತ್ಯಾದಿ ಇತ್ಯಾದಿ ಅನಗತ್ಯವಾಗಿಬಿಡುತ್ತವೆ. ಯಾಕೆಂದರೆ, ಈ ಪರಿಸರ ವಾತಾವರಣದ ಬೆಳಕಿನ ಬೇಸಾಯದಲ್ಲಿ ಆ ಮಣ್ಣೇ ಜೀವಂತವಾಗಿ ಫಲವತ್ತಾಗುತ್ತದೆ. ಆಗ ಸಸ್ಯ ಸಂಕುಲ ಆರೋಗ್ಯಕರವಾದ, ಸಹಜವಾದ ಫಲ ನೀಡುತ್ತದೆ.

ಆದರೆ ನೆನಪಿಡಬೇಕು: ಪರಸ್ಪರ ಸಹಕಾರಿ ಸಸ್ಯಗಳ ವಿವಿಧ ಗಿಡ ಮರ ಬೆಳೆ ಆಯೋಜನೆ, ಅಂದರೆ ಸಹಜವಾಗಿ ಕಾಡು ರೂಪುಗೊಳ್ಳುವ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಮ್ಮ ವ್ಯವಸಾಯ ಪದ್ದತಿಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಹೇಗೆಂದರೆ – ಸಹಜವಾಗಿ ಕಾಡಿನಲ್ಲಿ ಇರುವಂತೆ ಎತ್ತರದ ಮರದಜಾತಿ, ದೊಡ್ಡ-ಗಿಡ್ಡ ಮರದ ಜಾತಿ, ಪೊದೆ ಜಾತಿ, ಒಬ್ಬೆ ಜಾತಿ ಹಾಗೂ ಭೂಮಿಯೊಳಗಿನ ಫಸಲು ಗೆಡ್ಡೆ ಜಾತಿ ಈ ಎಲ್ಲವನ್ನೂ ಬೆಳಕಿನ ಸದ್ಬಳಕೆಗೆ ತಕ್ಕಂತೆ ಐಕ್ಯಗೊಳಿಸಿ ಬೆಳೆ ಆಯೋಜನೆ ಮಾಡಬೇಕು. ಜೊತೆಗೆ, ಎರಡು ದೊಡ್ಡ ಮರಗಳ ನಡುವೆ ಮದ್ಯಾಹ್ನದ ನೇರ ಬಿಸಿಲು ಬೀಳುವ ನೇರದಲ್ಲಿ ಉದ್ದಾನೆ ಉದ್ದ ಗುಂಡಿ (ಟ್ರೆಂಚ್)ತೋಡಿ, ಕಸಕಡ್ಡಿಯನ್ನು ಹಾಕುತಾ,್ತ ಅಲ್ಲಿ ನೀರು ಇಂಗುವಂತಾಗಬೇಕು. ಹಾಗೂ, ಭೂಮಿಯ ಮೇಲೆ ಹ್ಯೂಮಸ್ ಉಂಟಾಗಿಸುವ ಹೊದಿಕೆ, ಇವಕ್ಕೆಲ್ಲಾ ಪೂರಕವಾಗಿ ಜೀವಾಮೃತ,-ಈ ಎಲ್ಲವೂ ಕೂಡಿದರೆ ಮಾತ್ರ ಸಂಪೂರ್ಣ ಫಲ ಕಾಣುತ್ತೇವೆ.

ಇದನ್ನು ನಾನು ಬನ್ನೂರು ಕೃಷ್ಣಪ್ಪನವರ ತೋಟದಲ್ಲಿ ನನ್ನ ಕಣ್ಣಾರೆ ಕಂಡೆ. ಆ ತೋಟದ ನಡುವೆ ಅಲ್ಲಲ್ಲಿ ಇರುವ ದಾಳಿಂಬೆ, ಕಿತ್ತಳೆ, ಮೊಸಂಬಿ ಬೆಳೆಗಳಿಂದಲೇ ಒಂದು ಬಡ ರೈತ ಕುಟುಂಬ ಬದುಕಿಬಿಡಬಹುದೆನಿಸುತ್ತದೆ. ಇದನ್ನೇ ವ್ಯಾಪಕವಾಗಿ ಮಾಡಿದರೆ ಭಾರತವೂ ಬದುಕಿಬಿಡುತ್ತದೆ ಅನ್ನಿಸಿತು! ಆದರೆ ಇಂದು, ಅರೆಬರೆಯಾದ ಹಾಗೂ ಸಾವಯವವೂ ಬೆರಕೆಯಾಗಿ ಚೌಚೌ ಆದುದೇ ಸಹಜ ಕೃಷಿ ಅನ್ನಿಸಿಕೊಂಡುಬಿಟ್ಟಿದೆ! ಈಗಲಾದರೂ ವ್ಯವಸಾಯವೇ ಸುಸ್ತಾಗುತ್ತಿರುವ ಈ ಸಂದರ್ಭದಲ್ಲಿ ವಾತಾವರಣದ ಬೆಳಕಿನ ಬೇಸಾಯದ ಕಡೆಗೆ ನಾವು ಮುಂದಿನ ಹೆಜ್ಜೆಗಳನ್ನು ಇಡಬೇಕಾಗಿದೆ.
ಈ ಬೆಳಕಿನ ಬೇಸಾಯವನ್ನು ಮುಖ್ಯವಾಗಿ ರೈತ ಸಂಘ, ದಲಿತ ಸಂಘಗಳಾದರೂ ಕೈಗೆತ್ತಿ ಕೊಳ್ಳಬೇಕಾಗಿದೆ. ವ್ಯಾಪಕವಾಗಿ ಪ್ರಚಾರ ಹಾಗೂ ಸ್ವಯಂ ಕಾರ್ಯಗತ ಮಾಡಬೇಕಾಗಿದೆ. ಜೊತೆಗೆ ನಮ್ಮ ನಮ್ಮ ಊರುಗಳಲ್ಲಿರುವ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ ಈ ಎರಡೂ ಉತ್ತಮವಾಗಿ ನಡೆಯಲು ಏನೇನು ಉಸ್ತುವಾರಿ ವಹಿಸಬೇಕೋ ಅದನ್ನು ಮಾಡಬೇಕಾಗಿದೆ. ಇಂತವುಗಳನ್ನು ಮಾಡುವುದು ಊರಿಗೆ ಉಪಕಾರಿ ಆಗಬೇಕು ಅಂತಲ್ಲ, ನಾವು ಪುಡಾರಿಗಳಾಗುವುದರಿಂದ ಬಚಾವಾಗುವುದಕ್ಕೆ.